ಸಾಗರದ ಮೇಲೆ ಸವಾರಿ ಮಾಡೋ ಚೆಲುವೆ

ಟೀಮ್​​ ವೈ.ಎಸ್​​.

1

‘ಇದು ಕೇವಲ ಕ್ರೀಡೆಯಲ್ಲ. ಇದು ನನ್ನ ಬದುಕಿನ ದಾರಿ’ ಹೀಗೆ ನಗುತ್ತಾ ಮಾತು ಆರಂಭಿಸ್ತಾರೆ ಸರ್ಫರ್ ಅಥವಾ ಕಡಲಲೆ ಸವಾರಿಗಾರ್ತಿ ಇಶಿತಾ ಮಾಳವಿಯಾ. ಆಕೆಯ ಸಮುದ್ರದ ಮೇಲಿನ ಪ್ರೀತಿ, ಸರ್ಫಿಂಗ್ ಕುರಿತ ಉತ್ಸಾಹವನ್ನು, ಮಧುರವಾದ ಅಲೆಯಂತೆ ಕಿವಿಗೆ ಸೇರುವ ಅವರ ಧ್ವನಿಯಲ್ಲೇ ಕಾಣಬಹುದು.

ಸಮುದ್ರದ ಮೇಲಿನ ಆಸೆ

ಇಶಿತಾ ಹುಟ್ಟಿದ್ದು ಕಡಲ ತೀರದ ನಗರಿ ಮುಂಬೈನಲ್ಲಿ. ಬಾಲ್ಯದಿಂದಲೂ ಹೆಚ್ಚಾಗಿ ಹೊರಗೆ ಆಟವಾಡುತ್ತಾ ಕಾಲ ಕಳೆಯಲು ಇಷ್ಟಪಡುತ್ತಿದ್ದ ಹುಡುಗಿಯೀಕೆ. ಮನೆಯಿಂದ ಹೊರಗೆ ಬರಲು ಇಷ್ಟಪಡದ ನಗರದಲ್ಲಿ ಹುಟ್ಟಿ, ಬೆಳೆದ ಹೆಣ್ಣುಮಕ್ಕಳಂತಿರದೇ, ಟೀನೇಜ್‍ನಿಂದಲೂ ಅಸ್ತವ್ಯಸ್ತ ಹಾಗೂ ಗಲಿಬಿಲಿಗಳಿಂದ ಕೂಡಿದ ನಗರ ಜೀವನದಿಂದ ದೂರ ಹಚ್ಚ ಹಸುರಿನ ವಾತಾವರಣದಲ್ಲಿ ಇರಲು ಇಷ್ಟಪಡುತ್ತಿದ್ದರು. ಅದೇ ಸಮಯದಲ್ಲಿ ಇಶಿತಾಗೆ ಸರ್ಫಿಂಗ್‍ನತ್ತ ವಿಶೇಷ ಒಲವು ಮೂಡಿತು. ಆದ್ರೆ ಭಾರತದಲ್ಲಿ ಸರ್ಫಿಂಗ್ ಮಾಡುವಂತಹ ಅಲೆಗಳಿಲ್ಲ, ಹೀಗಾಗಿ ವಿದೇಶಗಳಿಗೇ ಹೋಗಬೇಕಾಗುತ್ತೆ ಅಂತಂದುಕೊಂಡು ಸುಮ್ಮನಾಗಿದ್ದರು. 2007ರಲ್ಲಿ ಇಶಿತಾ ಉನ್ನತ ವ್ಯಾಸಂಗಕ್ಕಾಗಿ ಮುಂಬೈನಿಂದ ಕರ್ನಾಟಕದ ಶಿಕ್ಷಣ ನಗರ ಮಣಿಪಾಲಕ್ಕೆ ಬಂದರು. ಈ ಕರಾವಳಿ ನಗರದಲ್ಲಿ ಅವರಿಗೊಂದು ಆಶ್ಚರ್ಯ ಕಾದಿತ್ತು.

