‘ಸೋತಾಗ ಧೈರ್ಯ, ಗೆದ್ದಾಗ ನಮ್ರತೆ ಇರಲಿ’- ಉದ್ಯಮಿಗಳಿಗೆ ಇನ್‌ಸೈಡ್ ಔಟ್ ಪುಸ್ತಕದ ಲೇಖಕಿ ಸೋ ಯಂಗ್ ಕಾಂಗ್ ಸಲಹೆ

ಟೀಮ್​​ ವೈ.ಎಸ್​​.ಕನ್ನಡ

0

ಸೋ ಯಂಗ್ ಕಾಂಗ್ ಅವರು 2015ರಲ್ಲಿ ಯುವರ್ ಸ್ಟೋರಿ ಏರ್ಪಡಿಸಿದ್ದ ಟೆಕ್ ಸ್ಪಾರ್ಕ್ಸ್‌ ನ ಕಾನ್ಫರೆನ್ಸ್ ಮತ್ತು ಪ್ರದರ್ಶನದ ಸ್ಪೀಕರ್ ಆಗಿದ್ದವರು. ಅವರು ಇನ್‌ಸೈಡ್ ಔಟ್: ಕಾನ್ವರ್ಸೇಶನ್ಸ್ ಎಬೌಟ್ ಲೀಡರ್ ಶಿಪ್ ಎಂಡ್ ಇನ್ನೋವೇಶನ್ ಇನ್‌ ಎ ನ್ಯೂ ಗ್ಲೋಬಲ್ ಎಕಾನಮಿ ಎಂಬ ಪುಸ್ತಕದ ಲೇಖಕರು. ಇದಲ್ಲದೇ ಒಂದು ವಿಭಿನ್ನ ಶಿಸ್ತುಬದ್ಧತೆಯ ಟ್ರಾನ್ಸಾಫಾರ್ಮರ್ ವಿನ್ಯಾಸ ಸಂಸ್ಥೆ ಅವೇಕನ್ ಗ್ರೂಪ್‌ನ ಸಂಸ್ಥಾಪಕರು ಮತ್ತು ಕೆಟಲಿಸ್ಟ್ ಹಾಗೂ ವೃತ್ತಿಪರರಿಗೆ ಉದ್ಯಮ ಪ್ರಯಾಣದ ಕುರಿತು ತಿಳಿಸುವ ಮೊಬೈಲ್ ಆ್ಯಪ್ ಗ್ನೋ ಬಿ ಎಂಬ ಸಂಸ್ಥೆಯ ಸಹಸಂಸ್ಥಾಪಕರು ಮತ್ತು ಸಿಇಓ ಸಹ ಹೌದು.

ಸೋ ಯಂಗ್ ಕಾಂಗ್ ಅವರು ತಮ್ಮ ದೃಷ್ಟಿಕೋನ, ಮೊಬೈಲ್ ಮೈಕ್ರೋ ಕಲಿಕೆ, ವೈಯಕ್ತಿಕವಾಗಿ ಉದ್ಯಮ ಯಾನದಲ್ಲಿ ಎದುರಿಸಿದ ಸಮಸ್ಯೆಗಳು ಮತ್ತು ನೂತನ ಉತ್ಸಾಹಿ ಉದ್ಯಮಿಗಳಿಗೆ ತಮ್ಮ ಸಂಪರ್ಕ ಮತ್ತು ಸ್ಪೂರ್ತಿದಾಯಕ ದೃಷ್ಟಿಕೋನದ ವಿವರಣೆ ನೀಡಿದ್ದಾರೆ. ಮೂಲತಃ ಕೊರಿಯಾದವರಾದ ಸೋ ಯಂಗ್ ಕಾಂಗ್ ಬೆಳೆದಿದ್ದು ಯುಎಸ್‌ನಲ್ಲಿ. ವೃತ್ತಿಬದುಕನ್ನು ಹುಡುಕಿಕೊಂಡದ್ದು ಜಪಾನ್ ಮತ್ತು ಸಿಂಗಪೂರ್‌ನಲ್ಲಿ.

