ತರಗತಿಗಳು ಯಾರಿಗೆ ಬೇಕು..?

ಟೀಮ್​​ ವೈ.ಎಸ್​​.ಕನ್ನಡ

ತರಗತಿಗಳು ಯಾರಿಗೆ ಬೇಕು..?

Wednesday November 25, 2015,

5 min Read

ಶಿಕ್ಷಣ ವ್ಯವಸ್ಥೆ ಮತ್ತು ಅದರಲ್ಲಾಗಬೇಕಾದ ಬದಲಾವಣೆಗಳ ಬಗ್ಗೆ ಪ್ರಥಮ್ ಸಂಸ್ಥೆಯ, ಸಂಸ್ಥಾಪಕ ಹಾಗೂ ಸಿಇಓ ಮಾಧವ್ ಚೌಹಾಣ್ ಅವರು ಬರೆದ `ರಿಇಮ್ಯಾಜಿನಿಂಗ್ ಇಂಡಿಯಾ' ಎಂಬ ಪ್ರಬಂಧ ಇದು. ಎಲ್ಲಾ ಮಕ್ಕಳೂ ಶಾಲೆಗೆ ಹೋಗಬೇಕು, ಒಳ್ಳೆ ಶಿಕ್ಷಣ ಪಡೆಯಬೇಕು ಅನ್ನೋ ಉದ್ದೇಶದಿಂದ್ಲೇ ಆರಂಭವಾಗಿದ್ದು `ಪ್ರಥಮ್' ಸಂಸ್ಥೆ. ತಮ್ಮ ಕೆಲಸದ ಅವಧಿಯಲ್ಲಿ ಶೈಕ್ಷಣಿಕ ಪ್ರಗತಿಗೆ ಭಾರತ ಸಾಕಷ್ಟು ಶ್ರಮಿಸಿದೆ ಅನ್ನೋದು ಮಾಧವ್ ಅವರ ಅಭಿಪ್ರಾಯ. ಆದ್ರೆ ಅಸ್ತಿತ್ವದಲ್ಲಿದ್ದ ರಚನೆ ಹಾಗೂ ವ್ಯವಸ್ಥೆಯನ್ನೇ ವಿಸ್ತರಿಸಿದ್ರಿಂದ ಸರ್ಕಾರದ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ. ಬದಲಾಗುತ್ತಿರುವ ಭಾರತದ ಬೇಡಿಕೆಗಳನ್ನು ಪೂರೈಸುವಲ್ಲಿ ಅಸಮರ್ಪಕ ವ್ಯವಸ್ಥೆ ವಿಫಲವಾಗಿದೆ. ಇದು ಮೂಲಭೂತ ದಿವಾಳಿತನವೂ ಹೌದು ಎನ್ನುತ್ತಾರೆ ಅವರು. ಭಾರತೀಯ ಶಾಲೆಗಳ ಸಾಂಪ್ರದಾಯಿಕ ಮಾದರಿಯಿಂದಾಗಿ ಗ್ರಾಮೀಣ ಪ್ರದೇಶದ ಬಡ ಮಕ್ಕಳ ಶಿಕ್ಷಣದ ಹಸಿವು ನೀಗಿಲ್ಲ. ಅಲ್ಲಿ ಬದುಕಲು ಸಾಧ್ಯವಿಲ್ಲದಂತಹ ಅಸಹಾಯಕರನ್ನು ಹೊರದಬ್ಬಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಆದ್ರೆ ಕಳೆದ ಕೆಲ ವರ್ಷಗಳಿಂದ ಈ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಜವಾದ ಪ್ರಯತ್ನ ನಡೆಯುತ್ತಿದೆ.

image


2005ರಿಂದ್ಲೂ ಮಾಧವ್ ಚೌಹಾಣ್, ಶಿಕ್ಷಣದ ಸ್ಥಿತಿಯ ವಾರ್ಷಿಕ ವರದಿಯನ್ನು ತಯಾರಿಸುತ್ತಿದ್ದಾರೆ. ದೇಶದ 15,000 ಹಳ್ಳಿಗಳಲ್ಲಿರುವ ಸ್ವಯಂಸೇವಕರು ನೀಡಿದ ಅಂಕಿ - ಅಂಶಗಳನ್ನು ಆಧರಿಸಿ ಈ ವರದಿ ತಯಾರಿಸಲಾಗ್ತಿದೆ. ಈ ವರದಿ ಪ್ರಕಾರ ವರ್ಷದಿಂದ ವರ್ಷಕ್ಕೆ ಶಾಲೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯೇನೋ ಹೆಚ್ಚುತ್ತಿದೆ, ಆದ್ರೆ ಕಲಿಕಾ ಕೋಷ್ಟಕ ಮಾತ್ರ ಇನ್ನೂ ತಳಮಟ್ಟದಲ್ಲೇ ಇದೆ.

