ಔಷಧ ಬಳಸಿ ಎಚ್‍ಐವಿಯಿಂದ ದೂರವಿರಿ- ಲೈಂಗಿಕ ಕಾರ್ಯಕರ್ತೆಯರಿಗೆ ದೊರೆಯಲಿದೆ ರಿಲೀಫ್

ಟೀಮ್​​ ವೈ.ಎಸ್​. ಕನ್ನಡ

ಔಷಧ ಬಳಸಿ ಎಚ್‍ಐವಿಯಿಂದ ದೂರವಿರಿ- ಲೈಂಗಿಕ ಕಾರ್ಯಕರ್ತೆಯರಿಗೆ ದೊರೆಯಲಿದೆ ರಿಲೀಫ್

Tuesday December 15, 2015,

2 min Read

ಏಷ್ಯಾದ ಅತಿ ದೊಡ್ಡ ವೇಶ್ಯಾವಾಟಿಕೆ ಅಡ್ಡೆಯಾದ ಸೋನಾಗಚಿಯಲ್ಲಿ ಮುಂದಿನ ತಿಂಗಳು ಪ್ರಯೋಗಾತ್ಮಕ ಪ್ರಾಜೆಕ್ಟ್ ಒಂದನ್ನು ಕೈಗೊಳ್ಳಲಾಗುತ್ತಿದೆ. ಭಾರತದಲ್ಲೇ ಮೊದಲ ಬಾರಿಗೆ ಲೈಂಗಿಕ ಕಾರ್ಯಕರ್ತೆಯರಿಗೆ ಎಚ್‍ಐವಿ ನಿರೋಧಕ ಔಷಧವನ್ನು ಹಂಚುವ ಯೋಜನೆ ಪ್ರಾರಂಭಿಸಲು ಸಿದ್ಧತೆ ನಡೆದಿದೆ.

ಈ ಕಾರ್ಯಸಾಧ್ಯತಾ ಯೋಜನೆ ಇತ್ತೀಚೆಗಷ್ಟೇ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್‍ಎಸಿಒ) ಮತ್ತು ಕೇಂದ್ರ ಆರೋಗ್ಯ ಸಚಿವಾಲಯಗಳಿಂದ ಹಸಿರು ನಿಶಾನೆ ಪಡೆದಿದೆ. ಇದೇ ಡಿಸೆಂಬರ್‍ನಲ್ಲಿ ಈ ಯೋಜನೆ ಕಾರ್ಯರೂಪಕ್ಕ ಬರಲಿದೆ. ‘ನಾವು ಇತ್ತೀಚೆಗಷ್ಟೇ ಈ ಯೋಜನೆಗೆ ಒಪ್ಪಿಗೆ ಸೂಚಿಸಿ ಪತ್ರ ನೀಡಿದ್ದೇವೆ. ಇದು ಕಾರ್ಯಸಾಧನಾ ಯೋಜನೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಇಂತಹ ಒಂದು ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ’ ಅಂತ ಮಾಹಿತಿ ನೀಡಿದ್ದಾರೆ ಎನ್‍ಎಸಿಒ, ರಾಷ್ಟ್ರೀಯ ಕಾರ್ಯಕ್ರಮದ ಅಧಿಕಾರಿ ಬಿ.ಬಿ. ರೆವಾರಿ.

image


ಈ ಯೋಜನೆಯ ಅಡಿಯಲ್ಲಿ, ‘ಪ್ರೀ-ಎಕ್ಸ್​​ಪೋಶರ್ ಪ್ರೋಫಿಲ್ಯಾಕ್ಸಿಸ್ (PREP) ಸಾಮಾನ್ಯ ಔಷಧಿಯನ್ನು ಎಚ್‍ಐವಿ ಪೀಡಿತ ವ್ಯಕ್ತಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಲೈಂಗಿಕ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ’ ಅಂತ ಮಾಹಿತಿ ನೀಡ್ತಾರೆ ಲೈಂಗಿಕ ಕಾರ್ಯಕರ್ತೆಯರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಘವೊಂದರ ಹಿರಿಯ ಅಧಿಕಾರಿ. ಲೈಂಗಿಕ ಕಾರ್ಯಕರ್ತೆಯರು ಏಡ್ಸ್ ಸೋಕಿನಿಂದ ದೂರವಿರುವಂತೆ ಮಾಡುವುದೇ ಈ ಔಷಧದ ಕೆಲಸ ಅಂತಾರೆ ಸೋನಾಗಚಿ ಸಂಶೋಧನಾ ಮತ್ತು ತರಬೇತಿ ಇನ್ಸ್​​ಟಿಟ್ಯೂಟ್ (ಎಸ್‍ಆರ್‍ಟಿಐ) ಎನ್‍ಜಿಓದ ಮುಖ್ಯಸ್ಥರಾದ ಸಮರ್ಜೀತ್ ಜನ.

