ಸಮರ್ಥ ಕಾರ್ಯ ನಿರ್ವಹಣೆಯಿಂದ ಓಯೋ ರೂಮ್ಸ್ ಸಂಸ್ಥೆಯ ಅವಿಭಾಜ್ಯ ಅಂಗವಾದ ಶ್ರೇಯ್ ಗುಪ್ತಾ

ಟೀಮ್​ ವೈ.ಎಸ್​. ಕನ್ನಡ

ಸಮರ್ಥ ಕಾರ್ಯ ನಿರ್ವಹಣೆಯಿಂದ ಓಯೋ ರೂಮ್ಸ್ ಸಂಸ್ಥೆಯ ಅವಿಭಾಜ್ಯ ಅಂಗವಾದ ಶ್ರೇಯ್ ಗುಪ್ತಾ

Wednesday December 23, 2015,

4 min Read


ಭಾರತದ ಹಲವು ಮೆಟ್ರೋಪಾಲಿಟನ್ ನಗರಗಳಲ್ಲಿ ಕೆಂಪು ಬಣ್ಣದ ಬೋರ್ಡ್‌ಗಳಲ್ಲಿ ಬಿಳಿ ಬಣ್ಣದ ಓಯೋ ಎಂಬ ಅಕ್ಷರಗಳು ಕಂಡುಬರುತ್ತದೆ. ಓಯೋ ಎಂಬ ಸಂಸ್ಥೆ ಇಷ್ಟು ವೇಗವಾಗಿ ಪ್ರಚಾರ ಪಡೆದುಕೊಳ್ಳಲು 25 ವರ್ಷದ ಓರ್ವ ಯುವಕ ಪ್ರಮುಖ ಕಾರಣ.

image


ಶ್ರೇಯ್ ಅವರು ನಮ್ಮ ಬಳಿ ಕೇವಲ 20 ಪ್ರಾಪರ್ಟಿಗಳಿದ್ದಾಗ ನಮ್ಮ ಜೊತೆ ಸೇರಿಕೊಂಡರು. ಅವರು ನಮ್ಮ ಹಲವು ಪ್ರಯತ್ನಗಳ ಯಶಸ್ಸಿಗೆ ಕಾರಣರಾಗಿದ್ದಾರೆ. ಓಯೋ ಸಂಸ್ಥೆಯ ಸ್ಟ್ಯಾಂಡರ್ಡ್‌ಗಳಿಗನುಗುಣವಾಗಿ ಹೊಸ ಪ್ರಾಪರ್ಟಿಗಳನ್ನು ಪರಿವರ್ತಿಸುವುದರಲ್ಲಿ ಅವರ ಪಾತ್ರ ಹಿರಿದು. ನಂತರ ಅವರು ವಿಸ್ತರಣಾ ತಂಡಕ್ಕೆ ಸೇರ್ಪಡೆಯಾದರು. ಕೇವಲ 6 ತಿಂಗಳಲ್ಲೇ 100ಕ್ಕೂ ಹೆಚ್ಚು ನಗರಗಳಲ್ಲಿ ನಾವು ನಮ್ಮ ಶಾಖೆಯನ್ನು ತೆರೆದಿದ್ದೇವೆ ಎಂದು ಸ್ಟಾರ್ಟ್ ಅಪ್‌ನ ಅದ್ಭುತ ಕೆಲಸಗಾರ ಶ್ರೇಯ್ ಗುಪ್ತಾ ಅವರನ್ನು ಹೊಗಳುತ್ತಾರೆ ರಿತೇಶ್. ರಿತೇಶ್ ಓಯೋ ರೂಮ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಓ.

