ನಾಯಿಗಳ ಸಾಕಣೆಯೇ ಸರ್ವಸ್ವ: ಶ್ವಾನಗಳ ಮೇಲಿನ ಪ್ರೀತಿ ಉದ್ಯೋಗವಾಗಿ ಬದಲಾಯಿತು..!

ಟೀಮ್​ ವೈ.ಎಸ್​​.

1

ಸಾಕು ಪ್ರಾಣಿಗಳು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ನಾಯಿಗಳನ್ನು ಪ್ರೀತಿಸದೇ ಇರುವವರೇ ಇಲ್ಲ. ಮುದ್ದು ಪಪ್ಪಿಗಳನ್ನು ಮಕ್ಕಳಂತೆ ಸಾಕಿ ಸಲಹುವವರು ಅನೇಕರಿದ್ದಾರೆ. ಆದ್ರೆ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ನಾಯಿಗಳನ್ನು ಸಾಕುತ್ತಿರುವವರ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ಬೆಂಗಳೂರಲ್ಲಿ ಇಂತಹ ಶ್ವಾನ ಪ್ರಿಯೆ ಒಬ್ಬರಿದ್ದಾರೆ. ಅವರೇ ಪ್ರೀತಿ ನಾರಾಯಣನ್. ಚಿಕ್ಕಂದಿನಿಂದಲೂ ಪ್ರೀತಿಗೆ ನಾಯಿಗಳೆಂದ್ರೆ ಬಲು ಇಷ್ಟ. ಬೀದಿ ಪಾಲಾಗಿದ್ದ ಬಡಕಲು ಮರಿಗಳನ್ನು ಪ್ರೀತಿ ಮನೆಗೆತ್ತಿಕೊಂಡು ಬರುತ್ತಿದ್ದರು. ಗಾಯಗೊಂಡಿದ್ದ ಕುನ್ನಿಯನ್ನೇನಾದರೂ ಕಂಡರೆ ಅದಕ್ಕೆ ಔಷಧ ಹಚ್ಚಿ ಆರೈಕೆ ಮಾಡುತ್ತಿದ್ದರು. ಆಗಷ್ಟೇ ಹೈಸ್ಕೂಲ್ ಮುಗಿಸಿದ್ದ ಪ್ರೀತಿ ನಾರಾಯಣನ್, ಗೋಲ್ಡನ್ ರಿಟ್ರೀವರ್ ತಳಿಯ ಪಪ್ಪಿಯೊಂದನ್ನು ಮನೆಗೆ ತಂದಿದ್ದರು. ನಾಯಿ ಮರಿಯ ಜವಾಬ್ಧಾರಿಯೆಲ್ಲ ನಿನ್ನದೇ ಎಂದು ಪ್ರೀತಿ ಅವರ ಅಮ್ಮ ಎಚ್ಚರಿಸಿದ್ದರಿಂದ, ಆ ಮುದ್ದುಮರಿಯ ಬೇಕು ಬೇಡಗಳನ್ನೆಲ್ಲ ಅವರೇ ನೋಡಿಕೊಳ್ಳುತ್ತಿದ್ದರು. ಅಲ್ಲಿಂದಲೇ ಪ್ರೀತಿ ಅವರ ಶ್ವಾನಪ್ರೇಮ ಶುರುವಾಗಿತ್ತು.