ಶುರುವಾಯ್ತು ಅಲೆಗಳ ಮೇಲಿನ ಪ್ರೀತಿ

ನಿಮಗೆ ನಿಜವಾಗಲೂ ಏನಾದರೂ ಬೇಕು ಅನ್ನಿಸಿದರೆ, ಅದನ್ನು ನಿಮಗೆ ದೊರಕಿಸಲು ಇಡೀ ವಿಶ್ವವೇ ಪ್ರಯತ್ನಿಸುತ್ತದಂತೆ. ಈ ಮಾತಿಗೆ ಇಶಿತಾ ಮಾಳವಿಯಾ ಜೀವನವೇ ಉತ್ತಮ ನಿದರ್ಶನ. ಮಣಿಪಾಲದಲ್ಲಿ ಕಾಕತಾಳೀಯವೆಂಬಂತೆ ಇಶಿತಾ ಮತ್ತು ಆಕೆಯ ಗೆಳೆಯ ತುಷಾರ್ ಇಬ್ಬರಿಗೂ, ಭಾರತಕ್ಕೆ ಓದಲು ಬಂದಿದ್ದ ಜರ್ಮನಿ ಮೂಲದ ವಿದ್ಯಾರ್ಥಿಯೊಬ್ಬನ ಪರಿಚಯವಾಯ್ತು. ವಿಶೇಷ ಅಂದ್ರೆ ಆತನ ಬಳಿ ಸರ್ಫ್‍ಬೋರ್ಡ್ ಇತ್ತು. ಕ್ಯಾಲಿಫೋರ್ನಿಯಾದಿಂದ ಬಂದಿರುವ ಕೆಲ ವಿದೇಶಿಗರು ಸಮೀಪದಲ್ಲೇ ಇರುವ ಆಶ್ರಮವೊಂದರಲ್ಲಿದ್ದು, ಅವರು ಸರ್ಫಿಂಗ್ ಮಾಡುತ್ತಿದ್ದಾರೆಂದು ಆ ಜರ್ಮನ್ ವಿದ್ಯಾರ್ಥಿ, ಇವರಿಗೆ ತಿಳಿಸಿದ. ವಿಷಯ ತಿಳಿಯುತ್ತಲೇ ತುಷಾರ್, ಇಶಿತಾ ಜೋಡಿ ಒಂದು ಗಂಟೆಯೊಳಗೆ ಆ ಸ್ಥಳಕ್ಕೆ ಬಂದು ವಿದೇಶಿಗರ ಮನವೊಲಿಸಿ ತಾವೂ ಸರ್ಫಿಂಗ್ ಮಾಡಲು ರೆಡಿಯಾಗಿಬಿಟ್ಟರು.

‘ವಿದೇಶೀಯರು ಹಾಗೂ ನಾವು, ಸರ್ಫಿಂಗ್ ಮಾಡುತ್ತಿರುವುದನ್ನು ನೋಡುತ್ತಾ ನೂರಾರು ಜನ ನಿಂತಿದ್ದರು. ಆಗ ಭಾರತೀಯರಿಗೂ ಸರ್ಫಿಂಗ್ ಮಾಡಲು ತುಂಬಾ ಆಸೆಯಿದೆ ಅನ್ನೋದು ನಮಗಲ್ಲಿ ಗೊತ್ತಾಯ್ತು. ಮೊದಲ ಬಾರಿಗೆ ಸರ್ಫಿಂಗ್ ಬೋರ್ಡ್ ಮೇಲೆ ನಿಂತು ಮೊದಲ ಅಲೆಯ ಮೇಲೆ ಸವಾರಿ ಮಾಡಿದ್ದು ನನಗೆ ಈಗಲೂ ನೆನಪಿದೆ. ಸರ್ಫಿಂಗ್ ಮಾಡಿ ಮುಗಿಸಿ ಮನೆಗೆ ಬರುವವರೆಗೂ ಅದೇ ಸಂತಸದಲ್ಲಿ ತೇಲುತ್ತಿದ್ದೆ’ ಅಂತ ಸ್ಮರಿಸಿಕೊಳ್ತಾರೆ ಇಶಿತಾ.

