ಮಾರ್ಕ್ಸ್​ಕಾರ್ಡ್​ಗೆ ಡಿಜಿಟಲ್ ಸ್ಪರ್ಶದ ಮೆರುಗು - ಬಿಟ್ಟುಬಿಡಿ ನಕಲಿ ಅಂಕಪಟ್ಟಿಯ ಕೊರಗು

ಟೀಮ್​ ವೈ.ಎಸ್​. ಕನ್ನಡ

ಮಾರ್ಕ್ಸ್​ಕಾರ್ಡ್​ಗೆ ಡಿಜಿಟಲ್ ಸ್ಪರ್ಶದ ಮೆರುಗು - ಬಿಟ್ಟುಬಿಡಿ ನಕಲಿ ಅಂಕಪಟ್ಟಿಯ ಕೊರಗು

Friday June 10, 2016,

2 min Read

ಭಾರತದಲ್ಲಿ ಪೊಲೀಸರು ಚಾಪೆ ಕೆಳಗೆ ನುಸುಳಿದರೆ ಕಳ್ಳರು ರಂಗೋಲಿ ಕೆಳಗೆ ನುಸುಳುತ್ತಾರೆ. ಸರ್ಕಾರಿ ಸಂಸ್ಥೆಗಳಲ್ಲಿದ್ದ ಭ್ರಷ್ಟಚಾರ ಈಗ ಪವಿತ್ರವಾದ ವಿದ್ಯಾಸಂಸ್ಥೆಗಳಿಗೂ ಮೆತ್ತಿಕೊಂಡಿದೆ. ಅದರಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ, ಅಂಕಪಟ್ಟಿ ತಿದ್ದುವಿಕೆ ಹೀಗೆ ಸಾಕಷ್ಟು ರೀತಿಯಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ತಪ್ಪಿಸಲು ಈಗ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಪದವಿ ಪ್ರಮಾಣ ಪತ್ರ, ಅಂಕಪಟ್ಟಿ ಮತ್ತಿತರ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲು ಯೋಜನೆಯನ್ನು ಜಾರಿಗೆ ತಂದಿವೆ.

ಹೌದು ಅಂಕಪಟ್ಟಿಗಳು, ಪದವಿ ಪ್ರಮಾಣ ಪತ್ರಗಳು ವಿದ್ಯಾರ್ಥಿಯ ಭವಿಷ್ಯಕ್ಕೆ ನೆರವಾಗುವಂತಹ ಪ್ರಮುಖ ದಾಖಲೆಗಳು. ತಮ್ಮ ಜೀವನ ನಿರ್ವಹಿಸಿಕೊಳ್ಳಲು ಕೆಲಸ ಗಿಟ್ಟಿಸಿಕೊಳ್ಳಲು ಎಲ್ಲರಿಗೂ ತುಂಬಾ ಅವಶ್ಯಕವಾದದ್ದು. ಇವುಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡುವ ಪ್ರಕ್ರಿಯೆಗೆ ರಾಜ್ಯದಲ್ಲಿ ಚಾಲನೆ ಸಿಕ್ಕಿದೆ.

ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ

ಅಂಕಪಟ್ಟಿಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಇಡುವುದರಿಂದ ಮುಂಬರುವ ದಿನಗಳಲ್ಲಿ ಕಾರ್ಪೊರೇಟ್ ವಲಯದ ಕಂಪನಿಗಳು ಅಥವಾ ಯಾವುದೇ ಸಂಸ್ಥೆಗಳು, ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಅಭ್ಯರ್ಥಿಯ ಅಂಕ ಪಟ್ಟಿಗಳನ್ನು ಅಸಲಿಯೇ ಅಥವಾ ನಕಲಿಯೇ ಎಂದು ಪರಿಶೀಲಿಸುವುದು ಸುಲಭವಾಗಲಿದೆ. ಆನ್​ಲೈನ್​ನಲ್ಲಿ ಕೆಲವೇ ಕ್ಷಣಗಳಲ್ಲಿ ಅಂಕ ಪಟ್ಟಿಗಳ ಸಾಚಾತನವನ್ನು ಖಾತರಿಪಡಿಸಿಕೊಳ್ಳಬಹುದು. ಸಾವಿರಾರು ಉದ್ಯೋಗಾಕಾಂಕ್ಷಿಗಳ ಪದವಿ ಪ್ರಮಾಣ ಪತ್ರಗಳನ್ನು ಅರ್ಧಗಂಟೆಯಲ್ಲೇ ದೃಢೀಕರಿಸಿಕೊಳ್ಳಬಹುದು. ಮತ್ತೊಂದು ಕಡೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಗಬಹುದಾದ ವಂಚನೆಯನ್ನೂ ಪರಿಣಾಮಕಾರಿಯಾಗಿ ತಡೆಗಟ್ಟಬಹುದು.

