ಹಿಂದಿಯಲ್ಲೊಬ್ಬ ಚೇತನ್ ಭಗತ್..? ಹಿಂದಿ ಸಾಹಿತ್ಯದಲ್ಲಿ ಹೊಸ ಅಲೆ ಸೃಷ್ಟಿಸಿರುವ ದಿವ್ಯ ಪ್ರಕಾಶ್ ದುಬೆ

ಟೀಮ್​​ ವೈ.ಎಸ್​​.

ಹಿಂದಿಯಲ್ಲೊಬ್ಬ ಚೇತನ್ ಭಗತ್..? ಹಿಂದಿ ಸಾಹಿತ್ಯದಲ್ಲಿ ಹೊಸ ಅಲೆ ಸೃಷ್ಟಿಸಿರುವ ದಿವ್ಯ ಪ್ರಕಾಶ್ ದುಬೆ

Thursday October 15, 2015,

4 min Read

ದಿವ್ಯಪ್ರಕಾಶ್ ದುಬೆ(ಡಿಪಿ ಎಂದೇ ಪ್ರಖ್ಯಾತರಿವರು) ರವರು ಹಿಂದಿಯಲ್ಲಿ ಬರೆದಿರುವ ಟರ್ಮ್ಸ್ ಎಂಡ್ ಕಂಡೀಶನ್ಸ್ ಅಪ್ಲೈ ಎಂಬ ಪುಸ್ತಕವನ್ನು ಓದಿದರೆ ಚೇತನ್ ಭಗತ್‌ರ ಪುಸ್ತಕವನ್ನು ಹಿಂದಿಯಲ್ಲಿ ಓದಿದ ಅನುಭವವಾಗುತ್ತದೆ. ಭಾರತದ ಮಧ್ಯಮವರ್ಗದ ಜನರ ಸಂಕಷ್ಟಗಳನ್ನು ಸರಳವಾಗಿ ಸಂಭಾಷಣೆಯ ರೀತಿಯಲ್ಲಿ ಬರೆದಿದ್ದಾರೆ ಡಿಪಿ. ಪುಸ್ತಕದ ಮಾರ್ಕೆಟಿಂಗ್‌ಗಾಗಿ ಯೂಟ್ಯೂಬ್ ಬಳಸಿಕೊಳ್ಳುವ ಮೂಲಕ ಜಾಣತನ ಮೆರೆದಿದ್ದಾರೆ. ದಿವ್ಯ ಪ್ರಕಾಶ್ ದುಬೆ ತಮ್ಮ ಪಯಣದ ಕುರಿತು ಯುವರ್ ಸ್ಟೋರಿ ಜೊತೆ ಮಾತನಾಡಿದ್ದಾರೆ.

ತಮ್ಮ ತಂದೆಗೆ ಆಗಾಗ ವರ್ಗಾವಣೆಯಾಗುತ್ತಿದ್ದ ಕಾರಣ ಭಾರತದ ವಿವಿಧ ನಗರಗಳಲ್ಲಿ ಡಿಪಿಯವರು ಬೆಳೆದಿದ್ದಾರೆ. ಶಹಜಹಾನ್ ಪುರ್ ಮತ್ತು ಹರ್ದೋಲಿಯಂತಹ ಸಣ್ಣ ನಗರಗಳಲ್ಲಿ ಅವರು ತಮ್ಮ ಬಾಲ್ಯವನ್ನು ಕಳೆದಿದ್ದಾರೆ. ಬಹುಶಃ ಇದೇ ವೇಳೆಯಲ್ಲಿ ಅವರಿಗೆ ಬಹಳಷ್ಟು ಜನ ಹಿಂದಿ ಸಾಹಿತ್ಯವನ್ನು ಓದುವುದನ್ನು ಏಕೆ ನಿಲ್ಲಿಸಿದ್ದಾರೆ ಎಂಬ ಪ್ರಶ್ನೆ ಮೂಡಿರಬಹುದು. ಇದೇ ಪ್ರಶ್ನೆ ಅವರನ್ನು ಹಿಂದಿಯಲ್ಲಿ ಪುಸ್ತಕ ಬರೆಯುವಂತೆ ಪ್ರೇರೇಪಿಸಿದೆ.

