ವಿಶೇಷ ದಿನಗಳಿಗಾಗಿ ಕರೆನ್ಸಿ ನೋಟುಗಳ ಉಡುಗೊರೆ ನೀಡಬೇಕೆಂದಿದ್ದೀರಾ? ನೀರು ಗಾರ್ಗ್ ಅವರನ್ನು ಸಂಪರ್ಕಿಸಿ

ಟೀಮ್​ ವೈ.ಎಸ್​. ಕನ್ನಡ

0

ನೀರು ಗಾರ್ಗ್ ಅವರು ಒಮ್ಮೆ ಟಿವಿಯಲ್ಲಿ ಮಿಲ್ಕಾ ಸಿಂಗ್‌ರ ಸಂದರ್ಶನವನ್ನು ನೋಡುತ್ತಿದ್ದರು. ಇದೇ ವೇಳೆ ಮಿಲ್ಕಾಸಿಂಗ್ ಅಪರೂಪದ ಉಡುಗೊರೆಗಳನ್ನು ಸ್ವೀಕರಿಸುವಾಗ ಅವರಿಗೆ ಅದೆಷ್ಟು ಸಂತೋಷವಾಗುತ್ತದೆ ಎಂಬುದರ ಬಗ್ಗೆ ವಿವರಿಸುತ್ತಿದ್ದರು. ಇದೇ ಕ್ಷಣದಲ್ಲಿ ನೀರು ಗಾರ್ಗ್ ಅವರಿಗೆ ಹೊಳೆದಿದ್ದು ಅನ್ಮೋಲ್ ಉಪಹಾರ್ ಎಂಬ ಯೋಜನೆ.

ಇದು ನೀರು ಅವರು ಮುಖ್ಯವಾದ ದಿನಗಳನ್ನು ಆಚರಿಸಲು ಹುಡುಕಿಕೊಂಡ ತಮ್ಮದೇ ಆದ ಒಂದು ದಾರಿ. ಅದು ಜನ್ಮದಿನದ ಸಂಭ್ರಮವಾಗಿರಬಹುದು, ವಾರ್ಷಿಕೋತ್ಸವ ಸಮಾರಂಭಗಳಾಗಿರಬಹುದು, ಗೃಹಪ್ರವೇಶಗಳಾಗಿರಬಹುದು. ಇಂತಹ ಅಪರೂಪದ ಸಂಭ್ರಮದ ದಿನಗಳಿಗೆ ಇನ್ನಷ್ಟು ಮೆರುಗು ಮೂಡಿಸುತ್ತದೆ ಅನಮೋಲ್ ಉಪಹಾರ್. ಉದಾಹರಣೆಗೆ ನೀವು ಜನವರಿ 1, 1990ರಲ್ಲಿ ವಿವಾಹವಾಗಿದ್ದರೆ, ನೀವು ನಿಮ್ಮ ವಾರ್ಷಿಕೋತ್ಸವದಂದು ನಿಮ್ಮ ಮಡದಿಗೆ ‘010190’ ಸೀರಿಯಲ್ ನಂಬರ್‌ನ ಕರೆನ್ಸಿ ನೋಟುಗಳನ್ನು ನೀಡಬಹುದು. ಆ ಕರೆನ್ಸಿ ನೋಟುಗಳನ್ನು ನಂಬರ್‌ಗಳ ಸಹಿತ ಹುಡುಕಲಾಗುತ್ತದೆ ಮತ್ತು ಅದಕ್ಕೆ ನಿಮ್ಮಿಷ್ಟದ ವಿನ್ಯಾಸವನ್ನು ಕೂಡಿಸಿ ಅದನ್ನು ನಿಮಗೆ ತಲುಪಿಸಲಾಗುತ್ತದೆ ಎನ್ನುತ್ತಾರೆ ನೀರು ಗಾರ್ಗ್.

