ಮಾರುಕಟ್ಟೆಯಲ್ಲಿ ನಿಮ್ಮ ಚಿತ್ರಣ ಸೃಷ್ಟಿಸಿ ಉದ್ಯಮದ ಕಹಳೆ ಮೊಳಗಿಸಿ

ಟೀಮ್​​ ವೈ.ಎಸ್​​.

ಮಾರುಕಟ್ಟೆಯಲ್ಲಿ ನಿಮ್ಮ ಚಿತ್ರಣ ಸೃಷ್ಟಿಸಿ ಉದ್ಯಮದ ಕಹಳೆ ಮೊಳಗಿಸಿ

Wednesday October 14, 2015,

8 min Read

ಕೆಲವು ವರ್ಷಗಳ ಹಿಂದೆ ಹೂಡಿಕೆದಾರರ ಸಭೆಯೊಂದರಲ್ಲಿ ಭಾರತೀಯ ಉದ್ಯಮಶೀಲತೆ ಹಾಗೂ ಔದ್ಯಮಿಕ ಪ್ರಗತಿಯ ಕುರಿತಾಗಿ ಚರ್ಚೆಯಾಗುತ್ತಿತ್ತು. ಕೊನೆಗೆ ಈ ಚರ್ಚೆ ಉದ್ಯಮ ಕ್ಷೇತ್ರಗಳಿಂದ ಉದ್ಯಮ ಕ್ಷೇತ್ರದ ಮಿನುಗುತಾರೆಗಳ ವಿಚಾರಕ್ಕೆ ತಿರುಗಿತು. ಮಾರುಕಟ್ಟೆಗೆ ಬಂದ ಹೊಸ ಉದ್ಯಮಿಗಳ ವಿಚಾರದಲ್ಲಿ ಸಂಸ್ಥೆಯ ಹೆಸರು, ಸಂಸ್ಥಾಪಕರ ಹೆಸರು, ಆ ಸಂಸ್ಥೆ ಕಾರ್ಯಾಚರಣೆ ನಡೆಸುತ್ತಿರುವ ಕ್ಷೇತ್ರಗಳ ಪಟ್ಟಿ ಮಾಡಿದ ನಂತರವೂ ವಿಶೇಷ ಅನ್ನುವಂತ ಯಾವ ಉದ್ಯಮವೂ ಕಣ್ಣಿಗೆ ಬೀಳಲಿಲ್ಲ. ಇಂದು ದೊಡ್ಡ ದೊಡ್ಡ ಹೆಸರು ಗಳಿಸಿರುವ ಉದ್ದಿಮೆದಾರರೂ ಆರಂಭಿಕ ಉದ್ಯಮಗಳ ವಿಚಾರದಲ್ಲಿ ಪ್ರೌಢರಾಗದೇ ಇರುವ ಸಂಗತಿ ಸ್ಪಷ್ಟವಾಗಿತ್ತು.

image


ಭಾರತ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳ ನಡುವೆ ವ್ಯತ್ಯಾಸ ಗುರುತಿಸೋಣ. ಪ್ರತಿಯೊಂದು ಕಂಪನಿಗಳು ತನ್ನ ವ್ಯಾಪ್ತಿಯಲ್ಲಿ, ತನ್ನ ಕಾರ್ಯಕ್ಷೇತ್ರದೊಳಗೆ ತನ್ನದೇ ಆದ ಪ್ರತ್ಯೇಕ ಗುರುತು ಹಾಗೂ ಬ್ರಾಂಡ್ ಹೊಂದಿದೆ. ಇದು ಗ್ರಾಹಕರ ಮನಸ್ಸಿನಲ್ಲಿ ನೆಲೆನಿಲ್ಲಲು ಕಾರಣವೂ ಆಗಿದೆ. ಆ್ಯಪಲ್ ಸಂಸ್ಥೆಯ ಹೆಸರು ಹೇಳುತ್ತಿದ್ದಂತೆ ಅದರ ಉತ್ಪನ್ನಗಳ ಗುಣಮಟ್ಟ ಹಾಗೂ ಉಪಯೋಗಗಳು ಗ್ರಾಹಕರ ಮನಸ್ಸಿನಲ್ಲಿ ಥಟ್ಟನೆ ಮೂಡುತ್ತವೆ. ಅದೇ ರೀತಿ ಮಾರುತಿ ಕಂಪೆನಿ ಸಹ ತನ್ನ ಗುಣಮಟ್ಟ ಹಾಗೂ ಸುಲಭ-ಕೈಗೆಟುಕುವ ದರದ ಸಾಧ್ಯತೆಯಿಂದಾಗಿ ಭಾರತೀಯರಲ್ಲಿ ವಿಶ್ವಾಸ ಮೂಡಿಸಿದೆ. ಕೇವಲ ಕಂಪನಿಗಳಷ್ಟೇ ಅಲ್ಲದೇ ವ್ಯಕ್ತಿಗಳೂ ಸಹ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ. ಉದಾಹರಣೆಗೆ ನೆಲ್ಸನ್ ಮಂಡೇಲಾ, ಶಾರುಕ್ ಖಾನ್, ಸಚಿನ್ ತೆಂಡೂಲ್ಕರ್, ಮದರ್ ಥೆರೆಸಾ ಮುಂತಾದವರು ತಮ್ಮ ಭಿನ್ನ ಕೆಲಸ ಹಾಗೂ ವಿಭಿನ್ನ ಕ್ಷೇತ್ರಗಳ ಸಾಧನೆ ಮೂಲಕ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಆದರೆ, ಇಂದಿನ ಫ್ಲಿಪ್ ಕಾರ್ಟ್ ಅಥವಾ ಸ್ನ್ಯಾಪ್ ಡೀಲ್ ಸಂಸ್ಥೆಗಳು ಕಾರ್ಯಾಚರಣೆಯಲ್ಲೂ ಅಥವಾ ಯೋಜನೆಗಳಲ್ಲೂ ಪ್ರತ್ಯೇಕವಾಗಿವೆ ಎಂದು ಅನ್ನಿಸುವುದಿಲ್ಲ. ಅಥವಾ ಮಿಂತ್ರಾ ಹಾಗೂ ಜಬಾಂಗ್ ಇ-ಕಾಮರ್ಸ್ ಸಂಸ್ಥೆಗಳ ಕಾರ್ಯಾಚರಣೆಯಾಗಲಿ ಅಥವಾ ಮೇಕ್ ಮೈ ಟ್ರಿಪ್ ಮತ್ತು ಯಾತ್ರಾಗಳ ಕಾರ್ಯಶೈಲಿಯಾಗಲಿ ಭಿನ್ನವಾಗಿವೆ ಎಂದೆನಿಸುವುದಿಲ್ಲ.

