ಎತ್ತಿನ ಗಾಡಿ ಚಲಾಯಿಸಲು ಲೈಸೆನ್ಸ್ ಕೊಡ್ತಾರೆ !

ಗಿರಿ

0

ಮನುಷ್ಯ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದ್ದಾನೆ. ಯಂತ್ರಗಳೊಂದಿಗೆ ಜೀವನ ಸಾಗಿಸುವುದನ್ನು ಕಲಿತಿದ್ದಾನೆ. ಊಟ ಇಲ್ಲದೇ ಇದ್ದರೂ ಕಾರು, ಬೈಕ್‍ನಂತಹ ವಾಹನ ಆತನಿಗೆ ಬೇಕೆ ಬೇಕು. ಹೀಗಿರುವಾಗ ಹಳ್ಳಿಯ ಸಂಸ್ಕೃತಿ ಅದರಲ್ಲೂ ಎತ್ತಿನ ಗಾಡಿ ಓಡಿಸುವುದನ್ನು ಆತ ಇಷ್ಟ ಪಡುತ್ತಾನೆ. ಸುಮ್ಮನೆ ಜಾಲಿಗಾದ್ರೂ ಎತ್ತಿನ ಗಾಡಿ ಏರಿ ಕುಳಿತುಕೊಳ್ಳೋದು ಗ್ಯಾರೆಂಟಿ. ಆದರೆ, ಎತ್ತಿನ ಗಾಡಿ ಓಡಿಸಲಿಚ್ಛಿಸುವರು ಮತ್ತು ಅದನ್ನು ಕಲಿಯಲು ಬಯಸುವರಿಗಾಗಿ ಇಲ್ಲೊಂದು ಸಂಸ್ಥೆ ಶುರುವಾಗಿದೆ. ಅಲ್ಲದೆ, ಎಲ್ಲಿ ಬೇಕದರೂ ಎತ್ತಿನ ಗಾಡಿ ಓಡಿಸುವ ಸಲುವಾಗಿ ಲೈಸೆನ್ಸ್ ಕೂಡ ಆ ಸಂಸ್ಥೆ ನೀಡುತ್ತದೆ.

ಕಾರು, ಬಸ್ಸು, ವಿಮಾನ ಚಲಾಯಿಸುವುದನ್ನು ಕಲಿಸುವರಿದ್ದಾರೆ. ಇದೇನಪ್ಪ ಎತ್ತಿನ ಗಾಡಿ ಚಲಾಯಿಸುವುದನ್ನೂ ಕಲಿಸುತ್ತಾರಾ?! ಎಂದು ಅಚ್ಚರಿ ಪಡಬೇಡಿ. ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದೆ `ಅವರ್ ನೇಟಿವ್ ವಿಲೇಜ್' ರೆಸಾರ್ಟ್. ಮೂಲತಃ ರೆಸಾರ್ಟ್ ಆಗಿರುವ ಈ ಸಂಸ್ಥೆ, ತಮ್ಮಲ್ಲಿಗೆ ಬರುವರಿಗೆ ಎತ್ತಿನ ಗಾಡಿ ಚಲಾಯಿಸುವುದನ್ನು ಕಲಿಸುತ್ತದೆ. ಹೆಸರುಘಟ್ಟ ಸಮೀಪದಲ್ಲಿರುವ ಈ ರೆಸಾರ್ಟ್‍ಗೆ ಒಮ್ಮೆ ಹೊಕ್ಕರೆ ನಿಮಗೆ ಹಳ್ಳಿಯ ಪರಿಸರ ನೆನಪಾಗುತ್ತದೆ.

