ಬೆಂಗಳೂರು ಮೂಲದ ಜೆಬು ಗೇಮ್ಸ್ ಪ್ರಾರಂಭವಾಗಿದ್ದು ಹೇಗೆ ಗೊತ್ತಾ?

ಟೀಮ್​​ ವೈ.ಎಸ್​. ಕನ್ನಡ

ಬೆಂಗಳೂರು ಮೂಲದ ಜೆಬು ಗೇಮ್ಸ್ ಪ್ರಾರಂಭವಾಗಿದ್ದು ಹೇಗೆ ಗೊತ್ತಾ?

Wednesday December 23, 2015,

4 min Read

ಜ್ಯಾಕ್ ಗೋಲ್ಡ್, ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಪದವೀಧರ. ಹಲವು ಸೀನಿಯರ್‍ಗಳಂತೆಯೇ ಬೇಸಗೆ ರಜೆಯ ಮಜೆ ಸವಿಯಲು, ಆಗ್ನೇಯ ಏಷಿಯಾಕ್ಕೆ ಪ್ರವಾಸ ಹೊರಡಲು ಪ್ಲ್ಯಾನ್ ಮಾಡಿಕೊಂಡ. ಅದರಂತೆ ಗೆಳೆಯ ಅಕ್ಷಯ್‍ನೊಂದಿಗೆ ಜ್ಯಾಕ್, ಭಾರತ, ಥೈಲ್ಯಾಂಡ್ ಹಾಗೂ ಇಂಡೋನೇಷಿಯಾ ದೇಶಗಳಿಗೆ ಭೇಟಿ ನೀಡಿದ.

ಜ್ಯಾಕ್ ಮತ್ತು ಅಕ್ಷಯ್‍ರ ಈ ಪ್ರವಾಸ ಸಂಪೂರ್ಣ ಅವರು ಅಂದುಕೊಂಡಂತೆಯೇ ಯಶಸ್ವಿಯಾಗಿ ಮುಗಿಯಿತು. ಅದ್ಭುತ ಸಾಗರಗಳು, ಅರಣ್ಯ ಪ್ರದೇಶ, ವನ್ಯ ಮೃಗಗಳು, ಒಳ್ಳೆಯ ಖಾದ್ಯ ಹಾಗೂ ತಿನಿಸಿಗಳು... ಹೀಗೆ ಈ ದೇಶಗಳಲ್ಲಿನ ಜನ, ಸ್ಥಳಗಳನ್ನು ನೋಡಿ ಜ್ಯಾಕ್ ಮತ್ತು ಅಕ್ಷಯ್ ಪುಳಕಿತರಾದ್ರು. ಭಾರತದಲ್ಲಿ ಇವರು ಮೈಸೂರು, ಚೆನ್ನೈ ಹಾಗೂ ಕೊಯಮತ್ತೂರುಗಳಿಗೂ ಭೇಟಿ ನೀಡಿದ್ದರು.

image


ಜ್ಯಾಕ್ ತನ್ನ ಬಾಲ್ಯದ ದಿನಗಳಲ್ಲಿ ಹಲವಾರು ರೀತಿಯ ಮೊಬೈಲ್ ಪದಗಳ ಆಟ ಹಾಗೂ ಬೋರ್ಡ್ ಗೇಮ್‍ಗಳನ್ನು ಆಡಿದ್ದ. ಹೀಗಾಗಿಯೇ ಹೊಸ ರೀತಿಯ ಗೇಮ್‍ಗಾಗಿ ಹುಡುಕಾಟ ನಡೆಸಿದ್ದ. ಇದೇ ಸಮಯದಲ್ಲಿ ಅಕ್ಷಯ್, ಜೆಬು ಗೇಮ್ಸ್ ಅಭಿವೃದ್ಧಿಪಡಿಸಿದ್ದ ವರ್ಡ್‍ಮಿಂಟ್ ಎಂಬ ಪದಗಳ ಆಟವನ್ನು ಜ್ಯಾಕ್‍ಗೆ ಪರಿಚಯಸಿದ. ಆದ್ರೆ ಆಟ ಆಡಲು ಪ್ರಾರಂಭಿಸಿದ್ದೇ, ಗಾಳಕ್ಕೆ ಸಿಕ್ಕ ಮೀನಂತೆ ಅದರಿಂದ ಹೊರಬರಲು ಆಗದಂತಾಯ್ತು. ಆ ಗೇಮ್ ಗೀಳು ಜ್ಯಾಕ್ ಮತ್ತು ಅಕ್ಷಯ್ ಇಬ್ಬರಿಗೂ ಅಂಟಿಕೊಂಡಿತ್ತು.

