`ಚಾಕ್ ಲೇ'ನಲ್ಲಿ ಚಾಕಲೇಟ್ ಚಪ್ಪರಿಸಿ...

ಟೀಮ್​ ವೈ.ಎಸ್​​.

0

ಚಾಕಲೇಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಚಾಕಲೇಟ್ ಚಪ್ಪರಿಸ್ತಾರೆ. ರೂಪಾಲಿ ಅವರಂತೂ ಚಾಕಲೇಟ್‍ನಲ್ಲೇ ಮುಳುಗೇಳ್ತಿದ್ದಾರೆ. ಯಾಕಂದ್ರೆ ಅವರ ಕುಟುಂಬದ ಉದ್ಯಮ `ಚಾಕ್ ಲೇ'ನಲ್ಲಿ ರೂಪಾಲಿ ಮಾರ್ಕೆಟಿಂಗ್ ಹಾಗೂ ಬ್ಯುಸಿನೆಸ್ ಡೆವಲಪ್‍ಮೆಂಟ್ ಮುಖ್ಯಸ್ಥರು. ರೂಪಾಲಿ ಅವರ ಕನಸಿಗೆ ಬಣ್ಣ ಹಚ್ಚಿದವರು ಅವರ ತಾಯಿ. ಅವರೇ ಆರಂಭಿಸಿದ ಸಂಸ್ಥೆ `ಚಾಕ್ ಲೇ'ಯಲ್ಲಿ ರೂಪಾಲಿ ಹಗಲಿರುಳು ದುಡಿಯುತ್ತಿದ್ದಾರೆ. ಅವರ ಕಾರ್ಪೊರೇಟ್ ವೃತ್ತಿ ಹೊಸ ಆಕಾರ ಪಡೆದಿದ್ದು ಇದೇ ಸಂಸ್ಥೆಯಿಂದ.

ಚಾಕಲೇಟ್ ಬಗೆಗೆ ಸಾವಿಲ್ಲದ ಉತ್ಸಾಹ, ಹೊಸ ಪರಂಪರೆಯನ್ನು ಸೃಷ್ಟಿಸುವ ಬಯಕೆಯಿಂದ ಈ ಉದ್ಯಮಕ್ಕೆ ಕಾಲಿಟ್ಟ ರೂಪಾಲಿ ಅದರಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ರೂಪಾಲಿ ಅವರ ನೇತೃತ್ವದಲ್ಲಿ `ಚಾಕ್ ಲೇ', ಅದ್ಭುತ ತಂಡವನ್ನು ಹೊಂದಿದೆ. ಚಾಕಲೇಟ್ ತಯಾರಿಸುವ ಅತಿ ದೊಡ್ಡ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿ ದಿನ ಇಲ್ಲಿ 250 ಕೆಜಿ ಸಿಹಿ ಭಕ್ಷ್ಯಗಳು, 800 ಕೆಜಿ ಚಾಕಲೇಟ್ ಉತ್ಪಾದಿಸಲಾಗ್ತಿದೆ. `ಚಾಕ್ ಲೇ' ಭಾರತದ ದೊಡ್ಡ ದೊಡ್ಡ ರೆಸ್ಟೋರೆಂಟ್ ಹಾಗೂ ಕೆಫೆಗಳ ಜೊತೆ ಸೇರಿ ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ಯೋಜನೆ ರೂಪಿಸಿದೆ.

ಉದ್ಯಮಶೀಲತೆಯಲ್ಲಿ ಪದವಿ...

