ಜಗತ್ತಿನ ಅತಿ ಹಿರಿಯ ಶಾರ್ಪ್ ಶೂಟರ್ : 'ರಿವಾಲ್ವರ್ ದಾದಿ'

ಟೀಂ ವೈ.ಎಸ್.ಕನ್ನಡ 

1

82 ವರ್ಷದ ಚಂದ್ರೋ ತೋಮರ್ ಅವರಿಗೆ ವಯಸ್ಸು ಅನ್ನೋದು ಕೇವಲ ನಂಬರ್ ಅಷ್ಟೆ. ರಿವಾಲ್ವರ್ ದಾದಿ ಅಂತಾನೇ ಈಕೆ ಫೇಮಸ್. ಶೂಟಿಂಗ್ನಲ್ಲಿ ಚಂದ್ರೋ ಅವರನ್ನು ಮೀರಿಸುವವರೇ ಇಲ್ಲ. 25ಕ್ಕೂ ಹೆಚ್ಚು ಚಾಂಪಿಯನ್​ಶಿಪ್​ಗಳನ್ನು ಗೆದ್ದುಕೊಂಡ ಅತ್ಯದ್ಭುತ ಶಾರ್ಪ್ ಶೂಟರ್ ಈಕೆ. ವಿಶ್ವದ ಅತಿ ಹಿರಿಯ ಶಾರ್ಪ್ ಶೂಟರ್ ಎಂಬ ಹೆಗ್ಗಳಿಕೆಯೂ ಇವರಿಗಿದೆ.

ಚಂದ್ರೋ ತೋಮರ್ ಅವರದ್ದು ಉತ್ತರಪ್ರದೇಶದ ಬಾಗ್ಪತ್ ಜಿಲ್ಲೆಯ ಜೊಹ್ರಿ ಗ್ರಾಮ. ಚಂದ್ರೋ ಅವರಿಗೆ 6 ಜನ ಮಕ್ಕಳು, 15 ಮೊಮ್ಮಕ್ಕಳಿದ್ದಾರೆ. 65 ವರ್ಷದವರಿದ್ದಾಗ ಅವರು ಶೂಟಿಂಗ್ ತರಬೇತಿ ಪಡೆಯಲು ಆರಂಭಿಸಿದ್ರು. ಜೊಹ್ರಿ ರೈಫಲ್ ಕ್ಲಬ್ ಸೇರಲು ಬಯಸಿದ್ದ ಮೊಮ್ಮಗಳು, ಚಂದ್ರೋ ಅವರಿಗೆ ಸಾಥ್ ನೀಡಿದ್ದಳು. ಪಿಸ್ತೂಲ್ ಕೊಂಡ್ಕೊಂಡು ಶೂಟಿಂಗ್ ಅಭ್ಯಾಸ ಶುರುಮಾಡಿದ ಚಂದ್ರೋ ತಮ್ಮ ಅದ್ಭುತ ಕೌಶಲ್ಯದಿಂದ ಎಲ್ಲರನ್ನೂ ನಿಬ್ಬೆರಗಾಗಿಸಿದ್ರು.

ಅಂದಿನಿಂದ ಇಂದಿನವರೆಗೂ ಚಂದ್ರೋ ತೋಮರ್ ಹಿಂದಿರುಗಿ ನೋಡಿದ್ದೇ ಇಲ್ಲ. ``ಮೊದಲ ಬಾರಿ ಪಿಸ್ತೂಲ್ ಹಿಡಿದು ಶೂಟ್ ಮಾಡಿದ್ಲಾಗ್ಲೇ ನಾನು ಗುರಿಮುಟ್ಟುವಲ್ಲಿ ಯಶಸ್ವಿಯಾದೆ. ನನ್ನ ವಯಸ್ಸು, ಪ್ರತಿಭೆ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಅನ್ನೋದನ್ನು ಎಲ್ಲರಿಗೂ ತೋರಿಸಿಕೊಟ್ಟೆ. ಯಾವುದೇ ಕೆಲಸವನ್ನಾದ್ರೂ ಮನಸ್ಸಿಟ್ಟು ಮಾಡಿದ್ರೆ ಅದು ಅಸಾಧ್ಯವಲ್ಲ'' ಎನ್ನುತ್ತಾರೆ ರಿವಾಲ್ವರ್ ದಾದಿ.