ಸಮಸ್ಯೆಯ ಮೂಲ...

2012ರಲ್ಲಿ 10 ವರ್ಷದೊಳಗಿನ ಮಕ್ಕಳ ನೋಂದಣಿ ಶೇ. 96ರಷ್ಟಿತ್ತು. ಅವರಲ್ಲಿ 5ನೇ ತರಗತಿಯ ಅರ್ಧದಷ್ಟು ಮಕ್ಕಳು ಮಾತ್ರ ಎರಡನೇ ತರಗತಿಯ ಪುಸ್ತಕಗಳನ್ನು ಓದುವ ಸಾಮಥ್ರ್ಯ ಹೊಂದಿದ್ದಾರೆ. ನಾಲ್ವರಲ್ಲಿ ಮೂವರು ಮಕ್ಕಳು ಸರಳ ಗಣಿತ ಮಾಡಲು ಶಕ್ತರಿಲ್ಲ. ಶೇ.30ರಷ್ಟು ಮಕ್ಕಳು ಮಾತ್ರ ಪ್ರೌಢಶಾಲೆಯ ಮೆಟ್ಟಿಲೇರ್ತಿದ್ದಾರೆ. ಲಿಂಗ ತಡೆ, ವೆಚ್ಚ ಭರಿಸಲಾಗದ ಅಸಹಾಯಕತೆ, ಹತ್ತಿರದಲ್ಲಿ ಶಾಲೆಗಳ ಅಲಭ್ಯತೆ, ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಹೀಗೆ ವಿವಿಧ ಕಾರಣಗಳಿಂದ ಪ್ರೌಢ ಶಿಕ್ಷಣ ಪಡೆಯದೇ ಇರುವವರೇ ಹೆಚ್ಚು.

8ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳ ಕಲಿಕಾ ಗುಣಮಟ್ಟ ತೀರಾ ಕಳಪೆಯಾಗಿದೆ, ಇದಕ್ಕೆ ಸಾಕ್ಷಿ ಎಂಬಂತೆ `ಅಂತರಾಷ್ಟ್ರೀಯ ಸ್ಟೂಡೆಂಟ್ ಅಸೆಸ್‍ಮೆಂಟ್ ಪ್ರೋಗ್ರಾಮ್' ಸಮೀಕ್ಷೆಯ ಪ್ರಕಾರ ಭಾರತದ 2 ರಾಜ್ಯಗಳು ವಿಶ್ವಮಟ್ಟದಲ್ಲಿ ಭಾಗವಹಿಸಿದ್ದ 74 ಸ್ಪರ್ಧಿಗಳಲ್ಲಿ ಕ್ರಮವಾಗಿ 72 ಮತ್ತು 73ನೇ ಸ್ಥಾನ ಪಡೆದಿವೆ. ಮಕ್ಕಳಲ್ಲಿ ಗಣಿತ ಹಾಗೂ ಸಾಹಿತ್ಯದ ಜ್ಞಾನ ಕಡಿಮೆಯಿದೆ ಅನ್ನೋದು ಸಮೀಕ್ಷೆಯಿಂದ ದೃಢಪಟ್ಟಿದೆ. ಸಾಮಾನ್ಯ ಜ್ಞಾನ ಮತ್ತು ಕಲಿಕಾ ಕೌಶಲ್ಯಗಳನ್ನು ಹೆಚ್ಚಿಸುವುದನ್ನು ಬಿಟ್ಟು, ಪಠ್ಯಕ್ರಮ ಮುಗಿಸುವ ತರಾತುರಿಯಲ್ಲಿ ತೊಡಗಿರುವುದೇ ಈ ಎಲ್ಲಾ ಸಮಸ್ಯೆಗಳ ಮೂಲ. ಮಕ್ಕಳಿಗೆ ಎಷ್ಟು ಅರ್ಥವಾಗಿದೆ ಎನ್ನುವತ್ತ ಗಮನಹರಿಸದೇ ಶಿಕ್ಷಕರು ಪಾಠವನ್ನು ಬೇಗ ಮುಗಿಸುವ ಆತುರದಲ್ಲಿರುತ್ತಾರೆ. ವಿವಿಧ ಹಂತಗಳಲ್ಲಿ ಕೌಶಲ್ಯ ಸಾಧನೆಯ ನಿರ್ಧರಿಸುವಿಕೆ ಇಲ್ಲದಿದ್ರೆ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಪ್ರೌಢಶಾಲೆಗೆ ಬರುವಷ್ಟರಲ್ಲಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಮತ್ತು ಕೌಶಲ್ಯದ ಕೊರತೆ ಕಾಣಿಸುತ್ತೆ. ವೃತ್ತಿಪರ ತರಬೇತಿಗೆ ಅವರು ಸಿದ್ಧರಾಗಿರುವುದಿಲ್ಲ. ಅವರೆದುರು ಕೇವಲ ಉನ್ನತ ಶಿಕ್ಷಣದ ಅವಕಾಶ ಮಾತ್ರ ಇರುತ್ತದೆ. ಕೆಲಸಕ್ಕೆ ಸೇರಿದ ಮೇಲೆ ವ್ಯವಸ್ಥೆ ತಮಗೆ ಕಲಿಸದೇ ಇದ್ದಿದ್ದನ್ನು ಕಲಿಯುವ ಅನಿವಾರ್ಯತೆ ಎದುರಾಗುತ್ತದೆ.

