ಸ್ಟೀಲ್ ಸಿಟಿ ಬಳ್ಳಾರಿಗೆ ಬೇಕು ದೊಡ್ಡ ಹೂಡಿಕೆ

ಟೀಮ್​ ವೈ.ಎಸ್​. ಕನ್ನಡ

ಸ್ಟೀಲ್ ಸಿಟಿ ಬಳ್ಳಾರಿಗೆ ಬೇಕು ದೊಡ್ಡ ಹೂಡಿಕೆ

Monday February 01, 2016,

3 min Read

ಬಳ್ಳಾರಿ ಜಿಲ್ಲಾ ಸಮೀಕ್ಷೆ

ಜಿಲ್ಲಾ ಅವಲೋಕನ- ಕರ್ನಾಟಕದಲ್ಲಿ 2ನೇ ಅತಿ ವೇಗವಾಗಿ ಬೆಳೆಯುತ್ತಿರೋ ನಗರ ಬಳ್ಳಾರಿಯನ್ನ ದಕ್ಷಿಣ ಭಾರತದ ಸ್ಟೀಲ್ ಸಿಟಿ ಎಂದೂ ಕರೆಯುತ್ತಾರೆ. ನೈಸರ್ಗಿಕ ಖನಿಜ ಸಂಪನ್ಮೂಲ ಮೀಸಲು, ಜವಳಿ ಉದ್ಯಮ ಹಾಗೂ ಪ್ರವಾಸೋದ್ಯಮ ಜಿಲ್ಲೆಯ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕರ್ನಾಟಕ ರಾಜ್ಯದ ಪೂರ್ವ ಭಾಗದಲ್ಲಿ ಇರೋ ಜಿಲ್ಲೆಗೆ 7 ತಾಲ್ಲೂಕುಗಳಿವೆ. ಅವುಗಳೆಂದ್ರೆ ಬಳ್ಳಾರಿ, ಸಿರಗುಪ್ಪ, ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ. ಬಳ್ಳಾರಿ ಜಿಲ್ಲೆ ಸುಮಾರು 8,461 ಚದರ ಕಿಮೀ ಹರಡಿಕೊಂಡಿದ್ದು. 2011ರ ಜನಗಣತಿಯಂತೆ 24.50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇದರಂತೆ ಪ್ರತಿ ಚದರ ಕಿಮೀಟರ್ ಗೆ 300 ಜನರ ವಾಸ್ತವ್ಯವಿದೆ.

image


ಆರ್ಥಿಕ ಸ್ಥಿತಿಗತಿ

ಬಳ್ಳಾರಿ ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರೋ 2ನೇ ಜಿಲ್ಲೆ. ಬಳ್ಳಾರಿಯ ಒಟ್ಟು ಜಿಡಿಪಿ ರೂ 101.68 ಶತಕೋಟಿಯಾಗಿದ್ದು, ರಾಜ್ಯದ ಜಿಎಸ್‍ಡಿಪಿಯಲ್ಲಿ 3.4% ಬಳ್ಳಾರಿಯ ಕೊಡುಗೆಯಾಗಿದೆ. ಜಿಲ್ಲೆಯ ಆರ್ಥಿಕ ತಲಾ ಆದಾಯ ರೂ 74,554 ಆಗಿದೆ. 2007-08 ರಿಂದ 2012-13ರಲ್ಲಿ ಜಿಡಿಡಿಪಿ ಬೆಳವಣಿಗೆ 3% ಸಿಎಜಿಆರ್ ಹಂತದಲ್ಲಿದೆ.

