ಕಾಸ್ಟ್ಲಿ ಬಟ್ಟೆ ಬೇಕಾ..? ಬಾಡಿಗೆಗೆ ಇರುವಾಗ ಖರೀದಿಸೋದು ಏಕೆ..?

ಟೀಮ್​​ ವೈ.ಎಸ್​​.

0

ಬೇರೆ ಬೇರೆ ಸಂದರ್ಭಗಳಲ್ಲಿ ನೀವು ಖರೀದಿ ಮಾಡಿ ಮಾಡಿ ನಿಮ್ಮ ವಾರ್ಡ್​ರೋಬ್ ತುಂಬಿಹೋಗಿರುತ್ತದೆ. ಆದರೆ ನೀವು ನಿತ್ಯದ ಬಳಕೆಗಾಗಿ ಬಳಸುವುದು 4-5 ಧಿರಿಸುಗಳನ್ನಷ್ಟೇ. ಉಳಿದವುಗಳನ್ನು ವಿಶೇಷ ಸಂದರ್ಭಕ್ಕಾಗಿ ಖರೀದಿಸಿ ಇಟ್ಟುಕೊಂಡಿರುತ್ತೀರಿ. ಅವೆಲ್ಲವೂ ದುಬಾರಿಯಾಗಿದ್ದು, ಅವುಗಳನ್ನು ಧರಿಸಲು ನಿಮಗೆ ಅತ್ಯಂತ ಕಡಿಮೆ ಸಂದರ್ಭಗಳು ಸಿಗುತ್ತವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ಸಮಸ್ಯೆಗೆ ಪರಿಹಾರವೂ ಇದೆ. ಅಲ್ಲಿ ಸಾಕಷ್ಟು ಶಾಪ್​​ಗಳಿದ್ದು, ಅಲ್ಲಿಂದ ನೀವು ಬಾಡಿಗೆಗೆ ಧಿರಿಸುಗಳನ್ನು ಪಡೆದುಕೊಳ್ಳಬಹುದು. ಈಗೀಗ ಭಾರತದಲ್ಲೂ ಈ ಪ್ರವೃತ್ತಿ ಆರಂಭವಾಗುತ್ತಿದೆ. ದೆಹಲಿಯಲ್ಲಿ ವ್ರಾಪ್ಡ್ ಎಂಬ ಅಂಗಡಿಯೊಂದು ಆರಂಭಗೊಂಡಿದೆ.

ನೀರಜ್ ವಧೇರಾ ಮತ್ತು ಅನುನಯ್ ಅರೋರಾ ಎಂಬವರು ದೆಹಲಿಯ ಎರಡು ಪ್ರದೇಶಗಳಲ್ಲಿ ಈ ಸೇವೆ ನೀಡುತ್ತಿದ್ದಾರೆ. ನೀವು ಅವರ ಅಂಗಡಿಗೆ ಹೋಗಿ, ನಿಮಗೆ ಬೇಕಾದ ಬಟ್ಟೆಯನ್ನು ಬುಕ್ ಮಾಡಿ ಬರಬಹುದು. ನಿಮ್ಮ ಕಾರ್ಯಕ್ರಮದ ಹಿಂದಿನ ದಿನ ಹೋಗಿ ಬಟ್ಟೆ ತೆಗೆದುಕೊಂಡರೆ, ಮುಂದಿನ 48 ಗಂಟೆಗಳ ಕಾಲ ಆ ಬಟ್ಟೆ ನಿಮ್ಮದೇ. ಆ ಬಳಿಕ ನೀವದನ್ನು ಮರಳಿಸಬೇಕು.

ಮನೆಯಲ್ಲೇ ಶುರುವಾಗಿದ್ದು ಈ ಉದ್ಯಮ..!

ನೀರಜ್ ಅವರು ಹಿಂದಿನಿಂದಲೂ ಈ ಉದ್ಯಮ ನಡೆಸುತ್ತಿದ್ದರು. ಮೂರು ವರ್ಷಗಳ ಹಿಂದೆ ರೆಂಟ್ ಎ ಪಾರ್ಟಿ ಡ್ರೆಸ್ ಎಂಬ ಹೆಸರಿನಲ್ಲಿ ಇದು ಆರಂಭವಾಗಿತ್ತು. “ನೀರಜ್ ಅವರು, ಇದನ್ನು ಮನೆಯಿಂದಲೇ ನಡೆಸುತ್ತಿದ್ದರು. ಸಣ್ಣ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿತ್ತು. ನನಗೆ ಇದರ ಬಗ್ಗೆ ತಿಳಿದಾಗ ಆಸಕ್ತಿ ಹೆಚ್ಚಾಯಿತು. ಅವರ ಜೊತೆ ಕುಳಿತು ಈ ಉದ್ಯಮವನ್ನು ಅವರು ಎಲ್ಲಿಯವರೆಗೆ ಕೊಂಡೊಯ್ಯಬೇಕು ಎಂದು ಬಯಸುತ್ತಾರೆ ಎನ್ನುವುದನ್ನು ತಿಳಿದು ಕೊಂಡಿದ್ದೆ. ಈ ಉದ್ಯಮದಲ್ಲಿ ದೊಡ್ಡ ಅವಕಾಶವಿದೆ ಎನ್ನುವುದು ನನಗೆ ಮನವರಿಕೆಯಾಯಿತು. ಹೀಗಾಗಿ ನಾವು ಇದರಲ್ಲಿ ನಮ್ಮ ಸ್ವಂತ ಹಣವನ್ನು ಹೂಡಿದೆವು. ವ್ರಾಪ್ಡ್ ಎಂದು ಮರು ನಾಮಕರಣ ಮಾಡಿ ದೆಹಲಿಯ ಲಜಪತ್ ನಗರದಲ್ಲಿ ಮಳಿಗೆ ಆರಂಭಿಸಿದೆವು.” ಎನ್ನುತ್ತಾರೆ ಅನುನಯ್.