ಹಳ್ಳಿಯಲ್ಲಿ ಮೈ ಮರೆಯಬಹುದು

ಯಾವುದೇ ರೆಸಾರ್ಟ್‍ಗಳಲ್ಲಾದರೂ ಸುಂದರ ಪರಿಸರ, ಬೆಟ್ಟ - ಗುಡ್ಡಗಳನ್ನು ನೋಡುತ್ತಾ ನಾಲ್ಕು ದಿನ ಹಾಯಾಗಿ ಕಳೆಯಬಹುದು. ಆದರೆ, `ಅವರ್ ನೇಟಿವ್ ವಿಲೇಜ್' ಗೆ ನೀವೇನಾದರೂ ಹೋದರೆ ಎತ್ತಿನ ಗಾಡಿ, ಸಾವಯವ ಕೃಷಿ, ಹಸುಗಳು, ತೋಟ ಹೀಗೆ ಹಳ್ಳಿಯಲ್ಲಿ ಮಾತ್ರ ಕಾಣಸಿಗುವ ವಾತಾವರಣವನ್ನು ಇಲ್ಲಿ ಕಾಣಬಹುದು. ಆಮೂಲಕ ನಿಮ್ಮ ತನು - ಮನಸ್ಸು ರಿಲ್ಯಾಕ್ಸ್ ಆಗಲಿದೆ. ಅದರೊಂದಿಗೆ ನಿಮ್ಮ ಮಕ್ಕಳಿಗೆ ಹಳ್ಳಿಯ ವಾತಾವರಣದ ಪರಿಚಯ ಮಾಡಿಸುವಂತಾಗುತ್ತದೆ.

ಎತ್ತಿನ ಗಾಡಿ ಚಲಾಯಿಸಲು ಬುಲ್ ಕಾರ್ಟ್ ಡ್ರೈವಿಂಗ್ ಲೈಸೆನ್ಸ್..!

ಎತ್ತಿನ ಗಾಡಿ ಎಂದರೆ ನೆನಪಾಗುವುದು ಒಂದು ದೊಡ್ಡ ಮರದ ಗಾಡಿ, ಅದರ ಮುಂದೆ ಕಟ್ಟಿರುವ ಎತ್ತು, ಅದಕ್ಕೆ ಬಾರುಕೋಲಿನಿಂದ ಹೊಡೆಯುತ್ತಾ, ಹೆದರಿಸುತ್ತಾ ಗಾಡಿ ಮುಂದೆ ಸಾಗುವಂತೆ ಮಾಡುವುದು ಎನ್ನುವುದೇ ಎಲ್ಲರ ಮನದಲ್ಲಿ ಮೂಡುವ ಚಿತ್ರಣ. ಆದರೆ, ಆ ಎತ್ತುಗಳನ್ನು ಹೇಗೆ ನಿಭಾಯಿಸಬೇಕು, ಇಳಿಜಾರಿನಲ್ಲಿ ಹೇಗೆ ಗಾಡಿ ಚಲಾಯಿಸಬೇಕು, ಗಾಡಿಯಲ್ಲಿ ಎಷ್ಟು ಭಾರವನ್ನು ಹಾಕಿದರೆ ಎತ್ತು ಎಳೆಯಬಹುದು. ಈ ರೀತಿಯ ವಿಷಯಗಳು ಹಳ್ಳಿಗಾಡಿನವರಿಗೆ ಬಿಟ್ಟರೆ ಉಳಿದವರಿಗೆ ತಿಳಿಯುವುದೇ ಇಲ್ಲ. ಅಂತಹ ಎಲ್ಲಾ ವಿಷಯಗಳನ್ನು ಅವರ್ ನೇಟಿವ್ ವಿಲೇಜ್ ರೆಸಾರ್ಟ್‍ನಲ್ಲಿ ಹೇಳಿಕೊಡಲಾಗುತ್ತದೆ.

ಕ್ಲಾಸ್ ವಿಧಾನಗಳೇನು?

