ಉದ್ಯಮಿಯಾದ ಡೆಲಿವರಿ ಹುಡುಗನ ಕಥೆ..!

ಟೀಮ್​ ವೈ.ಎಸ್​. ಕನ್ನಡ

0

ಕೇವಲ 30 ದಿನಗಳಷ್ಟೇ ಇದ್ದವು. ಹಣವಿರಲಿಲ್ಲ. ಆ ಕಂಪನಿಯ ಸಹ ಸಂಸ್ಥಾಪಕ ತನ್ನ ಉದ್ಯಮವನ್ನು ಮುಂದುವರಿಸಲಾಗದೇ ಸೋತಿದ್ದ. ಬಾಡಿಗೆಯನ್ನೂ ನೀಡಲಾಗದೇ, ಕಚೇರಿ ಖಾಲಿ ಮಾಡುವ ದುಸ್ಥಿತಿ ಬಂದೊದಗಿತ್ತು. ಉದ್ಯಮಶೀಲತೆ ಅಂದ್ರೆ ಇದೇನಾ? ಮನೆ ತೊರೆದು, ತನ್ನ ಕನಸಿನ ಬೆನಟ್ಟಿ ಹೊರಟ ದಿನೂಪ್ ಕಲ್ಲೇರಿಲ್ ಇಂತಹ ದಿನ ಬರುತ್ತೆ ಅಂತ ಕನಸಿನಲ್ಲೂ ಊಹಿಸಿರಲಿಲ್ಲ.

2013ರ ಪ್ರಾರಂಭದಲ್ಲಿ ದಿನೂಪ್ ಸಾಕಷ್ಟು ನಷ್ಟ ಅನುಭವಿಸಿದ್ದರು. ಏನು ಮಾಡಬೇಕು ಎಂಬುದೇ ತೋಚದಂತಾಗಿತ್ತು. ಆಗ ಅವರಿಗೆ ತಂದೆ, ತಾಯಿಯ ಮಾತು ಕೇಳಬೇಕಿತ್ತು ಅಂತನ್ನಿಸಿತ್ತು. ಅವರು ಹೇಳಿದಂತೆ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿ, ಕೆಲಸಕ್ಕೆ ಸೇರಿದ್ದರೆ ಚೆನ್ನಾಗಿರುತ್ತಿತ್ತು ಅಂದುಕೊಂಡರು. ಅಷ್ಟರಲ್ಲಾಗಲೇ ಕಾಲ ಮೀರಿತ್ತು. 25 ಸಾವಿರ ರೂಪಾಯಿ ಬಂಡವಾಳದೊಂದಿಗೆ ತಾವು ಪ್ರಾರಂಭಿಸಿದ್ದ ಆನ್‍ಲೈನ್ ಟೀಶರ್ಟ್ ಕಂಪನಿ ಸೋತು, ನೆಲ ಕಚ್ಚಿತ್ತು.

ನಮ್ಮ ಕುಟುಂಬದಲ್ಲೇ ನಮ್ಮ ಮಗ ಕಾಲೇಜ್ ಪದವಿ ಪಡೆದ ಮೊದಲ ಸದಸ್ಯನಾಗ್ತಾನೆ ಅಂತ ದಿನೂಪ್ ಕುಟುಂಬದವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಒಳ್ಳೆ ಕೆಲಸಕ್ಕೆ ಸೇರಿ, ವಿದೇಶದಲ್ಲಿ ಸೆಟಲ್ ಆಗ್ತಾನೆ ಅಂತೆಲ್ಲಾ ಆಸೆಪಟ್ಟಿದ್ದರು. ಆದ್ರೆ ಪ್ಲಂಬರ್ ಮಗನಾದ ದಿನೂಪ್ ಆಲೋಚನೆಗಳೇ ಬೇರೆಯಿದ್ದವು.

