ಡಿಯರ್ ಮೋದಿ, ನಿಮ್ಮ ಸ್ವಚ್ಛಭಾರತ ಹೆಚ್ಚುವರಿ ತೆರಿಗೆಯಿಂದ ಭಾರತೀಯ ಸ್ಟಾರ್ಟ್‌ ಅಪ್‌ಗಳಿಗೆ ಜ್ವರ ಬರುತ್ತಿದೆ

ಟೀಮ್​ ವೈ.ಎಸ್​​. ಕನ್ನಡ


ಡಿಯರ್ ಮೋದಿ, ನಿಮ್ಮ ಸ್ವಚ್ಛಭಾರತ ಹೆಚ್ಚುವರಿ ತೆರಿಗೆಯಿಂದ ಭಾರತೀಯ ಸ್ಟಾರ್ಟ್‌ ಅಪ್‌ಗಳಿಗೆ ಜ್ವರ ಬರುತ್ತಿದೆ

Sunday December 13, 2015,

5 min Read

(Image source: shutterstock)

(Image source: shutterstock)


ಭಾರತ ಸರ್ಕಾರ ಸ್ವಚ್ಛ ಭಾರತ್ ಅಭಿಯಾನದ ಉಪತೆರಿಗೆ ಶೇ.0.5 ಎಂದು ಘೋಷಿಸಿದೆ. ಭಾರತೀಯ ಸ್ಟಾರ್ಟ್ ಅಪ್ ಸಂಸ್ಥೆಗಳು ನವೆಂಬರ್ 2015ರಿಂದ ಸೇವಾ ತೆರಿಗೆ ಶೇ.14.5ರ ಜೊತೆಗೆ ಈ ಉಪತೆರಿಗೆಯನ್ನೂ ಭರಿಸಬೇಕಾಗಿದೆ.

ಈ ಉಪತೆರಿಗೆ ಶೇ.2ರಷ್ಟು ಹೆಚ್ಚಿಸಬೇಕೆಂಬ ಪ್ರಸ್ತಾವನೆ ಕೇಂದ್ರದ ಮುಂದಿದೆ. ಆದರೆ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಸಂಸ್ಥೆಗಳು ಈಗಾಗಲೇ ಹಿನ್ನಡೆ ಅನುಭವಿಸುತ್ತಿರುವ ಕಾರಣ ಈ ಪ್ರಸ್ತಾವನೆ ಇನ್ನೂ ಜಾರಿಯಾಗಿಲ್ಲ. ಈ ಹೆಚ್ಚುವರಿ ತೆರಿಗೆಯಿಂದಾಗಿ ವೇಗವಾಗಿ ಅಭಿವೃದ್ಧಿ ಸಾಧಿಸಬೇಕೆಂಬ ಗುರಿಯುಳ್ಳ ಸ್ಟಾರ್ಟ್ ಅಪ್ ಸಂಸ್ಥೆಗಳು ನಿರಾಶೆ ಹೊಂದಿವೆ.

(Data Source: Press Information Bureau; Media Reports)

(Data Source: Press Information Bureau; Media Reports)


ಕೆಳಹಂತದ ಸಂಸ್ಥೆಗಳಿಗೆ ಆಘಾತಕಾರಿ

ಹೌಸ್ ಜಾಯ್ ಅನ್ನುವ ಹೈಪರ್ ಲೋಕಲ್ ಕ್ಷೇತ್ರದಲ್ಲಿ ಮನೆ ಮನೆಗೆ ಉತ್ಪನ್ನ ಒದಗಿಸುವ ಸಂಸ್ಥೆಯ ಸಿಇಓ ಸರಣ್ ಚಟರ್ಜಿ ಈ ಹೆಚ್ಚುವರಿ ತೆರಿಗೆ ಉದ್ಯಮಕ್ಕೆ ಬಾಧಿಸುತ್ತಿದೆ ಎಂದಿದ್ದಾರೆ. ಶೇ.0.5 ತೆರಿಗೆಯಾದರೂ ಸಂಸ್ಥೆಯ ಪ್ರಗತಿಗೆ ನಕಾರಾತ್ಮಕ ಅಂಶವಾಗಿದೆ. ದೇಶದ 9 ಮುಖ್ಯಪಟ್ಟಣಗಳಲ್ಲಿ ಪ್ರತಿದಿನ 4000 ಆರ್ಡರ್ ಗಳಿಸಿಕೊಂಡು ವ್ಯವಹಾರ ನಡೆಸುತ್ತಿರುವ ಹೌಸ್ ಜಾಯ್ ಸಂಸ್ಥೆ ಕೇಂದ್ರದ ಈ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ 12 ತಿಂಗಳಲ್ಲಿ 25 ಪಟ್ಟಣಗಳನ್ನು ರೀಚ್ ಆಗುವ ಮಹತ್ವಾಕಾಂಕ್ಷೆ ಇದಕ್ಕಿತ್ತು.

