ಬದುಕು ಬದಲಿಸಿದ ಅಂಡಮಾನ್​​ ಪ್ರವಾಸ..!

ಟೀಮ್​ ವೈ.ಎಸ್​​.

ಬದುಕು ಬದಲಿಸಿದ ಅಂಡಮಾನ್​​ ಪ್ರವಾಸ..!

Wednesday October 07, 2015,

3 min Read

ನಿರ್ಧಾರದ ಕ್ಷಣ

2013ರ ಡಿಸೆಂಬರ್‌ನಲ್ಲಿ ಅಂಡಮಾನ್‌ಗೆ ಹೋದ ಪ್ರವಾಸ ರೂಬಿರೇ ಅವರ ಜೀವನದ ದಿಕ್ಕನ್ನೇ ಬದಲಿಸಿತು. ಕೆಲಸಕ್ಕೆ ತಾತ್ಕಾಲಿಕ ವಿರಾಮ ನೀಡಿ ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ನೆಮ್ಮದಿಯಾಗಿ ಕಳೆಯುವ ಕ್ಷಣಗಳಾಗಿತ್ತು ಅವು. ಆದರೆ ಹಾಗಾಗಲು ರೂಬಿಯ ಬಾಸ್ ಬಿಡಲಿಲ್ಲ. ರಜಾ ಕಾಲದಲ್ಲೂ ತಮ್ಮ ಬಾಸ್‌ನ ಆಜ್ಞೆಯಂತೆ ಲ್ಯಾಪ್‌ಟಾಪ್ ಮೂಲಕ ಕಾರ್ಯನಿರ್ವಹಿಸಬೇಕಾಗಿತ್ತು ರೂಬಿ. ಸ್ನೇಹಿತರು ಮತ್ತು ಕುಟುಂಬಸ್ಥರು ಅಂಡಮಾನ್‌ನ ಪ್ರದೇಶಗಳು, ಅಲ್ಲಿನ ಶಬ್ದಗಳು, ಮ್ಯೂಸಿಯಂ, ಕಟ್ಟಡಗಳ ವಾಸ್ತುಶಿಲ್ಪಗಳನ್ನು ನೋಡಿ ಆನಂದಿಸುತ್ತಿದ್ದ ವೇಳೆಯಲ್ಲಿ ರೂಬಿ ತಮ್ಮ ಲ್ಯಾಪ್‌ ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪದೇ ಪದೇ ಯಾವುದಾದರೊಂದು ಮೂಲೆ ಹುಡುಕಿ ಕೂರುತ್ತಿದ್ದ ರೂಬಿ ತಮ್ಮ ಕೆಲಸಗಳಿಂದ ಆದಷ್ಟು ಬೇಗ ಹೊರಬರಲು ಯತ್ನಿಸುತ್ತಿದ್ದರು. ತಮ್ಮ ಪ್ರವಾಸವನ್ನು ಸರಿಯಾಗಿ ಅನುಭವಿಸಲಾರದೇ ಪರದಾಡುತ್ತಿದ್ದ ರೂಬಿ ತಮ್ಮ ವಿಮಾನ ಕೋಲ್ಕತ್ತಾದಲ್ಲಿ ಲ್ಯಾಂಡ್ ಆಗುವ ವೇಳೆಗಾಗಲೇ ಒಂದು ನಿರ್ಧಾರಕ್ಕೆ ಬಂದಿದ್ದರು.

ಮಾರನೇ ದಿನವೇ ಆಫೀಸ್‌ಗೆ ತೆರಳಿದ ರೂಬಿ ನೇರವಾಗಿ ತಮ್ಮ ಬಾಸ್‌ನ ಕೊಠಡಿಗೆ ಹೋಗಿ ತಮ್ಮ ಮಾರ್ಕೆಟಿಂಗ್ ಲೀಡ್ ಹುದ್ದೆಗೆ ರಾಜೀನಾಮೆ ನೀಡಿಯೇ ಬಿಟ್ಟರು. ಇದರಿಂದ ಆಘಾತಗೊಂಡ ಬಾಸ್ ರಾಜೀನಾಮೆ ನೀಡದಂತೆ ರೂಬಿಯವರ ಮನವೊಲಿಸಲು ಯತ್ನಿಸಿದರು. ಆದರೆ ರೂಬಿ ನಿರ್ಧಾರ ಗಟ್ಟಿಯಾಗಿತ್ತು.

