ಟೀಮ್ ವೈ.ಎಸ್. ಕನ್ನಡ
ಸ್ನಾಪ್ಶಾಪ್ ಜನಪ್ರಿಯ ಏಐ ಮೂಲದ ವಿಶ್ಯುವಲ್ ಹಾಗೂ ಇಮೇಜ್ ಆನ್ಲೈನ್ ಸರ್ಚ್ ಪ್ಲಾಟ್ಫಾರಂ. ಇತ್ತೀಚೆಗಷ್ಟೆ ಈ ಸ್ನಾಪ್ಶಾಪ್ ಬಹಿರಂಗಪಡಿಸಿದ ಮೊತ್ತವೊಂದನ್ನು ಆಂಜೆಲ್ ಫಂಡಿಂಗ್ ಅಥವಾ ಒಂದು ಪ್ರಮಾಣದ ಸಾಂಸ್ಥಿಕ ಹೂಡಿಕೆಯ ಮೂಲಕ ಹೂಡಿಕೆ ಮಾಡಿದೆ. ಹಿಂದೆ ಈ ಸಂಸ್ಥೆ ಕಳೆದ ಸೆಪ್ಟೆಂಬರ್ನಲ್ಲಿ ಅಮೋದ್ ಮಾಲ್ವಿಯಾ ಮೂಲಕ ಹೂಡಿಕೆ ಮಾಡಿಸಿ, ಮೊದಲ ಬಾರಿಗೆ ಕಾರ್ಯಾಚರಣೆ ಆರಂಭಿಸಿತ್ತು. ಉದ್ಯಮಿ ಅಮೋದ್ ಮಾಲ್ವಿಯಾ ನೇತೃತ್ವ ವಹಿಸಿರುವ ಈ ಸಂಸ್ಥೆಗೆ ಈಗ ಹೂಡಿಕೆದಾರರಾದ ಪಲ್ಲಾವ್ ನಂದಿನಿ, ಸರನ್ ಚಟರ್ಜಿ, ಅಪೂರ್ವ ದಲಾಲ್, ಭೃಗದೀಶ್ ಸುರೇಶ್ಕುಮಾರ್, ಸನತ್ ರಾವ್ ಮುಂತಾದ ಉದ್ಯಮಿಗಳಿಂದ ಏಂಜಲ್ ಫಂಡಿಂಗ್ ಮಾಡಿಸಿಕೊಂಡಿದೆ.
ಈ ಹೂಡಿಕೆಯ ಸಹಾಯದಿಂದ ಸ್ನಾಪ್ಶಾಪ್ ತಂಡ ತನ್ನ ಕಾರ್ಯಕ್ಷಮತೆ ವೃದ್ಧಿಸಿಕೊಂಡಿದೆ. ಅದರಲ್ಲೂ ಮುಖ್ಯವಾಗಿ ಸಂಶೋಧನೆ ಹಾಗೂ ಅಭಿವೃದ್ಧಿ, ಹೊಸ ತಂತ್ರಜ್ಞಾನದ ಅಳವಡಿಕೆಯಂತಹ ಮಹತ್ತರ ವಿಚಾರಗಳಲ್ಲಿ ಈ ಹೂಡಿಕೆ ಪ್ರದಾನ ಪಾತ್ರ ವಹಿಸಿದೆ. ಬೆಂಗಳೂರಿನಲ್ಲಿ ಕಾರ್ಯಚರಿಸುತ್ತಿದ್ದ ಸಂಸ್ಥೆ ಈಗ ತನ್ನ ಕಾರ್ಯಾಚರಣೆಯನ್ನು ಜಾಗತಿಕವಾಗಿ ವಿಸ್ತರಿಸಲು ಯೋಜಿಸಿದೆ. ಅದರ ಪ್ರಾಥಮಿಕ ಭಾಗವಾಗಿ ಪಾಲೋ ಆಲ್ಟೋದಲ್ಲಿ ಸ್ಯಾಪ್ಶಾಪ್ ಕಾರ್ಯಾರಂಭ ಮಾಡಲು ರೂಪುರೇಷೆ ಸಿದ್ಧಪಡಿಸಿಕೊಂಡಿದೆ.
