ನಿವೃತ್ತ ಶಿಕ್ಷಕ, ನಾಟಿವೈದ್ಯ, ಕವಿ, ಸಾಹಿತಿ- ಪತ್ರಕರ್ತನಿಂದ ಪತ್ರಿಕೋದ್ಯಮಿಯಾದ ಕಥೆ

ವಿಶಾಂತ್​​

ನಿವೃತ್ತ ಶಿಕ್ಷಕ, ನಾಟಿವೈದ್ಯ, ಕವಿ, ಸಾಹಿತಿ- ಪತ್ರಕರ್ತನಿಂದ ಪತ್ರಿಕೋದ್ಯಮಿಯಾದ ಕಥೆ

Saturday October 31, 2015,

3 min Read

ಸಾಮಾನ್ಯವಾಗಿ ನಿವೃತ್ತಿಯಾದ ನಂತರ ಜನ ಇಷ್ಟು ವರ್ಷ ಕೆಲಸ ಮಾಡಿದ್ದು ಸಾಕು. ಇನ್ನು ಪೆನ್ಶನ್ ಹಣದಲ್ಲಿ ದೇವಸ್ಥಾನ ತೀರ್ಥಯಾತ್ರೆ ಹೋಗೋಣ ಅಂತ ಸುಮ್ಮನಾಗಿಬಿಡ್ತಾರೆ. ಆದ್ರೆ ಇಲ್ಲೊಬ್ಬರು ನಿವೃತ್ತಿಯಾದ ನಂತರ ನಾಟಿ ವೈದ್ಯರಾಗಿ, ಪತ್ರಕರ್ತರಾಗಿ, ಪತ್ರಿಕೋದ್ಯಮಿಯಾಗಿ, ಕವಿಯಾಗಿ, ಲೇಖಕರಾಗಿ ಹಲವು ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದಾರೆ.

ವ್ಯಕ್ತಿ ಪರಿಚಯ

ಬ್ಯಾಡನೂರು ಶಾಂತವೀರಪ್ಪ. ಮೂಲತಃ ಪಾವಗಡ ತಾಲ್ಲೂಕಿನ ಬ್ಯಾಡನೂರು ಗ್ರಾಮದವರು. ಇವರದು ಬಡ ರೈತ ಕುಟುಂಬ. ಮನೆಗೆ ಹಿರಿಯ ಮಗ. ಮೂವರು ತಮ್ಮಂದಿರು, ಇಬ್ಬರು ತಂಗಿಯರು. ಎಲ್ಲರ ಜವಾಬ್ದಾರಿಯೂ ಇವರ ಮೇಲೆ. ಓದುವ ಆಸೆಯಿದ್ದರೂ ಹತ್ತನೇ ತರಗತಿಗೇ ಶಾಲೆ ಬಿಟ್ಟು ಕೃಷಿಯಲ್ಲಿ ತೊಡಗಿದ್ದರು. ಹೀಗೆ 4 ವರ್ಷಗಳ ಕಾಲ ಪುಸ್ತಕದಿಂದ ದೂರ ಉಳಿಯಬೇಕಾಯ್ತು. ನಂತರ ಮತ್ತೆ ಶತಾಯ ಗತಾಯ ಪ್ರಯತ್ನ ಪಟ್ಟು ತುಮಕೂರಿನ ಸಿದ್ದಗಂಗಾ ಮಠ ಸೇರಿ ಟಿಸಿಎಚ್ ಶಿಕ್ಷಣ ಪೂರೈಸಿದರು. ಆದರೂ ಕೆಲಸ ಸಿಗದ ಕಾರಣ ಮತ್ತೆ 3 ವರ್ಷಗಳ ಕಾಲ ಊರು ಸೇರಿ ಮತ್ತೆ ಕೃಷಿಯಲ್ಲಿ ತೊಡಗಿದರು. ಕ್ರಮೇಣ 1976ರಲ್ಲಿ ಅವರಿಗೆ ಅದೃಷ್ಟ ಕೈಹಿಡಿಯಿತು. ಸರ್ಕಾರಿ ಶಾಲೆ ಶಿಕ್ಷಕನಾಗುವ ಅವಕಾಶ ಅವರನ್ನರಸಿ ಬಂತು. ಸುಮಾರು 29 ವರ್ಷಗಳ ಸೇವೆಯ ನಂತರ 2005ರಲ್ಲಿ ಶಾಂತವೀರಪ್ಪ ಶಿಕ್ಷಕ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಶಿಕ್ಷಕನಾಗಿರುವ ಸಮಯದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿ ಪಡೆದಿದ್ದು ಅವರ ಕಾರ್ಯಕ್ಷಮತೆಯನ್ನು ತೋರಿಸುತ್ತದೆ.