image


ಹೊಸ ಅಧ್ಯಾಯ

ಕೆಲಸ ಬಿಟ್ಟ ಮೊದಲ 2 ತಿಂಗಳು ರೂಬಿ ಯಾವುದೇ ಕೆಲಸಕ್ಕೂ ಕೈ ಹಾಕಲಿಲ್ಲ. ಸುಮ್ಮನೆ ತಿರುಗಿ, ಸ್ನೇಹಿತರನ್ನು ಭೇಟಿಯಾಗುತ್ತಾ ಕಾಲ ಕಳೆದರು.

ಹೀಗೆ ಕೆಲ ಕಾಲ ಕಳೆದ ಬಳಿಕ ರೂಬಿಯವರೊಳಗಿದ್ದ ವರ್ಕೋಹಾಲಿಕ್ ವ್ಯಕ್ತಿತ್ವ ಮತ್ತೆ ತಲೆ ಎತ್ತಿತು. ಮತ್ತೆ ಕೆಲಸ ಕಾರ್ಯಗಳಲ್ಲಿ ನಿರತರಾಗಲು ರೂಬಿ ಚಡಪಡಿಸುತ್ತಿದ್ದರು. ಈ ವೇಳೆಯಲ್ಲಿ ಕೆಲವು ಎನ್‌ಜಿಓಗಳ ಜೊತೆ ಕೈಜೋಡಿಸಿದ ರೂಬಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಕಿಯಾಗಿ ಹಾಗೂ ಆರೋಗ್ಯ ಜಾಗೃತಿ ವಿಚಾರಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಮೂಲಕ ಮತ್ತೆ ಕಾರ್ಯನಿರತರಾದರು.

ಹೀಗೆ ರೈತರಿಗಾಗಿ ಕಾರ್ಯನಿರ್ವಹಿಸುವ, ಸಾವಯವ ಜೈವಿಕ ಉತ್ಪನ್ನಗಳ ಅಗತ್ಯ ಮತ್ತು ಪ್ರಾಮುಖ್ಯತೆಗಳನ್ನು ತಿಳಿಸಿಕೊಡುವ ಡಿಆರ್‌ಸಿಎಸ್‌ಸಿ ಎಂಬ ಎನ್‌ಜಿಓ ಒಂದರ ಸಂಪರ್ಕಕ್ಕೆ ಬರುತ್ತಾರೆ ರೂಬಿ. ಈ ಸಂಸ್ಥೆ ಸಾವಯವ ಕೃಷಿಯ ಬಗ್ಗೆ ಆಸಕ್ತಿ ವಹಿಸುವ ರೈತರಿಗೆ ಸಹಾಯ ಹಸ್ತವನ್ನೂ ಸಹ ಚಾಚುತ್ತಿತ್ತು. ಈ ಸಂಸ್ಥೆಗೆ ಸೇರುತ್ತಾರೆ ರೂಬಿ.

