ಐಟಿ ತಂತ್ರಜ್ಞನಿಂದ ಹೈನುಗಾರಿಕೆ.. ! ಇದು ಅಮೃತ ಡೈರಿಯ ಕಥೆ

ಟೀಮ್​ ವೈ.ಎಸ್​​.

3

ಆಗತಾನೇ ಸೂರ್ಯಾಸ್ತವಾಗಿತ್ತು. ಆ ಫಾರ್ಮ್​ನಲ್ಲಿದ್ದ ಪ್ರಾಣಿಗಳೆಲ್ಲಾ ವಿಶ್ರಾಂತಿಗೆ ಜಾರುತ್ತಿದ್ದವು. ನಾನು ನಮ್ಮ ಆ ದಿನದ ಅತಿಥಿ ಸಂತೋಷ್ ಡಿ ಸಿಂಗ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದೆ. ಅವರು ಆಗಲೂ ಕೃಷಿ ಕೆಲಸ ಮಾಡುತ್ತಲೇ ಇದ್ದರು. ಬಾತುಕೋಳಿಗಳ ಸದ್ದು ನನಗೆ ದೂರವಾಣಿಯಲ್ಲೂ ಕೇಳಿಸುತ್ತಿತ್ತು. ದೊಡ್ಡಬಳ್ಳಾಪುರದ ಹಾಲೇನಹಳ್ಳಿಯಿಂದ ತಂಗಾಳಿ ಚೆನ್ನೈವರೆಗೂ ಬೀಸುತ್ತಿದೆ ಎಂದು ನನಗೆ ಅನ್ನಿಸತೊಡಗಿತ್ತು. ನಿಮಗೆ ಸಂತೋಷ್ ಕಥೆ ಕೇಳಿದರೆ ಯಾವುದೋ ಫ್ಯಾಂಟಸಿ ಲೋಕಕ್ಕೆ ಹೋದಂತೆ ಭಾಸವಾಗುವುದು ನಿಶ್ಚಿತ. ಐಟಿಯಿಂದ ಡೈರಿಗೆ, ಬಹುರಾಷ್ಟ್ರೀಯ ಕಂಪನಿಯಲ್ಲಿ ದೊಡ್ಡ ಉದ್ಯೋಗ ಬಿಟ್ಟು ಅಮೃತ ಡೈರಿ ಫಾರ್ಮ್ಸ್ ಆರಂಭಿಸುವವರೆಗೆ ಅವರ ಪ್ರಯಾಣವನ್ನೆಲ್ಲಾ ತುಂಬಾ ಆಸಕ್ತಿಯಿಂದಲೇ ಸಂತೋಷ್ ಹೇಳಿಕೊಂಡರು.

ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ನಾನು ಮೊದಲ ಒಂದು ದಶಕವನ್ನು ಐಟಿ ಕ್ಷೇತ್ರದ ಉದ್ಯೋಗದಲ್ಲೇ ಕಳೆದೆ. ಡೆಲ್ ಮತ್ತು ಅಮೆರಿಕಾ ಆನ್​ಲೈನ್ ಸಂಸ್ಥೆಗಳಲ್ಲಿ ದುಡಿದೆ. ಆ ದಿನಗಳಲ್ಲಿ ಭಾರತದಲ್ಲಿ ಐಟಿ ಕ್ಷೇತ್ರ ಭಾರೀ ಅಭಿವೃದ್ಧಿ ಕಾಣುತ್ತಿತ್ತು. ನನಗೆ ಕರ್ತವ್ಯದ ಭಾಗವಾಗಿ ಪ್ರಪಂಚ ಪರ್ಯಟನೆಯ ಭಾಗ್ಯವೂ ಸಿಕ್ಕಿತ್ತು. ಇಂತಹ ಪ್ರವಾಸಗಳ ವೇಳೆಯಲ್ಲೇ ನನಗೆ ಹಣ ಮಾಡುವ ಬೇರೆ ಬೇರೆ ದಾರಿಗಳು ಕಾಣಲಾರಂಭಿಸಿದವು. ಪ್ರಕೃತಿಗೆ ಹತ್ತಿರವಾಗಿ ಬದುಕುತ್ತಲೇ ಉತ್ತಮ ಬದುಕು ಕಟ್ಟಿಕೊಳ್ಳುವ ಹಾದಿ ಕಾಣತೊಡಗಿತ್ತು. ಕೇವಲ ವೀಕೆಂಡ್​​ಗಳಲ್ಲಷ್ಟೇ ಪ್ರಕೃತಿಯ ಮಡಿಲಿಗೆ ಜಾರುತ್ತಿದ್ದ ಖುಷಿ, ನನಗೆ ಜೀವನಪೂರ್ತಿ ಬೇಕು ಎನ್ನಿಸಿತು. ಹೀಗಾಗಿ ನಾನು ಡೈರಿ ಇಂಡಸ್ಟ್ರಿಗೆ ಕಾಲಿಡುವ ಬಗ್ಗೆ ಯೋಜನೆ ರೂಪಿಸಿದೆ.