ಹಿಂದೆ ಸಂಸ್ಥೆಯ ಕೀ ಪರ್ಸನ್ ಎಂದೇ ಗುರುತಿಸಿಕೊಂಡಿದ್ದ ನವನೀತ್ ಯುವರ್ಸ್ಟೋರಿಗೆ ತಮ್ಮ ಅಭಿಪ್ರಾಯ ತಿಳಿಸುತ್ತಾ, ಅಮೋದ್ ಮಾಲ್ವಿಯಾನಂತಹ ಟೆಕ್ ಗುರು ಇದ್ದಾಗ ಸಂಸ್ಥೆಯ ಬೆಳವಣಿಗೆ ಪೂರಕವಾಗಿಯೇ ಫಲಿತಾಂಶ ನೀಡುತ್ತದೆ ಎಂದಿದ್ದರು. ಸಂಸ್ಥೆಯ ಉತ್ಪನ್ನದ ಮೇಲೆ ನಂಬಿಕೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ಅತ್ಯುತ್ತಮ ಹೂಡಿಕೆಯಾದರೆ ಸಂಸ್ಥೆಯ ತಂಡದಲ್ಲಿ ಸ್ವಯಂ ಸ್ಫೂರ್ತಿ ನೆಲೆಸುತ್ತದೆ ಅನ್ನುವುದು ನವನೀತ್ ಅಭಿಪ್ರಾಯವಾಗಿತ್ತು.
ಸ್ನಾಪ್ಶಾಪ್ ಮೊದಮೊದಲು ಇಮೇಜ್ ಸರ್ಚ್ ಹಾಗೂ ಗುರುತು ಪತ್ತೆ ಹಚ್ಚುವ ವಿಭಾಗದಲ್ಲಿ ಕೆಲಸ ಮಾಡುತ್ತಿತ್ತು. ಆದರೀಗ ಪ್ರಾಜೆಕ್ಟ್ ಟ್ಯೂನಿಂಗ್ ನಂತಹ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಕೊಳ್ಳುವತ್ತ ದೃಢವಾಗಿ ಹೆಜ್ಜೆ ಇಡುತ್ತಿದೆ.
ಇತ್ತೀಚೆಗಷ್ಟೆ ಸ್ನಾಪ್ಶಾಪ್ ತಂಡ 2015ರ ಇನ್ನೋವೇಶನ್ ಅವಾರ್ಡ್ ಎನ್ವಿಐಡಿಐಎ ಪಡೆದುಕೊಂಡಿದೆ. ಸಂಸ್ಥೆಯ ಡೀಪ್ ಲರ್ನಿಂಗ್ ಹಾಗೂ ಕಂಪ್ಯೂಟರ್ ವಿಶನ್ ಕಾರ್ಯಕ್ಷೇತ್ರದ ಗಣನೀಯ ಸಾಧನೆಗಾಗಿ ಈ ಪ್ರಶಸ್ತಿ ಅರಸಿಕೊಂಡು ಬಂದಿದೆ. ಜಾಗತಿಕ ಅಂತರ್ಜಾಲ ದಿಗ್ಗಜ ಸಂಸ್ಥೆಗಳಾದ ಗೂಗಲ್ ಹಾಗೂ ಐಬಿಎಂನಂತಹ ಬೃಹತ್ ಹಸ್ತಗಳು ಸಂಸ್ಥೆಯತ್ತ ಕೈ ಚಾಚಿರುವುದು ಸಂಸ್ಥೆಯ ನಿಜವಾದ ಸಾಧನೆ.
