ಕರ್ನಾಟಕ ಪೊಲೀಸರಿಗೆ ಟ್ವಿಟ್ಟರ್, ಫೇಸ್ ಬುಕ್ ಕಡ್ಡಾಯ..!

ಕೃತಿಕಾ

0

ತಂತ್ರಜ್ಞಾನವನ್ನು ಬಳಸಿಕೊಂಡು ಜನರನ್ನು ತಲುಪುವುದು ಇವತ್ತಿನ ಮಟ್ಟಿಗೆ ಸ್ಮಾರ್ಟ್ ಯೋಜನೆ. ಇಂತಹ ಸ್ಮಾರ್ಟ್ ನೆಸ್ ಅನ್ನು ರಾಜ್ಯ ಪೊಲೀಸ್ ಇಲಾಖೆ ಅಳವಡಿಸಿಕೊಳ್ಳುತ್ತಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರು ಮತ್ತು ಸಾರ್ವಜನಿಕರನ್ನು ಬೆಸೆಯುವ ಮಹತ್ವದ ಯೋಜನೆ ರಾಜ್ಯಾಧ್ಯಂತ ಕಾರ್ಯಗತವಾಗುತ್ತಿದೆ. ರಾಜ್ಯದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುವಂತೆ ಆಢಳಿತ ವಿಭಾಗದ ಎಡಿಜಿಪಿ ಅಲೋಕ್ ಮೋಹನ್ ರಾಜ್ಯದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಎಲ್ಲರೂ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಖಾತೆ ತೆರೆಯುವಂತೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಇರುವ ಅಂತರ ಕಡಿಮೆ ಮಾಡಿ ಸಂಬಂಧ ಬೆಸೆಯುವ ಉದ್ದೇಶದಿಂದ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಬೆಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಎಲ್ಲ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಿದ್ದಾರೆ. ಇದರ ಜೊತೆಗೆ ಮೈಸೂರು ಮತ್ತು ದಾರವಾಡ ಪೊಲೀಸ್ ಕಮೀಷನರೇಟ್ ನಲ್ಲೂ ಅಧಿಕಾರಿಗಳು ಸ್ವಲ್ಪಮಟ್ಟಿಗೆ ಜಾಲತಾಣಗಳಲ್ಲಿ ಆಕ್ಟೀವ್ ಆಗಿದ್ದಾರೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸುವ ಯೋಜನೆ ರಾಜ್ಯ ಪೊಲೀಸ್ ಇಲಾಖೆ ಮುಂದಿದೆ.

ಈಗಾಗಲೇ ಬೆಂಗಳೂರಿನಲ್ಲಿ ಸಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುವ ವ್ಯವಸ್ಥೆ ಅಭೂತಪೂರ್ವ ಯಶಸ್ಸು ಪಡೆದು ಜನಮೆಚ್ಚುಗೆ ಪಡೆದಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ರಾಜ್ಯಾದ್ಯಂತ ಎಲ್ಲ ಅಧಿಕಾರಿಗಳೂ ಸುಲಭವಾಗಿ ಜನಸಾಮಾನ್ಯರ ಸಂಪರ್ಕಕ್ಕೆ ಸಿಗಬೇಕು ಎಂಬ ಕಾರಣದಿಂದ ಎಲ್ಲರಿಗೂ ಕಡ್ಡಾಯವಾಗಿ ಜಾಲತಾಣಗಳಲ್ಲಿ ಸಕ್ರಿಯರಾಗುವಂತೆ ಸೂಚಿಸಲಾಗಿದೆ. ಜನಸ್ನೇಹಿ ಪೊಲೀಸಿಂಗ್ ಗಾಗಿ ನಾವು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದೇವೆ ಅಂತಾರೆ ಎಡಿಜಿಪಿ ಅಲೋಕ್ ಮೋಹನ್. ಕಾನೂನು ಸುವ್ಯವಸ್ಥೆ, ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ, ಮಾಹಿತಿ ವಿನಿಮಯ, ಅಪರಾಧ ಮತ್ತು ಅಪರಾಧಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ಅರಿವು ಮೂಡಿಸುವಿದು, ಅಪರಾಧ ನಿಯಂತ್ರಣ ಮತ್ತಿತರ ಕಾರ್ಯಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಿಸಿಕೊಳ್ಳಲು ರಾಜ್ಯ ಪೊಲೀಸ್ ಇಲಾಖೆ ನಿರ್ಧರಿಸಿದೆ.