ಈ ವ್ಯವಸ್ಥೆ ಕೈಗಾರಿಕಾ ಕ್ರಾಂತಿಯನ್ನು ಪ್ರತಿಬಿಂಬಿಸುತ್ತದೆ. ಇದು ಆಧುನಿಕ ಯುಗಕ್ಕೆ ಸೂಕ್ತವಾದುದಲ್ಲ. ಸಾಮೂಹಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಗುರಿಯೊಂದಿಗೆ ತರಗತಿಗಳನ್ನು ನಡೆಸಲಾಗುತ್ತದೆ. ಸಂವಹನಕ್ಕಿಂತ ಹೆಚ್ಚಾಗಿ ಭಾಷೆ ಹಾಗೂ ವ್ಯಾಕರಣಕ್ಕೆ ಹೆಚ್ಚು ಒತ್ತುಕೊಡಲಾಗ್ತಿದೆ. ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವ ಬದಲು ವಿಜ್ಞಾನದ ನಿಯಮಗಳನ್ನು ಕಂಠಪಾಠ ಮಾಡಿಸುತ್ತಿದ್ದೇವೆ. ಇದು ತೊಡಗುವಿಕೆ ಮತ್ತು ಕುತೂಹಲವನ್ನು ಕೊಂದು ಹಾಕುತ್ತಿದೆ. ಕಳೆದ ಶತಮಾನದ ಮೂಲಭೂತ ಅಗತ್ಯಗಳನ್ನಾಗ್ಲೀ, ಅಗತ್ಯ ಜೀವನ ಕೌಶಲ್ಯಗಳನ್ನಾಗ್ಲೀ, ಪೈಪೋಟಿಯನ್ನೊಳಗೊಂಡ ಭವಿಷ್ಯಕ್ಕೆ ಬೇಕಾದ ಅಂಶಗಳನ್ನಾಗ್ಲೀ ಮಕ್ಕಳಿಗೆ ಕಲಿಸುತ್ತಿಲ್ಲ.

ಕಾಲೇಜುಗಳು ಸಮಾಜದಿಂದ ಬೇರ್ಪಟ್ಟಿವೆ...

