ಸಿದ್ಧಾಪುರದ ಬ್ಲಡ್ ಬ್ಯಾಂಕ್ “ಸ್ಟೇಷನ್ ” .. !

ಪಿ.ಆರ್​​.ಬಿ

0

ಪೊಲೀಸರು ಅಂದ್ರೆ ಬರೀ ಕಿರಿಕಿರಿ.. ಲಂಚಕೋರರು, ಸಹಾಯ ಮಾಡುವುದಕ್ಕಿಂತ ಸುಲಿಗೆ ಮಾಡೋದೇ ಹೆಚ್ಚು ಅಂತ ಸಾರ್ವಜನಿಕರು ಆರೋಪ ಮಾಡುವುದೇ ಹೆಚ್ಚು. ಅವರ ದರ್ಪ, ದೌರ್ಜನ್ಯದಿಂದ ಬೇಸತ್ತ ಅದೆಷ್ಟೋ ಜನ ನಮಗೆ ಯಾಕೆ ಬೇಕು ಪೊಲೀಸರ ಸಹವಾಸ ಅಂತ ದೂರ ಇರ್ತಾರೆ. ಇನ್ನು ಬಹುತೇಕ ಪೊಲೀಸರೂ ಅಷ್ಟೇ.. ನೆಪಮಾತ್ರಕ್ಕೆ ಡ್ಯುಟಿ.. ಸಂಬಳದ ಜೊತೆಗೆ ಒಂದಿಷ್ಟು ಗಿಂಬಳ ಗಿಟ್ಟಿಸಿದ್ರೆ ಬದುಕು ಸಾರ್ಥಕ ಅಂತ ಅಂದುಕೊಂಡಿರುವವರೇ ಅದೆಷ್ಟೋ ಮಂದಿ.. ಮತ್ತೆ ಕೆಲವರು ದಿನದ ಡ್ಯುಟಿ ಮುಗಿಸಿ ಉಸ್ಸಪ್ಪಾ ಅಂತ ಉಸಿರು ಬಿಟ್ರೆ ಸಾಕು ಅಂತ ಕಾದಿರ್ತಾರೆ. ಪರಿಸ್ಥಿತಿ ಹೀಗಿರುವಾಗ ಸಮಾಜ, ಸೇವೆ ಅಂತ ಕಾಳಾಜಿ ತೋರುವ ಪೊಲೀಸರ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳೋದು ಸ್ವಲ್ಪ ಕಷ್ಟ..

ಆದ್ರೆ ಪೊಲೀಸರೆಲ್ಲಾ ಕೆಟ್ಟವರೇನಲ್ಲಾ.. ಅವರಿಗೂ ಒಳ್ಳೆತನ, ಒಳ್ಳೆ ಮನಸ್ಸಿರುತ್ತೆ. ಕೇವಲ ಸರ್ಕಾರ, ಇಲಾಖೆ ವಹಿಸಿದ ಜವಾಬ್ದಾರಿಯನ್ನ ಹೊರತು ಪರಡಿಸಿ ಸಮಾಜಕ್ಕೆ ಇನ್ನೇನಾದರೂ ಮಾಡಲೇ ಬೇಕು ಅನ್ನೋ ತುಡಿತ ಹೊಂದಿರುತ್ತಾರೆ. ಅವರಲ್ಲೂ ಸಮಾಜಮುಖಿಯಾಗಿರುವ ಒಳ್ಳೆಯ ಮನಸ್ಸಿರುತ್ತೆ ಅನ್ನೋದಕ್ಕೆ ಉದಾಹರಣೆ ಸಿದ್ಧಾಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಘವೇಂದ್ರ ಎಸ್.ಆರ್...

