ಕೆಲಸದ ಟೆನ್ಷನ್​ ಬಿಟ್ಟು ಬಿಡಿ- ಒಂದು ದಿನ ಕೃಷಿಕರಾಗಿ ಎಂಜಾಯ್​ ಮಾಡಿ..! 

ಟೀಮ್​ ವೈ.ಎಸ್​. ಕನ್ನಡ

2

ಬೆಂಗಳೂರು, ಮುಂಬೈ, ಕೊಲ್ಕತ್ತಾ, ದೆಹಲಿ, ಚೆನ್ನೈ ಭಾರತದಲ್ಲಿ ಇಂತಹ ದೊಡ್ಡ ದೊಡ್ಡ ನಗರಗಳು ಬೇಕಾದಷ್ಟಿವೆ.  ಇಂತಹ ನಗರಗಳಲ್ಲಿರುವ ಜನರಿಗೆ ಹಳ್ಳಿ ಬದುಕಿನ ಕೆಲವು ಕಲ್ಪನೆಗಳಿವೆ. ಸಿಟಿಯಲ್ಲಿ ಇರುವಷ್ಟು ದಿನ ಬೇಕಾದಷ್ಟು ದುಡಿಮೆ ಮಾಡಿ, ಹಳ್ಳಿ ಕಡೆಗೆ ಮುಖ ಮಾಡುವವರ ಸಂಖ್ಯೆಗೇನು ಕಡಿಮೆ ಇಲ್ಲ. ಇನ್ನೂ ಕೆಲವು ಕೆಲಸವನ್ನು ಅರ್ಧಕ್ಕೇ ಬಿಟ್ಟು ಮತ್ತೆ ಭೂಮಿ ತಾಯಿಯ ಮಡಿಲು ಸೇರಿ ದುಡಿಯುತ್ತಿದ್ದಾರೆ.  ಹಳ್ಳಿ ಬದುಕು ನಗರದ ಜನರನ್ನು ತನ್ನತ್ತ ಸೆಳೆಯುತ್ತಿದೆ.

ಬೆಂಗಳೂರಿನಲ್ಲಂತೂ ಎಲ್ಲವೂ ದುಬಾರಿ ಆಗಿದೆ. ಆರ್ಥಿಕತೆಯಲ್ಲಿ ಒಂಚೂರು ಹೆಚ್ಚು ಕಡಿಮೆ ಆದ್ರೂ ಬದುಕಿನ ಶೈಲಿ ಬದಲಾಗಿ ಬಿಡುತ್ತದೆ. ಹೀಗಾಗಿ ಹಳ್ಳಿಲ್ಲೊಂದಷ್ಟು ಜಮೀನು ಖರೀದಿ ಮಾಡುವ  ಜನರಿಗೇನು ಕಡಿಮೆ ಇಲ್ಲ. ಆದ್ರೆ ಕೃಷಿ ಅಥವಾ ಜಮೀನಿನಲ್ಲಿ ಕೆಲಸ ಮಾಡಿದ ಅನುಭವ ಬೇಕಲ್ಲ. ಅದಕ್ಕೆಂದೇ ಬೆಂಗಳೂರಿನಲ್ಲಿ "ಬಿಗ್​ ಬಾರ್ಮ್​ ಫಾರ್ಮ್​ ಹೌಸ್​" ಆರಂಭವಾಗಿದೆ. ಇಲ್ಲಿ ನೀವು ಒಂದು ದಿನದ ಮಟ್ಟಿಗೆ ಕೃಷಿಕರಾಗಬಹುದು. ಅಷ್ಟೇ ಅಲ್ಲ ಜಮೀನಿನಲ್ಲಿ ಕೆಲಸ ಮಾಡಿದ ಅನುಭವ ಪಡೆದುಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಜಮೀನು ಖರೀದಿಸಿ ಅದರಲ್ಲಿ ಬೆಳೆ ಬೆಳೆಯಬೇಕು ಎಂಬುದು ಸಾಕಷ್ಟು ಜನರ ಆಸೆಯಾಗುತ್ತಿದೆ. ಜತೆಗೆ ಒಂದಷ್ಟು ಹಸುಗಳನ್ನು ಸಾಕಬೇಕು ಎಂದು ಅವರ ಆಸೆಪಡುತ್ತಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ ಅದಕ್ಕೆಂದೇ ಬೆಂಗಳೂರಿನಲ್ಲಿ ಒಂದು ಸಂಸ್ಥೆಯಿದ್ದು ನಿಮ್ಮನ್ನು ದಿನವೊಂದಕ್ಕೆ ರೈತರನ್ನಾಗಿಸುತ್ತದೆ. ಹೌದು ಬೆಂಗಳೂರಿನ "ದಿ ಬಿಗ್ ಬಾರ್ನ್ ಫಾರ್ಮ್‌"ನಲ್ಲಿ ಈ ಸೌಲಭ್ಯ ನಿಮಗೆ ಸಿಗುತ್ತದೆ. ಇಲ್ಲಿ ನಿಮಗೆ ಒಂದು ದಿನದ ಮಟ್ಟಿಗೆ ರೈತರಾಗುವ ಅಪರೂಪದ ಅವಕಾಶವನ್ನು ಒದಗಿಸುತ್ತಿದೆ.