image


ಇದೇ ಸಂದರ್ಭದಲ್ಲಿ ಧಾರಾವಾಹಿಯೊಂದರಲ್ಲಿ ನಟಿಸಿರುವ ಶಾಂತವೀರಪ್ಪನವರು, 25ಕ್ಕೂ ಹೆಚ್ಚು ನಾಟಕಗಳಲ್ಲಿ ಶ್ರೀಕೃಷ್ಣ, ಶಕುನಿ, ಹರಳಯ್ಯ, ಭರತ, ರಾಜ ಮಾರ್ತಾಂಡ ಸೇರಿದಂತೆ ಹಲವು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಮಕ್ಕಳ ನಾಟಕಗಳನ್ನು ರಚಿಸಿ, ತಮ್ಮದೇ ಶಾಲೆಯ ಮಕ್ಕಳಿಂದ ಹಲವು ಆಕಾಶವಾಣಿ ರೇಡಿಯೋ ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಶಿಕ್ಷಕ ವೃತ್ತಿಯಲ್ಲಿದ್ದಾಗ 8 ಕವನ ಸಂಕಲನ, ನಾಟಕಗಳನ್ನು ಹೊರತಂದಿದ್ದಾರೆ. ಇಂತಹ ಶಾಂತವೀರಪ್ಪ ಅವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪ್ರಶಸ್ತಿ, ನೀನಾಸಂ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಹೀಗೆ ಹತ್ತು ಹಲವು ಪ್ರಶಸ್ತಿಗಳು ದೊರೆತಿವೆ.

ನಿವೃತ್ತಿಯ ಬಳಿಕ ಹೊಸ ಕ್ಷೇತ್ರಗಳಲ್ಲಿ ಕೆಲಸ

ಹಾಗಂತ ನಿವೃತ್ತಿಯ ಬಳಿಕ ಶಾಂತವೀರಪ್ಪ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ಏನನ್ನಾದರೂ ಮಾಡುವ ಹಂಬಲ, ತುಡಿತಗಳು ಪ್ರಾರಂಭವಾಗಿದ್ದೇ ಅವರಿಗೆ ನಿವೃತ್ತಿಯ ನಂತರ. ಕಾರಣ ಅವರು ನಾಟಿ ವೈದ್ಯ ಪದ್ಧತಿಯತ್ತ ಒಲವು ಹರಿಸಿದರು. ಹಳ್ಳಿಯಲ್ಲೇ ಹುಟ್ಟಿ, ಬೆಳೆದಿದ್ದ ಶಾಂತವೀರಪ್ಪ ಅವರ ಹಿರಿಯರು ನಾಟಿ ವೈದ್ಯರಾಗಿದ್ದ ಕಾರಣ, ಶಿಕ್ಷಕರಾಗಿದ್ದಾಗಲೇ ಕೆಲ ಆಯುರ್ವೇದ ಕೋರ್ಸ್‍ಗಳನ್ನು ಮಾಡಿದ್ದರು. ಅಲ್ಲದೇ ಅವರಿಗೂ ಅಸ್ತಮಾ ಸಮಸ್ಯೆ ಇದ್ದ ಕಾರಣ, ತಾವೇ ಅದಕ್ಕೆ ಪ್ರಾಕೃತಿಕ ಚಿಕಿತ್ಸೆ ಹುಡುಕತೊಡಗಿದರು. ಅಲ್ಲದೇ ಅದರಲ್ಲೂ ಯಶಸ್ವಿಯಾದ ಶಾಂತವೀರಪ್ಪ, ತಾವೂ ಗುಣಮುಖರಾಗಿದ್ದಲ್ಲದೇ 100ಕ್ಕೂ ಹೆಚ್ಚು ಮಂದಿ ಅಸ್ತಮಾ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಈಗಲೂ ಹಲವಾರು ಮಂದಿ ಅವರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

image


ಅಲ್ಲದೇ ಮೊದಲಿಂದಲೂ ಮಕ್ಕಳ ಕವನ, ಕಾವ್ಯಗಳು, ಆರೋಗ್ಯ, ಪಾರಂಪರಿಕ ವೈದ್ಯಪದ್ಧತಿ ಸೇರಿದಂತೆ ಹಲವು ವಿಷಯಗಳ ಕುರಿತು ಬರೆಯುವ ಹವ್ಯಾಸವಿದ್ದ ಶಾಂತವೀರಪ್ಪ ನಿವೃತ್ತಿಯ ನಂತರ ಹೆಚ್ಚಾಗಿ ಬರವಣಿಗೆಯತ್ತ ಗಮನ ಹರಿಸಿದರು. 2005ರಿಂದೀಚೆಗೆ ಅವರು ಅವರು 18 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈ ಮೂಲಕ ಈಗ ಕವಿಯಾಗಿ, ಲೇಖಕರಾಗಿಯೂ ಯಶಸ್ವಿಯಾಗಿದ್ದಾರೆ.