ಮನೆಯಿಂದ ಹೊರಬಂದು ದೂರದೂರುಗಳಲ್ಲಿ ನೆಲೆಸುವ ಜನರಿಗೆ ಸಮರ್ಪಕ ರೂಂ ವ್ಯವಸ್ಥೆ ಮಾಡುವುದು ಓಯೋ ರೂಮ್ಸ್ ಸಂಸ್ಥೆಯ ಗುರಿ. 2014ರ ಜೂನ್‌ನಲ್ಲಿ ಶ್ರೇಯ್ ಓಯೋ ರೂಮ್ಸ್ ಸಂಸ್ಥೆಗೆ ಸೇರಿದರು. ಓಯೋ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡುವ ಭರವಸೆ ನೀಡುತ್ತಾರೆ ಶ್ರೇಯ್. ವಿಸ್ತರಣಾ ಸ್ಟ್ರಾಟೆಜಿ ಮತ್ತು ವ್ಯವಸ್ಥೆ ರೂಪಿಸುವುದು ಮತ್ತು ರೂಪಿಸಿದ ವ್ಯವಸ್ಥೆ ಜಾರಿಗೊಳ್ಳುವಂತೆ ಮಾಡುವುದು ಶ್ರೇಯ್ ಅವರ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆ. ಶ್ರೇಯ್ ವಿಚಾರದಲ್ಲಿ ಓಯೋ ಸಂಸ್ಥೆಯ ಸಂಸ್ಥಾಪಕ ರಿತೇಶ್ ಅಗರ್‌ವಾಲ್ ಅವರಿಗೆ ಮೊದಲಿನಿಂದಲೂ ಧೈರ್ಯ, ನಂಬಿಕೆ ಇದೆ. ಶ್ರೇಯ್ ರಿತೇಶ್‌ರನ್ನು ಸಂಪರ್ಕಿಸಿದ್ದು ಟ್ವಿಟ್ಟರ್ ಮೂಲಕ. ಓಯೋ ಸಂಸ್ಥೆ ಗಳಿಸಿದ ಹೂಡಿಕೆಗೆ ಶುಭ ಹಾರೈಸುವ ಸಂದರ್ಭದಲ್ಲಿ. ಇದಾಗಿ ಒಂದೇ ತಿಂಗಳಿನಲ್ಲಿ ಶ್ರೇಯ್ ಸಂಸ್ಥೆಯ 15 ಮಂದಿಯೊಟ್ಟಿಗೆ ಸೇರಿಕೊಂಡಿದ್ದರು.

ಓಯೋ ರೂಮ್ಸ್ ಮುಖಾಂತರ ಜನರಿಗೆ ನಾವೇನು ಮಾಡುತ್ತಿದ್ದೇವೆ ಎಂದು ಅರ್ಥವಾಗುವುದಕ್ಕೆ ಮೊದಲೇ ಶ್ರೇಯ್‌ಗೆ ಯಶಸ್ಸಿನ ಬಗ್ಗೆ ನಂಬಿಕೆಯಿತ್ತು. ಅವರಿಗೆ ಸಮಸ್ಯೆಗಳ ಅರಿವಿತ್ತು. ಸಮಸ್ಯೆಗಳನ್ನು ಪರಿಹರಿಸುವತ್ತ ಅವರು ಚಿಂತನೆ ನಡೆಸಿದ್ದರು ಎಂದಿದ್ದಾರೆ ಶ್ರೇಯ್.

18 ತಿಂಗಳಲ್ಲಿ ಓಯೋ ರೂಮ್ಸ್ ಸಂಸ್ಥೆ ಒಂದು ನಗರದ 12 ಹೋಟೆಲ್‌ಗಳ 200 ರೂಮ್‌ಗಳನ್ನು ಬುಕ್ ಮಾಡಿಕೊಂಡಿದೆ. 150 ನಗರಗಳಲ್ಲಿ 3500ಕ್ಕೂ ಹೆಚ್ಚು ಹೋಟೆಲ್‌ಗಳ 40,000 ರೂಮ್‌ಗಳನ್ನು ಓಯೋ ಸಂಸ್ಥೆ ಪಡೆದುಕೊಂಡಿದೆ. ಇದಲ್ಲದೇ ಓಯೋ ವಿ ಎಂಬ ಹೊಸ ಯೋಜನೆಯನ್ನು ಮಹಿಳೆಯರಿಗಾಗಿಯೇ ಸಂಸ್ಥೆ ಬಿಡುಗಡೆ ಮಾಡಿದೆ. 18 ತಿಂಗಳಲ್ಲಿ ಈ ಸಾಧನೆ ಸಾಮಾನ್ಯವಾದುದೇನಲ್ಲ ಎಂದಿದ್ದಾರೆ ಶ್ರೇಯ್.

