ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪರ್ವಕಾಲ..!

ಟೀಮ್​ ವೈ.ಎಸ್​. ಕನ್ನಡ

 ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪರ್ವಕಾಲ..!

Tuesday February 02, 2016,

2 min Read

ಕೊಡಗು ಜಿಲ್ಲೆಯ ಅವಲೋಕನ

ಕೊಡಗು ಭಾರತದ ಸ್ಕಾಟ್‌ಲೆಂಡ್‌ ಎಂದೇ ಸುಪ್ರಸಿದ್ಧ. ಕರ್ನಾಟಕದ ಕಾಶ್ಮೀರ ಎಂತಲೂ ಇದನ್ನು ಕರೆಯುತ್ತಾರೆ. ಈ ಪ್ರದೇಶ ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆ, ಕಾಫಿ ತೋಟಗಳು, ಟೀ ಎಸ್ಟೇಟ್‌ಗಳು, ಕಿತ್ತಳೆ ತೋಟಗಳಿಗೆ ತುಂಬಾ ಜನಪ್ರಿಯ. ಇದು ಪ್ರವಾಸಿ ತಾಣ ಕೂಡ ಹೌದು. ವಿಶೇಷವಾಗಿ ಕರ್ನಾಟಕದ ನೆರೆಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಹಾಸನ ಮತ್ತು ಮೈಸೂರಿನವರಿಗೆ ಮತ್ತು ಕೇರಳದ ಕಣ್ಣೂರು, ವಯನಾಡು ಜಿಲ್ಲೆಗಳ ಜನರಿಗೆ ಇದು ತುಂಬಾ ಅಚ್ಚುಮೆಚ್ಚಿನ ಪ್ರದೇಶ. ಕೊಡಗಿಗೆ ಕೂರ್ಗ್​ ಅಂತಲೂ ಕರೆಯುತ್ತಾರೆ. ಪ್ರವಾಸೋದ್ಯಮಕ್ಕೆ ಕೂರ್ಗ್​​ ತುಂಬಾ ಫೇಮಸ್​..ಜೀವ ನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಇರುವುದು ಕೊಡಗು ಜಿಲ್ಲೆಯಲ್ಲೇ. ಮಡಿಕೇರಿ , ವಿರಾಜಪೇಟೆ, ಸೋಮವಾರಪೇಟೆ ಹೀಗೆ ಮೂರೇ ಮೂರು ತಾಲೂಕುಗಳನ್ನು ಹೊಂದಿರುವ ಕೊಡಗು ಪುಟ್ಟ ಜಿಲ್ಲೆಯಾದರೂ ಇದರ ಖ್ಯಾತಿ ಜಗದಗಲಕ್ಕೂ ಹರಡಿದೆ. ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇಕಡಾ 85ರಷ್ಟಿದೆ.

image


ಕೃಷಿಯೇ ಇಲ್ಲಿ ಪ್ರಧಾನ

ಈ ಜಿಲ್ಲೆಯಲ್ಲಿ ಕಾಫಿ ಬೆಳೆಯೇ ಹೆಚ್ಚು. ಟೀ, ಅಡಿಕೆ, ರಬ್ಬರ್​​, ಕರಿ ಮೆಣಸು, ಏಲಕ್ಕಿ, ಕಿತ್ತಳೆ ಮತ್ತು ಭತ್ತ ಪ್ರಮುಖ ಬೇಸಾಯ. ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೇ ಹೆಸರಾಗಿತ್ತು. ಆದರೆ ಇಂದು ಅದು ಕೊಡಗಿನಲ್ಲಿಯೇ ಬಹಳ ಅಪರೂಪ. ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ 3/1 ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು.

ಕೈಗಾರಿಕಾ ವಲಯ ಹೇಗಿದೆ..?