ಕಾರಣ ಹುಡುಕಿದಾಗ ಈ ಹೊಸ ಸಂಸ್ಥೆಗಳು ಮಾರುಕಟ್ಟೆಗೆ ಕಾಲಿಟ್ಟ ನಂತರ ತಮ್ಮ ಸ್ವಂತ ಚಿತ್ರಣ ನೀಡುವ ಬದಲು ಮಾರುಕಟ್ಟೆಯ ಗ್ರಾಹಕರ ಕಣ್ಣಲ್ಲಿ ಕೇವಲ ವ್ಯಾಪಾರಿ ಸಂಸ್ಥೆಯ ಸಾಮಾನ್ಯ ಚಿತ್ರಣವನ್ನು ಮಾತ್ರ ಮೂಡಿಸಿದೆ. ಹಾಗಾಗಿ ಗ್ರಾಹಕರು ಇವುಗಳನ್ನೂ ಕೂಡ ಮೂರರಲ್ಲಿ ಮತ್ತೊಂದು ಎಂಬಂತೆ ಸ್ವೀಕರಿಸುತ್ತಿದ್ದಾರೆ. ಹೀಗಿದ್ದಾಗಲೂ ಈ ಸಂಸ್ಥೆಯ ಕಾರ್ಯಶೈಲಿಯನ್ನು ದೂಷಿಸುವಂತಿಲ್ಲ. ಏಕೆಂದರೆ ಈ ಸಂಸ್ಥೆಗಳ ಆರಂಭಿಕ ಹಂತದ ನಂತರ ಬೆಳವಣಿಗೆ, ಅಭಿವೃದ್ಧಿ, ವಿಸ್ತರಣೆ, ಮಾರುಕಟ್ಟೆ ಮಾಪನ, ನಿರಂತರ ಹಾಗೂ ನಿರ್ದಿಷ್ಟ ಪ್ರಮಾಣದ ಆದಾಯಗಳಿಗೆ, ಭದ್ರತೆ, ಭವಿಷ್ಯದ ಯೋಜನೆಗಳು ಮುಂತಾದ ನಿಯಮಿತವಾದ ಹಂತಗಳನ್ನು ದಾಟಬೇಕಿರುತ್ತದೆ. ಆದರೆ ಇಲ್ಲಿ ಸಂಸ್ಥಾಪಕರಾಗಲಿ ಮತ್ತು ಉದ್ಯೋಗಿಗಳಾಗಲಿ ಕೇವಲ ಈ ಹಂತಗಳನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿರುತ್ತಾರೆ ವಿನಃ ಮಾರುಕಟ್ಟೆಯ ಸಂಪೂರ್ಣ ವಿಶ್ವಾಸ ಗಳಿಕೆಯ ಅಥವಾ ಬ್ರಾಂಡಿಂಗ್ ಆಲೋಚನೆಗಳನ್ನು ನಡೆಸಿರುವುದಿಲ್ಲ.

ಮಾರುಕಟ್ಟೆಯನ್ನು ಸಮಗ್ರವಾಗಿ ಅವಲೋಕಿಸುವುದು ಓರ್ವ ಉದ್ದಿಮೆದಾರನಿಗೂ ಹಾಗೂ ಸಂಸ್ಥೆಗೂ ಅತ್ಯವಶ್ಯಕ ನಡೆ. ಇಲ್ಲಿ ಕೆಲವು ಪರಿಣಾಮಕಾರಿ ಸಲಹೆಗಳಿವೆ. ನೀವು ಇದನ್ನು ನಿಮ್ಮದೇ ವಿಧಾನದಲ್ಲಿ ಕಾರ್ಯರೂಪಕ್ಕಿಳಿಸಿ ಫಲಿತಾಂಶ ತಿಳಿದುಕೊಳ್ಳಬಹುದು.

1. ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಿ- ಬಿಸಿನೆಸ್ ಅಥವಾ ಬಿಸಿನೆಸ್ ಮೆನ್ ಆಗಿ ನೀವು ಮಾರುಕಟ್ಟೆಯ ಸದ್ಯದ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಳ್ಳಲೇಬೇಕು. ನೀವು ಉದ್ಯಮವನ್ನು ಆರಂಭಿಸಿದ ನಂತರ ನಿಮ್ಮ ಉತ್ಪನ್ನ ಅಥವಾ ಸೇವೆಯನ್ನು ಗ್ರಾಹಕರ ಮುಂದೆ ಪ್ರಚುರಪಡಿಸಲೇಬೇಕು. ಇಲ್ಲಿ ಈ ಕ್ಷೇತ್ರ ಅವನ/ಅವಳ ಅನುಭವ ಹಾಗೂ ಶೈಕ್ಷಣಿಕ ವಿದ್ಯಾಭ್ಯಾಸದ ಆಧಾರದಲ್ಲಿ ನಿರ್ಧರಿತವಾಗಿರುತ್ತದೆ. ನಿಮ್ಮ ವಿದ್ಯಾರ್ಹತೆ ಅಥವಾ ಅನುಭವ, ಕೆಲವೊಮ್ಮೆ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆ ಅನುಭವ ಸಹ ನಿಮ್ಮ ಉದ್ಯಮವನ್ನು ಪ್ರಾರಂಭಿಸಲು ನೆರವಾಗುತ್ತದೆ. ನಿಮ್ಮ ಸಾಮರ್ಥ್ಯದ ಆಧಾರದಲ್ಲಿ ನೀವು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಮೊದಲು ತೀರ್ಮಾನಿಸಿ.

ಉದಾಹರಣೆಗೆ, ನೀವೊಬ್ಬರು ಶಿಕ್ಷಕರಾಗಿದ್ದರೆ, ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಉದ್ಯಮ ಆರಂಭಿಸುವುದು ಉತ್ತಮ. ಇದು ವಾಸ್ತವತೆಯನ್ನು ಗುರುತಿಸಿ ನಿಮ್ಮ ಅನುಭವ, ಆಸಕ್ತಿ, ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ನಿಮ್ಮ ಉದ್ಯಮವನ್ನು ನಿರ್ಧರಿಸುತ್ತದೆ. ನಿಮ್ಮ ಆಸಕ್ತಿ ಹಾಗೂ ಪ್ರವೃತ್ತಿಯನ್ನೇ ಪೂರ್ಣಕಾಲಿಕ ವೃತ್ತಿಯನ್ನಾಗಿಸಿಕೊಂಡರೆ ಯಶಸ್ಸು ಬೇಗನೆ ಲಭ್ಯವಾಗುತ್ತದೆ. ಇದನ್ನೇ ಮಾರುಕಟ್ಟೆಯ ವಾಸ್ತವ ಉದ್ಯಮ ಚಿತ್ರಣ ಎನ್ನಬಹುದು.