ಕೇಂದ್ರ ಸರಕಾರದ ಯೋಜನೆ

ನಕಲಿ ಪದವಿ, ಅಂಕಪಟ್ಟಿಗಳ ಹಾವಳಿಯನ್ನು ತಡೆಯಲು ಕೇಂದ್ರ ಸರಕಾರ ನ್ಯಾಶನಲ್ ಅಕಾಡೆಮಿಕ್ ಡಿಪಾಸಿಟರಿ (ಎನ್ಎಡಿ) ಎಂಬ ಡಿಜಿಟಲ್ ಯೋಜನೆಯನ್ನು ಕಳೆದ ವರ್ಷ ಜಾರಿಗೊಳಿಸಿತ್ತು. ಇತ್ತೀಚೆಗೆ ಮುಂಬಯಿ ವಿಶ್ವವಿದ್ಯಾಲಯ ಈ ಯೋಜನೆಗೆ ಸೇರ್ಪಡೆಯಾಗಿದೆ. ಸೆಂಟ್ರಲ್ ಡಿಪಾಸಿಟರಿ ಸರ್ವೀಸ್ ಲಿಮಿಟೆಡ್ (ಸಿಡಿಎಸ್ಎಲ್) ಈ ಅಕಾಡೆಮಿಕ್ ಡಿಪಾಸಿಟರಿಯನ್ನು ನಿರ್ವಹಿಸುತ್ತಿದ್ದು, ಕರ್ನಾಟಕದ ಬಹುತೇಕ ಎಲ್ಲ ವಿಶ್ವವಿದ್ಯಾನಿಲಯಗಳನ್ನು ಈ ಸಂಬಂಧ ಸಂಪರ್ಕಿಸಿದೆ. ಈ ಪ್ರಕ್ರಿಯೆ ಸದ್ಯಕ್ಕೆ ಆರಂಭಿಕ ಘಟ್ಟದಲ್ಲಿದ್ದು, ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಯೋಜನೆ ಸಂಬಂಧ ವಿಸ್ತೃ ತ ಪ್ರಾತ್ಯಕ್ಷಿಕೆ ನೀಡಿ ಅವರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಿಡಿಎಸ್ಎಲ್​ನ ಮೂಲಕ ನೀಡಲಾಗುವುದು.

ಇದನ್ನು ಓದಿ: ಮನೆ ಕೆಲಸಗಳನ್ನು ಮಾಡಿ ಮುಗಿಸುವ ಮಿತ್ರನ ಬಗ್ಗೆ ನಿಮಗೆಷ್ಟು ಗೊತ್ತು..?

ಏನಿದು ನ್ಯಾಶನಲ್ ಅಕಾಡೆಮಿಕ್ ಡಿಪಾಸಿಟರಿ..?

ಎಸ್​ಎಸ್​ಎಲ್​ಸಿ, ಪಿಯುಸಿ, ಸಿಇಟಿ, ಎಂಜಿನಿಯರಿಂಗ್, ಕಾನೂನು ಸೇರಿದಂತೆ ವೈದ್ಯಕೀಯ ಪದವಿ, ಸ್ನಾತಕೋತ್ತರ ಪದವಿ, ಎನ್ಇಟಿ ಇತ್ಯಾದಿಗಳ ಫಲಿತಾಂಶ, ಅಂಕಪಟ್ಟಿ, ಪ್ರಮಾಣ ಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡುವ ರಾಷ್ಟ್ರೀಯ ಯೋಜನೆಯೇ ನ್ಯಾಶನಲ್ ಅಕಾಡೆಮಿಕ್ ಡಿಪಾಸಿಟರಿ. ಮಾನವ ಸಂಪನ್ಮೂಲ ಇಲಾಖೆ ಈ ಯೋಜನೆಯ ತ್ವರಿತಗತಿಯ ಅನುಷ್ಠಾನಕ್ಕೆ ಯತ್ನಿಸುತ್ತಿದೆ.

