ಎರಡು ಕ್ಯಾನ್ಸರ್​​ ಎದುರಿಸಿದ ಧೀರ ಮಹಿಳೆ - ಬದುಕಿನ ಅದಮ್ಯ ಉತ್ಸಾಹದ ಚಿಲುಮೆ ನೀಲಂ ಕುಮಾರ್

ಟೀಮ್​ ವೈ.ಎಸ್​. ಕನ್ನಡ

0

ಮುಂಜಾನೆ ಸುಮಾರು ನಾಲ್ಕು ಗಂಟೆಯ ಸಮಯ. ವಿಚಿತ್ರವಾದ ಕನಸು ಬೀಳುತ್ತಿತ್ತು. ದೂರದ ರಷ್ಯಾದ ಸುಂದರ ಪ್ರವಾಸಿ ತಾಣದಲ್ಲಿ ಇದ್ದ ಅನುಭವವಾಗುತ್ತಿತ್ತು. ಭಾರತೀಯ ಬಾಲಕಿಯೊಬ್ಬಳು ರಷ್ಯಾದ ಅರಣ್ಯ ಪ್ರದೇಶದಲ್ಲಿ ಸ್ಟ್ರಾಬೆರಿ ತಿನ್ನುತ್ತಿದ್ದಳು. ಕಣ್ಣಮುಂದೆ ಖ್ಯಾತ ಲೇಖಕ ಖುಷ್ವಂತ್​​ ಸಿಂಗ್ ಹಾದು ಹೋಗುತ್ತಿದ್ದ ದೃಶ್ಯ ಸ್ಮತಿ ಪಟಲದಲ್ಲಿ ಮೂಡಿ ಬರುತ್ತಿತ್ತು. ಬಳಿಕ ಚಿಕ್ಕ ಹುಡುಗಿಯೊಂದು ಬ್ಲಾಕ್ ಸೀ ಯಲ್ಲಿ ಈಜುತ್ತಿರುವ ದೃಶ್ಯ. ಬಳಿಕ ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬಳ ಚಿತ್ರ ಕಣ್ಣ ಮುಂದೆ ಬರುತ್ತಿತ್ತು. ಪಕ್ಕದಲ್ಲಿಯೇ ಬುದ್ಧನ ಮಂತ್ರಗಳನ್ನು ಜಪಿಸುತ್ತಿರುವ ಮಹಿಳೆ. ಹೀಗೆ ಹಲವು ದೃಶ್ಯಾವಳಿಗಳು ಸ್ಮತಿಪಟಲದಲ್ಲಿ ಹರಿದಾಡುತ್ತಿದ್ದವು. ತಕ್ಷಣ ನನಗೆ ಎಚ್ಚರಿಕೆಯಾಯಿತು. ಎಲ್ಲವೂ ಸ್ಪಷ್ಟವಾಗಿ ಅರಿವಾಯಿತು. ನಾನು ನನಗೆ ಗೊತ್ತಿಲ್ಲದೆ ನೀಲಂ ಕುಮಾರ್ ಅವರ ಕಥೆಯನ್ನು ರೂಪಿಸುತ್ತಿದ್ದೆ. ರೂಪ ಕೊಡುತ್ತಿದೆ ಎಂಬುದು ಸ್ಪಷ್ಟವಾಯಿತು. ಹೀಗೆ ಆರಂಭವಾಯಿತು ಬರಹದ ಜೀವನ.

ಸಂತೋಷ ಒಂದು ಮನೋಸ್ಥಿತಿ

ನೀಲಂ ಅವರ ಬಾಲ್ಯ ಅತ್ಯಂತ ರಮಣೀಯವಾಗಿತ್ತು. ರಷ್ಯಾದ ಸುಂದರ ತಾಣಗಳಲ್ಲಿ ಅವರು ತಮ್ಮ ಬಾಲ್ಯವನ್ನು ಕಳೆದರು. ಶಾಲೆ ಹೆಸರಿಗೆ ಮಾತ್ರ ವಾಗಿತ್ತು. ಅಲ್ಲಿ ಎನನ್ನೂ ಕಲಿಸುತ್ತಿರಲಿಲ್ಲ. ಸುಂದರ ಪ್ರಕೃತಿ ತಾಣಗಳಿಗೆ ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು. ಅಲ್ಲಿ ಎಲ್ಲವನ್ನು ಅವಲೋಕಿಸುವ ಅವಕಾಶ ದೊರೆಯುತ್ತಿತ್ತು. ಬೇಸಿಗೆ ಸಮಯದಲ್ಲಿ ಹೇಳ ತೀರದ ಖುಷಿ. ಸುಂದರ ಪ್ರವಾಸಿ ತಾಣ ಅನಾಪದಲ್ಲೇ ವಾಸ್ತವ್ಯ. ಇದು ನೀಲಂ ಅವರ ಬಾಲ್ಯದ ಬದುಕು. ನೀಲಂ ಅವರ ತಂದೆ ಮತ್ತು ತಾಯಿ ಖ್ಯಾತ ಲೇಖಕರಾಗಿದ್ದರು. ರಷ್ಯಾದಲ್ಲಿನ ಸಾಹಿತ್ಯವನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಗೆ ಅನುವಾದ ಮಾಡುವ ಹೊಣೆಗಾರಿಕೆ ನೀಡಲಾಗಿತ್ತು. ರಷ್ಯಾದಲ್ಲಿನ ಭಾರತೀಯ ದೂತಾವಾಸ ಅವರ ಕಾರ್ಯಕ್ಷೇತ್ರವಾಗಿತ್ತು.