ಒಂದೇ ಬೋರ್ಡ್ ಮೇಲೆ ಇಬ್ಬರ ಸವಾರಿ

ಮಣಿಪಾಲದಲ್ಲಿ ಇಶಿತಾ ಪತ್ರಿಕೋದ್ಯಮ ಓದುತ್ತಿದ್ದರೆ, ತುಷಾರ್ ವಾಸ್ತುಶಿಲ್ಪ ಶಿಕ್ಷಣ ಪಡೆಯುತ್ತಿದ್ದ. ಇಬ್ಬರ ಪೋಷಕರೂ ಇವರ ಸರ್ಫಿಂಗ್ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು, ಹೀಗಾಗಿ ಇಬ್ಬರಿಗೂ ಸರ್ಫಿಂಗ್ ಬೋರ್ಡ್ ಕೊಡಿಸಿರಲಿಲ್ಲ. ‘ಹೀಗಾಗಿಯೇ 2007ರ ಬೇಸಿಗೆ ರಜೆಯಲ್ಲಿ ಮನೆಗೆ ಹೋದ ಬಳಿಕ, ನಮಗೆ ಬೇಡದ ವಸ್ತುಗಳೆಲ್ಲವನ್ನೂ ನಾನು ಮತ್ತು ತುಷಾರ್ ಮಾರಿದೆವು. ಈ ಮೂಲಕ ಒಟ್ಟಾದ ಹಣದಿಂದ ಇಬ್ಬರೂ ಸೇರಿ ನಮ್ಮ ಮೊದಲ ಸರ್ಫಿಂಗ್ ಬೋರ್ಡ್ ಖರೀದಿಸಿದೆವು. ಅದಾಗಿ ಎರಡು ವರ್ಷಗಳವರೆಗೂ ಅದೊಂದರಲ್ಲೇ ಒಬ್ಬರಾದ ಬಳಿಕ ಮತ್ತೊಬ್ಬರು ಸರ್ಫಿಂಗ್ ಮಾಡುತ್ತಿದ್ದೆವು’ ಅಂತ ಹಳೆಯ ದಿನಗಳ ಕುರಿತು ಹೇಳಿಕೊಳ್ತಾರೆ ಇಶಿತಾ.

ಉದ್ಯಮಶೀಲತೆಯ ಅಲೆ ಮೇಲೆ ಸವಾರಿ

2ನೇ ವರ್ಷದ ಪದವಿ ಓದುತ್ತಿರುವಾಗಲೇ, ಇಶಿತಾಗೆ ಸರ್ಫಿಂಗ್ ಮೂಲಕ ಬದುಕು ಕಟ್ಟಿಕೊಳ್ಳುವ ಆಲೋಚನೆ ಬಂತು. ಮುಂದಿನ ಎರಡು ವರ್ಷಗಳ ಕಾಲ ಓದಿನ ಜೊತೆಗೇ ಇಶಿತಾ ಸರ್ಫಿಂಗ್ ಕುರಿತು ಮಾಹಿತಿ ಕಲೆ ಹಾಕಿದರು. ಹೀಗೆ ಪದವಿ ಮುಗಿಯುವುದರ ಜೊತೆಗೆ ಸರ್ಫಿಂಗ್ ಉದ್ಯಮದ ಪ್ರಾರಂಭಕ್ಕೆ ಸಿದ್ಧತೆಯೂ ಪ್ರಾರಂಭವಾಗಿತ್ತು. ತುಷಾರ್ ಕೂಡ ಇಶಿತಾ ಜೊತೆ ಕೈಜೋಡಿಸಿದ.