‘ನಾವು ಈಗಾಗಲೇ ಸೋನಾಗಚಿಯಲ್ಲಿರುವ ಎಚ್‍ಐವಿ ಪಾಸಿಟಿವ್ ಮತ್ತು ಎಚ್‍ಐವಿ ನೆಗೆಟಿವ್ ಲೈಂಗಿಕ ಕಾರ್ಯಕರ್ತೆಯರ ಜನ ಗಣತಿ ಪ್ರಾರಂಭಿಸಿದ್ದೇವೆ. ಈ ಅದ್ಭುತ ಯೋಜನೆ ಡಿಸೆಂಬರ್‍ನಲ್ಲೇ ಪ್ರಾರಂಭವಾಗಲಿ ಅನ್ನೋ ನಂಬಿಕೆಯಲ್ಲಿದ್ದೇವೆ’ ಅಂತಾರೆ ಸಮರ್ಜೀತ್ ಜನ. ಈ ಯೋಜನೆಗೆ ಮೆಲಿಂಡಾ ಗೇಟ್ಸ್ ಫೌಂಡೇಶನ್‍ನಿಂದ ಹಣ ಸಹಾಯ ಹರಿದು ಬರಲಿದೆ. ಎಸ್‍ಆರ್‍ಟಿಐ ಪಶ್ಚಿಮ ಬಂಗಾಳದ ಸುಮಾರು 1.30 ಲಕ್ಷ ಲೈಂಗಿಕ ಕಾರ್ಯಕರ್ತೆಯರಿರುವ ದರ್ಬಾರ್ ಮಹಿಳಾ ಸಮನ್ವಯ ಸಮಿತಿ (ಡಿಎಮ್‍ಎಸ್‍ಸಿ)ಯ ಒಂದು ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಯೋಜನೆಯೊಂದಿಗೆ ಕೈ ಜೋಡಿಸಿರುವ ವೈದ್ಯೆ ಪ್ರತಿಮಾ ರಾವ್ ಅವರ ಪ್ರಕಾರ, ಈ ಕಾರ್ಯಾಚರಣೆ ಕುರಿತು ಅದಾಗಲೇ ಲೈಂಗಿಕ ಕಾರ್ಯಕರ್ತೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಭರದಿಂದ ಸಾಗಿದೆ. ಹಾಗೇ ಕಾಂಡೋಮ್‍ಗಳು ಹಾಗೂ ಪ್ರೀ-ಎಕ್ಸ್‍ಪೋಶರ್ ಪ್ರೋಫಿಲ್ಯಾಕ್ಸಿಸ್ (PREP) ಔಷಧಗಳನ್ನು ಬಳಸಿದರೆ ಎಚ್‍ಐವಿ ಸೋಂಕಿನಿಂದ ಎರಡು ಪಟ್ಟು ಹೆಚ್ಚು ರಕ್ಷಣೆ ದೊರೆಯುತ್ತದೆ ಅಂತಾರೆ ಸಮರ್ಜೀತ್ ಜನ.

‘ಕಾಂಡೋಮ್‍ಗಳ ಬಳಕೆಯಿಂದ ಈಗಾಗಲೇ ಎಚ್‍ಐವಿ ಏಡ್ಸ್ ಮಾರಕಕ್ಕೆ ಬಹುತೇಕ ಕಡಿವಾಣ ಹಾಕಲು ಸಾಧ್ಯವಾಗಿದೆ. ಆದ್ರೆ ಕೆಲವೊಮ್ಮೆ ಗ್ರಾಹಕರು ಅಥವಾ ಗಿರಾಕಿಗಳು ಕಾಂಡೋಮ್‍ಗಳನ್ನು ಬಳಸಲು ಇಷ್ಟಪಡುವುದಿಲ್ಲ. ಅಂತಹಾ ಸಂದರ್ಭಗಳಲ್ಲಿ ಹಾಗೂ ದೋಷಪೂರಿತ ಕಾಂಡೋಮ್‍ಗಳಿಂದಲೂ ಕೆಲವೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಗ್ರಾಹಕ ಮತ್ತು ಲೈಂಗಿಕ ಕಾರ್ಯಕರ್ತೆಗೆ ಇಬ್ಬರಿಗೂ ಸೋಂಕು ತಗುಲುವ ಸಾಧ್ಯತೆಯಿರುತ್ತೆ. ಪ್ರೀ-ಎಕ್ಸ್‍ಪೋಶರ್ ಪ್ರೋಫಿಲ್ಯಾಕ್ಸಿಸ್ (PREP) ಔಷಧ ಬಳಸುವುದರಿಂದ ಆ ಆತಂಕವನ್ನೂ ತಡೆಗಟ್ಟಬಹುದು.’ ಅಂತ ಮತ್ತಷ್ಟು ಮಾಹಿತಿ ಬಿಚ್ಚಿಡ್ತಾರೆ ಸಮರ್ಜೀತ್ ಜನ. ಬಿಬಿ ರೆವಾರಿ ಸಹ ಪ್ರೀ-ಎಕ್ಸ್‍ಪೋಶರ್ ಪ್ರೋಫಿಲ್ಯಾಕ್ಸಿಸ್ (PREP) ಬಳಸುವುದರಿಂದ ಶೇಕಡಾ 60ರಿಂದ 70 ಪ್ರತಿಶತಃ ಸೋಂಕಿಗೆ ಕಡಿವಾಣ ಹಾಕಬಹುದು ಅಂತ ಸಮ್ಮತಿಸುತ್ತಾರೆ.

ಅನುವಾದಕರು: ವಿಶಾಂತ್​​​