ಕಾರ್ಪೋರೇಟ್ ಕ್ರಿಕೆಟ್​​ನ ಯಶಸ್ವಿ ಸಾರಥಿ

ರವಿ

ಕಾರ್ಪೋರೇಟ್ ಕ್ರಿಕೆಟ್​​ನ ಯಶಸ್ವಿ ಸಾರಥಿ

Tuesday December 15, 2015,

5 min Read

ಯಾವುದೇ ಒಂದು ಕೆಲಸವನ್ನು ಶ್ರದ್ದೆಯಿಂದ ಮಾಡಿದ್ರೆ ಯಶಸ್ಸು ಖಂಡಿತ ಸಿಗುತ್ತೆ. ಆದರೆ ನಾವು ಯಾವುದೇ ಒಂದು ಕೆಲಸವನ್ನು ಉದ್ಯಮವಾಗಿ ಪರಿವರ್ತಿಸಲು ಸ್ವಲ್ಪ ತಾಳ್ಮೆಬೇಕು. ಜನರ ವಿಶ್ವಾಸ ಗೆದ್ದಂತೆ ನಾವು ಜನರ ಮನಸ್ಸಲ್ಲಿ ಉಳಿಯುತ್ತೇವೆ ಆಗಮಾತ್ರ ಯಶಸ್ಸು ಸಾಧ್ಯ.

image


ಅವರೆಂದಿಗೂ ಅಂದುಕೊಂಡಿರಲಿಲ್ಲ. ಅವರು ಕರ್ನಾಟಕ ಕಾರ್ಪೋರೇಟ್ ಕ್ರಿಕೆಟ್ ಲೀಗ್​ನ ಕಿಂಗ್ ಅಗಿ ಬೆಳೆಯುತ್ತಾರೆಂದು. ಹೌದು ಸುಮ್ಮನೆ ಜನರ ಮನರಂಜನೆಗಾಗಿ ಆರಂಭಿಸಿದ ಕ್ರಿಕೆಟ್ ಟೂರ್ನಿ ಇಂದು ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಲೀಗ್ ಆಗಿ ಪರಿವರ್ತನೆಯಾಗಿದೆ ಜೊತೆಗೆ ಹಲವು ದಾಖಲೆಗಳಿಗೂ ಈ ಟೂರ್ನಿ ಕಾರಣವಾಗಿದೆ. ಅಂದು ಸುಮ್ಮನೆ ಆರಂಭಿಸಿದ ಲೀಗ್ ಇಂದು ಎಸ್.ಕೆ ವೆಂಕಟೇಶ್ ಅವರ ಜೀವನವಾಗಿದೆ..

24/7 ಕ್ರಿಕೆಟ್ ಬಗ್ಗೆ ಯೋಚಿಸುವ ವ್ಯಕ್ತಿ ಎಸ್.ಕೆ ವೆಂಕಟೇಶ್. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಇವರು ‘ಟೈ ವೆಂಕಟೇಶ್’ ಎಂತಾನೇ ಖ್ಯಾತಿ. ಸದಾ ಕೋಟ್​​, ಟೈ ಹಾಕಿಕೊಂಡು ಮನೆಯಿಂದ ಹೊರ ಕಾಣುವ ವೆಂಕಟೇಶ್ ದೇಶದಲ್ಲಿ ಮೊದಲ ಟಿ20 ಕಾರ್ಪೋರೇಟ್ ಕ್ರಿಕೆಟ್ ಟೂರ್ನಿ ಆರಂಭಿಸಿದ ಮೊದಲಿಗ.