" ನಾನು ನಮ್ಮ ಮುಂದಿನ ಪೀಳಿಗೆಗೆ ಒಂದು ಒಳ್ಳೆಯ ವಾತವಾರಣ ಸೃಷ್ಟಿ ಮಾಡಬೇಕು ಎಂಬ ಉದ್ದೇಶದಿಂದ ಈ ಬಿಗ್‌ಬಾರ್ನ್ ಫಾರ್ಮ್‌ನ್ನು ಆರಂಭಿಸಿದ್ದೇನೆ. ನನ್ನ ಮಕ್ಕಳಿಗಾಗಿ ಈ ಆರ್ಗ್ಯಾನಿಕ್ ತೋಟವನ್ನು ನಾನು ಸೃಷ್ಟಿ ಮಾಡಿದ ಈಗ ಅದನ್ನು ಉಳಿದ ಮಕ್ಕಳಿಗೂ ತಲುಪಿಸಲು ವೇದಿಕೆಯನ್ನು ಮಾಡಿಕೊಟ್ಟಿದ್ದೇನೆ ಅಷ್ಟೇ."
- ವೈಷ್ಣವಿ, ಬಿಗ್‌ಬಾರ್ನ್ ಫಾರ್ಮ್‌ನ ಮಾಲಕಿ

ಒಂದು ವಾರದ ಮುಂಚೆ ಹೇಳಬೇಕು

ನೀವು ಒಂದು ದಿನದ ಮಟ್ಟಿಗೆ ರೈತರಾಗುವ ಅವಕಾಶವನ್ನು ಕಲ್ಪಿಸಿರುವ ಈ" ಬಿಗ್‌ಬಾರ್ನ್ ಫಾರ್ಮ್‌"ಗೆ ನೀವು ಹೋಗಬೇಕು ಎಂದು ಬಯಸಿದರೆ ಒಂದು ವಾರದ ಮುಂಚೆ ಅಲ್ಲಿಗೆ ಕರೆ ಮಾಡಿ ಅಪಾಯಿಂಟ್‌ಮೆಂಟ್ ಫಿಕ್ಸ್ ಮಾಡಬೇಕು. ಇದ್ದಕ್ಕಿದ್ದ ಹಾಗೆ ಹೋದರೆ ಅಲ್ಲಿ ನಿಮಗೆ ಅವಕಾಶ ನೀಡುವುದಿಲ್ಲ. ಏಕೆಂದರೆ ಅದೊಂದು ಫಾರ್ಮ್ ಆಗಿರುವ ಕಾರಣ ಅಲ್ಲಿ ಕೃಷಿ ಕೆಲಸಗಳು ನಡೆಯುತ್ತಿರುತ್ತವೆ. ಅಲ್ಲಿನ ಕೃಷಿ ಕೆಲಸಗಳಿಗೆ ತೊಂದರೆಯಾಗಬಹುದು, ಮತ್ತು ಒಮ್ಮೆಲೆ ಯಾರಾದರೂ ಹೋದರೆ ಅಲ್ಲಿರುವ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಅವರು ಹೇಳಿದ ದಿನವೇ ಅಲ್ಲಿಗೆ ಹೋಗಬೇಕು.

ಏನೇನು ಮಾಡಬಹುದು..?

ಈ "ಬಿಗ್ ಬಾರ್ನ್ ಫಾರ್ಮ್‌"ನಲ್ಲಿ ನೀವು ಮಳೆ ಬರುವ ಮುಂಚೆಯೇ ಹಸಿ ಮಣ್ಣನ್ನು ಅಗೆದು ಸಾಲಾಗಿ ತರಕಾರಿ ಗಿಡ ನೆಡಬಹುದು, ಆ ಫಾರ್ಮ್‌ನಲ್ಲಿ ಆಡುಗಳು, ಕುರಿಗಳು ಇರುತ್ತವೆ. ಅವನ್ನು ಮುದ್ದಾಡಬಹುದು. ಬಾರ್ನ್ ಫಾರ್ಮ್‌ನಲ್ಲಿ ಸಾಕಷ್ಟು ಹಸುಗಳು ಇದ್ದು, ಅವುಗಳಿಗೆ ನೀವು ಹುಲ್ಲನ್ನು ಬೇಕಾದರೆ ತಿನ್ನಸಬಹುದು. ಅಲ್ಲೇ ಇರುವ ಮರಕ್ಕೆ ಕಟ್ಟಿರುವ ಜೋಕಾಲಿಯಲ್ಲಿ ಕೂತು ಜೀಕಬಹುದು.

