ಅಂದು ಕೂಲಿ, ಇಂದು 5 ಕಂಪನಿಗಳ ಒಡೆಯ!

ಟೀಮ್​ ವೈ.ಎಸ್​. ಕನ್ನಡ

0

ಶಿಕ್ಷಣ ಎಂಬುದು ಇವತ್ತು ಜೀವನದ ಅವಿಭಾಜ್ಯ ಅಂಗವಾಗಿದೆ. ಅದಿದ್ದರೆ ಏನು ಬೇಕಾದರೂ ಸಾಧಿಸಬಹುದು. ಶಿಕ್ಷಣಕ್ಕೆ ಬಡವ, ಶ್ರೀಮಂತ ಎಂಬ ಭೇದ ಭಾವವೂ ಇಲ್ಲ. ಯಾರೂ ಚೆನ್ನಾಗಿ ಓದುತ್ತಾರೋ ಅವರಿಗೆ ಯಶಸ್ಸು ಲಭಿಸುತ್ತದೆ. ಆದರೆ ಮುನ್ನುಗ್ಗುವ ಛಲ, ಮತ್ತು ಏನನ್ನಾದರೂ ಸಾಧಿಸುವ ಗುರಿ ಇರಬೇಕು. ಓದಿನಲ್ಲಿ ಮುಂದಿದ್ದರೂ ಬಡತನದಿಂದಾಗಿ ಬಾಲ್ಯದಲ್ಲೇ ಬಾಡಿದ ಪ್ರತಿಭೆಗಳಿಗೆ ಲೆಕ್ಕವಿಲ್ಲ. ಆದರೆ ಬಡತನವನ್ನು ಜಯಿಸಿ, ಸಮಾಜದಲ್ಲಿ ಬೆಳೆದವರೂ ನಮ್ಮ ನಡುವೆ ಇದ್ದಾರೆ. ಅಂತಹ ಸಾಧಕರಲ್ಲಿ ಕಟೀಲು ಮೂಲದ ಗೌರೀಶ್ ಕುಮಾರ್ ಕೂಡ ಒಬ್ಬರು. ಬಾಲ್ಯದಲ್ಲಿ ಬಡತನದಿಂದಾಗಿ ಹೋಟೆಲ್‍ನಲ್ಲಿ ಕ್ಲೀನಿಂಗ್​ ಕೆಲಸ, ಪೇಂಟಿಂಗ್, ಕೂಲಿ, ಗಾರೆ ಕೆಲಸಗಳನ್ನು ಮಾಡುತ್ತಿದ್ದ 32 ವರ್ಷದ ಗೌರೀಶ್ ಇವತ್ತು 5 ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಅವರ ಜೀವನದ ರೋಚಕ ಕಥೆಯನ್ನು ಯುವರ್‍ಸ್ಟೋರಿ ಮುಂದೆ ತೆರೆದಿಟ್ಟಿದ್ದಾರೆ ಗೌರೀಶ್. ಓದಿ ಅವರ ಮಾತುಗಳಲ್ಲಿ...

