ಸೂರ್ಯನ ಪಥವನ್ನು ಹಿಂಬಾಲಿಸುವ ಸೌರಮನೆಗಳ ಟ್ರೆಂಡ್..!

ವಿಶ್ವಾಸ್​​ ಭಾರಾಧ್ವಾಜ್​​

0

ಸೂರ್ಯನನ್ನು ಹಿಂಭಾಲಿಸುವುದು ಸೂರ್ಯಕಾಂತಿ ಹೂವಿನ ಅಭ್ಯಾಸ. ರವಿಯ ಉದಯದಿಂದ ನಿರ್ವಾಣದವರೆಗೆ ಸೌರಪಥವನ್ನು ಅನುಸರಿಸುವ ಈ ಸೂರ್ಯಕಾಂತಿಯಂತೆಯೇ ಮನೆಯೊಂದು ನಿರ್ಮಿತಗೊಳ್ಳುತ್ತಿದೆ. ಹೌದು! ಯುರೋಪ್​​ನಲ್ಲೀಗ ಅತ್ಯಾಧುನಿಕ ಶೈಲಿಯ ಮನೆಗಳ ನಿರ್ಮಾಣ ಆರಂಭವಾಗಿದೆ. ವೃತ್ತಾಕಾರದ ಈ ಲೀವಿಂಗ್ ಮನೆಗಳಲ್ಲಿ ಸೋಲಾರ್ ಶಕ್ತಿಯ ಬಳಕೆಯನ್ನು ಆವಿಷ್ಕರಿಸಲಾಗಿದೆ. 2690 ಚದರಡಿ ವಿಸ್ತೀರ್ಣದ ಈ ವೈಶಿಷ್ಟ್ಯ ಪೂರ್ಣ ಹಾಲಿಡೇ ಮನೆಯ ದರ ಸುಮಾರು 5 ಲಕ್ಷದ 40 ಸಾವಿರ ಪೌಂಡ್ ಎಂದು ಅಂದಾಜಿಸಲಾಗುತ್ತಿದೆ. ಸೂರ್ಯನನ್ನು ಅನುಸರಿಸುವಂತೆ ಈ ಮನೆಯನ್ನ ವಿನ್ಯಾಸಗೊಳಿಸಲಾಗುತ್ತಿದೆ. ಪ್ರತಿ ನಿತ್ಯದ ಸೂರ್ಯನ ಪರಿಭ್ರಮಣಕ್ಕೆ ಅನುಗುಣವಾಗಿ 360 ಡಿಗ್ರಿ ಸುತ್ತಬಲ್ಲ ತಂತ್ರಜ್ಞಾನದಲ್ಲಿ ಇದನ್ನು ನಿರ್ಮಿಸಲಾಗಿದೆ.

ಸ್ಪೇನ್ ಕೋಸ್ಟಾ ಡೆಲ್ ಸೋಲ್​​​ನಲ್ಲಿ ನಿರ್ಮಿಸಲಾಗುತ್ತಿರುವ ಹಾಲಿಡೇ ವಿಲ್ಲಾಗಳು ನಿಜಕ್ಕೂ ವಿಶೇಷವಾದುದ್ದು. ಏಕೆಂದರೇ, ಇವುಗಳು ಸೂರ್ಯನ ಕಿರಣಗಳಿಗೆ ತಕ್ಕಂತೆ ಪೂರ್ಣ 360 ಡಿಗ್ರಿ ತಿರುಗಬಲ್ಲ ತಂತ್ರಜ್ಞಾನದಡಿಯಲ್ಲಿ ನಿರ್ಮಿಸಲಾಗುತ್ತಿತ್ತು, ಸೋಲಾರ್ ಶಕ್ತಿಯನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಬಲ್ಲಂತೆ ವಿನ್ಯಾಸಪಡಿಸಲಾಗುತ್ತಿದೆ.