1997ರಲ್ಲಿ ಆಗತಾನೇ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಪೋರೇಟ್ ಕಂಪನಿಗಳು ಬರಲಾರಂಭಿಸಿದ್ದವು. ಆಗ ಇಲ್ಲಿನ ಜನರಿಗೆ ಕಾರ್ಪೋರೇಟ್ ಕಲ್ಚರ್ ಎಂದರೇನು ಎಂಬುದೇ ಗೊತ್ತಿರಲಿಲ್ಲ. "ಆಗ ಪೇಪರ್​​ನಲ್ಲಿ ನಾನು ಓದುತ್ತಾ ತಿಳಿಯಿತು. ಕಾರ್ಪೋರೇಟ್ ಉದ್ಯಮಿಗಳು ಸಖತ್ ಕಷ್ಟಪಡುತ್ತಾರೆ. ಹಾಗೇ ಲಕ್ಷ-ಲಕ್ಷದಲ್ಲಿ ಸಂಬಳ ತೆಗೆದುಕೊಳ್ಳುವ ಇವರು ಪಡುವ ಶ್ರಮ ಕೂಡ ಅಷ್ಟೇ ಇದೆಯೆಂದು. ಎಲ್ಲರಿಗೂ ಕಾರ್ಪೋರೇಟ್ ಕೆಲಸ ಎಂದರೆ ಆರಾಮದ ಕೆಲಸ ವಾರಕ್ಕೆ ಎರಡು ದಿನ ರಜೆಯನ್ನು ಎಂಜಾಯ್ ಮಾಡುವ ಕೆಲಸ ಎಂದುಕೊಳ್ಳುತ್ತಿದ್ರು. ಆದರೆ ಅವರಿಗೆ ವಾರದ ಆ ಎರಡು ದಿನ ಹೇಗೆ ಕಲಿಯಬೇಕು ಎಂಬುದರ ಬಗ್ಗೆ ಅರಿವಿರಲಿಲ್ಲ. ಅಂತಹ ಸಮಯದಲ್ಲಿ ಈ ಆಟಗಾರರಿಗೆ ಸ್ವಲ್ಪ ಮನರಂಜನೆ ನೀಡಬೇಕು. ಕ್ರಿಕೆಟ್ ಟೂರ್ನಿ ಆಯೋಜಿಸಿ ಅವರಿಗೆ. ಕ್ರಿಕೆಟ್​​ನಿಂದ ವೀಕೆಂಡ್ ಎಂಜಾಯ್ ಮಾಡುವಂತೆ ಏನಾದ್ರು ಮಾಡಬೇಕು ಎಂಬ ಕಾರಣಕ್ಕೆ ನಾನು ಕೋಲ್ಕತ್ತದಿಂದ ಬಂದಿದ್ದ ಅಲೋಕ್ ಬಿಶ್ವಾಸ್ ಮತ್ತು ಬ್ರಿಜೇಶ್ ಪಟೇಲ್ ಒಂದು ಪ್ಲಾನ್ ಮಾಡಿದ್ರು. ಅದರಲ್ಲಿ ನಾನು ಮುಖ್ಯ ಪಾತ್ರನಿರ್ವಹಿಸಿದೆ. ಹೇಗಾದ್ರು ಮಾಡಿ ಕಾರ್ಪೋರೇಟ್ ಕಂಪನಿ ಆಟಗಾರರನ್ನು ತಲುಪಬೇಕೆಂಬ ಕೆಲಸಕ್ಕೆ ಮುಂದಾದೆ ,ಆಗಲೇ ನನ್ನ ಮೊದಲ ಹೆಜ್ಜೆ ಇಟ್ಟಾಗಿತ್ತು".