ನೀವು ರೆಸಾರ್ಟ್‍ನಲ್ಲಿ ಉಳಿದುಕೊಳ್ಳಲು ಆಯ್ಕೆ ಮಾಡುವ ಪ್ಯಾಕೇಜ್‍ನಲ್ಲಿಯೇ ಬುಲ್ ಕಾರ್ಟ್ ಡ್ರೈವಿಂಗ್ ಲೈಸೆನ್ಸ್ ನೀಡುವ ಕ್ಲಾಸ್ ಆಯ್ಕೆ ಮಾಡಬೇಕಾಗುತ್ತದೆ. 3 ರಾತ್ರಿ-4 ಹಗಲು ಪ್ಯಾಕೇಜ್‍ನಲ್ಲಿ ನಿಮಗೆ ಈ ತರಬೇತಿ ಸಿಗುತ್ತದೆ. ಪ್ರತಿ ದಿನ ಮಧ್ಯಾಹ್ನದ ಮೇಲೆ ಮೂರು ದಿನಗಳ ಕಾಲ ಎತ್ತಿನ ಗಾಡಿ ಹೇಗೆ ಚಲಾಯಿಸಬೇಕು ಎಂಬುದನ್ನು ತಿಳಿಸಲಾಗುತ್ತದೆ. ಮೊದಲ ದಿನ ಎತ್ತಿನ ಗಾಡಿ ಬಗ್ಗೆ ಇರುವ ಸಾಮಾನ್ಯ ವಿಷಯಗಳನ್ನು ತಿಳಿಸಿಕೊಡಲಾಗುತ್ತದೆ. ಅದರಲ್ಲೂ ಎತ್ತಿನ ಗಾಡಿ ಚಲಾಯಿಸಲು ನಿಮಗೆ ಬೇಕಿರುವ ಜಾಣ್ಮೆ, ಎತ್ತಿನ ಬಗ್ಗೆ ನಿಮಗಿರುವ ಪ್ರೀತಿ, ಕಾಳಜಿಗಳು ಹೇಗಿರಬೇಕು ಎಂಬುದನ್ನು ತಿಳಿಸಲಾಗುತ್ತದೆ. ಅದಾದ ನಂತರ ಎತ್ತಿನ ಗಾಡಿಯಲ್ಲಿ ಓಡಾಡುವ ಮೂಲಕ ಗಾಡಿ ಹೇಗೆ ಸಂಚರಿಸುತ್ತದೆ ಎಂಬುದನ್ನು ತೋರಿಸಲಾಗುತ್ತದೆ. ಎರಡನೇ ದಿನ ಎತ್ತಿನ ಗಾಡಿ ಚಲಾಯಿಸುವಾಗಿ ಎತ್ತನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಸೇರಿದಂತೆ ಮತ್ತಿತರ ತಂತ್ರವನ್ನು ತೋರಿಸಲಾಗುತ್ತದೆ. ಮೂರನೇ ದಿನ ಮತ್ತೆ ಗಾಡಿ ಚಲಾಯಿಸುವ ಬಗ್ಗೆ ತಿಳಿಸಿ ನಿಮ್ಮಿಂದಲೇ ಚಲಾಯಿಸುತ್ತಾರೆ. ಆನಂತರ ನಿಮಗೊಂದು ಲೈಸೆನ್ಸ್ ಕೂಡ ನೀಡಲಾಗುತ್ತದೆ.

ಬೇರೆ ಏನಿದೆ?

ಎತ್ತಿನ ಗಾಡಿ ಚಲಾಯಿಸುವ ತರಬೇತಿ ಮತ್ತು ರೆಸಾರ್ಟ್‍ನ ವಾತಾವರಣದೊಂದಿಗೆ ಇಲ್ಲಿ ಸಾವಯನ ಕೃಷಿ ಬಗ್ಗೆ ಬಂದವರಿಗೆ ತಿಳಿ ಹೇಳಲಾಗುತ್ತದೆ. ಇನ್ನು, ಮಕ್ಕಳಿಗೆ ಮತ್ತು ಹಿರಿಯರಿಬ್ಬರಿಗೂ ಗ್ರಾಮೀಣ ಕ್ರೀಡೆಗಳನ್ನು ಕಲಿಸಲಾಗುತ್ತದೆ. ಹಾಗೆಯೇ, ನಕ್ಷತ್ರ ವೀಕ್ಷಣೆ, ಮಡಿಕೆ ಮಾಡುವುದು ಹೀಗೆ ಇನ್ನಿತರ ಹಳ್ಳಿ ಕಲೆಗಳನ್ನು ರೆಸಾರ್ಟ್‍ಗೆ ಬರುವರಿಗೆ ಕಲಿಸಲಾಗುತ್ತದೆ. ಒಟ್ಟಿನಲ್ಲಿ ಇಲ್ಲಿರುವಷ್ಟು ದಿನ ನೀವು ಹಳ್ಳಿಯ ಸೊಗಡನ್ನು ಸವಿಯುತ್ತಾ ಕಾಲ ಕಳೆಯಬಹುದಾಗಿದೆ. ನೀವು ಈ ರೆಸಾರ್ಟ್‍ಗೆ ಬರಬೇಕಾದರೆwww.ournativevillage.com ಈ ವೆಬ್‍ಸೈಟ್‍ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.