image


ನಾಟಕಗಳನ್ನು ಬರೆಯುತ್ತಿದ್ದ ದಿನಗಳು

12 ತರಗತಿಯಲ್ಲಿ ಓದುತ್ತಿದ್ದಾಗ 1.80 ರೂ ಪಾವತಿಸುತ್ತಿದ್ದ ದಿನಗಳನ್ನು ಡಿಪಿಯವರು ಈಗಲೂ ನೆನಪಿಸಿಕೊಳ್ಳುತ್ತಾರೆ. ಶಾಲಾದಿನಗಳಲ್ಲಿ ಹಿಂದಿ ಮಾಧ್ಯಮದಲ್ಲೇ ಅವರು ಅಭ್ಯಾಸ ಮಾಡಿದ್ದರು. ನಂತರ ಐಐಟಿ ಕೋಚಿಂಗ್ ಪಡೆಯಲು ಲಕ್ನೋಗೆ ತೆರಳಿದರು. ಅಲ್ಲಿ ಗುರುತ್ವಾಕರ್ಷಣೆಗೆ ಇಂಗ್ಲೀಷ್‌ನಲ್ಲಿ ಗ್ರ್ಯಾವಿಟಿ ಎನ್ನುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಅವರಿಗೆ 1 ವರ್ಷ ಬೇಕಾಯಿತು. ಇದೇ ವೇಳೆಯಲ್ಲಿ ಅವರು ಬಿಎಸ್‌ಸಿ ಅಥವಾ ಬಿಕಾಮ್ ಓದಲು ಸೇರಲೇಬಾರದು ಎಂಬುದನ್ನೂ ನಿರ್ಧರಿಸಿದರು. ನಂತರ ಐಎಎಸ್ ಪರೀಕ್ಷೆಗೆ ಸಿದ್ಧರಾಗತೊಡಗಿದರು ಡಿಪಿ. ಐಎಎಸ್‌ ಅನ್ನು ಹಿಂದಿಯಲ್ಲೇ ಬರೆಯಲು ನಿರ್ಧರಿಸಿದ್ದರು. ಇದೇ ವೇಳೆಯಲ್ಲಿ ಅವರಿಗೆ ಪುಸ್ತಕಗಳ ಸಾಂಗತ್ಯ ದೊರೆಯಲಾರಂಭಿಸಿತು. ಪುಸ್ತಕಗಳಾಡುವ ಪಿಸುಮಾತುಗಳು ಅವರಿಗೆ ಕೇಳಲಾರಂಭಿಸಿತು. ಜೀವನದಲ್ಲಿ ಯಾರನ್ನೂ ಧೂಷಿಸಬಾರದು ಎಂಬ ಪಾಠವನ್ನು ಕಲಿತರು. ಆ ದಿನಗಳಲ್ಲಿ ಓಶೋ ರಜನೀಶ್ ಮತ್ತು ವಿವೇಕಾನಂದರ ಕುರಿತು 100ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದರು ಡಿಪಿ.

ಅಂತಿಮವಾಗಿ ರೂಕ್ರಿಯ ಇಂಜಿನಿಯರಿಂಗ್ ಕಾಲೇಜ್‌ಗೆ ಸೇರಿದ ಡಿಪಿ, ರಂಗಭೂಮಿಯಲ್ಲಿ ತಮಗಿರುವ ಆಸಕ್ತಿಯನ್ನು ಕಂಡುಕೊಂಡರು. ಅವರು ತಮ್ಮ ಮೊದಲ ಹಿಂದಿ ನಾಟಕ ಪ್ರಗತಿ ಪೇ ಉತರು ಭಾರತ್(ಅಭಿವೃದ್ಧಿಯ ಪಥದಲ್ಲಿ ಭಾರತ) ಎಂಬ ನಾಟಕವನ್ನು ಬರೆದರು. ಅಲ್ಲದೇ ದಿನಕ್ಕೆ 250 ಪುಟಗಳ ಗುರಿಯಿಟ್ಟುಕೊಂಡು ಓದಿನಲ್ಲೂ ಶಿಸ್ತು ಕಾದುಕೊಂಡರು. ಕಾಲೇಜ್ ಮುಗಿಸಿದ ಬಳಿಕ ಎಲ್ಲರಂತೆ ಅವರು ಕೆಲಸಕ್ಕಾಗಿ ಹುಡುಕಾಡಲಿಲ್ಲ. ಬದಲಿಗೆ ಎಂಬಿಎ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಿದರು ಮತ್ತು ಪುಣೆಯ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರವೇಶವನ್ನೂ ಗಿಟ್ಟಿಸಿದರು.