ಆತ ತನ್ನದೇ ಸ್ವಂತ ಉದ್ಯಮವನ್ನು ಆರಿಸಿಕೊಂಡ. ಆದ್ರೆ ಅಲ್ಲಿ ಹಲವು ಏರಿಳಿತಗಳಿದ್ದವು. ನೂರಾರು ಆಸೆಗಳೊಂದಿಗೆ ಪ್ರಾರಂಭಿಸಿದ್ದ ಆನ್‍ಲೈನ್ ಟೀಶರ್ಟ್ ಕಂಪನಿ ಇತಿಹಾಸವಾಗಿತ್ತು. ಆದ್ರೆ ದಿನೂಪ್ ಸೋಲೊಪ್ಪಲಿಲ್ಲ. ಮಾಂಕ್‍ವ್ಯಾಸಾ ಎಂಬ ಮತ್ತೊಂದು ಕಂಪನಿ ಪ್ರಾರಂಭಿಸಿದ. ಆನ್‍ಲೈನ್ ಜ್ಯೋತಿಷ್ಯ ಹೇಳುವ ವೇದಿಕೆಯದು. ಈ ವರ್ಷದ ಪ್ರಾರಂಭದಲ್ಲಿ ಶುರುವಾದ ಮಾಂಕ್‍ವ್ಯಾಸಾ ಈಗ ಪ್ರತಿದಿನ ಬರೊಬ್ಬರಿ 75 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೂ ವ್ಯವಹಾರ ನಡೆಸುತ್ತಿದೆ.

ಆದ್ರೆ 2013ರ ಶುರುವಿನಲ್ಲಿ ಈ ಕಂಪನಿ ಪ್ರಾರಂಭಕ್ಕೂ ಮುನ್ನ ದಿನೂಪ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ, ಒಂದೊಂದೇ ಮೆಟ್ಟಿಲು ಹತ್ತುತ್ತಾ ಇವತ್ತು ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ.

ಮೊದಲ ಸೋಲು

‘ನನ್ನ ಹೀರೋ ಸಚಿನ್ ತೆಂಡುಲ್ಕರ್. ಶಾಲಾ ರಜೆಗಳಲ್ಲಿ ನಾನು ಬಹುಪಾಲು ಕ್ರಿಕೆಟ್ ಆಡುತ್ತಾ ಅಥವಾ ಸಮೀಪದ ಕೊಳದಲ್ಲಿ ಈಜಾಡುತ್ತಾ ಕಳೆಯುತ್ತಿದ್ದೆ. ಜೀವನದಲ್ಲಿ ನನಗೆ ಗುರಿ ಅನ್ನೋದೇ ಇರಲಿಲ್ಲ. ನನಗೇನು ಮಾಡಬೇಕು ಅಂತ ಗೊತ್ತಿರಲಿಲ್ಲ. ಆದ್ರೆ ಬೆಳಗ್ಗೆ 9ರಿಂದ ಸಂಜೆ 5ರವರೆಗಿನ ಕೆಲಸ ನನಗೆ ಆಗಿಬರೋದಿಲ್ಲ ಅನ್ನೋದು ಮಾತ್ರ ಗೊತ್ತಿತ್ತು’ ಅಂತಾರೆ 27 ವರ್ಷದ ದಿನೂಪ್. ಆದ್ರೂ ತನ್ನ ಹಲವು ಗೆಳೆಯರಂತೆ ಗೊಂದಲದಲ್ಲಿಯೇ ದಿನೂಪ್ ಎಂಜಿನಿಯರಿಂಗ್ ಕಾಲೇಜ್ ಸೇರಿದ್ರು. ಆದ್ರೆ ತಾನು ಎಂಜಿನಿಯರಿಂಗ್ ಸೇರಿ ದೊಡ್ಡ ಪ್ರಮಾದ ಮಾಡಿಬಿಟ್ಟೆ ಅಂತ ಅವರಿಗೆ ಕೆಲವೇ ದಿನಗಳಲ್ಲಿ ತಿಳಿಯಿತೂ ಕೂಡ.