ಹೀಗೆ ವಿದೇಶಗಳನ್ನು ಸುತ್ತಲು ಬಂದ ಜ್ಯಾಕ್ ಮತ್ತು ಅಕ್ಷಯ್ ಕ್ರಮೇಣ ಈ ವರ್ಡ್‍ಮಿಂಟ್ ಆಟಕ್ಕೆ ಅಂಟಿಕೊಂಡುಬಿಟ್ಟರು. ಯಾರು ಎಷ್ಟು ಪದಗಳನ್ನು ಹುಡುಕಿದರು, ಯಾರು ಎಷ್ಟು ಅಂಕಗಳನ್ನು ಪಡೆದರು ಅನ್ನೋ ಸ್ಪರ್ಧೆಗಿಳಿದಿದ್ದರು. ಅಷ್ಟೇ ಯಾಕೆ ಲಾಸ್ ಏಂಜಲೀಸ್‍ನ ತಮ್ಮ ಕುಟುಂಬದವರ ಜೊತೆ ಈ ಗೇಮ್ ಬಗ್ಗೆ ಚರ್ಚಿಸಲು ಹಾಗೂ ಯಾರು ಯಾವ ಹಂತದಲ್ಲಿದ್ದಾರೆಂದು ಚ್ಯಾಟ್ ಮಾಡಲು ಒಂದು ವಾಟ್ಸಾಪ್ ಗ್ರೂಪ್‍ಅನ್ನೇ ಮಾಡಿಕೊಂಡಿದ್ದರು ಜ್ಯಾಕ್ ಮತ್ತು ಅಕ್ಷಯ್.

image


ಪ್ರಪಂಚದಾದ್ಯಂತ ಮೊಬೈಲ್ ಗೇಮ್‍ಗಳಿಗೆ ಅಂಟಿಕೊಂಡ ಕೋಟ್ಯಂತರ ಜನರಲ್ಲಿ ಜ್ಯಾಕ್ ಕೂಡ ಒಬ್ಬ. ವಿಶ್ವದಾದ್ಯಂತ ಆನ್‍ಲೈನ್ ಗೇಮ್ ಕ್ಷೇತ್ರದ ಮೇಲೆ ಗಮನಹರಿಸಿರುವ ನ್ಯೂಜೂ.ಕಾಮ್ ನೀಡಿದ ವರದಿಯಲ್ಲಿ, ಮೊಬೈಲ್ ಗೇಮ್‍ಗಳು ಇತ್ತೀಚಿನ ದಿನಗಳಲ್ಲಿ ದೊಡ್ಡ ಉದ್ಯಮವಾಗಿ ಬದಲಾಗಿವೆ. ಹಾಗೇ ಈ ವಲಯದ ಇವತ್ತಿನ ಮಾರುಕಟ್ಟೆ ಮೌಲ್ಯ ಬರೊಬ್ಬರಿ 12 ಬಿಲಿಯನ್ ಡಾಲರ್ ಎಂಬ ಮಾಹಿತಿಯನ್ನು ಹೊರಹಾಕಿದೆ.

ಜಿಎಮ್‍ಜಿಸಿ ಅಥವಾ ಗ್ಲೋಬಲ್ ಮೊಬೈಲ್ ಗೇಮ್ ಕಾನ್ಫಿಡರೇಷನ್ ನೀಡಿರುವ ಮತ್ತೊಂದು ವರದಿಯ ಪ್ರಕಾರ, 2014ರಲ್ಲೇ ವಿಶ್ವದಾದ್ಯಂತ ಮೊಬೈಲ್ ಮಾರುಕಟ್ಟೆ ಮೌಲ್ಯ 24.5 ಬಿಲಿಯನ್ ಡಾಲರ್ ಮುಟ್ಟಿದ್ದು, 2017ರ ಒಳಗೆ ಇದು 40 ಬಿಲಿಯನ್ ಡಾಲರ್ ಮುಟ್ಟುವ ನಿರೀಕ್ಷೆಯಿದೆ.

