ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮುಂದುವರೆಸುವ ಇಚ್ಛೆಯೇ? ಮಾಹಿತಿಗಾಗಿ ವಿ ಮೇಕ್ ಸ್ಕಾಲರ್ಸ್.ಕಾಮ್‌ಗೆ ಭೇಟಿ ನೀಡಿ

ಟೀಮ್​​ ವೈ.ಎಸ್​​.ಕನ್ನಡ

ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮುಂದುವರೆಸುವ ಇಚ್ಛೆಯೇ? ಮಾಹಿತಿಗಾಗಿ ವಿ ಮೇಕ್ ಸ್ಕಾಲರ್ಸ್.ಕಾಮ್‌ಗೆ ಭೇಟಿ ನೀಡಿ

Tuesday November 24, 2015,

3 min Read

ದಾಮಿನಿ ಮಹಾಜನ್ ಮತ್ತು ಅರ್ಜುನ್ ಕೃಷ್ಣಾ ಇಬ್ಬರಿಗೂ ತಾವು ತಮ್ಮ ಶಿಕ್ಷಣವನ್ನು ವಿದೇಶದಲ್ಲಿ ಮುಂದುವರೆಸಲೇಬೇಕೆಂಬ ಇಚ್ಛೆಯಿತ್ತು. ಆದರೆ ತಮ್ಮಿಷ್ಟದ ವಿಷಯವನ್ನು ಬೋಧಿಸುವ ಶಿಕ್ಷಣ ಸಂಸ್ಥೆ ಮತ್ತು ಅದಕ್ಕೆ ಅಗತ್ಯವಿರುವ ಸ್ಕಾಲರ್ ಶಿಪ್ ನೀಡುವ ಸಂಸ್ಥೆಯನ್ನು ಹುಡುಕಲು ಅವರು ಸಾಕಷ್ಟು ಕಷ್ಟಪಡಬೇಕಾಯಿತು. ಏಕೆಂದರೆ ಒಂದೇ ಕಡೆ ಈ ಎರಡೂ ಮಾಹಿತಿಗಳು ದೊರೆಯುತ್ತಿರಲಿಲ್ಲ. ಇದೇ ವೇಳೆ ವಿದೇಶಕ್ಕೆ ಉನ್ನತ ಶಿಕ್ಷಣ ಪಡೆಯುವ ಸಲುವಾಗಿ ಹೋಗಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅಪ್‌ ಟು ಡೇಟ್ ಆಗಿದ್ದ ಮಾಹಿತಿ ಹೊಂದಿರುವ ಮಾಹಿತಿಯ ಮೂಲಗಳೇ ದೊರಕುತ್ತಿಲ್ಲ ಎಂಬ ವಿಚಾರ ಅವರಿಗೆ ತಿಳಿದುಬಂತು. ವಿದೇಶದಲ್ಲಿ ತಮಗೆ ಆಸಕ್ತಿ ಇರುವ ವಿಷಯಗಳನ್ನು ಬೋಧಿಸುವ ಕಾಲೇಜ್‌ಗಳ ಬಗ್ಗೆಯಾಗಲಿ ಅಥವಾ ವಿವಿಗಳ ಬಗ್ಗೆಯಾಗಲಿ ಫೀಸ್, ಜೀವನಕ್ಕೆ ತಗುಲುವ ವೆಚ್ಚ ಮುಂತಾದ ವಿವರಗಳನ್ನು ತಿಳಿಸುವ ಒಂದೇ ಒಂದು ಮಾಹಿತಿಯ ಮೂಲವೂ ಇಲ್ಲದಿರುವುದು ವಿಷಾದನೀಯ ಅಂಶ ಎಂದು ಅವರು ಕಂಡುಕೊಂಡರು.

