ಟೆನ್ಶನ್ ಬಿಡಿ, ಬ್ಲೂಮಿಂಗೊ ಇದ್ಯಲ್ಲಾ..!

ಟೀಮ್​​ ವೈ.ಎಸ್​​.

0

ಅರ್ಪಿತ್ ಬಾಜ್‍ಪೈ ಮತ್ತು ವಿಕ್ರಾಂತ್ ರಾಜ್ ಇಬ್ಬರೂ ಐಐಟಿ ಬಾಂಬೆಯಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ರು. ಹಾಗೇ ಅರ್ಪಿತ್‍ನ ಶಾಲಾ ಸಹಪಾಠಿ ಅನುರಾಗ್ ಶುಕ್ಲಾ ಎಸ್‍ಐಆರ್‍ಟಿ ಭೋಪಾಲ್‍ನಲ್ಲಿ ಓದುತ್ತಿದ್ದ. ಮೂವರೂ ಇನ್ನೇನು ಪದವಿ ಮುಗಿಸಿ ಕಾಲೇಜಿನಿಂದ ಹೊರಬರಬೇಕು ಅನ್ನುವಾಗಲೇ ಅವರ ಬ್ಯಾಚ್‍ಮೇಟ್‍ಗಳು, ಪ್ಲೇಸ್‍ಮೆಂಟ್‍ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಇಂಟರ್‍ವ್ಯೂ, ಆಪ್ಟಿಟ್ಯೂಡ್ ಟೆಸ್ಟ್ ಹಾಗೂ ಗುಂಪು ಚರ್ಚೆಗಳಿಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದರು. ಅರ್ಪಿತ್, ವಿಕ್ರಾಂತ್ ಮತ್ತು ಅನುರಾಗ್ ಕೂಡ ಅದೇ ಕೆಲಸವನ್ನು ಮಾಡುತ್ತಿದ್ದರು. ಆದ್ರೆ ಅವರು ಒಂದು ಗೊಂದಲಕ್ಕೆ ಸಿಲುಕಿದ್ದರು. ಅದೇನೆಂದರೆ, ‘ಎಲ್ಲರಿಗೂ ಕೆಲಸ ಸಿಕ್ಕೇ ಸಿಗುತ್ತದೆ. ಆದ್ರೆ ಆ ಕಂಪನಿಯಲ್ಲಿ ನಿಮ್ಮ ಕೆಲಸವೇನು ಅಂತ ಕೇಳಿದ್ರೆ, ಕೆಲಸಕ್ಕೆ ಸೇರಿದ ಮೇಲೆ ಗೊತ್ತಾಗುತ್ತಲ್ಲಾ ಅನ್ನೋ ರೆಡಿಮೇಡ್ ಉತ್ತರ ಎಲ್ಲರಿಂದ ದೊರೆಯಿತು’ ಅಂತಾರೆ ವಿಕ್ರಾಂತ್. ಹೀಗೆ ಕೆಲಸಕ್ಕೆ ಸೇರುವ ಮೊದಲು, ಅದರ ಬಗ್ಗೆ ಕೊಂಚವೂ ಮಾಹಿತಿಯಿಲ್ಲದೆ ಉದ್ಯೋಗಾಕಾಂಕ್ಷಿಗಳು ಇಕ್ಕಟ್ಟಿಗೆ ಸಿಲುಕಿದ್ದರು. ವಿದೇಶಿ ವಿಶ್ವವಿದ್ಯಾಲಯ ಹಾಗೂ ಬ್ಯುಸಿನೆಸ್ ಸ್ಕೂಲ್‍ಗಳಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳದ್ದೂ ಇದೇ ಕಥೆಯಾಗಿತ್ತು.