ಜೀವನದ ಪ್ರಮುಖ ಹಂತಗಳು

ಶ್ರೇಯ್ ಅವರು ಹಲವು ವರ್ಷಗಳು ವಾರಣಾಸಿಯಲ್ಲಿ ವಾಸವಿದ್ದರು. ಕಳೆದ ದಶಕದಲ್ಲಿ ಗುರ್‌ಗಾಂವ್‌ನಲ್ಲಿದ್ದರು. ದೆಹಲಿಯ ಶ್ರೀರಾಮ್ ಕಾಲೇಜ್‌ ಆಫ್‌ ಕಾಮರ್ಸ್‌ ನಲ್ಲಿ ಪದವಿ ಪಡೆದ ಬಳಿಕ 2011ರಲ್ಲಿ ಬೈನ್ ಎಂಡ್ ಕೋ ಸಂಸ್ಥೆಯಲ್ಲಿ ವೃತ್ತಿ ಜೀವನ ಆರಂಭಿಸಿದರು. 2 ವರ್ಷಗಳ ಬಳಿಕ ಅವರು ಲೋಕಸಭಾ ಚುನಾವಣೆಗಾಗಿ ಬಿಜೆಪಿ ಪರ ಕೆಲಸ ಮಾಡಿದರು. ಆರಾಮದಾಯಕ ಜೀವನ ನಡೆಸಲು ಸಾಧ್ಯವಿದ್ದ, ಸಂಬಳ ತರುತ್ತಿದ್ದ ಕೆಲಸ ಬಿಟ್ಟು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಶ್ರೇಯ್ ಅವರ ಜೀವನದ ಪ್ರಮುಖ ಘಟ್ಟ. ಇದು ಸಮಸ್ಯೆಗಳನ್ನೆದುರಿಸಲು ಮತ್ತು ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ಸಹಕಾರಿಯಾಯಿತು. ನಂತರ ಆಗಷ್ಟೇ ಆರಂಭವಾಗಿದ್ದ ಓಯೋ ಸಂಸ್ಥೆಯನ್ನು ಸೇರಿಕೊಂಡರು ಶ್ರೇಯ್.

ಶ್ರೇಯ್ ಅವರ ಜೀವನದ ಇನ್ನೊಂದು ಪ್ರಮುಖ ಘಟ್ಟ ಎಂದರೆ 2013ರ ಹಾಲ್ಫ್ ಮ್ಯಾರಥಾನ್‌ನಲ್ಲಿ ಓಡಿದ್ದು. ಮ್ಯಾರಥಾನ್‌ನಲ್ಲಿ ಭಾಗಿಯಾದದ್ದು ಅವರಿಗೆ ತರಬೇತಿಯ ಪ್ರಾಮುಖ್ಯತೆ ಅರಿತುಕೊಳ್ಳಲು ಮತ್ತು ಜೀವನದಲ್ಲಿ ಮುಂದುವರೆಯಲು ಅಗತ್ಯವಿರುವ ಸ್ಫೂರ್ತಿಯನ್ನು ಪಡೆದುಕೊಳ್ಳಲು ಸಹಕಾರಿಯಾಯಿತು.