ನಾನು ಕಾರ್ಪೋರೇಟ್ ಪ್ರಪಂಚಕ್ಕೆ ಗುಡ್​​ಬೈ ಹೇಳುವ ನಿರ್ಧಾರವನ್ನು ಕುಟುಂಬದವರಿಗೆ ತಿಳಿಸಿ ಅವರಿಗೆ ಮನವರಿಕೆ ಮಾಡಿಕೊಟ್ಟೆ. ಆ ಬಳಿಕ ಸಂಪೂರ್ಣವಾಗಿ ಡೈರಿ ಉದ್ಯಮದ ಬಗ್ಗೆ ಅಧ್ಯಯನ ಮಾಡುತ್ತಾ ಸಂಪೂರ್ಣವಾಗಿ ಅದರಲ್ಲೇ ಮುಳುಗಿ ಹೋದೆ. ಪ್ರಾಜೆಕ್ಟ್ ನಿರ್ವಹಣೆ, ಪ್ರೋಸೆಸ್ ಇಂಪ್ರೂವ್​ಮೆಂಟ್, ಬ್ಯುಸಿನೆಸ್ ಇಂಟೆಲಿಜೆನ್ಸ್, ಸಂಪನ್ಮೂಲ ನಿರ್ವಹಣೆ ಮೊದಲಾದ ನನ್ನ ಐಟಿ ವೃತ್ತಿ ಜೀವನದ ಕೆಲಸಗಳು ಈಗ ಡೈರಿ ಕೆಲಸಗಳಲ್ಲೂ ನೆರವಾಗಿವೆ.

ಅಸ್ಥಿರವಗಿರುವ ಭಾರತೀಯ ಕೃಷಿ ಕ್ಷೇತ್ರದಲ್ಲಿ ಹೈನುಗಾರಿಕೆಯೇ ಹೆಚ್ಚು ಸುರಕ್ಷಿತ, ಸುಸ್ಥಿರ ಮತ್ತು ಲಾಭದಾಯಕ ಉದ್ಯಮ ಎಂದು ನನಗೆ ಮನವರಿಕೆಯಾಯಿತು. ಹೀಗಾಗಿ ಅದನ್ನೇ ಮಾಡಲು ನಿರ್ಧರಿಸಿದೆ. ಹವಾನಿಯಂತ್ರಿತ ಕೊಠಡಿಗಳಿಂದ ಡೈರಿಯ 24 ಗಂಟೆಗಳ ಕೆಲಸಕ್ಕೆ ನನ್ನನ್ನು ನಾನು ಪರಿವರ್ತಿಸಿಕೊಂಡದ್ದು ಜೀವನದ ಅತ್ಯಂತ ದೊಡ್ಡ ಅನುಭವ ಎನ್ನುತ್ತಾರೆ ಸಂತೋಷ್.