ಇವರು ಮಾತ್ರವಲ್ಲದೇ ಇನ್ನೂ ಅನೇಕರಿಗೆ ಇಂತಹ ಕಹಿ ಅನುಭವವಾಗಿದೆ ಎಂಬುದು ಅವರಿಗೆ ತಿಳಿದುಬಂತು. ಸಾಕಷ್ಟು ಹುಡುಕಾಟದ ನಂತರ ಅಂದರೆ 2012ರಲ್ಲಿ ಅವರ ಅನುಕೂಲಕ್ಕೆ ತಕ್ಕುದಾದ ಶೆಫ್ಪೀಲ್ಡ್ ಯೂನಿವರ್ಸಿಟಿಯಲ್ಲಿ ತಮ್ಮ ಆಸಕ್ತಿಯ ಬಯೋ ಪ್ರೋಸೆಸ್ ಇಂಜನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಅವಕಾಶ ಅವರಿಗೆ ಒದಗಿಬಂತು. ಇದಕ್ಕೆ ಸರಿಯಾಗಿ ಯುಕೆ ಸರ್ಕಾರದಿಂದ ಪೂರ್ಣಪ್ರಮಾಣದ ಸ್ಕಾಲರ್ ಶಿಪ್ ಕೂಡ ದೊರಕಿತು. ಈ ಸ್ಕಾಲರ್ ಶಿಪ್ ವಿಮಾನಯಾನ ಸೌಲಭ್ಯದಿಂದ ಹಿಡಿದು ಅವರ ಟ್ಯೂಷನ್ ಶುಲ್ಕ, ಜೀವನಕ್ಕೆ ಅಗತ್ಯವಿರುವಷ್ಟು ಹಣ ಎಲ್ಲವನ್ನೂ ಒಳಗೊಂಡಿತ್ತು.

image


2013ರಲ್ಲಿ ದಾಮಿನಿ ಮತ್ತು ಅರ್ಜುನ್ ತಮ್ಮ ಜ್ಞಾನವನ್ನೆಲ್ಲಾ ಒಗ್ಗೂಡಿಸಿಕೊಂಡು ಸ್ನೇಹಿತರ, ಇತರ ವಿದ್ಯಾರ್ಥಿಗಳಿಂದ ಕಲಿತ ಅಂಶಗಳನ್ನು ಬಳಸಿಕೊಂಡು ವಿದೇಶ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೀಡಲಾರಂಭಿಸಿದರು. ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ ಮುಖಾಂತರ ಇವರನ್ನು ಸಂಪರ್ಕಿಸಿ ಅಗತ್ಯವಿರುವ ಮಾಹಿತಿಗಳನ್ನು ನೀಡಬಹುದು ಮತ್ತು ಮಾಹಿತಿಗಳನ್ನು ಹಂಚಿಕೊಳ್ಳಬಹುದು. ಅವರು ಪದವಿ ಪೂರೈಸುವುದರೊಳಗಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿರ್ಮಿಸಿದ್ದ ಗ್ರೂಪ್‌ಗಳು ತುಂಬಾ ಜನಪ್ರಿಯಗೊಂಡವು. ಸದ್ಯಕ್ಕೆ 150,000 ಬಳಕೆದಾರರು ಈ ಗ್ರೂಪ್‌ಗಳಲ್ಲಿ ಸಕ್ರಿಯರಾಗಿದ್ದಾರೆ.

