ಬಿಹಾರದ "ವಿದ್ಯುತ್ ಭವನ"ದಲ್ಲಿದೆ ವಿಭಿನ್ನ ಕೆಫೆ- ತ್ಯಾಜ್ಯಗಳಿಂದಲೇ ತಯಾರಾಗಿದೆ ಕುರ್ಚಿ, ಟೇಬಲ್..!

ಟೀಮ್​ ವೈ.ಎಸ್​. ಕನ್ನಡ

1

ಪಾಟ್ನಾದ "ದಿ ಎನರ್ಜಿ ಕೆಫೆ" ಹೊಸ ರೀತಿಯ ಡೆಕೋರೇಷನ್​​ಗಳಿಂದ ಸುದ್ದಿ ಮಾಡುತ್ತಿದೆ. ವಿಭಿನ್ನ ರೀತಿಯಲ್ಲಿ ಎಲ್ಲರನ್ನೂ ಸೆಳೆಯುತ್ತಿದೆ. ಈ ಕೆಫೆಯ ಇಂಟಿರಿಯರ್​ಗಳೇ ಹೊಸ ಅನುಭವವನ್ನು ನೀಡುತ್ತಿದೆ. ಈ ಕೆಫೆಯಲ್ಲಿ ಕುರ್ಚಿಗಳಾಗಿ, ಮೇಜುಗಳಾಗಿ ಮಾರ್ಪಾಡಾಗಿರುವುದು ಎಣ್ಣೆಯ ಡ್ರಮ್​ಗಳು, ಹಳೆಯ ಅಂಬಾಸಡೆರ್ ಕಾರ್ ಕುಳಿತುಕೊಳ್ಳುವ ಸೋಫವಾಗಿದೆ. ಪಾಳು ಬಿದ್ದಿದ್ದ ಹಳೆಯ ಪವರ್ ಸಬ್ ಸ್ಟೇಷನ್​ನ  ಕಂಟ್ರೋಲ್ ಪ್ಯಾನಲ್ ಕೂಡ ಟೇಬಲ್ ಆಗಿ ಬಿಟ್ಟಿದೆ. ಪಾಟ್ನಾದ ಎಲೆಕ್ಟ್ರಿಕ್ ಡಿಪಾರ್ಟ್​ಮೆಂಟ್ ಆಫೀಸ್​, "ವಿದ್ಯುತ್ ಭವನ್" ಈಗ ಕಾಫಿ ಶಾಪ್ ಆಗಿ ಪರಿವರ್ತನೆ ಆಗಿದೆ. ಬಿಹಾರ್ ಸ್ಟೇಟ್ ಎನರ್ಜಿ ಡಿಪಾರ್ಟ್​ಮೆಂಟ್​​ ಹಳೆಯ ವಸ್ತುಗಳನ್ನು ಉಪಯೋಗಿಸಿಕೊಂಡು ಹೊಸತನದಲ್ಲಿ ಮತ್ತು ಆಕರ್ಷವಾಗಿ "ದಿ ಎನರ್ಜಿ ಕೆಫೆ"ಯನ್ನು ಆರಂಭಿಸಿದೆ.