‘ಕಾಲೇಜ್‍ನ ಎರಡನೇ ವರ್ಷ ನಾನೊಬ್ಬ ಉದ್ಯಮಮಿಯಾಗಬೇಕು ಅನ್ನೋ ದೃಢ ನಿರ್ಧಾರಕ್ಕೆ ಬಂದೆ. ಹಲವು ಐಡಿಯಾಗಳು ಬಂದವು. ಕೆಲವನ್ನು ಗೆಳೆಯರೊಂದಿಗೆ ಸೇರಿ ಚರ್ಚಿಸಿದೆ. ಹಳೆಯ ವಸ್ತುಗಳ ಮಾರಾಟ, ಸಿಮ್ ಕಾರ್ಡ್‍ಗಳನ್ನು ಮಾರಿದೆ, ಟೂರ್ ಏಜೆನ್ಸಿಗಳಲ್ಲೂ ಕೆಲಸ ಮಾಡಿದೆ. ಹೀಗೆ ಹಲವು ಕೆಲಸ ಮಾಡುತ್ತಾ ಗಳಿಸಿದ ಹಣದಲ್ಲಿ 2008ರಲ್ಲಿ ನಾನೊಂದು ಕಂಪ್ಯೂಟರ್ ಖರೀದಿಸಿದೆ’ ಅಂತ ಹಳೆಯ ದಿನಗಳನ್ನು ನೆನಪಿಸಿಕೊಳ್ತಾರೆ ದಿನೂಪ್.

ಕ್ರಮೇಣ ಕಂಪ್ಯೂಟರ್ ಮತ್ತು ಇಂಟರ್‍ನೆಟ್ ಅನ್ನೋ ಮಾಯಾಲೋಕದಲ್ಲಿ ದಿನೂಪ್ ಕಳೆದೇಹೋದ್ರು. ಉದ್ಯಮದಲ್ಲಿ ಮುಂದುವರಿಬೇಕು ಅಂದ್ರೆ ಕಾಲೇಜ್ ಬಿಡಲೇಬೇಕು ಅಂತ ನಿರ್ಧಾರಕ್ಕೆ ಬಂದೇಬಿಟ್ಟರು. ಆದ್ರೆ ಅವರ ಅದೃಷ್ಟ ಕೈಕೊಟ್ಟಿತು. ಮತ್ತೆ ಕಾಲೇಜ್ ಸೇರೋವರೆಗೂ ಮಾತನಾಡೋದಿಲ್ಲ ಅಂತ ಅವರ ತಂದೆ ಹಠ ಹಿಡಿದ್ರು. ಹೀಗಾಗಿಯೇ ಮನೆಯಲ್ಲೂ ಸಾಕಷ್ಟು ವಿರೋಧ ವ್ಯಕ್ತವಾದ ಕಾರಣ, ದಿನೂಪ್ ಮನೆ ತೊರೆದು ಚೆನ್ನೈಗೆ ಶಿಫ್ಟ್ ಆದ್ರು.

ಸುಮಾರು 2 ತಿಂಗಳ ಕಾಲ ಸೇಲ್ಸ್‍ಮನ್‍ಆಗಿ ಕೆಲಸ ಮಾಡಿಕೊಂಡು ಚೆನ್ನೈನಲ್ಲೇ ಇದ್ರು ದಿನೂಪ್. ‘ನಂತರ ಆನ್‍ಲೈನ್ ಟೀಶರ್ಟ್ ಶಾಪಿಂಗ್ ಪೋರ್ಟಲ್ ಪ್ರಾರಂಭಿಸುವ ಐಡಿಯಾದೊಂದಿಗೆ ನಾನು ಚೆನ್ನೈನಿಂದ ವಾಪಸ್ ಮನೆಗೆ ಬಂದೆ. ಆದ್ರೆ 2012ರಲ್ಲಿ ಆನ್‍ಲೈನ್ ಶಾಪಿಂಗ್ ಕೇರಳದಲ್ಲಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ’ ಅಂತ ಮೊದಲ ಉದ್ಯಮ ಪ್ರಾರಂಭಿಸಿದ ಬಗ್ಗೆ ಹೇಳಿಕೊಳ್ಳುತ್ತಾರೆ ದಿನೂಪ್.