‘ಎಷ್ಟೆಲ್ಲಾ ಓದಿಕೊಂಡಿರುವ ನಮ್ಮ ಭಾರತದ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮಗೆ ಗೊತ್ತೇ ಇಲ್ಲದ ಕೆಲಸಕ್ಕೆ ಸೇರಲು ಎಷ್ಟೆಲ್ಲಾ ಶ್ರಮವಹಿಸುತ್ತಾರೆ ಅನ್ನೋ ವಿಷಯ ನೋಡಿ ನಮಗಂತೂ ದೊಡ್ಡ ಶಾಕ್ ಆಯ್ತು,’ ಅಂತ ಹುಬ್ಬೇರಿಸುತ್ತಾರೆ ಅರ್ಪಿತ್. ಅರ್ಪಿತ್, ವಿಕ್ರಾಂತ್ ಮತ್ತು ಅನುರಾಗ್ ಪ್ರಕಾರ, ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರುವ ಮುನ್ನ ಬಹುತೇಕ ಉದ್ಯೋಗಾಕಾಂಕ್ಷಿಗಳು, ತಮ್ಮ ಆಪ್ತರ, ಗೆಳೆಯರ, ಸಂಬಂಧಿಗಳ ಅಥವಾ ಪರಿಚಿತರ ಮಾತುಗಳನ್ನು ಕೇಳ್ತಾರಂತೆ. ‘ಹೀಗಾಗಿಯೇ ಅಂತಹ ಉದ್ಯೋಗಾಕಾಂಕ್ಷಿಗಳಿಗೆ ಅವರ ಶಿಕ್ಷಣಕ್ಕನುವಾದ ಕೆಲಸ ಮತ್ತು ಕಂಪನಿ ಕುರಿತು ಮಾಹಿತಿ ಒದಗಿಸುವ ನಿರ್ಧಾರಕ್ಕೆ ಬಂದೆವು’ ಅಂತ ತಮ್ಮ ಉದ್ದೇಶ ತಿಳಿಸುತ್ತಾರೆ.

ಬ್ಲೂಮಿಂಗೊ ಹುಟ್ಟಲೂ ಇದೇ ಕಾರಣ. ಇದು ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ವೃತ್ತಿ ಜೀವನದ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತಿದೆ. ಈಗಾಗಲೇ ಕೆಲಸಕ್ಕೆ ಸೇರಿ ಅನುಭವ ಹೊಂದಿರುವ ಮಂದಿ, ತಮ್ಮ ಅನುಭವ ಹಾಗೂ ಕಂಪನಿ ಕುರಿತು ಮಾಹಿತಿಗಳನ್ನೂ ಇಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿಯೇ ವೃತ್ತಿ ಜೀವನಕ್ಕೆ ಹೆಜ್ಜೆ ಇಡುವ ಮೊದಲು ಸಾಕಷ್ಟು ಯೋಚನೆ ಮಾಡಿ ನಂತರವಷ್ಟೇ ಒಂದು ದೃಢ ನಿರ್ಧಾರ ತೆಗೆದುಕೊಳ್ಳಲು ಉದ್ಯೋಗಾಕಾಂಕ್ಷಿಗಳಿಗೆ ಬ್ಲೂಮಿಗೊ ಅವಕಾಶ ಕಲ್ಪಿಸುತ್ತದೆ.

1. ಕೆಲಸಕ್ಕೆ ಸೇರೋದು ಹೇಗೆ?

2. ಅಲ್ಲಿ ಏನಾಗುತ್ತೆ?

3. ಅದರ ನಂತರದ ಭವಿಷ್ಯವೇನು?

