ನೀರಿನ ವಿಚಾರದಲ್ಲಿ ಭಾರತದ ರಾಜತಾಂತ್ರಿಕ ಉದ್ಯಮದ ಹೆಜ್ಜೆ

ಟೀಮ್​​ ವೈ.ಎಸ್​​. ಕನ್ನಡ

0

ಶ್ರಮಣ ಮಿತ್ರ ಅವರು ಯುವರ್ ಸ್ಟೋರಿಯೊಂದಿಗೆ ತಮ್ಮ ವಿಶನ್ ಇಂಡಿಯಾ 2020 ಎಂಬ ಪುಸ್ತಕದ ಅಧ್ಯಾಯವೊಂದನ್ನು ಹಂಚಿಕೊಂಡಿದ್ದಾರೆ. ಸಣ್ಣ ಸಣ್ಣ ಉದ್ಯಮಗಳು ಹೇಗೆ ಬಿಲಿಯನ್ ಡಾಲರ್ ಉದ್ಯಮದ ಮಟ್ಟಕ್ಕೆ ಹೇಗೆ ಏರಬಹುದೆಂಬ ಬಗ್ಗೆ ಇಲ್ಲಿ 45 ಆಸಕ್ತಿದಾಯಕ ಐಡಿಯಾಗಳನ್ನು ಅವರು ನೀಡಿದ್ದಾರೆ. 2020ರಲ್ಲಿ ಉದ್ಯಮದ ಭವಿಷ್ಯ ಯಾವ ರೀತಿಯಿರಬಹುದೆಂಬ ಕುರಿತು ಕಳೆದ ದಶಕಗಳಿಗೆ ಹೋಲಿಸಿ ಬರೆದಿರುವ ಲೇಖನ ಇದು.

ಗಂಗೋತ್ರಿಯಲ್ಲಿ ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ನೀರಿನ ಉಪ್ಪಿನಾಂಶ ತೆಗೆಯುವ ಕೆಲಸದ ಕಡೆ ಗಮನ ಹರಿಸಿದ್ದಾಗಲೇ, ಇದೇ ಮಾದರಿಯ ತಂತ್ರಜ್ಞಾನವನ್ನು ಮಂದಾಕಿನಿ ನದಿಗೂ ಸೇರಿಸಿ ಯೋಜನೆ ರೂಪಿಸಲಾಗಿತ್ತು. ಗುಜರಾತ್ ಸರ್ಕಾರ ಪಶ್ಚಿಮ ಮತ್ತು ವಾಯುವ್ಯ ಭಾರತ ಮತ್ತು ದಕ್ಷಿಣ ಪಾಕಿಸ್ತಾನಕ್ಕೂ ಈ ಯೋಜನೆಯನ್ನು ವಿಸ್ತರಿಸಬೇಕಾದ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಆ ಬಗ್ಗೆ ಪ್ರಸ್ತಾಪಿಸಿತ್ತು.

ಭಾರತದಲ್ಲಿ ಅತ್ಯಂತ ದೊಡ್ಡ ಕರಾವಳಿ ಪ್ರದೇಶ ಅಂದರೆ ಸುಮಾರು 1,600 ಕಿಲೋಮೀಟರ್‌ನಷ್ಟು ಕರಾವಳಿ ಪ್ರದೇಶ ಗುಜರಾತ್‌ನಲ್ಲಿದೆ. ಕಛ್‌ ತೀರ ಪ್ರದೇಶದಿಂದ ಮಹಾರಾಷ್ಟ್ರದ ಉತ್ತರ ಭಾಗದವರೆಗೂ ಹಲವಾರು ಕೈಗಾರಿಕೋದ್ಯಮಗಳು, ಬಂದರುಗಳು ವ್ಯಾಪಿಸಿಕೊಂಡಿವೆ. ಅಲಂಗ್‌ನಲ್ಲಿ ಪ್ರಪಂಚದ ಅತೀ ದೊಡ್ಡ ಶಿಪ್ ಬ್ರೇಕಿಂಗ್ ಯಾರ್ಡ್ ಕೂಡ ಇದೆ. ನೀರಿನ ವಿವಾದ ಮನೆ ಮಾಡಿರುವ ಭಾರತ ಪಾಕಿಸ್ತಾನ ಗಡಿ ಜನರ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಈ ನೀರಿನ ಉಪ್ಪಿನಂಶ ತೆಗೆಯುವಂತಹ ಯೋಜನೆಗಳು ಉಪಯೋಗವಾಗಬೇಕಿವೆ. ಅಲ್ಲಿಯೇ ಈ ಉದ್ಯಮಕ್ಕೆ ಸಾಕಷ್ಟು ಅವಕಾಶಗಳೂ ಇವೆ.