image


ಈ ವಾಸ್ತವದ ಸಮರ್ಪಕತೆಯನ್ನು ನೀವು ಪುಸ್ತಕದಲ್ಲಾದರೂ ನಮೂದಿಸಿ ಅಥವಾ ನಿಮ್ಮ ಬುದ್ಧಿಯಲ್ಲಿ ಬೇಕಿದ್ದರೆ ಸಂಗ್ರಹಿಸಿಟ್ಟುಕೊಳ್ಳಿ. ಆದರೆ ಉದ್ಯಮದ ಮುಖ್ಯ ಹಂತಗಳಾದ ನೆಟ್‌ವರ್ಕಿಂಗ್ ಅಥವಾ ಜಾಲ ವಿಸ್ತರಣೆ, ಮುಖತಃ ಮುಖ್ಯ ವ್ಯಕ್ತಿಗಳೊಂದಿಗೆ ಮಾತುಕತೆ, ನಿಮ್ಮ ಉತ್ಪನ್ನ ಅಥವಾ ಸೇವೆಗಳನ್ನು ಮಾರಾಟ ಮಾಡಲು ವೇದಿಕೆಯೊಂದನ್ನು ನಿರ್ಮಿಸುವುದು ಇವೇ ಮೊದಲಾದ ಹಂತಗಳಲ್ಲಿ ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನಿರ್ವಹಿಸಿ. ಹೀಗಾಗಿ ಆ್ಯಪಲ್ ಉತ್ಪನ್ನದಲ್ಲಿ ಗುಣಮಟ್ಟ, ವಿಶ್ವಾಸಾರ್ಹತೆ, ವಿನ್ಯಾಸಗಳೇ ಅಲ್ಲದೇ ಪ್ರತಿಯೊಂದು ಸಣ್ಣ ಪುಟ್ಟ ವ್ಯಾವಹಾರಿಕ ಹಂತಗಳಿಂದ ಹಿಡಿದು ಮುಖ್ಯವಾದ ಉದ್ಯಮದ ಯೋಜನಾ ಘಟ್ಟದವರೆಗೂ ಪ್ರತಿಯೊಂದು ಅಂಶವನ್ನು ಸಮರ್ಪಕವಾಗಿ ನಿರ್ವಹಿಸಿದ ಕಾರಣ ಜನತೆಯ ದೃಷ್ಟಿಯಲ್ಲಿ ಅಚ್ಚಳಿಯದೇ ಉಳಿದಿದೆ.

2.ಮಾರುಕಟ್ಟೆಯ ಅಸ್ಪಷ್ಟತೆಯ ತೊಡಕುಗಳನ್ನು ಗುರುತಿಸುವುದು-ಈ ಅಸ್ಪಷ್ಟತೆಗಳೆಂದರೆ ಮಾರುಕಟ್ಟೆಯಲ್ಲಿ ಸ್ಪಷ್ಟವಾಗಿ ನಿಲುಕಲಾರದಂತಹ ತೊಡಕುಗಳು ಅಂದರೆ ಉದ್ಯಮಿಯೊಬ್ಬ ನೇರವಾಗಿ ಗುರುತಿಸಿ ಪರಿಹರಿಸಲು ಸಾಧ್ಯವಿಲ್ಲದಂತಹ ಸಮಸ್ಯೆಗಳು. ಓರ್ವ ಉದ್ದಿಮೆದಾರನಾಗಿ ಅಥವಾ ಒಂದು ಉದ್ಯಮವನ್ನು ನಡೆಸುವ ಮುಖ್ಯ ವ್ಯಕ್ತಿಯಾಗಿ ಯಾವುದೇ ಬಿಸಿನೆಸ್ ಮೆನ್ ಇಂತಹ ಅಸ್ಪಷ್ಟ ತೊಡಕುಗಳ ವಿಚಾರದಲ್ಲಿ ಜಾಗೃತನಾಗಿರಬೇಕಾಗುತ್ತದೆ. ಹಣವಿಲ್ಲದಿದ್ದರೆ ಓರ್ವ ವ್ಯಕ್ತಿಯಾಗಿ ಸಂದರ್ಭವನ್ನು ನಿರ್ವಹಿಸಬಹುದು. ಆದರೆ ಒಂದು ಸಂಸ್ಥೆಯಾಗಿ ನಿರಂತರ ಹಣದ ಹರಿವಿಲ್ಲದೇ ದೀರ್ಘಕಾಲಿಕ ಆಲೋಚನೆ ನಡೆಸಲು ಸಾಧ್ಯವಿಲ್ಲ.

ಈ ಅಸ್ಪಷ್ಟತೆ ಉದ್ದಿಮೆದಾರನ ಹಾಗೂ ಉದ್ಯಮದ ಸಾಮರ್ಥ್ಯವೂ ಹೌದು, ಬಲಹೀನತೆಯೂ ಹೌದು. ನೀವು ಮಹತ್ವಾಕಾಂಕ್ಷಿಯಾಗಿದ್ದು ನಿಮ್ಮ ಪ್ರಾರಂಭಿಕ ಸಂಸ್ಥೆಯಲ್ಲಿ ಕೇವಲ ಮೂವರು ಉದ್ಯೋಗಿಗಳಿದ್ದೀರ. ಖಂಡಿತವಾಗಿ ನಿಮ್ಮಿಂದ 100 ಕೋಟಿ ರೂ. ಪ್ರಾಜೆಕ್ಟ್ ಪಡೆದು ನಿರ್ವಹಿಸಲು ಸಾಧ್ಯವಿಲ್ಲ. ಏಕೆಂದರೆ ನಿಮಗೆ ಹಂಬಲವಿದೆ, ಮಹತ್ವಾಕಾಂಕ್ಷೆಯಿದೆ, ಪ್ರತಿಭೆಯೂ ಇದೆ. ಆದರೆ ನಿರ್ದಿಷ್ಟ ಸಮಯದಲ್ಲಿ ಯೋಜನೆ ಮುಗಿಸಿಕೊಡಲು ಅಗತ್ಯವಿರುವ ಸೌಕರ್ಯಗಳೇ ಇಲ್ಲ.