58ನೇ ವರ್ಷದಲ್ಲಿ ಈ ಉದ್ಯಮ ಆರಂಭಿಸಿದ ನೀರು ಗಾರ್ಗ್

ಉತ್ತರಪ್ರದೇಶದ ಸಣ್ಣ ಪಟ್ಟಣ ಬುಲಂದ್‌ಶಹರ್‌ನಲ್ಲಿ ಹುಟ್ಟಿ ಬೆಳೆದ ನೀರು ಅವರು ತಮ್ಮ ಪದವಿಯನ್ನೂ ಸಹ ಅಲ್ಲಿಯೇ ಪೂರೈಸಿದರು. ಗೃಹಿಣಿಯಾಗಿ ತಮ್ಮ ಮೂವರು ಮಕ್ಕಳನ್ನು ನೋಡಿಕೊಳ್ಳುವ ಜೊತೆ ಜೊತೆಗೆ ತಮ್ಮ ಪತಿಯ ಬಿಸಿನೆಸ್‌ನಲ್ಲೂ ಸಹಕರಿಸಿದವರು. ಹೀಗಾಗಿ ಅವರು ಉದ್ಯಮ ಕ್ಷೇತ್ರಕ್ಕೆ ಹೊಸಬರೇನೂ ಅಲ್ಲ. ಹೀಗಾಗಿ ಅವರು ಅನ್ಮೋಲ್ ಉಪಹಾರ್ ಯೋಜನೆ ತಮಗೆ ಬಂದಾಗ ಬಹಳಷ್ಟು ಸಂಭ್ರಮಿಸಿದರು.

ನನ್ನ ಮಕ್ಕಳು ಬೆಳೆಯುತ್ತಿದ್ದಂತೆ ಅವರಿಗಾಗಿ ನಾನು ನನ್ನ ಸಮಯ ಮೀಸಲಿಡಲೇಬೇಕಿತ್ತು. ಜೊತೆ ಜೊತೆಗೆ ನಾನು ನನ್ನ ಹೊಸ ಯೋಜನೆಗೂ ಕೆಲಸ ಮಾಡಲಾರಂಭಿಸಿದೆ. ಸ್ವಂತವಾಗಿ ಏನನ್ನಾದರೂ ಮಾಡುವುದು ನನಗೆ ಇಷ್ಟವಾದ ಕೆಲಸವಾಗಿತ್ತು ಎನ್ನುತ್ತಾರೆ ನೀರು ಗಾರ್ಗ್. ನೀರು ಅವರ ಪತಿಯೂ ಸಹ ಅವರಿಗೆ ಸಹಕಾರ ನೀಡಿದರು.

ಅನ್ಮೋಲ್ ಉಪಹಾರ್

8 ತಿಂಗಳ ಹಿಂದಷ್ಟೇ ಅವರು ತಮ್ಮ ಹೊಸ ಉದ್ಯಮವನ್ನು ಆರಂಭಿಸಿದರು. ಇಷ್ಟು ಕಡಿಮೆ ಸಮಯದಲ್ಲಿ ಅವರಿಗೆ ದೊರೆತ ಪ್ರತಿಕ್ರಿಯೆ ಅದ್ಭುತ, ಅಪೂರ್ವ. ನೀರು ಅವರ ಕೆಲಸದ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಅವರು ಕರೆನ್ಸಿ ನೋಟುಗಳಿಗಾಗಿ ಹುಡುಕಾಡುತ್ತಾರೆ. ಒಮ್ಮೆ ಅವರು ಈ-ಮೇಲ್ ಅಥವಾ ಫೋನ್‌ನಿಂದ ಇಂತಹ ಉಡುಗೊರೆಗಳಿಗಾಗಿ ಬೇಡಿಕೆ ಪಡೆದರೆ ಆಗ ಶುರುವಾಗುತ್ತೆ ಕರೆನ್ಸಿ ನೋಟುಗಳ ಹುಡುಕಾಟ. ಸಾಮಾನ್ಯವಾಗಿ ನೀರು ಅವರು ನಿಗದಿತ ದಿನಾಂಕಕ್ಕಾಗಿ ತಮ್ಮ ಎಲ್ಲಾ ಮೂಲಗಳಿಂದ ಹುಡುಕಾಡುತ್ತಾರೆ. ಇದಕ್ಕಾಗಿ ತಮ್ಮ ಗ್ರಾಹಕರಿಂದ 1 ವಾರಗಳ ಕಾಲಾವಕಾಶ ಪಡೆದುಕೊಳ್ಳುತ್ತಾರೆ.