ಅತ್ಯಂತ ಯಶಸ್ವೀ ಮೊಬೈಲ್ ಗೇಮ್ ಎನಿಸಿಕೊಂಡಿರುವ ಕ್ಯಾಂಡಿ ಕ್ರಷ್ ಹಾಗೂ ಆಂಗ್ರಿ ಬಡ್ರ್ಸ್, 10 ಕೋಟಿಯಿಂದ 50 ಕೋಟಿ ಬಾರಿ ಡೌನ್‍ಲೋಡ್ ಆಗಿವೆ. ಇನ್ನು ರಜಲ್, ವರ್ಡ್ಸ್​​ ವಿತ್ ಫ್ರೆಂಡ್ಸ್​​ನಂತಹ ಪದಗಳ ಆಟ 5 ಕೋಟಿ ಡೌನ್‍ಲೋಡ್ ಆಗಿವೆ.

image


ಕೆ. ಶ್ರೀಕೃಷ್ಣ ಹಾಗೂ ಬಿಕಾಶ್ ಚೌಧರಿ ಎಂಬಿಬ್ಬರು ಪೋಷಕರು ಬೆಂಗಳೂರಿನಲ್ಲಿ ಮೊಬೈಲ್ ಗೇಮ್ ಸ್ಟುಡಿಯೋ ಪ್ರಾರಂಭಿಸಿದರು. ಇಬ್ಬರಿಗೂ ಹೊಸ ಕಂಪನಿಗಳ ಪ್ರಾರಂಭದ ಬಗ್ಗೆ ಒಳ್ಳೆಯ ಅನುಭವಗಳಿದ್ದವು. ಅಲ್ಲದೇ ಬಿಕಾಶ್ ಚೌಧರಿಗೆ ಈ ಹಿಂದಿಯೇ ಇನ್‍ಮೊಬಿ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವವಿತ್ತು.

‘2011ರಲ್ಲಿ ನನಗೆ ಈ ಆಲೋಚನೆ ಬಂತು. ಮೊಬೈಲ್ ಸಂಬಂಧೀ ವ್ಯಾಪಾರ ಎಷ್ಟು ದೊಡ್ಡ ವಿಸ್ತಾರ ಹೊಂದಿದೆ ಅನ್ನೋದು ಈ ವ್ಯವಸ್ಥೆಗೆ ಇಳಿದ ಬಳಿಕವೇ ಗೊತ್ತಾಗಿದ್ದು. ಸಣ್ಣ ಸಣ್ಣ ಉದ್ಯಮಿಗಳು ಕೆಲವೇ ಜನರ ತಂಡಗಳೊಂದಿಗೆ ಪ್ರತಿದಿನ ಸಾವಿರಾರು ಡಾಲರ್ ಹಣ ಸಂಪಾದಿಸುತ್ತಿದ್ದುದನ್ನು ನಾನು ಕಣ್ಣಾರೆ ಕಂಡಿದ್ದೇನೆ’ ಅನ್ನುತ್ತಾರೆ ಬಿಕಾಶ್.

ಹೀಗೆ ಕೆಲ ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವ ಪಡೆದ ಈ ಜೋಡಿಗೆ ಕ್ರಮೇಣ ಜನರ ಭಾಷಾಜ್ಞಾನ ವೃದ್ಧಿಸುವ ಮೊಬೈಲ್ ಗೇಮ್ ಅಭಿವೃದ್ಧಿಪಡಿಸುವ ಹೊಸ ಯೋಚನೆ ಹೊಳೆಯಿತು.