ಆದ್ರೆ ಅವರು ಅಂದುಕೊಂಡಂತೆ ಏನೊಂದೂ ಆಗಲಿಲ್ಲ. ಅದರಲ್ಲಂತೂ ಖರ್ಚು ವೆಚ್ಚ ನೋಡಿಕೊಳ್ಳುವುದೇ ಅತಿ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಬಹುತೇಕ ಆರ್ಡರ್‍ಗಳು ಕ್ಯಾಶ್ ಆನ್ ಡೆಲಿವರಿ ಆಗಿದ್ದವು. ಹೀಗಾಗಿಯೇ ಹಣ ಕೈಸೇರುವ ಹೊತ್ತಿಗೆ ತಿಂಗಳೇ ಕಳೆದುಹೋಗುತ್ತಿತ್ತು. ಆದ ಕಾರಣ ತನ್ನ ಕಂಪನಿಯಲ್ಲಿ ತಾನೇ ಡೆಲಿವರಿ ಬಾಯ್ ಆಗಿ ಕೆಲಸ ಮಾಡತೊಡಗಿದ ದಿನೂಪ್ ಕ್ರಮೇಣ ಬೇರೆ ಕಂಪನಿ ವಸ್ತುಗಳನ್ನೂ ಡೆಲಿವರಿ ಮಾಡತೊಡಗಿದರು.

‘ನಾನು ಸುಮಾರು 6 ತಿಂಗಳ ಕಾಲ ಕೊಚ್ಚಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದೇನೆ. ಹೀಗಾಗಿಯೇ ಕೊಚ್ಚಿ ಜನರಿಗೆ ನಾನು ಡೆಲಿವರಿ ಬಾಯ್ ಅಂತಲೇ ಚಿರಪರಿಚಿತ’ ಅಂತ ನಗುತ್ತಾರೆ ದಿನೂಪ್.

ಕೊಚ್ಚಿಯಿಂದ 25 ಕಿಲೋಮೀಟರ್ ದೂರದಲ್ಲಿರುವ ಪಟ್ಟಿಮಟ್ಟೊಮ್ ಗ್ರಾಮದಲ್ಲಿ, ಬಡ-ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ದಿನೂಪ್‍ಗೆ ಸವಾಲುಗಳನ್ನು ಎದುರಿಸೋದೇನೂ ಹೊಸತಲ್ಲ. ಮಲಯಾಳಂ ಮೀಡಿಯಮ್ ಶಾಲೆಯಲ್ಲಿ ಓದಿದ ದಿನೂಪ್ ಕಾಲೇಜ್‍ನಲ್ಲಿ ಕಷ್ಟಪಟ್ಟು ಇಂಗ್ಲೀಷ್ ಕಲಿಯಬೇಕಾಯ್ತು. ಮನೆಯಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ಪಾಕೆಟ್ ಮನಿ ನೀಡುತ್ತಿರಲಿಲ್ಲ. ಹೀಗಾಗಿಯೇ ಕಾಲೇಜ್‍ಗೆ ಹೋಗುತ್ತಲೇ, ಓದಿನ ಜೊತೆಗೆ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿ ಹಣವನ್ನೂ ಸಂಪಾದಿಸುತ್ತಿದ್ದರು ದಿನೂಪ್.

ಕ್ರಮೇಣ ದಿನೂಪ್ ತನ್ನ ಕಂಪನಿಯನ್ನು ಚಾರ್ಟರ್ಡ್ ಅಕೌಂಟಂಟ್ ಒಬ್ಬರಿಗೆ ಮಾರಾಟ ಮಾಡಿ ಕೈತೊಳೆದುಕೊಂಡರು. ಮೊದಲ ಪ್ರಯತ್ನದಲ್ಲಿ ಕೈಸುಟ್ಟುಕೊಂಡ ಬಳಿಕ ದಿನೂಪ್‍ಗೆ ದೈನಂದಿನ ಖರ್ಚಿಗೂ ದುಡ್ಡಿಲ್ಲದಂತಾಗಿ ಹೋಗಿತ್ತು. ಹೀಗಾಗಿಯೇ ಮತ್ತೊಂದು ಉದ್ಯಮ ಪ್ರಾರಂಭಿಸಲು ಹಾಗೂ ತನ್ನ ಜೀವನ ಸಾಗಿಸಲು ಯಾವುದೇ ಆನ್‍ಲೈನ್ ಸಂಬಂಧಿ ಸೇವೆಗಳನ್ನೂ ಹಾಗೂ ಕೆಲಸಗಳಿದ್ದರೂ ದಿನೂಪ್ ಮಾಡಿಕೊಡುತ್ತಿದ್ದರು.