ಬಾಲ್ಯದಲ್ಲಿ ಬಡತನದ ಬೇಗೆ

ನಾನು ಹುಟ್ಟಿ, ಬೆಳೆದದ್ದು ಕಟೀಲಿನಲ್ಲಿ. ಅಪ್ಪ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಮ್ಮ ಮನೆಯಲ್ಲಿ ಇದ್ದರು. ನಾನೇ ದೊಡ್ಡ ಮಗ. ನನಗೆ ಮೂವರು ತಮ್ಮಂದಿರು, ಒಬ್ಬಳು ತಂಗಿ. ಹೀಗಾಗಿಯೇ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಯಿತ್ತು. ಅಪ್ಪನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಬರುತ್ತಿತ್ತು. ಅದರಲ್ಲೇ ಏಳು ಮಂದಿಯ ಹೊಟ್ಟೆ ಭರಿಸಬೇಕಿತ್ತು. ಶಾಲೆಗೆ ಹೋಗುತ್ತಿರುವಾಗ ಮನೆಯಲ್ಲಿ ಕೇವಲ ಒಂದು ಹೊತ್ತು ಊಟ ಸಿಗುತ್ತಿತ್ತಷ್ಟೆ. ಬೆಳಗ್ಗೆ ಮನೆಯಲ್ಲಿ ತಿಂಡಿಯಿರುತ್ತಿರಲಿಲ್ಲ. ಶಾಲೆಯಲ್ಲಿ ಮಧ್ಯಾಹ್ನದ ಊಟವಾಗುತ್ತಿತ್ತು. ನಂತರ ರಾತ್ರಿ ಮನೆಯಲ್ಲಿ ಊಟ. ಮೂರು ಹೊತ್ತಿನ ಊಟವೂ ಆಗುತ್ತಿರಲಿಲ್ಲ, ಹೀಗೆ ಕಷ್ಟಗಳನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ಆದರೆ ಅಪ್ಪ ನೀನು ದೊಡ್ಡ ಮಗ ಓದನ್ನು ಬಿಟ್ಟು ಕೆಲಸ ಮಾಡು ಅಂತ ಒತ್ತಡ ಹೇರುತ್ತಿರಲಿಲ್ಲ. ಸಣ್ಣ ವಯಸ್ಸಿನಲ್ಲೆ ಮನೆಯ ಕಷ್ಟವನ್ನರಿತ ನಾನು, ನಾಲ್ಕನೇ ತರಗತಿಯಲ್ಲೆ ಅವರಿಗೆ ಕೆಲಸ ಮಾಡಿಕೊಂಡು ಓದುತ್ತೇನೆ ಅಂತ ಹೇಳಿಬಿಟ್ಟೆ. ಸಂಜೆ 5ರಿಂದ ರಾತ್ರಿ 8ರವರೆಗೆ ಹೋಟೆಲ್‍ನಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದೆ. ಪ್ರತಿದಿನ 10ರಿಂದ 15 ರೂಪಾಯಿ ಸಿಗುತ್ತಿತ್ತು. ಹಾಗೆ ನನ್ನ ಶಿಕ್ಷಣದ ಖರ್ಚನ್ನು ನಾನೇ ಭರಿಸುತ್ತಿದ್ದೆ. ನಂತರ ಪಿಯು, ಡಿಗ್ರಿ ಸಮಯದಲ್ಲಿ ರಜೆ ದಿನಗಳಲ್ಲಿ ಕೂಲಿ, ಗಾರೆ, ಪೇಂಟಿಂಗ್ ಕೆಲಸ ಮಾಡುವ ಮೂಲಕ ಓದಿನ ಖರ್ಚಿಗೆ ಹಣ ಸಂಪಾದಿಸಿಕೊಳ್ಳುತ್ತಿದ್ದೆ. ಬಿ.ಕಾಂ. ಕೂಡ ಕಟೀಲಿನಲ್ಲೆ ಮುಗಿಸಿದೆ. ಆದರೆ ಪದವಿ ಮುಗಿಯುವವರೆಗೂ ಮನೆಯಲ್ಲಿ ಸರಿಯಾದ ವಿದ್ಯುತ್ ಸಂಪರ್ಕವಿರಲಿಲ್ಲ. ಪಿಯುವಿನಲ್ಲಿ ಹೊಲಿಸಿದ್ದ 2 ಪ್ಯಾಂಟುಗಳಲ್ಲೇ ಮೂರು ವರ್ಷಗಳ ಡಿಗ್ರಿ ಮುಗಿಸಿದ್ದೆ.