ಸ್ಟಾರ್ಟ್ ಅಪ್‌ನಲ್ಲಿ ಕಾರ್ಯಾರಂಭ

ಯಾವುದೇ ಸ್ಟಾರ್ಟ್‌ ಅಪ್‌ನಲ್ಲಿ ಕೆಲಸವಾರಂಭಿಸುವುದಕ್ಕೂ ಮೊದಲು ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡಬೇಕು. ಆಗ ಹೊಸ ಹೊಸ ಕಾರ್ಯವಿಧಾನಗಳನ್ನು ಕಲಿಯಬಹುದು. ಇದು ಉದ್ಯಮಕ್ಕೆ ಸಹಾಯಕವಾಗಿರುತ್ತದೆ ಎಂಬುದು ಶ್ರೇಯ್‌ ಅವರ ನಂಬಿಕೆ. ಈ ಕೌಶಲ್ಯಗಳು ಕಾರ್ಯಯೋಜನೆಯನ್ನು ರೂಪಿಸಲು ಸಹಕರಿಸುತ್ತದೆ. ಇದರಿಂದ ಉದ್ಯಮಗಳಲ್ಲಿ ಲೀಲಾಜಾಲವಾಗಿ ಕಾರ್ಯನಿರ್ವಹಿಸಬಹುದಾಗಿರುತ್ತದೆ. ಕಾರ್ಪೋರೇಟ್ ವಲಯದಲ್ಲಿ ಸಮಸ್ಯೆಗಳನ್ನು ಪರಿಹರಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಕಲಿಯುವ ಅವಕಾಶವಿರುತ್ತದೆ. ಹೀಗೆ ಕಲಿತ ಅಂಶಗಳೇ ನಾನು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾದವು. ಇವುಗಳೂ ಸೇರಿದಂತೆ ಅನೇಕ ಉತ್ತಮ ಗುಣಗಳಿಂದ ಯಶಸ್ಸು ಸಾಧಿಸಲು, ಸ್ಟಾರ್ಟ್ ಅಪ್ ಒಂದು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂಬುದು ಶ್ರೇಯ್‌ ಅವರ ಅನುಭವದ ಮಾತು.