ಎಲೆಕ್ಟ್ರಿಸಿಟಿ ಡಿಪಾರ್ಟ್​ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಉಪಯೋಗಿಸಿ ಬಿಟ್ಟಿದ್ದ ಹಳೆಯ ಸೈಕಲ್​ಗಳ ಬಿಡಿಭಾಗಗಳು ಕೂಡ ಇಲ್ಲಿ ಹೊಸ ರೂಪ ಪಡೆದುಕೊಂಡಿದೆ. ಕೆಫೆಯ ನಾಮಫಲಕವನ್ನು ತಯಾರಿಸಿದ್ದು ಸೈಕಲ್​ಗಳ ಬಿಡಿಭಾಗಗಳಿಂದಲೇ ಅನ್ನೋದು ಮತ್ತೊಂದು ವಿಶೇಷ. ಬಿಹಾರ ರಾಜ್ಯ ವಿದ್ಯುತ್ ಮಂಡಳಿಯ ಮುಖ್ಯ ಕಾರ್ಯದರ್ಶಿಯವರು 2001ರವರೆಗೆ ಹಳೆಯ ಮಾಡೆಲ್​ನ ಅಂಬಾಸೆಡರ್ ಕಾರ್ ಅನ್ನು ಬಳಸುತ್ತಿದ್ದರು. ಅದಾದ ಮೇಲೆ ಅದನ್ನು ಗುಜರಿಗೆ ಹಾಲಾಗಿತ್ತು. ಆದ್ರೆ ಈಗ ಆ ಹಳೆಯ ಅಂಬಾಸೆಡರ್ ಕಾರು ಸೋಫಾವಾಗಿ ಬದಲಾಗಿದೆ. ಪವರ್ ಸಬ್ ಸ್ಟೇಷನ್​ನಲ್ಲಿದ್ದ ಕಂಟ್ರೋಲ್ ಪ್ಯಾನಲ್​ನಲ್ಲಿ ಸಾಕಷ್ಟು ನಟ್, ಬೋಲ್ಟ್​ಗಳಿದ್ದವು. ಅಷ್ಟೇ ಅಲ್ಲ ಕಂಟ್ರೋಲ್ ಪ್ಯಾನಲ್​ಗೆ ಗ್ಲಾಸ್ ಟಾಪ್ ಅನ್ನು ಉಪಯೋಗಿಸಲಾಗಿತ್ತು. ಈಗ ಅದು ಆಕರ್ಷಕ ಗ್ಲಾಸ್ ಟಾಪ್ ಟೇಬಲ್ ಆಗಿ ಕಂಗೊಳಿಸುತ್ತಿದೆ. ಆಯಿಲ್ ಡ್ರಮ್​ಗಳನ್ನು ಕುರ್ಚಿ ಮತ್ತು ಟೇಬಲ್​ಗಳನ್ನಾಗಿ ಮಾಡಿಕೊಳ್ಳಲಾಗಿದೆ. ಹೀಗೆ ಉಪಯೋಗಕ್ಕೆ ಬಾರದೇ ಇದ್ದ ಹಲವು ವಸ್ತುಗಳು ಈಗ "ಎನರ್ಜಿ ಕೆಫೆ"ಯಲ್ಲಿ ಆಕರ್ಷಕ ವಸ್ತುಗಳಾಗಿ ಮಾರ್ಪಾಟ್ಟಿವೆ. ಕೇಬಲ್ ರೋಲ್​ಗಳಲ್ಲಿ ಉಪಯೋಗಿಸಲ್ಪಟ್ಟಿದ್ದ ಮರದ ತುಂಡುಗಳು ಮೆನು ಬೋರ್ಡ್ ಆಗಿರುವುದು ಮತ್ತೊಂದು ವಿಶೇಷ. ಇದ್ರ ಜೊತೆಗೆ ಗೋಡೆ ಗಡಿಯಾರವನ್ನು ಕೂಡ ಉಪಯೋಗಕ್ಕೆ ಬಾರದ ಮರದು ತುಂಡಿನಿಂದಲೇ ತಯಾರಿಸಲಾಗಿದೆ. ಈ "ಎನರ್ಜಿ ಕೆಫೆ"ಯಲ್ಲಿ ಡಸ್ಟ್ ಬಿನ್ ಅನ್ನು ಕೂಡ ಹಳೆಯ ವಸ್ತುಗಳಿಂದಲೇ ತಯಾರಿಸಲಾಗುತ್ತದೆ ಅನ್ನುವುದು ಮತ್ತೊಂದು ವಿಶೇಷ.

“ ನಾವು ಡಂಪ್​​ಯಾರ್ಡ್​ನಲ್ಲಿ ಬಳಕೆಯಾಗದೆ ಬಿದ್ದಿರುವ ಹಲವು ವಸ್ತುಗಳನ್ನು ನೋಡಿದ್ದೆವು. ಹಲವು ವರ್ಷಗಳಿಂದ ಅವುಗಳು ಅಲ್ಲೇ ಉಪಯೋಗಕ್ಕೆ ಬಾರದೆ ಬಿದ್ದಿದ್ದವು. ನಮ್ಮ ಉದ್ಯೋಗಿಗಳಿಗೆ ಸಬ್ಸಿಡಿಯಲ್ಲಿ ಊಟ- ಉಪಹಾರ ನೀಡುವ ಬಗ್ಗೆ ಯೋಚನೆ ಕೂಡ ಮಾಡಿದ್ದವೆ. ಆಗ ನಮ್ಮ ಯೋಚನೆಗಳನ್ನು ಬದಲಿಸಿಕೊಳ್ಳುವ ನಿರ್ಧಾರ ಮಾಡಿದೆವು. ಡಂಪ್ ಯಾರ್ಡ್​ನಲ್ಲಿ ಬಿದ್ದಿರುವ ವಸ್ತುಗಳನ್ನೇ ಉಪಯೋಗಿಸಿಕೊಂಡು ಮತ್ತು ಅಗತ್ಯವಿರುವ ಕೆಲವೇ ಕೆಲವು ವಸ್ತುಗಳನ್ನು ಹೊರಗಿನಿಂದ ತಂದು ಕೆಲಸ ಆರಂಭಿಸಿದೆವು. ಈಗ ನಮ್ಮ ಎನರ್ಜಿ ಕೆಫೆ ವಿಭಿನ್ನವಾಗಿ ಕಾಣುತ್ತದೆ. ವಿಶ್ವದಲ್ಲಿ ಯಾವುದೂ ಕೂಡ ವೇಸ್ಟ್ ಅಲ್ಲ. ಆದ್ರೆ ಅದನ್ನು ನಮಗೆ ಬದಲಿಸಿಕೊಳ್ಳುವ ದಾರಿ ಮಾತ್ರ ಗೊತ್ತಿರಬೇಕು.”
- ಪ್ರತ್ಯಯ ಅಮೃತ್, ಮುಖ್ಯ ಕಾರ್ಯದರ್ಶಿ, ಬಿಹಾರ್ ವಿದ್ಯುತ್​ ಇಲಾಖೆ