ಸರಣ್ ಈ ಕುರಿತಾಗಿ ಮಾತನಾಡಿ ಒಂದು ವೇಳೆ ಶೇ.2ರಷ್ಟು ಹೆಚ್ಚುವರಿ ತೆರಿಗೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಸ್ತು ಎಂದರೆ ಶೇ.1.5ಹೆಚ್ಚುವರಿ ತೆರಿಗೆ ಭರಿಸುವುದು ಭಾರತೀಯ ಸ್ಟಾರ್ಟ್ ಅಪ್ ಸಂಸ್ಥೆಗಳ ಪಾಲಿಗೆ ದುಸ್ತರವಾಗಲಿದೆ ಎಂದಿದ್ದಾರೆ.

ಹೈಪರ್ ಲೋಕಲ್ ಉದ್ಯಮದ ಅಂದಾಜು ಶೇ.20 ನಿವ್ವಳ ಲಾಭ ಅದರ ಮಾರ್ಕೆಟಿಂಗ್ ಅಭಿವೃದ್ಧಿಗೆ ಹೆಚ್ಚಿನ ಪಾಲು ವ್ಯಯವಾಗುತ್ತಿದೆ. ಈ ಸ್ಟಾರ್ಟ್ ಅಪ್‌ಗಳು ಪ್ರಾರಂಭಿಕವಾಗಿ ದೊಡ್ಡ ಹೂಡಿಕೆ ಮಾಡಿರುತ್ತವೆ. ಗ್ರಾಹಕರನ್ನು ಆಕರ್ಷಿಸಲು ಡಿಸ್ಕೌಂಟ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡುತ್ತವೆ. ತಮ್ಮ ಲಾಭದ ದೊಡ್ಡ ಪಾಲನ್ನು ಮಾರ್ಕೆಟಿಂಗ್‌ಗಾಗಿ ವಿನಿಯೋಗಿಸಿರುತ್ತವೆ. ಹೀಗಾಗಿ ಈಗ ಈ ಹೆಚ್ಚುವರಿ ತೆರಿಗೆ ಇವುಗಳ ಪಾಲಿಗೆ ಕಠಿಣವಾಗುತ್ತಿದೆ.

ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಗ್ರಾಹಕರನ್ನು ಸೆಳೆಯಲು ದರ ಮಾದರಿ ನಿರ್ಣಾಯಕ ಸಂಗತಿ. ಆದರೆ ಈ ಹೆಚ್ಚುವರಿ ತೆರಿಗೆಯಿಂದಾಗಿ ಸ್ಟಾರ್ಟ್ ಅಪ್ ಸಂಸ್ಥೆಗಳು ಬಳಲುತ್ತಿವೆ. ಪೆಪ್ಪರ್ ಟ್ಯಾಪ್ ಎನ್ನುವ ದಿನಸಿ ಉತ್ಪನ್ನಗಳನ್ನು ಡೋರ್ ಡೆಲಿವರಿ ನೀಡುವ ಹೈಪರ್ ಲೋಕಲ್ ಸಂಸ್ಥೆಯ ಸಿಇಓ ನವನೀತ್ ಸಿಂಗ್ ಸಹ ಈ ಹೆಚ್ಚುವರಿ ತೆರಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಟಾರ್ಟ್ ಅಪ್ ಸಂಸ್ಥೆ ಎಷ್ಟೇ ನಷ್ಟ ಹೊಂದಿದರೂ ಗ್ರಾಹಕರ ಕಲ್ಯಾಣ ಮಾತ್ರ ಗಮನದಲ್ಲಿರಿಸಿಕೊಂಡಿರುತ್ತದೆ. ಹೆಚ್ಚುವರಿ ತೆರಿಗೆ ಭರಿಸಬೇಕು ಎಂಬ ಕಾರಣಕ್ಕೆ ಗ್ರಾಹಕರಿಗೆ ಹೆಚ್ಚುವರಿ ಮೊತ್ತ ನಿಗದಿ ಮಾಡಲಾಗದು ಎಂದಿದ್ದಾರೆ. ನಾವು 50 ರೂ.ಗಳನ್ನು ಡೆಲಿವರಿ ಚಾರ್ಜ್ ಎಂದು ನಿಗದಿ ಮಾಡುತ್ತೇವೆ. ಆದರೆ ಈ ಮೊತ್ತವೂ ಸೇವಾ ತೆರಿಗೆ ಒಳಗೊಂಡಿರುತ್ತದೆ. ಈಗ ಈ 50 ರೂ.ಗೆ ಹೆಚ್ಚುವರಿ ಮೊತ್ತ ಸೇರಿಸಲು ಸಾಧ್ಯವಿಲ್ಲ ಎಂದು ನವನೀತ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಭಾರತದಾದ್ಯಂತ 17 ಪಟ್ಟಣಗಳಲ್ಲಿ ದಿನವೊಂದಕ್ಕೆ 22,000 ಆರ್ಡರ್ ಪಡೆಯುತ್ತಿರುವ ಪೆಪ್ಪರ್ ಟ್ಯಾಪ್ ಡೆಲಿವರಿ ಚಾರ್ಜ್ ಆಗಿ 50 ರೂ. ಪಡೆಯುತ್ತಿದೆ.

ಕೆಲವು ಸೇವಾ ವಲಯಗಳಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಹೆಚ್ಚುವರಿ ತೆರಿಗೆ ಭರಿಸದೇ ಬೇರೆ ದಾರಿಯಿಲ್ಲ. ಮಸ್ತ್ ಕಲಂದರ್ ರೆಸ್ಟೋರೆಂಟ್ ಚೈನ್‌ನ ತ್ವರಿತಗತಿಯ ಸೇವೆ ವಿಭಾಗದ ಮುಖ್ಯಸ್ಥ ಗೌರವ್ ಜೈನ್ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರ ಪ್ರತಿನಿತ್ಯ ಉದ್ಯಮಗಳ ಸೇವೆ ಪಡೆಯುವ ಗ್ರಾಹಕರ ಮೇಲೆ ತೆರಿಗೆ ವಿಧಿಸಬೇಕು. ನಮ್ಮ ಕೆಲವು ಗ್ರಾಹಕರು ವಾರದಲ್ಲಿ 3 ದಿನ ಮಸ್ತ್ ಕಲಂದರ್‌ನಲ್ಲಿ ಔತಣ ಸೇವಿಸಲು ಬರುತ್ತಾರೆ. ಇಂತಹ ಗ್ರಾಹಕರ ಮೇಲೆ ಕೊಂಚ ಪ್ರಮಾಣದ ತೆರಿಗೆ ವಿಧಿಸಿದರೆ ಅಂತಹ ಬದಲಾವಣೆ ಏನೂ ಆಗುವುದಿಲ್ಲ ಎಂದು ಗೌರವ್ ಜೈನ್ ಹೇಳುತ್ತಾರೆ. ಮಸ್ತ್ ಕಲಂದರ್ ಚೈನ್‌ನ ನೆಟ್‌ವರ್ಕ್ ಸುಮಾರು 70 ಔಟ್‌ಲೆಟ್‌ಗಳಲ್ಲಿ ಕಾರ್ಯಾಚರಿಸುತ್ತಿದ್ದು, ಈ ವರ್ಷಾಂತ್ಯದಲ್ಲಿ 80 ಕೋಟಿ ಆದಾಯದ ನಿರೀಕ್ಷೆಯಲ್ಲಿದೆ.