image


ಓಯೋದಲ್ಲಿ ಕಾರ್ಯನಿರ್ವಹಿಸಲಾರಂಭಿಸಿದ ಆರಂಭದ ದಿನಗಳ ಕುರಿತು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಶ್ರೇಯ್. “ಆಗ ಓಯೋ ಸಂಸ್ಥೆಯ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿದ್ದವು. 2014ರ ಆಗಸ್ಟ್‌ ನಲ್ಲಿ 200 ಮಂದಿಯಿಂದ ರೂಂಗಳಿಗಾಗಿ ಬೇಡಿಕೆ ಪಡೆದಿತ್ತು ಓಯೋ ಸಂಸ್ಥೆ. ಸಂಸ್ಥೆಯಿಂದ 10ಕ್ಕೂ ಹೆಚ್ಚು ರೂಂಗಳನ್ನು 48 ಗಂಟೆಗಳಲ್ಲಿ ಬುಕ್‌ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಆಗ ಸಂಸ್ಥೆಯ ಬಳಿ ಕೇವಲ 300 ರೂಂಗಳಿದ್ದವು. ಆದರೆ ಆ ಪೈಕಿ 50 ರೂಂಗಳಷ್ಟೇ ಲಭ್ಯವಿದ್ದವು ಮತ್ತು ಸಿದ್ಧವಿದ್ದವು. 100ಕ್ಕೂ ಹೆಚ್ಚು ರೂಂಗಳಿಗೆ ಬೇಡಿಕೆ ಎಂದರೆ ಸಂಸ್ಥೆಯ ಪ್ರತಿನಿತ್ಯದ ಮಾರಾಟದ ಶೇ.40ರಷ್ಟು ಆದಾಯ. ಯಾವುದೇ ಕಾರಣಕ್ಕೂ ಈ ಆದಾಯವನ್ನು ಬಿಟ್ಟುಕೊಡಲು ಸಂಸ್ಥೆ ಸಿದ್ಧವಿರಲಿಲ್ಲ. ಕೂಡಲೇ ಉದ್ಯಮ ಅಭಿವೃದ್ಧಿ ತಂಡ ಕಾರ್ಯಕ್ಷೇತ್ರಕ್ಕಿಳಿಯಿತು. ಗುರ್‌ಗಾಂವ್‌ನ ಡಿಎಲ್‌ಎಫ್‌ನ ಫೇಸ್ 2ನಲ್ಲಿ ಹೊಸದಾಗಿ 3 ಪ್ರಾಪರ್ಟಿಗಳಿಗೆ ಪಾಲುದಾರಿಕೆ ಪಡೆಯಿತು. ಸಂಜೆ 5 ಗಂಟೆಯ ವೇಳೆಗೆ ಪ್ರಾಪರ್ಟಿಯಲ್ಲಿ ನಮ್ಮ ಪಾಲುದಾರಿಕೆ ಲಭಿಸಿತು. ಇದರಿಂದ ಕೂಡಲೇ ನಮಗೆ ಅಗತ್ಯವಿದ್ದಷ್ಟು ರೂಂಗಳು ಅತಿಥಿಗಳಿಗೆ ಲಭ್ಯವಾಯಿತು. ರೂಂಗಳಿಗೆ ಸಮರ್ಪಕವಾದ ರೂಪುರೇಷೆ ನೀಡುವ ಕೆಲಸ ಮಾರನೆಯ ದಿನ ಬೆಳಗ್ಗೆ ಆರಂಭವಾಯಿತು. ಬೆಳಗ್ಗೆ 10 ಗಂಟೆಯ ವೇಳೆಗೆ ಓರ್ವ ನೌಕರ ಕುಶನ್‌ಗಳು, ಲಿನೆನ್ ಮತ್ತು ಟವಲ್‌ಗಳ ವ್ಯವಸ್ಥೆ ಮಾಡುವಲ್ಲಿ ನಿರತನಾದ. ನಂತರ ಆ 50ಕ್ಕೂ ಹೆಚ್ಚು ರೂಂಗಳನ್ನು ಸ್ವಚ್ಛಗೊಳಿಸುವ ಮತ್ತು ಮಾರನೆಯ ದಿನ ಬರುವ ಅತಿಥಿಗಳಿಗೆ ಸಿದ್ಧಪಡಿಸುವತ್ತ ಗಮನಹರಿಸಲಾಯಿತು. ತಂಡ ಇನ್ನೊಬ್ಬ ಸದಸ್ಯ ಹಗಲು ರಾತ್ರಿ ಬೋರ್ಡ್ ತಯಾರಿಸುವವನ ಜೊತೆ ಸೇರಿ ಕೆಲಸ ಮಾಡಿ ಓಯೋ ಡಾಲ್‌ಲೂಪ್ಸ್ ಗಳನ್ನು ಸಿದ್ಧಗೊಳಿಸುವಲ್ಲಿ ನಿರತನಾದ. ಇವುಗಳು ಆ ದಿನ ಮಧ್ಯಾಹ್ನ 1 ಗಂಟೆಯ ವೇಳೆಗೆ ಸಿದ್ಧವಾದವು. ಈ ವೇಳೆಗೆ ನಮ್ಮ ಅತಿಥಿಗಳು ಬರಲು ಕೇವಲ 2 ಗಂಟೆಗಳ ಸಮಯವಷ್ಟೇ ಬಾಕಿ ಉಳಿದಿತ್ತು. ಎಲ್ಲಾ ರೂಂಗಳು ಸ್ವಚ್ಛವಾಗಿದೆಯೇ ಇಲ್ಲವೇ, ಅಲ್ಲಿ ಸಮರ್ಪಕ ವ್ಯವಸ್ಥೆ ಇದೆಯೇ ಇಲ್ಲವೇ ಎಂಬುದರ ಕುರಿತು ಶ್ರೇಯ್ ಮೇಲ್ವಿಚಾರಣೆ ನಡೆಸಿದರು. ಇನ್ನು ಪ್ರಾಪರ್ಟಿಗೆ ಸಂಬಂಧಿಸಿದ ಉಳಿದ ಕೆಲಸಗಳನ್ನು ತಂಡದ ಇತರ ಸದಸ್ಯರು ನಿರ್ವಹಿಸಿದರು. ಸ್ವಚ್ಛತಾ ಕಾರ್ಯಗಳು ಸಂಜೆ 4 ಗಂಟೆಗೆ ಆರಂಭವಾಗಿ ಮಾರನೇ ದಿನದ ಮುಂಜಾನೆ 1 ಗಂಟೆಯವರೆಗೆ ಮುಂದುವರೆಯಿತು. ನಂತರ ರೂಂಗಳು ಸಂಪೂರ್ಣವಾಗಿ ಸಿದ್ಧವಾದವು. ಕೊನೆಯಲ್ಲಿ 6 ಜನರಿದ್ದ ನಮ್ಮ ತಂಡದವರು ಆ ಮೂರು ಹೊಸ ಪ್ರಾಪರ್ಟಿಗಳನ್ನು ಹೊಸ ಹೋಟೆಲ್‌ಗಳಾಗಿ ಪರಿವರ್ತಿಸುವಲ್ಲಿ, ಅದನ್ನು ನಮ್ಮ ಅತಿಥಿಗಳಿಗೆ ಒದಗಿಸುವಲ್ಲಿ ಯಶಸ್ವಿಯಾದರು. ಈ ರೀತಿಯ ವೇಗವಾಗಿ ಕೆಲಸ ಮಾಡಿದ ಅನುಭವ ನಮಗೆ ಇದುವರೆಗೆ ಸಹಕಾರಿಯಾಗಿದೆ”ಎಂದಿದ್ದಾರೆ ಶ್ರೇಯ್.