ಬೆಂಗಳೂರಿಗೆ ಬಂದಿದ್ದು

ಬಿ.ಕಾಂ. ಓದುತ್ತಿರುವಾಗಲೇ ಸಿ.ಎ. ಮಾಡುವ ಆಸೆ ಚಿಗುರಿತು. ತಡ ಮಾಡದೇ ಆಗಿನಿಂದಲೇ ಸಿದ್ಧತೆ ಪ್ರಾರಂಭಿಸಿದೆ. ಹಣವಿಲ್ಲದ ಕಾರಣ ಕಟೀಲಿನ ವಿಜಯ ಬ್ಯಾಂಕ್‍ನಲ್ಲಿ ಲೋನ್ ಕೇಳಿದೆ. ಆದರೆ ಆಗ ಸಿ.ಎ. ಶಿಕ್ಷಣಕ್ಕೆ ಲೋನ್ ನೀಡುತ್ತಿರಲಿಲ್ಲ. ಆದರೆ ಯೋಗಾನಂದ್ ಎಂಬುವವರು ನನಗೆ ಪರ್ಸನಲ್ ಲೋನ್ ಕೊಡಿಸಿಕೊಟ್ಟರು. ನಾನು ಸಿ.ಎ. ಮಾಡುವುದಕ್ಕೆ ನನ್ನ ಕೆಲ ಸಂಬಂಧಿಕರು, ಸ್ನೇಹಿತರ ವಿರೋಧವಿತ್ತು. ಆದರೆ ನಾನು ನನ್ನ ಮನೆಯಲ್ಲಿ 5 ವರ್ಷ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ ಎಂದೆ. ಅವರೂ ಒಪ್ಪಿಕೊಂಡರು. ಹೀಗೆ ಪದವಿ ಮುಗಿದ ತಕ್ಷಣ ಸಿ.ಎ. ಕನಸು ಹೊತ್ತು 2003ರಲ್ಲಿ ಬೆಂಗಳೂರಿಗೆ ಬಂದೆ. ಇಲ್ಲಿಗೆ ಬಂದಿದ್ದೇ ನನ್ನ ದೊಡ್ಡ ಸಾಧನೆಗಳಲ್ಲಿ ಒಂದು. ಚಿಕ್ಕ ರೂಮಿನಲ್ಲಿ ಮೂವರು ಸ್ನೇಹಿತರು ಬಾಡಿಗೆಗೆ ಸೇರಿಕೊಂಡೆವು. ಪ್ರತಿ ತಿಂಗಳ ಖರ್ಚಿಗೆ 650 ರೂಪಾಯಿ ಬೇಕಿತ್ತು.

ಇದನ್ನು ಓದಿ: ಎಲ್ಲರಂತಲ್ಲ ಈ ಆಟೋ ಡ್ರೈವರ್- ಅಣ್ಣಾ ದೊರೈಗೆ ಸಲಾಂ ಅಂತಿದ್ದಾರೆ ಚೆನ್ನೈ ಪ್ಯಾಸೆಂಜರ್ಸ್..!

2 ವರ್ಷ ಇಂಟರ್ನ್‍ಶಿಪ್, 3 ವರ್ಷ ಆರ್ಟಿಕ್ಯುಲೇಟ್ ಬಳಿಕ 2010ರಲ್ಲಿ ಸಿ.ಎ. ಮುಗಿಯಿತು. ಆದರೆ ಅದರ ಮಧ್ಯೆ ಅಮ್ಮ ಹುಷಾರು ತಪ್ಪಿದ ಕಾರಣ ಕೆಲ ತಿಂಗಳು ನಾನು ಸಿ.ಎ. ಬಿಟ್ಟು ಕೆಲಸಕ್ಕೆ ಸೇರಬೇಕಾಯಿತು.