1955ರಲ್ಲಿ ಭಾರತದ ಗೃಹಬಳಕೆಯ ನೀರಿನ ವಿತರಣೆಯ ಯೋಜನೆ ಸೃಷ್ಟಿಯಾಯಿತು. ಆಗಲೇ ಉತ್ತರ ಭಾರತದ ಹಲವು ರಾಜ್ಯಗಳು ನೀರಿನ ಕುರಿತಾಗಿ ಒಪ್ಪಂದವೊಂದಕ್ಕೆ ಬಂದಿದ್ದವು. ಪಂಜಾಬ್‌ ಭಾಗದ ನದಿಗಳಿಂದ ಹರಿದುಬರುವ ನೀರನ್ನು ರಾಜಸ್ತಾನ ಮತ್ತು ಕಾಶ್ಮೀರಕ್ಕೆ ವಿತರಿಸಬೇಕಿತ್ತು. ರಾಜಸ್ತಾನದ 8.0 ಮಿಲಿಯನ್ ಎಕರೆ ಪ್ರದೇಶವನ್ನು, ಪಂಜಾಬ್‌ನ 7.2 ಮಿಲಿಯನ್ ಎಕರೆ ಪ್ರದೇಶ ಮತ್ತು ಕಾಶ್ಮೀರದ 0.5 ಮಿಲಿಯನ್ ಎಕರೆ ಪ್ರದೇಶ ಈ ಯೋಜನೆಗೆ ಒಳಪಟ್ಟಿತ್ತು. ಶೀಘ್ರದಲ್ಲಿಯೇ ರಾಜಸ್ತಾನದ ನೀರಿನ ಕಾಲುವೆ (ಇಂದು ಅದನ್ನು ಇಂದಿರಾಗಾಂಧಿ ಕಾಲುವೆ ಎಂದು ಕರೆಯಲಾಗುತ್ತಿದೆ) ನಿರ್ಮಾಣವಾಯಿತು. ಈ ಮೂಲಕ ಪಂಜಾಬ್‌ನ ರವಿ ಬೀಸ್ ನದಿಯ ನೀರನ್ನು ರಾಜಸ್ತಾನಕ್ಕೆ ಹಂಚಲು ಯೋಜನೆ ರೂಪಿಸಲಾಗಿತ್ತು.

1966ರಲ್ಲಿ ಪಂಜಾಬ್‌ನ 7.2 ಮಿಲಿಯನ್ ಎಕರೆ ಅಡಿಯಲ್ಲಿದ್ದ ನೀರು ಪಂಜಾಬ್‌ನ ಮತ್ತು ಹೊಸದಾಗಿ ಘೋಷಣೆಯಾದ ಹರಿಯಾಣ ರಾಜ್ಯದ ನಡುವೆ ಹಂಚಿಹೋಗುತ್ತಿತ್ತು. ಇದರಲ್ಲಿ 0.2 ಮಿಲಿಯನ್ ಎಕರೆ ಅಡಿಯ ನೀರು ದೆಹಲಿಯ ಅಗತ್ಯಕ್ಕಾಗಿ ಹಂಚಲಾಗುತ್ತಿತ್ತು.