ಯಾವುದೇ ಸಂಸ್ಥೆಗೆ ಸರಿಯಾದ ತಂಡ ಇರುವುದು ಅತ್ಯಂತ ಪ್ರಮುಖವಾದ ಅಂಶ ಮತ್ತು ಏನೇ ಆಗಲಿ ಕೆಲಸ ಪೂರೈಸುವ ಮನೋಭಾವ ಹೊಂದಿರುವ ಸದಸ್ಯರು ನಮ್ಮ ತಂಡದಲ್ಲಿದ್ದಾರೆ. ಇದು ಸಂಸ್ಥೆಯನ್ನು ಅಸಾಧಾರಣವಾಗಿ ಬೆಳೆಸುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಶ್ರೇಯ್.

ಸಂಸ್ಥಾಪಕರ ಮಾತು

ಗೊಂದಲ ನಿವಾರಣೆ ಮಾಡುವುದು ಮತ್ತು ಗೊಂದಲ ಪರಿಹರಿಸಿ ಪ್ರಕ್ರಿಯೆಗೊಳಪಡಿಸುವಂತಹ ಕೆಲಸಗಳನ್ನು ಶ್ರೇಯ್ ಸಮರ್ಥವಾಗಿ ನಿಭಾಯಿಸಬಲ್ಲರು. ಇದರಿಂದ ಸ್ಟಾರ್ಟ್ ಅಪ್‌ಗೆ ಸಾಕಷ್ಟು ಸಹಕಾರಿಯಾಗುತ್ತದೆ ಎಂದು ಶ್ರೇಯ್‌ರ ಕಾರ್ಯವಿಧಾನವನ್ನು ಶ್ಲಾಘಿಸುತ್ತಾರೆ ರಿತೇಶ್. ಯಾವಾಗ ಬದಲಾವಣೆ ತರಬೇಕು ಮತ್ತು ಕೆಲಸ ಸಾಧಿಸಬೇಕಾದರೆ ಏನು ಮಾಡಬೇಕು ಎಂಬ ವಿಚಾರಗಳು ಶ್ರೇಯ್‌ಗೆ ಚೆನ್ನಾಗಿ ತಿಳಿದಿದೆ. ಓಯೋದಲ್ಲಿ ರೂಪಿತವಾಗುವ ಯಾವುದೇ ಯೋಜನೆಯಾದರೂ ಅದರ ಹಿಂದೆ ಸಮರ್ಥವಾದ ಮೂಲಭೂತ ಪ್ರಕ್ರಿಯೆ ನಡೆದಿರುತ್ತದೆ. ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಜಾರಿಗೆ ತರುವಂತೆ ಕಾರ್ಯನಿರ್ವಹಿಸಲಾಗುತ್ತದೆ. ಅಕಸ್ಮಾತ್ ಯೋಜನೆಯಲ್ಲಿ ತೊಡಕುಂಟಾದರೆ ಅದನ್ನು ನಿವಾರಿಸಿಕೊಂಡು ಕಾರ್ಯನಿರ್ವಹಿಸಲು ಕೆಲ ಕಾಲಗಳ ಅಂತರ ನೀಡುತ್ತೇವೆ. ಹೀಗೆ ಕೆಲಸ ಮಾಡುವುದರಿಂದ ವೇಗವಾಗಿ ಬೆಳೆಯಲು ಸಾಧ್ಯವಾಗಿದೆ. ಶ್ರೇಯ್ ಕೂಡ ಇದೇ ನಿಟ್ಟಿನಲ್ಲಿ ಕೆಲಸ ಮಾಡುವುದರಿಂದ ಅವರೊಂದಿಗೆ ಕೆಲಸ ಮಾಡಲು ಸಂಸ್ಥೆಯಲ್ಲಿರುವ ಎಲ್ಲರಿಗೂ ಸಂತೋಷ ಲಭಿಸುತ್ತದೆ ಎನ್ನುತ್ತಾರೆ ರಿತೇಶ್.