ಇದೇ ವೇಳೆ ಲಕ್ನೋದಲ್ಲಿ ಸಣ್ಣ ಬಿಸಿನೆಸ್‌ಗಳಿಗಾಗಿ ಆ್ಯಡ್‌ಗಳಿಗೆ ಸ್ಕ್ರಿಪ್ಟ್ ಬರೆಯಲಾರಂಭಿಸಿದರು. ಇವುಗಳು ಸ್ಥಳೀಯ ಹಿಂದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಆದರೆ ಅದನ್ನೊಂದು ಹಣ ಸಂಪಾದನೆಯ ಮಾರ್ಗವಾಗಿ ಅವರು ಆರಿಸಿಕೊಂಡಿರಲಿಲ್ಲ. ಅತೀ ಶೀಘ್ರದಲ್ಲೇ ಬರವಣಿಗೆ ಆರಂಭಿಸಿದ ಡಿಪಿ “ಆಪ್ಕಾ ಯಸ್ಟರ್‌ಡೇ, ಹಮಾರಾ ಟುಮಾರೋ” ಎಂಬ ವಿದ್ಯಾರ್ಥಿ ಜೀವನದ ಕುರಿತಾದ ಪುಸ್ತಕವನ್ನು ಬರೆದು ಅದರಲ್ಲಿ ಯಶಸ್ವಿಯಾದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದಕ್ಕೆ ಅದ್ಭುತವಾದ ಪ್ರತಿಕ್ರಿಯೆ ನೀಡಿದರು. ಇದರ ಮೂಲಕ ಪಿಯೂಶ್ ಮಿಶ್ರಾ ನಟಸಿರುವ ಕಿರುಚಿತ್ರ ಕುಬೂಲ್ನಾಮಗೆ ಸ್ಕ್ರಿಪ್ಟ್ ಬರೆಯುವ ಅವಕಾಶ ಪಡೆದರು. ಆಶ್ಚರ್ಯವೆಂದರೆ ಬರೋಬ್ಬರಿ 11 ರೂಪಾಯಿ ಪಡೆದು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು ಪಿಯೂಶ್ ಮಿಶ್ರಾ.

ರಂಗಭೂಮಿಯಿಂದ ಪುಸ್ತಕಗಳೆಡೆಗೆ..

ಟರ್ಮ್ಸ್ ಎಂಡ್ ಕಂಡೀಶನ್ಸ್ ಅಪ್ಲೈ ಎಂಬ ಪುಸ್ತಕ ಬರೆಯಲು ಡಿಪಿಗೆ ಅವರ ಕೆಟ್ಟ ಬಾಸ್ ಸ್ಪೂರ್ತಿ. ಈ ಪುಸ್ತಕ ಬರೆಯಲು ಅವರಿಗೆ ವಾರಾಂತ್ಯದ 14 ಬರವಣಿಗೆಯ ಅವಧಿಗಳು ಬೇಕಾದವು. ಇಂಗ್ಲೀಷ್ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸುವಂತಹ ಬರಹಗಳ ಮೂಲಕ ಚೇತನ್ ಭಗತ್, ಓದುಗರು ಇಂಗ್ಲೀಷ್ ಸಾಹಿತ್ಯದಲ್ಲಿ ತೊಡಗಲು ಪ್ರೇರಕರಾಗಿದ್ದಾರೆ. ಆದರೆ ಹಿಂದಿಯಲ್ಲಿ ಇಂತಹ ಲೇಖಕರಾಗಲಿ, ಬರಹಗಾರರಾಗಲಿ, ಕಾದಂಬರಿಕಾರರಾಗಲಿ, ಕಥೆಗಾರರಾಗಲಿ ಇಲ್ಲ. ಹೀಗಾಗಿ ಮಕ್ಕಳು ಮೊದಲು ಹಿಂದಿ ಕಾಮಿಕ್ಸ್ ಪುಸ್ತಕಗಳನ್ನು ಓದಿದರೂ ನಂತರ ಇಂಗ್ಲೀಷ್ ಸಾಹಿತ್ಯದತ್ತ ಆಕರ್ಷಿತರಾಗುತ್ತಾರೆ.