image


ಹಲವು ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುವ ಟೆಕ್ಕಿಗಳು ಹಲವರು ಆಗಾಗ ಹಲವು ಕ್ಲಬ್​​ಗಳಲ್ಲಿ ಬಂದು ಪ್ರಾಕ್ಟೀಸ್ ಮಾಡುತ್ತಿದ್ರು. ಮತ್ತೊಂದಿಷ್ಟು ಜನರು ವಿದ್ಯಾರ್ಥಿಗಳಾಗಿದ್ದಾಗ ಲೇದರ್ ಕ್ರಿಕೆಟ್ ಆಡಿದವರಾಗಿದ್ರು. ಆದರೆ ಅವರಿಗೆ ಅಲ್ಲಿ ಅಂತಹ ಅವಕಾಶ ಇರಲಿಲ್ಲ. ಕಂಪನಿಯಲ್ಲಿ ಸಾವಿರಕ್ಕಿಂತ ಹೆಚ್ಚು ಉದ್ಯೋಗಿಗಳಿದ್ರು. ಕ್ರಿಕೆಟ್ ಆಡಲು ಆಗದಿರುವಂತಹ ಪರಿಸ್ಥಿತಿಯಿತ್ತು. ವಿಪ್ರೋ, ಇನ್ಫೋಸಿಸ್, ಐಬಿಎಮ್, ಮೈಕ್ರೋಸಾಫ್ಟ್, ಸಿಸ್ಕೋನಂತಹ ಹತ್ತು ಹಲವಾರು ಕಂಪನಿಗಳ ಟೆಕ್ಕಿಗಳು ಮತ್ತೆ ಕ್ರಿಕೆಟ್ ಆಡಬೇಕೆಂಬ ತುಡಿತ ವ್ಯಕ್ತಪಡಿಸುತ್ತಿದ್ರು. ಆದರೆ ಅವರಿಗೆ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಕಾರ್ಪೋರೇಟ್ ಕಂಪನಿಗಳಿಗಾಗಿ ಒಂದು ವ್ಯವವಸ್ಥಿತವಾದ ರೀತಿಯಲ್ಲಿ ಟೂರ್ನಿ ಆಯೋಜಿಸುವುದು ಕಷ್ಟದ ಕೆಲಸವಾಗಿತ್ತು. ಆದರೆ ಟೆಕ್ಕಿಗಳ ತುಡಿತವನ್ನು ಮನಗಂಡ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಇಂತಹ ಒಂದು ನಿರ್ಧಾರ ತೆಗೆದುಕೊಂಡು. ಎಸ್.ಕೆ ವೆಂಕಟೇಶ್ ಒಂದು ಟೂರ್ನಿ ಆಯೋಜಿಸುವ ಮಹತ್ತರ ಜವಾಬ್ದಾರಿ ನೀಡಿದ್ರು.

image


"ಒಂದು ಟೂರ್ನಿ ಆಯೋಜಿಸಬೇಕೆಂದ ಕೂಡಲೇ ನಿಜವಾದ ಸಮಸ್ಯೆ ಎದುರಾಯ್ತು. ಯಾವ ಮೈದಾನದಲ್ಲಿ ಆಡಿಸಬೇಕು..? ಯಾವಾಗ ಟೂರ್ನಿ ನಡೆಸಬೇಕು..? ಮತ್ತು ಅಂಪೈರ್ ಸಹ ಸಿಬ್ಬಂಧಿ ಯಾರಾಗಿರಬೇಕು. ಇಂತಹ ಒಂದು ಟೂರ್ನಿಗೆ ಪ್ರಾಯೋಜಕರನ್ನು ಹುಡುಕುವುದು ಒಂದು ಸಮಸ್ಯೆಯ ಕೆಲಸವಾಗಿತ್ತು. ಆಗ ವೆಂಕಟೇಶ್ ಅವರ ನೆರವಿಗೆ ಬಂದವರು ಕಿಂಗ್​ಫಿಶರ್. ಟೂರ್ನಿಯ ಭಾಗಶಃ ಪ್ರಾಯೋಜಕತ್ವ ವಹಿಸಿಕೊಂಡ್ರು. ಉಳಿದ ಸಣ್ಣಪುಟ್ಟ ಖರ್ಚುಗಳು ಮತ್ತು ಅಂಪೈರ್ ಗ್ರೌಂಡ್ಸ್​ಮನ್​​ಗಳ ಖರ್ಚು ನೋಡಿಕೊಳ್ಳಲು ನಾನು ಸಂಗ್ರಹಿಸಿದ ಪ್ರವೇಶ ಶುಲ್ಕವೇ ಸರಿಯಾಗಿ ಹೋಯ್ತು. ಮೊದಲಿಗೆ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡಿಸಲು ನಿರ್ಧರಿಸಿದ್ದೆವು. ಪ್ರತೀ ಶನಿವಾರ-ಭಾನುವಾರ ಕ್ರಿಕೆಟ್ ಆಡಿಸಲು ನಿರ್ಧರಿಸಲಾಯ್ತು. ಆಗ ಲ್ಯಾಂಡ್​​ಲೈನ್ ಮತ್ತು ಪೇಜರ್​​ಗಳಲ್ಲಿ ಸಂದೇಶ ಕಲಿಸುವ ಮೂಲಕ ಎಲ್ಲ ತಂಡದ ನಾಯಕರನ್ನು ಸಂಪರ್ಕಿಸಲಾಗುತ್ತಿತ್ತು. ಎಲ್ಲ ತಂಡದ ನಾಯಕರುಗಳನ್ನು ಒಂದೆಡೆ ಕರೆದು ಅವರಿಗೆ ವೇಳಾಪಟ್ಟಿಯನ್ನು ತಿಳಿಸಲಾಯ್ತು. ಆಯಾ ತಂಡಗಳ ಅನುಕೂಲಕ್ಕೆ ತಕ್ಕಂತೆ ಪಂದ್ಯಗಳನ್ನು ಹಿಂದೆ ಮುಂದೆ ಮಾಡಿ ಚಳಿಗಾಲದಲ್ಲಿ. ಟಿ20 ಮಾದರಿಯಲ್ಲಿ ಆಡಿಸುವ ನಿರ್ಧಾರವನ್ನು ನಾವು ತೆಗೆದುಕೊಂಡೆವು".