100ಕ್ಕೂ ಹೆಚ್ಚು ಕಾಲೇಜುಗಳು, 800ಕ್ಕೂ ಹೆಚ್ಚು ಕಂಪನಿಗಳು ಹಾಗೂ 400ಕ್ಕೂ ಹೆಚ್ಚು ಉದ್ಯೋಗಿಗಳ ಅನುಭವದ ಕುರಿತ ಕಥೆಗಳೊಂದಿಗೆ ಬ್ಲೂಮಿಂಗೊ ಸೆಪ್ಟೆಂಬರ್‍ನಲ್ಲಿ ಪ್ರಾರಂಭವಾಯ್ತು. ಉದಾಹರಣೆಗೆ, ಒಬ್ಬ ವ್ಯಕ್ತಿ ಹೆಚ್‍ಪಿ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಮಾಹಿತಿ ಕಲೆ ಹಾಕುತ್ತಿದ್ರೆ, ಕೆಲಸದ ಕುರಿತ ಆತನ ಅನುಮಾನ ಹಾಗೂ ಪ್ರಶ್ನೆಗಳಿಗೆ ಬ್ಲೂಮಿಂಗೊ ಬಳಿ ಉತ್ತರ ದೊರೆಯುತ್ತದೆ. ಹೀಗೆ ಹಲವು ಕಂಪನಿಗಳ ಹಾಗೂ ಅಲ್ಲಿನ ಕೆಲಸಗಳ ಸಂಪೂರ್ಣ ರೇಖಾಚಿತ್ರವನ್ನು ಉದ್ಯೋಗಾಕಾಂಕ್ಷಿಗಳಿಗೆ ಒದಗಿಸುತ್ತದೆ ಈ ಕಂಪನಿ. ‘ಸದ್ಯ 2000ಕ್ಕೂ ಹೆಚ್ಚು ಸದಸ್ಯರು ನಮ್ಮ ವೆಬ್‍ಸೈಟ್‍ನಿಂದ ಉಪಯೋಗ ಪಡೆಯುತ್ತಿದ್ದಾರೆ. ಪ್ರತಿಯೊಬ್ಬರು ಸರಾಸರಿ ಸುಮಾರು 8 ನಿಮಿಷಗಳ ಕಾಲ ನಮ್ಮ ವೆಬ್‍ಸೈಟ್‍ನಿಂದ ಮಾಹಿತಿ ಕಲೆ ಹಾಕುತ್ತಾರೆ. ದಿನೇ ದಿನೇ ಅಂತಹವರ ಸಂಖ್ಯೆ ಏರಿಕೆಯಾಗುತ್ತಿದ್ದು, ನಮ್ಮ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.’ ಅಂತ ಗೆಲುವಿನ ನಗೆ ಬೀರ್ತಾರೆ ವಿಕ್ರಾಂತ್.

ಸದ್ಯ ಈ ವೆಬ್‍ಸೈಟ್‍ ಅನ್ನು ಉಚಿತವಾಗಿ ಬಳಸಬಹುದಾಗಿದೆ. ಸಿಲಿಕಾನ್ ವ್ಯಾಲಿ ಮೂಲದ ಮಾನವ ಸಂಪನ್ಮೂಲ ತಂತ್ರಜ್ಞಾನ ಸುವಾರ್ತಾಬೋಧಕ ತಾಜ್ ಹಸ್ಲಾನಿ, ಮಾಜಿ ಗೂಗಲ್ ಉದ್ಯೋಗಿ ಹಾಗೂ ಹಾಲಿ ವಾಲ್​​ಮಾರ್ಟ್ ಲ್ಯಾಬ್ಸ್​​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಕಿತ್ ಗುಪ್ತಾ ಮತ್ತು ದೆಹಲಿಯ ಐಐಟಿ ಹಾಗೂ ಅಹ್ಮದಾಬಾದ್‍ನ ಐಐಎಮ್‍ನಲ್ಲಿ ಶಿಕ್ಷಣ ಪೂರೈಸಿ ರೊಪೋಸೊನಲ್ಲಿ ಕೆಲಸ ಮಾಡುತ್ತಿರುವ ಅಂಕಿತ್ ಶ್ರೀವಾಸ್ತವ್ ಅವರ ಬೆಂಬಲ ಕಂಪನಿಗೆ ದೊರೆತಿದೆ. ಹೀಗಾಗಿಯೇ ಬ್ಲೂಮಿಂಗೊ ಉತ್ಪನ್ನವನ್ನು ತಾಂತ್ರಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸಲು ಬಂಡವಾಳಕ್ಕಾಗಿ ಈಗೀಗ ಕೆಲ ವಿಶೇಷ ಸೌಲಭ್ಯಗಳನ್ನು ಒದಗಿಸುವ ಮೂಲಕ ಇಂತಿಷ್ಟು ಅಂತ ಸೇವಾದರ ಪಡೆಯುವ ಆಲೋಚನೆ ಈ ತ್ರಿಮೂರ್ತಿಗಳದ್ದು.

