ಬಾಯಲ್ಲಿ ನೀರೂರಿಸುವ ದೋಸೆ- ಘಮಘಮ ಪರಿಮಳ ಬೀರುವ ಸಾಂಬಾರ್-ಇದು ಮನೆ ಬಿಟ್ಟು ಓಡಿ ಹೋದ ಜಯರಾಮ್ ಕಥೆ..!

ಟೀಮ್​ ವೈ.ಎಸ್​. ಕನ್ನಡ

ಬಾಯಲ್ಲಿ ನೀರೂರಿಸುವ ದೋಸೆ- ಘಮಘಮ ಪರಿಮಳ ಬೀರುವ ಸಾಂಬಾರ್-ಇದು ಮನೆ ಬಿಟ್ಟು ಓಡಿ ಹೋದ ಜಯರಾಮ್ ಕಥೆ..!

Sunday January 08, 2017,

3 min Read

ಅದೃಷ್ಟ ಹೇಗಿರುತ್ತದೆ ಮತ್ತು ಹೇಗೆ ಬರುತ್ತದೆ ಅನ್ನುವ ಬಗ್ಗೆ ಯಾರಿಗೂ ಅರಿವಿರುವುದಿಲ್ಲ. ಆದ್ರೆ ಒಂದು ಬಾರಿ ಅದೃಷ್ಟ ಕೈ ಹಿಡಿದ್ರೆ ಸಾಕು ಎಲ್ಲವೂ ಬೇಗನೆ ಬದಲಾಗಿಬಿಡುತ್ತದೆ. ಎಲ್ಲರಿಂದ ದೂರಕ್ಕೆ ತಳ್ಳಲ್ಪಟ್ಟವನು ಅದ್ಭುತ ವ್ಯಕ್ತಿಯಾಗಿ ಬೆಳೆಯಲು ದೊಡ್ಡ ಅವಕಾಶ ಸಿಗುತ್ತದೆ. ನಾವೀಗ ಹೇಳ ಹೊರಟಿರುವ ಕಥೆಯನ್ನು ಕೇಳಿದ್ರೆ ಒಂದು ಬಾರಿ ಹೀಗೂ ಆಗುತ್ತಾ ಅನ್ನುವ ಸಂಶಯ ಮೂಡುವುದು ಗ್ಯಾರೆಂಟಿ.

ಜಯರಾಮ್ ಬನಾನ್ ಇವತ್ತು ಎಲ್ಲರು ಮೆಚ್ಚಿಕೊಂಡಿರುವ ಉದ್ಯಮಿ. ಆದ್ರೆ ಚಿಕ್ಕವನಿದ್ದಾಗ ಚಿಕ್ಕಚಿಕ್ಕ ವಿಷಯಗಳಿಗಾಗಿ ಮನೆಯವರಿಂದಲೇ ಕಿರುಕುಳ ಎದುರಿಸಿದ್ದ ಹುಡುಗ. ಇವತ್ತು ಜಯರಾಮ್​ " ಸಾಗರ್ ರತ್ನ" ಅನ್ನುವ ಉದ್ಯಮವೊಂದರ ಮಾಲೀಕ. ಅಚ್ಚರಿ ಅಂದ್ರೆ ಜಯರಾಮ್ ಹುಟ್ಟುಹಾಕಿದ ಬ್ರಾಂಡ್ ಉತ್ತರಭಾರತದಲ್ಲಿ ಸುಮಾರು 30 ಬ್ರಾಂಚ್​ಗಳನ್ನು ಹೊಂದಿದೆ. ಅಷ್ಟೇ ಅಲ್ಲ ಉತ್ತರ ಅಮೆರಿಕಾ, ಕೆನಾಡಾ, ಬ್ಯಾಂಕಾಕ್ ಮತ್ತು ಸಿಂಗಪೂರಗಳಲ್ಲೂ ಜಯರಾಮ್ ಹುಟುಹಾಕಿದ "ಸಾಗರ್ ರತ್ನ"ದ ಶಾಖೆಗಳಿವೆ.

image


ಜಯರಾಂ ಹುಟ್ಟಿದ್ದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ. ಜಯರಾಮ್ ಜೀವನ ಕಥೆ ಖಡಾಖಂಡಿತವಾಗಿಯೂ ಸ್ಫೂರ್ತಿದಾಯಕ. ಇವತ್ತು ಜಯರಾಮ್ ತಯಾರಿಸುವ ದೋಸೆ, ಇಡ್ಲಿ, ಸಾಂಬಾರ್​ಗಳಿಗೆ ಉತ್ತರ ಭಾರತದಲ್ಲಿ ಸಾಕಷ್ಟು ಜನರು ಫಿದಾ ಆಗಿದ್ದಾರೆ. ಜಯರಾಮ್ ತನ್ನ ರುಚಿಯಿಂದಲೇ ರೋಟಿ, ಬಟರ್ ಚಿಕನ್​ಗಳನ್ನು ಇಷ್ಟಪಡುತ್ತಿದ್ದ ಜನರನ್ನು ತನ್ನ ದೋಸೆ, ಇಡ್ಲಿ ಸಾಂಬಾರ್​ಗಳತ್ತ ಮುಖಮಾಡಿದ್ದಾರೆ.