ತಮ್ಮ ಪುಸ್ತಕಗಳಿಗೆ ಪ್ರಕಾಶಕರನ್ನು ಹುಡುಕುವುದು ಅಷ್ಟೇನೂ ಸುಲಭದ ಕೆಲಸವಾಗಿರಲಿಲ್ಲ ಎನ್ನುತ್ತಾರೆ ಡಿಪಿ. ಪುಸ್ತಕದ ತುಂಬಾ ಕಡಿಮೆ ಪ್ರತಿಗಳನ್ನು ಪ್ರಕಟಿಸಲಾಗುತ್ತಿತ್ತು. ಅಥವಾ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಲೈಬ್ರರಿಗಳಿಗೆ ಮಾತ್ರ ವಿತರಿಸುವಷ್ಟು ಪ್ರತಿಗಳನ್ನು ಮಾಡಲು ಪ್ರಕಾಶಕರು ಒಪ್ಪಿಕೊಳ್ಳುತ್ತಿದ್ದರು. ಇದ್ದ ಎರಡನೇ ಅವಕಾಶವೆಂದರೆ ಓದುಗರೆಷ್ಟಿದ್ದಾರೆ ಎಂಬುದನ್ನು ಆಧರಿಸದೇ 10 ಸಾವಿರ ಪ್ರತಿಗಳನ್ನು ಮಾಡುವುದು. ಇದೆರಡನ್ನೂ ಮಾಡುವುದು ಡಿಪಿಯವರಿಗೆ ಸಾಧ್ಯವಿರಲಿಲ್ಲ. ಅಲ್ಲದೇ ಅವರೇ ಸ್ವಂತವಾಗಿ ಪುಸ್ತಕವನ್ನು ಬಿಡುಗಡೆ ಮಾಡುವುದೂ ಸಾಧ್ಯವಿರಲಿಲ್ಲ. ಏಕೆಂದರೆ ಬಹಳಷ್ಟು ಹಣ ಖರ್ಚು ಮಾಡಿದ ನಂತರವೂ ಉತ್ತಮ ಕ್ವಾಲಿಟಿಯ ಪ್ರಿಂಟಿಂಗ್ ಮಾಡುವುದು ಅಷ್ಟೇನೂ ಸುಲಭದ ಕೆಲಸ ಆಗಿರಲಿಲ್ಲ.

image


ತಮ್ಮ ಹಾಗೂ ಶೈಲೇಶ್ ಅವರ ಪರಿಚಯವಾದದ್ದಕ್ಕೆ ಡಿಪಿಯವರಿಗೆ ಸಂತೋಷವಿದೆ. ಶೈಲೇಶ್ ಅವರು ಹಿಂದಿಬರಹಗಾರರಿಗೆ, ಪ್ರತಿಭಾವಂತರಿಗೆ ಸದ್ದಿಲ್ಲದೇ ವೇದಿಕೆ ಒದಗಿಸಿಕೊಡುವಂತಹ ವ್ಯಕ್ತಿ. ಬರಹಗಾರರ ಬ್ಲಾಗ್‌ಗಳನ್ನು ಶೈಲೇಶ್ ನಿರಂತರವಾಗಿ ಪರಿಶೀಲಿಸುತ್ತಿರುತ್ತಾರೆ. ಅನೇಕ ಕಾರ್ಯಕ್ರಮಗಳಲ್ಲಿ ಆ ಲೇಖಕರನ್ನು ಭೇಟಿಯಾಗುತ್ತಾರೆ ಹಾಗೂ ಅವರ ವಿಷಯಗಳನ್ನು ಪ್ರಕಟಿಸಲು ಸದಾ ಸಹಾಯ ಮಾಡುತ್ತಾರೆ. ಅವರ ಸುಪರ್ದಿಯಲ್ಲಿ ಪ್ರಕಟವಾಗುವ ಪುಸ್ತಕವು ಯಾವುದೇ ಅಂತರಾಷ್ಟ್ರೀಯ ಮಟ್ಟದ ಪುಸ್ತಕಕ್ಕೂ ಕಡಿಮೆ ಇರುವುದಿಲ್ಲ ಎಂದು ಶೈಲೇಶ್‌ರ ಬಗ್ಗೆ ಅಭಿಮಾನದ ಮಾತುಗಳನ್ನಾಡುತ್ತಾರೆ ಡಿಪಿ.