ಪ್ರೀತಿ ನಾರಾಯಣನ್ ಒಳ್ಳೆಯ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸದಲ್ಲಿದ್ದರು. ಸುಮಾರು 8 ವರ್ಷಗಳ ಕಾಲ ಜಾಹೀರಾತು ಹಾಗೂ ಡಿಜಿಟಲ್ ಸ್ಪೇಸ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲೇ ಪ್ರೀತಿ ಅವರಿಗೆ ಶ್ವಾನ ಮನೆಯೊಂದನ್ನು ಮಾಡುವ ಆಲೋಚನೆ ಬಂದಿದ್ದು. ಕಂಪನಿಯ ಸಲಹೆಗಾರ್ತಿಯಾಗಿದ್ದ ಗೀತಾ ಸುರೇಂದ್ರನ್ ಅವರನ್ನು ಭೇಟಿಯಾಗಿದ್ದೇ ಪ್ರೀತಿ ಅವರ ಬದುಕಿನ ಹೊಸ ಅಧ್ಯಾಯ ಆರಂಭವಾಗಿತ್ತು. ಗೋಲ್ಡನ್ ರಿಟ್ರೀವರ್ ಶ್ವಾನ ತಳಿಯನ್ನು ಪೋಷಿಸುತ್ತಿದ್ದ ಗೀತಾ ಅವರಿಂದ ಬಹಳಷ್ಟು ವಿಷಯಗಳನ್ನು ಪ್ರೀತಿ ನಾರಾಯಣನ್ ತಿಳಿದುಕೊಂಡ್ರು. ನಾಯಿ ಸಾಕಣೆಯನ್ನೂ ವೃತ್ತಿಯನ್ನಾಗಿ ಪರಿವರ್ತಿಸಬಹುದು ಎನ್ನುವುದನ್ನು ಅರ್ಥಮಾಡಿಕೊಂಡರು. ಅಷ್ಟೇನೂ ಆಸಕ್ತಿಯಿಲ್ಲದ ತಮ್ಮ ಕಾರ್ಪೊರೇಟ್ ಕೆಲಸವನ್ನು ಬಿಟ್ಟು ಶ್ವಾಸ ಸಾಕಣೆ ಆರಂಭಿಸಿಯೇಬಿಟ್ಟರು. ವಿಂಡ್‍ವಾರ್ಡ್ ಕೆನಲ್ಸ್ ಬೆಂಗಳೂರು ಹೆಸರಿನ ನಾಯಿ ಮನೆಯನ್ನು ಪ್ರೀತಿ ತೆರೆದರು.

ಒಳ್ಳೆ ಸಂಬಳದ ಕೆಲಸ ಬಿಟ್ಟು ನಾಯಿ ಸಾಕಲು ಆರಂಭಿಸಿದ ಪ್ರೀತಿ ಅವರ ವರ್ತನೆ ಅಕ್ಕಪಕ್ಕದವರಲ್ಲಿ ಅಚ್ಚರಿ ಹುಟ್ಟಿಸಿತ್ತು. ಪ್ರೀತಿ ಅವರನ್ನು ವಿಚಿತ್ರವಾಗಿ ನೋಡಿದವರೇ ಹೆಚ್ಚು. ಆದ್ರೆ ಪ್ರೀತಿ ಅವರನ್ನು ಚೆನ್ನಾಗಿ ಬಲ್ಲವರು ಯಾರೂ ಈ ಬಗ್ಗೆ ಆಶ್ಚರ್ಯಪಡಲೇ ಇಲ್ಲ. ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ ಪ್ರೀತಿ, ಮುದ್ದು ನಾಯಿಗಳಿಗಾಗಿ ಕೋರಮಂಗಲದ ಮನೆಗೆ ಶಿಫ್ಟ್ ಆದರು. ನಗರದ ಟ್ರಾಫಿಕ್ ಹಾಗೂ ಜನಜಂಗುಳಿಯಿಂದ ದೂರವಾಗಿ ಪ್ರೀತಿ ನಾರಾಯಣನ್, ನಾಯಿಗಳ ಪ್ರಪಂಚವನ್ನೇ ನಿರ್ಮಿಸಿಕೊಂಡರು. ಹೀಗೆ ಆರಂಭವಾದ ನಾಯಿ ಮನೆಯಲ್ಲೀಗ 14ಕ್ಕೂ ಹೆಚ್ಚು ವಿವಿಧ ತಳಿಯ ಶ್ವಾನಗಳಿವೆ. ಅವುಗಳನ್ನು ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಪ್ರೀತಿ ಸಾಕುತ್ತಿದ್ದಾರೆ. ವಿಶೇಷ ಅಂದ್ರೆ ನಾಯಿಗಳನ್ನು ಮಾರಾಟ ಮಾಡುವಾಗ ಕೂಡ ಪ್ರೀತಿ ಎಚ್ಚರಿಕೆ ವಹಿಸುತ್ತಾರೆ. ನಾಯಿಯನ್ನು ಕೊಂಡುಕೊಳ್ಳಲು ಮುಂದಾದ ಕುಟುಂಬದ ಬಗ್ಗೆ ಸಂಪೂರ್ಣ ವಿವರ ಪಡೆದುಕೊಳ್ಳುತ್ತಾರೆ. ಪಪ್ಪಿಗಳ ಬಗ್ಗೆ ಮನೆಯವರಿಗೆಲ್ಲ ಯಾವ ಭಾವನೆಯಿದೆ, ಅವರು ನಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನೆಲ್ಲ ತಿಳಿದುಕೊಳ್ಳುತ್ತಾರೆ. ನಂತರ ನಾಯಿಯನ್ನು ಹಸ್ತಾಂತರಿಸುತ್ತಾರೆ. ಹಾಗಾಗಿ ಪ್ರೀತಿ ಅವರ ಮುದ್ದಿನ ನಾಯಿಗಳನ್ನು ದತ್ತು ಪಡೆಯೋದು ಸುಲಭವೇನಲ್ಲ.