ಕೃಷಿ ಅವಲೋಕನ

ಬಳ್ಳಾರಿಯ ಭೂ ಸಂರಚನೆಯಿಂದಾಗಿ ಜಿಲ್ಲೆಯಲ್ಲಿ ಬೆಳೆಯುವ ವಿವಿಧ ಬೆಳೆಗಳಲ್ಲಿ ಹೆಚ್ಚಿನವು ಎಣ್ಣೆ ಉತ್ಪಾದನೆ ಜೀಜಗಳದ್ದಾಗಿದೆ. ಜಿಲ್ಲೆಯ 20% ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ವ್ಯವಸಾಯ ಮತ್ತು ಆಹಾರ ಸಂಸ್ಕರಣೆಗಳದ್ದಾಗಿದೆ. ಬಿತ್ತನೆಯ 50% ಪ್ರದೇಶದಲ್ಲಿ ಬೇಳೆಕಾಳುಗಳು ಬೆಳೆದರೆ, ಎಣ್ಣೆ ಬೀಜಗಳು 17.80% ಹಾಗೂ ವಾಣಿಜ್ಯ ಬೆಳೆಗಳು 14% ಹಾಗೂ ದ್ವಿದಳ ಧಾನ್ಯಗಳು 12.78% ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈರುಳ್ಳಿ, ಮೆಣಸಿನಕಾಯಿ, ಪಪ್ಪಾಯ, ದ್ರಾಕ್ಷಿ, ಹುಣಸೇಹಣ್ಣು, ದಾಳಿಂಬೆ, ಮೂಸಂಬಿ, ಸಪೋಟ, ಬಾಳೆಹಣ್ಣು, ಮಾವಿನಹಣ್ಣಿನಂತಹ ಬೆಳೆಗಳನ್ನು ಬೆಳೆಯಲಾಗುತ್ತಿದೆ. ವಾಣಿಜ್ಯ ಬೆಳೆಗಳಾದ ಹತ್ತಿ, ಎಣ್ಣೆ ಬೀಜಗಳು, ಹಡಲೆಕಾಯಿ, ಸೂರ್ಯಕಾಂತಿ ಬೆಳೆಗಳು ಜಿಲ್ಲೆಯ 45 ಎಣ್ಣೆ ಉತ್ಪಾದನಾ ಕೇಂದ್ರಗಳಿಗೆ ಕಚ್ಚಾವಸ್ತುಗಳನ್ನು ರವಾನೆ ಮಾಡುತ್ತದೆ.

ಕೈಗಾರಿಕಾ ಅವಲೋಕನ

ಬಳ್ಳಾರಿಯಲ್ಲಿ 18,759 ಸಣ್ಣ ಕೈಗಾರಿಕೆಗಳು ಇದ್ದು ಇವುಗಳಲ್ಲಿ ರೂ 727.2923 ಶತಕೋಟಿ ಹಾಗೂ 70 ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳಿದ್ದು ಇಲ್ಲಿ ರೂ 365.7964 ಶತಕೋಟಿ ಹೂಡಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ 7 ಕೈಗಾರಿಕಾ ವಲಯಗಳಿದ್ದು 5 ಕೈಗಾರಿಕಾ ಎಸ್ಟೇಟ್‍ಗಳಲ್ಲಿ ಸ್ಟೀಲ್ ಪಾರ್ಕ್ ಪ್ರಾರಂಭಿಸಲು ಪ್ರಸ್ತಾವನೆ ಮಾಡಲಾಗಿದೆ. ಜವಳಿ ಉದ್ಯಮ ಸಮೂಹ, ಮಿರರ್ ಎಂಬ್ರಾಯ್ಡರಿ ಸಮೂಹ ಮತ್ತು ಅಕ್ಕಿ ಗಿರಣಿ ಸಮೂಹಗಳು ಜಿಲ್ಲೆಯ ವ್ಯವಸಾಯ ಮತ್ತು ಸಂಸ್ಕರಣ ಉದ್ಯಮವು ಸ್ಥಳೀಯವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ.

ಜವಳಿ ಉದ್ಯಮದಲ್ಲಿ ಜೀನ್ಸ್ ವ್ಯವಹಾರ ದೊಡ್ಡಮಟ್ಟದಲ್ಲಿದ್ದು, ಪಾಯಿಂಟ್ ಬ್ಲಾಂಕ್, ಡ್ರಾಗನ್ ಫ್ಲೈ, ವಾಕರ್ ಮತ್ತು ಪೋಡಿಯಂ ಬ್ರಾಂಡ್‍ಗಳು ನಗರವನ್ನು ಭಾರತದ ಜೀನ್ಸ್ ಸಿಟಿ ಎಂದು ಹೆಸರು ಮಾಡುವಲ್ಲಿ ದೊಡ್ಡ ಕೊಡುಗೆ ನೀಡಿವೆ. ಇಲ್ಲಿ 40-50 ಡೈಯಿಂಗ್ ಯೂನಿಟ್‍ಗಳು ಹಾಗೂ ಸುಮಾರು 500 ಬಟ್ಟೆ ಹೊಲಿಯುವ ಯೂನಿಟ್‍ಗಳು ಇವೆ. ಈ ಕಾರಣದಿಂದಾಗಿಯೇ ಈ ಪ್ರದೇಶದಲ್ಲಿ ಜವಳಿ ಪಾರ್ಕ್ ಮತ್ತು ವಿಶೇಷ ಜೀನ್ಸ್ ಪಾರ್ಕ್ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ.