ಮೊದಲು ರೂಪಾಲಿ `ರಿಲಯೆನ್ಸ್ ಇನ್‍ಫ್ರಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ರು. ಆದ್ರೆ ಅವರ ಮನಸ್ಸೆಲ್ಲಾ ಸ್ವಂತ ಉದ್ಯಮದ ಕಡೆಗಿತ್ತು. ವೃತ್ತಿ ಬಿಟ್ಟು ತಮ್ಮ ಕನಸಿನ ಬೆನ್ನೇರಿ ಹೋಗಲು ರೂಪಾಲಿ ನಿರ್ಧರಿಸಿದ್ರು. ಪುಣೆಯಲ್ಲಿ ಉದ್ಯಮಕ್ಕೆ ಸಂಬಂಧಿಸಿದಂತೆ ಎಂಬಿಎ ಮುಗಿಸಿದ್ರು. ರೂಪಾಲಿ ಅವರ ತಾಯಿ ಚಾಕಲೇಟ್ ತಯಾರಿಕೆ ಉದ್ಯಮದಲ್ಲೇ ಇದ್ದಿದ್ರಿಂದ ಬಾಲ್ಯದಿಂದ್ಲೂ ರೂಪಾಲಿಗೂ ಅದರಲ್ಲಿ ಆಸಕ್ತಿ ಇತ್ತು. ರೂಪಾಲಿ ಅವರ ತಾಯಿ ಚಾಕಲೇಟ್ ತಯಾರಿಕಾ ಕಲೆಯಲ್ಲಿ ನುರಿತಿದ್ರು. ಚಾಕಲೇಟ್ ತಯಾರಿಕೆಯ ಅತಿ ಜನಪ್ರಿಯ ವಿಧಾನ ಬ್ಯಾರಿ ಕಲ್ಲೆಬೌಟ್ ಕೂಡ ಅವರಿಗೆ ಗೊತ್ತಿತ್ತು. ಮಗುವಾಗಿದ್ದಾಗ್ಲೇ ತಮ್ಮ ಮಗಳಿಗೆ ಅದೆಲ್ಲವನ್ನೂ ಕಲಿಸಿದ್ರು. ಚಾಕಲೇಟ್ ಬಗ್ಗೆ ಇರೋ ಅತಿಯಾದ ಪ್ರೀತಿಯನ್ನು ಏನದ್ರೂ ಸಾಧನೆ ಮೂಲಕವೇ ವ್ಯಕ್ತಪಡಿಸಬೇಕೆಂಬ ಇರಾದೆ ರೂಪಾಲಿ ಅವರಿಗಿತ್ತು. ತಾವೊಬ್ಬ ತಪ್ಪೊಪ್ಪಿಕೊಂಡಿರೋ ಚಾಕಲೇಟ್ ಪ್ರೇಮಿ ಎನ್ನುತ್ತಾರೆ ಅವರು. 2011ರಲ್ಲಿ `ಚಾಕ್ ಲೇ' ಕಂಪನಿ ಸೇರಿದ ರೂಪಾಲಿ ಹೊಸ ಹೊಸ ತಂತ್ರಜ್ಞಾನದ ಮೂಲಕ ವೃತ್ತಿಪರ ತಂಡವೊಂದನ್ನು ಕಟ್ಟಿ ಬೆಳೆಸಿದ್ದಾರೆ.