ಚಾಯ್ ಪಾಯಿಂಟ್ ಸಿಇಓ ಹಾಗೂ ಸಂಸ್ಥಾಪಕ ಅಮುಲಿಕ್ ಸಿಂಗ್ ಬಿರ್ಜಾಲ್ ಹೀಗೆ ಹೇಳುತ್ತಾರೆ. ಪ್ರತಿ ನಿತ್ಯ ಗ್ರಾಹಕರಿಗೆ ಗುಣಮಟ್ಟದ ಚಾಯ್ ನೀಡುತ್ತಿರುವ ನಮ್ಮ ಸಂಸ್ಥೆ ಮೇಲೆ ಇದು ಪರಿಣಾಮ ಬೀರಿದೆ. ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಾಯ್ ಒದಗಿಸುತ್ತಿದ್ದೇವೆ. ಈ ಹೆಚ್ಚುವರಿ ತೆರಿಗೆಯಿಂದಾಗಿ ನಮಗೆ ತೊಂದರೆಯಾಗುತ್ತಿದೆ ಎನ್ನುವುದು ಅಮುಲಿಕ್ ಅಂಬೋಣ. ಅಮುಲಿಕ್‌ರ ಈ ವೆಂಚರ್ ದಿನವೊಂದಕ್ಕೆ 1.5 ಲಕ್ಷ ಕಪ್ ಚಾಯ್ ಮಾರಾಟ ಮಾಡುತ್ತಿದೆ. ಸಂಸ್ಥೆ 200 ಕಾರ್ಪೋರೇಟ್ ಸಂಸ್ಥೆಗಳನ್ನೇ ಗ್ರಾಹಕರನ್ನಾಗಿ ಹೊಂದಿದ್ದು, 75 ಚಾಯ್ ಪಾಯಿಂಟ್ ಸ್ಟೋರ್‌ಗಳಿವೆ.

image


ವಿಮೋಚನೆ ಇಲ್ಲ

ಸೇವಾ ತೆರಿಗೆಯಡಿಯಲ್ಲಿ ಸೆನ್ ವ್ಯಾಟ್ ಕ್ರೆಡಿಟ್ ಅನ್ನುವ ಪ್ರತ್ಯೇಕ ಅಂಶವಿದೆ. ಸಂಸ್ಥೆಯೊಂದು ತನ್ನ ಕಚೇರಿ ಹಾಗೂ ಔಟ್‌ಲೆಟ್‌ಗಳಿಗೆ ಪಾವತಿಸುವ ಬಾಡಿಗೆಗೂ ತೆರಿಗೆ ಪಾವತಿಸಬೇಕು. ಇದನ್ನು ಸೆನ್‌ವ್ಯಾಟ್ ಕ್ರೆಡಿಟ್ ಅನ್ನಲಾಗುತ್ತದೆ. ಟ್ಯಾಕ್ಸ್ ಮಂತ್ರ ಸಂಸ್ಥೆಯ ಸಿಇಓ ಹಾಗೂ ಸಂಸ್ಥಾಪಕ ಅಲೋಕ್ ಪಾಟ್ನಿಯಾ ಹೇಳುವಂತೆ ಸೇವೆಯನ್ನು ಒದಗಿಸುವ ಸಂಸ್ಥೆಗಳು ಸ್ವಚ್ಛ ಭಾರತ್ ಹೆಚ್ಚುವರಿ ತೆರಿಗೆ ನೀತಿಯ ಅನ್ವಯ ಈ ಕ್ರೆಡಿಟ್ ಪಡೆದುಕೊಳ್ಳಲು ಸಾಧ್ಯವಿಲ್ಲ. ಅಲೋಕ್ ಪಾಟ್ನಿಯಾ ವ್ಯವಹಾರಸ್ಥರಿಗೆ ಹಾಗೂ ಸ್ವತಂತ್ರ ಉದ್ದಿಮೆದಾರರಿಗೆ ಅಕೌಂಟ್ಸ್ ಹಾಗೂ ಟ್ಯಾಕ್ಸೇಶನ್‌ಗೆ ಸಂಬಂಧಿಸಿದ ಸಲಹೆ ನೀಡುತ್ತಿದ್ದಾರೆ.

ಈ ಹೆಚ್ಚುವರಿ ಸೇವಾ ತೆರಿಗೆಯನ್ನು ಪ್ರತ್ಯೇಕ ಖಾತೆ ಪುಸ್ತಕದಲ್ಲಿ ನೋಂದಾಯಿಸಲಾಗುತ್ತದೆ. ಇದನ್ನು ಕ್ಲೀನ್ ಇಂಡಿಯಾ ಉದ್ದೇಶಕ್ಕಾಗಿ ಬಳಸಲಾಗುತ್ತಿದ್ದು ಸಂಸ್ಥೆಗಳು ಮುಂದೆ ಪ್ರತ್ಯೇಕವಾಗಿ ಹಿಂಪಡೆದುಕೊಳ್ಳಬಹುದು. ಆದರೂ ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಇದೊಂದು ತಲೆನೋವು.