ಹೀಗೆ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದರೂ, ಬ್ಲೂಮಿಂಗೊ ಇನ್ನೂ ಪ್ರಾರಂಭದ ಹಂತದಲ್ಲಿದೆಯಷ್ಟೇ. ಜಾಂಬೇ ( Jombay ) ಎಂಬ ಮತ್ತೊಂದು ಕಂಪನಿಯೂ ಬ್ಲೂಮಿಂಗೊ ರೀತಿಯ ಕೆಲಸವನ್ನೇ ಮಾಡುತ್ತಿದೆ. ಹಾಗೇ ಪೇಸ್ಕೇಲ್ (PayScale ) ಎಂಬ ಮತ್ತೊಂದು ಕಂಪನಿ ಉದ್ಯೋಗಾಕಾಂಕ್ಷಿಗಳಿಗೆ ಬೇರೆ ಬೇರೆ ಕಂಪನಿಗಳಲ್ಲಿನ ಸಂಬಳದ ಕುರಿತು ಮಾಹಿತಿ ನೀಡುತ್ತದೆ. ಇನ್ನು ಈ ಕ್ಷೇತ್ರದಲ್ಲಿರುವ ಗ್ಲಾಸ್‍ಡೋರ್ (Glassdoor) ಎಂಬ ಮತ್ತೊಂದು ಕಂಪನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಲಿಂಕೆಡ್‍ಇನ್ (LinkedIn) ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ, ಆದ್ರೆ ಈ ತಂತ್ರಜ್ಞಾನ ದಿಗ್ಗಜ ಅದ್ಯಾಕೋ ಈ ಕ್ಷೇತ್ರದಲ್ಲಿ ಮುನ್ನುಗ್ಗುವ ಮನಸ್ಸು ಮಾಡ್ತಿಲ್ಲ. ಸಂಘಟಿತ ಮಾಹಿತಿಯನ್ನು ರಚನಾತ್ಮಕವಾಗಿ ನೀಡುವ ಮೂಲಕ ಕಂಪನಿ ಮತ್ತು ಕೆಲಸಗಳ ಕುರಿತ ತಿಳುವಳಿಕೆಯುಳ್ಳ ಸಮುದಾಯ ಸೃಷ್ಟಿಸುವ ಗುರಿ ಬ್ಲೂಮಿಂಗೊ ಕಂಪನಿಯದು. ‘ಸಾಧ್ಯವಾಗುವಷ್ಟು ಎಲ್ಲಾ ಕೆಲಸಗಳು ಹಾಗೂ ಕಂಪನಿಗಳ ಕುರಿತು ಮಾಹಿತಿಯನ್ನು ಕಲೆ ಹಾಕುವುದು. ಬ್ಲೂಮಿಂಗೊ ವೇದಿಕೆಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಅತ್ಯುತ್ತಮ ರೀತಿಯಲ್ಲಿ ಸೇವೆ ಒದಗಿಸುವುದು. ಆ ಮೂಲಕ, ಅವರು ತಮಗಿಷ್ಟವಾದ ಹಾಗೂ ತಮ್ಮ ಅರ್ಹತೆಗೆ ತಕ್ಕ ಕೆಲಸಗಳನ್ನು ಆರಿಸಿಕೊಳ್ಳುವಂತಾಗುವ ದಿನ ನಮಗೆ ಯಶಸ್ಸು ಲಭಿಸಿದೆ ಎಂದರ್ಥ.’ ಅಂತ ತಮ್ಮ ಅಭಿಲಾಷೆ ವ್ಯಕ್ತಪಡಿಸುತ್ತಾರೆ ವಿಕ್ರಾಂತ್.

ಹೀಗೆ ಬ್ಲೂಮಿಂಗೊ ಆಗಷ್ಟೇ ಶಿಕ್ಷಣ ಮುಗಿಸಿಕೊಂಡು ಕೆಲಸಕ್ಕೆ ಸೇರುವ ಕುರಿತು ಗೊಂದಲದಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ದಾರಿದೀಪವಾಗಿದೆ. ಬ್ಲೂಮಿಂಗೊಗೆ ಮತ್ತಷ್ಟು ಉತ್ತೇಜನ ಸಿಗಲಿ ಹಾಗೂ ಅರ್ಪಿತ್, ವಿಕ್ರಾಂತ್ ಮತ್ತು ಅನುರಾಗ್‍ಅವರ ಈ ಕಾರ್ಯಕ್ಕೆ ಯಶಸ್ಸು ಲಭಿಸಲಿ ಅಂತ ನಾವೂ ಹಾರೈಸೋಣ.

Related Stories