ಬಡ ಮಕ್ಕಳಿಗಾಗಿ ಸುದೀಕ್ಷಾ...

ಟೀಮ್​ ವೈ.ಎಸ್​​.ಕನ್ನಡ

0

ಹೈದರಾಬಾದ್ ಮೂಲದ ಸುದೀಕ್ಷಾ ನಾಲೆಜ್ ಸಲ್ಯೂಷನ್ಸ್, ಒಂದು ಸಾಮಾಜಿಕ ಸಂಸ್ಥೆಯಾಗಿದ್ದು, ಶಿಕ್ಷಣ ವಲಯದಲ್ಲಿ ಕೆಲಸ ಮಾಡುತ್ತಿದೆ. 2012ರ ಜೂನ್‍ನಲ್ಲಿ ಸುದೀಕ್ಷಾ ಪ್ರಾರಂಭವಾಯ್ತು. ಇದಕ್ಕೆ ಎನ್ನೊವೆಂಟ್ ಇಂಪ್ಯಾಕ್ಟ್ ಇನ್ವೆಸ್ಟ್​​​ಮೆಂಟ್ ಹೋಲ್ಡಿಂಗ್, ಓಪಸ್ ಇಂಪ್ಯಾಕ್ಟ್ ಫಂಡ್ ಹಾಗೂ ಸಧೀಶ್ ರಾಘವನ್ ಅವರು ಬಂಡವಾಳ ಹೂಡಿದ್ದಾರೆ. ಮೊದಲ ಹಂತದ ಹೂಡಿಕೆಯಲ್ಲಿ ಪಿಯರ್ಸನ್ ಅಫರ್ಡಬಲ್ ಲರ್ನಿಂಗ್ ಫಂಡ್, ಫಸ್ಟ್ ಲೈಟ್ ವೆಂಚರ್ಸ್, ಇಲೋಸ್ ಫೌಂಡೇಷನ್ ಮತ್ತು ವಿಲೇಜ್ ಕ್ಯಾಪಿಟಲ್ ಪಾಲ್ಗೊಂಡಿದ್ದವು.

ಕಡಿಮೆ ಆದಾಯ ಗಳಿಸುವ ಜನರೇ ಹೆಚ್ಚಿರುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳಿಗೆ, ಕಡಿಮೆ ವೆಚ್ಚದ ಶಿಶುವಿಹಾರ ಕೇಂದ್ರಗಳ ಮೂಲಕ ಉತ್ತಮ ಗುಣಮಟ್ಟದ ಆರಂಭಿಕ ಬಾಲ್ಯ ಶಿಕ್ಷಣ ನೀಡುವ ಉದ್ದೇಶದೊಂದಿಗೆ, ಹೈದರಾಬಾದ್ ಮೂಲದ ನವೀನ್ ಕುಮಾರ್ ಮತ್ತು ನಿಮಿಷಾ ಮಿತ್ತಲ್ 2011ರಲ್ಲಿ ಸುದೀಕ್ಷಾ ನಾಲೆಜ್ ಸಿಸ್ಟಮ್ಸ್ ಪ್ರಾರಂಭಿಸಿದರು. ಒಂದು ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಒಬ್ಬರೇ ಶಿಕ್ಷಕರು ಗುರಿಯೊಂದಿಗೆ 2011ರಲ್ಲಿಯೇ ಮೊದಲ ಶಾಲೆ ಪ್ರಾರಂಭಿಸಲಾಯ್ತು. ಈಗ ಸುದೀಕ್ಷಾ ಒಟ್ಟು 21 ಶಿಶುವಿಹಾರ ಕೇಂದ್ರ ಅಥವಾ ಪೂರ್ವ ಶಾಲಾ ಕೇಂದ್ರಗಳನ್ನು ನಡೆಸುತ್ತಿದ್ದು, ಅವುಗಳ ಉಸ್ತುವಾರಿಯನ್ನು ಸ್ಥಳೀಯ ಮಹಿಳಾ ಉದ್ಯಮಿಗಳು ನೋಡಿಕೊಳ್ಳುತ್ತಿದ್ದಾರೆ.

