ಮನೆಬಾಗಿಲಿಗೆ ಬರುತ್ತೆ ಮನೆ ಮೆಚ್ಚುವ ಮೊಗ್ಗಿನ ಜಡೆ..!

ನೀಲಾಶಾಲು

0

ಹೇಳಿಕೇಳಿ ಅಲಂಕಾರಕ್ಕೂ ಹೆಣ್ಣಿಗೂ ಬಿಟ್ಟೂ ಬಿಡದ ಸಂಬಂಧ. ಇನ್ನು ಮದುಮಗಳಿಗೆ ಅಲಂಕಾರ ಮಾಡುವುದು ಅಂದ್ರೆ ಅದು ದೊಡ್ಡ ಕೆಲಸ. ಮೇಕಪ್​ನಿಂದ ಹಿಡಿದು ಮೊಗ್ಗಿನ ಜಡೆಯ ತನಕ ಎಲ್ಲವೂ ಬಹಳ ನಿಗವಿಟ್ಟು ಮಾಡಬೇಕು. ಅದ್ರಲ್ಲೂ ಮದಮಗಳಿಗೆ ಮೊಗ್ಗಿನ ಜಡೆ ಹಾಕಬೇಕು ಅಂದ್ರೆ ಮೂರರಿಂದ ನಾಲ್ಕು ಜನರ ಸಹಾಯ ಬೇಕೇ ಬೇಕು. ಆದ್ರೆ ಇನ್ನು ಮುಂದೆ ಆ ತಲೆ ನೋವು ಇಲ್ಲ. ಜಸ್ಟ್ ಒಂದು ಮೆಸೇಜ್ ಮಾಡಿದ್ರೆ ಸಾಕು. ನಿಮಗೆ ಬೇಕಾದ ಮೊಗ್ಗಿನ ಜಡೆ ನಿಮ್ಮ ಮನೆಗೆ ಬಂದು ಬಿಡುತ್ತದೆ.

ಅದು ಹೇಗೆ ಅಂತೀರಾ…?

ದಿನದಿಂದ ದಿನಕ್ಕೆ ಆನ್​ಲೈನ್ ಮೂಲಕವೇ ವಸ್ತುಗಳನ್ನು ಪೂರೈಕೆ ಮಾಡುವ ವೆಬ್ ಸೈಟ್ ಗಳು ಜನಪ್ರಿಯಗೊಳುತ್ತಿದೆ. ಅಂತಹದೇ ಒಂದು ನೂತನ ವೆಬ್ ಸೈಟ್ ಈಗ ಬಹಳ ಜನಪ್ರಿಯವಾಗುತ್ತಿದೆ. ಅದು ಮೊಗ್ಗಿನ ಜಡೆ ವೆಬ್ ಸೈಟ್.

ಹೆಣ್ಣುಮಕ್ಕಳಿಗೆ ಬಹಳ ಪ್ರಿಯವಾದ ಮೊಗ್ಗಿನ ಜಡೆ ಪೂರೈಕೆಗಾಗಿಯೇ ಬೆಂಗಳೂರಿಗೆ ಜೆ.ಪಿ. ನಗರದಲ್ಲಿರುವ ರೇಣುಕಾ ಪ್ರಕಾಶ್ ಅವರು 150 ರೀತಿಯ ಮೊಗ್ಗಿನ ಜಡೆಯನ್ನ ವಿನೂತನವಾಗಿ ವಿನ್ಯಾಸಗೊಳಿಸಿ ಆನ್​​ಲೈನ್​ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಆನ್​ಲೈನ್ ಮೂಲಕ ನಿಮಗೆ ಬೇಕಾದ ಮೊಗ್ಗಿನ ಜಡೆ ಬುಕ್ ಮಾಡಿದ್ರೆ ಸಾಕು, ನಿಮ್ಮ ಮನೆ ಬಾಗಿಲಿಗೆ ಕೆಲವೇ ಗಂಟೆಗಳಲ್ಲಿ ನಿಮ್ಮ ಮೊಗ್ಗಿನ ಜಡೆ ಬಂದು ಬಿಡುತ್ತದೆ. ಇನ್ನು ಇವರು ನೀಡುವ ರೆಡಿಮೇಡ್ ಮೊಗ್ಗಿನ ಜಡೆಯನ್ನ ಬಹಳ ಸುಲಭವಾಗಿ ಯಾರು ಬೇಕಾದ್ರೂ ಫಿಕ್ಸ್ ಮಾಡಬಹುದು. ಅದಕ್ಕೆ ವಿಶೇಷ ತರಬೇತಿ ಪಡೆಯಬೇಕಾದ ಅಗತ್ಯವು ಸಹ ಇಲ್ಲ.