ಬ್ರಿಟೀಶ್ ಪ್ರವಾಸಿಗಳ ಅಚ್ಚುಮೆಚ್ಚಿನ ಪ್ರವಾಸಿ ತಾಣವಾದ ಸನ್ನಿ ಮಾರ್ಬೆಲ್ಲಾದಲ್ಲಿ ಇಂತಹ ಸೋಲಾರ್ ಪವರ್ ಹೌಸ್​​​ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಐರೋಪ್ಯ ರಾಷ್ಟ್ರಗಳಲ್ಲಿ ಮೊತ್ತ ಮೊದಲ ಬಾರಿಗೆ ಸಿದ್ಧವಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನ.

ಇಲ್ಲಿನ ಮನೆಗಳಲ್ಲಿ ಸಾಧ್ಯವಾದಷ್ಟು ಸೌರಕ್ತಿಯನ್ನು ಗ್ರಹಿಸಿಕೊಳ್ಳುವಂತೆ, ಮನೆಯ ಆವರಣವೇ ಸೂರ್ಯನ ಚಾಲನೆಯ ದಾರಿಗೆ ಅನುಗುಣವಾಗಿ ಪ್ರತಿ 15 ನಿಮಿಷಕ್ಕೊಮ್ಮೆ ತಿರುಗುವಂತೆ ಈ ವಿಲ್ಲಾ ಅನ್ನು ವಿನ್ಯಾಸಗೊಳಿಸಲಾಗುತ್ತಿದೆ.

250 ಚದರ ಮೀಟರ್ ಅಥವಾ 2690 ಚದರಡಿಯ ಈ ಮನೆಯ ಮಾರುಕಟ್ಟೆಯ ಮೌಲ್ಯ ಸುಮಾರು 5 ಲಕ್ಷದ 40 ಸಾವಿರದಷ್ಟಾಗುತ್ತದೆ. ಇದರ ವಿನ್ಯಾಸಕಾರರು ಸಾಧ್ಯವಾದಷ್ಟು ಸುಲಭ ದರದಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಇದರ ಎಂಜಿನಿಯರ್​​ಗಳು ಪ್ರಯತ್ನಿಸುತ್ತಿದ್ದಾರೆ.

ಇದರ ವಿನ್ಯಾಸಗಾರರು ಹೇಳುವಂತೆ ಈ ಭವಿಷ್ಯದ ಸೌರಮನೆಗಳು ಸುಮರು ಶೇ. 70 ಪ್ರತಿಶತ ಶಕ್ತಿಯನ್ನು ಉಳಿತಾಯ ಮಾಡಬಹುದು ಜೊತೆಗೆ ಶೇ.68ರಷ್ಟು ವಾತಾವರಣಕ್ಕೆ ಸೇರಬಲ್ಲ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಕಡಿಮೆಯಾಗುತ್ತದೆ. ಇದು ಭವಿಷ್ಯದಲ್ಲಿ ಮನೆಗಳ ಶಕ್ತಿ ಉಪಭೋಗಕ್ಕೆ ಪರ್ಯಾಯ ಮಾರ್ಗವೂ ಆಗುವ ಸಾಧ್ಯತೆಯೂ ಇದೆ.

ಮಾರ್ಬೆಲ್ಲಾದಲ್ಲಿ ಸಿದ್ಧವಾಗುತ್ತಿರುವ ಈ ಸೋಲಾರ್ ವಿಲ್ಲಾಗಳಲ್ಲಿ ಬಹುತೇಕ ಹಾಲಿಡೇ ಹೋಂಗಳಂತೆ ಬಳಕೆಯಾಗುತ್ತಿವೆ. ಪ್ರತೀ ಚದರಡಿಗೆ 2 ಸಾವಿರ ಪೌಂಡ್​​ಗಳಂತೆ ಸುಂದರ ಮೇಲ್ಚಾವಣಿ, ಸುಂದರ ವಿಹಂಗಮ ದೃಶ್ಯಗಳನ್ನು ಕಾಣುವಂತೆ ಕಿಟಿಕಿಗಳನ್ನು ನಿರ್ಮಿಸಿಕೊಡುವ ಭರವಸೆಯನ್ನು ವಿನ್ಯಾಸಕರು ನೀಡುತ್ತಾರೆ.