ವಿದ್ಯಾರ್ಥಿಗಳಿಗೆ ಪ್ರಯೋಜನ ಹಲವು

ವಿದ್ಯಾರ್ಥಿಗಳು ಸಂದರ್ಶನಕ್ಕೆ ಹೋಗುವ ಮುನ್ನ ತಮ್ಮ ಶೈಕ್ಷಣಿಕ ದಾಖಲೆಗಳನ್ನು ದೃಢೀಕರಣ ಮಾಡಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ. ಬಹುತೇಕ ವಿಶ್ವ ವಿದ್ಯಾಲಯಗಳು ಎನ್ಎಡಿಯಲ್ಲಿ ನೋಂದಣಿಯಾದ ನಂತರ, ವಿದ್ಯಾರ್ಥಿಯೊಬ್ಬ ನಾನಾ ರಾಜ್ಯಗಳಲ್ಲಿ ಪಡೆದಿರುವ ಶಿಕ್ಷಣದ ದಾಖಲಾತಿಗಳ ವಿವರಗಳನ್ನು ಎನ್ಎಡಿಯಲ್ಲಿ ಸಂಗ್ರಹಿಸಿಡಬಹುದು. ಭವಿಷ್ಯದಲ್ಲಿ ಎನ್ಎಡಿಯಲ್ಲಿ ನೋಂದಣಿಯಾಗುವ ವಿಶ್ವ ವಿದ್ಯಾನಿಲಯಗಳು ಮತ್ತು ಮಂಡಳಿಗಳು ಅಂಕಪಟ್ಟಿಗಳ ಪ್ರತಿಗಳನ್ನು ಮುದ್ರಿಸಬೇಕಾದ ಅಗತ್ಯವೂ ಇರುವುದಿಲ್ಲ. ಎಲ್ಲವೂ ಆನ್​ಲೈನ್​ನಲ್ಲಿ ಸಂಗ್ರಹವಾಗುವುದರಿಂದ ಮುದ್ರಣ ವೆಚ್ಚವನ್ನು ಉಳಿಸಬಹುದು. ಕಾಗದ ರಹಿತ ಪರಿಕಲ್ಪನೆಗೆ ಹತ್ತಿರವಾಗಬಹುದು. ಮತ್ತೊಂದು ಕಡೆ ಶೈಕ್ಷಣಿಕ ದಾಖಲೆಗಳು ಕಳೆದು ಹೋಗುವ ಆತಂಕವೂ ಇರುವುದಿಲ್ಲ.

ಐಟಿ ಕ್ಷೇತ್ರದಲ್ಲಿ ನಕಲಿ ಸರ್ಟಿಫಿಕೇಟ್ ಸಮಸ್ಯೆ

ಮಾಹಿತಿ ತಂತ್ರಜ್ಞಾನ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಇತರ ಕಡೆಗೆ ಹೋಲಿಸಿದರೆ ಹೆಚ್ಚು. ಆದರೆ ಇಲ್ಲಿ ನಕಲಿ ಸರ್ಟಿಫಿಕೇಟ್​​ಗಳ ಹಾವಳಿಯೂ ಅನೇಕವೆನ್ನುತ್ತಾರೆ ತಜ್ಞರು. ಬ್ಯಾಂಕಿಂಗ್ ಮತ್ತು ವಿಮೆ ವಲಯದಲ್ಲಿ ಕೂಡ ಇತ್ತೀಚೆಗೆ ಇಂತಹ ಸಮಸ್ಯೆ ಇದೆ. ಆದರೆ ಶೈಕ್ಷಣಿಕ ದಾಖಲೆಗಳ ಡಿಜಿಟಲೀಕರಣದಿಂದ ಈ ಬಿಕ್ಕಟ್ಟಿಗೆ ಪರಿಹಾರ ಸಿಗಲಿದೆ. ಒಟ್ಟಿನಲ್ಲಿ ಎಲ್ಲವೂ ಈ ಡಿಜಿಟಲ್ ಆಗಿ ತಾಂತ್ರಿಕ ಕ್ಷೇತ್ರ ಸಾಕಷ್ಟು ಮುಂದುವರೆಯುತ್ತಿದೆ.

ಇದನ್ನು ಓದಿ:

1. ಬಾಲ ಕಾರ್ಮಿಕನಾಗಿದ್ದವನು ಇಂದು ದೇಶವೇ ಹೆಮ್ಮೆ ಪಡುವಂತಹ ಕಲಾವಿದ

2. ಶೋಷಿತ ಮಹಿಳೆಯರಿಗೆ ಆಸರೆ ಜೊತೆ ಆತ್ಮವಿಶ್ವಾಸ ತುಂಬುತ್ತಿರುವ ಮಹಿಳೆ ಸುನಿತಾ ಕೃಷ್ಣನ್

3.ಹೋಟೆಲ್ ಚಿಕ್ಕದಾದ್ರೂ.. ಹೆಸರು ದೊಡ್ಡದು...!