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿಷ್ಠಿತ ಅಂಪೈರ್​​ಗಳು ಮತ್ತು ಸ್ಕೋರರ್​​ಗಳು ಹಾಗೂ ಪಿಚ್ ಕ್ಯೂರೇಟರ್​​ಗಳನ್ನು ಈ ಟೂರ್ನಿಯಲ್ಲಿ ಬಳಸಲಾಯ್ತು. ಮೊದಲ ವರ್ಷ ಟೂರ್ನಿ ಯಶಸ್ವಿಯಾಯ್ತು. ಟೂರ್ನಿಯ ರೂಪುರೇಷೆ ರೂಪಿಸಿದ್ದು, ಮಾಜಿ ಕ್ರಿಕೆಟಿಗ ಬ್ರೀಜೇಶ್ ಪಟೇಲ್, ಇವೆಂಟ್ ಮ್ಯಾನೇಜ್​ಮೆಂಟ್ ಕಂಪನಿಯ ಮುಖ್ಯಸ್ಥ ಅಲೋಕ್ ಬಿಶ್ವಾಸ್. ಆದರೆ. ಎಲ್ಲರೊಂದಿಗೆ ಸಂಪರ್ಕ ಸಾಧಿಸಿ. ಎಲ್ಲ ವ್ಯವಸ್ಥೆ ಕಲ್ಪಿಸಿದ್ದು, ಟೂರ್ನಿ ಆಯೋಜಿಸಿದ ಕೀರ್ತಿ ವೆಂಕಟೇಶ್​ಗೆ ಸಲ್ಲುತ್ತದೆ.

ಮೊದಲ ವರ್ಷದ ಯಶಸ್ಸಿನ ನಂತರ ಎಲ್ಲ ಕಾರ್ಪೋರೇಟ್ ಕಂಪನಿಗಳು ಎರಡನೇ ವರ್ಷ ಟೂರ್ನಿ ನಡೆಸುವಂತೆ ವೆಂಕಟೇಶ್ ಅವರ ಮೇಲೆ ಒತ್ತಡ ಹೇರಲು ಆರಂಭಿಸಿದ್ರು. ಆದರೆ ಬ್ರಿಜೇಶ್ ಪಟೇಲ್ ತಮ್ಮ ಹೆಚ್ಚಿನ ಕೆಲಸದಿಂದಾಗಿ ಇತ್ತ ಹೆಚ್ಚು ಗಮನ ಹರಿಸಲಿಲ್ಲ. ಮೊದಲ ಟೂರ್ನಿ ಮಾಡಿದ ಅನುಭವವಿದ್ದ ವೆಂಕಟೇಶ್ ತಾವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಟೂರ್ನಿ ಆಯೋಜಿಸಿದ್ರು. ಎರಡನೇ ಆವೃತ್ತಿಯು ಸಂಪೂರ್ಣ ಯಶಸ್ವಿಯಾಯ್ತು.