ಕಾನೂನು ಮತ್ತು ಸುವ್ಯವಸ್ಥೆ ದಕ್ಕೆಯಾಗುವಂತಹ ಘಟನೆಗಳು ನಡೆದಾಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುವ ವದಂತಿಗಳ ನಿಯಂತ್ರಣಕ್ಕೂ ಈ ಸೋಷಿಯಲ್ ಮೀಡಿಯಾ ಪೊಲೀಸಿಂಗ್ ಸಹಕಾರಿಯಾಗಲಿದೆ. ಕೋಮು ಗಲಬೆಗಳು, ದೊಂಬಿ, ದೊಡ್ಡ ಮಟ್ಟದ ಪ್ರತಿಭಟನೆ, ಹೋರಾಟಗಳ ವೇಳೆ ಪೇಸ್ ಬುಕ್, ಟ್ವಿಟ್ಟರ್ ಮತ್ತು ವಾಟ್ಸ್ ಆಪ್ ಮೂಲಕ ವದಂತಿಗಳು ಹಬ್ವುತ್ತಿರುತ್ತವೆ. ಈ ವದಂತಿಗಳ ಬಗ್ಗೆ ಯಾವುದು ನಿಜ ಯಾವುದು ಸುಳ್ಳು ಎಂಬ ಬಗ್ಗೆ ಜನರಿಗೆ ಪೊಲೀಸ್ ಅಧಿಕೃತ ಸಾಮಾಜಿಕ ಜಾಲತಾಣದಿಂದ ಸಾರ್ವಜನಿಕರಿಗೆ ನೈಜ ಮಾಹಿತಿ ನೀಡಿ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಲೂ ಕೂಡ ಸೋಷಿಯಲ್ ಮೀಡಿಯಾ ಪೊಲೀಸಿಂಗ್ ಸಹಕಾರಿಯಾಗಲಿದೆ.

ಎಲ್ಲಕ್ಕೂ ಮುನ್ನುಡಿ ಬರೆದಿದ್ದು ಎಂ.ಎನ್ ರೆಡ್ಡಿ..!

