ಇಲ್ಲಿ ಸರ್ವವೂ ಸಲ್ಮಾನ್ ಖಾನ್ ಮಯಂ...

ನಿನಾದ

0

ನಟ ಸಲ್ಮಾನ್ ಖಾನ್ ಬಾಲಿವುಡ್ ಅಂಗಳದಲ್ಲಿ ಬಹು ಬೇಡಿಕೆಯ ನಟ. ಜೊತೆಗೆ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಕೂಡ ಹೌದು. ಅಭಿಮಾನಿಗಳ ಪಾಲಿಗೆ ನೆಚ್ಚಿನ ಭಜರಂಗಿ ಭಾಯಿಜಾನ್ ಆಗಿರುವ ಸಲ್ಲು ಹೆಸರಲ್ಲಿ ಮುಂಬೈನ ಬಾಂದ್ರಾದಲ್ಲಿ ರೆಸ್ಟೋರೆಂಟ್ ಒಂದಿದೆ. ಸಲ್ಲು ಅಪ್ಪಟ ಅಭಿಮಾನಿಗಳು ಈ ರೆಸ್ಟೋರೆಂಟ್ ನ್ನು ನಡೆಸುತ್ತಿದ್ದಾರೆ.

ಭಾಯೀಜಾನ್ ಹೆಸರಿನ ಈ ರೆಸ್ಟೋರೆಂಟ್ ನಲ್ಲಿ ಎಲ್ಲ ನೋಡಿದರೂ ಸಲ್ಮಾನ್ ಖಾನ್ ಅವರೇ ಕಾಣ ಸಿಗುತ್ತಾರೆ. ಐವರು ಬಾಲ್ಯ ಸ್ನೇಹಿತರು ಸೇರಿ ಈ ರೆಸ್ಟೋರೆಂಟ್ ನ್ನು ನಡೆಸುತ್ತಿದ್ದಾರೆ. ರಾಹುಲ್ ಕುನಾಲ್ , ತರ್ಬೇಜ್ ಶೇಖ್, ಸೋಹಾಲಿ ಸಿದ್ದಿಕಿ, ಖುರ್ಷೀದ್ ಖಾನ್, ಜಾಫರ್ ಸೈಯದ್ ಹಾಗೂ ಯೂಸಫ್ ಈ ರೆಸ್ಟೋರೆಂಟ್ ಹಿಂದಿರುವ ಸೂತ್ರಧಾರಿಗಳು.ಇವರೆಲ್ಲಾ ಸಲ್ಮಾನ್ ಖಾನ್ ಅವರು ಓದಿದ ಶಾಲೆಯಲ್ಲೇ ಓದಿದವರಂತೆ.

ರೆಸ್ಟೋರೆಂಟ್ ನ ತುಂಬಾ ಸಲ್ಮಾನ್ ಖಾನ್ ಅವರ ಭಾವಚಿತ್ರಗಳು, ಅವರ ಖ್ಯಾತ ಡೈಲಾಗ್ ಗಳು, ಸಿನಿಮಾದ ಹೆಸರುಗಳೇ ರಾರಾಜಿಸುತ್ತಿವೆ. ಏಕ್ ಬಾರ್ ಜೋ ಮೈನೇ ಕಮಿಟ್ ಮೆಂಟ್ ಕರ್ದಿ ತೋ ಮೈನೇ ಅಪ್ನೇ ಆಪ್ ಕಿ ಭೀ ನಹೀ ಸುನ್ತಾ , ಮೈ ನೇ ಪ್ಯಾರ್ ಕಿಯಾ, ದೋಸ್ತಿ ಕೀ ಏಕ್ ಉಸೂಲ್ ಹೈನಾ ಮೇಡಮ್ , ನೋ ಸ್ವಾರಿ ನೋ ಥ್ಯಾಂಕ್ಯೂ ಮುಂತಾದ ಡೈಲಾಗ್ ಗಳು ರೆಸ್ಟೋರೆಂಟ್ ನ ಪ್ರಮುಖ ಆಕರ್ಷಣೆ.