ಬಾಲ್ಯ ಕಾಲದ ಸುಂದರ ದಿನಗಳಿಗೆ ಒಂದು ದಿನ ಅಂತ್ಯ ಬಂತು. ರಷ್ಯಾದ ಮಾಸ್ಕೋದಲ್ಲಿದ್ದ ನೀಲಂ ಶಿಕ್ಷಣಕ್ಕಾಗಿ ಭಾರತಕ್ಕೆ ಮರಳಬೇಕಾದ ಪರಿಸ್ಥಿತಿ ಬಂದಿತ್ತು. ಬಳಿಕ ಭಾರತದಲ್ಲಿ ಇಂಗ್ಲೀಷ್ ಕಲಿಯಬೇಕಾದ ಅನಿವಾರ್ಯತೆ ಒದಗಿ ಬಂತು. ರಷ್ಯಾದಲ್ಲಿ ಹೆಸರಿಗೆ ಮಾತ್ರ ಶಾಲೆಗೆ ಹೋಗಿದ್ದ ನೀಲಂ ಅವರಿಗೆ ಇಂಗ್ಲೀಷ್ , ಒಂದು ಚೂರು ಬರುತ್ತಿರಲಿಲ್ಲ. ಸಹಜವಾಗಿಯೇ ಶಾಲೆಯಲ್ಲಿ ಇದರಿಂದ ಶಿಕ್ಷಕರ ಕೆಂಗಣ್ಣಿಗೆ ಗುರಿಯಾದರು. ವಿದ್ಯೆ ತಲೆಗೆ ಹತ್ತದ ಹುಡುಗಿ ಎಂದು ಶಿಕ್ಷಕರು ಕಮೆಂಟ್ ಮಾಡುತ್ತಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ನೀಲಂ ಇಂಗ್ಲೀಷ್ ಭಾಷೆಯಲ್ಲಿ ಪ್ರಭುತ್ವ ಪಡೆದೇ ತೀರಬೇಕೆಂಬ ಸಂಕಲ್ಪ ಮಾಡಿದರು. ಸತತ ಸಾಧನೆ ಮಾಡಿದರು.

ಇಂಗ್ಲೀಷ್​​​ನಲ್ಲಿಯೇ ಐದು ಪುಸಕ್ತ ಬರೆದರು. ಜನ ಮನ್ನಣೆ ಗಳಿಸಿದರು. ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ, ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ ಹೀಗೆ ಹಲವು ಸಾಧನೆ ಶಿಖರದ ಮೆಟ್ಟಿಲೇರಿದರು.

ಕಷ್ಟದ ದಿನಗಳು ಹೇಗಿದ್ದವು..?

