ಸಾಹಸಿ ಪ್ರವಾಸೋದ್ಯಮದಲ್ಲಿ ಹೊಸ ಬೆಳಕು- ಉದ್ಯಮಿಗಳಾದ ಕಮಾಂಡರ್‍ಗಳ ಸಾಹಸಗಾಥೆ

ಟೀಮ್​​ ವೈ.ಎಸ್​​.

0

ದಶಕಗಳ ಹಿಂದೆ ಪ್ರವಾಸೋದ್ಯಮ ಅಷ್ಟೇನೂ ಪ್ರಚಲಿತದಲ್ಲಿರಲಿಲ್ಲ. ಆ ಕ್ಷೇತ್ರಕ್ಕೆ ಒತ್ತು ಕೊಟ್ಟವರೂ ಕಡಿಮೆಯೇ. ಅದರಲ್ಲೂ ಸಾಹಸಿ ಪ್ರವಾಸಿಗರಿಗೆ, ಚಾರಣಿಗರು, ಸೈಕಲ್ ಪಟುಗಳಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಕೇರಳದಂತಹ ಸುಂದರ ನಾಡಿನಲ್ಲೂ ಸಾಹಸಿ ಪ್ರವಾಸೋದ್ಯಮ ಜನಪ್ರಿಯವಾಗಿರಲಿಲ್ಲ. ಸೇನೆಯಲ್ಲಿದ್ದರೂ ಪ್ರವಾಸೋದ್ಯಮವನ್ನೇ ಉಳಿಸಿ ಬೆಳೆಸುವ ಕಾರ್ಯವನ್ನು ಇಬ್ಬರು ಕಮಾಂಡರ್‍ಗಳು ಮಾಡ್ತಿದ್ದಾರೆ. ದೇಶಸೇವೆಯ ಜೊತೆಗೆ ಸಾಹಸಿ ಪ್ರವಾಸಿಗರ ಅಭಿರುಚಿಯನ್ನು ಪೋಷಿಸುತ್ತಿದ್ದಾರೆ. ಸ್ಯಾಮ್ ಹಾಗೂ ಥಾಮಸ್ ಝಕಾರಿಯಾಸ್ ಒಟ್ಟಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಸ್ಯಾಮ್ ಅವರಿಗೆ ಮೊದಲಿನಿಂದ್ಲೂ ಸಮವಸ್ತ್ರದ ಜೊತೆ ಅವಿನಾಭಾವ ಸಂಬಂಧ. ಕೇರಳದ ಸೈನಿಕ್ ಸ್ಕೂಲ್‍ನಲ್ಲೇ ಸ್ಯಾಮ್ ಅಭ್ಯಾಸ ಮಾಡಿದ್ದರು. ಅಲ್ಲಿ ಮಾಡಿದ ಸಾಹಸಗಳು, ಕಠಿಣ ತರಬೇತಿ ಅವರಲ್ಲಿ ಮತ್ತಷ್ಟು ಸ್ಪೂರ್ತಿ ತುಂಬಿತ್ತು. ಅಲ್ಲಿಂದ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಸೇರಿದ ಸ್ಯಾಮ್ ಅವರ ಕನಸಿಗೆ ರೆಕ್ಕೆ ಮೂಡಿತ್ತು. ಯಾಕಂದ್ರೆ ಅಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿತ್ತು. ಹೀಗೆ ಹಲವು ವಿಭಾಗಗಳಲ್ಲಿ ಭಾರತಾಂಬೆಯ ಸೇವೆ ಮಾಡಿದ ಸ್ಯಾಮ್, 1995ರಲ್ಲಿ ಕೇರಳದ ಕೊಚ್ಚಿಗೆ ವರ್ಗವಾಗಿ ಬಂದ್ರು. ಆಗ ಸ್ಯಾಮ್ ಅವರಿಗೆ ಕಮಾಂಡರ್ ಥಾಮಸ್ ಝಕಾರಿಯಾಸ್ ಪರಿಚಯವಾಯ್ತು. ಥಾಮಸ್ ಸೇನೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದರು. ಇಬ್ಬರಿಗೂ ಪ್ರಕೃತಿಯ ಬಗ್ಗೆ ಅದಮ್ಯ ಪ್ರೀತಿಯಿತ್ತು, ಸಾಹಸ ಅನ್ನೋದು ಮೈಗೂಡಿತ್ತು. ಹಾಗಾಗಿ ಸಮಾನ ಮನಸ್ಕರಾದ ಸ್ಯಾಮ್ ಮತ್ತು ಥಾಮಸ್ ಅವರ ನಡುವೆ ಗೆಳೆತನ ಗಾಢವಾಗಿತ್ತು.

