ಬಂಗಾರದಿಂದ್ಲೇ ಬಂಗಾರದಂಥ ಬದುಕು ಕಟ್ಟಿದ 'ಪ್ರಜ್ಞಾ'ವಂತೆ...

ಟೀಮ್ ವೈ.ಎಸ್.ಕನ್ನಡ 

ಬಂಗಾರದಿಂದ್ಲೇ ಬಂಗಾರದಂಥ ಬದುಕು ಕಟ್ಟಿದ 'ಪ್ರಜ್ಞಾ'ವಂತೆ...

Wednesday June 21, 2017,

2 min Read

ಬೆಂಗಳೂರಿನಲ್ಲಿ ಡಿಸೈನರ್ ಜ್ಯುವೆಲರಿ ಟ್ರೆಂಡ್ ಬಹಳ ಹಿಂದೆಯೇ ಪ್ರಾರಂಭವಾಗಿತ್ತು. ಆದ್ರೆ ಇವೆಲ್ಲವೂ ಹೈಫೈ ಜನರಿಗೆ, ಸಿನೆಮಾಗಳಿಗೆ ಮಾತ್ರ ಮೀಸಲಾಗಿತ್ತು. ಆದ್ರೆ ಈಗ ಡಿಸೈನರ್ ಆಭರಣ ಕೂಡ ಜನಸಾಮಾನ್ಯರ ಕೈಗೆಟುಕಲಿದೆ. ನಿಮ್ಮ ಬಳಿಯಿರೋ ಹಳೆ ವಿನ್ಯಾಸದ ಒಡವೆಗಳನ್ನು ಕೊಟ್ಟು, ಹೊಸ ಡಿಸೈನ್​ನ ಆಭರಣವನ್ನು ನೀವು ಕೊಳ್ಳಬಹುದು. ಈ ಡಿಸೈನರ್ ಜ್ಯುವೆಲರಿ ಹಿಂದೆ ಎಷ್ಟೋ ಸ್ಟಾರ್ಟಪ್​ಗಳ ಶ್ರಮವಿದೆ. 

image


ಉದ್ಯಮ ಲೋಕದಲ್ಲಿ ಕಾಲಿಟ್ಟು ಎಷ್ಟೋ ಹೆಣ್ಣುಮಕ್ಕಳು ಯಶಸ್ವಿಯಾಗಿದ್ದಾರೆ. ಅವರಲ್ಲಿ ಪ್ರಜ್ಞಾ ಕೂಡ ಒಬ್ಬರು. ಡಿಸೈನರ್ ಆಭರಣ ಕ್ಷೇತ್ರದಲ್ಲಿ ಇವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬಾಲ್ಯದಿಂದಲೂ ಇದ್ದ ಪೇಂಟಿಂಗ್ ಕನಸು ಅವರನ್ನು ಇಲ್ಲಿದೆ ತಂದು ನಿಲ್ಲಿಸಿದೆ. ಪದವಿ ಮುಗಿಸಿದ ಬಳಿಕ ಪ್ರಜ್ಞಾ ಜ್ಯುವೆಲರಿ ಮೇಕಿಂಗ್ ಅನ್ನೇ ಆಯ್ಕೆ ಮಾಡಿಕೊಂಡ್ರು. ಆರಂಭದಲ್ಲಿ ಸ್ವಲ್ಪ ಕಷ್ಟ ಎನಿಸಿದ್ರೂ ನಿಧಾನವಾಗಿ ಉದ್ಯಮ ಹಳಿಯೇರಿತ್ತು. 

ಮೊದಲು ಪ್ರಜ್ಞಾ ತಮ್ಮ ತಾಯಿಗೇ ಒಂದು ಆಭರಣವನ್ನು ವಿನ್ಯಾಸ ಮಾಡಿದ್ದರು. ನಿಧಾನವಾಗಿ ಸ್ನೇಹಿತರನ್ನು ಪ್ರಯೋಗಕ್ಕೆ ಬಳಸಿಕೊಂಡ್ರು. ಅವರಿಗೆ ಬೇರೆ ಬೇರೆ ವಿನ್ಯಾಸದ ಆಭರಣಗಳನ್ನು ಸಿದ್ಧಪಡಿಸಿದ್ರು. ಪ್ರಜ್ಞಾ ರೆಡಿ ಮಾಡಿದ ಒಂದೊಂದು ಡಿಸೈನ್​ಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರಲಾರಂಭಿಸಿತ್ತು. ಇದರಿಂದ ಸ್ಪೂರ್ತಿ ಪಡೆದ ಪ್ರಜ್ಞಾ ತಮ್ಮದೇ ಆದ ಕಚೇರಿಯೊಂದನ್ನು ಆರಂಭಿಸಿದ್ರು. ಈಗ ಅವರ ಬಳಿ ಹಲವಾರು ಜ್ಯುವೆಲರಿ ಮೇಕರ್​ಗಳು ಕೆಲಸ ಮಾಡ್ತಾರೆ. ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಒಡವೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡೋದು ಅವರ ವಿಶೇಷತೆ. ಈ ಮೂಲಕ ಗ್ರಾಹಕರ ನಂಬುಗೆಗೆ ಪಾತ್ರರಾಗಿದ್ದಾರೆ.