ಇದೊಂದು ನಂಬರ್ ಗೇಮ್ ಮತ್ತು ಕೆಲವೊಮ್ಮೆ ಗ್ರಾಹಕರು ಬಯಸುವ ಸಂಖ್ಯೆಯ ನೋಟುಗಳು ಸಿಗುವುದು ಬಹಳ ಕಷ್ಟಕರವಾಗಿರುತ್ತದೆ. ನಿಗದಿತ ದಿನಾಂಕದ ನೋಟನ್ನು ನಿಗದಿತ ಸಮಯದಲ್ಲಿ ಹುಡುಕುವುದು ಒಂದು ದೊಡ್ಡ ಸವಾಲು. ಅಂತಹ ನೋಟುಗಳು ಸಿಗದಿದ್ದಾಗ ಅದನ್ನು ಗ್ರಾಹಕರಿಗೆ ತಿಳಿಸುವುದು ಮತ್ತೊಂದು ಸವಾಲು ಮತ್ತು ಕಷ್ಟಕರವಾದ ಕೆಲಸ.

ಗ್ರಾಹಕರು ತಮ್ಮ ವಿನ್ಯಾಸಗಳನ್ನು ಮೆಚ್ಚಿಕೊಳ್ಳುವುದು ಮತ್ತೊಂದು ಸವಾಲು. ಪ್ರಸ್ತುತ ಅವರು ವಿಭಿನ್ನ ವಿನ್ಯಾಸಗಳ ರಚನೆಗಾಗಿಯೇ ಒಬ್ಬ ವಿನ್ಯಾಸಕಾರನನ್ನು ಕೆಲಸಕ್ಕಿಟ್ಟುಕೊಂಡಿದ್ದಾರೆ. ವಿನ್ಯಾಸಕ್ಕೆ ಸಂಬಂಧಿಸಿದ ಇಂತಹ ಸವಾಲುಗಳನ್ನು ಪರಿಹರಿಸಿಕೊಳ್ಳಲು ನೂತನ ವಿನ್ಯಾಸಗಳ ರಚನೆಗಾಗಿ ವಿಶ್ಯುವಲ್ ಡಿಸೈನರ್‌ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವತ್ತ ಯೋಜನೆ ರೂಪಿಸುತ್ತಿದ್ದಾರೆ ನೀರು.

ನೀರು ಅವರು ಮಾರ್ಕೆಟಿಂಗ್ ವಿಭಾಗ ಮತ್ತು ತಮ್ಮ ಉದ್ಯಮವನ್ನು ಪ್ರಚುರಪಡಿಸಲು ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ಅವರಿಗೆ ಇದೊಂದು ಸವಾಲಾಗಿಯೇ ಇದೆ. ತಮ್ಮ ವಿಚಾರಗಳನ್ನು ಪ್ರಪಂಚಕ್ಕೆ ತಿಳಿಸುವುದಕ್ಕಾಗಿ ಅವರು ವಿವಿಧ ಮಳಿಗೆಗಳನ್ನು ದೆಹಲಿ ಮತ್ತು ಫ್ಲೀ ಮಾರುಕಟ್ಟೆಗಳ ಮಾಲುಗಳಲ್ಲಿ ತೆರೆದಿದ್ದಾರೆ. ದೆಹಲಿಯ ಉತ್ತರ ಭಾಗದಿಂದಲೇ ಅವರಿಗೆ ಬಹುತೇಕ ಬೇಡಿಕೆಗಳು ದೊರೆಯುತ್ತಿವೆ. ಅಲ್ಲದೇ ಚೆನ್ನೈನಿಂದಲೂ ಕರೆನ್ಸಿ ನೋಟುಗಳಿಗೆ ಬೇಡಿಕೆಗಳು ಬಂದಿವೆ.