2000ನೇ ಇಸ್ವಿಯಲ್ಲಿ ಜೊತೆಯಾಗಿ ಹೊಸ ಉದ್ಯಮವನ್ನು ಆರಂಭಿಸಲು ಸ್ಯಾಮ್ ಹಾಗೂ ಥಾಮಸ್ ನಿರ್ಧರಿಸಿದ್ರು. ಆಗ ಅವರಿಗೆ ಹೊಳೆದಿದ್ದು ಸಾಹಸಿ ಪ್ರವಾಸೋದ್ಯಮ. ನೌಕಾಸೇನೆಯನ್ನು ತೊರೆದ ಇಬ್ಬರೂ ಕೇರಳದಲ್ಲಿ ಕಲಿಪ್ಸೋ ಅಡ್ವೆಂಚರ್ಸ್ ಅನ್ನು ಆರಂಭಿಸಿದ್ರು. ಆಗ ಕೇರಳದಲ್ಲಿ ಸಾಹಸಿ ಪ್ರವಾಸೋದ್ಯಮದಕ್ಕೆ ಪ್ರಾಧಾನ್ಯತೆಯೇ ಇರಲಿಲ್ಲ. ಅದೇನಿದ್ರೂ ಹಿಮಾಲಯದಲ್ಲಿ ಅನ್ನೋ ಭಾವನೆಯಿತ್ತು. ಇದನ್ನು ಬದಲಾಯಿಸಬೇಕೆಂದು ಸ್ಯಾಮ್ ಹಾಗೂ ಥಾಮಸ್ ಪಣತೊಟ್ಟರು.

ಆರಂಭದಲ್ಲಿ ಇದೊಂದು ಕಠಿಣ ಪ್ರಯಾಣ ಅನ್ನೋದು ಇಬ್ಬರಿಗೂ ಅರಿವಿತ್ತು. ಕಲಿಪ್ಸೋ ಅಡ್ವೆಂಚರ್ಸ್‍ಗೆ ಬಂಡವಾಳ ಹೊಂದಿಸುವುದೇ ಕಷ್ಟಕರವಾಗಿತ್ತು. ಸ್ನೇಹಿತರು ಅವರಿವರ ನೆರವಿನಿಂದ ನಾಲ್ಕು ವರ್ಷ ಕಂಪನಿಯನ್ನು ಮುನ್ನಡೆಸಿದ್ರು. ಅಷ್ಟರಲ್ಲಾಗ್ಲೇ ಕಲಿಪ್ಸೋ ದಕ್ಷಿಣಭಾರತದಾದ್ಯಂತ ಹೆಸರು ಮಾಡಿತ್ತು. ಪ್ಯಾರಾಗ್ಲೈಡನಿಂಗ್, ಕಯಾಕಿಂಗ್, ಸೈಕ್ಲಿಂಗ್, ಟ್ರೆಕ್ಕಿಂಗ್ ನಲ್ಲಿ ಆಸಕ್ತಿಯುಳ್ಳ ಸಾಹಸಿಗರೆಲ್ಲ ಕಲಿಪ್ಸೋ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡ್ರು. ಏಕವ್ಯಕ್ತಿ ಹಾಗೂ ತಂಡಗಳ ಪ್ರವಾಸಕ್ಕೂ ಕಲಿಪ್ಸೋ ವ್ಯವಸ್ಥೆ ಮಾಡುತ್ತದೆ. ಸುಮಾರು 150 ಮಂದಿಯ ಸೈಕ್ಲಿಂಗ್ ಪ್ರವಾಸವನ್ನೂ ಆಯೋಜಿಸಿತ್ತು. ಕನ್ಯಾಕುಮಾರಿಯಿಂದ ಮಸ್ಸೂರಿವರೆಗೆ ಅತಿ ದೂರದ ಸೈಕ್ಲಿಂಗ್ ಪ್ರವಾಸವನ್ನೂ ಹಮ್ಮಿಕೊಂಡಿತ್ತು. ಕಲಿಪ್ಸೋ ಅಡ್ವೆಂಚರ್ಸ್‍ನಲ್ಲಿ 32 ಮಂದಿ ಸದಸ್ಯರಿದ್ದಾರೆ. ಇವರಲ್ಲಿ 15 ಜನ ಗೈಡ್‍ಗಳಿದ್ದಾರೆ.