ನಿಶ್ಚಿತಾರ್ಥ, ಮೆಹೆಂದಿ, ಮದುವೆ, ಆರತಕ್ಷತೆ, ಸೀಮಂತ, ಹುಟ್ಟು ಹಬ್ಬಗಳಂತಹ ಸಮಾರಂಭಗಳಲ್ಲಿ ವಯಸ್ಸಿನ ಭೇದವಿಲ್ಲದೆ ಪುಟಾಣಿಗಳಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರೂ ಮೊಗ್ಗಿನ ಜಡೆ ಇಷ್ಟಪಡುತ್ತಾರೆ. ಅಂತಹವರಿಗಾಗಿ ತಾಜಾ ಹೂವಿನಿಂದ ನಾನಾ ರೀತಿಯಲ್ಲಿ ವಿನ್ಯಾಸಗೊಳಿಸಿರುವ ರೆಡಿಮೇಡ್ ಜಡೆ, ನೆಟ್ಟೆಡ್ ಜಡೆ, ಮಿಕ್ಸ್ ಮ್ಯಾಚ್ ಜಡೆ ಹೀಗೆ ಗ್ರಾಹಕರು ಬಯಸುವ ಬಣ್ಣ ಬಣ್ಣದ ಹರಳುಗಳು ಹಾಗೂ ಮತ್ತುಗಳ ಜಡೆ ಜೊತೆಗೆ ಘಮ್ಮೆನ್ನುವ ಮಲ್ಲಿಗೆ, ಆಕರ್ಷಿಸುವ ಗುಲಾಬಿಗಳಷ್ಟೇ ಅಲ್ಲದೆ ಅಪರೂಪದ ಹೂವುಗಳನ್ನೆಲ್ಲಾ ಸೇರಿಸಿ ಇವರು ಮೊಗ್ಗಿನ ಜಡೆ ತಯಾರಿಸುತ್ತಾರೆ. ನಿಮಗೆ ಯಾವ ಸ್ಟೈಲ್ ಇಷ್ಟವಾಗುತ್ತದೋ ಆ ಸ್ಟೈಲ್​ನ ಮೊಗ್ಗಿನ ಜಡೆಯನ್ನು ಇವರು ತಯಾರಿಸಿ ಕೊಡುತ್ತಾರೆ.

ಇನ್ನು ಈ ಮೊಗ್ಗಿನ ಜಡೆಯನ್ನ ಆರ್ಡರ್ ಮಾಡುವುದು ಕೂಡ ಅಷ್ಟೇ ಸುಲಭ. ನೀವು ಫೇಸ್​ಬುಕ್ ಪೇಜ್​​ಗೆ ವಿಸಿಟ್ ಕೊಟ್ಟು ನಿಮಗಿಷ್ಟದ ಮೊಗ್ಗಿನ ಜಡೆಯನ್ನು ಆರ್ಡರ್ ಮಾಡಬಹುದು. ಜೊತೆಗೆ ವಾಟ್ಸ್ ಆ್ಯಪ್​ನಲ್ಲಿ ನಿಮ್ಮ ಸೀರೆಯ ಒಂದು ಫೋಟೋ ಕಳುಹಿಸಿದ್ರೆ ಸಾಕು, ಅದಕ್ಕೆ ಹೊಂದುವಂತಹ ಹಲವು ಮೊಗ್ಗಿನ ಜಡೆಯ ಫೋಟೋಗಳನ್ನ ನಿಮಗೆ ಕಳುಹಿಸುತ್ತಾರೆ. ಅದರಲ್ಲಿ ನಿಮಗೆ ಇಷ್ಟವಾದ ಮೊಗ್ಗಿನ ಜಡೆ ಆಯ್ಕೆ ಮಾಡಿ ಆರ್ಡರ್ ಮಾಡಿದ್ರೆ ಸಾಕು, ಅವರೇ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ.