2009ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆ ಶಾಲೆಯ ಹಕ್ಕನ್ನು ಪ್ರತಿಪಾದಿಸುತ್ತಿದೆ. ಆದ್ರೆ ನಿಜವಾದ ಕಲಿಕೆ ಮತ್ತು ಶಿಕ್ಷಣದ ನಡುವಣ ಪರಸ್ಪರ ಸಹಯೋಗ ಸಮರ್ಪಕವಾಗಿಲ್ಲ. ದುರದೃಷ್ಟಕರ ವಿಚಾರ ಅಂದ್ರೆ ವಿಫಲವಾದ ಹಳೆಯ ಪ್ರಯತ್ನಗಳನ್ನೇ ಆರ್‍ಟಿಇಯಲ್ಲಿ ಮಾಡಲಾಗ್ತಿದೆ. 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪ್ರಾಥಮಿಕ ಶಿಕ್ಷಣ ಸಿಗಬೇಕು ಅನ್ನೋ ಉದ್ದೇಶದಿಂದ ಸರ್ವಶಿಕ್ಷಾ ಅಭಿಯಾನವನ್ನು ಜಾರಿಗೆ ತರಲಾಗಿದೆ. ಮಕ್ಕಳ ಹಾಜರಾತಿ ಹೆಚ್ಚಿಸಲು ಮನೆಯಿಂದ ಒಂದು ಕಿಲೋಮೀಟರ್ ದೂರದೊಳಗೆ ಶಾಲೆಗಳ ಲಭ್ಯತೆ ಹಾಗೂ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕೂಡ ಜಾರಿ ಮಾಡಲಾಗಿದೆ. ಆದ್ರೆ ಶೇ.87 ರಷ್ಟು ಶಾಲೆಗಳಲ್ಲಿ ಮಾತ್ರ ಮಧ್ಯಾಹ್ನದ ಬಿಸಿಯೂಟ ನೀಡಲಾಗ್ತಿದೆ. ಕೆಲ ರಾಜ್ಯಗಳಲ್ಲಂತೂ ಮಕ್ಕಳ ಹಾಜರಾತಿ ಶೇ.50-80ರಷ್ಟಿದೆ. ಮಕ್ಕಳನ್ನು ಶಾಲೆಗಳತ್ತ ಸೆಳೆಯಲು ಆಹಾರವೊಂದೇ ಮಾಧ್ಯಮವಲ್ಲ ಅನ್ನೋದು ಇದರಿಂದ ಸಾಬೀತಾಗಿದೆ. ಇದಕ್ಕೂ ಮೊದಲು 1986ರಲ್ಲಿ ಜಾರಿಯಾದ ನೂತನ ಶಿಕ್ಷಣ ನೀತಿ, ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಯ ಆದ್ಯತೆಯೆಂದು ಘೋಷಿಸಿತ್ತು. 1950ರಲ್ಲಿ ಭಾರತದ ಸಂವಿಧಾನದಲ್ಲೇ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಜಾರಿ ಮಾಡಲಾಗಿತ್ತು. ನಮ್ಮ ಶಾಲೆ ಮತ್ತು ಕಾಲೇಜುಗಳನ್ನು ಸಮಾಜದಿಂದ ಬೇರ್ಪಡಿಸಲಾಗಿದೆ. ಅಸಾಧಾರಣ ವ್ಯಕ್ತಿಗಳನ್ನು ಹೊರಗಿಟ್ಟಿದ್ರಿಂದ, ನೇಮಕವಾದವರಿಂದ ಸಾಮಾನ್ಯ ಜ್ಞಾನ ಅಥವಾ ಯಾವುದೇ ಕೌಶಲ್ಯವನ್ನು ಕಲಿಸುವುದು ಸಾಧ್ಯವಾಗ್ತಿಲ್ಲ. ನುರಿತ ಶಿಕ್ಷಕರು ಮತ್ತು ಜ್ಞಾನಿಗಳಿಗೆ ಅವಕಾಶ ಸಿಗುತ್ತಿಲ್ಲ. ಯಾಕಂದ್ರೆ ಪ್ರಮಾಣೀಕರಣ ಪ್ರಕ್ರಿಯೆ, ಬದಲಾವಣೆಯನ್ನೇ ಬಯಸದ ಮಂಡಳಿಗಳು, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರದಿಂದ ನಿಯಂತ್ರಿಸಲ್ಪಡುತ್ತಿದೆ.

ಮುಕ್ತ ಶಾಲೆಗಳು...