ನವನೀತ್ ಆತ್ಮವಿಶ್ವಾಸದಿಂದ ಹೇಳುವ ಪ್ರಕಾರ, ಸದ್ಯ ಸಂಸ್ಥೆಯ ರಿಸರ್ಚ್ ಟೀಂ ತನ್ನದೇ ಆದ ವಿಶೇಷತೆ ಹೊಂದಿದೆ. ಸ್ವತಂತ್ರ ಎಐ ಸಂಸ್ಥೆಗಳಲ್ಲಿ ಸ್ನಾಪ್ಶಾಪ್ ಮೊದಲ ಸ್ಥಾನದಲ್ಲಿದೆ. ಅಷ್ಟೇ ಅಲ್ಲ ವಿಶ್ವದ ಟಾಪ್ ಎಐ ಸಂಸ್ಥೆಗಳೊಟ್ಟಿಗೆ ಪೈಪೋಟಿ ನಡೆಸಲು ಸಂಸ್ಥೆ ಸಿದ್ಧವಾಗಿದೆ. ಸದ್ಯ ತಮ್ಮ ತಂಡ ನಿಧಾನಗತಿಯಲ್ಲಿ ಬೇರೆ ಬೇರೆ ತಾಂತ್ರಿಕ ಆಯಾಮಗಳ ಬೆಳವಣಿಗೆಯತ್ತ ಚಿಂತನೆ ನಡೆಸಿದೆ. ಕ್ರಮೇಣ ಹೊಸ ಸರ್ಚಿಂಗ್ ಕ್ಷೇತ್ರದ ಉತ್ಪನ್ನಗಳನ್ನು ಆವಿಷ್ಕರಿಸಿ ಮಾರುಕಟ್ಟೆಗೆ ಬಿಡುವ ಯೋಜನೆಯಿದೆ ಎಂದು ನವನೀತ್ ಮಾಹಿತಿ ನೀಡಿದ್ದಾರೆ.
ಸ್ನಾಪ್ಶಾಪ್ನಲ್ಲಿ ತಮ್ಮ ಹೂಡಿಕೆ ಹಾಗೂ ಸಂಸ್ಥೆಯ ಅಭಿವೃದ್ಧಿಯಲ್ಲಿ ತಮ್ಮ ಪಾತ್ರದ ಕುರಿತು ಯುವರ್ಸ್ಟೋರಿ ಜೊತೆ ಮಾತನಾಡಿರುವ ಅಮೋದ್ ಮಾಲ್ವಿಯಾ, ಇದೊಂದು ಸವಾಲು ಹಾಗೂ ತಮ್ಮ ಇಷ್ಟದ ಕಾರ್ಯಾಚರಣೆ ಎಂದಿದ್ದಾರೆ. ಎಐ ಕ್ಷೇತ್ರದಲ್ಲಿ ಪ್ರತಿ ದಿನವೂ ಹೊಸ ಹೊಸ ಸವಾಲುಗಳಿರುತ್ತವೆ. ಸಂಸ್ಥೆ ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹರಿಸಲು ಸಿದ್ಧವಾಗಿರಬೇಕಿರುತ್ತದೆ. ಸಂಸ್ಥೆಯ ಲ್ಯಾಬ್ನಲ್ಲಿ ಈವರೆಗೆ ಅಂತಹ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಇಂತಹ ಕ್ರಿಯಾಶೀಲ ತಂಡ ಹೊಂದಿರುವುದು ಎಐ ಕಾರ್ಯಕ್ಷೇತ್ರಕ್ಕೆ ಅತ್ಯಗತ್ಯ ಹಾಗೂ ಇದು ತಮ್ಮ ಪಾಲಿನ ಅದೃಷ್ಟ ಎಂದು ಅಮೋದ್ ಶ್ಲಾಘಿಸಿದ್ದಾರೆ.