ಕಮಾಂಡರ್​ ಸ್ಯಾಮ್​​​​
ಕಮಾಂಡರ್​ ಸ್ಯಾಮ್​​​​

ಬರೀ ಕೇರಳ ಮಾತ್ರವಲ್ಲ, ಗೋವಾ, ರಾಜಸ್ತಾನ ಸೇರಿದಂತೆ ವಿವಿಧೆಡೆ ಕಲಿಪ್ಸೋ ತನ್ನ ಸೇವೆಯನ್ನು ವಿಸ್ತರಿಸಿದೆ. ಕಲಿಪ್ಸೋದ ಬಹುತೇಕ ಗ್ರಾಹಕರೆಲ್ಲ ವಿದೇಶೀಯರೇ. ದೊಡ್ಡ ದೊಡ್ಡ ಕಂಪನಿಗಳಿಂದಲೂ ಕಲಿಪ್ಸೋಗೆ ಪಾಲುದಾರಿಕೆಯ ಆಹ್ವಾನ ಬಂದಿತ್ತು. ಆದರೆ ಸ್ವ ಪ್ರಯತ್ನದಿಂದ್ಲೇ ಮುಂದೆ ಬರಬೇಕೆಂಬ ಹಂಬಲ ಹೊಂದಿದ್ದ ಸ್ಯಾಮ್ ಹಾಗೂ ಥಾಮಸ್ ಕಲಿಪ್ಸೋವನ್ನು ಯಾವುದೇ ಸಂಸ್ಥೆಯ ಜೊತೆಗೂ ವಿಲೀನಗೊಳಿಸಲು ಒಪ್ಪಲಿಲ್ಲ. ಕಾರ್ಪೊರೇಟ್ ಜಗತ್ತನ್ನು ಸೇರಿದ್ದರೆ ಕೈತುಂಬಾ ಸಂಪಾದಿಸುವ ಅವಕಾಶ ಇವರಿಗಿತ್ತು. ಆದ್ರೆ ಹಣಕ್ಕಿಂತ ಸೇವೆ ಮುಖ್ಯ ಅನ್ನೋ ಮನೋಭಾವನೆ ಇವರದ್ದು. ಸಾಹಸಿ ಪ್ರವಾಸಿಗರಿಗೆ ಉತ್ತೇಜನ ನೀಡುವುದರಲ್ಲೇ ಸ್ಯಾಮ್ ಹಾಗೂ ಥಾಮಸ್ ತೃಪ್ತಿ ಕಾಣುತ್ತಿದ್ದಾರೆ. ವಿದೇಶೀ ಪ್ರವಾಸಿಗರಿಗಂತೂ ಕಲಿಪ್ಸೋ ಹೇಳಿಮಾಡಿಸಿದಂಥ ಜಾಗ. ತಮ್ಮ ಸಂಸ್ಥೆಯ ಮೂಲಕ ಭಾರತದ ಪ್ರವಾಸಿ ತಾಣಗಳನ್ನು ಸ್ಯಾಮ್ ಹಾಗೂ ಥಾಮಸ್ ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಈ ಮೂಲಕವೂ ದೇಶ ಸೇವೆ ಮಾಡುತ್ತಿದ್ದಾರೆ ಅನ್ನೋದ್ರಲ್ಲಿ ಉತ್ಪ್ರೇಕ್ಷೆಯಿಲ್ಲ.

ಸೇನೆಯಲ್ಲಿದ್ದಾಗ್ಲೇ ಶಿಸ್ತು, ಸಾಹಸ ಹಾಗೂ ಪರಿಶ್ರಮ ಸ್ಯಾಮ್ ಹಾಗೂ ಥಾಮಸ್ ಅವರಿಗೆ ಮೈಗೂಡಿತ್ತು. ಅದನ್ನೆಲ್ಲ ಕಲಿಪ್ಸೋಗೆ ಧಾರೆಯೆರೆದಿರುವ ಅವರು ಯಶಸ್ವಿ ಉದ್ಯಮಿಗಳು ಎನಿಸಿಕೊಂಡಿದ್ದಾರೆ. ಈ ಮೂಲಕ ನಿಸರ್ಗಕ್ಕೂ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕಮಾಂಡರ್ ಸ್ಯಾಮ್ ಹಾಗೂ ಕಮಾಂಡರ್ ಥಾಮಸ್ ಅವರ ಜೀವನಗಾಥೆ ಯುವಜನತೆಗೆ ಪ್ರೇರಣೆಯಾಗಲಿದೆ.

Related Stories

Stories by YourStory Kannada