ನನಗೆ ಕೃಷಿಯಲ್ಲಿ ಯಾವುದೇ ಅನುಭವ, ಹಿನ್ನೆಲೆ ಇಲ್ಲದೇ ಇದ್ದುದರಿಂದ, ನಾನು ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯಲ್ಲಿ ಪೂರ್ಣಾವಧಿ ತರಬೇತಿಗೆ ಸೇರಿಕೊಂಡೆ. ನನ್ನ ಶಿಕ್ಷಣದ ಭಾಗವಾಗಿ, ನಾನು ಡೈರಿ ಫಾರ್ಮ್​ಗಳಲ್ಲಿ ಕೆಲಸ ಮಾಡಿದೆ. ಜಾನುವಾರುಗಳ ಜೊತೆಗೆ ಬದುಕುವುದು ಮತ್ತು ಅವುಗಳ ಕೆಲಸದ ಬಗ್ಗೆ ಪ್ರಥಮ ಮಾಹಿತಿಯನ್ನು ಎಲ್ಲವನ್ನೂ ಅಲ್ಲಿ ತಿಳಿದುಕೊಂಡೆ. ಫಾರ್ಮ್​ಗಳಲ್ಲಿ ನನ್ನ ಜೀವನ ಮತ್ತು ತರಬೇತಿಯಿಂದಾಗಿ ಜಾನುವಾರು ತಳಿ ಅಭಿವೃದ್ಧಿ ಮೊದಲಾದ ವಿಚಾರಗಳಲ್ಲಿ ಆಸಕ್ತಿ ಉಂಟಾಯಿತು.

ಮೂರು ದನ-ಮೂರು ಎಕ್ರೆ

ವೀಕೆಂಡ್​​ಗಳಲ್ಲಿ ಕಾಲಕಳೆಯಲಷ್ಟೇ ಉಪಯೋಗಿಸುತ್ತಿದ್ದ ಮೂರು ಎಕ್ರೆ ಜಮೀನಿನಲ್ಲಿ ಡೈರಿ ಆರಂಭ ಮಾಡಿದ್ರು. ಮೊದಲಿಗೆ ಮೂರು ದನಗಳನ್ನು ಖರೀದಿಸಿ ತಮ್ಮ ಹೈನುಗಾರಿಕೆ ಆರಂಭಿಸಿದರು. ಅದು ಮೂರು ವರ್ಷಗಳ ಹಿಂದಿನ ಕಥೆ. ಸಂತೋಷ್ ಅವರು ಖುದ್ದಾಗಿ, ಹಸುಗಳಿಗೆ ಮೇವು ಹಾಕುವುದು, ಸ್ನಾನ ಮಾಡಿಸುವುದು, ಹಾಲು ಕೆರೆಯುವುದು, ಶೆಡ್ ಕ್ಲೀನ್ ಮಾಡುವುದು ಎಲ್ಲವನ್ನೂ ಮಾಡತೊಡಗಿದರು. ಹಾಗೆ ಹೈನುಗಾರಿಕೆ ಆರಂಭವಾಯಿತು.

ಹಾಲು ಕೊಡುವ ದನಗಳನ್ನು ಒಂದೊಂದಾಗಿ ಸೇರಿಸುತ್ತಾ ಮೊದಲ ವರ್ಷದಲ್ಲೇ 20 ಹಸುಗಳನ್ನು ಹೊಂದುವ ಯೋಜನೆ ಸಂತೋಷ್​​ದ್ದಾಗಿತ್ತು. ಅದಕ್ಕಾಗಿಯೇ ಆರಂಭದಲ್ಲಿಯೇ 20 ಹಸುಗಳಿಗಾಗುಷ್ಟು ಮೂಲಸೌಕರ್ಯ ಸೃಷ್ಟಿಸಿದ್ದರು. ಎನ್​ಡಿಆರ್​​ಐನಲ್ಲಿ ತರಬೇತಿ ನೀಡಿದ್ದ ತರಬೇತುದಾರರೊಬ್ಬರು, ತಂತ್ರಜಾನ ಅಳವಡಿಸಿಕೊಳ್ಳಲು ನಬಾರ್ಡ್ ನೆರವು ಪಡೆಯುವಂತೆ ಸಲಹೆ ನೀಡಿದರು. ನಾನು ನಬಾರ್ಡ್ ಅಧಿಕಾರಿಗಳನ್ನು ಸಂಪರ್ಕಿಸಿದೆ. ಅಲ್ಲಿ ನನಗೆ ಸಾಕಷ್ಟು ಮಾಹಿತಿ ಸಿಕ್ಕಿತು. ನೂರು ಹಸುಗಳನ್ನು ಸಾಕಿದರೆ, ದಿನಕ್ಕೆ 1,500 ಲೀಟರ್​​ನಷ್ಟು ಹಾಲು ಉತ್ಪಾದಿಸಬಹುದು. ಇದರಿಂದ ವಾರ್ಷಿಕವಾಗಿ 1 ಕೋಟಿ ರೂಪಾಯಿ ವಹಿವಾಟು ನಡೆಸಬಹುದು ಎಂದು ಹೇಳಿದರು.