 ಪಾಟ್ನಾ ನಿವಾಸಿಗಳಾದ ಮಂಜೀತ್ ಸಿಂಗ್ ಮತ್ತು ನೇಹಾ ಸಿಂಗ್ ಹಾಳು ಬಿದ್ದಿದ್ದ ವಸ್ತುಗಳನ್ನು ಉಪಯೋಗಿಸಿಕೊಂಡು ಇಷ್ಟೆಲ್ಲಾ ವಿಭಿನ್ನತೆಗಳನ್ನು ಸೃಷ್ಟಿಸಿದ್ದಾರೆ. ಗೋಡೆಗಳಲ್ಲಿ ಕಾಣುವ ಆಕರ್ಷಕ ಡಿಸೈನ್​ನಿಂದ ಹಿಡಿದು, ಕುಳಿತು ಕೊಳ್ಳುವ ಕುರ್ಚಿ ತನಕ ಎಲ್ಲವೂ ವೇಸ್ಟ್ ಆಗಿದ್ದ ವಸ್ತುಗಳಿಂದಲೇ ತಯಾರಿಸಲಾಗಿದೆ. ಡಂಪ್​ಯಾರ್ಡ್ ಈಗ ಸುಂದರ ಕೆಫೆಯಾಗಿ ಬದಲಾಗಿದೆ. ಈ "ಎನರ್ಜಿ ಕೆಫೆ" ಸುಮಾರು 1800 ಸ್ಕ್ವೇರ್ ಫೀಟ್ ವಿಶಾಲತೆಯನ್ನು ಕೂಡ ಹೊಂದಿದೆ. ಖಾಸಗಿ ವ್ಯಕ್ತಿಗಳಿಗೆ ಕೆಫೆಯ ಜವಾಬ್ದಾರಿ ನೀಡಿರುವುದರಿಂದ ಈಗ ಇದು ವಹಿವಾಟಿನ ಕೇಂದ್ರ ಸ್ಥಾನವಾಗಿ ಬಿಟ್ಟಿದೆ.

"ಎನರ್ಜಿ ಕೆಫೆ"ಯಲ್ಲಿ ಸಾವಯವ ಗೊಬ್ಬರ ಉಪಯೋಗಿಸಿ ಬೆಳೆದ ಆಹಾರದಿಂದ ಹಿಡಿದು, ಟೀ, ಕಾಫಿ ಮತ್ತು ಇತರೆ ತಿಂಡಿ ತಿನಸುಗಳು ಲಭ್ಯವಿದೆ. ಬಿಹಾರದ ಫೇಮಸ್​​ ಮಸಲಾ ಟೀ ಯಿಂದ ಹಿಡಿದು, ಜನರಿಗೆ ಇಷ್ಟವಾಗುವ ಮೆನುಗಳನ್ನು ತಯಾರಿಸಲಾಗಿದೆ. ಒಟ್ಟಿನಲ್ಲಿ ಯೋಚನೆಗಳು ವಿಭಿನ್ನವಾಗಿದ್ದರೆ ಮತ್ತು ಮಾಡುವ ಮನಸ್ಸಿದ್ದರೆ, ಯಾವುದೂ ಕೂಡ ತ್ಯಾಜ್ಯವಲ್ಲ ಅನ್ನುವುದನ್ನು ಎಲ್ಲರೂ ಕಲಿಯಬೇಕಿದೆ.

ಇದನ್ನು ಓದಿ:

1. ಸ್ಟಾರ್ಟ್​ಅಪ್ ಬಗ್ಗೆ ಕನಸು ಏಕೆ..? ಉದ್ಯಮದ ಯಶಸ್ಸಿಗೆ ಇಲ್ಲಿದೆ ಟಿಪ್ಸ್​..!​

2. 10,000 ಸಾಲದಿಂದ ಕೋಟ್ಯಾಧಿಪತಿಯಾದ ದಿಲೀಪ್​ ಶಾಂಘ್ವಿ ಕಥೆ..!

3. ಲಿಝಿಯ ಹೋರಾಟಕ್ಕೆ ಹೆದರಿ ಓಡಿತು ದುರಾದೃಷ್ಟ


Related Stories