ಇಕ್ಕಟ್ಟಾದ ವಿಧಾನಗಳಿಂದ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ ಅಂತಾ 1986ರ ಶಿಕ್ಷಣ ನೀತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮುಕ್ತ ವಿವಿಗಳು ಮತ್ತು ಶಾಲೆಗಳೇನೋ ಆರಂಭವಾಗಿವೆ ಆದ್ರೆ ಅವು ವ್ಯವಸ್ಥೆಯ ಮಲಮಕ್ಕಳಿದ್ದಂತೆ. ಮುಖ್ಯವಾಹಿನಿಯ ಸಂಸ್ಥೆಗಳಿಂದ ದೂರವಿರುವವರಿಗೆ ಅವು ಅವಕಾಶದ ಬಾಗಿಲನ್ನೇನೋ ತೆರೆದಿವೆ, ಆದ್ರೆ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳ ವೈಶಿಷ್ಟ್ಯಗಳ ಹೊರೆಯನ್ನೇ ಹೊತ್ತುಕೊಂಡಿವೆ. ಇವನ್ನೆಲ್ಲ ನೋಡ್ತಾ ಇದ್ರೆ ಶಾಲೆ ಮತ್ತು ಕಾಲೇಜುಗಳು ಯಾಕೆ ಬೇಕು ಎಂಬ ಪ್ರಶ್ನೆ ಕೂಡ ಉದ್ಭವವಾಗುತ್ತದೆ. ಶಾಲೆಗಳ ಕೆಲಸ ಜ್ಞಾನವನ್ನು ವರ್ಗಾಯಿಸುವುದು. ಇದರ ಹೊರತಾಗಿಯೂ ಎರಡು ಸೇವೆಗಳನ್ನು ಒದಗಿಸಬೇಕಿದೆ. ಮೊದಲನೆಯದು ಮಕ್ಕಳಿಗೆ ಡೇ ಕೇರ್ ಸೌಲಭ್ಯ, ಕೆಲಸಕ್ಕೆ ಹೋಗುವ ಪೋಷಕರಿಗೆ ತೊಂದರೆಯಾಗದಂತೆ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು. ಎರಡನೆಯದು, ಸಾಮಾಜಿಕ ಕೌಶಲ್ಯ ಕಲಿಕೆಗೆ ಅಗತ್ಯವಾದ ವಾತಾವರಣವನ್ನು ನಿರ್ಮಿಸುವುದು. ಇವೆರಡು ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಸಮುದಾಯದಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು, ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬೇಕಿದೆ. ಈ ಮೂಲಕ ಬಾಲ್ಯದಿಂದ್ಲೇ ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಗುರುತಿಸಬೇಕು. ಅದೃಷ್ಟವಶಾತ್ ವಿನೂತನ ಮಾಹಿತಿ ತಂತ್ರಜ್ಞಾನ ಕಲಿಕಾ ಪ್ರಕ್ರಿಯೆಯಲ್ಲಿ ಬದಲಾವಣೆಗೆ ಅವಕಾಶಗಳನ್ನು ಕಲ್ಪಿಸಿದೆ. ಸದ್ಯ ಶಾಲೆಗಳು ಕಲ್ಪಿಸದ ಹೊಸ ಮಾರ್ಗಗಳನ್ನು ಪರಸ್ಪರ ಸಂವಹನದ ಮೂಲಕ ತಂತ್ರಜ್ಞಾನ ಒದಗಿಸ್ತಾ ಇದೆ. ತಂತ್ರಜ್ಞಾನ ಇಡೀ ಪ್ರಕ್ರಿಯೆಯ ಬಗ್ಗೆ ಮರು ಚಿಂತನೆಯನ್ನು ಸಕ್ರಿಯಗೊಳಿಸುತ್ತದೆ.

ಇಲ್ಲಿ ಮತ್ತು ನಂತರ...ನನ್ನ ಸಲಹೆ...