ಇ-ಟೈಲ್ ಸಂಸ್ಥೆಗಳಲ್ಲಿ ಸಮಸ್ಯೆ ವಿಭಿನ್ನ. ಅವರು ಗ್ರಾಹಕರಿಗೆ ಸೇವೆ ಒದಗಿಸುವುದಿಲ್ಲ. ಹಾಗಾಗಿ ಅವರಿಗೆ ಸರ್ವಿಸ್ ಟ್ಯಾಕ್ಸ್ ಅನ್ವಯಿಸುವುದಿಲ್ಲ. ಫ್ಯಾಬಲ್ಲೀ ಅನ್ನುವ ಆನ್‌ಲೈನ್ ಫ್ಯಾಶನ್ ಬ್ರಾಂಡ್ ಸಂಸ್ಥೆಯ ಸಹ ಸಂಸ್ಥಾಪಕಿ ಶಿವಾನಿ ಪೋಡ್ಡಾರ್ ಹೇಳುವಂತೆ, ನಾವು ನಮ್ಮೆಲ್ಲಾ ಸರ್ವಿಸ್‌ಗಳಿಗೂ ಸೇವಾ ತೆರಿಗೆ ಭರಿಸಬೇಕು. ಫೇಸ್‌ಬುಕ್, ಗೂಗಲ್ ಮಾರ್ಕೆಟಿಂಗ್‌ನಂತಹ ಸೇವೆಗಳಿಗೂ ತೆರಿಗೆ ಇದೆ. ನಮ್ಮ ಪ್ರಮಾಣ ಕೆಲವು ಲಕ್ಷಗಳಲ್ಲಿ ವಹಿವಾಟು ಆಗುತ್ತದೆ. ಹಾಗಾಗಿ ಈ ಹೆಚ್ಚುವರಿ ತೆರಿಗೆಯ ಪ್ರಮಾಣ ನಮಗೆ ಅತ್ಯಂತ ಕಠಿಣ.

ಉದಾಹರಣೆಗೆ, ಪೆಪ್ಪರ್ ಟ್ಯಾಪ್‌ನ ಸೋದರ ಸಂಸ್ಥೆ ನುವೋಎಕ್ಸ್, ಲಾಜಿಸ್ಟಿಕ್ಸ್ ಸಂಸ್ಥೆಗಳಾದ ಸ್ನ್ಯಾಪ್‌ಡೀಲ್, ಫ್ಲಿಪ್‌ಕಾರ್ಟ್, ಪೇಟಿಎಂ, ಶಾಪ್‌ಕ್ಲೂಸ್‌ನಂತಹ ಆನ್‌ಲೈನ್ ಮಾರ್ಕೆಟಿಂಗ್ ಸಂಸ್ಥೆಗಳನ್ನು ತನ್ನ ಗ್ರಾಹಕರನ್ನಾಗಿಸಿಕೊಂಡಿದೆ. ಇದು ಈ ಹೆಚ್ಚುವರಿ ತೆರಿಗೆಯನ್ನು ಈ ಮೇಲಿನ ಸಂಸ್ಥೆಗಳಿಗೆ ವರ್ಗಾಯಿಸುತ್ತದೆಯೇ ವಿನಃ ನೇರವಾಗಿ ಭರಿಸುವುದಿಲ್ಲ.

ಫ್ಲಿಪ್ ಕಾರ್ಟ್, ಸ್ನ್ಯಾಪ್‌ಡೀಲ್‌ನಂತಹ ದೊಡ್ಡ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತವೆ. ಫ್ಲಿಪ್‌ಕಾರ್ಟ್ ಇದರ ಬಗ್ಗೆ ಮೌನವಹಿಸಿದರೆ ಸ್ನ್ಯಾಪ್‌ಡೀಲ್ ಹಾಗೂ ಓಲಾಗಳು ಈ-ಮೇಲ್ ವಿಚಾರಣೆಯಲ್ಲಿ ಪ್ರತಿಕ್ರಿಯೆ ಕೊಡದೆ ಸುಮ್ಮನಾಗಿವೆ.

