88,888 ಅನಾಥ ಶವ ಮಣ್ಣು ಮಾಡಿದ ತ್ರಿವಿಕ್ರಮ !

ಗಿರಿ

0

88,888..! 

ಇದು ಯಾವುದೋ ಶ್ರೀಮಂತರು ಬಳಸೋ ಕಾರ್‍ನ ಲಕ್ಕಿ ನಂಬರ್ ಅಲ್ಲ. ಫ್ಯಾನ್ಸಿ ನಂಬರ್​​ ಕೂಡ ಅಲ್ಲ. ಇದು ತ್ರಿವಿಕ್ರಮ ಮಹದೇವ್ ಅವರು ಕಳೆದ 44 ವರ್ಷದಲ್ಲಿ ಸಿಲಿಕಾನ್ ಸಿಟಿಯಲ್ಲಿ ದಿಕ್ಕಿಲ್ಲದೇ ಉಸಿರುಬಿಟ್ಟಿರುವ ಅನಾಥ ಶವಗಳ ಅಂತ್ಯಸಂಸ್ಕಾರ ಮಾಡಿರುವ ಲೆಕ್ಕವಿದು!

ರೋಗಪೀಡಿತ ತಾಯಿ ಮುದ್ದು ಬಸಮ್ಮ ಅವರೊಂದಿಗೆ ವಿಕ್ಟೋರಿಯ ಆಸ್ಪತ್ರೆ ಸೇರಿದ್ದ ಮಹದೇವ್ ಆಗ ಪುಟ್ಟ ಬಾಲಕ. ಅನಾರೋಗ್ಯದಿಂದ ಬಳಲಿ ಮೃತಪಟ್ಟ ಮಹದೇವ ತಾಯಿಯನ್ನು ಕೃಷ್ಣತಾತ ಎಂಬುವರು ಮಣ್ಣು ಮಾಡಿದ್ದರು. ಆ ನಂತರ ಅವರ ನೆರಳಲ್ಲಿ ಬೆಳೆದ ಮಹದೇವ್ ಅನಾಥ ಶವಗಳನ್ನು ಮಣ್ಣು ಮಾಡುವ ಕಾಯಕ ಮುಂದುವರೆಸಿದರು. 44 ವರ್ಷಗಳಿಂದ 88,888 ಅನಾಥ ಶವ ಮಣ್ಣು ಮಾಡಿದ್ದಾರೆ.

`ತ್ರಿವಿಕ್ರಮ'

ಪ್ರತಿ ನಿತ್ಯ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿಯೇ ಕಾಲ ಕಳೆಯುವ ಮಹದೇವ್ ಇಡೀ ಪೊಲೀಸ್ ಇಲಾಖೆಗೆ `ತ್ರಿವಿಕ್ರಮ' ಎಂದೇ ಚಿರಪರಿಚಿತ. ನಗರದ ಯಾವುದೇ ಭಾಗದಲ್ಲಿ ಅನಾಥ ಹೆಣ ಪತ್ತೆಯಾದರೂ ಅದಕ್ಕೆ ಮುಕ್ತಿ ಕಾಣಿಸುವುದು ಮಹದೇವ ಅವರೇ. ಈ ಅಮೂಲ್ಯ ಸೇವೆ ಪರಿಗಣಿಸಿ ಕನ್ನಡ ರಾಜ್ಯೋತ್ಸವ, ಕೆಂಪೇಗೌಡ, ನಮ್ಮ ಬೆಂಗಳೂರು ಪ್ರಶಸ್ತಿ ಲಭಿಸಿವೆ. ಆಟೋದಲ್ಲಿ ಅನಾಥ ಶವ ಸಾಗಿಸುವ ಮಹದೇವ್ ಸ್ಥಿತಿ ನೋಡಿ ಐಎಎಸ್ ಅಧಿಕಾರಿ ಮದನ್‍ಗೋಪಾಲ್ ಅವರು ಆಂಬ್ಯೂಲೆನ್ಸ್ ನೀಡಿದ್ದರು.