ಕಳೆದ 5 ವರ್ಷಗಳಿಂದ ಪ್ರತಿವರ್ಷವೂ ಡೈರಿ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ವ್ಯವಹಾರ ಆರೋಗ್ಯಕರವಾಗಿ ನಡೆಯುತ್ತಿದೆ. ನಬಾರ್ಡ್​ನಿಂದ ಬೆಳ್ಳಿ ಪದಕ ಪಡೆದಿರುವುದು ನನ್ನಲ್ಲಿ ಅತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ ಎನ್ನುತ್ತಾರೆ ಸಂತೋಷ್. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೂಡಾ ನನ್ನ ಪರಿಷ್ಕೃತ ಯೋಜನೆಗೆ ಸಾಲದ ನೆರವು ನೀಡುವುದಾಗಿ ಹೇಳಿತು. ಹೀಗಾಗಿ, 100 ಹಸುಗಳಿಗಾಗುವಷ್ಟು ಮೂಲಸೌಕರ್ಯ ಕಲ್ಪಿಸಿದ್ದೇನೆ.

ಈ ಮಧ್ಯೆ, ಅನಿರೀಕ್ಷಿತ ಸವಾಲುಗಳೂ ಎದುರಾಗಿದ್ದವು. ಕೈಕೊಟ್ಟ ಮಳೆಯಿಂದಾಗಿ ಸುಮಾರು 18 ತಿಂಗಳುಗಳ ಕಾಲ ಬರ ಪರಿಸ್ಥಿತಿ ಎದುರಾಗಿತ್ತು. ಆಗ ಹಸಿರು ಹುಲ್ಲಿಗೆ ಕೊರತೆ ಉಂಟಾಗಿತ್ತು. ಹಸಿರು ಹುಲ್ಲು ಖರೀದಿಸಲು 10 ಪಟ್ಟು ಹೆಚ್ಚು ಖರ್ಚುಮಾಡಬೇಕಾಗಿ ಬಂತು. ಅಲ್ಲದೆ, ಹಸಿರು ಹುಲ್ಲಿನ ಕೊರತೆಯಿಂದಾಗಿ, ನಿತ್ಯದ ಉತ್ಪಾದನೆಯಲ್ಲೂ ಕುಸಿತವಾಯಿತು. ಇದರಿಂದಾಗಿ ಇಡೀ ವ್ಯವಹಾರದ ಮೇಲೆ ಹೊಡೆತ ಬಿತ್ತು ಎಂದು ಕಷ್ಟದ ದಿನಗಳನ್ನೂ ವಿವರಿಸುತ್ತಾರೆ ಸಂತೋಷ್.