ಅಂದಹಾಗೇ, ಜಯರಾಮ್ ಅವರ ಬಾಲ್ಯ ಅಂದುಕೊಂಡ ಹಾಗೇ ಇರಲಿಲ್ಲ. ಸಣ್ಣ ವಯಸ್ಸಿನಲ್ಲಿ ಜಯರಾಮ್ ಹೆದರಿಕೆ, ಗೊಂದಲ, ಅಪ್ಪನ ಕೈಯಿಂದ ಯಾವಾಗ ಏಟು ಬೀಳುತ್ತೆ ಅನ್ನೋ ಭಯದಲ್ಲೇ ಕಾಲ ಕಳೆದಿದ್ದರು. ಜಯರಾಮ್ ತಂದೆ ಅದೆಷ್ಟೋ ಬಾರಿ ಶಿಕ್ಷೆಯಾಗಿ ಜಯರಾಮ್ ಕಣ್ಣಿಗೆ ಖಾರದ ಪುಡಿಯನ್ನು ಸಿಡಿಸಿದ್ದೂ ಉಂಟು. 13 ವರ್ಷವಾಗಿದ್ದಾಗ ಜಯರಾಮ್ ಶಾಲೆಯಲ್ಲಿ ಪಾಸ್ ಆಗದೆ ಶಿಕ್ಷಣ ಮುಂದುವರೆಸಲು ಆಗಲಿಲ್ಲ. ಶಾಲೆಯಲ್ಲಿ ಫೇಲ್ ಆಗಿದ್ದಕ್ಕೆ ಮನೆಯಲ್ಲಿ ಸಿಗಬಹುದಾದ ಶಿಕ್ಷೆಗಳಿಗೆ ಹೆದರಿ, ಮನೆಯಿಂದಲೇ ಸ್ವಲ್ಪ ಹಣದವನ್ನು ಕಳ್ಳತನ ಮಾಡಿ ಓಡಿ ಹೋಗಿದ್ದರು.

ಇದನ್ನು ಓದಿ: ನಾಟಿ ಫ್ಯಾಕ್ಟರಿಯ Naughty ಸ್ಟೋರಿ..!

ಜಯರಾಮ್ ಕಾರ್ಕಳದಿಂದ ಮುಂಬೈಗೆ ಬಸ್ ಹತ್ತಿದರು. ಅಲ್ಲಿ ಜಯರಾಮ್ ಊರಿನವರದ್ದೇ ಒಂದು ಚಿಕ್ಕ ಕ್ಯಾಂಟೀನ್​ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಮುಂಬೈ ಅನ್ನುವ ಮಹಾ ನಗರಿ ಹೇಗಿರುತ್ತದೆ ಅನ್ನುವ ಐಡಿಯಾ ಕೂಡ ಇಲ್ಲದ ಜಯರಾಮ್ ದೈರ್ಯವನ್ನು ಎಲ್ಲರೂ ಮೆಚ್ಚಲೇಬೇಕು. ಜಯರಾಮ್ ಕೊನೆಗೆ ಪಾನ್​ವೆಲ್​ನ ಕ್ಯಾಂಟೀನ್ ಒಂದರಲ್ಲಿ ಪಾತ್ರೆ ತೊಳೆಯುವ ಮೂಲಕ ಜೀವನ ಆರಂಭಿಸಿದರು. ಕಠಿಣ ಕೆಲಸ ಮಾಡಿದರೂ ಕ್ಯಾಂಟೀನ್ ಮಾಲೀಕ ಜಯರಾಮ್​ಗೆ ಚಪ್ಪಲಿಯಲ್ಲಿ ಹೊಡೆದ ದಿನಗಳಿಗೇನು ಕಡಿಮೆ ಇರಲಿಲ್ಲ.