ರೂಬಿಯವರ ಕಾರ್ಯವೈಖರಿ

ಡಿಆರ್‌ಸಿಎಸ್‌ಸಿ ಸಂಸ್ಥೆಗೆ ಸೇರಿದ್ದರಿಂದ ರೂಬಿಗೆ ನಗರೋದ್ಯಾನಗಳು ಹಾಗೂ ಸಾವಯವ ಕೃಷಿಯ ಬಗ್ಗೆ ಭರಪೂರ ಮಾಹಿತಿ ದೊರೆಯಿತು. ಹೀಗೆ ಕಾರ್ಯನಿರ್ವಹಿಸುತ್ತಾ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ಸಂಕಟಗಳ ಬಗ್ಗೆ ತಿಳಿದುಕೊಂಡರು. ಮಣ್ಣಿನ ಸವಕಳಿ ಹಾಗೂ ಅರಣ್ಯನಾಶದಿಂದ ಆ ಪ್ರದೇಶದ ಕೃಷಿ ಭೂಮಿ ನಾಶವಾಗುತ್ತಿರುವುದು ಅವರ ಗಮನಕ್ಕೆ ಬಂದಿತು. ಹೀಗಾಗಿ ಕೃಷಿಗೆ ಪರ್ಯಾಯ ವ್ಯವಸ್ಥೆಯನ್ನು ಅವರು ಶೋಧಿಸಿದರು. ನೀರನ್ನು 3 ಹಂತಗಳಲ್ಲಿ ನೈಸರ್ಗಿಕ ಜಲಾಶಯಗಳಲ್ಲಿ ಸಂಗ್ರಹಿಸುವುದರ ಮೂಲಕ ಕೃಷಿಗೆ ಅಗತ್ಯವಿರುವ ನೀರನ್ನು ಸಂಗ್ರಹಿಸಬಹುದು. ಈ ಮೂಲಕ ಸಂಗ್ರಹಿಸಲ್ಪಟ್ಟ ನೀರನ್ನು ಕೃಷಿಗೆ ಬಳಸಬಹುದೆಂಬ ವಿಧಾನವನ್ನು ಕಂಡುಹಿಡಿದರು. ಇದರಿಂದ ಅಗಾಧ ಯಶಸ್ಸು ಲಭ್ಯವಾಯಿತು. ತಮ್ಮ ಬಗ್ಗೆ ರೂಬಿಯವರು ಹಾಗೂ ಅವರ ಜೊತೆಗಾರರಿಗಿರುವ ಕಾಳಜಿಯನ್ನು ಗಮನಿಸಿದ ರೈತರು ಸಾವಯವ ರೀತಿಯಲ್ಲಿ ಕೃಷಿ ಮಾಡಲು ಆರಂಭಿಸಿದರು.

ಈಗ ಪುರುಲಿಯಾ ಜಿಲ್ಲೆಯ ರೈತರ ಕೃಷಿಭೂಮಿಯಲ್ಲಿ ಇಳುವರಿಯೂ ಸಹ ಉತ್ತಮವಾಗಿದೆ. ಈ ಫಸಲನ್ನು ಕೋಲ್ಕತ್ತಾದ ಗ್ರಾಹಕರವರೆಗೂ ತಲುಪಿಸುವ ಕಾರ್ಯಕ್ಕೆ ರೂಬಿ ಕೈಹಾಕಿದ್ದಾರೆ. ಪ್ರತಿ ರೈತರಿಗೂ ಹೆಚ್ಚಿನ ಬೆಳೆ ದೊರೆಯುತ್ತಿದ್ದರೂ ಮಾರಾಟದಲ್ಲಿ ಅವರಿಗೆ ನಷ್ಟವುಂಟಾಗುತ್ತಿದೆ ಎಂಬ ಅಂಶವನ್ನು ರೂಬಿ ಗಮನಿಸಿದರು. ನಂತರ ರೂಬಿಯವರು ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಒದಗಿಸುವತ್ತ ಅವಲೋಕಿಸಿದರು. ಮೊದ ಮೊದಲು ರೂಬಿಯವರ ಸ್ನೇಹಿತರು ಉತ್ಪನ್ನಗಳು ಹಾಗೂ ತರಕಾರಿಗಳನ್ನು ವಿಭಾಗಿಸಿ ಮಾರುವ ಯೋಜನೆ ರೂಪಿಸಿದರು. ಮೊದಲು 6ಕ್ಕಿದ್ದ ಬೇಡಿಕೆ ಈಗ 200 ಆಗಿದೆ. ನಂತರ ಗ್ರಾಹಕರಿಗೆ ವಾರದ ಮೊದಲಲ್ಲೇ ಉತ್ಪನ್ನಗಳ ಲಭ್ಯತೆ ಬಗ್ಗೆ ತಿಳಿಸಿದಾಗ ಗ್ರಾಹಕರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಖರೀದಿಸಲಾರಂಭಿಸಿದರು. ಒಮ್ಮೆ ಬೇಡಿಕೆಯ ಪಟ್ಟಿ ತಯಾರಾದ ಬಳಿಕ ಅದನ್ನು ರೈತರಿಗೆ ಕಳಿಸಿ ಅದರ ಮಾರನೆಯ ದಿನವೇ ಉತ್ಪನ್ನಗಳನ್ನು ಪೂರೈಸುವಂತಹ ವ್ಯವಸ್ಥೆ ಮಾಡಿದರು ರೂಬಿ. ಕೋಲ್ಕತ್ತಾದ ಗ್ರಾಹಕರಿಗೆ ಅಗತ್ಯವಿರುವ ಉತ್ಪನ್ನಗಳನ್ನು 6 ಮಂದಿ ವಿತರಕರು ಗ್ರಾಹಕರಿಗೆ ವಿತರಿಸುತ್ತಿದ್ದಾರೆ. ಯಾವಾಗ ಉತ್ಪನ್ನಗಳು ಬೇಡಿಕೆಗಿಂತ ಹೆಚ್ಚಾಗುತ್ತವೆಯೋ ಆಗ ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಗ್ರಾಹಕರನ್ನು ಹುಡುಕಿ ಅವರಿಗೆ ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ರೂಬಿ.

