ಫಾರ್ಮುಲಾ-1 ರೇಸ್‍ನಿಂದ ಉದ್ಯಮಿಗಳು ಕಲಿಯಬೇಕಾದ ಪಾಠ

ಟೀಮ್​​ ವೈ.ಎಸ್​​. ಕನ್ನಡ

ಫಾರ್ಮುಲಾ-1 ರೇಸ್‍ನಿಂದ ಉದ್ಯಮಿಗಳು ಕಲಿಯಬೇಕಾದ ಪಾಠ

Friday December 11, 2015,

4 min Read

ಇತ್ತೀಚೆಗಷ್ಟೆ 2015ರ ಫಾರ್ಮುಲಾ-1 ರೇಸ್ ಮುಕ್ತಾಯವಾಗಿದೆ. ಲೂಯಿಸ್ ಹ್ಯಾಮಿಲ್ಟನ್ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆದ್ರೆ ಚಾಂಪಿಯನ್‍ಶಿಪ್‍ನ ಕೊನೆಯಲ್ಲಿ ಹ್ಯಾಮಿಲ್ಟನ್ ಕೊಂಚ ನಿರಾಸೆ ಅನುಭವಿಸಬೇಕಾಯ್ತು. ಯಾಕಂದ್ರೆ ಹ್ಯಾಮಿಲ್ಟನ್ ಅವರ ಮರ್ಸಿಡಿಸ್ ತಂಡದ ಸದಸ್ಯ ನಿಕೋ ರೋಸ್‍ಬರ್ಗ್, ಅಬುಧಾಬಿಯಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ರೋಚಕ ಗೆಲುವು ಸಾಧಿಸಿದ್ದಾರೆ. ಇದು ಅವರ ಸತತ ಮೂರನೇ ಜಯ.

ಫಾರ್ಮುಲಾ-1 ರೇಸ್ ಅಂದ್ರೇನೇ ಒಂದು ರೋಚಕ ಅನುಭವ. ಎಫ್-1 ಚಾಲಕರ ಬದುಕು ಕೂಡ ಅಷ್ಟೇ ಮನಮೋಹಕವಾಗಿರುತ್ತೆ. ಷಾಂಪೇನ್‍ಗಳ ಅಬ್ಬರ, ಶರವೇಗದಲ್ಲಿ ಸಾಗುವ ರೇಸ್ ಗಾಡಿಗಳು, ಸುತ್ತಲೂ ಮಿನುಗುವ ಸಾವಿರಾರು ಕ್ಯಾಮರಾಗಳ ಸಮೂಹ, ಫಾರ್ಮುಲಾ-1 ಡ್ರೈವರ್‍ಗಳನ್ನು ಆರಾಧಿಸುವ ಲಕ್ಷಾಂತರ ಅಭಿಮಾನಿಗಳು, ನಿಜಕ್ಕೂ ಎಫ್-1 ರೇಸ್ ರೋಮಾಂಚನಕಾರಿ ಅನುಭವವೇ ಸರಿ. ಆದ್ರೆ ಎಫ್-1 ಚಾಲಕರಾಗೋದು ಸುಲಭದ ಕೆಲಸವಲ್ಲ. ಭೂಮಿಯ ಮೇಲಿರುವ ಅತ್ಯಂತ ಸದೃಢ ವ್ಯಕ್ತಿಗಳೆಂದರೆ ಫಾರ್ಮುಲಾ-1 ಚಾಲಕರು. ಅವರಲ್ಲಿ ಕ್ಷಣಾರ್ಧದಲ್ಲಿ ಪ್ರತಿಕ್ರಿಯಿಸುವ ವೇಗ, ಚಾಣಾಕ್ಷ ಬುದ್ಧಿಮತ್ತೆ, ಸಹನೆ ಇರಲೇಬೇಕು.

ಎಫ್-1 ಚಾಲಕರ ಜೀವನ ಎಲ್ಲರಿಗೂ ಒಂದು ಪಾಠವಿದ್ದಂತೆ. ಫಾರ್ಮುಲಾ-1 ರೇಸರ್ ಹಾಗೂ ಉದ್ಯಮ ಸಂಸ್ಥಾಪಕರ ಮಧ್ಯೆ ಸಮಾನತೆ ಇದೆ. ಫಾರ್ಮುಲಾ-1 ಚಾಲಕರ ಬದುಕಿನ ಪಯಣದಿಂದ ಉದ್ಯಮಿಗಳು ಕಲಿಯಬೇಕಾದ ಪಾಠ ಏನು ಅನ್ನೋದನ್ನು ನೋಡೋಣ.

image


ಎಲ್ಲರಿಗಾಗಿ ಒಬ್ಬ, ಎಲ್ಲರೂ ಒಬ್ಬನಿಗಾಗಿ...