ಮಕ್ಕಳಿಗೆ ಹೊರದೇಶದ ಚಾಕಲೇಟ್ ಅಂದ್ರೆ ಬಲು ಇಷ್ಟ. ರೂಪಾಲಿ ಕೂಡ ಭಿನ್ನವಾಗೇನೂ ಇರಲಿಲ್ಲ. ಆ ಟ್ರೆಂಡ್‍ನ್ನು ಯಾಕೆ ಪುನರಾವರ್ತಿಸಬಾರದು ಎಂಬ ಆಲೋಚನೆ ರೂಪಾಲಿ ಮನಸ್ಸಿನಲ್ಲಿತ್ತು. ಆಮದು ಮಾಡಿಕೊಂಡ ಚಾಕಲೇಟ್‍ಗಳಲ್ಲಿ ಬಳಸುವಂಥ ಎಸ್ಸೆನ್ಸ್ ಹಾಕಿ ಭಾರತದಲ್ಲೇ ಅಂತಹ ಚಾಕಲೇಟ್ ತಯಾರಿಸಿರುವ ಬಗ್ಗೆ ರೂಪಾಲಿ ಅವರಿಗೆ ಹೆಮ್ಮೆಯಿದೆ. ಮಸಾಲಾ ಚಹಾ ಸುವಾಸನೆಯುಳ್ಳ ಚಾಕಲೇಟ್‍ಗಳನ್ನೂ ತಯಾರಿಸಿರುವುದು ಇವರ ಹೆಗ್ಗಳಿಕೆ. ಭಾರತದಲ್ಲಿ ನಟ್ಸ್ ಚಾಕಲೇಟ್‍ಗಳಿಗೆ ಬಹುಬೇಡಿಕೆ ಇದೆ. ಬಾದಾಮಿ ಮತ್ತು ಹೇಝಲ್‍ನಟ್ಸ್ ಬಳಸಿ ಚಾಕಲೇಟ್ ಮಾಡಲಾಗ್ತಿದೆ. ಅದರ ನಡುವೆಯೂ ಈ ಮಸಾಲಾ ಚಹಾ ಪರಿಮಳದ ಚಾಕಲೇಟ್ ಅನ್ನು ಜನಪ್ರಿಯಗೊಳಿಸುವಲ್ಲಿ ಸಫಲರಾಗಿದ್ದಾರೆ. ಮಿಕ್ಸ್ & ಮ್ಯಾಚ್ ಚಾಕಲೇಟ್ ಮೂಲಕ ಗ್ರಾಹಕರ ಮನಗೆದ್ದಿದ್ದಾರೆ. ಚಾಕಲೇಟ್ ತಯಾರಿಕೆ ರೂಪಾಲಿ ಅವರ ಹವ್ಯಾಸವಾಗಿತ್ತು. ಅದನ್ನೇ ವೃತ್ತಿಯನ್ನಾಗಿ ತೆಗೆದುಕೊಂಡು ರೂಪಾಲಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಉದ್ಯಮದಲ್ಲಿ ಎದುರಾದ ಸವಾಲುಗಳು...

ಭಾರತದಲ್ಲಿ ಉದ್ಯಮ ಆರಂಭಿಸುವುದು ಸುಲಭದ ಮಾತಲ್ಲ. ಆದ್ರೆ ರೂಪಾಲಿಗೆ ಅದನ್ನೆಲ್ಲ ಅರ್ಥಮಾಡಿಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ. ಮಹಿಳಾ ಕೇಂದ್ರಿತ ಈ ಸಾಹಸೋದ್ಯಮಕ್ಕೆ ಬ್ಯಾಂಕ್‍ಗಳಿಂದ್ಲೂ ಅಪಾರ ನೆರವು ಸಿಕ್ಕಿತ್ತು. ಮಹಿಳಾ ಉದ್ಯಮಿಗಳಿಗೆ ಲಾಭವಾಗುವಂಥ ಸ್ಕೀಮ್‍ಗಳು ಕೂಡ ಸಿಕ್ಕಿತ್ತು. ಮುಂಬರುವ ದಿನಗಳಲ್ಲಿ ಸಾವಯವ ಉದ್ಯಮವನ್ನಾಗಿ ಇದನ್ನು ಪರಿವರ್ತಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಚಾಕ್ ಲೇ ಕೇವಲ ಒಂದು ಚಿಲ್ಲರೆ ವ್ಯಾಪಾರದ ಬ್ರ್ಯಾಂಡ್ ಆಗಿ ಗುರುತಿಸಿಕೊಳ್ಳುವುದು ರೂಪಾಲಿ ಅವರಿಗೆ ಇಷ್ಟವಿರಲಿಲ್ಲ. ಒಬ್ಬ ಚಾಕಲೇಟಿಯರ್ ಆಗಿ ಗುರುತಿಸಿಕೊಳ್ಳಲು ಅವರು ಬಯಸಿದ್ರು. ವಿವಿಧ ಹೋಟೆಲ್‍ಗಳೊಂದಿಗೆ ಪಾಲುದಾರಿಕೆಗೂ ಅವರು ಉತ್ಸುಕರಾಗಿದ್ದಾರೆ. ಅಡುಗೆಯವರ ಪಾಕವಿಧಾನಕ್ಕೆ ಪೂರಕವಾಗಿ ಕೆಲ ಉತ್ಪನ್ನಗಳನ್ನು ಕೂಡ ಸದ್ಯದಲ್ಲೇ ಚಾಕ್ ಲೇ ಬಿಡುಗಡೆ ಮಾಡಲಿದೆ. ಇದನ್ನು ಆನ್‍ಲೈನ್ ಉದ್ಯಮವಾಗಿಸುವ ಯೋಚನೆ ಕೂಡ ಇದೆ. ಗ್ರಾಹಕರು ಮನೆಯಲ್ಲೇ ಕುಳಿತು ತಮಗಿಷ್ಟವಾದ ಚಾಕಲೇಟ್‍ಗಳನ್ನು ಆರ್ಡರ್ ಮಾಡಬಹುದಾದಂಥ ಸೌಲಭ್ಯವನ್ನು ಚಾಕ್ ಲೇ ಕಲ್ಪಿಸಲಿದೆ. ಇದಕ್ಕೆ ಗ್ರಾಹಕರು ಸ್ವಲ್ಪ ದಿನ ಕಾಯಬೇಕಷ್ಟೆ.