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಂಜಪ್ಪನ ಹಳ್ಳಿಯವರಾದ ರಾಘವೇಂದ್ರ ಅವರಿಗೆ ಬಾಲ್ಯದಿಂದಲೇ ಸಮಾಜಸೇವೆಯ ತುಡಿತ. 2010ರಲ್ಲಿ ಹಾಸನದ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಬಳಿಕ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಭಡ್ತಿ ಹೊಂದಿದ್ರು. ಈ ವೇಳೆ ಕಿದ್ವಾಯಿ ಆಸ್ಪತ್ರೆಯಲ್ಲಿ ಯುವಕನೊಬ್ಬನಿಗೆ ರಕ್ತ ಬೇಕಾಗಿದೆ ಅಂತ ರಾಘವೇಂದ್ರ ಅವರಿಗೆ ಕರೆ ಬಂದಿತ್ತು. ಆದ್ರೆ ರಕ್ತ ಹೊಂದಿಸೋದಕ್ಕೆ ಅವರಿಗೆ ತುಂಬಾ ಕಷ್ಟವಾಯಿತು. ಅವತ್ತೇ ರಾಘವೇಂದ್ರ ಯೋಚನೆಯೊಂದು ಕಾಡಿತ್ತು. ಅದು ಸ್ವಂತ ಬ್ಲಡ್ ಬ್ಯಾಂಕ್ ಶುರುಮಾಡುವ ಪ್ಲಾನ್.

“ ಯುವಕನಿಗೆ ರಕ್ತ ಹೊಂದಿಸಲು ಅವತ್ತು ತುಂಬಾ ಕಷ್ಟವಾಗಿತ್ತು. ರೋಗಿಗಳಿಗೆ, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ತುರ್ತು ಸಂದರ್ಭದಲ್ಲಿ ರಕ್ತ ಹೊಂದಿಸಲು ಎಷ್ಟು ಕಷ್ಟ ಇದೆ ಅನ್ನೋದು ಅರ್ಥ ಆಗಿತ್ತು. ಅವರ ಸಂಕಷ್ಟಕ್ಕೆ ಸ್ವಲ್ಪನಾದ್ರೂ ನೆರವಾಗಬೇಕು ಅಂತ ತೀರ್ಮಾನಿಸಿದೆ. ಹೀಗಾಗಿ ಸ್ವಂತ ಬ್ಲಡ್ ಬ್ಯಾಂಕ್ ಶುರುಮಾಡಲು ಯೋಜನೆ ರೂಪಿಸಿದೆ.. ಆದ್ರೆ ಆ ಹಾದಿ ಅಷ್ಟು ಸುಲಭವಾಗಿರಲಿಲ್ಲ ”ಅಂತ ರಾಘವೇಂದ್ರ ಅವರು ಆ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ.

ಬ್ಲಡ್ ಬ್ಯಾಂಕ್ ನಿರ್ಮಿಸಲು ಇರುವ ಅಡೆತಡೆ, ಕಷ್ಟಗಳನ್ನ ನೋಡಿಯೂ ರಾಘವೇಂದ್ರ ನಿರ್ಧಾರ ಬದಲಿಸಲಿಲ್ಲ. ಹಾಗಂತ ಇಲಾಖೆ ತೊರೆಯುವ ಮನಸ್ಸೂ ಮಾಡಲಲ್ಲಿ. ಇಲಾಖೆ ಸೇವೆಯೊಂದಿಗೇ ಸಮಾಜದೊಂದಿಗೆ ಬೆರೆಯುವ ಅವರ ಮನಸ್ಸಿಗೆ ಹತ್ತಿರವಾಗಿದ್ದು ಸಾಮಾಜಿಕ ಜಾಲತಾಣ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ರಕ್ತದಾನದ ಬಗ್ಗೆ ರಾಘವೇಂದ್ರ ಅವರು ವ್ಯಕ್ತಪಡಿಸುತ್ತಿದ್ದ ಕಾಳಜಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯ್ತು. ರಕ್ತ ಅನಿವಾರ್ಯವಾಗಿದ್ದ ರೋಗಿಗಳ ವಿವರಗಳನ್ನ ಸೋಷಿಯಲ್ ನೆಟ್ ವರ್ಕ್ ಗಳಲ್ಲಿ ಪ್ರಕಟಿಸಿದ್ರು. ದಾನಿಗಳ ಸಂಪರ್ಕ ಸಾಧಿಸಿದ್ರು. ಹೀಗೆ ಶುರುವಾದ ಇವರ ರಕ್ತದಾನ ಕಾರ್ಯಕ್ಕೆ ಇದೀಗ ರಾಘವೇಂದ್ರ ಅವರು ಸಂಸ್ಥಾ ರೂಪ ನೀಡಿದ್ದಾರೆ. ಕೊನೆಗೂ ತಮ್ಮ ಕನಸಿನ ಬ್ಲಡ್ ಬ್ಯಾಂಕ್ ಒಂದನ್ನು ಆರಂಭಿಸಿದ್ದಾರೆ. ಈ ಬ್ಲಡ್ ಬ್ಯಾಂಕ್ ನಲ್ಲಿ ಈಗಾಗಲೇ 600 ಜನ ಹೆಸರು ನೋಂದಾಯಿಸಿದ್ದಾರೆ. ಯಾರಾದ್ರೂ ರಕ್ತ ನೀಡ ಬಯಸಿದ್ರೆ ಅವರು ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿರುವ ರಕ್ತದಾನದ ರಿಜಿಸ್ಟರ್ ಬುಕ್ ನಲ್ಲಿ ತಮ್ಮ ಬ್ಲಡ್ ಗ್ರೂಪ್ , ಹೆಸರು, ಮೊಬೈಲ್ ಸಂಖ್ಯೆ ದಾಖಲಿಸಿದ್ರೆ ಅಗತ್ಯವಿದ್ದಾಗ ಅಂತಹವರಿಗೆ ಕಾಲ್ ಮಾಡಿ ರಕ್ತ ಪಡೆಯಲಾಗುತ್ತೆ.

