ವಡೋದರದ ದಂಪತಿಗಳಿಗೆ ಯಶಸ್ಸಿನ ಮೆಟ್ಟಿಲಾದ ಆ್ಯಂಗ್ರಿಬರ್ಡ್ಸ್​​​ ಗೇಮ್

ಟೀಮ್​​ ವೈ.ಎಸ್​​.

0

ಈಗ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಮೊಬೈಲ್​​ನಲ್ಲಿ ಗೇಮ್ ಆಡೋದೇ ಕ್ರೇಝ್. ಸ್ಮಾರ್ಟ್​ಫೋನ್​​ ಯುಗದಲ್ಲಿ ಕ್ಯಾಂಡಿ ಕ್ರಶ್, ಆ್ಯಂಗ್ರಿ ಬರ್ಡ್‍ನಂತಹ ಗೇಮ್‍ಗಳು ಬಲು ಜನಪ್ರಿಯವಾಗಿವೆ. ಮಕ್ಕಳು ಎಲ್ಲಾದ್ರೂ ಈ ಗೇಮ್​​ಗಳನ್ನು ಆಡ್ತಾ ಇರೋದನ್ನ ನೋಡಿದ್ರೆ ಹೆತ್ತವರಿಗೆ ಸಿಟ್ಟು ಬರೋದು ಗ್ಯಾರೆಂಟಿ. ಆದ್ರೆ ಇಲ್ಲೊಂದು ದಂಪತಿಗೆ ಮಗ ಮೊಬೈಲ್​​ನಲ್ಲಿ ಗೇಮ್​​ ಆಡ್ತಾ ಇದ್ದಿದ್ದೇ ಲಾಭವಾಗಿದೆ. ಗೇಮ್ ಬಗ್ಗೆ ಮಗನಿಗಿದ್ದ ಪ್ರೀತಿ ತಂದೆಯ ಯಶಸ್ಸಿನ ಮೂಲವಾಯ್ತು ಅಂದರೆ ನೀವು ನಂಬಲೇಬೇಕು. ರಾಜ್ವಿ ಮಕೊಲ್ ಯಶೋಗಾಥೆಯ ಹಿಂದೆ ಒಂದು ರೋಚಕ ಸನ್ನಿವೇಶವಿದೆ. ರಾಜ್ವಿ ಅವರ ಪುತ್ರನಿಗೆ ಆ್ಯಂಗ್ರಿ ಬರ್ಡ್ ಅಂದ್ರೆ ಪಂಚಪ್ರಾಣ. ಆ್ಯಂಗ್ರಿ ಬರ್ಡ್ಸ್​​ನ ಚಿತ್ರಗಳಿರೋ ಚಪ್ಪಲಿ ಬೇಕು ಅಂತಾ ಆತ ರಚ್ಚೆ ಹಿಡಿದಿದ್ದ. ಮಗನಿಗಾಗಿ ರಾಜ್ವಿ ಇಂಟರ್ನೆಟ್ ಜಾಲಾಡಿದರು. ಫಿನ್‍ಲ್ಯಾಂಡ್‍ನಲ್ಲಿ ಮಾತ್ರ ಅಂತಹ ಚಪ್ಪಲಿಗಳನ್ನು ತಯಾರಿಸುತ್ತಾರೆ ಅನ್ನೋದನ್ನು ಪತ್ತೆ ಮಾಡಿದರು. ಅಲ್ಲಿಂದ ಒಂದು ಜೊತೆ ಚಪ್ಪಲಿ ತರಿಸಲು 5000 ರೂಪಾಯಿ ವೆಚ್ಚವಾಗುತ್ತಿತ್ತು.

ಜಿಂಜರ್ ಕ್ರಶ್ ಉದಯ..