ಮಾಂಕ್‍ವ್ಯಾಸಾ ಮೂಲಕ ಹೊಸ ಬದುಕು

ಅದು 2013ರ ಡಿಸೆಂಬರ್ ತಿಂಗಳು. ದಿನೂಪ್ ಅವರ ಗೆಳೆಯನೊಬ್ಬನ ಮನೆಯಲ್ಲಿದ್ದರು. ಆಗ ಆ ಗೆಳೆಯನ ತಂದೆ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಬೇಕು ಅಂತ ಮನೆಯಿಂದ ತರಾತುರಿಯಲ್ಲಿ ಹೊರಡುತ್ತಿದ್ದರು. ಆಗ ತಕ್ಷಣ ದಿನೂಪ್ ಈ ಜ್ಯೋತಿಷ್ಯ ಸಮಾಲೋಚನೆ ನಡೆಸುವ ಸೌಲಭ್ಯ ಆನ್‍ಲೈನ್‍ನಲ್ಲಿ ಇಲ್ವಾ ಅಂತ ಕೇಳಿದ್ರಂತೆ. ‘ನಾನು ನನ್ನ ಗೆಳೆಯನ ಲ್ಯಾಪ್‍ಟಾಪ್ ಪಡೆದು ಆನ್‍ಲೈನ್‍ನಲ್ಲಿ ಜ್ಯೋತಿಷ್ಯ ಸೇವೆ ನೀಡುವ ವೆಬ್‍ಸೈಟ್‍ಗಳನ್ನು ಹುಡುಕತೊಡಗಿದೆ. ಆದ್ರೆ ಅಂತಹ ಒಂದೇ ಒಂದು ವೆಬ್‍ಸೈಟ್ ಕೂಡ ಸಿಗಲಿಲ್ಲ’ ಅಂತ ಗೆಲುವಿನ ನಗೆ ಬೀರ್ತಾರೆ ದಿನೂಪ್. ನಂತರ ಕೆಲ ಜ್ಯೋತಿಷ್ಯ ಸಂಬಂಧೀ ವೆಬ್‍ಸೈಟ್‍ಗಳನ್ನು ಹುಡುಕುತ್ತಿರುವಾಗ, ಅವರಿಗೆ ಸ್ವಯಂಚಾಲಿತ ಜಾತಕ ವರದಿ ನೀಡುವ ಒಂದು ತಂತ್ರಜ್ಞಾನ ದೊರೆಯಿತು. ಅದರಲ್ಲಿ ಹುಟ್ಟಿದ ದಿನಾಂಕ, ಸಮಯ ಹಾಗೂ ಸ್ಥಳ ಸೇರಿದಂತೆ ಕೆಲ ಮಾಹಿತಿಯನ್ನು ಪಡೆದು ಜಾತಕ ನೀಡಲಾಗುತ್ತಿತ್ತು. ‘ಆಗಲೇ ನನಗೆ ಗೆಲುವಿನ ವಾಸನೆ ಮೂಗಿಗೆ ಬಡಿಯಿತು. ಬಹುತೇಕ ಭಾರತೀಯರು ಜಾತಕ, ಜ್ಯೋತಿಷ್ಯಗಳನ್ನು ಬಲವಾಗಿ ನಂಬುತ್ತಾರೆ. ಆದ್ರೆ ಇಂದಿನ ಇಂಟರ್‍ನೆಟ್ ಯುಗದಲ್ಲೂ ನಾವು ಬೇರೆ ಸೇವೆಗಳನ್ನು ಪಡೆಯುವಂತೆ ಆನ್‍ಲೈನ್ ಮೂಲಕ ಜ್ಯೋತಿಷ್ಯ ಸೇವೆ ಪಡೆಯುವುದು ಸಾಧ್ಯವಿಲ್ಲ’ ಅಂತ ಮತ್ತಷ್ಟು ಮಾಹಿತಿ ನೀಡ್ತಾರೆ ದಿನೂಪ್.