ಇದು ಭಾರತದ ಅತ್ಯಂತ ಪ್ರಸಿದ್ಧ ಗಿರಿಧಾಮಗಳಲ್ಲಿ ಕೂರ್ಗ್​ ಕೂಡಾ ಒಂದು. ಮಡಿಕೇರಿಯ ರೆಸಾರ್ಟ್​​ ತಾಜ್​ ವಿವಾಂತ ಮತ್ತು ಕ್ಲಬ್​ ಮಹೀಂದ್ರ ದೇಶ ವಿದೇಶದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಕುಶಾಲನಗರದ 250 ಎಕರೆ ವಿಶಾಲ ಪ್ರದೇಶದಲ್ಲಿ ಕೈಗಾರಿಕಾ ವಲಯವಿದೆ.ಇಲ್ಲಿ 2 ಕಾರ್ಯೋನ್ಮುಖವಾಗಿರುವ ಕೈಗಾರಿಕೆಗಳಿವೆ. ಕಾಫಿ ಕ್ಯೂರಿಂಗ್​, ಕರಿಮೆಣಸು, ಜೇನು ಹನಿಯ ಸಂಸ್ಕರಣಾ ಘಟಕವಿದೆ. ಪ್ರವಾಸೋದ್ಯಮವೂ ಜಿಲ್ಲೆಯ ಆರ್ಥಿಕತೆಯ ಪ್ರಮುಖ ಮೂಲ. ಪ್ರವಾಸೋದ್ಯಮದ ಬೆಳವಣಿಗೆಗೆ ಹೋಂಸ್ಟೇಗಳು ಸಹಕಾರಿಯಾಗಿವೆ. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಹೋಂಸ್ಟೇಗಳು ಕಾರ್ಯಾಚರಿಸುತ್ತಿದ್ದು, ಈ ಹೋಂಸ್ಟೇಗಳನ್ನು ಹೆಚ್ಚಾಗಿ ಕಾಫಿ ಬೆಳೆಗಾರರೇ ನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ. ಕೆಲವು ವರ್ಷಗಳ ಹಿಂದೆ ಕಾಫಿ ಬೆಲೆ ಕುಸಿತಗೊಂಡಾಗ ಕಾಫಿ ಬೆಳೆಗಾರರು ಕಂಡುಕೊಂಡ ಪರ್ಯಾಯ ಮಾರ್ಗವೇ ಈ ಹೋಂಸ್ಟೇಗಳು. ಕೂರ್ಗ್​​ ಗಾಲ್ಫ್​​ ಲಿಂಕ್ಸ್​, ಮರ್ಕರಾ ಡೌನ್ಸ್​​ ಗಾಲ್ಫ್​​ ಕ್ಲಬ್​​, ಬಾಂಬೂ ಕ್ಲಬ್​​, ಟಾಟಾ ಕಾಫಿ ಆಫೀಸರ್ಸ್​​ ಗಾಲ್ಫ್​​ ಕ್ಲಬ್​​ ರಜಾ ದಿನಗಳ ಮಜಾ ಅನುಭವಿಸಲು ಹೇಳಿ ಮಾಡಿಸಿದ ತಾಣ.

ಜಲಸಂಪನ್ಮೂಲ ಹೇಗಿದೆ..?

ಕೊಡಗಿನ ಪ್ರಮುಖ ನದಿ ಜೀವನದಿ ಕಾವೇರಿ. ಇದು ಪಶ್ಚಿಮಾಭಿಮುಖವಾಗಿ ಹರಿಯುತ್ತದೆ. ಆದರೂ ಜಿಲ್ಲೆಯ ಅಂತರ್ಜಲ ಮಟ್ಟ ಸಾಧಾರಣವಾಗಿದೆ. ಹೀಗಾಗಿ ನೀರಾವರಿ ವ್ಯವಸ್ಥೆ ಉತ್ತಮಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪುಗೊಳ್ಳುತ್ತಿದೆ.

ಜ್ಞಾನಾರ್ಜನೆಯ ರಾಜಧಾನಿ..!