ಆನಂತರ ಟೂರ್ನಿ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಕೊಳ್ತ ಸಾಗಿತು. 20-30 ತಂಡಗಳಿಂದ 50 ತಂಡಗಳು ಭಾಗವಹಿಸಲು ಮುಂದಾದವು. ಜೊತೆಗೆ ಟೂರ್ನಿ 2-3 ತಿಂಗಳುಗಳ ಕಾಲ ನಡೆಯುವಂತಾಯ್ತು. ಆಗಾಗ ಆಟಗಾರರಿಗೆ ದೇಶದ ಪ್ರತಿಷ್ಠಿತ ಕ್ರಿಕೆಟಿಗರನ್ನು ಬೇಟಿ ಮಾಡಿಸುವಂತಹ ಪ್ರಯತ್ನ ಮಾಡಲಾಯ್ತು. ಟೂರ್ನಿ ಉದ್ಘಾಟನೆಗೆ ಮತ್ತು ಟ್ರೋಫಿ ನೀಡುವ ವೇಳೆ ದೇಶದ ಪ್ರತಿಷ್ಠಿತ ಕ್ರಿಕೆಟರ್​​ಗಳಿಂದ ಕೊಡಿಸುವಂತಹ ಕೆಲಸ ಕೂಡ ಇಲ್ಲಿ ನಡೆಯಿತು.

"ಈ ಕಾರ್ಪೋರೇಟ್ ಕ್ರಿಕೆಟ್ ಟೂರ್ನಿಯಿಂದ ಕೇವಲ ನಾವುಗಳು ಮಾತ್ರ ಬದುಕು ಕಟ್ಟಿಕೊಳ್ಳಲಿಲ್ಲ. ಅನೇಕ ಕ್ರಿಕೆಟ್ ಕ್ಲಬ್​​ಗಳು ಇದರ ಲಾಭ ಪಡೆದವು. ವರ್ಷಪೂರ್ತಿ ಕಾರ್ಪೋರೇಟ್ ಕಂಪನಿಗಳ ಆಟಗಾರರಿಗೆ ಅಭ್ಯಾಸ ನಡೆಸಲು ಅವರು ಹೇಳಿದ ಸ್ಥಳದಲ್ಲೇ ಅವರಿಗೆ ತಿಂಗಳಿಗೆ ಇಂತಿಷ್ಟು ಹಣ ಪಡೆದು, ನೆಟ್​ಪ್ರಾಕ್ಟೀಸ್ ನಡೆಸಲು ಅನುಮತಿ ನೀಡಲಾಯ್ತು. ಇದರಿಂದ ಅದೆಷ್ಟೋ ಕ್ಲಬ್​​ಗಳು ಲಾಭದಲ್ಲಿ ನಡೆಯುತ್ತಿವೆ. ಜೊತೆಗೆ ಮೂರು ತಿಂಗಳುಗಳ ಕಾಲ, ವಿಕೇಂಡ್​ನಲ್ಲಿ ಮೂರು ಮೈದಾನದಲ್ಲಿ ಕ್ರಿಕೆಟ್ ನಡೆಯುವುದರಿಂದ ಅನೇಕ ಅಂಪೈರ್​​ಗಳು ಮತ್ತು ಸ್ಕೋರರ್ ಮತ್ತು ಗ್ರೌಂಡ್​ಮೆನ್ಸ್​​ಗಳಿಗೆ ಉದ್ಯೋಗ ದೊರೆತಿದೆ. ಇಷ್ಟೇ ಅಲ್ಲ ವರ್ಷಪೂರ್ತಿ ಅನೇಕ ಕಾರ್ಪೋರೇಟ್ ಕಂಪನಿಗಳಿಗೆ ಕ್ರಿಕಟ್ ಟೂರ್ನಿ ನಡೆಸಲು ಸಹಾಯ ಮಾಡಿದ್ದೇನೆ. ಟೂರ್ನಿ ಆಯೋಜನೆಗೆ ನಾನೇ ಮುಂದಾಗಿ ನಿಂತು. ಎಲ್ಲವನ್ನು ಸುಗಮವಾಗಿ ಆಯೋಜಿಸಿಕೊಟ್ಟಿದ್ದೇನೆ. ಇದುವರೆಗೂ ಒಂದು ಸಾವಿರಕ್ಕಿಂತ ಹೆಚ್ಚು ಕ್ರಿಕೆಟ್ ಟೂರ್ನಿ ಆಯೋಜಿಸಿದ ಅನುಭವ ನನಗಿದೆ ಎಂತಾರೆ" ವೆಂಕಟೇಶ್.