ಈ ಅಸ್ಪಷ್ಟತೆಗಳನ್ನು ಗುರುತಿಸುವುದು ಅಷ್ಟೇ ಮುಖ್ಯ. ಏಕೆಂದರೆ ಇವು ಸರಳ ಅಂಶಗಳಾಗಿದ್ದು, ಇದರಿಂದ ನಿಮ್ಮ ಮಾರುಕಟ್ಟೆಯ ಗೌರವ ವೃದ್ಧಿಯಾಗುತ್ತದೆ. ಒಮ್ಮೆ ನಿಮ್ಮ ಅಸ್ಪಷ್ಟ ತೊಡಕುಗಳನ್ನು ಗುರುತಿಸದರೆ ಮುಂದೆ ಜಾಲ ವಿಸ್ತರಣೆ, ಮುಖ್ಯವ್ಯಕ್ತಿಗಳ ಭೇಟಿ, ಮಾರುಕಟ್ಟೆ ಅವಲೋಕನ ಮುಂತಾದ ಸಂದರ್ಭದಲ್ಲಿ ಈ ಅಸ್ಪಷ್ಟತೆ ಕಾಣಿಸಿಕೊಳ್ಳದಂತೆ ಪರಿಹಾರ ಹುಡುಕಿಕೊಳ್ಳಬಹುದು.

ಈ ಅಸ್ಪಷ್ಟತೆ ಒಂದು ಬಿಂಬ ಹುಟ್ಟುಹಾಕಲು ಅತ್ಯಂತ ಮೌಲ್ಯಯುತವೂ ಹೌದು. ಆ್ಯಪಲ್ ತನ್ನ ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ಸಾಕಷ್ಟು ಪರಿಶ್ರಮಪಟ್ಟಿತ್ತು. ಪ್ರಾಥಮಿಕ ಹಂತದಲ್ಲಿ ಉತ್ಪನ್ನದ ಬೆಳವಣಿಗೆ ಹಾಗೂ ವಿನ್ಯಾಸಕ್ಕಾಗಿ ಸಾಕಷ್ಟು ಹೂಡಿಕೆ ಮಾಡಿತ್ತು. ಈ ಹಂತದಲ್ಲಿ ಸ್ಟೀವ್ ಜಾಬ್ಸ್ ತನ್ನ ಇಂಜಿನಿಯರ್‌ಗಳಿಗೆ ಉತ್ತಮ ಉತ್ಪನ್ನ ಸೃಷ್ಟಿಗಾಗಿ ಉತ್ತೇಜಿಸಿದ ಎನ್ನುವ ಮಾತಿದೆ. ಆದರೆ ಯಾವತ್ತಿಗಾದರೂ ಸ್ಟೀವ್ ಜಾಬ್ಸ್ ತನ್ನ ತೆರೆದ ಮಾರುಕಟ್ಟೆಯ ಲಾಭಾಂಶವನ್ನಾಗಲಿ, ಅಂಕಿಅಂಶಗಳನ್ನಾಗಲಿ ತನ್ನ ಉದ್ಯೋಗಿಗಳಿಗೆ ಹೇಳಿದ್ದರೇ? ಹಾಗೆನ್ನಿಸುವುದಿಲ್ಲ.

3. ನಿಮ್ಮ ಸ್ವಂತ ಅನುಭವಗಳನ್ನು ಬರೆಯಿರಿ- ಒಂದು ಸಲ ನಿಮ್ಮ ಉದ್ಯಮದ ಸ್ಪಷ್ಟ ಸಂಗತಿಗಳ ಚಿತ್ರಣ ಹಾಗೂ ಅಸ್ಪಷ್ಟ ತೊಡಕುಗಳ ಮಾಹಿತಿ ಲಭಿಸಿದ ನಂತರ ಅವುಗಳನ್ನು ಸಾಧ್ಯವಾದರೆ ಬರೆಯಲು ಆರಂಭಿಸಿ. ಇದು ನಿಮ್ಮ ಪರಿಚಯವನ್ನು ಅದ್ಧೂರಿಯಾಗಿ ಮಾಡಿಕೊಡಬೇಕು ಅನ್ನುವ ಉದ್ದೇಶದಿಂದಲ್ಲದಿದ್ದರೂ ಮುಂದೆ ಈ ಸಂಗತಿಗಳು ನಿಮ್ಮ ಉದ್ಯಮವನ್ನು ಮುಂದುವರೆಸಲು ಅಗತ್ಯವಿರುತ್ತದೆ. ಭವಿಷ್ಯದಲ್ಲಿ ನಿಮ್ಮ ಉದ್ಯಮದ ಒಳಗೆ ಅಸ್ಪಷ್ಟ ತೊಡಕುಗಳು ನುಸುಳದಂತೆ ತಡೆಯಲು ತನ್ಮೂಲಕ ಸೂಕ್ತವಾದ ವ್ಯಾವಹಾರಿಕ ನೀತಿ ಹೆಣೆಯಲು ನಿಮ್ಮ ಬರವಣಿಗೆ ಅತ್ಯವಶ್ಯಕ.

ನಿಮ್ಮ ಈ ಬರವಣಿಗೆ ಆಗಾಗ ಅಪ್‌ಗ್ರೇಡ್ ಆಗುತ್ತಿರಲಿ ಹಾಗೂ ನಿಮ್ಮ ಸಂಸ್ಥೆಯಲ್ಲಿ ಆಗಾಗ ಸಾಧ್ಯವಾಗುವ ಪ್ರಗತಿಯನ್ನು ಸಮಯಾಧಾರಿತವಾಗಿ ನಮೂದಿಸಿ. ಈ ಬಗ್ಗೆ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಿ. ಮುಖ್ಯವಾಗಿ ನಿಮ್ಮ ಉದ್ಯೋಗಿಗಳ ಬಳಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಿ, ನೀವು ಬರೆದ ಅನುಭವಗಳನ್ನು ಶೇರ್ ಮಾಡಿ. ನಿಮ್ಮದೇ ಸಂಸ್ಥೆಯ ಉದ್ಯೋಗಿಗಳಿಂದಲೂ ನಿಮ್ಮ ಬರವಣಿಗೆಗೆ ಸಂಬಂಧಿಸಿದಂತೆ ಕೆಲವು ಟಿಪ್ಸ್ ಸಿಗುವ ಸಾಧ್ಯತೆ ಇರುತ್ತದೆ. ಇದರಿಂದ ಎರಡು ಲಾಭ. ಒಂದು ಆರೋಗ್ಯಕರ ಚರ್ಚೆಯ ಮೂಲಕ ಮುಂದಿನ ದಿನಗಳಲ್ಲಿ ಸಂಸ್ಥೆಯ ಯೋಜನೆ ಹಾಗೂ ವ್ಯಾಪ್ತಿ ವೃದ್ಧಿ ಸಾಧ್ಯವಾಗುತ್ತದೆ. ಎರಡನೆಯದು ನಿಮ್ಮ ಹಾಗೂ ನಿಮ್ಮ ಉದ್ಯೋಗಿಗಳ ನಡುವಿನ ಸಂಬಂಧ ಸುಧಾರಿಸುತ್ತದೆ.