“ಕಠಿಣ ದಿನಗಳು ನನ್ನನ್ನು ಮತ್ತಷ್ಟು ಹೆಚ್ಚು ಕೆಲಸ ಮಾಡುವಂತೆ ಮಾಡಿತು. ನಿಧಾನವಾಗಿ ನಾನು ಹೊಟೇಲ್​ನಲ್ಲಿ ವೇಟರ್ ಆಗಿ ಬೆಳದೆ. ನಂತರ ಮ್ಯಾನೇಜರ್ ಆದೆ. ಈ ಎಲ್ಲಾ ಅನುಭವಗಳು ನನ್ನಲ್ಲಿನ ಬದಲಾವಣೆಗೆ ಕಾರಣವಾಯಿತು. ನಾನು ಹೀಗೆ ಇರಬಾರದು ಅನ್ನೋದನ್ನ ನಿರ್ಧಾರ ಮಾಡಿಬಿಟ್ಟೆ”
- ಜಯರಾಂ ಉದ್ಯಮಿ

ಜಯರಾಂಗೆ ಸಂಕಷ್ಟಗಳು ಎದುರಾದರೂ, ಮುಂಬೈನಲ್ಲಿ ದಕ್ಷಿಣ ಭಾರತದ ಹೊಟೇಲ್ ಒಂದನ್ನು ಆರಂಭಿಸುವ ಕನಸು ಹುಟ್ಟಿತ್ತು. ಆದ್ರೆ ಮುಂಬೈನಲ್ಲಿ ಇಂತಹ ಶೈಲಿಯ ಸಾಕಷ್ಟು ಹೊಟೇಲ್​ಗಳಿರುವುದರಿಂದ ಮುಂಬೈನಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳದೆ, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರಯೋಗ ಆರಂಭಿಸಿದರು. ದೆಹಲಿಯಲ್ಲಿ ದೋಸೆಗಳು ಹೆಚ್ಚು ದುಬಾರಿ ಆಗಿತ್ತು. ಇದನ್ನು ಬದಲಿಸಲು ನಿರ್ಧಾರ ಮಾಡಿದ್ದು ಜಯರಾಮ್. ಅತ್ಯುತ್ತಮ ಬೆಲೆಗೆ ಉತ್ತಮ ಕ್ವಾಲಿಟಿ ದೋಸೆಗಳನ್ನು ನೀಡುವ ನಿರ್ಧಾರ ಮಾಡಿದರು.

ಜಯರಾಮ್ 1986ರಲ್ಲಿ ಮೊದಲ ಶಾಖೆಯನ್ನು ತೆರೆದರು. ಮೊದಲ ದಿನದ ವ್ಯಾಪಾರದಲ್ಲಿ 470 ರೂಪಾಯಿಗಳಿಸಿದ್ರು. ಗ್ರಾಹಕರ ತೃಪ್ತಿ ಜೊತೆಗೆ ಅತ್ಯುತ್ತಮ ಕ್ವಾಲಿಟಿ ಜಯರಾಂ ವ್ಯಾಪಾರದ ಗುಟ್ಟಾಗಿತ್ತು. ಗ್ರಾಹಕರನ್ನು ಸೆಳೆಯಲು ವಿವಿಧ ಮೆನುಗಳನ್ನು ತಯಾರಿಸಿದರು. ತನ್ನ ಅಂಗಡಿಗೆ “ಸಾಗರ್” ಅಂತ ನಾಮಕರಣ ಮಾಡಿದರು. ಆರಂಭದಲ್ಲಿ ಸಾಗರ್ ಅನ್ನುವ ಹೆಸರು ಜನರ ಬಾಯಲ್ಲಿ ಬರಲು ಸಾಕಷ್ಟು ಸಮಯ ಹಿಡಿಯಿತು.

4 ವರ್ಷಗಳ ಬಳಿಕ ಜಯರಾಮ್ "ಲೋಧಿ" ಅನ್ನುವ ಹೈ ಕ್ಲಾಸ್ ಹೊಟೇಲ್ ಅನ್ನು ಆರಂಭಿಸಿದ್ರು. ತನ್ನ ಹಳೆಯ ಹೊಟೇಲ್​ನಲ್ಲಿದ್ದ ಮೆನುವನ್ನೇ ಇಲ್ಲಿ ಬಳಸಿದ್ದರು. ಆದ್ರೆ ದರದಲ್ಲಿ ಶೇಕಡಾ 20ರಷ್ಟು ಹೆಚ್ಚಿತ್ತು. ಜಯರಾಮ್ ದೆಹಲಿಯಲ್ಲೇ ತನ್ನ ಸಾಂಬರ್ ಶ್ರೇಷ್ಟ ಅನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಜಯರಾಮ್ ದೆಹಲಿಯಲ್ಲೇ ಮತ್ತೊಂದು ಹೊಟೇಲ್ ಆರಂಭಿಸಿದ್ರು. ಅದಕ್ಕೆ “ ಸಾಗರ್ ರತ್ನ” ಎಂದು ಹೆಸರಿಟ್ಟರು. “ ಸಾಗರ್ ರತ್ನ” ಪ್ರಸಿದ್ಧಿ ಈಗ ಎಲ್ಲಾ ಕಡೆ ವ್ಯಾಪಿಸಿದೆ. ಜನ ಜಯರಾಮ್ ಹೊಟೇಲ್​ಗಳ ಮಾತಾಡುತ್ತಿದ್ದಾರೆ.