ಮೂರು ವರ್ಷಗಳಿಂದ ಅವರ ಮನೆಯಲ್ಲೇ ನಡೆಯುತ್ತಿದ್ದ ವಹಿವಾಟಿಗೆ ಹೋಲಿಸಿದರೆ, ಲಜಪತ್ ನಗರದ ಮಳಿಗೆಯಲ್ಲಿ ಇನ್ನೂ ಹೆಚ್ಚಿನ ವಹಿವಾಟು ನಡೆಯುತ್ತಿದೆ. ಇದಕ್ಕೆ ಸ್ಥಳ ಮತ್ತು ಮರುನಾಮಕರಣದ ಮಹಿಮೆಯೇ ಕಾರಣ ಎನ್ನುತ್ತಾರೆ ಅನುನಯ್. “ನಾವು ಕೊಡುತ್ತಿರುವ ದರಕ್ಕೆ ನಿಜವಾಗಿಯೂ ಒಳ್ಳೆಯ ಮೌಲ್ಯವಿದೆ. ನಮ್ಮ ಗ್ರಾಹಕರು 50-60 ಸಾವಿರಕ್ಕೆ ಖರೀದಿಸಬಹುದಾದ ಬಟ್ಟೆಗಳನ್ನು ಇಲ್ಲಿ ಕಡಿಮೆ ಬೆಲೆಗೆ ಬಾಡಿಗೆಗೆ ಪಡೆಯಬಹುದು. ಇತ್ತೀಚೆಗಷ್ಟೇ ನಾನು ನಮ್ಮ ಗ್ರಾಹಕರೊಬ್ಬರಲ್ಲಿ, ನಮ್ಮ ಅಂಗಡಿಯ ಬಗ್ಗೆ ಹೇಗೆ ತಿಳಿಯಿತು ಅಂತ ಪ್ರಶ್ನಿಸಿದೆ. ಅವರಿಗೆ ಮಾನ್ಯವರ್ ಎನ್ನುವ ದೊಡ್ಡ ಸಾಂಪ್ರದಾಯಿಕ ಉಡುಗೆಗಳ ಮಳಿಗೆಯಲ್ಲಿ, ಅಲ್ಲಿನ ಸೇಲ್ಸ್ ಹುಡುಗ ಹೇಳಿದನಂತೆ. ಆ ಗ್ರಾಹಕರು ಶೇರ್ವಾನಿಗಾಗಿ 50 ಸಾವಿರ ಕೊಡಲು ಸಿದ್ಧರಿರಲಿಲ್ಲ. ಇದನ್ನು ತಿಳಿಯಲು ಭಾರೀ ಖುಷಿಯಾಗುತ್ತದೆ.”

ಮದುವೆಯ ಸೀಸನ್ ಆಗಿರುವ ಹಿನ್ನೆಲೆಯಲ್ಲಿ ವ್ರಾಪ್ಡ್​​ಗೆ ಕೆಳ ತಿಂಗಳುಗಳಿಂದ ಒಳ್ಳೆಯ ವ್ಯವಹಾರವಾಗುತ್ತಿದೆ. “ಈ ವ್ಯವಹಾರವು ಸಹಜವಾಗಿಯೇ ಸೀಸನಲ್ ಆಗಿದೆ. ಏಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ನಮಗೆ ಚಿಲ್ಲರೆ ವ್ಯಾಪಾರ ಕಡಿಮೆಯಾಗುತ್ತದೆ. ಈ ವೇಳೆಯಲ್ಲಿ ನಾವು ಹೊಸ ಉತ್ಪನ್ನಗಳ ಡಿಸೈನ್ ಮಾಡುತ್ತೇವೆ. ಕಾರ್ಪೋರೇಟ್, ಹೊಟೇಲ್ಸ್ ಮತ್ತು ಮಾಡೆಲಿಂಗ್ ಏಜೆನ್ಸಿಗಳ ಜೊತೆ ಸಂಪರ್ಕ ಹೊಂದಿದ್ದೇವೆ.