1996ರ ವರೆಗೆ ಎಲ್ಲವೂ ಸರಿಯಾಗಿತ್ತು. ಆ ವರ್ಷ ನೀಲಂ ಅವರ ಬದುಕಿನಲ್ಲಿ ಕರಾಳ ಅಧ್ಯಾಯ ಆರಂಭವಾಯಿತು. ಸ್ತನ ಕ್ಯಾನ್ಸರ್ ರೋಗದ ಲಕ್ಷಣಗಳು ಅವರಲ್ಲಿ ಗೋಚರಿಸಿದವು. ನನಗೆ ಯಾಕಾಗಿ ರೋಗ ಬಂದಿದೆ ಎಂದು ಅವರು ಚಿಂತಿತರಾದರು. ಗಾಯದ ಮೇಲೆ ಬರೆ ಎಳೆದಂತೆ ನೀಲಂ ಅವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದ ಅವರ ಪತಿ ಕೂಡ ಇದೇ ಸಂದರ್ಭದಲ್ಲಿ ಅಸು ನೀಗಿದರು. ಹೀಗೆ ಒಂದರ ಮೇಲೆ ಕಷ್ಟ ಬಂದವು. ಆರ್ಥಿಕ ಸಂಕಷ್ಟ ಒಂದೆಡೆಯಾದರೆ, ಜೀವನ ಸಂಗಾತಿಯನ್ನು ಕಳೆದುಕೊಂಡ ನೋವು ಇನ್ನೊಂದೆಡೆ. ಹೀಗೆ ಸಂಕಷ್ಟದ ಪರಿಸ್ಥಿತಿಯಲ್ಲಿ ಅವರಿಗೆ ಒತ್ತಾಸೆಯಾಗಿ ನಿಂತವರು ಅವರ ಮಕ್ಕಳು ಮತ್ತು ಆಪ್ತ ಬಂಧುಗಳು. ಮುಂಬೈನಲ್ಲಿ ಸಕಾಲದಲ್ಲಿ ದೊರೆತ ಉತ್ತಮ ಚಿಕಿತ್ಸೆ ಕೂಡ ಇದಕ್ಕೆ ನೆರವಾಯಿತು. ತಮಗೆ ಚಿಕಿತ್ಸೆ ನೀಡಿ , ತಮ್ಮ ಜೀವ ರಕ್ಷಿಸಿದ ವೈದ್ಯರನ್ನು ನೀಲಂ ಈಗಲೂ ನೆನಪಿಸಿಕೊಳ್ಳುತ್ತಾರೆ. ವಿನೀತ ಭಾವನೆ ಅವರಲ್ಲಿ ಮನೆ ಮಾಡಿದೆ.

2ನೇ ಬಾರಿ ಕ್ಯಾನ್ಸರ್ ದಾಳಿ - ಬದುಕಿನಲ್ಲಿ ಪಾಠ

ಒಂದು ಬಾರಿ ಕ್ಯಾನ್ಸರ್ ಬಂದರೆ ಎಲ್ಲ ಧೈರ್ಯ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ಎರಡನೆ ಬಾರಿ ಕ್ಯಾನ್ಸರ್ ದಾಳಿ ಮಾಡಿದರೆ ಎನು ಮಾಡಬೇಕು. ನೀಲಂ ಅವರ ಬದುಕಿನಲ್ಲಿ ಇದೇ ರೀತಿಯ ಕಷ್ಟ ಎದುರಾಯಿತು. 2013ರಲ್ಲಿ ಮತ್ತೊಮ್ಮೆ ನೀಲಂ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾದರು. ಇದು ಅವರ ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸಿತು. ರೋಗ ಬಂದಿದ್ದಕ್ಕೆ ಕೊರಗುವ ಬದಲು ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ತಮ್ಮ ಆತ್ಮ ಚೇತನವನ್ನು ಬಡಿದೆಬ್ಬಿಸಿದರು. ಕೊರಗುವುದರಿಂದ ಏನೇನು ಪ್ರಯೋಜನವಿಲ್ಲ ಎಂಬುದನ್ನು ಅರಿತರು. ಈ ಸಂದರ್ಭದಲ್ಲಿ ಬೌದ್ಧ ಮಂತ್ರ ಅವರ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿತು. ಸರಳ ಮಂತ್ರ ಅದೂ ಬೌದ್ಧ ಧರ್ಮದ ಪ್ರಾರ್ಥನೆಯ ಸಾಲುಗಳು ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸುವ ಕ್ರಾಂತಿ ಕಾರಿ ಬದಲಾವಣೆಗೆ ಮುನ್ನುಡಿ ಬರೆಯಿತು.

