ಅಲ್ಟ್ರಾ ಕ್ಯಾಶ್ ಪಾವತಿ ತಂತ್ರಜ್ಞಾನದ ಮೂಲಕ ಕ್ಯಾಶ್ ಲೆಸ್ ಮತ್ತು ಕಾರ್ಡ್ ಲೆಸ್ ಮೊಬೈಲ್ ಪಾವತಿ ಮಾಡಿ

ಟೀಮ್​​ ವೈ.ಎಸ್​​. ಕನ್ನಡ

0

ಭಾರತದಲ್ಲಿ ವ್ಯಾಪಾರಿಗಳು ಪಾವತಿಗಾಗಿ ಇನ್ನೂ ನಗದು ಚಾಲಿತ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ . ಆದರೆ ಈ ಪದ್ಧತಿಯಲ್ಲಿ ಇತ್ತೀಚೆಗೆ ಬದಲಾವಣೆ ಕಂಡುಬರುತ್ತಿದೆ. ಹೀಗೆ ಮುಂದುವರೆದಲ್ಲಿ ಮುಂದಿನ ಪೀಳಿಗೆಯ ವೇಳೆಗೆ ಪ್ರಪಂಚ ಕ್ಯಾಶ್ ಲೆಸ್ ಮತ್ತು ಕಾರ್ಡ್‌ ಲೆಸ್ ಪಾವತಿ ವಿಧಾನ ಅನುಸರಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಮುಂದಿನ ಪೀಳಿಗೆಯ ಜನರು ಮೊಬೈಲ್ ಪಾವತಿ ವಿಧಾನವನ್ನೇ ಆಶ್ರಯಿಸುವ, ಅನುಸರಿಸುವ ದಿನಗಳೇನೂ ದೂರವಿಲ್ಲ. ನೀವು ಅಂಗಡಿಗೆ ಹೋದಾಗ ನಿಮ್ಮ ಪರ್ಸ್ ಅನ್ನು ಮನೆಯಲ್ಲೇ ಬಿಟ್ಟು ಬಂದಿದ್ದರೆ ನೀವೇನು ಮಾಡುತ್ತೀರಿ? ಇಂತಹ ಪರಿಸ್ಥಿತಿಗಳಲ್ಲಿ ಗ್ರಾಹಕರ ನೆರವಿಗೆ ನಿಂತಿದೆ ಅಲ್ಟ್ರಾ ಕ್ಯಾಶ್ ಆ್ಯಪ್.