ಇದೇ ಬಂಡವಾಳದೊಂದಿಗೆ ಯೋಜನಾ ಕಾರ್ಯಗಳನ್ನು ಸಿದ್ಧಪಡಿಸಿ, ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಶಿಶುಪಾಲನಾ ಕೇಂದ್ರಗಳು ಹಾಗೂ ಶಾಲಾ ಪೂರ್ವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಆಲೋಚನೆ ಸುದೀಕ್ಷಾ ತಂಡದ್ದು. ಅದರ ಜೊತೆಗೆ ಆಡಳಿತ ಮಂಡಳಿಯಲ್ಲಿ ನುರಿತ ಹಿರಿಯ ಸದಸ್ಯರನ್ನು ಸೇರಿಸಿಕೊಂಡು ಅವರ ಅನುಭವವನ್ನೂ ಬಳಸಿಕೊಳ್ಳುವ ಐಡಿಯಾ ಕೂಡ ಇದೆ. ‘ಹೊಸ ಬಂಡವಾಳ ಹೂಡಿಕೆಯಿಂದ ಈಗಾಗಲೇ ಸುದೀಕ್ಷಾ ಅಸ್ತಿತ್ವದಲ್ಲಿರುವ ಕಾರ್ಯಾಚರಣೆಗಳನ್ನು ಸ್ಥಿರಗೊಳಿಸುವಲ್ಲಿ ಸಹಾಯ ಮಾಡಲಿದೆ. ಜೊತೆಗೆ ಬೇರೆ ಬೇರೆ ಮೂಲಗಳಿಂದ ಹೆಚ್ಚಿನ ಆದಾಯ ಗಳಿಸಲು, ಪ್ರಭಾವ ಬೀರುವಲ್ಲಿಯೂ ಸಹಕಾರಿಯಾಗಲಿದೆ. ಇನ್ನೊವೆಂಟ್ ಸರ್ಕಲ್‍ನವರು ಎರಡನೇ ಸುತ್ತಿನ ಬಂಡವಾಳ ಹೂಡಿಕೆ ಮಾಡಲು ಮುಂದಾಗಿರುವುದು ನಮ್ಮಲ್ಲಿ ಸಂತಸ ಮೂಡಿಸಿದೆ. ಈ ಮೂಲಕ ಕಡಿಮೆ ಆದಾಯದ ಸಮುದಾಯಗಳಲ್ಲಿನ ಮಕ್ಕಳ ಜೀವನವನ್ನು ಉತ್ತಮಗೊಳಿಸುವ ಆಶಾಭಾವ ನಮ್ಮದು.’ ಅಂತಾರೆ ನವೀನ್.

2011ರ ಜನಗಣತಿಯಲ್ಲಿ ದೊರೆತ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 3 ರಿಂದ 6 ವರ್ಷಗಳ ನಡುವಿನ, ಸರಿಸುಮಾರು 9 ಕೋಟಿ 90 ಲಕ್ಷ ಮಕ್ಕಳಿದ್ದಾರೆ. ಅವರಲ್ಲಿ ಸುಮಾರು 3.50 ಕೋಟಿ ಮಕ್ಕಳು ಸರ್ಕಾರದ ಅಂಗನವಾಡಿಗಳಿಗೆ ಹೋಗುತ್ತಾರೆ. ಆದ್ರೆ ಸರಿಯಾಗಿ ಮೂಲ ಸೌಕರ್ಯಗಳಿಲ್ಲದ ಕಾರಣ ಹಾಗೂ ಮಕ್ಕಳನ್ನು ನೋಡಿಕೊಳ್ಳಲು ಸಿಬ್ಬಂದಿಯಿಲ್ಲದ ಕಾರಣ, ಕೇವಲ ಶೇಕಡಾ 31%ರಷ್ಟು ಮಕ್ಕಳಷ್ಟೇ ನಿಯಮಿತವಾಗಿ ಸರ್ಕಾರದ ಅಂಗನವಾಡಿಗಳಿಗೆ ಹೋಗ್ತಾರೆ. ಮತ್ತೊಂದೆಡೆ ಖಾಸಗೀ ಶಿಶುಪಾಲನಾ ಕೇಂದ್ರಗಳಿಗೆ ವಾರ್ಷಿಕವಾಗಿ 24 ಸಾವಿರದಿಂದ 1.50 ಲಕ್ಷ ರೂಪಾಯಿವರೆಗೂ ದುಬಾರಿ ಶುಲ್ಕ ತೆರಬೇಕು. ಹೀಗಾಗಿಯೇ ಬಡ ಹಾಗೂ ಕೆಳ ಮಧ್ಯಮ ವರ್ಗದ ಜನರಿಗೆ ತಮ್ಮ ಮಕ್ಕಳನ್ನು ಅಂತಹ ಶಿಶುವಿಹಾರ ಕೇಂದ್ರಗಳಿಗೆ ಕಳುಹಿಸುವುದು ಅಸಾಧ್ಯವಾಗಿದೆ.