ರಾಜ್ವಿ ಫಿನ್‍ಲ್ಯಾಂಡ್‍ನ ಕಂಪನಿಗೆ ಇ-ಮೇಲ್ ಕಳಿಸಿದರು. ಭಾರತದಲ್ಲಿ ವಿತರಕರಾಗಲು ಆಸಕ್ತರಾಗಿರುವುದಾಗಿ ತಿಳಿಸಿದರು. ಆದರೆ ರಾಜ್ವಿ ಅವರಿಗೆ ವಿತರಣೆಯ ಹಕ್ಕು ನೀಡಲು ಫಿನ್‍ಲ್ಯಾಂಡ್‍ನ ಕಂಪನಿ ಸಿದ್ಧವಿರಲಿಲ್ಲ. ಪರವಾನಗಿ ಹೊಂದಿರುವ ಪಾಲುದಾರರಾಗುವಂತೆ ರಾಜ್ವಿ ಅವರಿಗೆ ಆಹ್ವಾನ ನೀಡಿತ್ತು. ಅದರ ಪ್ರಕಾರ ರಾಜ್ವಿ ಫಿನ್‍ಲ್ಯಾಂಡ್ ಕಂಪನಿಯ ಬ್ರಾಂಡ್, ಡಿಸೈನ್ ಹಾಗೂ ಉತ್ಪನ್ನಗಳನ್ನು ಬಳಸಿಕೊಳ್ಳಬಹುದಿತ್ತು. 2011ರಲ್ಲಿ ರಾಜ್ವಿ ಮತ್ತವರ ಪತ್ನಿ ಸೌಮ್ಯ, ನಿಧಿ ಸ್ವದೇಶ್ ಎಸ್ಟಿಲ್ ಎಂಬ ಮಳಿಗೆಯನ್ನು ತೆರೆದರು.

ಜಿಂಜರ್ ಕ್ರಶ್ ಪಯಣ..

ಹಲೋ ಕಿಟ್ಟಿ, ಡ್ರೀಮ್ ವರ್ಕ್ಸ್​​​, ಆ್ಯನಿಮೇಷನ್‍ನಂತಹ ಕಂಪನಿಗಳು ಕೂಡ ಜಿಂಜರ್ ಕ್ರಶ್ ಜೊತೆ ಕೈಜೋಡಿಸಿದ್ದವು. ಕುಂಗ್ ಫೂ ಪಾಂಡಾ, ಶ್ರೆಕ್, ಮಡಗಾಸ್ಕರ್‍ನಂತಹ ಸಿನಿಮಾಗಳ ವಿನ್ಯಾಸಗಳನ್ನು ಕೂಡ ಬಳಸಿಕೊಳ್ಳುವ ಅವಕಾಶವಿತ್ತು. 2012ರಲ್ಲಿ ರಾಜ್ವಿ ಫ್ಲಿಪ್‍ಕಾರ್ಟ್ ಜೊತೆ ಪಾಲುದಾರರಾದ್ರು. ಆನ್‍ಲೈನ್‍ನಲ್ಲಿ ತಮ್ಮ ಉತ್ಪನ್ನಗಳನ್ನು ಲಾಂಚ್ ಮಾಡಿದ್ರು. ಮೊದಲ ದಿನವೇ 10,000 ರೂಪಾಯಿ ಮೌಲ್ಯದ ಉತ್ಪನ್ನಗಳು ಮಾರಾಟವಾದವು. ಕೆಲವೇ ದಿನಗಳಲ್ಲಿ 40 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬಿಕರಿಯಾದ್ದವು. 2013ರಲ್ಲಿ ರಾಜ್ವಿ ಅವರ ಪತ್ನಿ ಸೌಮ್ಯಾ ಚಿಂಪ್ ಚಾಲೆಂಜ್ ಎಂಬ ಗೇಮ್ ಒಂದನ್ನು ಪರಿಚಯಿಸಿದ್ರು. ಆಕ್ಸ್​​ಫರ್ಡ್ ವಿಶ್ವವಿದ್ಯಾನಿಲಯದ ಪರವಾನಗಿ ಅಡಿಯಲ್ಲಿ ಗೇಮ್ ಲಾಂಚ್ ಮಾಡಲಾಯ್ತು. ಅದು ಬೆಸ್ಟ್ ಎಜುಕೇಷನ್ ಟಾಯ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನವಾಯ್ತು. ಹೀಗೆ ಯಶಸ್ಸಿನ ಪಯಣ ಶುರುವಾಗುತ್ತಿದ್ದಂತೆ ತಮ್ಮದೇ ಬ್ರಾಂಡ್‍ನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ರಾಜ್ವಿ ಮತ್ತು ಸೌಮ್ಯ ದಂಪತಿ ನಿರ್ಧರಿಸಿದರು. ಆಗಸ್ಟ್​​ನಲ್ಲಿ ಜಿಂಜರ್ ಕ್ರಶ್ ಅನ್ನು ರಾಜ್ವಿ ಲಾಂಚ್ ಮಾಡಿದರು. ಗ್ರಾಹಕರು ತಮ್ಮಿಷ್ಟದ ವಿನ್ಯಾಸವನ್ನು ಆಯ್ಕೆ ಮಾಡಿ ಅದಕ್ಕೆ ತಕ್ಕಂತೆ ಉತ್ಪನ್ನವನ್ನು ಪಡೆಯುವ ಅವಕಾಶವೂ ಜಿಂಜರ್ ಕ್ರಶ್‍ನಲ್ಲಿದೆ.