ಅಲ್ಟ್ರಾ ಕ್ಯಾಶ್ ಸಂಸ್ಥೆಯನ್ನು ಉಮೇಶ್ ಸಿಂಘಾಲ್ ಮತ್ತು ವಿಶಾಲ್ ಲಾಲ್ ಅವರು ಸೆಪ್ಟೆಂಬರ್ 2014ರಲ್ಲಿ ಬೆಂಗಳೂರಿನಲ್ಲಿ ಸಂಸ್ಥಾಪಿಸಿದರು. ಮೊಬೈಲ್ ಪಾವತಿಗೆ ಸೂಕ್ತ ವಾತಾವರಣ ಕಲ್ಪಿಸಲು ಅಲ್ಟ್ರಾ ಕ್ಯಾಶ್ ಆ್ಯಪ್ ಸಹಾಯ ಮಾಡುತ್ತದೆ. ಇದರಲ್ಲಿ ಅಂಗಡಿಗಳಿಗೆ ಹೋಗುವ ಗ್ರಾಹಕರು ತಮ್ಮ ಬ್ಯಾಂಕ್ ಅಕೌಂಟ್ ಸಹಾಯದಿಂದ ಮೊಬೈಲ್ ಮೂಲಕವೇ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಯಾವುದೇ ಡಿಜಿಟಲ್ ವ್ಯಾಲೆಟ್‌ಗೆ ಹಣ ಪಾವತಿ ಮಾಡಬಹುದು. ಅಲ್ಟ್ರಾ ಕ್ಯಾಶ್ ಸಂಸ್ಥೆಯಲ್ಲಿ ಉಬೋನಾ ತಾಂತ್ರಿಕತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಈ ಸಂಸ್ಥೆಯಲ್ಲಿ ಪ್ರಸ್ತುತ 25 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಲ್ಟ್ರಾ ಕ್ಯಾಶ್ ಸಂಸ್ಥೆಯ ಮೂಲಭೂತವಾಗಿ ಪೇಟೆಂಟ್ ಪೆಂಡಿಂದ್ ಟೆಕ್ನಾಲಜಿಯನ್ನು ತನ್ನ ಆಧಾರವಾಗಿರಿಸಿಕೊಂಡಿದೆ. ಅಲ್ಟ್ರಾ ಹೈ ಫ್ರೀಕ್ವೆನ್ಸಿ ಧ್ವನಿಯ ಅಲೆಗಳನ್ನು ಬಳಸಿಕೊಂಡು ಪಾವತಿಯ ಮಾಹಿತಿಯು ಸುಭದ್ರವಾಗಿ ಒಂದು ಡಿವೈಸ್‌ನಿಂದ ಮತ್ತೊಂದು ಡಿವೈಸ್‌ಗೆ ವರ್ಗಾವಣೆಯಾಗುತ್ತದೆ. ಅಲ್ಟ್ರಾ ಕ್ಯಾಶ್ ಎಂಬ ಈ ಹೊಸ ತಂತ್ರಜ್ಞಾನದ ಮೂಲಕ ಪಾವತಿ ಮಾಡುವುದು ಬಹಳ ಸುಲಭ. ಯಾವುದೇ ನೂತನ ಡಿವೈಸ್‌ಗಳನ್ನು, ಹಾರ್ಡ್‌ ವೇರ್‌ಗಳನ್ನು ಬಳಸಬೇಕಾಗಿಲ್ಲ, ಯಾವುದೇ ರೀತಿಯ ವಿಶೇಷ ಎನ್‌ಎಫ್‌ಸಿ ಚಿಪ್ಸ್‌ಗಳನ್ನು ಬಳಸಬೇಕಾಗಿಲ್ಲ. ಹೀಗಾಗಿ ಇದರಿಂದ ಸುಲಭವಾಗಿ ಪಾವತಿ ಮಾಡುವುದು ಸಾಧ್ಯ ಎನ್ನುತ್ತಾರೆ ವಿಶಾಲ್.

4 ತಿಂಗಳಲ್ಲೇ ಅಲ್ಟ್ರಾ ಕ್ಯಾಶ್ ಸಂಸ್ಥೆಯ ಆ್ಯಪ್‌ ಅನ್ನು 35,000ಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ಆ್ಯಪ್‌ ಮೂಲಕ ಈವರೆಗೂ 50,000ಕ್ಕೂ ಹೆಚ್ಚು ವಹಿವಾಟು ನಡೆದಿದೆ. ಈ ಮೂಲಕ 2.5 ಕೋಟಿ ಆದಾಯ ಬಂದಿದೆ. ಇದರ ಹೊರತಾಗಿ ಪ್ರತಿ ತಿಂಗಳಿಗೆ ಶೇ.150 ರಿಂದ ಶೇ. 200ರಷ್ಟು ಬೆಳವಣಿಗೆ ಸಾಧಿಸುತ್ತಿದ್ದೇವೆ ಎನ್ನುತ್ತಾರೆ ವಿಶಾಲ್. ಈ ಉದ್ಯಮ ಈಗ 500ಕ್ಕೂ ಹೆಚ್ಚು ರೆಸ್ಟೋರೆಂಟ್, ಕೆಫೆಗಳಿಂದ ಹಿಡಿದು ಗ್ರಾಸರಿ ಶಾಪ್‌ಗಳು, ಸ್ಟೇಷನರಿ, ಎಲೆಕ್ಟ್ರಾನಿಕ್ ವ್ಯಾಪಾರಿಗಳಿಗೆ ತನ್ನ ಸೇವೆ ಒದಗಿಸುತ್ತಿದೆ. ಅಲ್ಟ್ರಾ ಕ್ಯಾಶ್ ನ ಮತ್ತೊಂದು ದೊಡ್ಡ ಉಪಯೋಗವೆಂದರೆ ಈ ಆ್ಯಪ್‌ ಮೂಲಕ ಪಾವತಿ ಮಾಡಲು ಇಂಟರ್‌ನೆಟ್‌ನ ಅವಶ್ಯಕತೆ ಇಲ್ಲ.