ಈ ಮೂಲಕ ಕರ್ನಾಟಕದ ಉಡುಪಿ ಜಿಲ್ಲೆಯ ಕರಾವಳಿ ತೀರದ ಕೋಡಿ ಬೆಂಗೆರೆ ಗ್ರಾಮದಲ್ಲಿ ಖಾಲಿ ಬಾರ್‍ ಒಂದರಲ್ಲಿ ‘ದಿ ಶಾಕಾ ಸರ್ಫ್ ಕ್ಲಬ್’ ಜನ್ಮ ತಾಳಿತು. ಮರಳಿನ ಗುಡ್ಡೆಯ ಗೋಡೆ, ಹುಲ್ಲು ಛಾವಣಿಯ ಕಚೇರಿ, ಸ್ಥಳೀಯ ಆಡಳಿತದಿಂದ ಅನುಮತಿ ಮತ್ತು ಪರವಾನಗಿ, ಮನೆಯಲ್ಲಿ ಅಸಹಕಾರಿ ಪೋಷಕರು... ಆಗಷ್ಟೇ ಸವಾಲುಗಳು ಎದುರಾದವು. ಪ್ರತಿ ಬಾರಿ ಇಶಿತಾ ಇದು ಅಸಾಧ್ಯವಾದ ಕೆಲಸ ಅಂತ ಸುಮ್ಮನಾಗುವ ಸಮಯದಲ್ಲೇ ಸರ್ಫಿಂಗ್ ಕ್ಲಬ್ ಪ್ರಾರಂಭಿಸಲು ಹೊಸ ಹೊಸ ಕಾರಣಗಳು ಸಿಗುತ್ತಿದ್ದವು. ‘ನಿಮಗೆ ಪರಿಚಯವಿಲ್ಲದ ಹೊಸ ಜಾಗದಲ್ಲಿ ನೀವೇನಾದರೂ ಹೊಸತನ್ನು ಮಾಡಬೇಕು ಅಂದ್ರೆ, ಸ್ಥಳೀಯ ಪರಿಸರ ಹಾಗೂ ಜನರೊಂದಿಗೆ ಉತ್ತಮ ಸಂಬಂಧ, ಬಾಂಧವ್ಯ ಇಟ್ಟುಕೊಳ್ಳುವುದು ತುಂಬಾ ಮುಖ್ಯ, ಅದೃಷ್ಟವೆಂಬಂತೆ ನನಗೆ ಇಲ್ಲಿನ ಸ್ಥಳೀಯರಿಂದ ತುಂಬಾ ಉತ್ತೇಜನ ದೊರೆಯಿತು. ಇವರ ಸಹಾಯವಿಲ್ಲದಿದ್ದರೆ, ನಾನು ಶಾಕಾ ಸರ್ಫ್ ಕ್ಲಬ್ ಸ್ಥಾಪಿಸಲು ಆಗುತ್ತಿರಲಿಲ್ಲ’ ಅಂತ ಸ್ಥಳೀಯರಿಗೆ ಧನ್ಯವಾದ ಅರ್ಪಿಸ್ತಾರೆ ಇಶಿತಾ.

2007ರಲ್ಲಿ ಇಶಿತಾ ಸರ್ಫಿಂಗ್ ಪ್ರಾರಂಭಿಸಿದಾಗ ಈ ಕ್ರೀಡೆಯ ಕುರಿತು ಭಾರತೀಯರಿಗೆ ಗೊತ್ತೇ ಇರಲಿಲ್ಲ. ಹುಡುಗರ ತಂಡದಲ್ಲಿ ಇಶಿತಾ ಒಬ್ಬಳೇ ಹುಡುಗಿ. ಅಲ್ಲದೇ ದೊಡ್ಡ ಅಲೆಗಳ ಮೇಲೆ ಹುಡುಗರು ನಿರಾಯಾಸವಾಗಿ ಸರ್ಫಿಂಗ್ ಮಾಡುತ್ತಿದ್ದರೆ, ಇಶಿತಾಗೆ ಕೆಲವೊಮ್ಮೆ ಭಯವೂ ಆಗುತ್ತಿತ್ತಂತೆ. ಆದ್ರೆ ಗಟ್ಟಿಗಳಾದ ಇಶಿತಾ, ಸೋಲನ್ನು ಒಪ್ಪಿಕೊಳ್ಳಲಿಲ್ಲ. ಛಲದಿಂದ ಮುನ್ನುಗ್ಗಿದ ಕಾರಣವೇ ಇವತ್ತು ಇಶಿತಾ ಭಾರತದ ಮೊತ್ತ ಮೊದಲ ವೃತ್ತಿಪರ ಮಹಿಳಾ ಸರ್ಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸರ್ಫಿಂಗ್‍ನಿಂದ ಭಾರತೀಯರೇಕೆ ದೂರವಿದ್ದಾರೆ?