ಇನ್ಸೆಂಟಿವ್ ವ್ಯವಸ್ಥೆ ಜಾರಿಯಾಗಬೇಕು

ಉದ್ದಿಮೆದಾರರು ಸಲಹೆ ನೀಡಿರುವಂತೆ ಇನ್ಸೆಂಟಿವ್ ವ್ಯವಸ್ಥೆ ಹೆಚ್ಚಿನ ಪರಿಣಾಮಕಾರಿ ಎನ್ನುವುದು. ಚಾಯ್ ಪಾಯಿಂಟ್‌ನ ಅಮುಲಿಕ್ ಹೇಳುವಂತೆ ಅವರ ಬೆಂಗಳೂರಿನ ಸ್ಟೋರ್​ಗಳಲ್ಲಿ ಮುನ್ಸಿಪಲ್ ಅಥಾರಿಟಿಯಿಂದ ಕಸ ನಿರ್ವಹಣೆಯಲ್ಲಿ ಅಷ್ಟೇನೂ ಉಪಕಾರವಾಗಿಲ್ಲ. ಟೀ ಅಥವಾ ಇನ್ನಿತರ ತ್ಯಾಜ್ಯಗಳು ಕಂಪನಿಯ ಸಂಗ್ರಹಣಾ ಘಟಕಕ್ಕೆ ನೇರವಾಗಿ ತಲುಪುತ್ತವೆ. ದೊಡ್ಡಬಳ್ಳಾಪುರದ ರೈತರು ಇಲ್ಲಿನ ಸಾವಯವ ತ್ಯಾಜ್ಯವನ್ನು ಸಂಗ್ರಹಿಸಿ ಉಪಯೋಗಿಸಿಕೊಳ್ಳುತ್ತಾರೆ. ಹಾಗಾಗಿ ಸ್ವಚ್ಛ ಭಾರತ್ ಅಭಿಯಾನದ ಹೆಚ್ಚುವರಿ ತೆರಿಗೆ ನೀಡುವುದು ಕಂಪನಿ ಪಾಲಿಗೆ ಅಷ್ಟೇನೂ ಉತ್ತಮವಾಗಿಲ್ಲ.

ಫ್ಯಾಬಲ್ಲಿಯ ಶಿವಾನಿ, ಸರ್ಕಾರ ಸ್ಲ್ಯಾಬ್ ಸಿಸ್ಟಮ್ ಜಾರಿ ತರಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಇನ್‌ಕಂ ಟ್ಯಾಕ್ಸ್‌ ನಲ್ಲಿ ಸ್ಲ್ಯಾಬ್ ವ್ಯವಸ್ಥೆ ಇದೆ. ಇದರ ಜೊತೆ ಸಣ್ಣ ಆದಾಯದ ಸಂಸ್ಥೆಗಳಿಗೆ ಕೊಂಚ ರಿಯಾಯಿತಿಯನ್ನೂ ನೀಡಬೇಕು ಎನ್ನುವುದು ಶಿವಾನಿ ಅಭಿಪ್ರಾಯ