ಅಲ್ಟ್ರಾ ಕ್ಯಾಶ್ ತಂತ್ರಜ್ಞಾನ ವೇಗವಾಗಿ, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ. ಕಾಪಿಯಾಗುವುದರಿಂದ ರಕ್ಷಿಸುತ್ತದೆ, ಸಮಯ ಮತ್ತು ಪಾವತಿ ಗ್ರೇಡ್‌ನ ಉಳಿಕೆಯಾಗುತ್ತದೆ. ಒಂದು ಕ್ಷಣದೊಳಗೆ ಈ ತಂತ್ರಜ್ಞಾನದ ಮೂಲಕ 256 ಬೈಟ್ಸ್ ಮಾಹಿತಿ ರವಾನೆ ಮಾಡಲು ಸಾಧ್ಯವಾಗುತ್ತದೆ. ಪ್ರಸ್ತುತ ಚಿಲ್ಲರೆ ವ್ಯಾಪಾರಿ ಕ್ಷೇತ್ರವು ಸೇವಾ ವ್ಯವಸ್ಥೆ ಮೇಲೆ ಅವಲಂಬನೆಯಾಗಿದೆ. ನಿಧಾನಗತಿಯ ಗಾತ್ರ ಬದಲಾವಣೆ ಸಾಮರ್ಥ್ಯ ಹೊಂದಿರುವ ಡಿಜಿಟಲ್ ಪಾವತಿ ಯಂತ್ರವನ್ನು ಹೊಂದಿದೆ.

ಪ್ರಸ್ತುತ ಅಂಗಡಿಗಳು ಒದಗಿಸುವ ಸೇವಾ ವ್ಯವಸ್ಥೆಯು ಬ್ಯಾಂಕ್‌ಗಳನ್ನು ಅವಲಂಬಿಸಿದೆ. ಭಾರತದಲ್ಲಿ 20 ಮಿಲಿಯನ್‌ಗೂ ಅಧಿಕ ಜನರು ವ್ಯಾಪಾರ ಮತ್ತು ಅಸಂಖ್ಯಾತ ಗೃಹ ಕೈಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಈ ಪೈಕಿ ಸೇವೆ ವ್ಯವಸ್ಥೆಯಲ್ಲಿ ರಿಜಿಸ್ಟರ್ ಮಾಡಿರುವ ಯಂತ್ರಗಳು ಕೇವಲ 1 ಮಿಲಿಯನ್ ಮಾತ್ರ. ಸ್ಮಾರ್ಟ್ ಫೋನ್ ಹೊಂದಿರುವ ಯಾವುದೇ ವ್ಯಾಪಾರಿ ಅಲ್ಟ್ರಾ ಕ್ಯಾಶ್ ಸೌಲಭ್ಯವನ್ನು ಪಡೆಯಬಹುದು ಎನ್ನುತ್ತಾರೆ ವಿಶಾಲ್.

