ಮಣಿಪುರಕ್ಕೆ ಬರಲಿದೆ ಅತಿ ಉದ್ದದ ರೈಲ್ವೆ ಸುರಂಗ, ಬಲು ಎತ್ತರದ ಸೇತುವೆ...

ಟೀಮ್ ವೈ.ಎಸ್.ಕನ್ನಡ 

ಮಣಿಪುರಕ್ಕೆ ಬರಲಿದೆ ಅತಿ ಉದ್ದದ ರೈಲ್ವೆ ಸುರಂಗ, ಬಲು ಎತ್ತರದ ಸೇತುವೆ...

Friday August 19, 2016,

2 min Read

ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಒಂದಿಲ್ಲೊಂದು ಯೋಜನೆಗಳನ್ನು ಹಮ್ಮಿಕೊಳ್ತಾನೇ ಇದೆ. ಈಶಾನ್ಯ ರಾಜ್ಯಗಳಿಗೆ ಭಾರತದ ಇತರ ಪ್ರದೇಶಗಳೊಂದಿಗೆ ಸಂಪರ್ಕ ಕಲ್ಪಿಸುವುದು ರೈಲ್ವೆ ಇಲಾಖೆಯ ಕನಸು. ಈಶಾನ್ಯ ರಾಜ್ಯಗಳ ಅಭ್ಯುದಯಕ್ಕೆ ಅಡಿಗಲ್ಲು ಹಾಕಿರುವ ರೈಲ್ವೆ ಇಲಾಖೆ ಇದಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿ ಮಾಡ್ತಿದೆ. 111 ಕಿಲೋ ಮೀಟರ್ ಉದ್ದದ ಜಿರಿಬಮ್-ತುಪುಲ್-ಇಂಫಾಲ ರೈಲ್ವೆ ಮಾರ್ಗ ಕೂಡ ಇವುಗಳಲ್ಲೊಂದು. 2008ರಿಂದ್ಲೂ ಈ ರೈಲು ಮಾರ್ಗದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವಿಶೇಷ ಅಂದ್ರೆ ಇದು ದೇಶದಲ್ಲೇ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ. ವಿಶ್ವದಲ್ಲೇ ಅತಿ ಎತ್ತರದ ಸರಕಟ್ಟು ರೈಲ್ವೆ ಸೇತುವೆ ಕೂಡ ಹೌದು.

ಈ ರೈಲು ಮಾರ್ಗದಲ್ಲಿ ಒಟ್ಟು 37 ಸುರಂಗಗಳಿವೆ. ಇವುಗಳಲ್ಲಿ ಅತ್ಯಂತ ಉದ್ದದ ಸುರಂಗ 11.55 ಕಿಲೋ ಮೀಟರ್ ಇದೆ. ಇದು ದೇಶದಲ್ಲೇ ಅತಿ ಹೆಚ್ಚು ಉದ್ದವಿರುವ ರೈಲ್ವೆ ಸುರಂಗ ಮಾರ್ಗ. ಮಣಿಪುರದ ನೊನಿ ಬಳಿಯಲ್ಲಿ ಸೇತುವೆಯೊಂದನ್ನು ನಿರ್ಮಾಣ ಮಾಡಲಾಗ್ತಿದೆ. ಇದು ಜಗತ್ತಿನಲ್ಲೇ ಅತ್ಯಂತ ಎತ್ತರದ ಸರಕಟ್ಟು ರೈಲು ಸೇತುವೆ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಯಾಕಂದ್ರೆ ಈ ಸೇತುವೆಯ ಎತ್ತರ ಬರೋಬ್ಬರಿ 141 ಮೀಟರ್. ನದಿಯ ಮೇಲ್ಭಾಗದಲ್ಲಿ ಸೇತುವೆಯನ್ನು ನಿರ್ಮಿಸಲಾಗ್ತಿದೆ. ಇದರ ಎತ್ತರ 2 ಕುತುಬ್ ಮಿನಾರ್ ಗಳನ್ನು ಪರಸ್ಪರ ಒಂದರ ಮೇಲೊಂದು ಇಟ್ಟರೆ ಎಷ್ಟು ಎತ್ತರವಾಗುತ್ತದೆಯೋ ಅಷ್ಟು ಇರಲಿದೆ.