ನಂತರ 1978ರಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಪಂಜಾಬ್‌ನ ಸಟ್ಲೆಜ್ ನದಿ ನೀರಿಗೆ ಕಾಲುವೆಯ ಮುಖಾಂತರ ಹರಿಯಾಣದ ಯಮುನಾ ನದಿಯ ನೀರಿನೊಂದಿಗೆ ಸೇರಿಸಲಾರಂಭಿಸಿದವು. ರವಿ ಬೀಸ್ ಸಿಸ್ಟಮ್ನ ಯೋಜನೆಯಡಿ ಹರಿಯಾಣಕ್ಕೆ ಅಗತ್ಯವಿದ್ದ 3.5 ಮಿಲಿಯನ್ ಎಕರೆ ಅಡಿಯ ನೀರನ್ನು ಒದಗಿಸಲಾಗದ ಕಾರಣ ಈ ಕ್ರಮ ಅತ್ಯಂತ ಅವಶ್ಯಕವಾಗಿತ್ತು. 3 ವರ್ಷಗಳ ನಂತರ ಅನೇಕ ಸಂಪರ್ಕಗಳ ಬಳಿಕ ಪಂಜಾಬ್, ಹರಿಯಾಣ ಮತ್ತು ರಾಜಸ್ತಾನ ರಾಜ್ಯಗಳು ಒಂದು ಒಪ್ಪಂದಕ್ಕೆ ಬಂದವು. ಈ ಒಪ್ಪಂದದ ಪ್ರಕಾರ, 4.22 ಮಿಲಿಯನ್ ಎಕರೆ ಅಡಿಯಷ್ಟು ನೀರು ಪಂಜಾಬ್‌ಗೂ, 3.50 ಮಿಲಿಯನ್ ಎಕರೆ ಅಡಿಯಷ್ಟು ನೀರು ಹರಿಯಾಣಕ್ಕೂ, 8.60 ಮಿಲಿಯನ್ ಎಕರೆ ಅಡಿಯಷ್ಟು ನೀರು ರಾಜಸ್ತಾನಕ್ಕೂ, 0.20 ಮಿಲಿಯನ್ ಎಕರೆ ಅಡಿಯಷ್ಟು ನೀರು ದೆಹಲಿಗೂ ಮತ್ತು 0.65 ಮಿಲಿಯನ್ ಎಕರೆ ಅಡಿಯಷ್ಟು ನೀರು ಜಮ್ಮು ಮತ್ತು ಕಾಶ್ಮೀರಕ್ಕೂ ಒದಗಿಸಲು ವ್ಯವಸ್ಥೆ ಮಾಡಲಾಯಿತು. ಈ ಒಪ್ಪಂದದ ಒಂದು ಭಾಗವಾಗಿ ಸಟ್ಲೆಜ್, ಯಮುನಾ ಲಿಂಕ್ ಕಾಲುವೆಯ ಯೋಜನೆಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಪಂಜಾಬ್ ಭರವಸೆ ನೀಡಿತು. ಆದರೆ ತಾನು ನೀಡಿದ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಪಂಜಾಬ್ ವಿಫಲವಾಯಿತು. ಈ ವಿವಾದ ಹಲವು ವರ್ಷಗಳ ಕಾಲ ನಡೆಯಿತು. ಪುನರ್ಸಂಧಾನಗಳು ಮತ್ತು ಒಪ್ಪಂದಗಳು ನಡೆದರೂ ದಶಕಗಳಿಂದಲೂ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ.

2008ರ ಅಕ್ಟೋಬರ್‌ನಲ್ಲಿ ಈ ಸಮಸ್ಯೆ ಉಲ್ಬಣಗೊಂಡಿತ್ತು. ಭಾರತದ ಆಡಳಿತವಿದ್ದ ಕಾಶ್ಮೀರ ಭಾಗದಿಂದ ಪಾಕಿಸ್ತಾನಕ್ಕೆ ಹರಿಯುವಂತೆ ಕೇಂದ್ರ ನೀರಾವರಿ ಭಾಗವಾದ ವಿವಾದಾತ್ಮಕ 450 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದ ಬಾಗ್ಲಿಹಾರ್ ಹೈಡ್ರೋಎಲೆಕ್ಟ್ರಿಕ್ ಯೋಜನೆಯನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸಿದ ಬಳಿಕ ಪಾಕಿಸ್ತಾನ ಭಾರತಕ್ಕೆ ನ್ಯೂಕ್ಲಿಯರ್ ಯುದ್ಧ ನಡೆಸುವ ಬೆದರಿಕೆ ಒಡ್ಡಿತ್ತು.