ಮಾರುಕಟ್ಟೆಯ ವಿಶ್ಲೇಷಣೆ

ವಿಶಾಲ್ ಮತ್ತು ಉಮೇಶ್ ಇಬ್ಬರೂ ಐಐಟಿ-ಬಿಹೆಚ್‌ಯುನಲ್ಲಿ ವಿದ್ಯಾಭ್ಯಾಸ ಪೂರೈಸಿದವರು. ಇವರಿಗೆ ಉತ್ಪನ್ನ ಅಭಿವೃದ್ಧಿ, ಸ್ಟ್ರಾಟೆಜಿಕ್ ಪ್ಲಾನಿಂಗ್, ಬೌದ್ಧಿಕ ಆಸ್ತಿ ಸೃಷ್ಟಿ ಮತ್ತು ಗ್ರಾಹಕರ ಸೇವೆಗಳ ವಿಚಾರದಲ್ಲಿ ಅಗಾಧ ಅನುಭವವನ್ನು ಪಡೆದಿದ್ದಾರೆ. ವೈಯಕ್ತಿಕವಾಗಿ, ಮೊಬೈಲ್ ಪಾವತಿ ವಿಚಾರದಲ್ಲಿ, ಸಿಸ್ಟಮ್ ಆರ್ಕಿಟೆಕ್ಚರ್ ಮತ್ತು ಭದ್ರತೆಯ ವಿಚಾರದಲ್ಲಿ ಅನೇಕ ಪೇಟೆಂಟ್‌ಗಳನ್ನು ಪಡೆದುಕೊಂಡಿದ್ದಾರೆ.

ಅಲ್ಟ್ರಾ ಕ್ಯಾಶ್ ಯೋಜನೆ ರೂಪುಗೊಳ್ಳುವುದಕ್ಕೂ ಮೊದಲು, ಇವರಿಬ್ಬರೂ ಸಂಕೀರ್ಣ ಮತ್ತು ಭಿನ್ನವಾದ ಪಾವತಿ ಅವಕಾಶಗಳನ್ನು ಅರ್ಥ ಮಾಡಿಕೊಳ್ಳಲು ಒಂದೂವರೆ ವರ್ಷಗಳನ್ನು ತೆಗೆದುಕೊಂಡಿದ್ದರು.

ಪಾವತಿ ವ್ಯವಸ್ಥೆಯಲ್ಲಿರುವ ಸಂಕೀರ್ಣ ಮಟ್ಟದ ಪದರಗಳನ್ನು ಒಡೆಯಲು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸುಭದ್ರವಾದ, ವೇಗವಾದ, ಕೈಗೆಟುಕುವ ಮತ್ತು ಸಂಕೀರ್ಣ ಸಮಸ್ಯೆಗಳಿಗೆ ಹೊಸತನದ ಪರಿಹಾರಗಳನ್ನು ಒದಗಿಸುವಲ್ಲಿಯೇ ಉದ್ಯಮದ ಆರಂಭದ ದಿನಗಳು ಕಳೆದುಹೋದವು ಎನ್ನುತ್ತಾರೆ ವಿಶಾಲ್.