ಎಫ್-1 ಕಾರ್ ಸಿಬ್ಬಂದಿ ವರ್ಗ ಅತ್ಯಂತ ಹೆಚ್ಚು ಸಂಘಟಿತವಾಗಿದೆ. ಎಫ್-1 ರೇಸ್ ಸಂದರ್ಭದಲ್ಲಿ ಸಿಬ್ಬಂದಿ ಎಷ್ಟು ಚುರುಕಾಗಿ ಟೈರ್ ಬದಲಾಯಿಸ್ತಾರೆ ಮತ್ತು ಇಂಧನ ಭರಿಸ್ತಾರೆ ಅನ್ನೋದನ್ನು ನೋಡಲು ಎರಡು ಕಣ್ಣು ಸಾಲದು. 2 ಸೆಕೆಂಡ್‍ಗಳೊಳಗೆ ಸಿಬ್ಬಂದಿ ಎಲ್ಲವನ್ನೂ ಮಾಡಿ ಮುಗಿಸ್ತಾರೆ. ಇನ್ನು ವಾಹನದ ವೇಗ ಹೆಚ್ಚಿಸುವಲ್ಲಿ ಏನಾದರೂ ತೊಂದರೆ ಕಂಡುಬಂದ್ರೆ ಅದನ್ನು ಕೂಡ ಕ್ಷಣಮಾತ್ರದಲ್ಲಿ ಸಿಬ್ಬಂದಿ ಸರಿಪಡಿಸ್ತಾರೆ. ಕೆಲಸದಲ್ಲಿ ನಿಪುಣರಾಗಿರುವ ಇವರು ಸಂಪೂರ್ಣ ಸಾಮರಸ್ಯದೊಂದಿಗೆ ಕಾರ್ಯನಿರ್ವಹಿಸ್ತಾರೆ. ಅನಿಶ್ಚಿತತೆಯೇನಾದ್ರೂ ಕಂಡುಬಂದಲ್ಲಿ ಅದನ್ನು ಸರಿಪಡಿಸಲು ಹಗಲಿರುಳು ಶ್ರಮಿಸುತ್ತಾರೆ. ನಿರ್ಧಿಷ್ಟ ಗುರಿಯೆಡೆಗಿನ ಗಮನ ಮತ್ತು ಅಭ್ಯಾಸದಿಂದ ಮಾತ್ರ ಇಂತಹ ಸಂಘಟಿತ ಕಾರ್ಯ ಮಾಡಲು ಸಾಧ್ಯ. ಹೂಡಿಕೆದಾರರು ಉತ್ಪನ್ನದ ಮೇಲೆ ಬಂಡವಾಳ ಹಾಕುವುದಿಲ್ಲ, ತಂಡವನ್ನು ನೋಡಿ ಹೂಡಿಕೆ ಮಾಡ್ತಾರೆ ಅನ್ನೋ ಮಾತು ಇದಕ್ಕೆ ಪೂರಕವಾಗಿದೆ.

ಫಾರ್ಮುಲಾ-1 ಕಾರ್‍ನ ಚಾಲಕ ಅಥವಾ ಕಂಪನಿ, ಮೆಚ್ಚುಗೆ ಗಳಿಸುವುದು ತಂಡದ ಯಶಸ್ಸಿನಿಂದ ಮಾತ್ರ. ಎಫ್-1 ರೇಸ್‍ಗಳು ಸಂಸ್ಥಾಪಕರ ಪಾಲಿಗೆ ರಿಮೈಂಡರ್ ಇದ್ದಂತೆ. ನಿಮ್ಮ ತಂಡ ಉತ್ತಮವಾಗಿದ್ರೆ ನೀವು ಕೂಡ ಯಶಸ್ಸು ಪಡೆಯೋದ್ರಲ್ಲಿ ಅನುಮಾನವೇ ಇಲ್ಲ.

ಪ್ರತಿ ತಿರುವಿನಲ್ಲೂ ಅಚ್ಚರಿ...