image


ಮುಂದಿನ ಯೋಜನೆ

ಎಫ್‌ಎಂಸಿಜಿ ಹಾಗೂ ಚಿಲ್ಲರೆ ವ್ಯಾಪಾರ ವಲಯದಲ್ಲಿ 12 ವರ್ಷದ ಅನುಭವ ರೂಬಿಯವರಿಗೆ ತಮ್ಮದೇ ಆದ ಸಾವಯವ ಕೃಷಿಯ ಯುನಿಟ್ ಒಂದನ್ನು ನಡೆಸಲು ನೆರವಾಗಿದೆ. ಈ ವರ್ಷಾಂತ್ಯದೊಳಗೆ ಸಂಪೂರ್ಣವಾಗಿ ಡಿಜಿಟಲ್ ಹಾಗೂ ತಮ್ಮ ಉತ್ಪನ್ನಗಳಿಗೆ ಸರಿಯಾದ ಮಾರ್ಕೆಟಿಂಗ್ ಮಾಡಿಕೊಳ್ಳುವ ಗುರಿ ಹೊಂದಿದ್ದಾರೆ.

ಜೀವನವನ್ನು ಸದ್ಯಕ್ಕೆ ಸುಲಭವಾಗಿಸಿಕೊಂಡಿದ್ದೇನೆ ಹಾಗೂ ನನ್ನ ದಿನವನ್ನು ನನ್ನ ಇಷ್ಟದಂತೆ ಆರಂಭಿಸುತ್ತಿದ್ದೇನೆ. ನನಗೆ ಯಾವುದೇ ಗಡಿಬಿಡಿಯಿಲ್ಲ ಆದರೆ ಯೋಜನೆಗಳು ಸರಿಯಾದ ರೀತಿಯಲ್ಲಿ ಜಾರಿಯಾಗಬೇಕು. ಈ ಉದ್ಯಮದ ಪ್ರಮುಖರೊಂದಿಗೆ ಸೇರಿ ತಮ್ಮದೇ ಆದ ಬ್ರಾಂಡ್‌ ನ್ನು ಮಾಡಬೇಕಿದೆ. ಉತ್ಪನ್ನಗಳ ವಿತರಣಾ ವ್ಯವಸ್ಥೆ ಸ್ಥಿರವಾದ ನಂತರ ನಮ್ಮ ಸಾವಯವ ಉತ್ಪನ್ನಗಳಿಗೆ ಒಂದು ಮಳಿಗೆಯನ್ನು ತೆರೆಯುತ್ತೇನೆ ಎಂಬ ಆತ್ಮ ವಿಶ್ವಾಸದ ಮಾತುಗಳನ್ನಾಡುತ್ತಾರೆ ರೂಬಿ.