ರಾಜಕೀಯ ಅಸ್ಥಿರತೆಗಳ ನಡುವೆಯೇ ಮಹತ್ವಾಕಾಂಕ್ಷಿ ಮಂದಾಕಿನಿ ಯೋಜನೆಗೆ ಗುಜರಾತ್ ಸರ್ಕಾರ ಪಾಲುದಾರಿಕೆ ವಹಿಸಿಕೊಂಡಿತು. ಗಂಗೋತ್ರಿ ಯೋಜನೆಯಲ್ಲಿ ಹೈಫ್ಲುಕ್ಸ್ ಸಿಂಗಪೂರ್‌ನ ಒಂದು ಸಮೂಹ ಸಂಸ್ಥೆ ಮತ್ತು ಇತರ ಬ್ಯಾಂಕರ್‌ ಸಂಸ್ಥೆಗಳ ಬೆಂಬಲದೊಂದಿಗೆ ಯೋಜನೆಯನ್ನು ಆರಂಭಿಸಲಾಯಿತು. 4.5 ಬಿಲಿಯನ್ ಹೂಡಿಕೆಯೊಂದಿಗೆ, ಸೀವಾಟರ್ ರಿವರ್ಸ್ ಓಸ್ಮೋಸಿಸ್(ಎಸ್‌ಡಬ್ಲ್ಯುಆರ್‌ಓ) ಪ್ಲಾಂಟ್ ಮಾಂಡ್ವಿಯಲ್ಲಿ 2013ರಲ್ಲಿ ನಿರ್ಮಾಣವಾಯಿತು. ಪ್ರತಿ ದಿನ 3 ಮಿಲಿಯನ್ ಕ್ಯುಬಿಕ್ ಮೀಟರ್‌ನಷ್ಟು ನೀರಿನ ಉತ್ಪಾದನಾ ಸಾಮರ್ಥ್ಯದಿಂದ ಕಛ್ ಮತ್ತು ಸೌರಾಷ್ಟ್ರಗಳ 9 ಮಿಲಿಯನ್ ಜನರ ಶುದ್ಧ ನೀರಿನ ಅಗತ್ಯತೆಯನ್ನು ಮತ್ತು ಸರಸ್ವತಿ ಮತ್ತು ಸಬರ್‌ಮತಿ ನದಿಗಳ ಜಲಾನಯನ ಪ್ರದೇಶದ ನೀರಿನ ಅಗತ್ಯತೆಯನ್ನು ಇದು ಪೂರೈಸುತ್ತಿತ್ತು.

ಗುಜರಾತ್ ಸರ್ಕಾರ ಹಲವು ಮುಖ್ಯವಾದ ಒಪ್ಪಂದಗಳನ್ನು ಮಾಡಿಕೊಂಡಿದೆ. ರಾಜಸ್ತಾನದ ಮುಂದೆ ಲೂನಿ ಮತ್ತು ಚಂಬಲ್ ನದಿಗಳ ಸಂಪರ್ಕವನ್ನು ಗುಜರಾತ್‌ನ ಸರಸ್ವತಿ ನದಿಯ ಜೊತೆ ಸೇರಿಸುವ ಕಾಲುವೆಯ ಯೋಜನೆಯನ್ನು ಪ್ರಸ್ತಾಪಿಸಿತು. ನಂತರ ಸರಸ್ವತಿ ನದಿಯ ಹೂಳೆತ್ತುವ ಮತ್ತು ವಿಸ್ತರಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಯಿತು. ಇದಕ್ಕೆ ಪ್ರತಿಯಾಗಿ ರಾಜಸ್ತಾನ ಸರ್ಕಾರ ಮರುಭೂಮಿ ಪ್ರದೇಶಗಳಿಗೆ ನೀರು ಪೂರೈಸಲು ಕಾಲುವೆಗಳನ್ನು ರವಾನಿಸುವ ವ್ಯವಸ್ಥೆ ಮಾಡಿಕೊಂಡಿತು. ಇದ್ದಕ್ಕಿದ್ದಂತೆ ಪಶ್ಚಿಮ ಭಾರತದ ಭಾಗಗಳು ಹಸಿರಿನಿಂದ ಕಂಗೊಳಿಸಲಾರಂಭಿಸಿದವು. ಬತ್ತಿ ಹೋಗಿದ್ದ ನದಿಗಳು ಜೀವನದಿಯಾಗಿ ಹರಿಯಲಾರಂಭಿಸಿದವು. ಈ ಮೂಲಕ ಹೊಸ ಜೀವನ ದೊರೆತಂತಾಯಿತು.