ಜಿಂಜರ್ ಕ್ರಶ್ ವಿಶೇಷತೆ..

ಸದ್ಯ 85 ಬ್ರಾಂಡ್‍ಗಳ ವಿನ್ಯಾಸದ ಲೈಬ್ರರಿಯೇ ಜಿಂಜರ್ ಕ್ರಶ್‍ನಲ್ಲಿದೆ. 28 ಅಂತರಾಷ್ಟ್ರೀಯ ಕಲಾವಿದರಿದ್ದಾರೆ. ಡಿಸ್ನಿ, ಪಿಕ್ಸರ್ ಮೂವೀಸ್, ಮಾರ್ವೆಲ್, ಲುಕಾಸ್ ಫಿಲ್ಮ್ಸ್, ಹಿಟ್ ಎಂಟರ್‍ಟೈನ್‍ಮೆಂಟ್, ಫಿಶರ್ ಪ್ರೈಸ್, ಪೀನಟ್ಸ್​​ನಂತಹ ಹಲವು ಬ್ರಾಂಡ್‍ಗಳು ಇಲ್ಲಿವೆ. ಜನರು ಮರೆತಿದ್ದ ಕಾರ್ಟೂನ್‍ಗಳನ್ನೆಲ್ಲ ಜಿಂಜರ್ ಕ್ರಶ್ ನೆನಪಿಸಿದೆ. ಕಳೆದ ವರ್ಷವಷ್ಟೇ ಕಾರ್ಯಾರಂಭ ಮಾಡಿರುವ ಜಿಂಜರ್ ಕ್ರಶ್ ಕೇವಲ 9 ನಿಮಿಷಗಳಲ್ಲಿ 28 ಸಾವಿರ ಉತ್ಪನ್ನಗಳನ್ನು ಜನರೇಟ್ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಟಿ ಶರ್ಟ್, ಮಗ್‍ಗಳು, ಮೊಬೈಲ್ ಕವರ್‍ಗಳು ಜಿಂಜರ್‍ನಲ್ಲಿ ಲಭ್ಯವಿದೆ. ಶಾಟ್ ಗ್ಲಾಸ್‍ಗಳು, ಸ್ಪೋರ್ಟ್ಸ್​​ ವಾಟರ್ ಬಾಟಲ್, ಪೋಸ್ಟರ್‍ಗಳು, ಟೋಪಿ ಮತ್ತು ಮಕ್ಕಳ ಉಡುಗೆಗಳನ್ನು ತಯಾರಿಸುವ ಯೋಜನೆಯನ್ನು ರಾಜ್ವಿ ಹಾಕಿಕೊಂಡಿದ್ದಾರೆ. ಗ್ರಾಹಕರು ತಾವೇ ತಯಾರಿಸಿದ ವಿನ್ಯಾಸಗಳನ್ನು ಉತ್ಪನ್ನಗಳ ಮೇಲೆ ಮುದ್ರಿಸುವ ಅವಕಾಶ ಕೂಡ ಇದೆ.

ಜಿಂಜರ್ ಕ್ರಶ್ ಬಿಡುಗಡೆಗೂ ಮುನ್ನವೇ ಒಂದು ಬಿಲಿಯನ್ ಡಾಲರ್ ಹಣ ಗಳಿಸಿತ್ತು. ಕಳೆದ 10 ದಿನಗಳಲ್ಲಿ ಲಕ್ಷಾಂತರ ರೂಪಾಯಿ ಬಾಚಿಕೊಂಡಿತ್ತು. ಒಟ್ಟಿನಲ್ಲಿ ಮಕ್ಕಳ ಇಷ್ಟದ ಕಾರ್ಟೂನ್ ಮತ್ತು ಗೇಮ್‍ಗಳ ಸಹಾಯದಿಂದ ಹೇಗೆ ಯಶಸ್ವಿ ಉದ್ಯಮಿಯಾಗಬಹುದು ಅನ್ನೋದನ್ನು ರಾಜ್ವಿ ಸಾಬೀತು ಮಾಡಿದ್ದಾರೆ.

Related Stories