" ವಾರವಿಡೀ ಕೆಲಸದಲ್ಲಿ ಬಿಝಿ ಇರುವ ನಾವು ವಾರಾಂತ್ಯದಲ್ಲಿ ಮನೋಲ್ಲಾಸ ಬಯಸುತ್ತೇವೆ. ಆ ಕಾರಣಕ್ಕೆ ಬೆಂಗಳೂರಿನ ಹೊರವಲಯದಲ್ಲಿರುವ ತೋಟಗಳಿಗೆ ವಿಸಿಟ್ ಮಾಡಿ ಅಲ್ಲಿ ಒಂದು ದಿನ ವ್ಯವಸಾಯ ಮಾಡಿ, ಹಸು, ಕುರಿಗಳನ್ನು ನೋಡಿ ಎಂಜಾಯ್ ಮಾಡಿ ಬರುತ್ತೇವೆ." 
-ಕಿರಣ್ ರವಿಶಂಕರ್, ಐಟಿ ಉದ್ಯೋಗಿ

ಬೆಂಗಳೂರಿನ ಮಂದಿಗೆ ಇಂತಹ ಅವಕಾಶ ಸಿಗುವುದು ಕಷ್ಟ ಅದಕ್ಕಾಗಿ ಈ ಫಾರ್ಮ್‌ನ ಮಾಲೀಕರು ಒಂದು ದಿನದ ಮಟ್ಟಿಗೆ ರೈತರನ್ನಾಗಿಸುವ ಅವಕಾಶ ನೀಡಿದ್ದಾರೆ. ಮಕ್ಕಳಿಗಂತೂ ಈ ತಾಣ ಒಂದು ರೀತಿಯಲ್ಲಿ ಮ್ಯಾಜಿಕ್ ಜಗತ್ತಿದ್ದಂತೆ. ಪ್ರತಿ ದಿನ ಪಾರ್ಕು, ಟ್ಯೂಷನ್, ಮತ್ತಿತರ ಕ್ಲಾಸ್‌ಗಳಲ್ಲಿ ಬ್ಯುಸಿ ಆಗುವ ಅವರು ಇಂತಹ ಜಾಗಕ್ಕೆ ಹೋದರೆ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಇಲ್ಲಿಗೆ ಹೋದ ಮಕ್ಕಳು ಇಡೀ ದಿನ ಕುಣಿದು ಕುಪ್ಪಳಿಸುತ್ತಾರೆ. ಕೃಷಿಯ ಬಗ್ಗೆ ಸಿಟಿ ಮಕ್ಕಳಿಗೂ ಒಂದಷ್ಟು ಜ್ಞಾನ ಸಿಗುತ್ತದೆ. ಈ ಫಾರ್ಮ್‌ನಲ್ಲಿರುವ ಒಂದು ಬಂಡೆಯನ್ನು ಹತ್ತಿಳಿದು ಅವರಿಗೆ ಯಾವುದೋ ಹಳ್ಳಿಗೆ ಹೋಗಿ ಬಂದ ಮತ್ತು ಸಣ್ಣ ಪಿಕ್‌ನಿಕ್‌ಗೆ ಹೋದಂತಹ ಅನುಭವವಾಗುತ್ತದೆ. ಈ ಫಾರ್ಮ್‌ನ ಮತ್ತೊಂದು ವಿಶೇಷತೆ ಎಂದರೆ ನೀವು ನಿಮ್ಮ ಮಕ್ಕಳ ಹುಟ್ಟುಹಬ್ಬವನ್ನು ಇಲ್ಲಿ ಮಾಡಬಹುದು. ಅದಕ್ಕೂ ಇವರು ಅವಕಾಶ ನೀಡುತ್ತಾರೆ. ಪ್ರಕೃತಿ ಮಡಿಲಲ್ಲಿ ಹುಟ್ಟು ಹಬ್ಬ ಆಚರಿಸಿ ಮಕ್ಕಳಿಗೂ ಹೆಚ್ಚಿನ ಸಂತೋಷ ನೀಡಬಹುದು. ಮಕ್ಕಳು ಇಲ್ಲಿ ಆಚರಿಸಿದ ಹುಟ್ಟುಹಬ್ಬವನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ಇದನ್ನು ಓದಿ:

1. ಡೆಬಿಟ್-ಕ್ರೆಡಿಟ್ ಕಾರ್ಡ್ ಇಲ್ಲದಿದ್ರು ವಹಿವಾಟು ಸಾಧ್ಯ- ಇದು ಡಿಜಿಟಲ್​ ಇಂಡಿಯಾ ಕಾನ್ಸೆಪ್ಟ್​ ಕನಸು

2. ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು..!

3. ಎಂಜಿನಿಯರಿಂಗ್​ಗೆ ಬೈಬೈ- ಕುದುರೆ ಸವಾರಿಗೆ ಹಾಯ್ ಹಾಯ್​- ಹವ್ಯಾಸವೇ ಫುಲ್‍ ಟೈಂ ಜಾಬ್ ಆದ ಕಥೆ..!

Related Stories