ಮಾರ್ಕೆಟಿಂಗ್‌ನ ಪ್ರಾಮುಖ್ಯತೆ

ಇಂಗ್ಲೀಷ್ ದಿನಪತ್ರಿಕೆಗಳಂತೆ ಹಿಂದಿ ದಿನಪತ್ರಿಕೆಗಳು ಪುಸ್ತಕಗಳ ವಿಮರ್ಶೆಗಳನ್ನು ಪ್ರಕಟಿಸುವುದಿರುವುದಕ್ಕೆ ಡಿಪಿಯವರಿಗೆ ಅಸಮಾಧಾನವಿದೆ. ಯೂಟ್ಯೂಬ್ ಮೂಲಕ ತಮ್ಮ ಪುಸ್ತಕಗಳಿಗೆ ಮಾರ್ಕೆಟಿಂಗ್ ಮಾಡುವ ವಿಧಾನವನ್ನು ಕಂಡುಹಿಡಿದುಕೊಂಡಿರುವುದಕ್ಕೆ ಹೆಮ್ಮೆ ಪಡುತ್ತಾರೆ ಡಿಪಿ.

ಕೆಲ ಚೋಟೆ ಸೇ ಪಂಕ್ ಮತ್ತು ಇಟ್ಸ್ ರಿಂಗಿಂಗ್ ಎಂಬ ಕಿರುಚಿತ್ರಗಳನ್ನು ನಿರ್ಮಿಸಿದ ಬಳಿಕ ತಮ್ಮದೇ ಆದ ಮಾಸ್ಟರ್ ಸ್ಟ್ರೋಕ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನೂ ಸಹ ಸ್ಥಾಪಿಸಿದ್ದಾರೆ. ಸ್ವಾಭಾವಿಕವಾಗಿ ಕಥೆ ಹೇಳುವ ಸಾಮರ್ಥ್ಯ ಮತ್ತು ಹವ್ಯಾಸಿ ಚಿತ್ರ ನಿರ್ಮಾಪಕರಿಗೆ ಈ ಸಂಸ್ಥೆ ವೇದಿಕೆ ಒದಗಿಸಿಕೊಡುತ್ತದೆ.

ಚಲನಚಿತ್ರಗಳಿಗೆ ಸ್ಕ್ರಿಪ್ಟ್ ಬರೆಯುತ್ತಿರುವುದರಿಂದ ಪೂರ್ಣವಾಗಿ ಬರವಣಿಗೆಯಲ್ಲಿ ತೊಡಗಲು ಅವರಿಗೆ ಇನ್ನೂ 5 ವರ್ಷಗಳು ಬೇಕಾಗಬಹುದು. ಸದ್ಯಕ್ಕೆ ಟಿವಿ ಧಾರವಾಹಿಗಳಿಗೆ ಸ್ಕ್ರಿಪ್ಟ್‌ ಗಳನ್ನು ಬರೆಯದಿರಲು ಅವರು ನಿರ್ಧರಿಸಿದ್ದಾರೆ. ಬರವಣಿಗೆ ಆರಂಭಿಸುವುದಕ್ಕೂ ಮೊದಲು ಬಹಳಷ್ಟು ಓದಬೇಕು ಮತ್ತು ಯಾರನ್ನೂ ತುಂಬಾ ಹತ್ತಿರದಿಂದ ತಿಳಿದುಕೊಂಡಿದ್ದಾರೋ ಅವರ ಬಗ್ಗೆ ಬರೆಯುತ್ತಿರಬೇಕು ಎಂದು ಹೊಸ ಬರಹಗಾರರಿಗೆ ಡಿಪಿ ಸಲಹೆ ನೀಡುತ್ತಾರೆ.