ಚಂದ್ರೋ ತೆಗೆದುಕೊಂಡ ಈ ದಿಟ್ಟ ನಿರ್ಧಾರ ಮತ್ತು ಅವರ ಜನಪ್ರಿಯತೆ ಇತರ ಮಹಿಳೆಯರಲ್ಲಿ ಸ್ಥೈರ್ಯ ಹೆಚ್ಚಿಸಿದೆ. ಅವರ ಗ್ರಾಮದಲ್ಲಿ ಕ್ರೀಡಾ ಕ್ರಾಂತಿಗೆ ಕಾರಣವಾಗಿದೆ. ಈಗ ಜೊಹ್ರಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮಹಿಳೆಯರು ಮನೆಯ ನಾಲ್ಕು ಗೋಡೆಗಳಿಂದ ಹೊರಬಂದು ರೈಫಲ್ ಕ್ಲಬ್​​ನಲ್ಲಿ ಶೂಟಿಂಗ್ ಅಭ್ಯಾಸ ಮಾಡ್ತಿದ್ದಾರೆ. 2010ರಲ್ಲಿ ಚಂದ್ರೋ ಅವರ ಪುತ್ರಿ ರೈಫಲ್ ಮತ್ತು ಪಿಸ್ತೂಲ್ ವಿಶ್ವಕಪ್​ನಲ್ಲಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದರು. ಹಂಗ್ರಿ ಮತ್ತು ಜರ್ಮನಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಚಂದ್ರೋ ಅವರ ಮೊಮ್ಮಗಳು ನೀತು ಸೋಲಂಕಿ ಕೂಡ ಪಾಲ್ಗೊಂಡಿದ್ದಾಳೆ.

ಚಂದ್ರೋ ತೋಮರ್ ಮಾಡಿರುವ ಸಾಧನೆ ಅವರ ಅತ್ತಿಗೆ ಪ್ರಕಾಶಿ ತೋಮರ್​ ಅವರಿಗೂ ಸ್ಪೂರ್ತಿಯಾಗಿದೆ. ಆಕೆಗೆ ಈಗ 77 ವರ್ಷ, ಚಂದ್ರೋ ದಾರಿಯಲ್ಲೇ ಅವರೂ ಸಾಗ್ತಿದ್ದಾರೆ. ಒಮ್ಮೆ ಆಕೆ ಡಿಎಸ್ಪಿಯನ್ನೇ ಶೂಟಿಂಗ್ ಸ್ಪರ್ದೆಯಲ್ಲಿ ಸೋಲಿಸಿದ್ದರಂತೆ. ಹಿರಿಯ ವಯಸ್ಸಿನ ಮಹಿಳೆ ವಿರುದ್ಧ ಸೋತು ಅವಮಾನ ಅನುಭವಿಸಿದ ಡಿಎಸ್ಪಿ ಮುಜುಗರದಿಂದ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೇ ಬಂದಿರಲಿಲ್ಲ ಅಂತಾ ಭಾರತೀಯ ಕ್ರೀಡಾ ಪ್ರಾಧಿಕಾರದ ಕೋಚ್ ನೀತು ಶೋರನ್ ತಿಳಿಸಿದ್ದಾರೆ.

ಒಟ್ಟಿನಲ್ಲಿ 82ರ ಹರೆಯದಲ್ಲೂ ಯಶಸ್ವಿ ಶಾರ್ಪ್ ಶೂಟರ್ ಎನಿಸಿಕೊಂಡಿರುವ ರಿವಾಲ್ವರ್ ದಾದಿಗೆ ಹ್ಯಾಟ್ಸಾಫ್ ಹೇಳಲೇಬೇಕು. 

ಇದನ್ನೂ ಓದಿ..

ಶವ ಸಂಸ್ಕಾರಕ್ಕೂ ಆನ್​ಲೈನ್ ಬುಕ್ಕಿಂಗ್

"ಧ್ರುವ"ತಾರೆ ಬಗ್ಗೆ ನಿಮಗೆಷ್ಟು ಗೊತ್ತು..?