ಫಾರ್ಮುಲಾ-1 ರೇಸ್‍ನ ಅಂತಿಮ ಸಮರದಲ್ಲಿ ಆರಂಭದಲ್ಲಿ ಕಾರ್‍ನಲ್ಲಿದ್ದ ಕೆಲವೇ ಘಟಕಗಳು ಮಾತ್ರ ಉಳಿದುಕೊಂಡಿರುತ್ತವೆ. ಪ್ರತಿಯೊಂದು ಟ್ರ್ಯಾಕ್ ಕೂಡ ವಿಭಿನ್ನವಾಗಿರುತ್ತದೆ. ಸಿಂಗಾಪುರ ಮತ್ತು ಮೊನ್ಯಾಕ್ಕೋದಲ್ಲಿ ರಸ್ತೆಯಲ್ಲೇ ಟ್ರ್ಯಾಕ್‍ಗಳನ್ನು ಮಾಡಲಾಗುತ್ತೆ. ಸಿಲ್ವರ್‍ಸ್ಟೋನ್‍ನಲ್ಲಿ ರಾತ್ರಿ ರೇಸ್, ತಾಂತ್ರಿಕ ರೇಸ್‍ಗಳು ನಡೆಯುತ್ತವೆ. ಬಹ್ರೇನ್‍ನಲ್ಲಂತೂ ಮರುಭೂಮಿಯಲ್ಲೇ ರೇಸ್ ನಡೆಯುವುದು ವಿಶೇಷ. ಪ್ರತಿ ಅವಧಿಯಲ್ಲೂ ಹೊಸ ಹೊಸ ನಿಯಮಗಳನ್ನು ಅಳವಡಿಸಲಾಗುತ್ತದೆ. ಅಷ್ಟೇ ಅಲ್ಲ ಎಫ್-1 ರೇಸ್‍ನಲ್ಲಿ ಶೀತ ಹವಾಮಾನ ಬಹುಮುಖ್ಯ ಪಾತ್ರ ವಹಿಸುತ್ತದೆ. ಯಾಕಂದ್ರೆ ಅಂತಹ ಬದಲಾವಣೆಯಿಂದಾಗಿ ರೇಸ್‍ನಲ್ಲಿ ಏನಾಗುತ್ತೆ ಅನ್ನೋದನ್ನು ಊಹಿಸುವುದೇ ಅಸಾಧ್ಯ. ಒಮ್ಮೆ ರೇಸ್ ಆರಂಭವಾಯ್ತು ಅಂದ್ರೆ ಆಮೇಲೇನಾಗುತ್ತೆ ಅನ್ನೋದು ಯಾರಿಗೂ ಅರಿವಿರುವುದಿಲ್ಲ.

ಉದ್ಯಮ ಕೂಡ ಎಫ್-1 ರೇಸ್‍ನಂತೆ. ಉದ್ಯಮಿಗಳು ಕೂಡ ಕಲಿಕೆ, ಅಳವಡಿಕೆ ಮೂಲಕ ಬ್ಯುಸಿನೆಸ್ ತಂತ್ರಗಳನ್ನು ರೂಪಿಸುತ್ತಾರೆ. ಆದ್ರೆ ರಾಕೆಟ್ ಲಾಂಚ್‍ನಂತೆ ಶರವೇಗದಲ್ಲಿ ಯಶಸ್ಸು ಕಂಡ ಯಾವುದೇ ಉದ್ಯಮವಿಲ್ಲ. ಅಲ್ಲಲ್ಲಿ ನಿಲ್ಲುತ್ತ, ವೇಗದ ಕಡೆಗೆ ಮತ್ತಷ್ಟು ಗಮನಹರಿಸಿ ಗೆದ್ದವರೇ ಹೆಚ್ಚು. ಒಮ್ಮೆ ಅವರು ಸರಿಯಾದ ದಾರಿಯಲ್ಲಿ ಮುನ್ನಡೆದ್ರು ಅಂತಾದ್ರೆ, ಅವರಿಗ್ಯಾರೂ ಪ್ರತಿಸ್ಪರ್ಧಿಗಳೇ ಇರುವುದಿಲ್ಲ.

ನಾವೀನ್ಯತೆ ಯಶಸ್ಸಿಗೆ ಉತ್ತಮ ಮಾರ್ಗ...