ಪ್ರೀತಿ ನಾರಾಯಣನ್ ಅವರ ಯಶೋಗಾಥೆ ಇಷ್ಟಕ್ಕೇ ಸೀಮಿತವಾಗಿಲ್ಲ. ಪಶುಚಿಕಿತ್ಸೆಯನ್ನೂ ಪ್ರೀತಿ ಕಲಿತಿದ್ದಾರೆ. ತುರ್ತು ಸಂದರ್ಭಗಳಲ್ಲಿ ನೆರವಾಗಲು ಪ್ರಾಥಮಿಕ ಚಿಕಿತ್ಸೆಯನ್ನು ಕಲಿಯುವಂತೆ ಸೆಸ್ನಾ ಲೈಫ್‍ಲೈನ್ ವೆಟರ್ನರಿ ಕೇರ್ ಕ್ಲಿನಿಕ್‍ನ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಪ್ರೀತಿ ತಜ್ಞರಿಂದ ಶ್ವಾನಗಳ ಚಿಕಿತ್ಸಾ ವಿಧಾನವನ್ನು ಕಲಿತಿದ್ದಾರೆ. ಪಶುವೈದ್ಯ ಶಸ್ತ್ರಚಿಕಿತ್ಸೆಗೆ ಸಹಾಯಕಿಯಾಗಿ ಪ್ರೀತಿ ಸೆಸ್ನಾ ಕ್ಲಿನಿಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರೀತಿ ಆಪರೇಷನ್ ಥಿಯೇಟರ್‍ನ ಮೇಲ್ವಿಚಾರಕಿಯೂ ಹೌದು. ಅನಾರೋಗ್ಯಪೀಡಿತ ಪ್ರಾಣಿಗಳ ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಪ್ರೀತಿ ನೋಡಿಕೊಳ್ತಾರೆ. ಆಪರೇಷನ್ ಬಳಿಕ ಪ್ರಾಣಿಗಳನ್ನು ಆರೈಕೆ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸುವ ಯೋಜನೆಯನ್ನು ಪ್ರೀತಿ ಹಾಕಿಕೊಂಡಿದ್ದಾರೆ.

ಪ್ರೀತಿ ಅವರ ಶ್ವಾನಪ್ರೀತಿಗೆ ಮನೆಯವರು ಯಾರೂ ಅಡ್ಡಿಯಾಗಿಲ್ಲ. ನಾಯಿಗಳನ್ನು ಸಾಕಿ ಸಲಹಲು ಕುಟುಂಬದವರು ಸಾಥ್ ಕೊಟ್ಟಿದ್ದಾರೆ. ಪ್ರೀತಿ ನಾರಾಯಣನ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಕೂಡ ಕ್ಯೂಟ್ ಪಪ್ಪಿಗಳನ್ನು ನೋಡಿಕೊಳ್ಳಲು ನೆರವಾಗುತ್ತಾರೆ. ಪ್ರಾಣಿಗಳನ್ನು ಪ್ರೀತಿಸುವ ಗುಣ ಅವರಲ್ಲೂ ಬಂದಿದೆ ಅನ್ನೋದೇ ಪ್ರೀತಿ ನಾರಾಯಣನ್ ಅವರಿಗೆ ಖುಷಿ ತಂದಿದೆ. ಬಗೆ ಬಗೆಯ ಶ್ವಾನಗಳಿಂದ ಸದಾ ಚಟುವಟಿಕೆಯಿಂದಿರುವ ಪ್ರೀತಿ ಅವರ ಮನೆ ನಿಜಕ್ಕೂ ನಂದನವನ. ಮೂಕ ಪ್ರಾಣಿಗಳ ಸೇವೆ ಮಾಡುತ್ತ ಅದರಲ್ಲೇ ಬದುಕಿನ ಆನಂದ ಅನುಭವಿಸುತ್ತಿರುವ ಪ್ರೀತಿ ಮನುಕುಲಕ್ಕೇ ಮಾದರಿಯಾಗಿದ್ದಾರೆ.

Related Stories

Stories by YourStory Kannada