"ಸಿ.ಎ. ಮಾಡಿದ್ದು ಸಾಧನೆ ಅನ್ನೋದಕ್ಕಿಂತ ನನ್ನ ಹಠ ಅಂತ ಹೇಳಲು ಇಷ್ಟಪಡುತ್ತೇನೆ. ಸಿ.ಎ. ಮುಗಿಯುತ್ತಲೆ ಇನೋಸಿಸ್‍ನಲ್ಲಿ ಕೆಲಸ ಮಾಡಿದೆ. ಡೆಲಾಯ್ಟ್​ನಲ್ಲಿ ಕೆಲಸ ಮಾಡಿದೆ. ಹೀಗೆ ನಾಲ್ಕು ವರ್ಷಗಳ ಕಾಲ ಅನುಭವ ಪಡೆದೆ. ನಂತರ ನಾನೇ ಏನಾದರೂ ಸ್ವಂತ ಮಾಡಲು ಯೋಚಿಸಿದೆ. ಹಾಗೆ ಪ್ರಾರಂಭವಾಗಿದ್ದು ಜಿಕೆಸಿ ಆ್ಯಂಡ್ ಕಂಪನಿ ಮತ್ತು ಬ್ರಾಹ್ಮರಿ ಅಕಾಡೆಮಿ ಎಂಬ ಕೋಚಿಂಗ್ ಸೆಂಟರ್ ಪ್ರಾರಂಭಿಸಿದೆ. ಟ್ಯಾಕ್ಸ್ ಮತ್ತು ಸ್ಟ್ರಾಟೆಜಿಕ್ ಕನ್ಸಲ್ಟೆನ್ಸಿಗಳಲ್ಲೂ ನಾವು ತೆಗೆದುಕೊಂಡ ಕೇಸ್‍ಗಳೆಲ್ಲ ಒಳ್ಳೆಯ ಫಲಿತಾಂಶ ನೀಡಿದವು. ಹೀಗೆ ಕಳೆದ ಎರಡು ವರ್ಷಗಳಿಂದ ಅಂದುಕೊಂಡಿದ್ದೆಲ್ಲವೂ ಕೈ ಹಿಡಿಯಿತು."
-  ಗೌರೀಶ್​ ಕುಮಾರ್​, ಜಿ.ಕೆ.ಸಿ. ಸಂಸ್ಥಾಪಕ

ಬೆಳೆಯಲು ಎರಡು ದಾರಿಗಳು

ಬೆಳೆಯುವ ಕನಸಿತ್ತು. ಸೆಕೆಂಡ್​ ಪಿ.ಯು.ಸಿ ಓದುವಾಗ ನನ್ನ ಒಬ್ಬ ಲೆಕ್ಚರರ್ ಕರೆದು ಚೆನ್ನಾಗಿ ಓದು ನಿನಗೊಳ್ಳೆ ಭವಿಷ್ಯವಿದೆ ಅಂತ ಹೇಳಿದರು. ಬೆಳೆಯಲು ಎರಡು ದಾರಿಯಿದೆ. ಒಂದು ಶಿಕ್ಷಣವನ್ನು ಬೇಸ್ ಮಾಡಿಕೊಂಡು ಬೆಳೆಯುವುದು ಮತ್ತೊಂದು ನೇಮ್ ಫೇಮ್ ಮೂಲಕ ಬೆಳೆಯುವುದು. ನನಗೆ ಎರಡನೇ ಆಯ್ಕೆಯಿಲ್ಲ. ಯಾಕೆಂದರೆ ಬಡತನದಿಂದ ಬಂದವನು. ಹೀಗಾಗಿಯೇ ಮೊದಲನೆಯದನ್ನು ಆಯ್ಕೆ ಮಾಡಿಕೊಂಡು ಮುಂದಿನ ಐದು ವರ್ಷಗಳ ಕಾಲ ಚೆನ್ನಾಗಿ ಓದಬೇಕು ಅಂತ ತೀರ್ಮಾನಿಸಿದೆ. ಅದರಂತೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ. ಅದೇ ನನ್ನ ಈ ಬೆಳವಣಿಗೆಗೆ ಕಾರಣ. ಇದನ್ನು ನಾನು ಕಟೀಲು ದುರ್ಗಾಪರಮೇಶ್ವರಿಗೆ ಅರ್ಪಿಸಬೇಕು ಅಂತ ಇಷ್ಟಪಡುತ್ತೇನೆ. ನನ್ನ ಇದುವರೆಗಿನ ಸಾಧನೆ, ಮುಂದೆ ಮಾಡುವ ಸಾಧನೆ ಎಲ್ಲವೂ ಆ ತಾಯಿಗೇ ಅರ್ಪಣೆ. ಕನಸ್ಸು ಮತ್ತು ದೃಢ ನಿರ್ಧಾರವಿತ್ತು. ಒಂದು ಸರಿಯಾದ ಗುರಿ ಇರಬೇಕು, ಅದನ್ನು ಪಡೆಯುವ ಛಲ ಇರಬೇಕು. ಅವೆರಡೂ ಇದ್ದರೆ ಎಷ್ಟೇ ಕಷ್ಟ ಬಂದರೂ ಸಾಧಿಸಬಹುದು. ಆದರೆ ಆ ಕಷ್ಟಗಳು ಕ್ಷಣಿಕ.

