ಇದು ಸ್ಟಿಕ್ಕರ್​ ಹಿಂದಿರುವ ಕಥೆ..! ಕರಣ್​ ಶ್ರಮದ ಚರಿತ್ರೆ..! 

ಟೀಮ್​ ವೈ.ಎಸ್​. ಕನ್ನಡ

0

ಯುವ ಜನರಿಗೆ ಟ್ಯಾಟೂ, ಹಚ್ಚೆಗಳು ಅಂದ್ರೆ ಸ್ವಲ್ಪ ಹೆಚ್ಚೇ ಹುಚ್ಚಿದೆ.  ವಾಹನಗಳ ಮೇಲೆ ವಿಭಿನ್ನವಾದ ಸ್ಟಿಕ್ಕರ್​ಗಳು ಪ್ರಯೋಗಿಸುವ ಬಗ್ಗೆಯೂ ಆಸಕ್ತಿ ಇರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಕಾರು ಮತ್ತು ಬೈಕ್​ಗಳ ಮೇಲೆ ಉಗ್ರ ಸ್ವರೂಪಿ ಆಂಜನೇಯನ ಚಿತ್ರ ರಾರಾಜಿಸುತ್ತಿದೆ. ರಾಜ್ಯದ ಸಾಕಷ್ಟು ಕಡೆಗಳಲ್ಲಿ ಈ ಭಜರಂಗಿ ಓಡಾಡುತ್ತಿದ್ದಾನೆ. ಇತ್ತೀಚೆಗೆ ಶಿವಮೊಗ್ಗದ ಐತಿಹಾಸಿಕ ಗಣೇಶೋತ್ಸವದಲ್ಲಿ ಈ ಸ್ಟಿಕ್ಕರ್ ಮುಖ್ಯವಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿತ್ತು.

ರಾಜ್ಯದಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಿಗೂ ಇದು ಹರಿದು ಹೋಗಿ ಸಾಕಷ್ಟು ಕಡೆಗಳಲ್ಲಿ ಈ ಭಜರಂಗಿ ರಾರಾಜಿಸುತ್ತಿದ್ದಾನೆ. ನೋಡಿದ ತಕ್ಷಣ ಸೂಜಿಗಲ್ಲಿನಂತೆ ಸೆಳೆಯುವ ಈ ಭಜರಂಗಿಯನ್ನು ರಚಿಸಿದವರು ಯಾರು ಎಂದು ಹುಡುಕುತ್ತಾ ಹೊರಟರೆ ತಲುಪುವುದು ಕಾಸರಗೋಡು ಸಮೀಪದ ಕುಂಬ್ಳೆಗೆ.

ಹೌದು, ಇಂತಹ ಅದ್ಭುತ ಚಿತ್ರ ರಚಿಸಿದವರು ಕುಡ್ಲದ ಕಲಾವಿದ ಕರಣ್ ಆಚಾರ್ಯ ಎಂಬ ಯುವಕ. ಮೂಲತಃ ಕುಂಬ್ಳೆಯವರಾದ ಕರಣ್ ಈ ಉಗ್ರ ಸ್ವರೂಪಿ ಭಜರಂಗಿಯನ್ನು ರಚಿಸಿದಾಗ ಅದು ಇಷ್ಟೊಂದು ಫೇಮಸ್ ಆಗುತ್ತದೆ ಎಂದು ಅವರಿಗೆ ಗೊತ್ತಿರಲಿಲ್ಲ.

ಕಳೆದ ವರ್ಷದ ಗಣೇಶೋತ್ಸವದ ಸಮಯದಲ್ಲಿ ಕುಂಬ್ಳೆಯಲ್ಲಿನ ಕರಣ್ ಅವರ ಗೆಳೆಯರು ಧ್ವಜ ಮತ್ತು ಬ್ಯಾನರ್​ಗಳಿಗೆ ವಿಶಿಷ್ಟವಾದ ದೇವರ ಚಿತ್ರವೊಂದನ್ನು ರಚಿಸಿಕೊಡುವಂತೆ ಕೇಳಿದ್ದರು. ಅವರು ಶಿವ ಅಥವಾ ಗಣೇಶನನ್ನು ಚಿತ್ರಿಸುವಂತೆ ಕೇಳಿದ್ದರು. ಆದರೆ ಕರಣ್ ಏಕೆ ಉಗ್ರ ಸ್ವರೂಪಿ ಭಜರಂಗಿಯನ್ನು ಚಿತ್ರಿಸಬಾರದು ಎಂದುಕೊಂಡು ಒಂದು ರಾತ್ರಿಯಲ್ಲಿ ಇದನ್ನು ರಚಿಸಿ ಕೊಟ್ಟರು. ಇದನ್ನು ಕಂಡ ಅವರ ಗೆಳೆಯರು ಫುಲ್ ಖುಷಿಯಿಂದ ತಮ್ಮ ತಮ್ಮ ಮೊಬೈಲ್​ಗಳಿಗೆ ಮತ್ತು ಫೇಸ್​ಬುಕ್ ಅಟೌಂಟ್​ಗಳಿಗೆ ಹಾಕಿಕೊಂಡರು. ಅದು ಕೆಲವೇ ದಿನಗಳಲ್ಲಿ ವೈರಲ್ ಆಗಿ ಸ್ಟಿಕರ್ ಅಂಗಡಿಗಳಿಗೆ ತಲುಪಿದೆ.