“ಈ ವ್ಯವಹಾರದ ಬಗ್ಗೆ ಗ್ರಾಹಕರನ್ನು ಮನವೊಲಿಸುವುದೇ ದೊಡ್ಡ ಸವಾಲಾಗಿದೆ. ಈಗಲೂ ಗ್ರಾಹಕರು ನಾವು ಬಟ್ಟೆಯನ್ನು ಹೇಗೆ ನಿರ್ವಹಣೆ ಮಾಡುತ್ತೇವೆ? ಈಗಾಗಲೇ ಬಟ್ಟೆಗಳು ಬಳಸಲ್ಪಟ್ಟಿವೆ ಎನ್ನುವ ಹಿಂಜರಿತವೂ ಅವರಿಗಿದೆ. ನಾವು ಈ ವ್ಯವಹಾರವನ್ನು ಕಳೆದ 3 ವರ್ಷಗಳಿಂದ ನಡೆಸುತ್ತಿದ್ದೇವೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಲು ಸಾಕಷ್ಟು ಸಮಯ ವ್ಯಯಿಸುತ್ತೇವೆ. ಲಜಪತ್ ನಗರದಲ್ಲಿ ನಮ್ಮ ಮಳಿಗೆ ಇದ್ದು, ಬೇರೆ ಜವಳಿ ವ್ಯಾಪಾರಸ್ಥರು ಬಂದು ನಮ್ಮ ಡಿಸೈನ್​​ಗಳನ್ನು ನೋಡಿಕೊಂಡು, ಅವನ್ನೇ ರಚಿಸಿ ಮಾರಾಟಕ್ಕೆ ಇಡುತ್ತಾರೆ. ಇದೇ ನಮಗೆ ಉತ್ಸಾಹ ತುಂಬುತ್ತದೆ. ನಾವು ಮೌಲ್ಯವನ್ನು ಬಾಡಿಗೆಗೆ ಕೊಡುತ್ತಿದ್ದೇವೆ. ಇದನ್ನು ಎಲ್ಲರೂ ಮಾಡುವುದಕ್ಕಾಗುವುದಿಲ್ಲ.”

“ನೀವು ಚೆನ್ನಾಗಿ ಕಾಣಲು ಅದರಲ್ಲೂ ಮುಖ್ಯವಾಗಿ ಒಂದೇ ಒಂದು ಸಂದರ್ಭದಲ್ಲಿ ಧರಿಸಲು ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಬೇಕಿಲ್ಲ. ಇದು ಎಲ್ಲರ ಸಾಮಾನ್ಯ ಸಮಸ್ಯೆಯಾಗಿದೆ. ನಾವು ಇದಕ್ಕೆ ಸರಳ ಪರಿಹಾರ ಒದಗಿಸಿದ್ದೇವೆ. ಇದು ನಮ್ಮ ಗ್ರಾಹಕರಿಗೂ ಖುಷಿ ಕೊಟ್ಟಿದೆ. ಕೆಲವೊಮ್ಮೆ ನಮ್ಮ ಮಳಿಗೆಗಳಲ್ಲಿ ಜನಸಂದಣಿ ಹೆಚ್ಚಾಗಿ, ನಮ್ಮ ಕೆಲಸಗಾರರ ಸಂಖ್ಯೆಯೇ ಕಡಿಮೆಯಾಗಿರುತ್ತದೆ. ಇದೆಲ್ಲವನ್ನೂ ನೋಡಿದಾಗ, ನಾವು ಮಾಡುವುದನ್ನೇ ಮತ್ತಷ್ಟು ಕಾಳಜಿಯಿಂದ ಮಾಡಬೇಕು ಎಂದೆನಿಸುತ್ತದೆ. ಇದೇ ನಮ್ಮನ್ನು ಮುಂದುವರಿಯಲು ಪ್ರೇರೇಪಿಸುತ್ತದೆ.” ಎನ್ನುತ್ತಾರೆ ಅನುನಯ್

ಯಾವುದೇ ಪ್ರಚಾರ ತಂತ್ರ ಬಳಸದೆ, ಇವರ ಉದ್ಯಮಕ್ಕೆ ಭಾರೀ ಪ್ರತಿಕ್ರಿಯೆ ದೊರೆತಿದೆ. ದೆಹಲಿಯ ಲಜಪತ್ ನಗರದ ಮಳಿಗೆಯನ್ನು ಮತ್ತಷ್ಟು ಬಲಪಡಿಸಿದ ಬಳಿಕ ಬೇರೆ ಪ್ರದೇಶಗಳಲ್ಲೂ ಶಾಖೆ ಆರಂಭಿಸುವ ಯೋಚನೆಯಲ್ಲಿದ್ದಾರೆ ಅನುನಯ್ ಮತ್ತು ತಂಡ. ನಮಗೆ ಸರಿಯಾಗಿ ಹಣಕಾಸಿನ ಸಹಾಯ ದೊರೆತರೆ ನಾವು ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಆರಂಭಿಸುತ್ತೇವೆ. ಅಲ್ಲಿಂದ ಹೆಚ್ಚಿನ ಜನ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಮಾತು ಮುಗಿಸುತ್ತಾರೆ ಅನುನಯ್.

Related Stories