" ಸಿ.ಎ. ಮಾಡಲು ಬೆಂಗಳೂರಿಗೆ ಬಂದಾಗ ನಾನು ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ನನಗೆ ಪ್ರತಿ ತಿಂಗಳು ಖರ್ಚಿಗೆ ಹಣ ಇರುತ್ತಿದ್ದುದೇ ಇನ್ನೂರು ರೂಪಾಯಿ. ಹೀಗಾಗಿಯೇ ಪ್ರತಿದಿನ ಬಿಟಿಎಂ ಲೇಔಟ್‍ನಿಂದ ಕಸ್ತೂರಿ ಬಾನಲ್ಲಿದ್ದ ಕಚೇರಿಗೆ 22 ಕಿಲೋಮೀಟರ್ ಕಾಲ್ನಡಿಗೆಯಲ್ಲೆ ಬಂದು ಹೋಗುತ್ತಿದ್ದೆ. ಮೊದಲ ಎರಡು ಮೂರು ತಿಂಗಳು ಹೀಗೇ ಇತ್ತು. ಈಗ ನನ್ನನ್ನು ನೋಡಿದವರು ಶ್ರೀಮಂತ ಕುಟುಂಬದಿಂದ ಬಂದಿರುವವನು ಅಂತ ಅಂದುಕೊಳ್ಳುತ್ತಾರೆ. ಆದರೆ ನಾನು ನನ್ನ ಕಷ್ಟಗಳನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ನಾನು ಓದಿರೋದು ಕನ್ನಡ ಮೀಡಿಯಂ. ಇದರಿಂದಾಗಿ ಬೆಂಗಳೂರಿನಲ್ಲಿ ಮೊದಲ ಎರಡು ವರ್ಷಗಳು ತುಂಬ ಕಷ್ಟವಾಯಿತು. ಆದರೆ ನನಗೆ ಗೊತ್ತಿದ್ದಿದ್ದು ಒಂದೇ, ಅದು ಓದು. ಉಳಿದದ್ದೆಲ್ಲವನ್ನು ದೇವರ ಮೇಲೆ ಹಾಕಿ ಓದತೊಡಗಿದೆ. ಕ್ರಮೇಣ ಇಂಗ್ಲೀಷ್‍ಅನ್ನು ಕಲಿತೆ. ಸಿ.ಎಸ್. (ಕಂಪನಿ ಸೆಕ್ರೆಟರಿ), ಎಂ.ಕಾಂ, ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್‍ನಲ್ಲಿ ಒಂದು ಕೋರ್ಸ್ ಮಾಡಿದೆ, ಈಗ ಪಿಎಚ್‍ಡಿ ಮಾಡುತ್ತಿದ್ದೇನೆ. ಹೀಗೆ ಓದು ಮುಂದುವರಿಸಿದ್ದೇನೆ."
- ಗೌರೀಶ್​ ಕುಮಾರ್​, ಜಿಕೆಸಿ ಸಂಸ್ಥಾಪಕ