ಅನಾಥರಿಗೆ ಬಂಧು

“ನಾನು 9 ವರ್ಷದ ಬಾಲಕನಾಗಿದ್ದಾಗ ಅನಾಥ ಶವಗಳನ್ನು ಮಣ್ಣು ಮಾಡುವ ಕೆಲಸ ಆರಂಭಿಸಿದೆ. ಈವರೆಗೂ 88 ಸಾವಿರದ 888 ಶವಗಳನ್ನು ಮಣ್ಣು ಮಾಡಿz್ದÉೀನೆ. ಪ್ರತಿ ನಿತ್ಯ ಒಂದೆರಡು ಶವವಾದರೂ ಮಣ್ಣು ಮಾಡಬೇಕು. ಆದರೆ ಸ್ಮಶಾನದಲ್ಲಿ ಜಾಗವೇ ಇಲ್ಲ. ಒಂದೇ ಗುಂಡಿಯಲ್ಲಿ ನಾಲ್ಕೈದು ಹೆಣ ಹಾಕಿ ಮಣ್ಣು ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತ್ಯೇಕ ಜಾಗ ಗುರುತಿಸಿ ಮಣ್ಣು ಮಾಡೋಕೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಕೇಳಿಕೊಂಡೆ. ಏನೂ ಪ್ರಯೋಜನವಾಗಲಿಲ್ಲ. ಈಗಲೂ ಒಂದೇ ಗುಂಡಿಯಲ್ಲಿ ನಾಲ್ಕೈದು ಹೆಣ ಹೂಳಬೇಕಿದೆ'' ಎಂದು ಅನಾಥ ಶವಗಳನ್ನು ಮಣ್ಣು ಮಾಡಲು ಎದುರಾಗಿರುವ ಸಮಸ್ಯೆಯನ್ನು ತೋಡಿಕೊಳ್ಳುತ್ತಾರೆ ಮಹದೇವ್.

ಕಲಾಂ ಅಭಿಮಾನಿ !

ಮನೆಯಲ್ಲೂ ಕಲಾಂ. ಪ್ರತಿ ನಿತ್ಯ ಎದ್ದ ಕೂಡಲೇ ನೋಡುವುದು ಕಲಾಂ ಅವರನ್ನು. ಅನಾಥ ಹೆಣ ಸಾಗಿಸುವ ಆಂಬ್ಯೂಲೆನ್ಸ್​​​ನಲ್ಲೂ ಕಲಾಂ ಹಸನ್ಮುಖಿ ನಗು ..! ತ್ರಿವಿಕ್ರಮ ಮಹದೇವ ಅವರು ಮಾಜಿ ರಾಷ್ಟ್ರಪತಿ, ಅಬ್ದುಲ್ ಕಲಾಂ ಅವರ ಬಗ್ಗೆ ಬೆಳೆಸಿಕೊಂಡಿರುವ ಅಭಿಮಾನವಿದು. ಇದು ಕಲಾಂ ತೀರಿಕೊಂಡ ಬಳಿಕ ಹುಟ್ಟಿಕೊಂಡಿರುವ ಅಭಿಮಾನವಲ್ಲ. ಬರೋಬ್ಬರಿ ಮೂರು ವರ್ಷದ ಹಿಂದೆ ಕಲಾಂ ಅವರ ಕೈಗಳಿಂದ ಪ್ರಶಸ್ತಿ ಸ್ವೀಕರಿಸಿದ ದಿನದಿಂದ ಬೆಳೆಸಿಕೊಂಡಿರುವ ಅಭಿಮಾನವಿದು. 2012ರಲ್ಲಿ ಅಬ್ದುಲ್ ಕಲಾಂ ಅವರಿಂದ ಸ್ವೀಕರಿಸಿದ ಪ್ರಶಸ್ತಿ ಮೊತ್ತ 2.50 ಲಕ್ಷ ರೂ.ಗಳಿಂದಲೇ ಮಹದೇವ್ ಮನೆ ಲೀಸ್‍ಗೆ ಹಾಕಿಕೊಂಡಿರುವುದನ್ನು ಸ್ಮರಿಸುತ್ತಾರೆ.

"ನಾನು ಸಾಮಾನ್ಯ ಪ್ರಜೆಯಂತೆ ಮುಂಬಯಿಗೆ ಹೋಗಿದ್ದೆ. ಮಹದೇವ್ ಅಂತ ನನ್ನ ಹೆಸರು ಕರೆದಾಗ, ಅಬ್ದುಲ್ ಕಲಾಂ ಅವರೇ ಪ್ರಶಸ್ತಿ ನೀಡಿ ಗೌರವಿಸಿದಾಗ ತುಂಬಾ ಸಂತಸವಾಯಿತು. ಅಂತಹ ವ್ಯಕ್ತಿಯಿಂದ ನಾನು ಪ್ರಶಸ್ತಿ ಸ್ವೀಕರಿಸಿದೆ ಎಂಬುದು ನನಗೆ ಹಿರಿಮೆ'' ಎನ್ನುತ್ತಾರೆ. 

ಮಿಸೈಲ್ ಮ್ಯಾನ್ ಅಬ್ದುಲ್ ಕಲಾಂ ಅವರು ಹೃದಯಾಘಾತದಿಂದ ಮೃತಪಟ್ಟ ನಂತರ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಅಂತಹ ಮೇರು ವ್ಯಕ್ತಿಯ ಚಿತ್ರವನ್ನು ಪ್ರತಿನಿತ್ಯ ನೋಡುತ್ತಲೇ ದಿನದ ಕೆಲಸ ಆರಂಭಿಸುವ ಮಹದೇವ್ ಅವರ ಅಭಿಮಾನ ಮತ್ತು ಕಾರ್ಯ ಇತರರಿಗೆ ಮಾದರಿ ಎಂದೆನಿಸುತ್ತದೆ.