ಎಫ್-1 ಕತ್ತಿಯ ಅಲುಗಿನ ಮೇಲಿನ ನಡಿಗೆಯಂತೆ. ಹೊಸ ಹೊಸ ತಂತ್ರಜ್ಞಾನ, ಹಾಗೂ ಪ್ರದರ್ಶನ, ನಾವೇನು ಮಾಡಬೇಕು? ಯಾವುದರ ಬಗ್ಗೆ ಹೆಚ್ಚು ಪರಿಶ್ರಮ ವಹಿಸಬೇಕು ಅನ್ನೋದನ್ನು ಸ್ಪಷ್ಟಪಡಿಸುತ್ತದೆ. ಉದಾಹರಣೆಗೆ `KERS 'ನ ಪ್ರಗತಿಯನ್ನೇ ತೆಗೆದುಕೊಳ್ಳಿ, 2007ರಲ್ಲಿ ಮೊದಲ ಡೆವಲಪ್‍ಮೆಂಟ್ ಸಿಸ್ಟಮ್ 107 ಕೆಜಿ ತೂಕ ಹೊಂದಿತ್ತು, ಶೇ.39ರಷ್ಟು ಇಂಧನ ದಕ್ಷತೆಯನ್ನು ಸಾಧಿಸಿತ್ತು. 2012ರ ವೇಳೆಗೆ ತೂಕ 24 ಕೆಜಿಗಿಂತಲೂ ಕಡಿಮೆಯಿದ್ರೆ, ಇಂಧನ ದಕ್ಷತೆ ಶೇ.80ರಷ್ಟಿತ್ತು. ಅದರಂತೆ ನಿಮ್ಮ ಆ್ಯಪ್ ಅಥವಾ ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆಗೆ, ಉನ್ನತ ಗುಣಮಟ್ಟ ಹಾಗೂ ಗಮನ ಕೇಂದ್ರೀಕರಿಸಬೇಕು. ಆಗ ಮಾತ್ರ ವಿನ್ಯಾಸದಿಂದ ಹಿಡಿದು ನಿರ್ಮಾಣದವರೆಗೆ ಎಲ್ಲವೂ ಅಂದುಕೊಂಡಂತೆ ನಡೆಯುತ್ತವೆ. ನಾವೀನ್ಯತೆ ನಿರಂತರವಾಗಿ ವಿಕಸನಗೊಳ್ಳುವ ಒಂದು ಪ್ರಕ್ರಿಯೆ. ಹೊಸತನವಿಲ್ಲ ಅನ್ನೋ ಕಾರಣಕ್ಕೆ ಉದ್ಯಮಗಳು ವಿಫಲವಾದ ಉದಾಹರಣೆಗಳು ಬೇಕಷ್ಟಿವೆ.

ಧೈರ್ಯವಾಗಿ ಎದುರಿಸಿ, ಗೆಲುವು ನಿಮ್ಮದೇ..!

ಅನನುಭವಿಗಳು ಮತ್ತು ತಜ್ಞರು ಇಬ್ಬರೂ ಸೋಲುವುದು ಸಹಜ. ಎಲ್ಲ ನಡೆಯೂ ಸರಿಯಾಗಿರುವುದಿಲ್ಲ, ಆ ತಪ್ಪಿಗೆ ತಕ್ಕ ಬೆಲೆ ತೆರಲೇಬೇಕು. ಸೋಲು ಅನ್ನೋದು ಕೇವಲ ದೂರದ ಸಾಧ್ಯತೆಯಲ್ಲ ಅನ್ನೋ ಅರಿವು ನಮಗಿರಬೇಕು. ಅದು ಸದಾ ನಮ್ಮ ತಲೆಮೇಲೆ ತೂಗುತ್ತಿರುವ ಕತ್ತಿಯಂತೆ, ಅದನ್ನು ಅರ್ಥಮಾಡಿಕೊಳ್ಳಲು ಪರಿಪಕ್ವತೆ ಬೇಕು. ಉದ್ಯಮದಲ್ಲಿ ಇವೆಲ್ಲ, ರೇಸ್‍ನಷ್ಟು ಸುಲಭವಲ್ಲ. ಯಾವಾಗಲೂ ನಿಮ್ಮ ಕಣ್ಣು ಮತ್ತು ಮನಸ್ಸನ್ನು ತೆರೆದಿಟ್ಟುಕೊಳ್ಳಬೇಕು, ಆಗ ಮಾತ್ರ ನೀವು ಎಲ್ಲವನ್ನೂ ನೋಡಲು ಸಾಧ್ಯ. ಕೆಲವೊಮ್ಮೆ ನೀವದರಿಂದ ಸುದ್ದಿ ಮಾಡಬಹುದು, ಇನ್ನು ಕೆಲವು ಬಾರಿ ಅದರಿಂದಾದ ಹಾನಿ ಮತ್ತು ಪ್ರಭಾವವನ್ನು ತಗ್ಗಿಸಲು ಯತ್ನಿಸಬೇಕು. ರೇಸ್‍ನಲ್ಲಾದ ಸೋಲಿನ ಬಳಿಕ ಕೋಪ ಮತ್ತು ಕ್ರೋಧ ನಿಮಗೆ ಆಶಾಭಂಗವನ್ನುಂಟು ಮಾಡಬಹುದು ಅಥವಾ ಪ್ರದರ್ಶನ ಉತ್ತಮಪಡಿಸಿಕೊಳ್ಳಲು ನಿಮ್ಮನ್ನು ಪ್ರೇರೇಪಿಸಬಹುದು. ಸೋಲಿನ ಬಗ್ಗೆ ಯಾವತ್ತೂ ಭಯಪಟ್ಟುಕೊಳ್ಬೇಡಿ. ವೈಫಲ್ಯ ಸಹಜ ಅನ್ನೋದನ್ನು ಅರ್ಥಮಾಡಿಕೊಂಡ್ರೆ ಮಾತ್ರ ಜೀವನದಲ್ಲಿ ಮುಂದೆ ಬರಬಹುದು.