ಲೈಮ್ ರೋಡ್ ಅನ್ನುವ ಇ-ಟೈಲರ್ ಮಹಿಳಾ ಫ್ಯಾಶನ್ ಉದ್ದಿಮೆಯ ಸಹ ಸಂಸ್ಥಾಪಕಿ ಸುಚಿ ಮುಖರ್ಜಿ ಬೇರೆಯದ್ದೇ ಅಭಿಪ್ರಾಯ ಹೊರಹಾಕಿದ್ದಾರೆ. ಅವರ ಪ್ರಕಾರ ಸ್ವಚ್ಛಭಾರತ್ ಮಿಷನ್‌ಗೆ ಸಹಕಾರ ನೀಡಲು ಉದ್ದಿಮೆದಾರರು ಸಿದ್ಧರಿದ್ದಾರೆ. ಆದರೆ ನಮ್ಮ ರಾಷ್ಟ್ರದಲ್ಲಿ ಇಂತಹ ಅನೇಕ ಪ್ರಯತ್ನಗಳು ಈಗಾಗಲೇ ನಡೆದಿವೆ. ಹಾಗೂ ಸಾಕಷ್ಟು ಮೊತ್ತವನ್ನು ವೆಚ್ಚ ಮಾಡಲಾಗಿದೆ. ಫಲಿತಾಂಶ ಮಾತ್ರ ಶೂನ್ಯ. ಇದಕ್ಕೆ ಸರ್ಕಾರದ ಗಂಗಾಶುದ್ಧೀಕರಣ ಯೋಜನೆಯನ್ನು ಅವರು ಬೆಟ್ಟು ಮಾಡಿ ತೋರಿಸಿದ್ದಾರೆ. ಸರ್ಕಾರ ಟ್ಯಾಕ್ಸೇಶನ್ ಬದಲಾವಣೆ ಹೇಗೆ ನಮ್ಮ ಔದ್ಯಮಿಕ ಕ್ಷೇತ್ರಕ್ಕೆ ಸಹಕಾರಿ ಎಂದು ಸರಳೀಕರಿಸಬೇಕು ಇಲ್ಲವಾದರೆ ಇಂತಹ ಯೋಜನೆಗಳು ವ್ಯರ್ಥವಾಗುತ್ತವೆ ಎಂದಿದ್ದಾರೆ.

ಜಿಎಸ್‌ಟಿ ಜಾರಿ ಒಂದೇ ದಾರಿ

ಮುಂದಿನ ಲೋಕಸಭಾ ಚಳಿಗಾಲದ ಅಧಿವೇಶನದಲ್ಲಿ ಉತ್ಪನ್ನ ಹಾಗೂ ಸೇವಾ ತೆರಿಗೆಯ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಈ ಸಂಬಂಧ ಸೂಕ್ತ ಜಿಎಸ್‌ಟಿ(ಗೂಡ್ಸ್ ಎಂಡ್ ಸರ್ವಿಸ್ ಟ್ಯಾಕ್ಸ್) ಜಾರಿಯಾಗಬೇಕು. ಸೇವಾ ತೆರಿಗೆ ಹಾಗೂ ವ್ಯಾಟ್ ಸೇರಿದಂತೆ ಈಗಾಗಲೇ ಭರಿಸುತ್ತಿರುವ ಪರೋಕ್ಷ ತೆರಿಗೆಯ ಬದಲು ಏಕ ಮಾದರಿಯ ಜಿಎಸ್‌ಟಿ ಜಾರಿಗೆ ತರಬೇಕು. ಅದು 16ರಿಂದ 18 ಪ್ರತಿಶತ ಮೀರಬಾರದು ಎನ್ನುವುದು ಟ್ಯಾಕ್ಸ್ ಮಂತ್ರದ ಅಲೋಕ್ ಅಭಿಮತ. ಜಿಎಸ್‌ಟಿ ಮಾದರಿಯಡಿಯಲ್ಲಿ ಸರ್ಕಾರಕ್ಕೆ ಕಂಪನಿಗಳು ಭರಿಸುವ ತೆರಿಗೆ ಮೊತ್ತ ಗ್ರಾಹಕರಿಂದ ಕಂಪನಿ ಪಡೆದುಕೊಳ್ಳುವ ತೆರಿಗೆಗೆ ಸಮನಾಗಿರಬೇಕು. ಜಿಎಸ್‌ಟಿ ಎನ್ನುವುದು ದೇಶದ ಆರ್ಥಿಕತೆಯನ್ನು ಬದಲಾಯಿಸಬಲ್ಲ ಸಮರ್ಥ ಮಾಪನವಾಗಬೇಕು ಎಂಬುದು ಅಲೋಕ್ ಆಶಯ. ಆದರೆ ಜಿಎಸ್‌ಟಿ ಜಾರಿಯಾಗುವ ತನಕ ಸ್ಟಾರ್ಟ್ ಅಪ್ ಸಂಸ್ಥೆಗಳು ಹೊಸ ಮಾದರಿಯ ಉಪತೆರಿಗೆ ಒತ್ತಡ ತಡೆದುಕೊಳ್ಳಲೇಬೇಕಾಗಿರುವುದು ಖೇದಕರ.

ಲೇಖಕರು: ರಾಧಿಕಾ ಪಿ ನಾಯರ್​​

ಅನುವಾದಕರು: ವಿಶ್ವಾಸ್​​​