ನಿಮ್ಮ ಬರವಣಿಗೆ ಸಂಪೂರ್ಣವಾಗಿ ನಿಮ್ಮ ಹಾಗೂ ನಿಮ್ಮ ಸಂಸ್ಥೆಯ ಈವರೆಗಿನ ಅನುಭವಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಹಾಗಾಗಿ ಇದನ್ನು ಓದುವ ಜನತೆಗೆ ನಿಮ್ಮ ಸಂಸ್ಥೆಯ ಬಗ್ಗೆ, ನಿಮ್ಮ ಬಗ್ಗೆ ಜೊತೆಗೆ ನಿಮ್ಮ ಮುಂದಿನ ಆಲೋಚನೆಗಳ ಬಗ್ಗೆ ಸ್ಪಷ್ಟವಾದ ಸಂದೇಶ ರವಾನೆಯಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ನಿಮ್ಮ ಸಂಸ್ಥೆಯ ಮೇಲಿನ ನಂಬಿಕೆ ವೃದ್ಧಿಯಾಗಬಹುದು.

ದೊಡ್ಡ ದೊಡ್ಡ ಕಂಪನಿಗಳು ತಮ್ಮ ವಿಷನ್ ಸ್ಟೇಟ್ ಮೆಂಟ್ ಎಂಬ ಪ್ರತ್ಯೇಕ ಬರಹವನ್ನು ಆಗಾಗ ಪ್ರಕಟಿಸುತ್ತಲೇ ಇರುತ್ತವೆ. ಇದು ಮಾರುಕಟ್ಟೆಯಲ್ಲಿ ಸಂಚರಿಸಿದಾಗ ಒಂದು ಹಂತದ ಪ್ರಚಾರವನ್ನೂ ಪಡೆದುಕೊಳ್ಳುತ್ತದೆ.

4. ಭೇಟಿ ಮತ್ತು ಹಾರೈಕೆ- ನೀವು ಹೊರಗೆ ಹೋಗದೇ, ಬೇರೆ ಬೇರೆ ವರ್ಗದ ಜನರನ್ನು ಭೇಟಿಯಾಗದಿದ್ದರೆ ಸಂಸ್ಥೆಯ ಮಾರ್ಕೆಟಿಂಗ್ ಅತ್ಯಂತ ಕಷ್ಟ ಹಾಗೂ ಅಪೂರ್ಣ. ಮಾರುಕಟ್ಟೆಯಲ್ಲಿ ನಿಮ್ಮ ಉತ್ಪನ್ನ ಅಥವಾ ಸೇವೆಯ ಪ್ರಾಧಾನ್ಯತೆ ಜನಗಳಿಗೆ ಅರಿವಾಗಬೇಕೆಂದರೆ ಖುದ್ದಾಗಿ ನೀವೇ ಇದರ ಬಗ್ಗೆ ಜಾಗೃತಿ ಉಂಟುಮಾಡಬೇಕು. ಕೆಲವು ಕಾರ್ಯಕ್ರಮಗಳು, ಸೆಮಿನಾರ್‌ಗಳು, ಕಾರ್ಯಾಗಾರಗಳು ಮುಂತಾದ ಸಾರ್ವಜನಿಕ ಹಾಜರಾತಿಯ ವೇದಿಕೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು.

ಒಂದು ವೇಳೆ ನಿಮ್ಮ ಸಂಸ್ಥೆ ಸರಳವಾದ ಭಾಷೆಯಲ್ಲಿ ತನ್ನ ಉತ್ಪನ್ನ ಅಥವಾ ಸೇವೆಯನ್ನು ಪ್ರಚುರಪಡಿಸುವುದಾದರೆ ಇಂತಹ ವೇದಿಕೆಗಳು ಅತ್ಯಂತ ಸಮರ್ಪಕ. ಸಂಸ್ಥಾಪಕ ಎಲ್ಲಾ ಕಡೆಗೂ ಹೋಗಬೇಕಾದ ಅಗತ್ಯವಿಲ್ಲ. ಆದರೆ ಅಗತ್ಯ ಬಿದ್ದ ಸಂದರ್ಭದಲ್ಲಿ ಮುಖ್ಯವಾದ ಕಾರ್ಯಾಗಾರಗಳಲ್ಲಿ ಅದರಲ್ಲೂ ಹೂಡಿಕೆದಾರರು ಹೆಚ್ಚಾಗಿ ಭಾಗಿಯಾಗುವ ಅಂತರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಸಂಸ್ಥಾಪಕ ಹೋಗಲೇಬೇಕು. ಏಕೆಂದರೆ, ಇಂತಹ ಕಾರ್ಯಕ್ರಮಗಳು ಒದಗಿಸುವ ವೇದಿಕೆ ಸಂಸ್ಥೆಗೆ ಅಗತ್ಯವಿರುವ ಹೂಡಿಕೆಯನ್ನು ತಂದುಕೊಡುತ್ತದೆ. ಜೊತೆಗೆ ಸಂಸ್ಥೆಯ ಕಾರ್ಯಾಚರಣೆಯನ್ನು ಪ್ರಚಾರ ಮಾಡುತ್ತದೆ.

5. ನಿಮ್ಮ ಸಾಮರ್ಥ್ಯದೊಂದಿಗೆ ಆಟವಾಡಿ- ಮಹತ್ವಾಕಾಂಕ್ಷಿಯಾಗಿರುವುದು ಹಾಗೂ ನಿಗದಿತ ಸಮಯಕ್ಕೆ ಸೇವೆ ಒದಗಿಸುವುದು ಎರಡೂ ಉದ್ಯಮಿ ಆಗುವವನ ಅತೀ ಮುಖ್ಯ ಅರ್ಹತೆಯಾಗಿರಬೇಕು. ಈಗಾಗಲೇ ಚರ್ಚಿಸಿರುವಂತೆ ಮೂವರು ಉದ್ಯೋಗಿಗಳಿಂದ 100 ಕೋಟಿ ಯೋಜನೆ ಮುಗಿಸಲು ಅಸಾಧ್ಯ. ಆದರೆ, ಈ ಸಂಬಂಧ ಯೋಜನಾ ಪತ್ರವೊಂದನ್ನು ಸಿದ್ಧಪಡಿಸಿ ನಿಮ್ಮ ಯೋಜನೆಗೆ ಬೇಕಿರುವ ಸೌಕರ್ಯಗಳನ್ನು ಹೊರಗಿನ ಮೂಲದಿಂದ ಪಡೆಯಬಹುದು. ಅಂದರೆ, ಮೂವರಿಂದ ಸಾಧ್ಯವಿಲ್ಲದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬಲ್ಲ ಮೂಲಗಳಿಗೆ ಹಂಚಿ ಮಾಡಿಸಬಹುದು. ಇಲ್ಲಿ ಮುಖ್ಯವಾದದ್ದು ಬದ್ಧತೆ, ಮಹತ್ವಾಕಾಂಕ್ಷೆ ಹಾಗೂ ನಿಮ್ಮ ಸಾಮರ್ಥ್ಯದ ಮೇಲಿನ ನಂಬಿಕೆಯಷ್ಟೇ.