ಬ್ರಾಹ್ಮರಿ ಅಕಾಡೆಮಿ

2008ರಿಂದಲೇ ಟೂಷನ್ಸ್ ಮಾಡುತ್ತಿದ್ದೆ. ಮೊದಲು ಮೂವರು ಬಂದರು, ಮೂವರೂ ಪಾಸ್ ಆದರು. ಅವರನ್ನು ನೋಡಿ ಅದರ ನಂತರದ ಬ್ಯಾಚ್‍ಗೆ ಏಳು ಮಂದಿ ಬಂದರು. ಅವರಲ್ಲೂ ನಾಲ್ವರು ಪಾಸ್ ಆದರು. ಕ್ರಮೇಣ ಕಲಿಸುವುದೇ ಪ್ಯಾಶನ್ ಆಯಿತು. ನಂತರ ಮಕ್ಕಳೇ ಬಂದು ನಾವೇ ಜಾಗ ಕೊಡುತ್ತೇವೆ, ನೀವು ಪಾಠ ಮಾಡಿ ಸಾಕು ಎಂದರು. ಹೀಗೆ ಕೋಚಿಂಗ್ ಕ್ಲಾಸಸ್ ಪ್ರಾರಂಭವಾಯಿತು. ಕ್ರಮೇಣ ಅವರೇ ಹಣ ನೀಡತೊಡಗಿದರು. ಮೂರು ಬ್ಯಾಚ್‍ವರೆಗೂ ನಾನು ಹಣ ಪಡೆದಿರಲಿಲ್ಲ. ನಂತರ ಹಣ ಪಡೆಯತೊಡಗಿದೆ. ಬೆಂಗಳೂರು, ಕೇರಳ, ಪುಣೆ, ಹೈದರಾಬಾದ್, ಮಂಗಳೂರು, ಮೈಸೂರು, ವಿಜಯವಾಡಾಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಸಿಎ ಟೂಷನ್ಸ್ ತೆಗೆದುಕೊಂಡಿದ್ದೇನೆ. ಇದು ದೊಡ್ಡ ಹೆಸರು ನೀಡಿತು ನನಗೆ. ನನ್ನ ವಿದ್ಯಾರ್ಥಿಗಳು ಆಲ್ ಇಂಡಿಯಾ ಮೊದಲ ರ್ಯಾಂಕ್ ಪಡೆದಿದ್ದಾರೆ, ಸಿಎಸ್‍ನಲ್ಲಿ ನಾಲ್ಕನೇ ರ್ಯಾಂಕ್, 11ನೇ ರ್ಯಾಂಕ್ ಪಡೆದಿದ್ದಾರೆ. ಇದುವರೆಗೆ ಸುಮಾರು 60ಕ್ಕೂ ಹೆಚ್ಚು ಮಂದಿ ರ್ಯಾಂಕ್ ಬಂದಿದ್ದಾರೆ. ಸಿಎ ಮತ್ತು ಸಿಎಸ್ ವಿದ್ಯಾರ್ಥಿಗಳಿಗೆ. ಈಗ ವಿದ್ಯಾರ್ಥಿಗಳಿಗಾಗಿಯೇ ಆ್ಯಪ್ ಕೂಡ ಮಾಡುತ್ತಿದ್ದೇವೆ.

5 ಕಂಪನಿಗಳಿವೆ...