ಸಂಶೋಧನಾ ವರದಿಗಳಲ್ಲಿ ಅವರು ಅನ್ವೇಷಕರ ಯಶಸ್ಸು ಅವರು ತಮಗೆ ತಾವೇ ಹಾಕಿಕೊಳ್ಳುವ ಕೇವಲ ವಿಧಾನ ಅಥವಾ ಚೌಕಟ್ಟಿನಿಂದ ಮಾತ್ರವೇ ಬರುವುದಿಲ್ಲ. ಅನ್ವೇಷಕರ ಒಳಮೌಲ್ಯಗಳು ಮತ್ತು ರೂಢಿಸಿಕೊಳ್ಳುವ ತತ್ವಗಳಿಂದ ಯಶಸ್ಸು ದೊರಕುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಇಂಥದ್ದೊಂದು ವಿಚಾರಧಾರೆಯೇ ಅವರನ್ನು ಇನ್‌ಸೈಡ್- ಔಟ್ ಎಂಬ ಪುಸ್ತಕ ಬರೆಯಲು ಪ್ರೇರೇಪಿಸಿದ್ದು.

ಸೋ ಯಂಗ್ ಕಾಂಗ್ ಅವರು ಗ್ನೋ ಬಿ ಎಂಬ ಮೊಬೈಲ್ ಆ್ಯಪ್ ಅನ್ನೂ ಸಹ ಬಿಡುಗಡೆಗೊಳಿಸಿದ್ದಾರೆ. ಉತ್ಸಾಹಿ ಯುವ ನಾಯಕರಿಗೆ ಚಾಣಾಕ್ಷ ಅಭಿವೃದ್ಧಿಯ ಕುರಿತು ವೈವಿಧ್ಯಮಯ ಮಾಹಿತಿಯ ಶಿಕ್ಷಣ ನೀಡುವ ಸಲುವಾಗಿಯೇ ಇರುವ ಮೊಬೈಲ್ ಆ್ಯಪ್ ಇದು. 2000ನೇ ಇಸವಿಯಲ್ಲಿ ದೆಹಲಿಯಲ್ಲಿ ದ ಯಂಗ್ ಪ್ರೊಫೆಶನಲ್ಸ್ ಗ್ರೂಪ್(ಯುವ ವೃತ್ತಿಪರರ ಸಮೂಹ) ಎಂಬ ಲಾಭದಾಯಕವಲ್ಲದ ಸಂಘಟನೆಯನ್ನು ಸಹ ಆರಂಭಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳ ವೃತ್ತಿಪರ ಕನಸಿಗೆ ನೀರೆರೆಯುವ ಗುರಿ ಉದ್ದೇಶ ಸೋ-ಯಂಗ್ ಕಾಂಗ್ ಅವರದ್ದು.

ಭಾರತದಲ್ಲಿ ನಡೆದ ಟೆಕ್ ಸ್ಪಾರ್ಕ್ ಕಾನ್ಫರೆನ್ಸ್ ನಲ್ಲಿ ಸೋ-ಯಂಗ್ ಕಾಂಗ್ ಅವರು ಭಾರತೀಯ ಉದ್ಯಮಶೀಲತೆಯಿಂದ ತಾವು ಪ್ರೇರಣೆ ಮತ್ತು ಶಕ್ತಿ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ನೀವು ಮಾಡುವ ತಪ್ಪುಗಳಿಂದ ನೀವೇನನ್ನಾದರೂ ಕಲಿತಾಗಲಷ್ಟೇ ಯಶಸ್ಸು ದೊರಕುವುದು ಸಾಧ್ಯ ಎನ್ನುವ ಸೋ ಯಂಗ್ ಕಾಂಗ್, ಸೋತಾಗ ಧೈರ್ಯ ಮತ್ತು ಯಶಸ್ಸು ಗಳಿಸಿದಾಗ ನಮ್ರತೆಯಿಂದ ವರ್ತಿಸಬೇಕು ಎಂದು ಪ್ರತಿಪಾದಿಸುತ್ತಾ ತಮ್ಮ ಮಾತು ಮುಗಿಸಿದರು.

ಲೇಖಕರು: ಮದನ್​ ಮೋಹನ್​ ರಾವ್​​
ಅನುವಾದಕರು: ವಿಶ್ವಾಸ್​​​