ನವನೀತ್ ಹೇಳುವಂತೆ, ವ್ಯಾವಹಾರಿಕ ಜಗತ್ತಿನ ಬೇರೆ ಬೇರೆ ಪ್ರಮುಖ ಕಂಪೆನಿಗಳ ದಿಗ್ಗಜರು, ಅದರಲ್ಲೂ ಸರ್ಚ್ ಮಾತ್ರವಲ್ಲದೇ ಇ-ಕಾಮರ್ಸ್ ಹಾಗೂ ಸಾಸ್ (ಎಸ್ಎಎಎಸ್) ವಿಭಾಗದ ಸಂಸ್ಥೆಗಳೂ ಸ್ನಾಪ್ಶಾಪ್ ನೆರವು ಪಡೆಯುತ್ತಿವೆ. ಉದ್ಯಮ ಕ್ಷೇತ್ರದಲ್ಲಿ ಸಂಸ್ಥೆಗಳ ನಡುವಿನ ಸಹಭಾಗಿತ್ವ ಹಾಗೂ ಪರಸ್ಪರ ಸಹಕಾರದ ವಿಷಯದಲ್ಲಿ ಸ್ನಾಪ್ಶಾಪ್ರ ಕೊಡುಗೆ ಅತ್ಯುತ್ತಮವಾಗಿದೆ ಎಂದಿದ್ದಾರೆ.
ಇನ್ನು ಅರ್ಬ್ನ್ ಲ್ಯಾಡರ್ ಸಂಸ್ಥೆಯ ಸಿಟಿಒ, ಮಾಜಿ ಗೂಗಲ್ ಉದ್ಯೋಗಿ, ಸ್ನಾಪ್ಶಾಪ್ಆರ್ಗೆ ಹೂಡಿಕೆ ಮಾಡಿರುವ ಅಪೂರ್ವ ದಲಾಲ್ ಸಹ ಸಂಸ್ಥೆಯ ಕಾರ್ಯಾಚರಣೆ ಹಾಗೂ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇ-ಕಾಮರ್ಸ್ನಲ್ಲಿ ಇಮೇಜ್ ಸರ್ಚ್ ಸಮಸ್ಯೆಗೆ ಸಂಬಂಧಿಸಿದಂತೆ ಡೀಪ್ ಲರ್ನಿಂಗ್ ಅನಾಲಿಸಿಸ್ ಅರ್ಥ ಮಾಡಿಕೊಂಡು ಪರಿಹರಿಸುವುದು ಅತಿ ಮುಖ್ಯ. ಇದಕ್ಕೆ ಹೊಸ ಹಾಗೂ ಆಸಕ್ತಿಕರವಾದ ತಂತ್ರಜ್ಞಾನದ ಟೂಲ್ಗಳ ಅವಶ್ಯಕತೆಯಿರುತ್ತದೆ. ಗೂಗಲ್ ಹೊರತುಪಡಿಸಿದರೇ ಕೆಲವೇ ಕೆಲವು ಸಂಸ್ಥೆಗಳು ಮಾತ್ರ ಈ ರೀತಿಯ ವಿಭಿನ್ನ ಅಪ್ಲಿಕೇಶನ್ಗಳನ್ನು ಕಂಡುಹಿಡಿದಿವೆ. ಸ್ನಾಪ್ಶಾಪ್ ತಂಡದ ಪ್ರತಿಭೆ, ಸಾಮರ್ಥ್ಯ ಹಾಗೂ ಅಪ್ರೋಚ್ ಅತ್ಯುತ್ತಮವಾಗಿದೆ ಅನ್ನುವುದು ಅಪೂರ್ವ್ ದಲಾಲ್ರ ಹೆಮ್ಮೆಯ ಮಾತುಗಳು.
ಲೇಖಕರು: ಸಿಂಧು ಕಶ್ಯಪ್
ಅನುವಾದಕರು: ವಿಶ್ವಾಸ್ ಭಾರಾಧ್ವಜ್
Related Stories
March 14, 2017
March 14, 2017
Stories by YourStory Kannada