ಮಹಿಳಾ ಉದ್ಯಮಿಗಳಿಗೆ ಉತ್ತೇಜನ ಮತ್ತು ಭವಿಷ್ಯದ ಹಾದಿ...

ಟೀಮ್ ವೈ. ಎಸ್. ಕನ್ನಡ

0

ಕರ್ನಾಟಕದಲ್ಲಿ ಮಹಿಳಾ ಉದ್ಯಮಿಗಳು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಅವಿಭಾಜ್ಯ ಅಂಗವಾಗಿದ್ದಾರೆ. ಕರ್ನಾಟಕ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಮಹಿಳೆಯರೇ ಮುನ್ನಡೆಸುತ್ತಿರುವ ಸಂಸ್ಥೆಗಳು ಸುಮಾರು 5 ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸಿವೆ. ಇನ್ವೆಸ್ಟ್ ಕರ್ನಾಟಕ 2016 ಸಮಾವೇಶದಲ್ಲಿ ಕೂಡ ಮಹಿಳಾ ಉದ್ಯಮಿಗಳು ಪಾಲ್ಗೊಂಡಿದ್ರು. ಸಮಾವೇಶದ ಎರಡನೆಯ ದಿನ ನಡೆದ 'ಮಹಿಳಾ ಉದ್ಯಮಿಗಳಿಗೆ ಉತ್ತೇಜನ' ಎಂಬ ವಿಷಯದ ಮೇಲೆ ನಡೆದ ಚರ್ಚೆಯಲ್ಲಿ ಕರ್ನಾಟಕದ ಮೂಲೆ ಮೂಲೆಯಿಂದಲೂ ಬಂದಿದ್ದ ಮಹಿಳೆಯರು ಭಾಗವಹಿಸಿದ್ರು.

ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರತ್ನಪ್ರಭಾ ಮಾತನಾಡಿ, ''ನಾನು ಮಹಿಳೆಯರು ಮತ್ತು ಮಹಿಳಾ ಸಂಘಟನೆಗಳ ಶಕ್ತಿಯನ್ನು, ನಾವೆಲ್ಲರೂ ಹೇಗೆ ಒಗ್ಗಟ್ಟಾಗಿದ್ದೇವೆ ಎಂಬುದನ್ನು ಇಡೀ ಜಗತ್ತಿಗೆ ತೋರಿಸಲು ಬಯಸಿದ್ದೆ'' ಎಂದ್ರು. ಮಹಿಳೆಯರು ಮುನ್ನಡೆಸುತ್ತಿರುವ ಉದ್ಯಮಗಳನ್ನು ಪ್ರೋತ್ಸಾಹಿಸಲು ಸರ್ಕಾರ ಯಾವ್ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂಬುದನ್ನು ಕೂಡ ಅವರು ವಿವರಿಸಿದ್ರು.

''2014-19ರವರೆಗಿನ ಹೊಸ ಕೈಗಾರಿಕಾ ನೀತಿಯ ಪ್ರಕಾರ, ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವುದೇ ಸರ್ಕಾರದ ಉದ್ದೇಶ. ಮಹಿಳಾ ಉದ್ಯಮಶೀಲತೆ ಬಗ್ಗೆ ವಿಶೇಷ ಕಾಳಜಿ ವಹಿಸುವುದು, ಮಹಿಳಾ ಉದ್ಯಮಿಗಳ ಕೊಡುಗೆಯನ್ನು ಹೆಚ್ಚಿಸುವುದು, ಇನ್ನು ಐದು ವರ್ಷಗಳಲ್ಲಿ ಇನ್ನಷ್ಟು ಮಹಿಳಾ ಉದ್ಯಮಿಗಳ ಸೃಷ್ಟಿಗೆ ಅನುಕೂಲ ಮಾಡಿಕೊಡುವುದೇ ಕರ್ನಾಟಕ ಸರ್ಕಾರದ ಮುಂದಿರುವ ಗುರಿ'' ಎಂದು ರತ್ನಪ್ರಭಾ ಸ್ಪಷ್ಟಪಡಿಸಿದ್ರು.