ಬ್ರಾಹ್ಮರಿ ಅಕಾಡೆಮಿ (ಟೂಷನ್ಸ್), ಜಿಕೆಸಿ ಆ್ಯಂಡ್ ಕಂಪನಿ (ಚಾರ್ಟರ್ಡ್ ಅಕೌಂಟ್), ಜಿಕೆ ಕಾರ್ಪೋರೇಟ್ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್ (ಸ್ಟ್ರಾಟೆಜಿಕ್ ಕನ್ಸಲ್ಟನ್ಸಿ), ಬ್ರಾಹ್ಮರಿ ಫೌಂಡೇಶನ್ ಇದೆ. ಒಟ್ಟು 37 ಜನ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ 10 ಮಂದಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಎ, ಸಿಎಸ್ ಉಚಿತ ತರಬೇತಿ ನೀಡುತ್ತೇವೆ. ನಮ್ಮ ಕಚೇರಿಗೆ ಟೀ ಕೊಡಲು ಬರುತ್ತಿದ್ದ ಹುಡುಗನನ್ನೇ ಕೆಲಸ ಬಿಡಿಸಿ ಶಾಲೆಗೆ ಸೇರಿಸಿದ್ದೇವೆ. ಆಗಾಗ ಎನ್‍ಜಿಒಗಳಿಗೆ ಹೋಗಿ ಆಹಾರ ಧಾನ್ಯ ನೀಡುತ್ತೇವೆ. ಆದರೆ ಇದ್ಯಾವುದಕ್ಕೂ ನಾವು ಬೇರೆಯವರಿಂದ ಹಣ ಪಡೆಯುವುದಿಲ್ಲ. ನಾನು ಬೆಳೆಯುವಾಗಲೂ ನನಗೂ ಇಂತಹ ಸಹಾಯಗಳು ಬಂದಿದ್ದವು. ಈಗ ನಾನು ಬೇರೆಯವರಿಗೆ ಅದೇ ರೀತಿ ಸಹಾಯ ಮಾಡುತ್ತಿದ್ದೇನೆ.

ಭವಿಷ್ಯದ ಯೋಜನೆಗಳು

ನನಗೆ ಗೊತ್ತಿರುವುದು ಬೆಳೆಯುವುದು, ಅದಕ್ಕೆ ಬೇಕಾದಷ್ಟು ಕಷ್ಟ ಪಡುವುದು. ಶ್ರಮ ಮತ್ತು ಬೆಳವಣಿಗೆ ಎರಡೇ ನನಗೆ ಗೊತ್ತಿರುವಂತದ್ದು. ಈ ಸಂಸ್ಥೆಯನ್ನು ಬೆಳೆಸಬೇಕು ಎಂಬಾಸೆ ಇದೆ. ದೊಡ್ಡ ಮಟ್ಟದಲ್ಲಿ ಸಮಾಜ ಸೇವಾ ಕೆಲಸ ಮಾಡುವ ಆಸೆಯಿದೆ. ಕೆಲಸದ ಮೂಲಕವೂ ಹೆಸರು ಮಾಡಬೇಕು. ಇನ್ನು 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಪಾಲಿಸಿ ಮಟ್ಟಕ್ಕೆ ಬೆಳೆಯಬೇಕು. 2020ಕ್ಕೆ ನಾವು 202 ಉದ್ಯೋಗಿಗಳಾಗಬೇಕು ಅಷ್ಟರ ಮಟ್ಟಿಗೆ ಬೆಳೆಯುವ ಗುರಿಯಿದೆ. ಭಾರತದಾದ್ಯಂತ ಇನ್ನೂ 7 ಕಡೆಗೆ ವಿಸ್ತರಿಸುವಾಸೆ ಇದೆ. ಬೆಂಗಳೂರು, ಮೈಸೂರು, ಮಂಗಳೂರು, ಕೇರಳಗಳಲ್ಲಿದೆ. ಅದನ್ನು ಪುಣೆ, ಬೆಂಗಳೂರಿನಲ್ಲೆ ಇನ್ನೊಂದು ಹಾಗೂ ಮುಂಬೈಗಳಿಗೆ ವಿಸ್ತರಣೆ. ವಾರ್ಷಿಕವಾಗಿ 2ರಿಂದ ಎರಡೂವರೆ ಕೋಟಿ ರೂಪಾಯಿ ಟರ್ನ್ ಓವರ್ ಆಗುತ್ತದೆ. 2020ಕ್ಕೆ ಅದನ್ನು 10 ಕೋಟಿಗೆ ಹೆಚ್ಚಿಸುವ ಗುರಿಯಿದೆ. ನಮ್ಮ ಕಂಪನಿಯೀಗೆ 5ರಿಂದ 6 ಕೋಟಿ ಬಾಳುತ್ತದೆ. ಅದು 2020ಕ್ಕೆ 25 ಕೋಟಿಗೆ ಏರಲಿದೆ.