ಆರ್‍ಟಿಇ ಕಾಯ್ದೆ ವಯಸ್ಸಿನ ವರ್ಗೀಕರಣ ವ್ಯವಸ್ಥೆಯಿಂದ ಹೊರಬರಬೇಕು. ಸಮಾಜದಲ್ಲಿ ಮತ್ತು ಶೈಕ್ಷಣಿಕವಾಗಿ ಕಲಿಕಾ ಗುರಿಯನ್ನು ತಲುಪಲು ಅವಕಾಶ ಕಲ್ಪಿಸುವ ವಯಸ್ಸು-ಹಂತದ ವ್ಯವಸ್ಥೆಯನ್ನು ಕಲ್ಪಿಸಬೇಕು. ಇದರಲ್ಲೂ ಮೂರು ಹಂತಗಳಿವೆ. ಮೊದಲನೆಯದು 8-10 ವರ್ಷದೊಳಗೆ, ಓದುವುದು, ಬರೆಯುವುದು, ಗಣಿತ, ಮಾತನಾಡುವಿಕೆ, ವ್ಯಕ್ತಪಡಿಸುವಿಕೆ, ಚಿಂತನೆಯಂತಹ ಸಾಮಾಜಿಕ ಮತ್ತು ಮೂಲಭೂತ ಕಲಿಕಾ ಕೌಶಲ್ಯಗಳನ್ನು ತಿಳಿದುಕೊಳ್ಳುವುದು. ಮನೆಯಲ್ಲೇ ಮಕ್ಕಳ ಕಲಿಕೆಗೆ ನೆರವಾಗುವ ಪೋಷಕರ ಸಾಮಥ್ರ್ಯವನ್ನು ಇದು ಹೆಚ್ಚಿಸುತ್ತದೆ. ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು. ಕಲಿಕಾ ಕೌಶಲ್ಯದ ಮೂಲಭೂತ ಅಂಶಗಳನ್ನು ತಿಳಿಹೇಳುವ ಕಲೆ ರಾಕೆಟ್ ಸೈನ್ಸ್‍ನಂತಲ್ಲ. ಮಕ್ಕಳು ತಮ್ಮ ಅಭ್ಯಾಸಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳಲು ಶಕ್ತರಾಗಬೇಕು. ಕಂಪ್ಯೂಟರ್‍ಗಳಿಂದ ಮಾಹಿತಿ ಪಡೆಯುವಂತಾಗಬೇಕು.

ಎರಡನೇ ಹಂತದಲ್ಲಿ 9-16 ವರ್ಷದೊಳಗಿನ ಮಕ್ಕಳಿಗೆ ಶಾಲೆ ಸಾಮಾಜಿಕ ಕೇಂದ್ರ ಅಥವಾ ಮಕ್ಕಳ ಕ್ಲಬ್‍ನಂತಿರಬೇಕು. ವಿವಿಧ ಸಮುದಾಯಗಳ 500ಕ್ಕೂ ಹೆಚ್ಚು ಮಕ್ಕಳಿಗೆ ಡಿಜಿಟಲ್ ಕಲಿಕಾ ಸಾಧನಗಳನ್ನು ಒದಗಿಸಬೇಕು. 100 ಮಕ್ಕಳಂತೆ ಒಂದೊಂದು ಗುಂಪನ್ನು ಮಾಡಿ ಅವರಿಗೆ ಮೇಲ್ವಿಚಾರಕರನ್ನೂ ನೇಮಿಸಿಕೊಳ್ಳಬೇಕು. ಅರ್ಧ ಸಮಯವನ್ನು ಕಲಿಕೆಗೆ ಮೀಸಲಾಗಿಟ್ರೆ, ಉಳಿದ ವೇಳೆಯಲ್ಲಿ ಅವರು ಆಟ, ಪೇಂಟಿಂಗ್, ಹೀಗೆ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಈ ಕ್ಲಬ್‍ಗಳಲ್ಲಿ ಸ್ಥಳೀಯ ಕಲಾವಿದರು, ಅಥ್ಲೆಟಿಕ್ ತರಬೇತುದಾರರು, ಕುಶಲಕರ್ಮಿಗಳು ಮಕ್ಕಳಿಗೆ ಸಾಥ್ ಕೊಡ್ತಾರೆ. ಮಕ್ಕಳಿಗೇನಾದ್ರೂ ಸಮಸ್ಯೆ ಕಾಣಿಸಿಕೊಂಡಲ್ಲಿ ಅದನ್ನು ಬಗೆಹರಿಸಲು ಸಲಹೆಗಾರರಿರ್ತಾರೆ. ಸಂವಹನದಲ್ಲಿ ತಜ್ಞರಾಗಿರುವ ಶಿಕ್ಷಕರಿಂದ ಆನ್‍ಲೈನ್ ನೆರವನ್ನು ಕೂಡ ಪಡೆಯುವುದು ಉತ್ತಮ. ನಿರ್ದಿಷ್ಟ ವಯಸ್ಸಿನಲ್ಲಿ ಇಡೀ ಪಠ್ಯಕ್ರಮವನ್ನೇ ಓದಬೇಕಾದ ಅಗತ್ಯವಿಲ್ಲ. ವಿದ್ಯಾರ್ಥಿಗಳು ಸಿದ್ಧವಿದ್ದಾಗ ನಿರ್ದಿಷ್ಟ ವಿಷಯ ಅಥವಾ ಕೌಶಲ್ಯದ ಬಗ್ಗೆ ಪರೀಕ್ಷೆಗಳನ್ನು ನಡೆಸಬಹುದು.