" ಬೆಂಗಳೂರು ಸೇರಿದಂತೆ ಇನ್ನಿತರ ನಗರಗಳಲ್ಲಿ ನಾನು ಬರೆದ ಚಿತ್ರಗಳು ರಾರಾಜಿಸುತ್ತಿರುವುದನ್ನು ನೋಡಿದರೆ ಖುಷಿಯಾಗುತ್ತದೆ. ಚಿತ್ರ ರಚಿಸಿದಾಗ ಅದಕ್ಕೆ ವಾಟರ್ ಮಾರ್ಕ್ ಹಾಕುವುದನ್ನು ಮರೆತಿದ್ದೆ. ಹಾಗಾಗಿ ಅದನ್ನು ರಚಿಸಿದ್ದು ನಾನೇ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಕಲಾವಿದನಾಗಿ ನನಗೆ ನನ್ನ ಚಿತ್ರ ಇಷ್ಟೊಂದು ಫೇಮಸ್ ಆಗಿರುವುದು ಸಂತೋಷವಿದೆ. "
- ಕರಣ್ ಆಚಾರ್ಯ ಕಲಾವಿದ

ಕರಣ್ ಅವರನ್ನೇ ಕೇಳಿದ ಸ್ಟಿಕರ್ ಅಂಗಡಿಯಾತ

ಕರಣ್ ಮಂಗಳೂರಿನಲ್ಲಿ ಹೊಸ ಬೈಕ್ ಖರೀದಿಸಿದಾಗ, ಅದಕ್ಕೆ ನಂಬರ್ ಪ್ಲೇಟ್ ಹಾಕಿಸಲು ಒಂದು ಸ್ಟಿಕರ್ ಅಂಗಡಿಗೆ ಹೋದಾಗ ಅಂಗಡಿಯಾತ ಸಾರ್ ಆಂಜನೇಯನ ಹೊಸ ಸ್ಟಿಕರ್ ಬಂದಿದೆ ಹಾಕಿಸಿಕೊಳ್ಳಿ ಎಂದು ಕರಣ್ ಅವರನ್ನೇ ಕೇಳಿದ್ದಾನೆ. ಇದನ್ನು ಕೇಳಿದ ಕರಣ್​ಗೆ ಒಂದು ರೀತಿಯಲ್ಲಿ ಆಶ್ಚರ್ಯ ಮತ್ತು ಖುಷಿ ಎರಡು ಆಗಿದೆ.

ಕರಣ್ ಆಚಾರ್ಯ ಈ ಸ್ಟಿಕರ್ ರಚಿಸುವಾಗ ಮಂಗಳೂರು ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಫೇಮಸ್ ಆಗುತ್ತದೆ ಎಂದುಕೊಂಡಿದ್ದರು. ಆದರೆ ಅದು ಇಂದು ಅವರು ಊಹಿಸಿದ್ದಕ್ಕಿಂತ ಹೆಚ್ಚಾಗಿ ರಾಜ್ಯಾದ್ಯಂತ ಟ್ರೆಂಡ್ ಆಗಿದೆ. ಆದರೆ ಅದನ್ನು ಯಾರು ಮಾಡಿದರು ಎನ್ನವುದು ಮಾತ್ರ ಶೇ 99 ರಷ್ಟು ಮಂದಿಗೆ ಗೊತ್ತೇ ಇಲ್ಲ.

" ಆಂಜನೇಯ ಎಂದರೆ ನನಗೆ ವಿಪರೀತ ಭಕ್ತಿ. ಸ್ಟಿಕರ್ ಅಂಗಡಿಗೆ ಹೋದಾಗ ಅಂಗಡಿಯವನು ಇದನ್ನು ಹೇಳಿದ. ನನ್ನ ಕಾರಿಗೆ ಹಾಕಿಸಿದೆ. ದೂರಕ್ಕೆ ಇದು ಅದ್ಭುತವಾಗಿ ಕಾಣುತ್ತದೆ. ನನ್ನಂತೆ ಸಾಕಷ್ಟು ಜನ ಹಾಕಿಸಿಕೊಂಡಿದ್ದಾರೆ."
-  ರಾಕಿ, ಕಾರಿನ ಮೇಲೆ ಸ್ಟಿಕ್ಕರ್​ ಹಾಕಿಸಿಕೊಂಡವರು

ಹಿಂದುತ್ವದ ಐಕಾನ್ ಆಗುವತ್ತ..!