ಜಿಲ್ಲೆಯಲ್ಲಿ 10 ಡಿಗ್ರಿ ಕಾಲೇಜುಗಳಿವೆ. 2 ಎಂಜಿನಿಯರಿಂಗ್​ ಕಾಲೇಜು, 3 ಐಟಿಐ, 2 ಪಾಲಿಟೆಕ್ನಿಕ್​​, 1 ಡೆಂಟಲ್​ ಕಾಲೇಜಿದೆ. 30 ಕಂಪ್ಯೂಟರ್​ ಟ್ರೈನಿಂಗ್​ ಸೆಂಟರ್​ಗಳೂ ಜಿಲ್ಲೆಯಲ್ಲಿವೆ. ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ, ಕಾಲೇಜ್​ ಆಫ್​ ಫಾರೆಸ್ಟ್ರಿ - ಪೊನ್ನಂಪೇಟೆ. ಹೀಗೆ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸಂಪರ್ಕ ಹೇಗೆ..?

ಮಾರ್ಗದ ಮೂಲಕ ಜಿಲ್ಲೆಯ ಮೂಲೆ ಮೂಲೆಗೂ ತಲುಪಲು ಸಾಧ್ಯ. 3 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು 2 ದೇಶೀಯ ಏರ್​​ಪೋರ್ಟ್​​ಗಳಿಗೆ ಸಂಪರ್ಕ ಸುಲಭಸಾಧ್ಯವಾಗಿದೆ. ಮಂಗಳೂರು, ಕಾರವಾರ, ಗೋವಾ, ಚೆನ್ನೈ ಬಂದರಿಗೂ ಸಂಪರ್ಕ ಸಾಧ್ಯ.

ಹೂಡಿಕೆಗೆ ಅವಕಾಶಗಳೇನಿದೆ..?

1. ಜನ್ನಾಪುರ - ಸಕಲೇಶಪುರ, ಸಕಲೇಶಪುರ - ಶನಿವಾರ ಸಂತೆಗೆ ಉತ್ತಮ ಗುಣಮಟ್ಟದ ಮಾರ್ಗ ನಿರ್ಮಾಣ

2. ಮಾಗಡಿಯಿಂದ ಸೋಮವಾರಪೇಟೆಗೆ ಮಾರ್ಗ ನಿರ್ಮಾಣ

3. ಆಧುನಿಕ ಕಸಾಯಿಖಾನೆಗಳ ನಿರ್ಮಾಣ

ಜಿಲ್ಲೆಯ ನಿರೀಕ್ಷೆಗಳೇನು..?

ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೋಂಸ್ಟೇಗಳು ಸಹಕಾರಿಯಾಗಿವೆ. ಇಲ್ಲಿ ಇನ್ನೂ ಅಭಿವೃದ್ಧಿ ವಂಚಿತವಾಗಿರುವ ಹಲವಾರು ತಾಣಗಳಿದ್ದು, ಅವುಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಸಿಗರು ಅಲ್ಲಿಗೆ ತೆರಳುವಂತೆ ಮಾಡುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ. ಇದರಿಂದ ಹೋಂಸ್ಟೇಗಳಿಗೂ ಅನುಕೂಲವಾಗುತ್ತದೆಯಲ್ಲದೆ, ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿ ಜಿಲ್ಲೆಯಿಂದ ಬೇರೆಡೆಗೆ ವಲಸೆಹೋಗುವುದು ತಪ್ಪುತ್ತದೆ. ಪ್ರವಾಸಿಗರಿಗೆ ಮೂಲ ಸೌಲಭ್ಯ ಕಲ್ಪಿಸುವುದರ ಜೊತೆಗೆ ಸ್ಥಳೀಯರ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಕಾಳಜಿ ವಹಿಸಬೇಕಿದೆ. ಹೂಡಿಕೆದಾರರು ಕೊಡಗಿನತ್ತ ಗಮನಹರಿಸಿ ಜಿಲ್ಲೆಯನ್ನು ಪ್ರವಾಸೋದ್ಯಮದಲ್ಲಿ ಉತ್ತುಂಗಕ್ಕೆ ಒಯ್ಯಬೇಕಿದೆ. ಇದರಿಂದಾಗಿ ನಮ್ಮ ರಾಜ್ಯದ ಕೀರ್ತಿಯೂ ಹೆಚ್ಚುತ್ತದೆ.