ವಿಜಯಪುರ ಜಿಲ್ಲೆಯ ಆಶಾ ಗೋಪುರಕ್ಕೆ ಸಿಗಲಿ ವಿಜಯ..!

ಟೀಮ್​ ವೈ.ಎಸ್​. ಕನ್ನಡ

0

ವಿಜಯಪುರ ಜಿಲ್ಲೆಯ ಅವಲೋಕನ

ವಿಜಯಪುರ ಐತಿಹಾಸಿಕ ಸ್ಥಳಗಳಿಂದಾಗಿ ತುಂಬಾ ಪ್ರಸಿದ್ಧ. ಸಣ್ಣ ಪ್ರಮಾಣದ ಕೈಗಾರಿಕೆಗಳಿಗೂ ಇದು ಖ್ಯಾತಿ ಪಡೆದಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳು ಜಿಲ್ಲೆಯ ಜನರ ಕೈ ಹಿಡಿದಿವೆ. ಇವರಲ್ಲಿ ಶೇಕಡಾ 35ರಷ್ಟು ಮಂದಿ ಆಹಾರ ಮತ್ತು ಪಾನೀಯ ವಲಯದಲ್ಲಿ ದುಡಿಯುತ್ತಿದ್ದಾರೆ. ಸಿರಿವಂತ ರೈತರ ಬೆಳೆ ಎಂದೇ ಕರೆಯಲ್ಪಡುವ ದ್ರಾಕ್ಷಿ ಬೆಳೆಗೆ ಉತ್ತರ ಕರ್ನಾಟಕದಲ್ಲಿ ಬಿಜಾಪುರ ಜಿಲ್ಲೆಗೆ ಅಗ್ರಸ್ಥಾನ. ದ್ರಾಕ್ಷಿ ಬೆಳೆಗೆ ಇಲ್ಲಿನ ವಾತಾವರಣ ಹೇಳಿ ಮಾಡಿಸಿದಂತಿದೆ. ಹೀಗಾಗಿ "ವೈನ್​ ಟೂರಿಸಂ" ತನ್ನ ಬಾಗಿಲನ್ನು ತೆರೆದಿದೆ. ಇದರಿಂದಾಗಿ ದೇಶ-ವಿದೇಶಗಳ ಪ್ರವಾಸಿಗರು ವರ್ಷವಿಡೀ ವಿಜಯಪುರಕ್ಕೆ ಭೇಟಿ ನೀಡುತ್ತಿರುತ್ತಾರೆ.

ವಿಜಯಪುರ, ಬಸವನಬಾಗೇವಾಡಿ, ಇಂಡಿ, ಮುದ್ದೇಬಿಹಾಳ ಮತ್ತು ಸಿಂದಗಿ ವಿಜಯಪುರ ಜಿಲ್ಲೆಯ ತಾಲೂಕುಗಳು. ಇವೆಲ್ಲವೂ ತಮ್ಮದೇ ಆದಂತಹ ವೈಶಿಷ್ಠ್ಯ ಹೊಂದಿವೆ.

ಸಾವಯವ ಕೃಷಿಗೆ ಪ್ರಸಿದ್ಧ ವಿಜಯಪುರ

ವಿಜಯಪುರದಲ್ಲಿ ಸಾವಯವ ಕೃಷಿ ಪ್ರಖ್ಯಾತಿ ಪಡೆಯುತ್ತಿದೆ. ಜೋಳ, ಮೆಕ್ಕೆಜೋಳ, ಗೋದಿ, ತೊಗರಿ ಬೇಳೆ, ಹುರುಳಿ, ಸೂರ್ಯಕಾಂತಿ, ಸೋಯಾಬೀನ್​​, ಸಜ್ಜೆ, ಹೆಸರು ಬೇಳೆ, ಕಡಲೆಕಾಳು ಪ್ರಮುಖ ಆಹಾರೋತ್ಪನ್ನ. ದ್ರಾಕ್ಷಿ, ದಾಳಿಂಬೆ, ಮೆಣಸಿನಕಾಯಿ, ಅರಿಶಿನ ಹುಣಸೇಹಣ್ಣು, ನಿಂಬೆಹಣ್ಣು, ಟೊಮೆಟೊ, ಬೆಂಡೆಕಾಯಿ ತೋಟಗಾರಿಕೆ ಬೆಳೆಗಳಲ್ಲಿ ಪ್ರಮುಖ. ಕಬ್ಬು ಮತ್ತು ಹತ್ತಿ ವಾಣಿಜ್ಯ ಬೆಳೆಗಳು.

ವಿಜಯಪುರದಲ್ಲಿ ಕೈಗಾರಿಕಾ ಕ್ರಾಂತಿ

ಸಣ್ಣ ಪ್ರಮಾಣದ ಕೈಗಾರಿಕೆಗಳ ತವರೂರು ವಿಜಯಪುರ ಅಂತಲೇ ಹೇಳಬಹುದು. ಸರಿ ಸುಮಾರು 10, 424 ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳು ಜಿಲ್ಲೆಯಲ್ಲಿರೋದು ಜನರ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಅತೀ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕೊಟ್ಟಿದೆ ಸ್ಮಾಲ್​ ಸ್ಕೇಲ್​ ಇಂಡಸ್ಟ್ರಿ. ಎಂಎಸ್​ಎಂಇ (ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳು)ಜಿಲ್ಲೆಯ ಪ್ರಮುಖ ಶಕ್ತಿ. ಕೈಗಾರಿಕಾ ಪ್ರದೇಶಗಳಲ್ಲಿ ಶೇಕಡ 20 ಭಾಗ ಜಮೀನನ್ನು ಎಂಎಸ್​ಎಂಇಗಳಿಗೆ ಕಾಯ್ದಿರಿಸಲಾಗುತ್ತದೆ. ಆಗ್ರೋ ಮತ್ತು ಆಹಾರ ಸಂಸ್ಕರಣಾ ಉದ್ಯಮದಲ್ಲಿ ಶೇಕಡಾ 35ರಷ್ಟು ಮಂದಿ ಬ್ಯೂಸಿಯಾಗಿದ್ದಾರೆ. ಹೀಗಾಗಿ ಇದರ ವ್ಯಾಪ್ತಿ ಇನ್ನಷ್ಟು ವಿಸ್ತರಿಸುವ ಅಗತ್ಯ ಇದೆ.