ದಿನದ ಪೂರ್ತಿ ಸಮಯದಲ್ಲಿ ಮನೆ ತುಂಬಾ ಸೂರ್ಯನ ಸ್ವಾಭಾವಿಕ ಬೆಳಕು ಪಡೆಯುವುದು. ಅಡುಗೆಮನೆಯಲ್ಲಿ ಸಹ ಕಾಂತಿಯುಕ್ತ ಬೆಳಕು ಹೊಂದುವುದು ಬದಲಾಗುತ್ತಿರುವ ಜನಗಳ ಜೀವನಶೈಲಿಗೆ ಸೂಕ್ತ ಅನ್ನುವುದು ಈ ತಂತ್ರಜ್ಞಾನ ವಿನ್ಯಾಸ ಪಡಿಸುತ್ತಿರುವ ಸಂಸ್ಥೆಯ ಸಹ ಸಂಸ್ಥಾಪಕರಾದ ಜೋಸ್ ಕಾರ್ಲೋಸ್ ಮೋಯಾರ ಅಭಿಪ್ರಾಯ. ಎರಡೂವರೆ ವರ್ಷಗಳ ಹಿಂದೆಯೇ ಇಂತಹದ್ದೊಂದು ನಿರ್ಣಾಯಕ ಆಲೋಚನೆ ಮಾಡಿದ್ದ ಮೋಯಾ ಹಾಗೂ ಅವರ ಪಾರ್ಟನರ್ ಬೆರ್ಟ್ರೆಂಡ್ ಕೋವೇ ಈ ಯೋಜನೆಯನ್ನು ಆರ್ಥಿಕ ಆಯಾಮ ಸಹಿತ ಜಾರಿ ಮಾಡುವ ನಿರ್ಧಾರ ಮಾಡಿದ್ದರು.

1984ರಲ್ಲಿಯೇ ಜರ್ಮನ್ ವಿನ್ಯಾಸಗಾರ ರೋಲ್ಫ್ ಡಿಸ್ಚ್ ಪ್ರಪ್ರಥಮ ಸೋಲಾರ್ ನಿರ್ಮಿತ ಮನೆಯನ್ನು ನಿರ್ಮಿಸಿದ್ದರು. ಅದೇ ತಂತ್ರಜ್ಞಾನವನ್ನು ಆಧರಿಸಿಯೇ ಈ ಸಂಸ್ಥೆ ಸೌರಮನೆಗಳನ್ನು ನಿರ್ಮಿಸಲು ಮುಂದಾಗಿದೆ. ಇದೇ ವೇಳೆ ಮೋಯಾ ಹಾಗೂ ತಂಡ ಅವರ ಮೊತ್ತ ಮೊದಲ ಮಹತ್ವಾಕಾಂಕ್ಷಿ ಸೌರಮನೆಯ ನಿರ್ಮಾಣವನ್ನು ಮುಗಿಸಿ ಖಾಸಗಿ ಗ್ರಾಹಕರಿಗೆ ಮುಂದಿನ ಆರ್ಥಿಕ ವರ್ಷಾರಂಭದಲ್ಲಿಯೇ ನೀಡುವ ಭರವಸೆ ನೀಡಿದೆ.

ಮುಂದಿನ ವರ್ಷ ಇದೇ ಮಾದರಿಯ 10 ಮನೆಗಳ ನಿರ್ಮಾಣದ ಬೇಡಿಕೆಯನ್ನು ಜಗತ್ತಿನ ವಿವಿಧ ಭಾಗಗಳ ಗ್ರಾಹಕರಿಂದ ಸಂಸ್ಥೆ ಪಡೆದುಕೊಂಡಿದೆ. ಶೀತವಲಯದ ದಕ್ಷಿಣ ರಾಷ್ಟ್ರಗಿಂತ, ಐರೋಪ್ಯ ರಾಷ್ಟ್ರಗಳಲ್ಲಿ ಇಂತಹ ಸೌರಮನೆಗಳನ್ನು ನಿರ್ಮಿಸಲು ಸಾಕಷ್ಟು ಅವಕಾಶಗಳು ಹಾಗೂ ವ್ಯಾಪ್ತಿ ವಿಫುಲವಾಗಿದೆ ಅನ್ನುವುದು ಸಂಸ್ಥೆಯ ಅಭಿಪ್ರಾಯ.

Related Stories