ಬಳಸಿಕೊಳ್ಳಬಹುದಾದ ಅಂದಾಜು 1031.4 ದಶಲಕ್ಷ ಟನ್ ಕಬ್ಬಿಣ ಅದಿರು ಮತ್ತು 18.81 ದಶಲಕ್ಷ ಮಿಲಿಯನ್ ಟನ್ ಮ್ಯಾಂಗನೀಸ್ ಅದಿರು ಗಣಿಗಾರಿಗೆ ಉದ್ಯಮಕ್ಕೆ ಪೂರಕ ಉದ್ದಿಮೆಗಳಾದ ಪವರ್ ಪ್ಲಾಂಟ್, ಪರಿಸರ ಸಂರಕ್ಷಣಾ ವ್ಯವಸ್ಥೆ ಮತ್ತು ಪರಿಹಾರಕ್ಕೆ ಶಕ್ತಿ ನೀಡಿದೆ. ಜೆವಿಎಸ್‍ಎಲ್, ಬಿಎಸ್‍ಎಎಲ್, ಎನ್‍ಕೆಎಸ್‍ಎಲ್, ಜಿಂದಾಲ್ ಪ್ರಾಕ್ಸಿಯಾರ್ ಲಿಮಿಟೆಡ್ ಈ ವಲಯದ ದೈತ್ಯ ಕಂಪನಿಗಳಾಗಿವೆ.

ಮೂಲ ಸೌಕರ್ಯ ಮತ್ತು ಸಂಪನ್ಮೂಲಗಳು-

ಭೂಮಿ ಮತ್ತು ಮಣ್ಣು: ಬಳ್ಳಾರಿಯ 54.09% ಭೂಮಿ ವ್ಯವಸಾಯಕ್ಕೆ ಉಪಯೋಗವಾದ್ರೆ, ಇತರೆ ಭೂ ಪ್ರದೇಶಗಳಲ್ಲಿ ವ್ಯವಸಾಯೇತರ ಪ್ರದೇಶ 4.17% ಹಾಗೂ 11.93% ಅರಣ್ಯವಿದೆ. ಬಳ್ಳಾರಿಯಲ್ಲಿ ಕಬ್ಬಿಣ ಅದಿರು, ಮ್ಯಾಂಗನೀಸ್ ಅದಿರು, ಕ್ವಾರ್ರ್ಜ್ ಖನಿಜ ಸಂಪನ್ಮೂಲ ಭರಿತವಾಗಿದೆ. ಅಲ್ಲದೇ ಗ್ರಾನೈಟ್ ಇಂಡಸ್ಟ್ರಿಗಳು ಸಹ ಆದಾಯ ತಂದುಕೊಡುತ್ತಿದೆ.

ಜಲಾಶಯಗಳು: ತುಂಗಭದ್ರಾ, ಹಾರಂಗಿ, ಚಿಕ್ಕಹಗರಿ ಬಳ್ಳಾರಿ ಜಿಲ್ಲೆಯ ಜೀವನದಿಗಳಾಗಿದೆ. ವ್ಯವಸಾಯಕ್ಕೆ ಬಳ್ಳಾರಿಗರು ತುಂಗಭದ್ರಾ ಜಲಾಶಯವನ್ನು ನಂಬಿಕೊಂಡಿದ್ದಾರೆ. ಕೇವಲ 37% ರಷ್ಟು ಪ್ರದೇಶ ಕಾಲುವೆಗಳಿಂದ ಜೀವಂತವಾಗಿದೆ. ಬಳ್ಳಾರಿಯಲ್ಲಿ 65ಎಂಎಲ್‍ಡಿ ನೀರು ಬಳಕೆಯಾದ್ರೆ ಇಲ್ಲಿನ ಬೇಡಿಕೆ 70 ಎಂಎಲ್‍ಡಿಗಿಂತ ಸ್ವಲೊ ಹೆಚ್ಚಿದೆ.

ವಿದ್ಯುತ್ ಸರಬರಾಜು: ಬಳ್ಳಾರಿಯಲ್ಲಿರೋ ಉಷ್ಣ ವಿದ್ಯುತ್ ಸ್ಥಾವರ 500ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡ್ತಿದ್ದು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಕಡುತಿನಿ ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರ, ಮುನಿರಾಬಾದ್ ಪವರ್ ಪ್ಲಾಂಟ್, ಹಂಪಿ ಪವರ್ ಹೌಸ್ ಹಾಗೂ ತುಂಗಭದ್ರ ಪವರ್ ಬಲದಂಡೆ ವಿದ್ಯುತ್ ಯೋಜನೆಯಿಂದ ಬಳ್ಳಾರಿಗೆ ವಿದ್ಯುತ್ ಲಭ್ಯವಾಗುತ್ತದೆ. ಜೆಸ್ಕಾಂ ಲಿಮಿಟೆಡ್ ಬಳ್ಳಾರಿಗೆ ವಿದ್ಯುತ್ ಸರಬರಾಜು ಮಾಡುವ ಹೊಣೆ ಹೊತ್ತಿದೆ.