ಗ್ರಾಹಕರ ಮಾಹಿತಿಯನ್ನು ಸುಭದ್ರಪಡಿಸುವ ಭರವಸೆ

ಅಲ್ಟ್ರಾ ಕ್ಯಾಶ್ ಆ್ಯಪ್ ಗೂಢಲಿಪೀಕರಣ ಕ್ರಮಾವಳಿಗಳನ್ನು ಅನುಸರಿಸುತ್ತದೆ. ಗ್ರಾಹಕರ ಕುರಿತಾದ ಮಾಹಿತಿಗಳನ್ನು ರಹಸ್ಯವಾಗಿರಿಸಲು ಇಂತಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದ ತಕ್ಷಣ ಪಾವತಿ ಸೇವೆ(ಐಎಂಪಿಎಸ್) ಒದಗಿಸುವ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಅಲ್ಟ್ರಾಕ್ಯಾಶ್ ಆ್ಯಪ್ ಸಂಪೂರ್ಣ ಸುಭದ್ರ ಪಾವತಿ ವಾತಾವರಣವನ್ನು ಒದಗಿಸಿದೆ. ಇದಕ್ಕೆ ಪಿಸಿಐ- ಡಿಎಸ್ಎಸ್ ಪ್ರಮಾಣಪತ್ರವೂ ಇದೆ. ಆರ್‌ಬಿಐನ ಮೊಬೈಲ್ ಪಾವತಿ ಮಾರ್ಗಸೂಚಿಯನ್ನು ಸಮರ್ಪಕವಾಗಿ ಅನುಸರಿಸುತ್ತಿದೆ. ಅನೇಕ ಮುಂಚೂಣಿಯಲ್ಲಿರುವ ಬ್ಯಾಂಕ್‌ ಗಳು ಅಳವಡಿಸಿಕೊಂಡಿರುವ ಅಲ್ಟ್ರಾ ಕ್ಯಾಶ್ ಆ್ಯಪ್ ಸೌಲಭ್ಯದ ಕಠಿಣ ಭದ್ರತಾ ವಿಧಾನಗಳನ್ನು ಹಲವು ಬಾರಿ ಪರೀಕ್ಷಿಸಿದೆ.

ಅಲ್ಟ್ರಾ ಕ್ಯಾಶ್ ಆ್ಯಪ್ ವ್ಯಾಪಾರಿಗಳಿಗೆ ವ್ಯಾಪಾರಿ ರಿಯಾಯಿತಿ ದರದಲ್ಲಿ ಕಡಿತ (ಪ್ರತಿ ಬಾರಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸ್ಪೈಪ್ ಮಾಡುವಾಗ ವ್ಯಾಪಾರಿಗಳಿಗೆ ತಗುಲುವ ವೆಚ್ಚ) ಮಾಡಲೂ ಸಹ ಸಹಾಯ ಮಾಡುತ್ತದೆ. ಅಲ್ಟ್ರಾ ಕ್ಯಾಶ್ ಮಾನ್ಯತೆ ಪಡೆದಿರುವ ಪಾಲುದಾರರಾಗಲು ವ್ಯಾಪಾರಿಗಳು ಕೆವೈಸಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಅಲ್ಟ್ರಾ ಕ್ಯಾಶ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಬೇಕಾಗುತ್ತದೆ ಮತ್ತು ಅವರ ಬ್ಯಾಂಕ್ ಅಕೌಂಟ್ ಅನ್ನು ಅಲ್ಟ್ರಾ ಕ್ಯಾಶ್ ಆ್ಯಪ್ ಜೊತೆ ಸೇರಿಸಬೇಕು. ಇದಾದ ನಂತರ ವ್ಯಾಪಾರಿಗಳು ಅಲ್ಟ್ರಾಕ್ಯಾಶ್ ಆ್ಯಪ್ ಹೊಂದಿರುವ ಫೋನ್​​ಗಳ ಮೂಲಕ ಪಾವತಿ ಮಾಡಿಕೊಳ್ಳಲು ಅನುಮತಿಸುತ್ತದೆ ಮತ್ತು ಯಾವುದೇ ಹೆಚ್ಚುವರಿ ಹಾರ್ಡ್ ವೇರ್ ಅಗತ್ಯವಿಲ್ಲದೆ ಪೀಕ್ ಅವರ್‌ಗಳಲ್ಲಿ ಬಿಲ್ಲಿಂಗ್ ಪಾಯಿಂಟ್‌ಗಳನ್ನು ಹೆಚ್ಚಿಸಲು ಸಹಕರಿಸುತ್ತದೆ.