ಕ್ರಮೇಣ ಬಸವಪಥ, ಉದ್ಯೋಗ ಸ್ಫೂರ್ತಿ ಮ್ಯಾಗಝೀನ್‍ಗಳಲ್ಲಿ ಉಪಸಂಪಾದಕರಾಗಿ ಕೆಲಸಕ್ಕೆ ಸೇರುವ ಮೂಲಕ ಶಾಂತವೀರಪ್ಪ ಪತ್ರಿಕೋದ್ಯಮಕ್ಕೂ 2011ರಲ್ಲಿ ಕಾಲಿರಿಸಿದರು. ಕೆಲ ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ ಮಾಡಿದ ನಂತರ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಲೇಬೇಕೆಂಬ ಹಂಬಲ ಅವರಲ್ಲಿ ಹುಟ್ಟಿತು. ಕಾರಣ ಇದೇ ಏಪ್ರಿಲ್‍ನಲ್ಲಿ ತಮ್ಮ ಹುಟ್ಟೂರಾದ ಪಾವಗಡ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ‘ಪಾವಗಡ ಪ್ರಗತಿ’ ಎಂಬ ಪಾಕ್ಷಿಕ ಹೊರತಂದರು. ಪ್ರಾರಂಭವಾದ ಮೊದಲ ತಿಂಗಳು, ಕೇವಲ 500ರಷ್ಟಿದ್ದ ಪತ್ರಿಕೆಯ ಮಾರಾಟ ಈ 6 ತಿಂಗಳಲ್ಲಿ 4000 ಮುಟ್ಟಿದೆ. ಈ ಮೂಲಕ ಪತ್ರಕರ್ತನಿಂದ ಇಂದು ಪತ್ರಿಕೋದ್ಯಮಿಯಾಗುವತ್ತ ಹೆಜ್ಜೆ ಹಾಕಿದ್ದಾರೆ ಶಾಂತವೀರಪ್ಪ.

ಇನ್ನು ಪತ್ರಿಕೋದ್ಯಮದಲ್ಲಿರುವ ಸವಾಲುಗಳ ಬಗ್ಗೆ ಮಾತನಾಡುವ ಶಾಂತವೀರಪ್ಪ, ‘ಮುಂದಿನ ವರ್ಷದೊಳಗೆ ಪಾವಗಡ ಪ್ರಗತಿಯನ್ನು 10 ಸಾವಿರ ಜನರಿಗೆ ತಲುಪಿಸುವ ಗುರಿಯಿದೆ. ನಕ್ಸಲ್ ಪೀಡಿತ, ಬರಪೀಡಿತ ಹಾಗೂ ಹಿಂದುಳಿದ ಪಾವಗಡ ತಾಲ್ಲೂಕಿನಲ್ಲಿ ಒಳ್ಳೆಯ ಬದಲಾವಣೆ ತರಲು ಪಾವಗಡ ಪ್ರಗತಿ ಪತ್ರಿಕೆಯ ಮೂಲಕ ನನ್ನ ಪ್ರಯತ್ನ ಮುಂದುವರಿಯಲಿದೆ’ ಅಂತಾರೆ. ಪತ್ರಿಕೆಗೆ ಕನ್ನಡ ಸಾಹಿತ್ಯ ಪರಿಷತ್‍ನ ಪಾವಗಡ ತಾಲ್ಲೂಕು ಅಧ್ಯಕ್ಷರಾದ ಅಂತರಗಂಗೆ ಶಂಕರಪ್ಪ ಹಾಗೂ ಚನ್ನಬಸವಣ್ಣನವರ ಬೆಂಬಲ ಇರುವುದು, ತೆಲುಗು ಭಾಷಿಕರೇ ಹೆಚ್ಚಾಗಿರುವ ಪಾವಗಡದಲ್ಲಿ ಕನ್ನಡ ಡಿಂಡಿಮ ಮೊಳಗಿಸಲು ಸಹಕಾರಿಯಾಗದೆ ಅನ್ನೋದು ಶಾಂತವೀರಪ್ಪ ಅವರ ಅಭಿಪ್ರಾಯ.

ಹೀಗೆ ಬಳಪ ಹಿಡಿದರೆ ಶಿಕ್ಷಕ, ಗಿಡ- ಬೇರು ಹಿಡಿದರೆ ನಾಟಿ ವೈದ್ಯ, ಬಣ್ಣ ಹಚ್ಚಿದರೆ ನಟ- ನಾಟಕಕಾರ, ಕುಂಚ ಹಿಡಿದರೆ ಕಲಾವಿದ, ಲೇಖನಿ ಹಿಡಿದರೆ ಕವಿ, ಸಾಹಿತಿ, ಲೇಖಕ, ಪತ್ರಕರ್ತ... ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಾಂತವೀರಪ್ಪ ಇವತ್ತು ಪಾವಗಡ ತಾಲ್ಲೂಕಿನ ಯಶಸ್ವೀ ಪತ್ರಿಕೋದ್ಯಮಿಯಾಗಿದ್ದಾರೆ. ಈ ಮೂಲಕ ನಿವೃತ್ತರಾದ ಬಳಿಕ ಹೊಸ ಕ್ಷೇತ್ರಗಳಿಗೆ ಪದಾರ್ಪಣೆ ಮಾಡಿ, ವಯಸ್ಸು ಕೇವಲ ಸಂಖ್ಯೆಯಷ್ಟೇ, ಕೆಲಸ ಮಾಡಲು ವಯಸ್ಸಿನ ಮಿತಿಯಿಲ್ಲ ಎಂಬಂತೆ ಹಲವಾರು ಮಂದಿಗೆ ಮಾದರಿಯಾಗಿದ್ದಾರೆ.

    Share on
    close