ಮಹಿಳಾ ಉದ್ಯಮಿಯಾಗಿ ನೀರು ಗಾರ್ಗ್

ಜನ ನೀರು ಅವರನ್ನು ಈ 58ರ ವಯಸ್ಸಿನಲ್ಲಿ ಉದ್ಯಮ ಆರಂಭಿಸಬೇಕಾದ ಅಗತ್ಯ ಏನಿತ್ತು ಎಂಬುದರ ಬಗ್ಗೆ ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ ಅವರ ಪತಿ ಮಾತ್ರ ನೀರು ಅವರ ನಿಲುವುಗಳನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ.

ಮಹಿಳಾ ಉದ್ಯಮಿಗಳು ಎದುರಿಸುವ ಅತೀ ದೊಡ್ಡ ಸಮಸ್ಯೆ ಎಂದರೆ ಬಹಳಷ್ಟು ಜವಾಬ್ದಾರಿಗಳನ್ನು ಒಬ್ಬರೇ ನಿಯಂತ್ರಿಸುವುದು. ವೈಯಕ್ತಿಕ ಜೀವನ ಹಾಗೂ ವೃತ್ತಿ ಎರಡನ್ನೂ ಒಂದೇ ಬಾರಿಗೆ ನಿಭಾಯಿಸುವುದು ಮಹಿಳಾ ಉದ್ಯಮಿಗಳ ಪಾಲಿಗೆ ಅಷ್ಟೇನೂ ಸುಲಭದ ವಿಚಾರವಲ್ಲ ಎನ್ನುತ್ತಾರೆ ನೀರು ಗಾರ್ಗ್.

ಸ್ಫೂರ್ತಿ

ತಮ್ಮ ಉದ್ಯಮವನ್ನು ಮುಂದುವರಿಸಲು ಅವರಿಗೆ ತಮ್ಮ ಕುಟುಂಬಸ್ಥರು ನೀಡುವ ಬೆಂಬಲವೇ ಹಾಗೂ ಗ್ರಾಹಕರ ಉತ್ತಮ ಪ್ರತಿಕ್ರಿಯೆಗಳೇ ಸ್ಫೂರ್ತಿ. ಪ್ರತಿ ಬಾರಿಯೂ ನಮ್ಮ ಉತ್ಪನ್ನಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಮತ್ತು ಪುನರಾವರ್ತಿತ ಗ್ರಾಹಕರೂ ಸಹ ದೊರಕಿದ್ದಾರೆ. ಇದರಿಂದ ನನಗೆ ತೃಪ್ತಿಯಾಗಿದೆ ಎಂಬುದು ನೀರು ಗಾರ್ಗ್ ಅವರ ಮಾತು. ಪರಿಶ್ರಮಪಟ್ಟು ಕೆಲಸ ಮಾಡುವುದಕ್ಕಿಂತ ಹೆಚ್ಚು ಬೇರೇನೂ ಇಲ್ಲ ಎಂಬ ತಮ್ಮ ಪತಿಯ ನಿಲುವನ್ನು ನೀರು ಸಹ ಪ್ರತಿಪಾದಿಸುತ್ತಾ ತಮ್ಮ ಮಾತು ಮುಗಿಸಿದರು.


ಲೇಖಕರು: ತನ್ವಿ ದುಬೆ

ಅನುವಾದಕರು: ವಿಶ್ವಾಸ್​

Related Stories

Stories by YourStory Kannada