‘ಬಹುತೇಕ ಜನರಿಗೆ ಈಜು ಬರುವುದಿಲ್ಲ. ಸಮುದ್ರಗಳಂದ್ರೆ ಸಾಕು ಭಯದಿಂದ ನಡುಗುತ್ತಾರೆ. ಇನ್ನು ಮಹಿಳೆಯರ ವಿಷಯಕ್ಕೆ ಬಂದ್ರೆ, ಉಡುಗೆಯದ್ದೇ ದೊಡ್ಡ ಸಮಸ್ಯೆ. ಮೈ ತುಂಬಾ ಬಟ್ಟೆ ಹಾಕಿಕೊಂಡು ಸರ್ಫಿಂಗ್ ಮಾಡಲು ಸಾಧ್ಯವಿಲ್ಲ. ಅಲ್ಲದೇ ಹೆಚ್ಚು ಹೊತ್ತು ಬಿಸಿಲಲ್ಲಿ, ಸಮುದ್ರದ ಉಪ್ಪುನೀರಲ್ಲಿದ್ದರೆ ಚರ್ಮ ಕಂದು ಬಣ್ಣಕ್ಕೆ ತಿರುಗುವ ಭಯ ಹೆಣ್ಣುಮಕ್ಕಳಿಗೆ. ಹೀಗಾಗಿಯೇ ಅವರು ಸರ್ಫಿಂಗ್‍ನಿಂದ ದೂರ.’ ಅಂತ ಹೇಳ್ತಾರೆ ಇಶಿತಾ. ಆದ್ರೂ ಭಾರತದಲ್ಲಿ ಸರ್ಫಿಂಗ್‍ಗೆ ಈಗೀಗ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಹೆಣ್ಣುಮಕ್ಕಳೂ ಇತ್ತೀಚಿನ ದಿನಗಳಲ್ಲಿ ಇತ್ತ ಆಕರ್ಷಿತರಾಗುತ್ತಿದ್ದಾರೆ. ವಿಶೇಷ ಅಂದ್ರೆ 65 ವರ್ಷದ ಹಿರಿಯ ಮಹಿಳೆಯೊಬ್ಬರು ಇಶಿತಾ ಬಳಿ ಸರ್ಫಿಂಗ್ ತರಬೇತಿ ಪಡೆಯುತ್ತಿದ್ದಾರೆ.

ಸರ್ಫಿಂಗ್ ನನ್ನ ಜೀವ

ಅಮೆರಿಕಾದ ಸರ್ಫರ್ ಲಿಜ್ ಕ್ಲಾರ್ಕ್‍ನಂತಹವರು ಇಶಿತಾ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಮೂಲಕ ಸುಸ್ಥಿರ ಜೀವನ ನಡೆಸಲು ಸ್ಫೂರ್ತಿ ನೀಡಿದ್ದಾರಂತೆ. ‘ನನಗೆ ನನ್ನ ಜೀವ, ಬದುಕು ಎಷ್ಟು ಮುಖ್ಯವೋ, ಸರ್ಫಿಂಗ್ ಕೂಡ ಅಷ್ಟೇ ಮುಖ್ಯ. ಸರ್ಫಿಂಗ್ ಮಾಡುವಾಗ ಅಲೆಗಳನ್ನು ಎದುರಿಸುವ ಹಾಗೆಯೇ, ನಾನು ನನ್ನ ಜೀವನದಲ್ಲಿ ಬರುವ ಕಷ್ಟಗನ್ನೂನ್ನೂ ಎದುರಿಸುತ್ತೀನಿ. ಎಷ್ಟೇ ಬಾರಿ ಬಿದ್ರೂ, ಛಲಬಿಡದೆ ಮುನ್ನುಗ್ಗಿ, ಅಲೆಗಳ ಮೇಲೆ ಸವಾರಿ ಮಾಡೋ ಹಾಗೆಯೇ, ನೈಜ ಜೀವನದಲ್ಲೂ ನನ್ನ ಗುರಿಯತ್ತ ಮುನ್ನುಗ್ಗುತ್ತೀನಿ. ಒಂದಾದ ಮೇಲೊಂದರಂತೆ ಅಲೆಗಳು ಬರುವಂತೆಯೇ, ಅವಕಾಶಗಳೂ ಹಾಗೂ ಗೆಲುವೂ ಬರುತ್ತವೆ.’ ಅಂತ ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಇಶಿತಾ.