ಐಸಿಐಸಿಐ, ಹೆಚ್‌ಡಿಎಫ್‌ಸಿ ಮತ್ತು ಯೆಸ್ ಬ್ಯಾಂಕ್ ಗಳ ಜೊತೆ ಅಲ್ಟ್ರಾ ಕ್ಯಾಶ್ ಸಂಸ್ಥೆ ಸೇರಿಕೊಂಡಿದೆ. ಅಲ್ಟ್ರಾ ಕ್ಯಾಶ್ ಆ್ಯಪ್ ಗ್ರಾಹಕರು ಮತ್ತು ವ್ಯಾಪಾರಿಗಳು ಹೊಂದಿರುವ ಬ್ಯಾಂಕ್ ಖಾತೆಯ ಜೊತೆ ಸೇರಿಕೊಂಡಿರುತ್ತದೆ. ಈ ಮೂಲಕ ಯಾವುದೇ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ಅಂಗಡಿಗಳಲ್ಲಿ ಸುಲಭವಾಗಿ ಪಾವತಿಸಬಹುದು ಎನ್ನುತ್ತಾರೆ ವಿಶಾಲ್.

ಯುವರ್ ಸ್ಟೋರಿ ನಿಲುವು

3ಜಿ, 4ಜಿ ಸೇವೆ ಹೊಂದಿರುವ ಸ್ಮಾರ್ಟ್ ಫೋನ್‌ಗಳ ಬಳಕೆ ಹೆಚ್ಚಾಗುತ್ತಿರುವ ಕಾರಣ ಭಾರತದಲ್ಲಿ ಡಿಜಿಟಲ್ ಪಾವತಿ ಉದ್ಯಮದಲ್ಲಿ ಹೊಸ ಬೆಳವಣಿಗೆ ಸಾಧಿಸುವುದು ಸಾಧ್ಯವಾಗುತ್ತಿದೆ. ಝಿನ್ನೋವ್ ಸಂಸ್ಥೆಯ ಅಧ್ಯಯನದ ಪ್ರಕಾರ ಮೊಬೈಲ್ –ಕಾಮರ್ಸ್ ಮಾರುಕಟ್ಟೆ ಇನ್ನೂ ಶೇ.55ರಷ್ಟು ಬೆಳವಣಿಗೆ ಸಾಧಿಸುವ ಸಾಧ್ಯತೆ ಇದೆ. ಪ್ರಸ್ತುತ ಇದರ ಗಾತ್ರ 2 ಬಿಲಿಯನ್ ಯುಎಸ್ ಡಾಲರ್ ಆಗಿದ್ದು 2019ರ ವೇಳೆಗೆ ಇದು 19 ಬಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶೇ.91ರಷ್ಟು ಗ್ರಾಹಕರು ತಮ್ಮ ಫೋನ್‌ಗಳ ಮೂಲಕ ಉತ್ಪನ್ನಗಳ ಅಥವಾ ಸೇವೆಗಳ ಹುಡುಕಾಟದಲ್ಲಿದ್ದಾರೆ.

ಶೇ.50ರಷ್ಟು ಭಾರತೀಯ ಸ್ಮಾರ್ಟ್ ಫೋನ್ ಬಳಕೆದಾರರು 18 ರಿಂದ 30 ವಯೋಮಾನದವರು. ಇದು ಡಿಜಿಟಲ್ ಪಾವತಿ ವಿಧಾನದಲ್ಲಿ ಬೆಳವಣಿಗೆ ಸಾಧಿಸಲು ಬಹುಪಾಲು ಸಹಕಾರ ಮಾಡಿದೆ. ಭಾರತದಲ್ಲಿ ಶೇ.40ರಷ್ಟು ಇ-ಕಾಮರ್ಸ್ ವಹಿವಾಟುಗಳು ಮೊಬೈಲ್ ಮೂಲಕವೇ ಸಾಗುತ್ತಿದೆ. ಶೇ.52ರಷ್ಟು ವಹಿವಾಟು ಡಿಜಿಟಲ್ ಪಾವತಿ ಮೂಲಕ ಸಾಗುತ್ತಿದೆ.