ಮಹಿಳೆಯರಿಗೆ ಉತ್ತೇಜನ ನೀಡಬಲ್ಲ ಎರಡು ಕೈಗಾರಿಕಾ ಕ್ಷೇತ್ರಗಳಾದ ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸುವಂತೆ ಕೈಗಾರಿಕಾ ನೀತಿಯಲ್ಲಿ ಸೂಚಿಸಲಾಗಿದೆ. ಕೆಐಎಡಿಬಿ ಮತ್ತು ಕೆಸ್​ಐಡಿಸಿ ಅಭಿವೃದ್ಧಿಪಡಿಸಿದ ಎಸ್ಟೇಟ್​, ಕೈಗಾರಿಕಾ ಕ್ಷೇತ್ರಗಳು, ಪ್ಲಾಟ್​ಗಳು ಮತ್ತು ಶೆಡ್​ಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಶೇ.5ರಷ್ಟು ಮೀಸಲಾತಿ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಬಯೋಕಾನ್​ ಸಂಸ್ಥೆಯ ಎಂಡಿ ಕಿರಣ್​ ಮಜುಮ್ದಾರ್​ ಶಾ ತಮ್ಮ ಉದ್ಯಮ ಪಯಣದ ಅನುಭವಗಳನ್ನು ಹಂಚಿಕೊಂಡ್ರು. ತಾವು ಬೆಂಗಳೂರಿನಲ್ಲಿರದೇ ಇದ್ದಿದ್ರೆ, ಇವತ್ತು ಈ ಮಟ್ಟಕ್ಕೆ ತಲುಪುತ್ತಿರಲಿಲ್ಲ ಅಂತಾ ಹೇಳಿದ್ರು. ಬಂಡವಾಳ ಗಿಟ್ಟಿಸಿಕೊಳ್ಳುವುದೇ ತಮಗೆ ಬಹುದೊಡ್ಡ ಸವಾಲಾಗಿತ್ತು ಎಂದ ಅವರು, ಬಹುತೇಕ ಎಲ್ಲಾ ಮಹಿಳಾ ಉದ್ಯಮಿಗಳು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಾರೆ ಅಂತಾ ತಿಳಿಸಿದ್ರು. ಮಹಿಳಾ ಉದ್ಯಮಿಗಳ ವಿಚಾರದಲ್ಲಿ, ಸಂಪನ್ಮೂಲ ನಿರ್ವಹಣೆ ಮತ್ತು ಅಧಿಕ ಬಂಡವಾಳ ಪಡೆಯುವುದು ಬೆದರಿಸುವಂತಹ ಪ್ರಕ್ರಿಯೆಗಳು ಎನ್ನುತ್ತಾರೆ ಅವರು. ಹಾಗಾಗಿ ಪ್ರಮಾಣದ ಮಹತ್ವವನ್ನು ಮಹಿಳೆಯರು ಅರ್ಥಮಾಡಿಕೊಳ್ಳಬೇಕು. ಒಂದೊಳ್ಳೆ ತಂಡವನ್ನು ಸೃಷ್ಟಿಸಿ, ಮಾರ್ಕೆಟಿಂಗ್​ನಂತಹ ಕಠಿಣ ಸವಾಲುಗಳನ್ನು ಮೆಟ್ಟಿ ನಿಲ್ಲಿ ಎಂದವರು ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

IKEAನ ಸಿಇಓ Juvenico Maeztu ಲಿಂಗ ಸಮಾನತೆಯ ಮಹತ್ವದ ಬಗ್ಗೆ ಮಾತನಾಡಿದ್ರು. IKEAನಲ್ಲಿ ಶೇ.52ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಅಷ್ಟೇ ಅಲ್ಲ ಭಾರತದಲ್ಲಿ ತೆರೆಯುವ ಎಲ್ಲಾ ಮಳಿಗೆಗಳಲ್ಲೂ ಡೇಕೇರ್​ ಕೇಂದ್ರಗಳಿರಲಿವೆ ಅಂತಾ ಅವರು ತಿಳಿಸಿದ್ರು.