ಕ್ಯಾನ್ಸರ್ ಗೆದ್ದ ವೀರ ಮಹಿಳೆ

ಕ್ಯಾನ್ಸರನ್ನೇ ಸೋಲಿಸಿದವಳು ಎಂದು ತಮ್ಮನ್ನು ತಾನು ಕರೆಯಿಸಿಕೊಳ್ಳಲು ನೀಲಂ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಬಳಸುವ ಕ್ಯಾನ್ಸರ್​​​ನಿಂದ ಬದುಕಿ ಉಳಿದವಳು ಎಂಬ ಪದ ಪ್ರಯೋಗ ತಮಗೆ ಸೂಕ್ತವಲ್ಲ ಎಂಬುದು ನೀಲಂ ಅವರ ಅಭಿಮತ. ಎರಡು ಬಾರಿ ಕ್ಯಾನ್ಸರ್ ಎದುರಿಸಿ ಜೀವನ ಎದುರಿಸುವುದು ಸುಲಭದ ಮಾತಲ್ಲ. ಇದು ನಿಜವಾಗಿಯೂ ಅಚ್ಚರಿ. ನನ್ನಲ್ಲಿ ಆದ ಬದಲಾವಣೆಯನ್ನು ಒಮ್ಮೆ ನೋಡಿ. ಗುಂಗುರು ಕೂದಲು. ಬದುಕಿನ ಬಗ್ಗೆ ನೋಟ, ದೃಷ್ಟಿಕೋನ, ನೋವು ನುಂಗಿ ಮುಗುಳ್ನಗುವ ಮೋಡಿ. ಹೀಗೆ ಒಂದಲ್ಲ, ಎರಡಲ್ಲ ನೂರಾರು ಬದಲಾವಣೆಗೆ ನಾನೇ ಸಾಕ್ಷಿ ಎನ್ನುತ್ತಾರೆ ನೀಲಂ.

1996ರಲ್ಲಿ ನೀಲಂ ಅವರು ಮೊದಲ ಬಾರಿಗೆ ಖ್ಯಾತ ಲೇಖಕ ಖುಷ್ವಂತ್ ಸಿಂಗ್ ಅವರನ್ನು ಭೇಟಿ ಮಾಡಿದರು. ಸಮಾರಂಭವೊಂದರಲ್ಲಿ ಖುಷ್ವಂತ್ ಸಿಂಗ್ ಅವರನ್ನು ಪರಿಚಯಿಸುವ ಹೊಣೆಗಾರಿಕೆಯನ್ನು ನೀಲಂ ಅವರಿಗೆ ನೀಡಲಾಗಿತ್ತು. ಭಾಷಣದಲ್ಲಿ ನೀಲಂ ಅವರು ಖುಷ್ವಂತ್ ಸಿಂಗ್ ಅವರು ಮಹಿಳೆಯರ ಬಗ್ಗೆ ಹೊಂದಿರುವ ಧೋರಣೆ ಕುರಿತಂತೆ ತಮ್ಮ ನೇರ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನು ಖುಷ್ವಂತ್ ಸಿಂಗ್ ತುಂಬಾ ಮೆಚ್ಚಿದರು. ನೀಲಂ ಅವರ ನೇರ ಮಾತುಕತೆ, ಹೇಳಿಕೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದು ನೀಲಂ ಮತ್ತು ಖುಷ್ವಂತ್ ಸಿಂಗ್ ಅವರ ಜಂಟಿ ಕೃತಿ ರಚನೆಗೆ ವೇದಿಕೆ ಕಲ್ಪಿಸಿತು. ಇದರ ಫಲವಾಗಿ ಮೂಡಿ ಬಂದದ್ದೇ ಅವರ್ ಫೇವರಿಟ್ ಇಂಡಿಯನ್ ಸ್ಟೋರಿಸ್. ಕೃತಿ ರಚನೆಗಾಗಿ ನೀಲಂ ಅವರು ದೇಶಾದ್ಯಂತ ವ್ಯಾಪಕ ಪ್ರವಾಸ ಮಾಡಿದರು. ಇದು ಅವರ ಅನುಭವದ ಬತ್ತಳಿಕೆಯನ್ನು ವಿಸ್ತರಿಸಿತು. ಇಂಗ್ಲೀಷ್ ನಲ್ಲಿ ಹೇಗೆ ಕೃತಿ ರಚಿಸಬೇಕು ಎಂಬುದನ್ನು ಖ್ಯಾತ ಲೇಖಕರಾದ ಖುಷ್ವಂತ್​​​ ಸಿಂಗ್ ಅವರ ಗರಡಿಯಲ್ಲೇ ಕಲಿತರು.

ವ್ಯಾಪಕ ಬರವಣಿಗೆ

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ನೀಲಂ ಅವರ ಜೊತೆಗಿದ್ದದ್ದು ಕೇವಲ ಪುಸ್ತಕ ಮಾತ್ರ. ಬಿಡುವಿಲ್ಲದೆ ಅಧ್ಯಯನ ಮಾಡಿದ ನೀಲಂ, ಇದನ್ನೇ ಹವ್ಯಾಸವಾಗಿ ಮಾಡಿಕೊಂಡಿದ್ದರು. ಇದರಿಂದಾಗಿ ಎರಡು ರೀತಿಯ ಪ್ರಯೋಜನ ಲಭಿಸಿತು. ವಿಭಿನ್ನ ವಿಷಯಗಳ ಅಧ್ಯಯನ ಮಾಡಿದ ನೀಲಂ, ತಮ್ಮ ಎಲ್ಲಾ ಅನುಭವಗಳನ್ನು ಕ್ರೋಢೀಕರಿಸಿ ಕೃತಿ ರಚನೆ ಮಾಡಿದರು. ಐದು ಕೃತಿಗಳು ರಚನೆಯಾದವು. ಲೆಜೆಂಡರಿ ಲವರ್ಸ್, ಟೇಲ್ಸ್ ಅಫ್ ಅನ್ ಎಂಡಿಂಗ್ ಲವ್, ಮೇರಾ ಲವ್ ಸೋಲ್ ಸಂಗ್ ಡೆಥ್ ( ಇಮೇಜ್ ಇಂಡಿಯಾ, 2011) ಎ ವುಮನ್ ( ಎ ರೈಟರ್ಸ್ ರೀ ಬರ್ಡ್ ಬುಕ್, 1991)