ಇನ್ನು ರೆಸ್ಟೋರೆಂಟ್ ನ ಮೆನು ಕಾರ್ಡ್ ನಲ್ಲಿಯೂ ಸಲ್ಮಾನ್ ಖಾನ್ ಅವರ ಸಿನಿಮಾದ ಹೆಸರುಗಳೇ ಕಾಣ ಸಿಗುತ್ತಿವೆ. ಇಲ್ಲಿರುವ ಕೆಲ ತಿನಿಸುಗಳಿಗೆ ಸಲ್ಲುನ ಸಿನಿಮಾದ ಹೆಸರುಗಳನ್ನೇ ಇಡಲಾಗಿದೆ. ಅದರಲ್ಲಿಯೂ ಭಾರತೀಯ ಖಾದ್ಯಗಳನ್ನು ಜೈ ಹೋ ಅನ್ನೋ ವಿಭಾಗದಲ್ಲಿ ನೀಡಲಾಗುತ್ತಿದೆ. ಇನ್ನು ಬೆಳಗ್ಗಿನ ಉಪಹಾರವನ್ನು ಅಂದ ಅಪ್ನಾ ಅಪ್ನಾ ಅನ್ನೋ ಸಲ್ಲು ಅವರ ಸಿನಿಮಾದ ಹೆಸರಿನಡಿಯಲ್ಲಿ ವರ್ಗೀಕರಣ ಮಾಡಲಾಗಿದೆ. ಇನ್ನು ದಂಬಾಂಗ್-1, ದಂಬಾಂಗ್-2 ಮುಂತಾದ ವಿಭಾಗಗಳಲ್ಲಿ ರೆಸ್ಟೋರೆಂಟ್ ನ ತಿನಿಸುಗಳನ್ನು ವರ್ಗೀಕರಣ ಮಾಡಲಾಗಿದೆ.

ರೆಸ್ಟೋರೆಂಟ್ ಮಾಲೀಕರಿಗೂ ಹಾಗೂ ಸಲ್ಮಾನ್ ಖಾನ್ ಅವರದ್ದು 20 ವರ್ಷಗಳ ಸ್ನೇಹವಂತೆ. ಈ ವರ್ಷ ಏಪ್ರೀಲ್ ನಲ್ಲಿ ಈ ರೆಸ್ಟೋರೆಂಟ್ ಆರಂಭಗೊಂಡಿತ್ತು. ಇನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ತಂದೆ ಸಲೀಂಖಾನ್ ಭಾಗವಹಿಸಿದ್ದರಂತೆ. ರೆಸ್ಟೋರೆಂಟ್ ವಿನ್ಯಾಸ ನೋಡಿ ಅವರು ತುಂಬಾನೇ ಖುಷಿ ಪಡೆದಿದ್ದರಂತೆ. ಇನ್ನು ಸಲ್ಮಾನ್ ಖಾನ್ ಅವರು ಕೂಡ ಒಂದು ಬಾರಿ ರೆಸ್ಟೋರೆಂಟ್ ಗೆ ಸಪ್ರೈಸ್ ಭೇಟಿ ಕೊಟ್ಟಿದ್ದರಂತೆ. ರೆಸ್ಟೋರೆಂಟ್ ಅಂದ ನೋಡಿ ಅರೇ ಕ್ಷಣ ಮಾತು ಬರದಂತಾಗಿದ್ರಂತೆ ಸಲ್ಲು ಭಾಯಿ.

ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಈ ರೆಸ್ಟೋರೆಂಟ್ ಒಂದು ಮ್ಯೂಸಿಯಂ ಇದ್ದಂತೆ. ಇಲ್ಲಿರುವ ಆಹಾರಗಳನ್ನು ಸವಿಯೋದಕ್ಕಿಂತ ರೆಸ್ಟೋರೆಂಟ್ ನ್ನು ನೋಡೋದೇ ಅವರಿಗೆ ತುಂಬಾ ಖುಷಿಯಂತೆ. ಇನ್ನು ಸಲ್ಮಾನ್ ಖಾನ್ ಅವರ ಸಿನಿಮಾಗಳು ರಿಲೀಸ್ ಆದಾಗ ಇಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ನೀಡುತ್ತಾರಂತೆ. ಇನ್ನು ಮೊನ್ನೆ ಸಲ್ಮಾನ್ ಖಾನ್ ಅವರಿಗೆ ಹಿಟ್ ಆಂಡ್ ರನ್ ಪ್ರಕರಣದಿಂದ ರಿಲೀಫ್ ಸಿಕ್ಕಿದಕ್ಕಾಗಿ ಆ ದಿನ ಭಾಯೀಜಾನ್ ರೆಸ್ಟೋರೆಂಟ್ ನಲ್ಲಿ ಗ್ರಾಹಕರಿಗೆ ಭರ್ಜರಿ ಡೀಲ್ ಗಳನ್ನು ನೀಡಿದ್ದರಂತೆ. ಏನೇ ಆದ್ರೂ ಸಲ್ಮಾನ್ ಖಾನ್ ಅವರನ್ನು ಆರಾಧಿಸೋ ಅಭಿಮಾನಿಗಳಿಗಂತೂ ಈ ರೆಸ್ಟೋರೆಂಟ್ ಪುಟ್ಟ ದೇವಾಲಯದಂತೆ.

Related Stories