ಇಷ್ಟು ಮಾತ್ರವಲ್ಲದೇ ರಾಘವೇಂದ್ರ ತಮ್ಮ ಸ್ನೇಹಿತರೊಂದಿಗೆ ಸೇರಿ ನಮ್ಮ ಹಕ್ಕು ಎಂಬ ಸಂಘವೊಂದನ್ನು ಆರಂಭಿಸಿದ್ದಾರೆ. ಸಂಘದ ಮೂಲಕ 10 ಮಕ್ಕಳನ್ನು ದತ್ತು ಪಡೆದು ಅವರಿಗೆ ಎಲ್ಲಾ ಶೈಕ್ಷಣಿಕ ನೆರವನ್ನು ನೀಡಲಾಗುತ್ತೆ. ಈ ಎಲ್ಲಾ ಕಾರ್ಯಗಳಿಗೆ ಕೆಲ ದಾನಿಗಳು ಸಹಾಯ ನೀಡುತ್ತಾರೆ. ಇನ್ನು ಪ್ರತಿವಾರ ರಾಘವೇಂದ್ರ ವಿವಿಧ ಕಾಲೇಜು, ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ದೇಶಪ್ರೇಮ, ಸ್ವಾತಂತ್ರ್ಯ ಸಂಗ್ರಾಮ, ಹಕ್ಕುಗಳು ಮುಂತಾದವುಗಳ ಬಗ್ಗೆ ಉಚಿತವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ.

ಪೊಲೀಸರು ಅಂದ್ರೆ ಮಾರುದೂರ ಸರಿಯುವ ಕಾಲದಲ್ಲಿ ರಾಘವೇಂದ್ರ ಅವರು ತುಂಬಾ ಡಿಫರೆಂಟ್ ಆಗಿ ಕಾಣ್ತಾರೆ.. ಇಲಾಖೆಯಲ್ಲಿ ಇರುವ ಇತರೇ ಸಿಬ್ಬಂದಿಗಳೂ ಇವರ ಹಾದಿಯಲ್ಲೇ ಮುನ್ನಡೆಯಲು ಆಸಕ್ತಿ ತೋರಿದ್ದಾರೆ. ಪೊಲೀಸರು ಹಾಗೂ ಸಾರ್ವಜನಿಕರ ನಡುವಿನ ಅಂತರ ತಗ್ಗಿಸಿದ್ದು ಮಾತ್ರವಲ್ಲದೆ, ರಕ್ತದಾನದ ಬಗ್ಗೆ ಇವರು ಇಟ್ಟಿರುವ ಹೆಜ್ಜೆಗೆ ನಮ್ಮದೂ ಒಂದು ಹ್ಯಾಟ್ಸಫ್..

Related Stories

Stories by BRP UJIRE