ಹೀಗಾಗಿಯೇ 2014ರ ನವೆಂಬರ್‍ವರೆಗೂ ರಾಷ್ಟ್ರೀಯ ಉದ್ಯಮಶೀಲತೆ ಸಂಕೀರ್ಣದಲ್ಲಿ ಸಕ್ರಿಯವಾಗಿದ್ದ ಶ್ರೀಕೃಷ್ಣ, ತಾನೇ ಯಾಕೆ ಉದ್ಯಮವೊಂದನ್ನು ಪ್ರಾರಂಭಿಸಬಾರದು ಅಂತ ನಿರ್ಧರಿಸಿ ಸಂಕೀರ್ಣದಿಂದ ಹೊರನಡೆದರು. ಹಾಗಂತ ಬಿಕಾಶ್ ಮತ್ತು ಶ್ರೀಕೃಷ್ಣ ಕೆಲಸ ಮಾಡಲು ಒಂದಾಗಿದ್ದು ಇದೇ ಮೊದಲೇನಲ್ಲ. 2000ರ ಸಮಯದಲ್ಲಿ ಇಂಪಲ್ಸ್​ ಸಾಫ್ಟ್ ಮತ್ತು ಎಸ್‍ಐಆರ್‍ಎಫ್ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲೂ ಈ ಜೋಡಿ ಒಟ್ಟಿಗೇ ಕಾರ್ಯನಿರ್ವಹಿಸಿತ್ತು.

ತಮ್ಮ ಅನುಭವ ಹಾಗೂ ಕಾರ್ಯಕ್ಷಮತೆಗಳ ಬಗ್ಗೆ ಶ್ರೀಕೃಷ್ಣ ಮತ್ತು ಬಿಕಾಶ್‍ಗೆ ತುಂಬಾ ಆತ್ಮವಿಶ್ವಾಸವಿತ್ತು. ಬೇರೆ ಉದ್ಯಮಿಗಳಿಗಿಂತ ಕಡಿಮೆ ತಪ್ಪು ಮಾಡಿದರೂ ಯಶಸ್ವಿಯಾಗ್ತೀವಿ ಅನ್ನೋ ಛಲದೊಂದಿಗೆ ಮುನ್ನುಗ್ಗಿಯೇಬಿಟ್ಟರು. ಹೀಗೆ ಕೇವಲ 6 ಲಕ್ಷ ಬಂಡವಾಳದೊಂದಿಗೆ ಈ ಜೋಡಿ ಜೆಬು ಗೇಮ್ಸ್‍ಅನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಇವರ ಆಲೋಚನೆಗಳಿಗೆ ಜೀವ ತುಂಬವ ಒಬ್ಬ ಮೊಬೈಲ್ ಗೇಮ್ ಡೆವೆಲಪರ್ ಕೊರತೆ ಇವರನ್ನು ಕಾಡತೊಡಗಿತು.

ಹಾಗಂತ ಇವರಿಗೆ ಒಬ್ಬ ಪರಿಣತ ಗೇಮ್ ಡೆವೆಲಪರ್ ಹುಡುಕಲು ಹೆಚ್ಚು ಸಮಯ ಬೇಕಾಗಲಿಲ್ಲ. ಕಂಪ್ಯೂಟರ್ ನಿಪುಣ ಹಾಗೂ ಮೊಬೈಲ್ ಗೇಮ್ ಡೆವೆಲಪ್ ಮಾಡುವ ಗೀಳು ಹೊಂದಿದ್ದ ಕೊಳ್ಳಾಲ್ ದಾಸ್ ಪರಿಚಯವಾಯ್ತು. ಹಾಗೇ ಇವರ ಜೆಬು ಗೇಮ್ಸ್‍ಗೆ ಮೂರನೇ ಸಂಸ್ಥಾಪಕನ ಸೇರ್ಪಡೆಯೂ ಆಯ್ತು. ಇದಾದ ಕೆಲವೇ ದಿನಗಳಲ್ಲಿ ಈ ಮೂವರೂ ಸೇರಿ ಕಳೆದ ಡಿಸೆಂಬರ್‍ನಲ್ಲಿ ಜೆಬು ಗೇಮ್ಸ್ ವತಿಯಿಂದ ಮೊದಲ ಗೇಮ್‍ಆದ ಹೋಮ್‍ಬೌಂಡ್ ಎಂಬ ಆರ್ಕೇಡ್ ಗೇಮ್ ಅನ್ನು ಬಿಡುಗಡೆ ಮಾಡಿದರು.