ಇನ್ನು ಈ ಮೊಗ್ಗಿನ ಜಡೆಯು 2000 ರೂಪಾಯಿಯಿಂದ 3000 ರೂಪಾಯಿಯ ವರೆಗೂ ದುಬಾರಿಯಾಗುತ್ತದೆ. ಯಾವುದೇ ರೀತಿಯ ಡಿಲಿವರಿ ಚಾರ್ಜ್ ಇರೋದಿಲ್ಲ. ಒಂದುವೇಳೆ ಗ್ರಾಹಕರು ಬೆಂಗಳೂರಿನಿಂದ ಹೊರಗಡೆ ಇದ್ದಲ್ಲಿ ಐಸ್ ಬಾಕ್ಸ್ ಸೌಲಭ್ಯ ಕೂಡ ನೀಡುತ್ತಾರೆ. ಹೂವಿನ ಆಭರಣ ಹಾಗೂ ಮೊಗ್ಗಿನ ಜಡೆಗಳನ್ನು ಐಸ್​ಬಾಕ್ಸ್​​ನಲ್ಲಿ ಪ್ಯಾಕ್ ಮಾಡಿ ಅದನ್ನು ಮದುವೆ ನಡೆಯುವ ಮಂಟಪಕ್ಕೆ ತಲುಪಿಸುತ್ತಾರೆ. ಗ್ರಾಹಕರು ಒಂದು ವಾರ ಅಥವಾ 15 ದಿನ ಮುಂಚಿತವಾಗಿ ಆರ್ಡರ್ ನೀಡಬೇಕು. ಆರ್ಡರ್ ಕಡಿಮೆ ಇರುವ ವೇಳೆ ಮಾತ್ರ ಒಂದು ಅಥವಾ ಎರಡು ದಿನ ಮುಂಚಿತವಾಗಿ ನೀಡುವ ಆರ್ಡರ್​ಗಳನ್ನು ಸ್ವೀಕರಿಸುತ್ತಾರೆ.

ಮದುಮಗಳು ಮದುವೆ ದಿನ ತೊಡುವ ಸೀರೆಯ ಬಣ್ಣ, ಸೀರೆ ತೊಡುವ ಶೈಲಿ ಹಾಗೂ ಧರಿಸುವ ಆಭರಣಗಳಿಗೆ ತಕ್ಕಂತೆ ಮೊಗ್ಗಿನ ಜಡೆಗಳನ್ನು ವಿನ್ಯಾಸಗೊಳಿಸುತ್ತೇವೆ. ಅದಕ್ಕಾಗಿ ಗ್ರಾಹಕರು ನಮ್ಮ ವೆಬ್ ವಿಳಾಸ - https://www.facebook.com/Moggina-Jade-By-Renu-738861732908224/timelineನಲ್ಲಿ ಆರ್ಡರ್ ಕೊಡಬೇಕು. ಅದರೊಂದಿಗೆ ವಧು ತೊಡುವ ಸೀರೆ ಹಾಗೂ ಆಭರಣಗಳ ಫೋಟೊಗಳನ್ನು ಕಳುಹಿಸಬೇಕು. ಒಂದು ವೇಳೆ ಅವರ ಬಳಿ ಯಾವುದೇ ರೀತಿಯ ವಿನ್ಯಾಸಗಳು ಇದ್ದಲ್ಲಿ, ಅದನ್ನೂ ಅವರು ಕಳುಹಿಸಬಹುದು. ಅದಕ್ಕೆ ತಕ್ಕಂತೆ ಗ್ರಾಹಕರಿಗೆ ಮೊಗ್ಗಿನ ಜಡೆಗಳನ್ನು ತಯಾರಿಸಿ, ಮದುವೆ ಮನೆಗೆ ಕಳುಹಿಸಿಕೊಡುತ್ತೇವೆ’ ಎಂದು ಹೇಳುತ್ತಾ ಮಾತು ಮುಗಿಸುತ್ತಾರೆ ಬೆಂಗಳೂರು ಶಾಖೆಯ ಮುಖ್ಯಸ್ಥೆ ರೇಣುಕಾ ಪ್ರಕಾಶ್​.

Related Stories