ನಿಖಿಲ್ ಸಚನ್ ಮತ್ತು ಅವರಂತಹ ಲೇಖಕರ ಕಾರ್ಯಗಳನ್ನು ಶ್ಲಾಘಿಸುವ ಡಿಪಿ, ಬೇರೆ ಬೇರೆ ವೃತ್ತಿಯಿಂದ ಮತ್ತು ಹಿನ್ನೆಲೆಯಿಂದ ಬರುವ ವ್ಯಕ್ತಿಗಳು ಹಿಂದಿಯಲ್ಲಿ ಬರೆಯಬೇಕು ಎನ್ನುತ್ತಾರೆ. ಇಲ್ಲದಿದ್ದರೆ ನಾವು ಭಾಷೆಯೊಂದಿಗಿನ ಸಂಪರ್ಕವನ್ನೇ ಕಡಿದುಕೊಂಡುಬಿಡುತ್ತೇವೆ. ನಾವು ನಮ್ಮ ಸುತ್ತಲಿನ ವಾತಾವರಣವನ್ನು ಗಮನಿಸುತ್ತಲೇ ಇರಬೇಕು. ಒಂದೇ ವಿಚಾರದ ಕುರಿತು ಬರೆಯುವುದರ ಬದಲು ನಮ್ಮ ನೆರೆಹೊರೆಯಲ್ಲಿ ನಡೆಯುವ ಘಟನೆಗಳು, ಹಗರಣಗಳು ಅಥವಾ ಇನ್ಯಾವುದೇ ಆಸಕ್ತಿದಾಯಕ ವಿಚಾರಗಳ ಕುರಿತು ಬರೆಯಬೇಕು ಎನ್ನುತ್ತಾರೆ ಡಿಪಿ.

ತಮ್ಮದೇ ಸ್ವಂತ ಪುಸ್ತಕಗಳನ್ನು ಪ್ರಚಾರ ಮಾಡಲು ಹಿಂದಿ ಲೇಖಕರು ಮತ್ತು ಮಾರ್ಕೆಟಿಂಗ್ ಮಾಡಲು ಹಿಂದೆ ಮುಂದೆ ನೋಡುತ್ತಾರೆ ಎನ್ನುವ ಡಿಪಿ ತಮ್ಮ ಪುಸ್ತಕಗಳ ಪ್ರಚಾರ ಹಾಗೂ ತಮ್ಮ ನಡುವೆ ಭಾರತ – ಪಾಕಿಸ್ತಾನದಂತಹ ಗೋಡೆಯನ್ನೆಬ್ಬಿಸಿಕೊಂಡಿದ್ದಾರೆ ಎಂದು ತಮಾಷೆ ಮಾಡುತ್ತಾರೆ. ಎಲ್ಲಾ ಉತ್ಪನ್ನಗಳಂತೆಯೇ ಪುಸ್ತಕವೂ ಒಂದು ಉತ್ಪನ್ನ. ಪುಸ್ತಕಕ್ಕೂ ಮಾರ್ಕೆಟಿಂಗ್ ಮಾಡುವುದು ಅತೀ ಅವಶ್ಯಕವಾದ ಅಂಶ ಎನ್ನುತ್ತಾರೆ.

ನೀವೇನಾದರೂ ಅರ್ಥಮಾಡಿಕೊಳ್ಳಬಯಸಿದರೆ ಅದಕ್ಕೆ ಬರವಣಿಗೆಯೇ ಸರಿಯಾದ ಮಾರ್ಗ ಎಂಬುದನ್ನು ಗಾಢವಾಗಿ ನಂಬುತ್ತಾರೆ ದಿವ್ಯ ಪ್ರಕಾಶ್ ದುಬೆ. ಶೀಘ್ರದಲ್ಲೇ ಡಿಪಿಯವರ ಎರಡನೇ ಪುಸ್ತಕವೂ ಬಿಡುಗಡೆಯಾಗಲಿದೆ. ಈ ಪುಸ್ತಕದಲ್ಲಿ ಮಕ್ಕಳ ಕುರಿತ 5 ಕಥೆಗಳಿವೆ. ಇದಕ್ಕಾಗಿ ಡಿಪಿಯವರಿಗೆ ಶುಭ ಹಾರೈಸೋಣ.