ಇನ್ನೊವೆಂಟ್‍ನ ಇಂಪ್ಯಾಕ್ಟ್ ಇನ್ವೆಸ್ಟ್​​​​ಮೆಂಟ್ ಹೋಲ್ಡಿಂಗ್ ಇದುವರೆಗೆ ಮಾಡಿರುವ ಬಂಡವಾಳ ಹೂಡಿಕೆಗಳಲ್ಲಿ, ಸುದೀಕ್ಷಾ ಮೂರನೆಯದು. ಹೂಡಿಕೆ ಕುರಿತು ಮಾತನಾಡುವ ಇನ್ನೊವೆಂಟ್‍ನ ಹಣಕಾಸು ವಿಭಾಗದ ನಿರ್ದೇಶಕ ಸೌರಭ್ ಲಹೋಟಿ, ‘ಮಾಸಿಕ 20 ಸಾವಿರ ರೂಪಾಯಿ ವರಮಾನ ಗಳಿಸುವ ನಗರದ ಕುಟುಂಬಗಳಿಂದ ಬರುವ ಮಕ್ಕಳಿಗೆ ಸುದೀಕ್ಷಾ ಉತ್ತಮ ಗುಣಮಟ್ಟದ ಚಟುವಟಿಕೆ ಆಧಾರಿತ ಶಿಕ್ಷಣ ಒದಗಿಸುತ್ತದೆ. ಈ ಸೌಲಭ್ಯ ಆ ಕುಟುಂಬಗಳ ಕೈಗೆಟುಕುವ ಬೆಲೆಯಲ್ಲೇ ಲಭ್ಯ ಅನ್ನೋದು ವಿಶೇಷ. ಈಗ ಫ್ರಾಂಚೈಸಿಗಳ ಮೂಲಕ ದೇಶದ ಬೇರೆ ಬೇರೆ ನಗರಗಳಿಗೂ ಶಿಶುಕೇಂದ್ರಗಳನ್ನು ವಿಸ್ತರಿಸುವ ಯೋಜನೆಯಿದೆ. ಆ ಮೂಲಕ ಮಕ್ಕಳಿಗೆ ಒಳ್ಳೆಯ ಬಾಲ್ಯ ಶಿಕ್ಷಣ ನೀಡುವ ಮೂಲಕ ಪೋಷಕರ ಜವಾಬ್ದಾರಿ ಕಡಿಮೆ ಮಾಡುವ ಹಾಗೂ ಕಡಿಮೆ ಆದಾಯವಿರುವ ಸಮುದಾಯಗಳಲ್ಲಿನ ಮಹಿಳೆಯರಿಗೆ ಈ ಉದ್ಯಮದ ಭಾಗವಾಗುವ ಅವಕಾಶ ನೀಡುತ್ತೇವೆ’ ಅಂತ ಮುಂದಿನ ಕಾರ್ಯ ಯೋಜನೆಗಳ ಕುರಿತು ಮಾಹಿತಿ ನೀಡ್ತಾರೆ.

ಸುದೀಕ್ಷಾದಲ್ಲಿ ಮಕ್ಕಳಿಗೆ ದೊರೆಯುವ ಶಿಕ್ಷಣದ ಗುಣಮಟ್ಟದ ಕುರಿತು ಪೋಷಕರೂ ಸಂತಸಗೊಂಡಿದ್ದಾರೆ. ದಿನಗೂಲಿ ನೌಕರ ನರಸಿಂಹಲು, ತಮ್ಮ ಪುತ್ರ ಮಲ್ಲೇಶ್‍ಅವರನ್ನು ನಾಚಾರಾಮ್‍ನ ಸುದೀಕ್ಷಾ ಶಿಶುಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ. ‘ನಾನು ಕೇವಲ 8ನೇ ತರಗತಿವರೆಗೆ ಓದಿರುವ ಕಾರಣ ನನಗೆ ಶಿಕ್ಷಣದ ಮಹತ್ವ ಗೊತ್ತು. ನನ್ನ ಮಕ್ಕಳೂ ನನ್ನಂತೆ ಶಿಕ್ಷಣವಿಲ್ಲದೇ ಕಷ್ಟ ಅನುಭವಿಸುವುದು ನನಗಿಷ್ಟವಿಲ್ಲ. ಹಾಗೇ ಸುದೀಕ್ಷಾ ಶಿಶುಕೇಂದ್ರ ನನ್ನ ಮನೆಗೂ ಹತ್ತಿರವಿದ್ದು, ಕಡಿಮೆ ಶುಲ್ಕ ಪಾವತಿ ಮಾಡಬೇಕು. ಆ ಶುಲ್ಕವನ್ನೂ ಕಂತುಗಳಲ್ಲಿ ಕಟ್ಟುವ ವ್ಯವಸ್ಥೆಯಿದೆ. ಅಲ್ಲದೇ ನನ್ನ ಮಗ ಈಗ ಇಂಗ್ಲೀಷ್‍ನಲ್ಲಿ ಮಾತನಾಡುವುದನ್ನು ಕಲಿಯುತ್ತಿದ್ದಾನೆ. ತನ್ನ ಶಾಲೆ ಮತ್ತು ಶಿಕ್ಷಕರನ್ನು ಪ್ರೀತಿಸ್ತಾನೆ. ಇದು ನನಗೂ ಖುಷಿ ನೀಡಿದೆ’ ಅಂತ ಸಂತಸ ವ್ಯಕ್ತಪಡಿಸುತ್ತಾರೆ ನರಸಿಂಹಲು.

ಲೇಖಕರು: ಕೃತಿ ಪೂನಿಯಾ
ಅನುವಾದಕರು: ವಿಶಾಂತ್​​​

Related Stories