ದೇಶದ ಮೊದಲ ಕಾರ್ಪೋರೇಟ್ ಕ್ರಿಕೆಟ್ ಟೂರ್ನಿ ಸ್ಟಾರ್ ಕಿಂಗ್​ಫಿಶರ್ ಟಿ20 ಟೂರ್ನಿ. ಕಳೆದ 18 ವರ್ಷದಿಂದ ಹಲವು ಕಾರ್ಪೋರೇಟ್ ಕಂಪನಿಗಳಿಗೆ ವೇದಿಕೆ ಒದಗಿಸಿರುವ ಈ ಟೂರ್ನಿ, ಹಲವು ಪ್ರತಿಭೆಗಳಿಗೆ ಪ್ರಮುಖ ವೇದಿಕೆಯಾಗಿದೆ. ಸ್ಟಾರ್ ಕಿಂಗಫಿಶರ್ ಟಿ20 ಟೂರ್ನಿ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದ ಪ್ರತಿಷ್ಠಿತ ಟೂರ್ನಿ ಇದಾಗಿದ್ದು, ಹಲವು ಪ್ರತಿಭೆಗಳು ಇದರಿಂದ ಹೊರಬಂದಿವೆ. ಕೆಪಿಎಲ್​​ನಲ್ಲಿ ಆಡುತ್ತಿರುವ ಅನೇಕ ಪ್ರತಿಭೆಗಳು ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿರುವ ಅನೇಕ ಕ್ರಿಕೆಟಿಗರು ಇಲ್ಲಿ ಮಿಂಚಿ ಅಲ್ಲಿ ಹೋಗಿರುವುದು ಮತ್ತೊಂದು ವಿಶೇಷ.

ವೆಂಕಟೇಶ್ ಕೀರ್ತಿ ಎಲ್ಲಿಯವರೆಗೆ ಹಬ್ಬಿದೆಯೆಂದರೆ, ಇಲ್ಲಿ ಕ್ರಿಕೆಟ್ ಆಡಿರುವ ಅನೇಕ ಟೆಕ್ಕಿಗಳು, ವಿದೇಶಗಳಲ್ಲಿ ನೆಲಸಿದ್ದಾರೆ. ಅಲ್ಲಿ ನಡೆಯುವ ಟೂರ್ನಿಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ಈ ಎಲ್ಲಾ ಯಶಸ್ಸಿಗೆ ವೆಂಕಟೇಶ್ ಕಾರಣವೆಂದು ಅವರು ಹೇಳುತ್ತಾರೆ. ಇಂತಹವೊಂದು ಅದ್ಭುತ ಸಾಧನೆ ಮಾಡಿದ ಇವರಿಗೆ ಟೀಮ್ ಇಂಡಿಯಾದ ಹಾಲಿ ಮಾಜಿ ಆಟಗಾರರಿಂದ ಹಿಡಿದು ಅನೇಕ ವಿದೇಶಿ ಕ್ರಿಕೆಟಿಗರು, ವೆಂಕಟೇಶ್ ಅವರ ಕೆಲಸಕ್ಕೆ ಬೆನ್ನು ತಟ್ಟಿದ್ದಾರೆ.