ಸಮರ್ಪಕವಾಗಿ ಜಾರಿಗೊಳಿಸುವ ಸಾಮರ್ಥ್ಯ ನಿಮಗಿದ್ದರೆ, ಎಲ್ಲವೂ ಸಾಧ್ಯ. ನೀವು ಯಾವ ಕ್ಷೇತ್ರದಲ್ಲಿ ಕಾರ್ಯಾಚರಣೆ ಮಾಡಬೇಕೆಂದಿದ್ದೀರೋ ಅಲ್ಲಿ ನಿಮ್ಮ ಸಾಮರ್ಥ್ಯ ಪರಿಪೂರ್ಣವಾಗಿ ಬಳಕೆಯಾಗಬೇಕು ಹಾಗೂ ನಿಮ್ಮಷ್ಟೇ ಸಮರ್ಥರಾಗಿ ನಿಮ್ಮ ಉದ್ಯೋಗಿಗಳೂ ಕೆಲಸ ಮಾಡುವಂತಿರಬೇಕು. ಅಥವಾ ನೀವು ಅವರಿಂದ ಅಷ್ಟೇ ಸಮರ್ಥವಾದ ಔಟ್ ಪುಟ್ ಪಡೆದುಕೊಳ್ಳಬೇಕು. ಆಗ ಮಾತ್ರ ಸಂಸ್ಥೆಯ ಪ್ರಗತಿ ಸಾಧ್ಯ.

ನೀವು ಸಂಸ್ಥೆಯನ್ನು ಆರಂಭಿಸಿದ ಬಳಿಕ ಗುಣಮಟ್ಟದ ಸೇವೆ ನೀಡುತ್ತಿದ್ದೀರಿ ಎಂದಾದರೆ, ಭವಿಷ್ಯದಲ್ಲಿ ಸಂಸ್ಥೆಯ ಮೂಲ ಹಾಗೂ ಯೋಜನೆಯ ರೂಪುರೇಷೆ ಸಿದ್ಧಪಡಿಸಿಕೊಳ್ಳುತ್ತಿದ್ದೀರಿ ಎಂದಾದರೆ ಈಗ ನಿಮ್ಮ ಸಾಮರ್ಥ್ಯದೊಂದಿಗೆ ಆಟ ಆರಂಭಿಸಿ, ನಿಮ್ಮ ವೈಯಕ್ತಿಕ- ಔದ್ಯಮಿಕ ಪರಿಚಯ ಮಾಡಿಕೊಳ್ಳಿ.

ಉದಾಹರಣೆಗೆ, ಟಾಟಾ ತಯಾರಿಕಾ ಸಂಸ್ಥೆಯೊಂದನ್ನು ಪ್ರಾರಂಭಿಸುವಾಗ ದೀರ್ಘಕಾಲಿಕ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವ ಯೋಜನೆ ಹೊಂದಿದ್ದರು. ಅದೇ ರೀತಿ ಟಾಟಾ ಬೇರೆ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಆದರೆ ಈ ಹೊಸ ಉದ್ಯಮದಲ್ಲಿ ಟಾಟಾ ಗುರುತಿಸಿಕೊಂಡಿದ್ದು ತಮ್ಮ ತಯಾರಿಕಾ ಸಂಸ್ಥೆಯ ಮೂಲಕ.

6. ಎಚ್ಚರಿಕೆಯಿಂದ ನಿಮ್ಮ ವ್ಯಕ್ತಿತ್ವವನ್ನು ಚಿತ್ರಿಸಿಕೊಳ್ಳಿ- ನಿಮ್ಮ ಔದ್ಯಮಿಕ ಚಿತ್ರಣವನ್ನು ಸೃಷ್ಟಿಸುವುದು ರಾತ್ರಿ ಬೆಳಗಾಗುವಷ್ಟರಲ್ಲಿ ಸಾಧ್ಯವಾಗುವ ವಿದ್ಯಮಾನವಲ್ಲ. ಮೊದಲು ನೀವು ಇಟ್ಟ ಹೆಜ್ಜೆ ದೃಢಪಡಿಸಿಕೊಂಡು, ನಿಮ್ಮ ಸಂಕಲ್ಪದನ್ವಯ ಹೆಜ್ಜೆ ಮುಂದಿಡಬೇಕು. ಕೆಲವು ದೂರ ಸಾಗಿದ ನಂತರ ನಿಮ್ಮ ಹೆಜ್ಜೆ ಗುರುತು ಕಾಣಿಸುತ್ತದೆ. ಉದ್ಯಮ ಕ್ಷೇತ್ರದಲ್ಲಿ ನಿಮ್ಮ ಪರಿಚಯ ಹೀಗೆ ಆಗಬೇಕು. ಇಲ್ಲಿ ನಿಮ್ಮ ತೊಡಕುಗಳು, ತಪ್ಪುಗಳು ಹಾಗೂ ಮೈಲಿಗಲ್ಲು ನಿಮ್ಮ ಚಿತ್ರಣಕ್ಕೆ ಬಣ್ಣಬಳಿಯುತ್ತದೆ.

ನಿಮ್ಮಿಂದಾಗುವ ತಪ್ಪುಗಳು ಕೆಲವೊಮ್ಮೆ ನಿಮ್ಮ ಸಂಸ್ಥೆಯ ಆಂತರಿಕ ಪ್ರಗತಿಗೆ ಧಕ್ಕೆ ತರಬಹುದು. ಹಾಗಾಗಿ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕೆಲವೊಮ್ಮೆ ಕ್ಷಮೆ ಕೋರಬೇಕಾಗುತ್ತದೆ. ಸಂಸ್ಥೆಯ ಪ್ರಗತಿಯ ಕಾರಣ ಇಂತಹ ಕ್ಷಮೆ ಕೋರುವ ವರ್ತನೆ ಅಸಹಜ ಅಥವಾ ಅತಿಶಯವೇನಲ್ಲ.