ಆದ್ರೆ ಕಂಪನಿ ಪ್ರಾರಂಭಿಸಲು ದಿನೂಪ್‍ಗೆ ನುರಿತ ತಂತ್ರಜ್ಞರ ಅವಶ್ಯಕತೆಯಿತ್ತು. ಸುಮಾರು ನಾಲ್ಕು ತಿಂಗಳ ಸುದೀರ್ಘ ಸಂಶೋಧನೆ ಮಾಡಿ, ಮಾಹಿತಿ ಕ್ರೋಢೀಕರಿಸಿದ ಬಳಿಕ ಹೀಗೇ ಒಮ್ಮ ಕೊಚ್ಚಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಮೀಪದ ಟೀ ಅಂಗಡಿಯಲ್ಲಿ ಕುಳಿತಿರುವಾಗ ಅವರಿಗೆ ಶರತ್ ಕೆ.ಎಸ್ ಎಂಬ ಹಳೆಯ ಕಾಲೇಜು ಗೆಳೆಯ ಸಿಕ್ಕಿದನಂತೆ. ವಿಶೇಷ ಅಂದ್ರೆ ಶರತ್ ಒಬ್ಬ ಸಾಫ್ಟ್‍ವೇರ್ ಡೆವೆಲಪರ್ ಆಗಿದ್ದ. ವಿಷಯ ತಿಳಿದ ತಕ್ಷಣವೇ ದಿನೂಪ್ ಅವರ ಐಡಿಯಾ ಕುರಿತು ಹೇಳಿಕೊಂಡಿದ್ದಾರೆ. ಶರತ್ ಕೂಡ ಅದರ ಕುರಿತು ವಿಶೇಷ ಗಮನ ಹರಿಸಿದ ಕಾರಣ ಇಬ್ಬರೂ ಸೇರಿ ಸಾಕಷ್ಟು ಸಿದ್ಧತೆ ಮಾಡಿಕೊಂಡು ಮಾಂಕ್‍ವ್ಯಾಸಾ ಪ್ರಾರಂಭಿಸಿಯೇಬಿಟ್ಟರು. ಅದಕ್ಕಾಗಿ ಶರತ್ ತಮ್ಮ ಕೆಲಸವನ್ನೂ ತೊರೆದು ಮಾಂಕ್‍ವ್ಯಾಸಾದಲ್ಲಿ ಸಹಸಂಸ್ಥಾಪಕರಾಗಿ ಸೇರಿದ್ರು’ ಅಂತಾರೆ ದಿನೂಪ್.

ಮತ್ತೊಮ್ಮೆ ಕಷ್ಟದ ದಿನಗಳು

ಸುಮಾರು 2 ತಿಂಗಳ ಕಾಲ ಶ್ರಮವಹಿಸಿ ದಿನೂಪ್ ಮತ್ತು ಶರತ್ ಇಬ್ಬರೂ ಸೇರಿ ಕಂಪನಿಗೆ ಅಡಿಪಾಯ ಹಾಕಿ ಒಂದು ರೂಪುರೇಷೆ ನೀಡಿದ್ರು. ಬಳಿಕ ಇಂಟರ್‍ನೆಟ್ ಅಂದ್ರೆ ಅಲರ್ಜಿ ಎನ್ನುವ ಕಾರಣ ಜ್ಯೋತಿಷಿಗಳನ್ನು ತಮ್ಮ ಕಂಪನಿಗೆ ಸೇರಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿತ್ತು. ಅದರ ನಡುವೆ ಮಾಂಕ್‍ವ್ಯಾಸಾ ಮತ್ತೊಮ್ಮೆ ತಾಂತ್ರಿಕ ತೊಂದರೆಗೆ ಒಳಗಾಯ್ತು. ಆದ್ರೆ ಕೆಲ ದಿನಗಳಲ್ಲಿ ಅದನ್ನು ಸರಿಪಡಿಸಿದ ಈ ಜೋಡಿ ಇದೇ 2015ರ ಏಪ್ರಿಲ್‍ನಲ್ಲಿ ತಮ್ಮ ಕಂಪನಿಯನ್ನು ರೀ-ಲಾಂಚ್ ಮಾಡಿದ್ರು. ಜೊತೆಗೆ ಕೊಚ್ಚಿ ಮೂಲದ ಸ್ಟಾರ್ಟಪ್ ವಿಲೇಜ್‍ನ ಮುಖ್ಯಸ್ಥ ಸಂಜಯ್ ವಿಜಯ್ ಕುಮಾರ್ ಮೂಲಕ ದಿನೂಪ್ ಮಾಂಕ್‍ವ್ಯಾಸಾಗೆ ಬಂಡವಾಳ ಹೂಡಿಕೆ ಮಾಡಿಸಿದ್ರು.