ಈ ಯೋಜನೆ ನಡೆಯುತ್ತಿರುವಂತೆಯೇ ಭಾರತ ಸರ್ಕಾರ 2015ರಲ್ಲಿ ಪಾಕಿಸ್ತಾನದೊಂದಿಗೆ ಕಠಿಣ ಸಂಧಾನಕ್ಕೆ ಮುಂದಾಯಿತು. ಪಾಕಿಸ್ತಾನದ ಮುಂದೆ ಭಾರತ ಉಪ್ಪಿನ ಅಂಶ ತೆಗೆದ ನೀರನ್ನು ಗುಜರಾತ್‌ನಿಂದ ಪಾಕಿಸ್ತಾನಕ್ಕೆ ಹರಿಸುವ ಕಾಲುವೆ ಯೋಜನೆಯನ್ನು ಇಟ್ಟಿತು. ತನ್ನ ದೇಶದೊಳಗೆ ಗೃಹಬಳಕೆಯ ನೀರನ್ನು ಹಂಚುವ ಸಲುವಾಗಿ ಮತ್ತು ನೀರನ್ನು ದೇಶದ ಹೃದಯ ಭಾಗಕ್ಕೆ ರವಾನಿಸುವ ಸಲುವಾಗಿ ಪಾಕಿಸ್ತಾನವೇ ಕಾಲುವೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು. ಆದರೆ ಇದು ಬಹಳ ದುಬಾರಿಯಾದ ಪ್ರಯತ್ನವಾಗಿತ್ತು. ಇದನ್ನು ಅಮೆರಿಕಾದ ಸಹಾಯವಿಲ್ಲದೇ ಮಾಡುವುದು ಪಾಕಿಸ್ತಾನದ ಪಾಲಿಗೆ ದುರ್ಬರವಾಗಿತ್ತು.

ಭಾರತ ಪಾಕಿಸ್ತಾನಗಳ ಮಧ್ಯೆ ಶಾಂತಿ ಸ್ಥಾಪನೆಗಾಗಿ ಮಂದಾಕಿನಿ ನದಿಯ ಉಪ್ಪಿನಂಶ ತೆಗೆಯುವ ಸ್ಥಾವರ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಮತ್ತು ಹಣಕಾಸು ಹೂಡಿಕೆಯನ್ನು ಸೆಳೆಯಲು ಸಾಧ್ಯವಿದೆ.

ಕಳೆದ 10 ವರ್ಷಗಳಲ್ಲಿ ಅಮೆರಿಕಾ 22.5 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಹಣವನ್ನು ಪಾಕಿಸ್ತಾನಕ್ಕೆ ನೀಡಿತು. ಇದಕ್ಕೂ ಮೊದಲು ಅಮೆರಿಕಾ, ಪಾಕಿಸ್ತಾನದಲ್ಲಿ ಅಸ್ತಿತ್ವ ಕಂಡುಕೊಂಡಿರುವ ಅಲ್ ಖೈದಾ ಸಂಘಟನೆಯೊಂದಿಗೆ ಮಾತ್ರ ತನ್ನ ಯುದ್ಧವನ್ನು ಮುಂದುವರೆಸುವ ಭರವಸೆ ನೀಡಿತು. ಇದರಲ್ಲಿ ಬಹುಪಾಲು ಹಣವನ್ನು ಪಾಕಿಸ್ತಾನದ ಭ್ರಷ್ಟ ಸರ್ಕಾರಗಳು ದುರುಪಯೋಗಪಡಿಸಿಕೊಂಡಿವೆ. ಇಲ್ಲವೇ ತಾಲಿಬಾನ್‌ ಸಂಘಟನೆಗೆ ಹಣ ಸೋರಿಹೋಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಮಂದಾಕಿನಿ ಸರಿಯಾದ ಹಾದಿಯಲ್ಲೇ ಮುಂದುವರೆಯುತ್ತಿದೆ. ಮಾಂಡ್ವಿ, ಮುಂಡ್ರಾ ಮತ್ತು ಕಾಂಡ್ಲಾದ ಸ್ಥಾವರಗಳಿಂದ ದಕ್ಷಿಣ ಪಾಕಿಸ್ತಾನದ 27 ಮಿಲಿಯನ್ ಜನರಿಗೆ ಶುದ್ಧನೀರು ದೊರಕುತ್ತಿದೆ. ಇದರ ಸುತ್ತಲಿನ ಪ್ರದೇಶಗಳ ಕೃಷಿ, ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೂ ಇದರ ನೀರು ಉಪಯೋಗವಾಗುತ್ತಿದೆ.