ಹೋಟೆಲ್, ರೆಸ್ಟೋರೆಂಟ್‍ಗಳನ್ನು ಹೊರತುಪಡಿಸಿ ಚಾಕ್ ಲೇ ಪ್ರತ್ಯೇಕ ಆರ್ಡರ್‍ಗಳನ್ನು ಕೂಡ ತೆಗೆದುಕೊಳ್ಳುತ್ತೆ. ಯಾವುದಾದ್ರೂ ಕಾರ್ಯಕ್ರಮಗಳಿಗೆ ಅಗತ್ಯವಿದ್ರೆ ಚಾಕಲೇಟ್ ಪೂರೈಸುತ್ತೆ. ಆದ್ರೆ ಕೇಟರಿಂಗ್‍ನಲ್ಲಿ ಕನಿಷ್ಠ ಸಂಖ್ಯೆಯ ಆರ್ಡರ್‍ಗಳನ್ನು ಮಾತ್ರ ತೆಗೆದುಕೊಳ್ಳಲಾಗ್ತಿದೆ. ತಮಗೆ ಅತ್ಯಂತ ತೃಪ್ತಿ ಹಾಗೂ ಯಶಸ್ಸನ್ನು ತಂದುಕೊಟ್ಟ ಚಾಕಲೇಟ್ ಜಗತ್ತಿನ ಬಗ್ಗೆ ರೂಪಾಲಿ ಅವರಿಗೆ ಹೆಮ್ಮೆಯಿದೆ. ಒಟ್ನಲ್ಲಿ ಚಾಕಲೇಟ್ ಪ್ರಿಯರಿಗೆ ಸಿಹಿ ಉಣಿಸುವ ಮೂಲಕ ರೂಪಾಲಿ ಒಳ್ಳೆ ಕಾರ್ಯವನ್ನೇ ಮಾಡ್ತಿದ್ದಾರೆ. ನಿಮಗೂ ಬಾಯಲ್ಲಿ ನೀರೂರಿಸುವಂಥ ಚಾಕಲೇಟ್ ಚಪ್ಪರಿಸೋ ಆಸೆಯಿದ್ರೆ ಒಮ್ಮೆ `ಚಾಕ್ ಲೇ'ಗೆ ವಿಸಿಟ್ ಕೊಡಿ.

Related Stories