ನನ್ನ ಉಳಿತಾಯ ಖಾತೆಯಲ್ಲಿದ್ದ ಹಣವನ್ನೆಲ್ಲಾ ತೆಗೆದು, ಡೈರಿಗೆ ಬೇಕಾದ ಸಂಪನ್ಮೂಲ ಕ್ರೋಢೀಕರಿಸಿ, ಕೊರತೆಯಾಗದಂತೆ ನೋಡಿಕೊಂಡೆ. ಮುಂದೆ ಈ ರೀತಿಯ ತೊಂದರೆ ಎದುರಿಸಬಾರದು ಎಂದು ಆಗಲೇ ನಿರ್ಧರಿಸಿದೆ. ಅದಕ್ಕಾಗಿ, ದಿನವೊಂದಕ್ಕೆ 1 ಟನ್ ಹಸಿರು ಮೇವು ಉತ್ಪಾದಿಸುವ ಹೈಡ್ರೋಪಾನಿಕ್ಸ್ ಘಟಕವೊಂದನ್ನು ಸ್ಥಾಪಿಸಿದೆ. ಇದರಿಂದ ಎರಡು ಲಾಭವಾಯಿತು. ಹೊರಗಿನಿಂದ ಹಸಿರು ಮೇವು ಖರೀದಿಸುವುದಕ್ಕಿಂತ ಕಡಿಮೆ ದರದಲ್ಲಿ ನಾವೇ ಹುಲ್ಲು ಬೆಳೆಯಲು ಸಾಧ್ಯವಾಯಿತು.

ದೇವರ ದಯೆಯಿಂದ ಈ ಬಾರಿ ಸಾಕಷ್ಟು ಮಳೆಯಾಗಿದೆ. ಹೈಡ್ರೋಪಾನಿಕ್ಸ್ ಘಟಕ ಸೇರಿದಂತೆ ನಮ್ಮಲ್ಲಿ ಸಾಕಷ್ಟು ಹುಲ್ಲಿನ ಲಭ್ಯತೆ ಇದೆ.. ಹೀಗಾಗಿ ನಾವು ಹಸುಗಳ ಸಂಖ್ಯೆ ಹೆಚ್ಚು ಮಾಡಿ ಉತ್ಪಾದನೆಯನ್ನೂ ಹೆಚ್ಚುಮಾಡಿದ್ದೇವೆ. ಈ ಮೂಲಕ ಕಳೆದುಕೊಂಡದನ್ನು ಗಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಬ್ಯಾಂಕ್​​ಗಳು ಮತ್ತಷ್ಟು ಹಣಕಾಸಿನ ನೆರವು ಒದಗಿಸಲು ಹಿಂದೇಟು ಹಾಕಿವೆ. ಹೀಗಾಗಿ, ನಾನು ಹೈನುಗಾರಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಂಡವಾಳಕ್ಕಾಗಿ ಎದರು ನೋಡುತ್ತಿದ್ದೇನೆ.

ನಾನು ಕಲಿತ ಪಾಠಗಳು ಹೊಸ ಉದ್ಯಮಿಗಳಿಗೆ ನಿಜಕ್ಕೂ ಒಳ್ಳೆಯ ಮಾರ್ಗದರ್ಶನವಾಗಲಿದೆ. 18 ತಿಂಗಳ ಬರಗಾಲದ ಸಮಯದಲ್ಲಿ ಸಾಕಷ್ಟು ಚಿಕ್ಕ ಚಿಕ್ಕ ಡೈರಿಗಳು ಪ್ರಕೃತಿ ಮಾತೆಯನ್ನು ಶಪಿಸುತ್ತಾ ಬಾಗಿಲು ಮುಚ್ಚಿಕೊಂಡಿದ್ದವು. ಡೈರಿ ಮುಚ್ಚಿ ಬೇರೆ ಉದ್ಯಮ ಆರಂಭಿಸಿದ್ದರು. ಆದರೆ, ನನಗೆ ಡೈರಿ ಮೇಲೆ ನಂಬಿಕೆ ಇತ್ತು. ಅದರ ಜೊತೆಗೆ ಬದುಕುವ ಛಲವಿತ್ತು. ಈಗ ನಾನು ನನ್ನ ನಿರ್ಧಾರಕ್ಕೆ ತೃಪ್ತನಾಗಿದ್ದೇನೆ. ನಮ್ಮ ಉದ್ದೇಶಕ್ಕೆ ನಾವು ಗಟ್ಟಿಯಾಗಿ ಅಂಟಿಕೊಂಡರೆ, ಗೆಲುವು ಸಿಗುವುದು ಶತಸಿದ್ಧ ಎಂದು ಮಾತು ಮುಗಿಸುತ್ತಾರೆ ಸಂತೋಷ್.

Related Stories