ಇದರ ಉದ್ಯಮ ಮಾದರಿ

ಏಪ್ರಿಲ್‍ನಲ್ಲಿ ಒಟ್ಟು 15 ಮಂದಿ ಜ್ಯೋತಿಷಿಗಳು ಮಾಂಕ್‍ವ್ಯಾಸಾದಲ್ಲಿ ಕೆಲಸ ಮಾಡುತ್ತಿದ್ದರು. ಮೊದಲ ತಿಂಗಳು ಕೇವಲ 22 ಮಂದಿ ಗ್ರಾಹಕರಷ್ಟೇ ಸಂಪರ್ಕಿಸಿದ್ದರು. ಆದ್ರೆ ಇವತ್ತು ಒಟ್ಟು 25 ಮಂದಿ ಜ್ಯೋತಿಷಿಗಳು ಈ ವೇದಿಕೆಯಲ್ಲಿದ್ದು, ಪ್ರತಿದಿನ ಕಡಿಮೆ ಅಂದ್ರೂ 22 ಮಂದಿ ಗ್ರಾಹಕರು ಇಲ್ಲಿ ಜ್ಯೋತಿಷ್ಯ ಸೇವೆ ಪಡೆಯುತ್ತಾರೆ. ಪ್ರತಿ ಜ್ಯೋತಿಷಿಯ ಪ್ರತಿ ವ್ಯವಹಾರದಲ್ಲೂ ಮಾಂಕ್‍ವ್ಯಾಸಾ ತಂಡ ಶೇಕಡಾ 15ರಷ್ಟು ಕಮಿಷನ್ ಪಡೆಯುತ್ತದೆ. ಇಲ್ಲಿ ಜ್ಯೋತಿಷ್ಯ ಕೇಳುವವರು ಆನ್‍ಲೈನ್ ವೀಡಿಯೋ ಚಾಟ್ ಮಾಡಬಹುದು ಅಥವಾ ಆಫ್‍ಲೈನ್ ಕರೆ ಕೂಡ ಮಾಡಬಹುದು. ಆದ್ರೆ ಪ್ರತಿ ಕನ್ಸಲ್ಟೇಶನ್‍ಗೆ 500 ರೂಪಾಯಿಯಷ್ಟು ಹಣ ನೀಡಬೇಕಷ್ಟೇ. ಭಾರತದ ಅತ್ಯುತ್ತಮ ಜ್ಯೋತಿಷಿಗಳನ್ನು ಒಂದೇ ವೇದಿಕೆಗೆ ಕರೆತರುವ ಉದ್ದೇಶ ದಿನೂಪ್ ಅವರದು. ಜೊತೆಗೆ ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 2 ಸಾವಿರದಷ್ಟು ಜ್ಯೋತಿಷಿಗಳನ್ನು ಮಾಂಕ್‍ವ್ಯಾಸಾ ವೇದಿಕೆಗೆ ಕರೆತಂದು, ವಾರ್ಷಿಕವಾಗಿ 20 ಕೋಟಿ ಡಾಲರ್ ವ್ಯವಹಾರ ನಡೆಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.

‘ಎಂತಹ ಕಷ್ಟಕರವಾದ ಸಂದರ್ಭದಲ್ಲೇ ಆಗಿರಬಹುದು, ಉದ್ಯಮಶೀಲತೆ ನನಗೆ ಸ್ವಾತಂತ್ರ್ಯ ನೀಡಿದೆ. ಹೀಗಾಗಿಯೇ ಎಷ್ಟೇ ಒತ್ತಡ ಬರಲಿ, ಕಷ್ಟ ಬರಲಿ ನನಗೆ ಬೇರೆ ಏನನ್ನಾದ್ರೂ ಮಾಡಬೇಕು ಅಂತ ಅನ್ನಿಸೋದೇ ಇಲ್ಲ’ ಅಂತ ಮಾತು ಮುಗಿಸುತ್ತಾರೆ ದಿನೂಪ್.

ಲೇಖಕರು: ಸಿಂಧೂ ಕಶ್ಯಪ್​
ಅನುವಾದಕರು: ವಿಶಾಂತ್​​

Related Stories