ಉದ್ಯಮವಾಗಿ ಪರಿವರ್ತನೆ

ಪದವಿ ಮುಗಿಸಿದ ಬಳಿಕ ಏನು ಮಾಡಬೇಕೆಂಬುದರ ಕುರಿತು ದಾಮಿನಿ ಮತ್ತು ಅರ್ಜುನ್ ಅವರ ಮುಂದಿನ ಗುರಿ ಸ್ಪಷ್ಟವಾಗಿತ್ತು. ಫೇಸ್‌ಬುಕ್‌ನಲ್ಲಿ ತಮ್ಮನ್ನು ಅನುಸರಿಸದವರಿಂದ ಪ್ರೇರೇಪಿತರಾಗಿದ್ದ ಅವರು ತಮ್ಮದೇ ಆದ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ನಿರ್ಧಾರಕ್ಕೆ ಬಂದರು. ಹೀಗಾಗಿ ಇದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅವರು ತೀರ್ಮಾನಿಸಿದರು. ತಮ್ಮ ಸಂಸ್ಥೆಯ ಮೂಲಕ ಪ್ರಪಂಚದ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮಾಹಿತಿ ನೀಡುವಂತಹ ವ್ಯವಸ್ಥೆಗಾಗಿ ಅವರು ಯೋಜನೆ ರೂಪಿಸಿದರು. ಜಾಗತಿಕ ವಿದ್ಯಾರ್ಥಿ ಸಮುದಾಯದ ಮೇಲೆ ಗಮನಹರಿಸಿದ್ದ ಕಾರಣ ಸ್ವಾಭಾವಿಕವಾಗಿಯೇ ಒಂದು ಡಾಟ್ ಕಾಮ್‌ ವಿಳಾಸ ಹೊಂದಿರುವ ಹೆಸರನ್ನು ತಮ್ಮ ವೆಬ್‌ಸೈಟ್‌ ಗೆ ಇಡಲು ಅವರು ಇಚ್ಚಿಸಿದರು. ಹೀಗೆ ವೆಬ್‌ಸೈಟ್‌ನ ಹೆಸರು ವಿ ಮೇಕ್‌ ಸ್ಕಾಲರ್ಸ್.ಕಾಮ್ ಎಂಬ ಹೆಸರು ಅಂತಿಮವಾಯಿತು. ವಿ ಮೇಕ್ ಸ್ಕಾಲರ್ಸ್.ಕಾಮ್(ಡಬ್ಲ್ಯುಎಂಎಸ್) ಮೂಲಕ ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ದೊರಕುವ ಸ್ಕಾಲರ್‌ಶಿಪ್‌ಗಳು, ಇಂಟರ್ನ್‌ಶಿಪ್‌ಗಳ ಸಮಗ್ರ ಮಾಹಿತಿಯನ್ನು ಪಡೆಯಬಹುದು.

ಆದರೆ ದಾಮಿನಿ ಹಾಗೂ ಅರ್ಜುನ್ ಆರಂಭಿಸಿರುವ ವಿ ಮೇಕ್ ಸ್ಕಾಲರ್ಸ್. ಕಾಮ್‌ನ ಆದಾಯ ಮಾದರಿ ಇನ್ನೂ ಸ್ಪಷ್ಟವಾಗಿ ರೂಪುಗೊಂಡಿಲ್ಲ. ಉನ್ನತ ವಿದ್ಯಾಭ್ಯಾಸ ವಲಯದಲ್ಲಿ ಪಾರದರ್ಶಕ ಮಾಹಿತಿ ಒದಗಿಸುವ ಸಂಸ್ಥೆಯಾಗಿ ಕೇವಲ ಲಾಭಗಳಿಕೆಯಷ್ಟೇ ಇದರ ಉದ್ದೇಶವಲ್ಲ. ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿ ಒದಗಿಸುವುದು, ಆ ಮೂಲಕ ತಮಗೆ ಅಗತ್ಯವಿರುವಷ್ಟು ಲಾಭವನ್ನು ಗಳಿಸುವುದು ಇದರ ಉದ್ದೇಶ.

ಅರ್ಜುನ್ ಹೇಳುವಂತೆ, ಸಮರ್ಪಕ ವ್ಯಕ್ತಿಗಳೊಂದಿಗೆ, ಸಮರ್ಪಕ ಅವಕಾಶಗಳೊಂದಿಗೆ ಸಂಪರ್ಕ ಹೊಂದುವುದು ಬಹಳ ಮುಖ್ಯವಾದ ಅಂಶ. ತಮ್ಮ ವೆಬ್‌ಸೈಟ್‌ನ ಮೂಲಕ ಆಕಾಂಕ್ಷಿತ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮಾಹಿತಿಗಳನ್ನು ಸಮರ್ಪಕವಾಗಿ ನೀಡುವುದು ವೆಬ್‌ಸೈಟ್‌ನ ಉದ್ದೇಶ. ದಾಮಿನಿಯವರ ಪ್ರಕಾರ, ಕೇವಲ ಸಾಮಾಜಿಕ ಮಾಧ್ಯಮ ಸಮುದಾಯವನ್ನು ನಿರ್ವಹಿಸುವುದು ನಿಜಕ್ಕೂ ಕಷ್ಟಕರವಾದ ಕೆಲಸವಾಗಿತ್ತು. ಡಾಟಾ ಸಹ ಬಳಕೆದಾರರ ಸ್ನೇಹಿಯಾಗಿರಲಿಲ್ಲ. ಹೀಗಾಗಿ ವಿ ಮೇಕ್ ಸ್ಕಾಲರ್ಸ್‌.ಕಾಮ್ ಮೂಲಕ ಮಾಹಿತಿ ನೀಡುವ ಕಾರ್ಯವನ್ನು ಆರಂಭಿಸಲಾಯಿತು.