‘ನಮ್ಮಿಂದ ಇದು ನಿಜವಾಗಲೂ ಸಾಧ್ಯಾನಾ ಅಂತ ಮೊದಲು ನಾವು ತಿಳಿದುಕೊಳ್ಳಬೇಕಿತ್ತು. ಹೀಗಾಗಿಯೇ ಹೋಮ್‍ಬೌಂಡ್ ನಮಗೆ ಒಂದು ಉತ್ತಮ ಬುನಾದಿ ಜೊತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸಿತು. ನಂತರ ನಾವು ಸರಿಯಾದ ದಾರಿಯಲ್ಲೇ ಸಾಗುತ್ತಿದ್ದೇವೆ ಅಂತ ಗೊತ್ತಾಯಿತು’ ಅಂತ ತಮ್ಮ ಅನುಭವ ಹಂಚಿಕೊಳ್ತಾರೆ ಶ್ರೀಕೃಷ್ಣ.

ಕ್ರಮೇಣ ಜೆಬು ಗೇಮ್ಸ್, ವರ್ಡ್‍ಮಿಂಟ್ ಹಾಗೂ ಫಾಲೋ ದಿ ಡಾಟ್ಸ್ ಎಂಬ ಎರಡು ಹೊಸ ಗೇಮ್‍ಗಳನ್ನು ಲಾಂಚ್ ಮಾಡಿದರು. ವರ್ಡ್‍ಮಿಂಟ್ ಒಬ್ಬನೇ ಆಟಗಾರ ಆಡಬಹುದಾದ ಗೇಮ್. ಇಲ್ಲಿ ಆಟಗಾರನಿಗೆ ಒಂದು ಪದ ನೀಡಲಾಗುತ್ತದೆ, ಆಟಗಾರ ಆ ಪದಕ್ಕೆ ಹೋಲಿಕೆಯಾಗುವ ಮತ್ತೊಂದು ಪದ ಹುಡುಕಬೇಕು. ಇನ್ನು ಫಾಲೋ ದಿ ಡಾಟ್ಸ್ ಗೇಮ್‍ನಲ್ಲಿ ಆಟಗಾರ ಚುಕ್ಕಿಗಳನ್ನು ಗೆರೆಗಳ ಮೂಲಕ ಸೇರಿಸಿ ಹೊಸ ಆಕಾರ ಸೃಷ್ಟಿಸಬಹುದು.

ಕೇವಲ ಸಮಯ ಕಳೆಯಲು ಹಾಗೂ ಮೋಜಿಗಾಗಿ ಈ ಗೇಮ್‍ಗಳನ್ನು ನಿರ್ಮಿಸಲಾಗಿತ್ತಾದರೂ, ಮಕ್ಕಳೊಂದಿಗೆ ಹೆಚ್ಚು ಕಾಳ ಸಮಯ ಕಳೆಯುವ ಮಂದಿ ಇವುಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರಣ ಮಕ್ಕಳ ಶಬ್ದಕೋಶದ ಬಗೆಗಿನ ಜ್ಞಾನ ಹಾಗೂ ಕಣ್ಣು ಮತ್ತು ಕೈ ನಡುವಿನ ಸಮನ್ವಯ ಹೆಚ್ಚಾಗುತ್ತದೆ ಅನ್ನೋದು ಅವರ ಅಭಿಪ್ರಾಯ.

‘ಇದುವರೆಗಿನ ಪ್ರತಿಕ್ರಿಯೆಯಂತೂ ಉತ್ತಮವಾಗಿದೆ. ಹಾಗೇ ಬುದ್ಧಿಮಾಂದ್ಯ ಅಥವಾ ವಿಶೇಷ ಮಕ್ಕಳೂ ಸಹ ಫಾಲೋ ದಿ ಡಾಟ್ಸ್ ಆಟಕ್ಕೆ ಉತ್ತಮವಾಗಿ ಸ್ಪಂದಿಸುತ್ತಾರೆ ಎಂಬ ಮಾತು ನಮಗೆ ಹಲವು ಶಿಕ್ಷಣ ಕೇಂದ್ರಗಳಿಂದ ಕೇಳಿಬಂದಿದೆ’ ಅಂತಾರೆ ಬಿಕಾಶ್.