ಭವಿಷ್ಯದ ಯೋಜನೆಗಳು

‘ಬಿಯಾಂಡ್ ದಿ ಸರ್ಫೇಸ್’ ಎಂಬ ಮೊತ್ತ ಮೊದಲ ಸಂಪೂರ್ಣ ಮಹಿಳಾ ಸರ್ಫಿಂಗ್ ಕುರಿತ ಡಾಕ್ಯುಮೆಂಟರಿಯಲ್ಲಿ ಮಿಂಚಿದ್ದಾರೆ ಇಶಿತಾ. ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಸೇರಿದಂತೆ ಹಲವು ದೇಶಗಳ ಕಡಲಿನಲ್ಲಿ, ಅಲೆಗಳ ಮೇಲೆ ಸವಾರಿ ಮಾಡಿರುವ ಹೆಗ್ಗಳಿಕೆ ಇಶಿತಾ ಅವರದು. ಶಾಕಾ ಸರ್ಫ್ ಕ್ಲಬ್ ಜೊತೆಗೆ ಇಶಿತಾ, ಭಾರತದಲ್ಲೇ ಮೊತ್ತ ಮೊದಲ ಪ್ರಯತ್ನ ಎನಿಸಿಕೊಂಡ ಕ್ಯಾಂಪ್ ನಮಲೋಹಾ (ನಮಸ್ತೇ ಮತ್ತು ಅಲೋಹ) ಕೂಡ ನಡೆಸುತ್ತಿದ್ದಾರೆ. ಒಂದು ಕಡೆ ನದಿ ಮತ್ತೊಂದು ಕಡೆ ಸಮುದ್ರಗಳ ಮಧ್ಯದಲ್ಲಿರುವ ಕ್ಯಾಂಪ್ ನಮಲೋಹಾದಲ್ಲಿ ಇಶಿತಾ ಅವರ ವಿದ್ಯಾರ್ಥಿಗಳು ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಅಲ್ಲದೇ ಶಾಕಾ ಸರ್ಫ್ ಕ್ಲಬ್, ಆಸ್ಟ್ರೇಲಿಯಾ ಸೈಫ್ ಸೇವಿಂಗ್ ಸೊಸೈಟಿ ಹಾಗೂ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಗಳೊಂದಿಗೆ ಸೇರಿ ಸ್ಥಳೀಯ ಸರ್ಕಾರೀ ಶಾಲೆಗಳಲ್ಲಿ ‘ದಿ ನಿಪ್ಪರ್ಸ್ ಪ್ರೋಗ್ರಾಮ್’ ಮೂಲಕ, ಮಕ್ಕಳಿಗೆ ಜೂನಿಯರ್ ಲೈಫ್ ಗಾರ್ಡ್ಸ್​​ ತರಬೇತಿ ನೀಡುತ್ತಿದೆ. ಸ್ವಯಂಸೇವಕರ ಸಹಾಯದೊಂದಿಗೆ ಹಲವು ರೀತಿಯ ಕಾರ್ಯಾಗಾರಗಳನ್ನೂ ಆಯೋಜಿಸಲಾಗುತ್ತಿದೆ.

ಹೀಗೆ ಇಶಿತಾ ತಾನು ಕಂಡ ಕನಸನ್ನು ನನಸು ಮಾಡಿಕೊಂಡು, ಇನ್ನೂ ಹಲವರ ಕನಸುಗಳನ್ನು ನನಸು ಮಾಡುವತ್ತ ಗಮನ ಹರಿಸಿದ್ದಾರೆ. ಈ ಮೂಲಕ ಕೋಟ್ಯಂತರ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ ಇಶಿತಾ. ಅವರಿಗೆ ಶುಭವಾಗಲಿ ಅಂತ ನಾವೂ ಹಾರೈಸೋಣ.

Related Stories