image


ಜ್ಯುವೆಲರಿ ಡಿಸೈನ್ ಬ್ಯುಸಿನೆಸ್ ಅಂದ್ರೆ ಹೆಚ್ಚು ಹಣ ಬೇಕು ಅಂತ ಅನಿಸೋದು ಸಹಜ. ಆದರೆ ಪ್ರಜ್ಞಾ ಇಲ್ಲೊಂದು ಸ್ಮಾರ್ಟ್ ವರ್ಕ್ ಮಾಡಿದ್ದಾರೆ. ಗ್ರಾಹಕರಿಂದ ಹಳೆ ಚಿನ್ನ ಪಡೆದು, ಅವರಿಂದಲೇ ಅರ್ಧದಷ್ಟು ಹಣ ಪಡೆದುಕೊಂಡು ಹೊಸ ವಿನ್ಯಾಸ ಮಾಡಿಕೊಡ್ತಾರೆ. ನಂತರ ಉಳಿದ ಹಣವನ್ನು ಪಡೆಯುತ್ತಾರೆ. ಇದು ಅವರಿಗೆ ದೊಡ್ಡ ಹೊರೆಯನ್ನು ಕಡಿಮೆ ಮಾಡಿತು. ಇಲ್ಲಿಯ ತನಕ ನೂರಾರು ಜನ ಗ್ರಾಹಕರಿಗೆ ಅವರಿಗೆ ಇಷ್ಟವಾಗುವಂಥ ಆಭರಣಗಳನ್ನು ವಿನ್ಯಾಸ ಮಾಡಿದ್ದಾರೆ.

image


ಆಭರಣಗಳ ವಿನ್ಯಾಸಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಬೇಕಾಗುತ್ತದೆ. ಪ್ರಜ್ಞಾ ಕೂಡ ದೇವಸ್ಥಾನದ ಕೆತ್ತನೆಗಳನ್ನೆಲ್ಲ ಗಮನಿಸುತ್ತಾರೆ. ಸಿಂಪಲ್ ಡಿಸೈನ್ ಇಟ್ಕೊಂಡು ಆಭರಣಗಳನ್ನು ವಿಶಿಷ್ಟವಾಗಿ ವಿನ್ಯಾಸ ಮಾಡುತ್ತಾರೆ. ಇದರಲ್ಲಿ ಪ್ರಜ್ಞಾ ತಮ್ಮದೇ ವಿಶೇಷ ಸ್ಟೈಲ್ ಫಾಲೋ ಮಾಡ್ತಾರೆ. ಟೆಂಪಲ್ ಜ್ಯುವೆಲರಿ, ಬೆಳ್ಳಿಮೋಡ ನೆಕ್ಲೆಸ್, ಬ್ರೈಡಲ್ ಒಡವೆ, ಪಾರ್ಟಿವೇರ್ ಸೇರಿದಂತೆ ಹಲವಾರು ಆಭರಣಗಳ ವಿನ್ಯಾಸವನ್ನು ಯಶಸ್ವಿಯಾಗಿ ಮಾಡಿದ್ದಾರೆ.

ಇನ್ನು ಸಾಮಾಜಿಕ ತಾಣಗಳು ಮತ್ತು ಗ್ರಾಹಕರಿಂದ್ಲೇ ಒಬ್ಬರಿಂದ ಒಬ್ಬರಿಗೆ ಪ್ರಜ್ಞಾ ಬಗ್ಗೆ ಮಾಹಿತಿ ಸಿಕ್ಕು, ಸಾಕಷ್ಟು ಮಂದಿ ಹುಡುಕಿಕೊಂಡು ಬರ್ತಾರೆ. ನಿಮ್ಮ ಕೆಲಸ ಚೆನ್ನಾಗಿದ್ರೆ ಎಲ್ಲವೂ ಸುಲಭ, ಮಾಡುವ ಕೆಲಸದಲ್ಲಿ ವಿಶಿಷ್ಟತೆ ಇರಲಿ ಎನ್ನುತ್ತಾರೆ ಪ್ರಜ್ಞಾ. ಸ್ವಂತ ಉದ್ಯಮ ಆರಂಭ ಮಾಡಬೇಕು ಅಂದ್ರೆ ಅದರಲ್ಲಿ ಸ್ವಂತಿಕೆ ಇರಲಿ, ಇನ್ನೊಬ್ಬರನ್ನು ಅನುಸರಿಸಿದ್ರೆ ಗೆಲುವು ಕಷ್ಟ ಅನ್ನೋದು ಅವರ ಅನುಭವದ ಮಾತು. ಒಟ್ಟಿನಲ್ಲಿ ಹೆಣ್ಣು ಮಕ್ಕಳು ಅಂದ್ರೆ ಕೇವಲ ಆಭರಣ ಪ್ರಿಯರು ಮಾತ್ರವಲ್ಲ, ಅದರಿಂದ್ಲೇ ಬಂಗಾರದಂಥ ಬದುಕು ಕಟ್ಟಿಕೊಳ್ಳಬಲ್ಲ ಪ್ರತಿಭಾವಂತರು ಅನ್ನೋದಕ್ಕೆ ಪ್ರಜ್ಞಾ ನಿದರ್ಶನ. 

ಇದನ್ನೂ ಓದಿ...

ಇಸ್ರೇಲ್​ನ Start TLV ಸ್ಪರ್ಧೆ : ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲು 10 ಪ್ರಮುಖ ಕಾರಣಗಳು…

ರಾಷ್ಟ್ರಪತಿಗಳ ವಾಹನ ತಡೆದು ಆಂಬ್ಯುಲೆನ್ಸ್​ಗೆ ಕೊಟ್ರು ದಾರಿ : ಬೆಂಗಳೂರು ಟ್ರಾಫಿಕ್ ಪೊಲೀಸ್​ಗೆ ನೀವೂ ಒಂದು ಸಲಾಂ ಹೇಳಿ