ಬಿಕಾಶ್, ಶ್ರೀಕೃಷ್ಣ ಮತ್ತು ದಾಸ್ ಅವರ ಜೆಬು ಗೇಮ್ಸ್‍ನಿಂದ ಹೊರಬಂದ ಮೊದಲ ಗೇಮ್ ಹೋಮ್‍ಬೌಂಡ್ ಸದ್ಯಕ್ಕೆ ಲಭ್ಯವಿಲ್ಲ. ಆದ್ರೆ ನಂತರ ಬಿಡುಗಡೆಯಾದ ಫಾಲೋ ದಿ ಡಾಟ್ಸ್ ಮತ್ತು ವರ್ಡ್‍ಮಿಂಟ್ ಇದುವರೆಗೆ 10 ಸಾವಿರಕ್ಕೂ ಹೆಚ್ಚು ಬಾರಿ ಡೌನ್‍ಲೋಡ್ ಆಗಿವೆ.

ಜೆಬು ಗೇಮ್ಸ್ ಭವಿಷ್ಯದಲ್ಲೂ ಗೇಮ್ ಪ್ರಿಯರಿಗೆ ಇಂತಹ ಉಚಿತ ಆಟಗಳನ್ನು ನಿರ್ಮಿಸುವ ಗುರಿಹೊಂದಿದೆ. ಬಿಕಾಶ್ ಹೇಳುವ ಪ್ರಕಾರ, ಅವರ ಭವಿಷ್ಯದ ಯೋಜನೆಗಳಿಗೆ ಜಾಹೀರಾತುಗಳ ಮೂಲಕ ಬರುವ ಹಣವಷ್ಟೇ ಸಾಕಂತೆ. ಹಾಗೇ ಮುಂದಿನ ವರ್ಷ 5 ಗೇಮ್‍ಗಳು ಹಾಗೂ ಅದರ ನಂತರ ಪ್ರತಿ ವರ್ಷ 12 ಗೇಮ್‍ಗಳನ್ನು ನಿರ್ಮಿಸುವ ಯೋಜನೆ ಈ ತಂಡದ್ದು.

‘ನಮ್ಮ ಬಳಿ ಈಗಾಗಲೇ 3 ಹೊಸ ಗೇಮ್‍ಗಳ ಮಾದರಿಗಳಿವೆ. ಈ ವರ್ಷ 5 ಗೇಮ್‍ಗಳನ್ನು ಬಿಡುಗಡೆ ಮಾಡುವ ಗುರಿ ನಮ್ಮದು. ಕೆಲ ಹೊಸ ಆಟಗಳು ಹಳೆಯ ಆಟಗಳ ಮುಂದುವರಿದ ಭಾಗದಂತೆಯೇ ಇರುತ್ತವೆ. ಹಾಗೇ ಮುಂದಿನ ದಿನಗಳಲ್ಲಿ ಹಲವು ಭಾಷೆಗಳಲ್ಲಿ ಗೇಮ್‍ಗಳ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದೇವೆ’ ಅಂತಾರೆ ಬಿಕಾಶ್.

ಅಂದ್ಹಾಗೆ ಬಿಕಾಶ್ ಮತ್ತು ಶ್ರೀಕೃಷ್ಣರಿಗೆ ಹೊಸ ಗೇಮ್‍ಗಳನ್ನು ನಿರ್ಮಿಸಲು ಅವರ ಮಕ್ಕಳೇ ಪ್ರೇರೇಪಣೆಯಂತೆ. ‘ಮನೆಗೆ ಹೋದ ತಕ್ಷಣ ಮಕ್ಕಳು ಹೊಸ ಗೇಮ್ ಯಾವಾಗ ಅಂತ ಕೇಳುತ್ತಿರುತ್ತಾರೆ. ಈ ಮೂಲಕ ನಮ್ಮನ್ನು ಹೊಸ ಗೇಮ್‍ಗಳನ್ನು ಸೃಷ್ಟಿಸಲು ಹುರಿದುಂಬಿಸುತ್ತಾರೆ’ ಅಂತ ನಗುತ್ತಾರೆ ಶ್ರೀಕೃಷ್ಣ.

ಲೇಖಕರು: ಅಪರ್ಣಾ ಘೋಷ್​​

ಅನುವಾದಕರು: ವಿಶಾಂತ್​​