ಸಾಧನೆಯ ಗುಟ್ಟು

ನನಗೆ ಹೇಳಿಕೊಟ್ಟವರು ಕಡಿಮೆ. ಕನಸು ಕಾಣಬೇಕು. ಗುರಿಯೂ ಇರಬೇಕು. ನನ್ನ ಬಳಿ ಏನೂ ಇರಲಿಲ್ಲ. ನಾನು ಡಿಗ್ರಿ ಓದುವಾಗ ನನ್ನ ಬಳಿ ಇದ್ದಿದ್ದು ಎರಡು ಪ್ಯಾಂಟು. ಪಿಯುಸಿಗೆ ಹೊಲಿಸಿದ್ದ ಆ ಎರಡು ಪ್ಯಾಂಟುಗಳಲ್ಲೇ ಮೂರು ವರ್ಷಗಳ ಡಿಗ್ರಿ ಮುಗಿಸಿದ್ದೇನೆ. ಛಲ ಇರಬೇಕು. ನೀವು ಕಷ್ಟಪಡಲು ರೆಡಿಯಿದ್ದರೆ, ಎಲ್ಲವೂ ನಿಮ್ಮನ್ನೇ ಹುಡುಕಿಕೊಂಡು ಬರುತ್ತವೆ. ನನಗೆ ಗೊತ್ತಿರುವಂತೆ ಒಂದೊಂದು ದಿನ 18ರಿಂದ 19 ತಾಸು ಓದಿರುವ ನೆನಪೂ ಇದೆ. ಗುರಿ ಇಟ್ಟುಕೊಳ್ಳಿ, ಅದನ್ನು ಸಾಧಿಸುವ ಹಠ ಇಟ್ಟುಕೊಳ್ಳಿ. ಬೇರೆಯಾವುದರ ಬಗ್ಗೆಯೂ ಯೋಚಿಸಬೇಡಿ. ಹಣವಿಲ್ಲದಿದ್ದರೆ, ಪಾರ್ಟ್ ಟೈಮ್ ಕೆಲಸ ಮಾಡಿ. ಸಾಧನೆ ಮಾಡುವಾಗ ಅಪಮಾನ, ಅವಮಾನಗಳಾಗುವುದುಂಟು. ಅದೆಲ್ಲ ಇದ್ದಿದ್ದೇ. ಅದೆಲ್ಲವನ್ನು ಸಹಿಸಿಕೊಂಡು ಮುಂದುವರಿಯಬೇಕು. 

ಇದನ್ನು ಓದಿ:

1. ಲಾಜಿಸ್ಟಿಕ್​ ಉದ್ಯಮಕ್ಕೆ ಹೊಸ ಕಿಕ್- ಲಾರಿ ಮಾಲೀಕರ ಮನಗೆದ್ದ "Blackbuck"​​

2. ಸರ್ಕಾರಿ ಕೆಲಸ ಬಿಟ್ಟು ಕೃಷಿಕನಾದ ಎಂಜಿನಿಯರ್ - ಅಲೋವೆರಾ ಬೆಳೆದು ಕೋಟ್ಯಾಧಿಪತಿಯಾದ ಅನ್ನದಾತ

3. ಶಾಲೆಗೆ ಹೋಗಿ ಮಕ್ಕಳ ಫೀಸ್​ ಕಟ್ಟುವ ಚಿಂತೆ ಇಲ್ಲ- ಕುಳಿತಲ್ಲೇ ಶಾಲಾ ಶುಲ್ಕ ಭರಿಸಲು ಇದೆ ಇನ್ಸ್ಟಾಫೀಸ್​..!

Related Stories