image


ಸದ್ಯ ವೆಂಕಟೇಶ್ ಯಾವ ಮಟ್ಟಿಗೆ ಬೆಳೆದಿದ್ದಾರೆಯೆಂದರೆ ತಾವು ಸಂಪಾದಿಸಿರುವ ಸಾವಿರಾರು ಕಾರ್ಪೋರೇಟ್ ಗೆಳೆಯರ ಸಹಾಯದಿಂದ ಅನೇಕರಿಗೆ ಉದ್ಯೋಗವನ್ನು ಕೊಡಿಸಿದ್ದಾರೆ. ಯಾವುದೇ ‘ಬಿಇ’, ಪದವಿ ವ್ಯಾಸಾಂಗ ಮಾಡಿದವರು ಕೆಲಸಬೇಕು ಎಂದರೆ ಥಟ್ ಅಂತ ಕೆಲಸ ಕೊಡಿಸುವಷ್ಟು ಮಟ್ಟಿಗೆ ವೆಂಕಟೇಶ್ ಬೆಳೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಎಲ್ಲಾ ಕಾರ್ಪೋರೇಟ್ ಕಂಪನಿಗಳು ಇವರ ಸಂಪರ್ಕದಲ್ಲಿವೆ. ಹಾಗಾಗಿ ಎಲ್ಲಾದ್ರೂ ಒಂದು ಕಡೆ ಕೆಲಸಕ್ಕೆ ಸೇರಿಸುವಷ್ಟರ ಮಟ್ಟಿಗೆ ಇವರು ಬೆಳೆದಿದ್ದಾರೆ. ಉಚಿತವಾಗಿ ಎಲ್ಲರಿಗೂ ಕೆಲಸ ಕೊಡಿಸುವಂತಹ ಕಾರ್ಯ ಅವರು ಮಾಡುತ್ತಿದ್ದಾರೆ..

"ಬೆಂಗಳೂರಿನಲ್ಲಿ ಕಾರ್ಪೋರೇಟ್ ವಲಯ ಚೆನ್ನಾಗಿ ಬೆಳೆದಿದೆ. ದೇಶದ ಬೇರೆ ಯಾವ ರಾಜ್ಯಗಳಿಗೆ ಹೋಲಿಸಿದ್ರೂ ಬೆಂಗಳೂರು ಕಾರ್ಪೋರೇಟ್ ಕಂಪನಿಗಳ ಸ್ವರ್ಗ. ಹಾಗಾಗಿ ಇಲ್ಲಿ ಏನ್ ಮಾಡಿದ್ರು ಹಣ ಸಂಪಾದಿಸಬಹುದು. ಆದರೆ ಅದು ವ್ಯವಸ್ಥಿವಾಗಿ ಕಾರ್ಪೋರೇಟ್ ವಲಯವನ್ನು ಸೆಳೆಯುವಂತಿರಬೇಕು. ಕ್ರಿಕೆಟ್ ಮಾತ್ರವಲ್ಲ, ಬೇರೆ ಕ್ರೀಡೆಗಳನ್ನು ಕಾರ್ಪೋರೇಟ್ ಉದ್ಯಮಿಗಳನ್ನು ಸೆಳೆಯುವಂತೆ ಆಯೋಜಿಸಿದ್ರೆ ನಾವು ಬದುಕಬಹುದು, ಇದರಿಂದ ಹಲವರಿಗೆ ಉದ್ಯೋಗ ಒದಗಿಸಬಹುದು. ಇದೊಂದು ಉದ್ಯಮವಾಗಿ ಮಾಡಿಕೊಂಡರೆ, ಟೆಕ್ಕಿಗಳಿಗೆ ವಿಕೇಂಡ್ ಮಜಾ ನೀಡುವುದರ ಜೊತೆಗೆ ಸ್ವಲ್ಪ ಹಣ ಕೂಡ ಗಳಿಸಬಹುದು. ನಿಮ್ಮ ಟೂರ್ನಿ ಚೆನ್ನಾಗಿ ನಡೆದಲ್ಲಿ ಹಲವು ಜಾಹೀರಾತುದಾರರು, ತಾವಾಗೇ ನಿಮ್ಮನ್ನು ಹುಡುಕಿಕೊಂಡು ಬರ್ತಾರೆ. ಆದರೆ ಹಣವೊಂದನ್ನೇ ಮನಸ್ಸಿನಲ್ಲಿಟ್ಟುಕೊಂಡು ಮಾಡುವುದು ಬಿಟ್ಟು. ಉತ್ತಮ ಸೇವೆ ಒದಗಿಸಿದಲ್ಲಿ ಹಣ ನಿಮ್ಮನೇ ಹುಡುಕಿಕೊಂಡು ಬರಲಿದೆ ಅಂತಾ ಮಾತು ಮುಗಿಸುತ್ತಾರೆ ಎಸ್.ಕೆ ವೆಂಕಟೇಶ್.