ಈ ಭಜರಂಗಿ ಸ್ಟಿಕರ್ ಒಂದು ರೀತಿಯಲ್ಲಿ ಹಿಂದೂತ್ವದ ಐಕಾನ್ ಆಗುವತ್ತ ಹೋಗುತ್ತಿದೆ. ಕಾರು, ಬಸ್, ಬೈಕ್, ಲಾರಿ, ಅಂಗಡಿ-ಮುಂಗಟ್ಟುಗಳು ಯಾವುದನ್ನೂ ಈ ಸ್ಟಿಕ್ಕರ್ ಬಿಟ್ಟಿಲ್ಲ. ಕೆಲವರ ವಾಟ್ಸ್ಅಪ್ ಡಿಪಿ, ಫೇಸ್​ಬುಕ್​ನಲ್ಲಿ ಓಡಾಡುತ್ತಿದೆ. 

ಯಾರು ಕರಣ್ ಆಚಾರ್ಯ..?

ಕಾಸರಗೋಡು ಮೂಲದ ಕರಣ್ ಆಚಾರ್ಯ ಚಿಕ್ಕವಯಸ್ಸಿನಿಂದಲೇ ಡ್ರಾಯಿಂಗ್ ಸೇರಿದಂತೆ ಇನ್ನಿತರ ಕಲೆಯಲ್ಲಿ ಆಸಕ್ತಿ ಇದ್ದವರು. ಇದಕ್ಕಾಗಿ ಅವರು ಕಾಸರಗೋಡಿನ " ರಿದಂ ಸ್ಕೂಲ್ ಆಫ್ ಆರ್ಟ್" ಶಾಲೆಯಲ್ಲಿ ಪದವಿಯನ್ನು ಸಹ ಪಡೆದರು. ನಂತರ ತ್ರಿಶೂರ್​ನಲ್ಲಿ ಅನಿಮೇಶನ್ ಅಭ್ಯಾಸ ಮಾಡಿದ್ದಾರೆ. ಸದ್ಯ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಆ್ಯಡ್ ಮೇಕರ್ ಆಗಿರುವ ಅವರಿಗೆ ಅವರ ತಾಯಿಯಿಂದ ಈ ಕಲೆ ಒಲಿದಿದೆ. ಕರಣ್ ಅವರ ತಾಯಿ ಸಹ ಕಲಾವಿದೆ. ಸದ್ಯ ಅನಿಮೇಶನ್​​ನಲ್ಲಿ ಸಾಕಷ್ಟು ಚಿತ್ರಗಳನ್ನು ರಚಿಸಿರುವ ಇವರು ಮುಂದಿನ ದಿನಗಳಲ್ಲಿ ಡಿಎಫ್ಎಕ್ಸ್ ಕಲಿಯಲು ಉತ್ಸುಕರಾಗಿದ್ದಾರೆ. ಸದ್ಯಕ್ಕೆ ಟ್ರೆಂಡ್ ಆಗಿರುವ ಭಜರಂಗಿ ತರಹ ವಿವೇಕಾನಂದ, ನರಸಿಂಹ ಚಿತ್ರವನ್ನು ಮಾಡಿಕೊಡುವಂತೆ ಅವರಿಗೆ ಬೇಡಿಕೆ ಬಂದಿದೆ.

ಇದನ್ನು ಓದಿ:

1. ಕಾಳಧನಿಕರ ಮೇಲೆ ಮೋದಿ 'ಸರ್ಜಿಕಲ್ ಸ್ಟ್ರೈಕ್' : 500-1000 ರೂ. ನೋಟುಗಳ ಮುದ್ರಣ, ಚಲಾವಣೆ ಬಂದ್

2. ಕೊನೆಗೂ ಹಸನಾಯ್ತು ಗೋಲ್ಗಪ್ಪಾ ಮಾರುತ್ತಿದ್ದ ಒಲಿಂಪಿಯನ್ ಬದುಕು..!

3. "ಸ್ಮಾರ್ಟ್"​ ಆಗೋದಿಕ್ಕೆ ಇನ್ನೇನು ಬೇಕು..?- ಶರ್ಟ್​ನಲ್ಲೇ ಸಿಗುತ್ತೆ ಟೆಕ್ನಾಲಜಿಯ ಕಿಕ್​


Related Stories

Stories by YourStory Kannada