2014ರ ಜುಲೈ ತಿಂಗಳಲ್ಲಿ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಎಂ.ಎನ್.ರೆಡ್ಡಿ ಅವರು @cpblr ಎಂಬ ಟ್ವಿಟರ್ ಖಾತೆ ತೆರೆದು ಸೋಷಿಯಲ್ ಮೀಡಿಯಾ ಪೊಲೀಸಿಂಗ್ ಗೆ ಮುನ್ನುಡಿ ಬರೆದಿದ್ದರು. ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದಲು ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿ ಹಾಗೂ ಸೂಕ್ತ ಮಾರ್ಗ ಎನ್ನುವುದನ್ನು ಅರಿತಿದ್ದ ಎಂ.ಎನ್.ರೆಡ್ಡಿ, ಕಮಿಷನರ್ ಅಕೌಂಟ್ ಮಾತ್ರವಲ್ಲದೇ, ನಗರದ ಎಲ್ಲಾ ಡಿಸಿಪಿಗಳು, ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು, ಸಿಸಿಬಿ ಹೆಸರಿನಲ್ಲೂ ಟ್ವಿಟರ್ ಅಕೌಂಟ್ ತೆರೆದಿದ್ದು ಜನಪ್ರಿಯವಾಗಿವೆ. ಬೆಂಗಳೂರು ಪೊಲೀಸ್ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ಹೆಸರಿನಲ್ಲಿಯೂ ಫೆಸ್ ಬುಕ್ ಮತ್ತು ಟ್ವಿಟ್ಟರ್ ಖಾತೆಗಳಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಬರುವ ದೂರುಗಳನ್ನು ಸಂಬಂಧಪಟ್ಟ ಅಧುಕಾರಿಗಳಿಗೆ ಆನ್ ಲೈನ್ ಮೂಲಕವೇ ವರ್ಗಾವಣೆ ಮಾಡಿ ಅಗತ್ಯ ಕಾನೂನು ಕ್ರಮಕ್ಕೆ ಸೂಚಿಸಲಾಗುತ್ತಿದೆ. ಸದ್ಯ ಬೆಂಗಳೂರು ಪೊಲೀಸ್ ಆಯುಕ್ತರ @cpblr ಟ್ವಿಟ್ಟರ್ ಖಾತೆ 4 ಲಕ್ಚ 16 ಸಾವಿರ ಹಿಂಬಾಲಕರನ್ನು ಹೊಂದಿದ್ದು, ದೇಶದಲ್ಲೇ ಅತೀ ಹೆಚ್ಚು ಪಾಲೋವರ್ಸ್ ಹೊಂದಿರುವ ಪೊಲೀಸ್ ಖಾತೆಯಾಗಿದೆ. ಇಡೀ ಬೆಂಗಳೂರು ಪೊಲೀಸ್ ಎಲ್ಲ ಅಧಿಕಾರಿಗಳ ಒಟ್ಟು ಹಿಂಬಾಲಕರ ಸಂಖ್ಯೆ ಹತ್ತು ಲಕ್ಷ ದಾಟಿ ಮೈಲಿಗಲ್ಲು ಸ್ಥಾಪಿಸಿದೆ. ಬೆಂಗಳೂರು ಪೊಲೀಸ್ ಆಯುಕ್ತರ ಸ್ಥಾನದಿಂದ ಅಗ್ನಿಶಾಮಕ ಮತ್ತು ತುರ್ತು ವಿಭಾಗದ ಡಿಜಿಪಿಯಾಗಿ ಭಡ್ತಿ ಪಡೆದು ವರ್ಗಾವಣೆಯಾದ ನಂತರವೂ ಎಂ.ಎನ್ ರೆಡ್ಡಿ ಅರ ಟ್ವಿಟ್ಟರ್ ಪ್ರೀತಿ ಮುಂದುವರೆದಿದೆ. @KarFireDept ಎಂಬ ಹೆಸರಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಇದರ ಜೊತೆಗೆ ಡಿಜಿಪಿಯಾಗಿರುವ ಎಂ.ಎನ್.ರೆಡ್ಡಿ @DGP_FIRE ಎಂಬ ಹೆಸರಲ್ಲಿ ಖಾತೆ ತೆರೆದಿದ್ದಾರೆ.. ಈ ಬಗ್ಗೆ ಮಾತನಾಡಿದ ಎಂ.ಎನ್ ರೆಡ್ಡಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರನ್ನು ತಲುಪುವ ಉದ್ದೇಶದಿಂದ @cpblr ಖಾತೆ ಆರಂಭಿಸಲಾಯಿತು. ಅದಕ್ಕೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆಯೂ ದೊರೆಯಿತು. ಪೊಲೀಸ್ ಇಲಾಖೆಯನ್ನ ಜನರ ಬಳಿಗೆ ಕರೆದೊಯ್ಯುವುದು ನನ್ನ ಉದ್ದೇಶವಾಗಿತ್ತು. ಅದು ಯಶಸ್ವಿಯಾಗಿದ್ದು ಮತ್ತು ಇತರೆ ಇಲಾಖೆ ಮತ್ತು ಇತರ ರಾಜ್ಯಗಳಿಗೆ ಮಾದರಿಯಾಗಿದ್ದು ಹೆಮ್ಮೆ ಎನಿಸುತ್ತದೆ ಎಂದು ಸಂತಸ ಹಂಚಿಕೊಂಡರು.

ಈಗಾಗಲೇ ಬೆಂಗಳೂರಿನ ಎಲ್ಲ ಹಿರಿಯ ಅಧಿಕಾರಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸಿಐಡಿ, ಮೈಸೂರು, ಹುಬ್ಬಳ್ಳಿ ದಾರವಾಡ ಕಮೀಷನರೇಟ್ ಗಳಲ್ಲೂ ಸ್ವಲ್ಪಮಟ್ಟಿಗೆ ಸಾಮಾಜಿಕ ಜಾಲತಾಣಗಳು ಸಕ್ರಿಯಗೊಂಡಿದ್ದು ಜನರನ್ನು ತಲುಪುತ್ತಿವೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ರಾಜ್ಯಾದ್ಯಂತ ವಿಸ್ತರಿಸಿ ಜನಸ್ನೇಹಿಯಾಗಲು ಪೊಲೀಸ್ ಇಲಾಖೆ ಮುಂದಾಗಿದೆ. ಒಂದಯ ಉತ್ತಮ ಕಾರ್ಯಕ್ಕೆ ಆಲ್ ದ ಬೆಸ್ಟ್ ಹೇಳೋಣ...