ಸದಾ ಚಟುವಟಿಕೆ

ಲೇಖಕಿಯಾಗಿ ಪ್ರಸಿದ್ಧಿ ಪಡೆದಿರುವ ನೀಲಂ, ಇದೀಗ ಬಿಡುವಿಲ್ಲದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರೇರಣಾತ್ಮಕ ಭಾಷಣ ಮಾಡುವ ಪರಿಣಿತರಾಗಿ ಅವರು ಗುರುತಿಸಿಕೊಂಡಿದ್ದಾರೆ. ಮುಂಬೈನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹೀಗೆ ಸಾಧನೆಯ ಪಟ್ಟಿ ಮುಂದುವರಿದಿದೆ. ಮುಂಬೈನಲ್ಲಿ ನಡೆದ 6ನೇ ಟಾಟಾ ಸಾಹಿತ್ಯೋತ್ಸವದಲ್ಲಿ ಕೂಡ ಅವರು ಉಪನ್ಯಾಸ ನೀಡಿದ್ದಾರೆ.

ಆಶೋತ್ತರ ಮತ್ತು ಆಶೆ

ಕ್ಯಾನ್ಸರ್ ರೋಗದ ಚಿಕಿತ್ಸೆ ಅಗ್ಗವಾಗಿರಬೇಕು. ಜನ ಸಾಮಾನ್ಯನಿಗೆ ಹೊರೆಯಾಗಬಾರದು. ಇದು ನೀಲಂ ಅವರ ಖಚಿತ ಮಾತು. ತಮ್ಮ ಅನುಭವದ ಹಿನ್ನೆಲೆಯಲ್ಲಿ ನೀಲಂ ಅವರು ಈ ಮಾತನ್ನು ಹೇಳುತ್ತಾರೆ. ಕ್ಯಾನ್ಸರ್ ರೋಗದ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ಜಾಗೃತಿ ಮೂಡಿದರೆ ಕ್ಯಾನ್ಸರ್ ರೋಗ ತಡೆಗಟ್ಟಲು ಸಾಧ್ಯ ಎಂಬ ಮಾತನ್ನು ನೀಲಂ ಹೇಳುತ್ತಾರೆ.

ನೀಲಂ ಅವರ ಬದುಕಿನಿಂದ ನಾವು ಕಲಿಯಬೇಕಾದ ಪಾಠ ಸಾಕಷ್ಟಿದೆ. ಕ್ಯಾನ್ಸರ್ ರೋಗ ಬಂದ ಮಾತ್ರಕ್ಕೆ ನೀಲಂ ಅವರು ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳಲಿಲ್ಲ. ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿದರು. ಜೀವನೋತ್ಸಾಹ ಎಂದೂ ಬತ್ತಿ ಹೋಗದಂತೆ ಅವರು ನೋಡಿಕೊಂಡರು. ಸ್ಫೂರ್ತಿ ತುಂಬಿ ತುಳುಕುವ ಹಾಗೆ ಅವರು ನೋಡಿಕೊಂಡರು. ಹೀಗೆ ನೀಲಂ ಅವರು ನಿರಾಶೆಯ ಮಧ್ಯೆ ಮಿನುಗುತ್ತಿರುವ ನಕ್ಷತ್ರದಂತೆ ಕಂಗೊಳಿಸುತ್ತಿದ್ದಾರೆ. ನಿರಾಶೆ ಮಡುಗಟ್ಟಿದಾಗ ಆಶಾವಾದದ ಬೆಳಕು ಮೂಡಿ ಬರುತ್ತದೆ.

ಲೇಖಕರು : ಸೌಮಿತ್ರ ಕೆ. ಚಟರ್ಜಿ
ಅನುವಾದಕರು : ಎಸ್​​ಡಿ

Related Stories

Stories by YourStory Kannada