ವೈನ್​​ ಟೂರಿಸಂಗೆ ವಿಪುಲ ಅವಕಾಶ

ವಿಜಯಪುರದಲ್ಲಿ ದ್ರಾಕ್ಷಿ ಬೆಳೆ ಮಾತ್ರ ಸೊಂಪಾಗಿ ಬೆಳೆಯುತ್ತದೆ. ಹೀಗಾಗಿ ವೈನ್​ ಟೂರಿಸಂಗೆ ಹೆಚ್ಚೆಚ್ಚು ಅವಕಾಶಗಳು ಇಲ್ಲಿವೆ. ವಿಶ್ವಪಾರಂಪರಿಕ ತಾಣವಾಗಿ ವಿಜಯಪುರ ಗುರುತಿಸಿಕೊಂಡಿದ್ದು ದೇಶ-ವಿದೇಶದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ರೇಷ್ಮೆ ಕೃಷಿಗೆ ಸೂಕ್ತ ವಾತಾವರಣ

ಹೌದು. ರಾಮನಗರ, ಬೆಂಗಳೂರು ಗ್ರಾಮೀಣ ಪ್ರದೇಶದಲ್ಲಿರುವಂತೆ ವಿಜಯಪುರದಲ್ಲೂ ರೇಷ್ಮೆ ಕೃಷಿಗೆ ಪೂರಕ ವಾತಾವರಣವಿದೆ. ಇದರಿಂದಾಗಿ ಜಿಲ್ಲೆಯ ಆರ್ಥಿಕ ಸ್ಥಿತಿ ಉತ್ತಮವಾಗುತ್ತಿದೆ.

ಕೃಷ್ಣಾ, ಡೋಣಿ, ಭೀಮಾ ಹೀಗೆ ಜಿಲ್ಲೆಯಲ್ಲಿ 3 ನದಿಗಳು ಹರಿಯುತ್ತಿವೆ. ಹೀಗಾಗಿ ಒಳನಾಡು ಮೀನುಗಾರಿಕೆಗೂ ವಿಜಯಪುರ ಖ್ಯಾತಿ ಪಡೆದಿದೆ. ಅಕ್ವೇರಿಯಂನಲ್ಲಿ ಇಡುವ ಮೀನುಗಳ ತಳಿಯ ಅಭಿವೃದ್ಧಿಯಲ್ಲಿ ಫಿಶರೀಸ್​ ರೀಸರ್ಚ್​​ & ಇನ್ಫೋರ್ಮೇಶನ್​​ ಸೆಂಟರ್​ ನಿರತವಾಗಿದೆ. ಜವಳಿ ಉದ್ಯಮ, ಸೌರ ಶಕ್ತಿ​, ಸಿಮೆಂಟ್​ ಮತ್ತು ಸ್ಟೀಲ್​​ ಉದ್ಯಮ, ಪಶು ಸಂಗೋಪನೆಯೂ ಜಿಲ್ಲೆಯಲ್ಲಿ ಅತ್ಯುತ್ಸಾಹದಿಂದ ನಡೆಯುತ್ತಿದೆ.

ಜ್ಞಾನಾರ್ಜನೆಯೇ ಉಸಿರು

ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಜೊತೆಗೆ ತರಬೇತಿ ನೀಡುವ ಸಂಸ್ಥೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳು ಕಣ್ತೆರೆಯುತ್ತಿವೆ.

ಹೂಡಿಕೆಗೆ ಅವಕಾಶಗಳು ಏನೇನಿವೆ..?

1. ಬೃಹತ್​ ಪಶು ಆಹಾರ ಉತ್ಪಾದನಾ ಘಟಕಗಳ ಅಭಿವೃದ್ಧಿ

2. ಆಲಮಟ್ಟಿ ಅಣೆಕಟ್ಟಿನ ಸಮೀಪದ (ಸುತ್ತಮುತ್ತ) ಪ್ರದೇಶದ ಅಭಿವೃದ್ಧಿ

3. ಐತಿಹಾಸಿಕ ನಗರ ವಿಜಯಪುರದ ಅಭಿವೃದ್ಧಿ

ಕೊನೆಯ ಮಾತು..

ಕೃಷಿ, ಸಣ್ಣ ಪ್ರಮಾಣದ ಕೈಗಾರಿಕೆ, ವೈನ್​​ ಟೂರಿಸಂ, ರೇಷ್ಮೆ ಕೃಷಿಯಲ್ಲಿ ಮುಂಚೂಣಿಯಲ್ಲಿರುವ ವಿಜಯಪುರಕ್ಕೆ ಉದ್ಯಮಿಗಳ ನೆರವು ಬೇಕಿದೆ. ಹೀಗಾಗಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಉದ್ಯಮಿಗಳು ವಿಜಯಪುರದತ್ತ ಗಮನಹರಿಸಿದರೆ ಅವರಿಗೆ ವಿಜಯ ಕಟ್ಟಿಟ್ಟಬುತ್ತಿ.

Related Stories