image


ಬದಲಾವಣೆ ಮೂಡಿಸುವತ್ತ

ಪ್ರಸ್ತುತ 200 ದೇಶಗಳ ವಿದ್ಯಾರ್ಥಿಗಳು ವಿ ಮೇಕ್ ಸ್ಕಾಲರ್ಸ್.ಕಾಮ್ ಅನ್ನು ಬಳಸುತ್ತಿದ್ದಾರೆ. ಕಳೆದ 5 ತಿಂಗಳಲ್ಲಿ ಇವರ ವೆಬ್‌ಸೈಟ್‌ ಅನ್ನು 2 ಮಿಲಿಯನ್‌ ಜನ ವೀಕ್ಷಿಸಿದ್ದಾರೆ. 8 ಮಂದಿ ಪೂರ್ಣಕಾಲಿಕ ಉದ್ಯೋಗಿಗಳನ್ನು ಹೊಂದಿರುವ ಈ ಸಂಸ್ಥೆ ವಿವಿಧ ದೇಶಗಳ ಅನೇಕ ಬ್ಲಾಗರ್‌ಗಳ ಬೆಂಬಲವನ್ನು ಪಡೆದಿದೆ ಮತ್ತು ವಿ ಮೇಕ್ ಸ್ಕಾಲರ್ಸ್.ಕಾಮ್‌ಗೆ ಈ ಬ್ಲಾಗರ್‌ಗಳು ಮಾಹಿತಿಯನ್ನೂ ಪೂರೈಸುತ್ತಿದ್ದಾರೆ. ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮಾಹಿತಿ ನೀಡುವ ಮೂಲಕ ಈ ವೆಬ್‌ಸೈಟ್‌ ಜನಪ್ರಿಯಗೊಂಡಿದೆ.

ಪ್ರಪಂಚದಲ್ಲಿ ಬದಲಾವಣೆ ತರಲು ಶಿಕ್ಷಣ ಅತ್ಯಂತ ಪ್ರಭಾವಶಾಲಿಯಾದ, ಶಕ್ತಿಶಾಲಿಯಾದ ಅಸ್ತ್ರ ಎಂಬ ನೆಲ್ಸನ್ ಮಂಡೇಲಾರ ಮಾತಿನಂತೆ, ವಿ ಮೇಕ್ ಸ್ಕಾಲರ್ಸ್.ಕಾಮ್ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರ ಸ್ನೇಹಿಯಾಗಿ ಕಾರ್ಯನಿರ್ವಹಿಸುವಂತಹ ಕೌಶಲ್ಯಗಳನ್ನು ದೊರಕಿಸುವಂತಹ ವೆಬ್‌ಸೈಟ್ ನಿರ್ಮಾಣಕ್ಕಾಗಿ ದಾಮಿನಿ ಹಾಗೂ ಅರ್ಜುನ್ ಅವರ ತಂಡ ನಿರಂತರವಾಗಿ ಶ್ರಮಿಸುತ್ತಿದೆ. ಸದ್ಯಕ್ಕೆ ವಿದೇಶಗಳ ಕಾಲೇಜು, ವಿವಿಗಳಲ್ಲಿ ಲಭ್ಯವಿರುವ ಕೋರ್ಸ್‌ಗಳು, ಜೀವನಕ್ಕೆ ತಗುಲುವ ವೆಚ್ಚ, ಸ್ಕಾಲರ್‌ ಶಿಪ್‌ ಮಾದರಿಯನ್ನು ತಿಳಿಸುವ ಸಲುವಾಗಿ ಅಲ್ಲಿನ ವಿವಿಗಳ ಜೊತೆ ಕೈಜೋಡಿಸಿ ಸಮರ್ಪಕ ಮಾಹಿತಿ ನೀಡುವ ಮಾದರಿ ವೆಬ್‌ಸೈಟ್‌ ಆಗಿ ಮುಂದುವರೆಯುವುದು ವಿ ಮೇಕ್ ಸ್ಕಾಲರ್ಸ್.ಕಾಮ್ ನ ಗುರಿ.

ಲೇಖಕರು: ಶಾರಿಕಾ ನಾಯರ್​​

ಅನುವಾದಕರು: ವಿಶ್ವಾಸ್​​​​