ಸಂಸ್ಥೆಯೊಂದನ್ನು ಕಟ್ಟುವಾಗ ದೀರ್ಘಕಾಲಿಕ ಯೋಜನೆಗಳ ರೂಪುರೇಷೆ ಹೊಂದಬೇಕಾಗಿರುತ್ತದೆ. ಹಾಗಾಗಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳದಿರುವುದೇ ಒಳಿತು. ಆಗಾಗ ಬದಲಾಗುವ ಯೋಜನೆಗಳಿಂದ ದೊಡ್ಡ ಮಟ್ಟದ ಆಶಯ ಅಸಾಧ್ಯ. ಪ್ರಾರಂಭಿಕ ಸಂಸ್ಥೆಗಳಲ್ಲಿ ಸಣ್ಣ ತಪ್ಪುಗಳು ಗುರುತಿಸಲು ಸಾಧ್ಯವಿಲ್ಲ. ಆದರೆ ಸಂಸ್ಥೆಯ ಪ್ರಗತಿಯ ವೇಳೆ ಇವೇ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಇಂತಹ ಕ್ಷಿಪ್ರ ಪರಿಹಾರ ಹಾಗೂ ತಪ್ಪುಗಳಾಗದಂತೆ ಎಚ್ಚರವಹಿಸುವ ವ್ಯಾವಹಾರಿಕ ಪ್ರಜ್ಞೆ ಸಹ ನಿಮ್ಮ ಚಿತ್ರಣವನ್ನು ವೈಭವೀಕರಿಸಬಹುದು.

7.ನೀವು ಕೇಳುವುದನ್ನೇ ನೀವು ನೋಡುತ್ತೀರಿ- ಒಂದು ಸಲ ನಿಮ್ಮ ಔದ್ಯಮಿಕ ಹಾಗೂ ವ್ಯಾವಹಾರಿಕ ಉತ್ತಮ ಚಿತ್ರಣ ಸೃಷ್ಟಿಯಾದರೆ ನಿಮ್ಮ ಮಾರುಕಟ್ಟೆ ವ್ಯಾಪ್ತಿಯಲ್ಲಿ ಅಥವಾ ಹೊರಗಿನ ಅಂತರಾಷ್ಟ್ರೀಯ ವ್ಯಾವಹಾರಿಕ ಪ್ರಪಂಚದಲ್ಲಿ ನೀವು ಗುರುತಿಸಿಕೊಳ್ಳುತ್ತೀರಿ. ಇದರಿಂದ ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರೂ ಮೂಲದಿಂದ ಹೊಸ ಹೊಸ ಯೋಜನೆಗಳು, ಅವಕಾಶಗಳು ಹರಿದುಬರಬಹುದು. ಇಲ್ಲಿನ ನಿಮ್ಮ ಅನುಭವ ನಿಮ್ಮ ಚಿತ್ರಣದ ಗುಣಮಟ್ಟದ ಮೇಲೆ ನಿರ್ಧರಿತವಾಗಿರುತ್ತದೆ. ವ್ಯಾವಹಾರಿಕ ವಿಶ್ವದಲ್ಲಿ ಮೋಸ, ವಂಚನೆ, ಕಪಟ ಅಥವಾ ಇನ್ಯಾವುದೋ ಗಿಮಿಕ್ ಮಾಡಿ ಸಾಕಷ್ಟು ಕಾಲ ನೆಲೆ ನಿಲ್ಲಲು ಅಸಾಧ್ಯ. ಇಂದಿನ ಸಾಮಾಜಿಕ ಜಾಲತಾಣದ ಪ್ರಭಾವದಿಂದ ದೊಡ್ಡ ದೊಡ್ಡ ಬ್ರಾಂಡೆಡ್ ಸಂಸ್ಥೆಗಳೇ ಅಭದ್ರತೆ ಅನುಭವಿಸುತ್ತಿವೆ. ನಮಗೆಲ್ಲರಿಗೂ ಐಐಪಿಎಂ ಹಗರಣದ ಬಗ್ಗೆ ಗೊತ್ತಿದೆ. ಒಂದು ಕಾಲಘಟ್ಟದಲ್ಲಿ ಶೈಕ್ಷಣಿಕ ಉದ್ಯಮದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಇದು ಈಗ ನೇಪಥ್ಯಕ್ಕೆ ಸರಿದಿದೆ. ವ್ಯಾವಹಾರಿಕ ಕ್ಷೇತ್ರದಲ್ಲಿ ನಿಮ್ಮ ಮಾತುಗಳನ್ನು ಉಳಿಸಿಕೊಳ್ಳದಿದ್ದರೆ ಇದೇ ಪರಿಣಾಮ ನಿಮಗೂ ಕಾದಿದೆ.

ಬ್ರಾಂಡ್ ಐಡಿಯೇಷನ್ ಕನ್ಸಲ್ಟೆಂಟ್, ತರಬೇತುದಾರ, ಸೃಜನಶೀಲ ಚಿಂತಕ ಹಾಗೂ ಬರಹಗಾರ ವಿನಯ್ ಕಾಂಚನ್ ಹೀಗೆ ಹೇಳುತ್ತಾರೆ.

“ನೀವು ಉದ್ಯಮವೊಂದನ್ನು ಆರಂಭಿಸಿ, ವ್ಯಾವಹಾರಿಕ ಪ್ರಪಂಚದೊಳಗೆ ಕಾಲಿಟ್ಟಾಗ ನಿಮ್ಮ ಮನಸ್ಥಿತಿ ಹಾಗೂ ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳಲೇಬೇಕು. ನಿಮ್ಮ ಕ್ರಿಯಾತ್ಮಕ ಆಲೋಚನೆಗಳ ಬಗ್ಗೆ ಮಾತನಾಡದೇ ಕೇವಲ ವಾಸ್ತವದ ಸುಳ್ಳುಗಳನ್ನು ಪೋಣಿಸುವುದರಿಂದ ನೀವು ಹೆಚ್ಚು ಕಾಲ ಬಾಳಲಾರಿರಿ.”

ಸಾಂಸ್ಕೃತಿಕ ಬದಲಾವಣೆಗಳಿಂದಲೂ ವ್ಯಾವಹಾರಿಕ ಪ್ರಪಂಚದಲ್ಲಿ ಬದಲಾವಣೆಗಳಾಗುತ್ತಿವೆ. ಹಾಗೂ ಈ ಬದಲಾವಣೆಗೆ ಹೊಂದಿಕೊಳ್ಳಬೇಕಾಗಿದೆ. ಇದು ಮಾನಸಿಕ ವ್ಯಾಪ್ತಿಯನ್ನು ಹಿಗ್ಗಿಸುವ ಮಹತ್ವದ ಬೆಳವಣಿಗೆ.