ಶಿಕ್ಷಕರತ್ತ ಗಮನ...

ಮೂರನೇ ಹಂತದಲ್ಲಿ, 16 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಪರವಾನಗಿ ಪಡೆದ ಬೋಧಕರಿಂದ ಆನ್‍ಲೈನ್ ಕೋರ್ಸ್‍ಗಳನ್ನು ಮಾಡಿಸಬಹುದು. ವಿದ್ಯಾರ್ಥಿಗಳ ಕುಟುಂಬದ ಪರಿಸ್ಥಿತಿ, ದಾನಿಗಳ ಕೊಡುಗೆ, ಸರ್ಕಾರದ ನೆರವಿನ ಆಧಾರದ ಮೇಲೆ ಬೋಧಕರಿಗೆ ವೇತನ ನೀಡಬಹುದು. ಉದಾಹರಣೆಗೆ ಒಬ್ಬ ವಿದ್ಯಾರ್ಥಿ ಆನ್‍ಲೈನ್‍ನಲ್ಲಿ ಲೆಕ್ಕಶಾಸ್ತ್ರ ಕಲಿಯಬೇಕೆಂದಿದ್ದಲ್ಲಿ, ಸ್ಥಳೀಯ ಅಥವಾ ಆನ್‍ಲೈನ್‍ನಲ್ಲೇ ಬೋಧಕರ ನೆರವು ಪಡೆಯಬಹುದು. ಇನ್ನು ವಿಜ್ಞಾನ ವಿದ್ಯಾರ್ಥಿಗೆ ಪ್ರಯೋಗಾಲಯ ಸೌಲಭ್ಯ ಕೂಡ ಇರುತ್ತೆ. ಇದರಿಂದಾಗಿ ಓಡಿಶಾದ ಕುಗ್ರಾಮದ ವಿದ್ಯಾರ್ಥಿ ಕೂಡ ದೆಹಲಿಯ ಅತ್ಯುತ್ತಮ ಬೋಧಕರಿಂದ ಪಾಠ ಹೇಳಿಸಿಕೊಳ್ಳಬಹುದು. ಯಾವುದೇ ಶಿಕ್ಷಕರ ಉಪನ್ಯಾಸ, ಟಿಪ್ಪಣಿ, ಅಸೈನ್‍ಮೆಂಟ್ಸ್‍ಗೆ ಸರ್ಕಾರ ಆನ್‍ಲೈನ್‍ನಲ್ಲೇ ಹಣ ಪಾವತಿಸಬೇಕು.

`ಪ್ರಥಮ್' ಸಂಸ್ಥೆಯ ಗುರಿ ಕೂಡ ಈಗ ಸ್ಪಷ್ಟವಾಗಿದೆ. ಮಹಾಭಾರತದಲ್ಲಿ ಬರುವ ಏಕಲವ್ಯನಂತೆ ಉತ್ತಮ ಗುಣಮಟ್ಟದ ಶಿಕ್ಷಣದಿಂದ ವಂಚಿತರಾದವರು, ಮೇಲ್ಮಟ್ಟದವರೊಂದಿಗೆ ಪೈಪೋಟಿ ಗಿಟ್ಟಿಸಲು ಅಸಫಲರಾದವರಿಗೆ ಹೊಸ ಮಾರ್ಗವನ್ನು `ಪ್ರಥಮ್' ಕಲ್ಪಿಸಿದೆ. ಮಾಧವ್ ಅವರ ಈ ಯೋಜನೆ ಕ್ರಾಂತಿಕಾರಿ ಮತ್ತು ಅಪ್ರಾಯೋಗಿಕ ಎನಿಸಬಹುದು. ಆದ್ರೆ ಅದರಲ್ಲಿ ಇವತ್ತಿನ ವಾಸ್ತವ ಹಾಗೂ ನಾಳಿನ ಭವಿಷ್ಯ ಅಡಗಿದೆ. ಶಿಕ್ಷಣ ಪ್ರಕ್ರಿಯೆಯ ಪುನರ್ ಶೋಧಕ್ಕೆ ಭಾರತ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕಿದೆ.

ಅನುವಾದಕರು: ಭಾರತಿ ಭಟ್​​