ಇವತ್ತಿಗೂ ಜಯರಾಮಮ್ ತನ್ನದು ಪವಿತ್ರ ಉದ್ಯಮವೆಂದೇ ಭಾವಿಸುತ್ತಾರೆ. ಹೀಗಾಗಿ ಅಲ್ಲಿ ಯಾವುದನ್ನೂ ಕೂಡ ಸೇವಿಸುತ್ತಿಲ್ಲ.

“ ಜನರ ಸೇವೆಗಾಗಿ ರೆಸ್ಟೋರೆಂಟ್​ಗಳನ್ನು ಆರಂಭಿಸಿದ್ದೇನೆ. ನಾನು ಪ್ರತಿದಿನ ಮನೆಗೆ ಹೋಗುವುದು ರಾತ್ರಿ 9 ಗಂಟೆಗೆ. ಮಧ್ಯರಾತ್ರಿಯಲ್ಲಿ ಮತ್ತೆ ಬರುತ್ತೇನೆ. ಎಲ್ಲಾ ಔಟ್​ಲೆಟ್​ಗಳಿಗೆ ತೆರಳಿ ಪರೀಕ್ಷೆ ನಡೆಸುತ್ತೇನೆ.”
- ಜಯರಾಂ, ಉದ್ಯಮಿ

ಜಯರಾಂ ತನ್ನ ಹೊಟೇಲ್​ಗಳಲ್ಲಿ ಶುಚಿತ್ವ ಮತ್ತು ಕ್ವಾಲಿಟಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ಜನರು ಟಿಫನ್​ನಂತಹ ಆಹಾರ ತಯಾರಿಸಿದ್ದಕ್ಕೆ ಟೀಕಿಸಿದ್ದೂ ಉಂಟು. ಆದ್ರೆ ಜಯರಾಮ್ ಅದರ ಬಗ್ಗೆ ಹೆಚ್ಚು ಗಮನ ಕೊಟ್ಟಿಲ್ಲ. ದೆಹಲಿಯಲ್ಲಿ ಜಯರಾಮ್ ಕರಾವಳಿ ಶೈಲಿಯ ಆಹಾರ ನೀಡಲು “ಸ್ವಾಗತ್” ಅನ್ನುವ ಹೊಟೇಲ್ ಅನ್ನು ಕೂಡ ಆರಂಭಿಸಿದ್ದಾರೆ.

ಜಯರಾಮ್ ಇವತ್ತು ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಜಯರಾಮ್ ಬದುಕಿನ ಕಥೆ ದೈರ್ಯ ಮತ್ತು ಶ್ರದ್ಧೆಯ ಜೊತೆಗೆ ಕಠಿಣ ಪರಿಶ್ರಮ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ಉತ್ತಮ ಉದಾಹರಣೆ. ಜಯರಾಮ್ ಸಾಧನೆ ಎಲ್ಲರಿಗೂ ಸ್ಪೂರ್ತಿದಾಯಕ. ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂತ ಅಂದುಕೊಂಡವರಿಗೆ ಜಯರಾಮ್ ರೋಲ್ ಮಾಡೆಲ್ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಕಲಿಯುವ ಹಠ, ಛಲ ಬಿಡಲಿಲ್ಲ- ಗಿನ್ನೆಸ್​ ದಾಖಲೆ ಬರೆದ ಕನ್ನಡ ನೃತ್ಯಗಾರ್ತಿ..!

2. ರೀಲ್​ನಲ್ಲೂ ಹೀರೋ... ರಿಯಲ್​ ಆಗಿಯೂ ಹೀರೋ

3. ಓದಿನ ಪ್ರತಿಫಲ ದಂತವೈದ್ಯೆ- ಮನಸ್ಸು ಮಾಡಿರುವುದು ಸಾಮಾಜಿಕ ಕೆಲಸಕ್ಕೆ..!