ಜ್ಞಾನಾರ್ಜನೆ

ಇನ್ನು ಬಳ್ಳಾರಿಯಲ್ಲಿ 18 ನರ್ಸಿಂಗ್ ಕಾಲೇಜುಗಳು 20 ಡಿಗ್ರಿ ಕಾಲೇಜುಗಳು, 12 ಪಾಲಿಟೆಕ್ನಿಕ್, 4 ಎಂಜಿನಿಯರಿಂಗ್ ಕಾಲೇಜುಗಳು, 1 ಡೆಂಟಲ್ ಕಾಲೇಜ್, 1 ಅಲೋಪತಿ ಮೆಡಿಕಲ್ ಕಾಲೇಜ್, 1 ಆಯುರ್ವೇದಿಕ್ ಕಾಲೇಜ್ ಇದೆ. ಇದಲ್ಲದೇ ಬಳ್ಳಾರಿಯಲ್ಲಿ 232 ನರ್ಸಿಂಗ್ ಹೋಂ ಮತ್ತು ಕ್ಲಿನಿಕ್‍ಗಳು ಇವೆ. ಇವುಗಳಲ್ಲಿ 71 ಸರ್ಕಾರಿ ಆಸ್ಪತ್ರೆ, 55 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ.

ಸಂಪರ್ಕ

ಬಳ್ಳಾರಿಯಿಂದ ಬೆಂಗಳೂರಿಗೆ ಹಾಗೂ ಆಂಧ್ರಪ್ರದೇಶದ ಗುಂತ್‍ಕಲ್‍ಗೆ ಉತ್ತಮ ರೈಲ್ವೆ ಕನೆಕ್ಟಿವಿಟಿ ಹೊಂದಿದೆ. ನ್ಯಾಷನಲ್ ಹೈವೇ 13 ಮತ್ತು 63 ಬಳ್ಳಾರಿ ಹತ್ತಿರದಿಂದಲೇ ಹಾದು ಹೋಗುತ್ತದೆ. ಬಳ್ಳಾರಿಗೆ ಹತ್ತಿರದಲ್ಲಿ 3 ಅಂತರಾಷ್ಟ್ರೀಯ ಮತ್ತು 2 ದೇಶೀಯ ಏರ್‍ಪೋರ್ಟ್‍ಗಳಿವೆ. ಮಂಗಳೂರಿನ ಕಾರವಾರ ಮೂಲಕ, ಮುಂಬೈ ಮತ್ತು ಗೋವಾದಿಂದಲೂ ಸಮುದ್ರಕ್ಕೆ ಮಾರ್ಗವಿದೆ. ಬೆಂಗಳೂರು-ಮುಂಬೈ ಮಧ್ಯದ ಆರ್ಥಿಕ ವಲಯಕ್ಕೆ ಬಳ್ಳಾರಿ ಪ್ರಮುಖ ಪಾತ್ರ ವಹಿಸುತ್ತದೆ.

ಕೊನೇ ಮಾತು

ಒಟ್ಟಾರೆಯಲ್ಲಿ ಸ್ಟೀಲ್ ಸಿಟಿ ಬಳ್ಳಾರಿಯಲ್ಲಿ ದೊಡ್ಡ ಕಾರ್ಖಾನೆಗಳಿಗೆ ಉತ್ತಮ ಅವಕಾಶವಿದೆ. ಅಲ್ಲದೇ ಮೂಲಸೌಕರ್ಯ ಅಭಿವೃದ್ಧಿಗಾಗಿ 16 ಕೋಲ್ಡ್ ಸ್ಟೋರೇಜ್ ಪ್ರಾರಂಭಿಸುವ ಪ್ರಸ್ತಾವನೆ ಇದೆ. ಅಲ್ಲದೇ ಬಳ್ಳಾರಿಯಲ್ಲಿ ಜವಳಿ ಉದ್ಯಮದಲ್ಲಿ ವಿಫುಲ ಅವಕಾಶ ಇರೋದ್ರಿಂದ ಕುಡುತಿನಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 1000 ಎಕರೆ ವಿಶೇಷ ಜವಳಿ ಉದ್ದಿಮೆ ಸ್ಥಾಪನೆಗೆ ಮೀಸಲಿಡಲಾಗಿದೆ. ಇಷ್ಟೆಲ್ಲಾ ಉದ್ದಿಮೆಗೆ ವಿಪುಲ ಅವಕಾಶ ಕಲ್ಪಿಸಿರೋ ಸರ್ಕಾರ ಈ ಜಿಲ್ಲೆಯಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಗೂ ಯೋಜನೆ ಹಾಕಿಕೊಂಡಿದೆ. ಹಾಗಾಗಿ ಇಲ್ಲಿ ಬಂಡವಾಳ ಹೂಡಿದ್ರೆ ಲಾಭಕ್ಕಂತೂ ಮೋಸವಿಲ್ಲ.