ಟ್ರ್ಯಾನ್ ಸರ್ವ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಓ ಅನೀಶ್ ವಿಲಿಯಮ್ಸ್ ಹೇಳುವಂತೆ, ದೇಶ ಕ್ಯಾಶ್ ಲೆಸ್ ಆರ್ಥಿಕತೆಯ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಐಎಂಪಿಎಸ್ ವಹಿವಾಟುಗಳು ಮನಿಆರ್ಡರ್, ಡೆಬಿಟ್,ಕ್ರೆಡಿಟ್ ಕಾರ್ಡ್ ಪದ್ಧತಿಯನ್ನು ನಾಲ್ಕೇ ವರ್ಷಗಳಲ್ಲಿ ಮೌಲ್ಯ ಮತ್ತು ಗಾತ್ರ ಎರಡರಲ್ಲೂ ಹಿಂದಿಕ್ಕಲಿದೆ.

ಪ್ರಸ್ತುತ ಪೇಟಿಎಂ, ಫ್ರೀಚಾರ್ಜ್ ಮತ್ತು ಮೊಬೈಕ್ ವಿಕ್ ಸಂಸ್ಥೆಗಳು ಮೊಬೈಲ್ ಪಾವತಿಯ ಪ್ರಮುಖ ಸಂಸ್ಥೆಗಳೆನಿಸಿದೆ. ಇದರಲ್ಲಿ ಇನ್‌ಸ್ಟಾ ಮೋಜೋ, ಸಿಟ್ರಸ್ ಪೇ, ಟ್ರ್ಯಾನ್ ಸರ್ವ್ ಮತ್ತಿತರ ಸಂಸ್ಥೆಗಳೂ ಹಿಂದೆ ಬಿದ್ದಿಲ್ಲ.

ಅದ್ಭುತವಾದ ವ್ಯಾಪಾರಿ ಪರಿಸರವನ್ನು ಇನ್ನು ಎರಡೇ ವರ್ಷಗಳಲ್ಲಿ ಸೃಷ್ಟಿಸುವುದು ಅಲ್ಟ್ರಾ ಕ್ಯಾಶ್ ಸಂಸ್ಥೆಯ ಗುರಿಯಾಗಿದೆ. 2ನೇ ಶ್ರೇಣಿಯ ಮತ್ತು 3ನೇ ಶ್ರೇಣಿಯ ಸಣ್ಣ ಉದ್ಯಮಿಗಳೂ ಸಹ ತಮ್ಮ ಮೊಬೈಲ್ ಮೂಲಕ ಅಲ್ಟ್ರಾ ಕ್ಯಾಶ್ ಪಾವತಿ ವಿಧಾನಕ್ಕೆ ಸೇರುವಂತೆ ಮಾಡುವುದೂ ಸಹ ಸಂಸ್ಥೆಯ ಮುಂದಿದೆ. 2017ರ ಒಳಗೆ ಶೇ.70ಕ್ಕೂ ಹೆಚ್ಚು ಮೆಟ್ರೋ ವ್ಯಾಪಾರಿಗಳು ಮತ್ತು ಶೇ.40ಕ್ಕೂ ಹೆಚ್ಚು 2ನೇ ಶ್ರೇಣಿಯ ವ್ಯಾಪಾರಿಗಳು ಅಲ್ಟ್ರಾಕ್ಯಾಶ್ ಡಿಜಿಟಲ್ ಪಾವತಿ ವಿಧಾನವನ್ನು ಅನುಸರಿಸುವಂತಾಗಬೇಕು ಎನ್ನುತ್ತಾ ಮಾತು ಮುಗಿಸಿದರು ವಿಶಾಲ್.

ಲೇಖಕರು: ಅಪರಾಜಿತ ಚೌಧರಿ
ಅನುವಾದಕರು: ವಿಶ್ವಾಸ್​​​

Related Stories