ಇಂಫಾಲ ಫ್ರೀ ಪ್ರೆಸ್ ವರದಿಯ ಪ್ರಕಾರ ಈ ರೈಲು ಮಾರ್ಗದುದ್ದಕ್ಕೂ 9 ನಿಲ್ದಾಣಗಳಿರಲಿವೆ. ಇವುಗಳಲ್ಲಿ ಪ್ರಮುಖ 3 ರೈಲು ನಿಲ್ದಾಣಗಳೆಂದರೆ ಖೊಂಗ್ಸಂಗ್, ನೊನಿ ಮತ್ತು ಇಂಫಾಲ. ಉಳಿದ ರೈಲು ನಿಲ್ದಾಣಗಳಾದ ಧೋಲಕಲ್, ಕೈಮೈ ರೋಡ್, ಹೈಪೋ ಜಡೋನಂಗ್, ಥಿಂಗೌ, ತುಪುಲ್ ಮತ್ತು ಹೌಚಾಂಗ್ ರೋಡ್ ಸ್ಟೇಶನ್ಗಳನ್ನು ರೈಲ್ವೆ ಟ್ರ್ಯಾಕ್ ಮೇಲೆ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಯ ಒಟ್ಟಾರೆ ವೆಚ್ಚ 5996 ಕೋಟಿ ರೂಪಾಯಿ.

``ನಮ್ಮ ಸಾಂಸ್ಕøತಿಕ ಪರಂಪರೆ ಬಗ್ಗೆ ನಮಗೆ ಹೆಮ್ಮೆಯಿದೆ. ಹಾಗಾಗಿ ಪ್ರಸ್ತಾವಿತ ಇಂಫಾಲ ರೈಲು ನಿಲ್ದಾಣವನ್ನು ವಿಭಿನ್ನವಾಗಿ ಕಟ್ಟಲಾಗುತ್ತದೆ. ಮಣಿಪುರದ ಐತಿಹಾಸಿಕ ಸ್ಮಾರಕಗಳಾದ ಕಾಂಗ್ಲಾ ಕೋಟೆ ಗೇಟ್ ಮತ್ತು ಶ್ರೀ ಗೋವಿಂದಜೀ ದೇವಾಲಯದ ವಾಸ್ತುಶಿಲ್ಪದ ಮಾದರಿಯಲ್ಲೇ ಇಂಫಾಲ ನಿಲ್ದಾಣವನ್ನು ನಿರ್ಮಿಸುತ್ತೇವೆ'' ಅಂತಾ ರೈಲ್ವೆ ಸಚಿವ ಸುರೇಶ್ ಪ್ರಭು ಮಾಹಿತಿ ನೀಡಿದ್ದಾರೆ. ಈಗಾಗ್ಲೇ ಮಣಿಪುರದ ಅತಿ ಉದ್ದದ ರೈಲ್ವೆ ಸುರಂಗ ಮತ್ತು ಅತ್ಯಂತ ಎತ್ತರದ ಸೇತುವೆಗೆ ಸಚಿವ ಸುರೇಶ್ ಪ್ರಭು ಅಡಿಗಲ್ಲು ಹಾಕಿದ್ದಾರೆ. 

ಇದನ್ನೂ ಓದಿ..

ಎಲ್ಲಾ ಕೆಲಸಗಳನ್ನು ಮುಗಿಸುತ್ತೆ ಒಂದೇ ಕರೆ- ಅಧಿಕಾರಿಗಳ ಜೊತೆ ಸಂವಹನಕ್ಕೆ ಆ್ಯಪ್ ಮೊರೆ

ಎಚ್ಚರ..! ಇನ್ನು 10 ವರ್ಷಗಳಲ್ಲಿ ಬಾಳೆಹಣ್ಣು ಸಿಗೋದೇ ಇಲ್ವಂತೆ..!