ಭಾರತ, ಪಾಕಿಸ್ತಾನ ಸಂಘರ್ಷ ಚೆನಾಬ್ ನದಿ ನೀರಿನ ಸುತ್ತ ಹುಟ್ಟಿಕೊಂಡಿದೆ. ಆದರೆ ಅಂತರಾಷ್ಟ್ರೀಯ ನ್ಯಾಯಾಲಯ ಭಾರತದ ಪರವಾಗಿಯೇ ತೀರ್ಪು ನೀಡಿದೆ. ಭಾರತಕ್ಕೆ ಬಾಗ್ಲಿಹಾರ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯನ್ನು ಪೂರ್ಣಗೊಳಿಸುವಂತೆ ಆದೇಶ ನೀಡಿದೆ. ಹೀಗಾಗಿ ಪಾಕಿಸ್ತಾನದ ನೀರಿನ ಸಮಸ್ಯೆ ಶೀಘ್ರದಲ್ಲಿಯೇ ಇತ್ಯರ್ಥವಾಗುವ ಸಾಧ್ಯತೆ ಇದೆ.

ಗುಜರಾತ್‌ನ ಉತ್ತರಭಾಗದಲ್ಲಿ 2018ರೊಳಗೆ ಪ್ರತಿ ದಿನ 3,4 ಮಿಲಿಯನ್ ಕ್ಯುಬಿಕ್ ಮೀಟರ್ ನೀರಿನ ಉಪ್ಪಿನಂಶ ತೆಗೆಯುವ ಸ್ಥಾವರಗಳು ಸಕ್ರಿಯವಾಗಿ ಕಾರ್ಯನಿರತವಾಗಿರುತ್ತವೆ. ಗುಜರಾತ್, ರಾಜಸ್ತಾನ ಮತ್ತು ಪಾಕಿಸ್ತಾನದ ಸಿಂದ್ ಪ್ರಾಂತ್ಯದ ಜನರು ಈ ನೀರಿಗೆ ಗ್ರಾಹಕರಾಗಿದ್ದಾರೆ. 2020ರ ವೇಳೆಗೆ 36 ಮಿಲಿಯನ್‌ಗೂ ಹೆಚ್ಚು ಜನರ ನೀರಿನ ಅವಶ್ಯಕತೆಯನ್ನು ಈ ಸ್ಥಾವರಗಳು ಪೂರೈಸಬೇಕಾದ ಅವಶ್ಯಕತೆ ಬರುತ್ತದೆ. ಬಹು ಬಿಲಿಯನ್ ಡಾಲರ್ ನೀರಿನ ರಾಜತಾಂತ್ರಿಕ ಉದ್ಯಮದಲ್ಲಿ ಐತಿಹಾಸಿಕ ಬೆಳವಣಿಗೆಗಳು ಕಂಡುಬರುತ್ತವೆ.

ಲೇಖಕರು: ಸಿಂಧೂ ಕಶ್ಯಪ್​​
ಅನುವಾದಕರು: ವಿಶ್ವಾಸ್