ಬೆಂಗಳೂರಿ ಕೇವಲ ಐಟಿ ಹಬ್​ ಮಾತ್ರವಲ್ಲ, ಉಡುಪುಗಳ ಹಬ್​ ಕೂಡ ಹೌದು ಅನ್ನೋದನ್ನು ಇಂಡಸ್ಟ್ರೀ ಸಂಸ್ಥೆಯ ಎಂಡಿ ನೀಲಮ್​ ಚಿಬ್ಬರ್​ ಪ್ರಸ್ತಾಪಿಸಿದ್ರು. ನೆಟ್​ವರ್ಕ್​ ಸ್ಥಾಪಿಸುವ ಜೊತೆಗೆ AMULನಂತಹ ಕಮ್ಯೂನಿಟಿಯನ್ನು ಸೃಷ್ಟಿಸುವ ಅಗತ್ಯವಿದೆ ಅಂತಾ ಪ್ರತಿಪಾದಿಸಿದ್ರು.

ಮಹಿಳಾ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಸಿಸ್ಟರ್​ ಸಿಟಿ ಇನಿಶಿಯೇಟಿವ್​ ಮಧ್ಯೆ ಲೆಟರ್​ ಆಫ್​ ಇಂಟೆಂಟ್​ ಮಾಡಿಕೊಳ್ಳಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ರತ್ನಪ್ರಭಾ, ಸಿಸ್ಟರ್​ ಸಿಟಿ ಇನಿಶಿಯೇಟಿವ್​ನ ನಿರ್ದೇಶಕಿ ಡಾ.ನಂದಿನಿ ಟಂಡನ್​, ಸ್ಯಾನ್​ ಫ್ರಾನ್ಸಿಸ್ಕೋದ ಮೇಯರ್​ ಎಡ್ವಿನ್​ ಲೀ, ಕರ್ನಾಟಕದ ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್​.ವಿ.ದೇಶಪಾಂಡೆ ಒಪ್ಪಂದಕ್ಕೆ ಸಾಕ್ಷಿಯಾದ್ರು. ಈ ಒಪ್ಪಂದ ಭಾರತದ ಮತ್ತು ಸ್ಯಾನ್​ ಫ್ರಾನ್ಸಿಸ್ಕೋದ ನಡುವಣ ಮಹಿಳೆಯರ ಉದ್ಯಮಶೀಲತೆ ವಿನಿಮಯಕ್ಕೆ ಅನುಕೂಲವಾಗಲಿದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಉತ್ಪಾದನಾ ಕೈಗಾರಿಕೆಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರನ್ನು ಪ್ರೋತ್ಸಾಹಿಸುವತ್ತ ಸರ್ಕಾರ ಹೆಚ್ಚು ಗಮನ ಹರಿಸುತ್ತಿದೆ. ಮಹಿಳಾ ಸಂಘಟನೆಗಳ ನೆರವಿನಿಂದ ಅಗತ್ಯ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ. ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತವಾಗದೇ ಮಹಿಳೆಯರು ಸ್ವಾವಲಂಬಿಗಳಾಗಬೇಕು. ಪುರುಷ ಉದ್ಯೋಗಿಗಳ ನಡುವೆ ಲಿಂಗ ಸೂಕ್ಷ್ಮತೆಯನ್ನು ಸರಿಪಡಿಸುವ ಅಗತ್ಯವಿದೆ. ಕೆಲಸದ ಸ್ಥಳಗಳಲ್ಲಿ ಡೇ ಕೇರ್​ ಸೌಲಭ್ಯವನ್ನು ಕೂಡ ಒದಗಿಸಬೇಕು.

ಕೊನೆಯಲ್ಲಿ ಮಾತನಾಡಿದ ಸುನೀತಾ ರೆಬೆಕ್ಕಾ ಚೆರಿಯನ್​, ''ಮಹಿಳೆಯರು ಕೂಡ ಪುರುಷರಷ್ಟೇ ಕಠಿಣ, ವಿಶೇಷ ಪ್ರೋತ್ಸಾಹ ಮತ್ತು ರಿಯಾಯಿತಿಯನ್ನು ಅವಲಂಬಿಸಿಲ್ಲ'' ಎನ್ನುವ ಮೂಲಕ ಚರ್ಚೆಯನ್ನು ಮುಕ್ತಾಯಗೊಳಿಸಿದ್ರು.

Related Stories