ಶ್ರೇಯ್ ಹೊಟೇಲ್‌ವೊಂದನ್ನು ಓಯೋ ಆಗಿ ಪರಿವರ್ತಿಸಲು ಯಾವ ಮಾರ್ಗಗಳನ್ನು ಅನುಸರಿಸಬೇಕೆಂಬುದರ ಕುರಿತು ಪ್ಲೇ ಬುಕ್‌ವೊಂದನ್ನು ಸಿದ್ಧಪಡಿಸಿದರು. ಇದರ ಪ್ರಕಾರ ಸಮಗ್ರವಾಗಿ ಕಾರ್ಯನಿರ್ವಹಿಸಬಹುದು. ಓಯೋ ಜೊತೆ ಕೈಜೋಡಿಸುವ ಹೋಟೆಲ್‌ನವರೊಂದಿಗೆ ಮಾತುಕತೆ ನಡೆಸಬಹುದು. ಇದರ ಮೂಲಕ ಕೆಲಸಗಳು ಸಮರ್ಪಕವಾಗಿ ನಡೆಸಲು ಸಾಧ್ಯವಾಗುತ್ತದೆ. ಇದನ್ನು ಸಂಸ್ಥೆ ಪ್ರೋಸೆಸ್ ಟ್ರಾನ್ಸಫರ್ಮೇಶನ್ ಎಂದು ಕರೆಯುತ್ತದೆ. ಇದರಲ್ಲಿ ತಂಡದ ಎಲ್ಲಾ ಸದಸ್ಯರು ಭಾಗಿಯಾಗಿರುತ್ತಾರೆ. ಇಂತಹ ಒಂದು ಕಾರ್ಯವಿಧಾನವನ್ನು ಜಾರಿಗೆ ತರುವುದರ ಮೂಲಕ ಶ್ರೇಯ್‌ ಸಂಸ್ಥೆಯಲ್ಲಿ ದಂತಕತೆಯಾಗಿ ರೂಪುಗೊಂಡಿದ್ದಾರೆ ಎಂದಿದ್ದಾರೆ ರಿತೇಶ್.

ನೀವೇನು ಮಾಡುತ್ತಿದ್ದೀರೋ ಅದರಲ್ಲಿ ಮುಂದುವರೆಯಿರಿ.ಯೋಜನೆಯ ಬಗ್ಗೆ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳುವಲ್ಲಿ ಯಾವುದೇ ರೀತಿಯ ಹಿಂಜರಿಕೆ ಬೇಡ. ಇದರಿಂದ ವಿಭಿನ್ನವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಮಾತು ಮುಗಿಸುತ್ತಾರೆ ಶ್ರೇಯ್.


ಲೇಖಕರು: ತನ್ವಿ ದುಬೆ

ಅನುವಾದಕರು: ವಿಶ್ವಾಸ್​​