ಎರಡನೇ ಸವಾಲು ಸಮೂಹ ಯೋಜನೆಗಳ ವಿಚಾರದಲ್ಲಿ ಸಂಸ್ಥೆಯ ಸಂಪೂರ್ಣ ಸಹಭಾಗಿತ್ವ. ಸತತ ಅಭ್ಯಾಸದಿಂದ ಮಾತ್ರ ಪರಿಪೂರ್ಣ ಫಲಿತಾಂಶ ಸಾಧ್ಯ. ಇದಕ್ಕೆ ಸಂಸ್ಥಾಪಕರ ಆಸಕ್ತಿ ಹಾಗೂ ಸಹಭಾಗಿತ್ವ ಅತ್ಯಂತ ಅವಶ್ಯಕ. ಯಾವುದಾದರೂ ವ್ಯಾವಹಾರಿಕ ಆಲೋಚನೆಗಳನ್ನು ಜಾರಿಗೊಳಿಸುವ ಮುನ್ನ ಸರಳೀಕರಿಸಿ ಅರ್ಥಗರ್ಭಿತವಾಗಿ ಹಾಗೂ ಸಂಪರ್ಕಿಸಲು ಸಾಧ್ಯವಾಗುವಂತೆ ಮಾರ್ಪಡಿಸಿ ಸಂದೇಶಗಳ ಮೂಲಕ ಹರಡಬೇಕು. ಬಹುತೇಕ ಉದ್ಯಮಗಳು ಹೊಸದಾಗಿ ಆಲೋಚಿಸದೇ, ವಿಭಿನ್ನವಾಗಿ ಪ್ರಯತ್ನಿಸದೇ ಕ್ಷಿಪ್ರಗತಿಯಲ್ಲಿ ಲಾಭ ಹೊಂದಲು ಯೋಜನೆ ಹೆಣೆಯುತ್ತವೆ. ಇದರಿಂದ ಸಂಸ್ಥೆ ದೀರ್ಘಕಾಲಿಕ ಪ್ರಗತಿ ಹೊಂದುವುದಿಲ್ಲ.

ಸಮರ್ಥ ಗ್ರಾಹಕರನ್ನು ಹೊಂದುವುದರ ಬಗ್ಗೆ ಯಾವುದೇ ಮೂಲದಿಂದ ಬಂದ ಆಲೋಚನೆಯಾದರೂ ಅದನ್ನು ಸ್ವೀಕರಿಸಿ ಅಭಿವೃದ್ಧಿಪಡಿಸುವುದು ಸಂಸ್ಥೆಯ ಪಾಲಿನ ಉತ್ತಮ ಬೆಳವಣಿಗೆಯ ಪೂರಕ ಅಂಶ.

ನೆಟ್‌ವರ್ಕಿಂಗ್ ಅಥವಾ ಜಾಲ ವಿಸ್ತರಣೆ ಮುಂದಿನ ಅತೀ ಅಗತ್ಯ ಅಂಶ. ಸಂಸ್ಥೆಯ ಸಕ್ರಿಯ ಸಮಿತಿಯಲ್ಲಿದ್ದು, ಸಂಸ್ಥೆಯ ಅಭಿವೃದ್ಧಿಗಾಗಿ ಜಾಲ ವಿಸ್ತರಣೆ, ನೇರವಾಗಿ ಹಾಗೂ ಪರೋಕ್ಷವಾಗಿ ಸಂಸ್ಥೆಯ ಪ್ರಚಾರ, ಇನ್‌ಫಾರ್ಮಲ್ ವೇದಿಕೆಗಳಾದ ಸಾಮಾಜಿಕ ಜಾಲ ತಾಣಗಳು, ಫೇಸ್‌ಬುಕ್‌ನಂತಹ ಟೂಲ್‌ಗಳನ್ನು ಸಮರ್ಥವಾಗಿ ಪ್ರಚಾರಕ್ಕೆ ಬಳಸಿಕೊಳ್ಳುವುದು ಇವೇ ಮೊದಲಾದ ಯೋಜನೆಗಳು ಅವಶ್ಯಕ.

ಮಾರುಕಟ್ಟೆಯಲ್ಲಿ ನಿರಂತರ ಬೆಳವಣಿಗೆ ಹಾಗೂ ಬದಲಾವಣೆಗಳು ಸಾಧ್ಯವಾಗುತ್ತಲೇ ಇರುತ್ತವೆ. ಹಾಗಾಗಿ ಸಂಸ್ಥೆಯೊಂದು ತನ್ನ ಉತ್ಪನ್ನ ಹಾಗೂ ಸೇವೆಗಳನ್ನು 24/7 ಪ್ರಚಾರ ಮಾಡಲು ಸಿದ್ಧವಾಗಿರಬೇಕು. ಸಂಸ್ಥೆಯ ಪಾಲಿಗೆ ಏಳುಬೀಳುಗಳು, ಎಡರುತೊಡರುಗಳು, ಏರಿಳಿತಗಳು ಸರ್ವೇಸಾಮಾನ್ಯ. ಮಾರುಕಟ್ಟೆಯ ಎಲ್ಲಾ ಪ್ರತಿಕ್ರಿಯೆಗಳನ್ನು ಸಮಾನವಾಗಿ ಸ್ವೀಕರಿಸಲು ಸಂಸ್ಥೆ ಸಿದ್ಧವಿರಬೇಕು. ಗ್ರಾಹಕರಿಂದ ಬರುವ ಪ್ರತಿಕ್ರಿಯೆ, ಕೆಲವು ಬಾರಿ ನೀರಸವಾದ ಫಲಿತಾಂಶ ಜೊತೆಗೆ ಹತಾಶೆ ಹುಟ್ಟಿಸುವ ಸನ್ನಿವೇಶಗಳನ್ನು ಎದುರಿಸಲು ಮನಸ್ಥಿತಿಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಅಂತಿಮವಾಗಿ ಒಂದು ಸನ್ನಿವೇಶದಲ್ಲಿ ಎಡವಿದರೂ ಅದನ್ನು ಇನ್ನೊಂದು ಬಾಗಿಲಲ್ಲಿ ಸ್ವೀಕರಿಸಿ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬಿಡುವ ಮತ್ತೊಂದು ಯೋಜನೆಯನ್ನು ಹೆಣೆಯಬೇಕು.