ಅದೇ ಬದುಕಿನ ರೀತಿ..!

ರೇಸ್‍ನಲ್ಲಿ ಪಾಲ್ಗೊಳ್ಳುವುದು ಭೌತಿಕವಾಗಿ ಕಠಿಣ. ಒಳ್ಳೆಯ ಫಲಿತಾಂಶ ಸಿಗಬೇಕಂದ್ರೆ ನೀವು ಉತ್ತಮ ಆಕಾರದಲ್ಲಿರಬೇಕು, ಒಲಿಂಪಿಕ್ಸ್‍ನಲ್ಲಿ ಪಾಲ್ಗೊಳ್ಳುವ ಅಥ್ಲೀಟ್‍ಗಳಂತೆ. ಜೊತೆಗೆ ಹಣ ಕೂಡ ಅನಿವಾರ್ಯ. ಕಾರ್ ರೇಸ್ ಅನ್ನು ಒಂದು ಹವ್ಯಾಸವಾಗಿ ನೀವು ಆರಂಭಿಸಿದರೆ, ನಿಮ್ಮಲ್ಲಿರುವ ಎಲ್ಲವನ್ನೂ ಅದಕ್ಕಾಗಿ ಸುರಿಯಬೇಕು. ಕಾರ್‍ಗಳು ಅಗ್ಗವೇನಲ್ಲ, ಜೊತೆಗೆ ಆಗಾಗ ಅವುಗಳನ್ನು ಅಪ್‍ಗ್ರೇಡ್ ಮಾಡಬೇಕು, ಸರಿಯಾಗಿ ಟ್ಯೂನ್ ಮಾಡಬೇಕು ಜೊತೆಗೆ ನಿರಂತರವಾಗಿ ನಿರ್ವಹಣೆ ಮಾಡಲೇಬೇಕು. ಹಣ, ಸಮಯ, ಆತ್ಮದ ಬಗೆಗಿನ ಬದ್ಧತೆ ಇದು, ಅತ್ಯಂತ ತರ್ಕಬದ್ಧ ಆಯ್ಕೆಯಲ್ಲ.

ಉದ್ಯಮಗಳಲ್ಲಿ ಕೂಡ ಸ್ಥಿತಿ ಭಿನ್ನವಲ್ಲ. ಅದಕ್ಕೂ ಸಹ ಹಣ ಬೇಕು. ಪ್ರತಿ ಹಂತದಲ್ಲೂ ತ್ಯಾಗ ಮಾಡಬೇಕು. ಉದ್ಯಮವೇ ನಿಮ್ಮ ಜೀವನ ಶೈಲಿಯಾಗಬೇಕು, ಪರಿಶ್ರಮ ಕೂಡ ಅತ್ಯವಶ್ಯ. ಹೊರಗಿನವರಿಗೆ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಸಮರ್ಪಣಾ ಭಾವ ಎಷ್ಟು ಅವಶ್ಯಕ ಅನ್ನೋದು ಉದ್ಯಮ ವಲಯದಲ್ಲಿರುವವರಿಗೆ ಮಾತ್ರ ಅರ್ಥವಾಗಬಲ್ಲದು. ಲೂಯಿಸ್ ಹ್ಯಾಮಿಲ್ಟನ್, ಅಪಾರ ಗೌರವ ಸಂಪಾದಿಸಿರುವ ಪ್ರತಿಭಾವಂತ, ಧೈರ್ಯವಂತ ಹಾಗೂ ಅಸಾಮಾನ್ಯ ಚಾಲಕ. ಅವರ ಯಶಸ್ಸಿನ ಕಹಾನಿಯನ್ನು ಕೇಳಿದ್ರೆ ಜನರು ಜಗತ್ತನೇ ಮರೆಯುತ್ತಾರೆ.

ಲೇಖಕರು: ಸ್ಮೃತಿ ಮೋದಿ

ಅನುವಾದಕರು: ಭಾರತಿ ಭಟ್​​