ಒಂದೇ ಗುರಿ- ದಾರಿ ಮಾತ್ರ ಬೇರೆ ಬೇರೆ..ಚೇತನಾ ಸಿನ್ಹಾ ಯೋಚನೆ ಬದಲಿಸಿದ ಗ್ರಾಮೀಣ ಮಹಿಳೆಯರು

ಆರ್​​.ಪಿ.

ಒಂದೇ ಗುರಿ- ದಾರಿ ಮಾತ್ರ ಬೇರೆ ಬೇರೆ..ಚೇತನಾ ಸಿನ್ಹಾ ಯೋಚನೆ ಬದಲಿಸಿದ ಗ್ರಾಮೀಣ ಮಹಿಳೆಯರು

Friday October 23, 2015,

5 min Read

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಾಸ್ವಾದ್ ಗ್ರಾಮದ ಮಹಿಳೆಯರ ಗುಂಪೊಂದು ಆರ್‍ಬಿಐ ಬ್ಯಾಂಕ್ ಅಧಿಕಾರಿಗಳ ಮುಂದೆ ಕೂತಿತ್ತು. ಹೆಬ್ಬೆಟ್ಟು ಮುದ್ರೆಯ ಕಾರಣ 6ತಿಂಗಳ ಹಿಂದೆ ತಿರಸ್ಕೃತಗೊಂಡ ಬ್ಯಾಂಕ್ ಲೈಸನ್ಸ್ ಅನ್ನು ಮತ್ತೆ ಪಡೆಯಲು ಅವರು ಕಾಯುತ್ತಿದ್ದರು. ಈ ಬಾರಿ ಮಹಿಳೆಯರು ಅಕ್ಷರಸ್ತರಾಗಿದ್ದರು. ಮನ್ ದೇಶೀ ಸಂಘಟನೆಗೆ ಬ್ಯಾಂಕ್ ಲೈಸನ್ಸ್ ಪಡೆಯಲು ಶಕ್ತರಾಗಿದ್ದರು.

ಗುಂಪಿನಲ್ಲಿದ್ದ ಮಹಿಳೆಯರು ಬ್ಯಾಂಕ್ ಅಧಿಕಾರಿಯೊಂದಿಗೆ ಮಾತನಾಡುತ್ತಾ, “ನಾವು ಅನಕ್ಷರಸ್ತರೆಂದು ನಮ್ಮ ಲೈಸನ್ಸ್ ಅನ್ನು ತಿರಸ್ಕರಿಸಿದ್ದಿರಿ. ಇಂದು ನಾವೆಲ್ಲರೂ ವಿದ್ಯೆ ಪಡೆದು ನಿಮ್ಮ ಮುಂದೆ ಕೂತಿದ್ದೇವೆ. ನಾವು ಅನಕ್ಷರಸ್ತರಾಗಿದ್ದಕ್ಕೆ ನಮ್ಮನ್ನು ಹಿಯಾಳಿಸಿ ಪ್ರಯೋಜನವಿಲ್ಲ. ಯಾಕಂದ್ರೆ ನಾವು ಬೆಳೆಯಬೇಕಾದ್ರೆ ನಮ್ಮ ಹಳ್ಳಿಯಲ್ಲಿ ಶಾಲೆಯೇ ಇರಲಿಲ್ಲ”. “ನಮಗೆ ಪ್ರಿನ್ಸಿಪಲ್ ಮೊತ್ತಕ್ಕೆ ಬಡ್ಡಿ ಲೆಕ್ಕಹಾಕಲು ಹೇಳಿ, ಅದೇ ಲೆಕ್ಕವನ್ನು ಬ್ಯಾಂಕ್ ಅಧಿಕಾರಿಗಳಿಗೆ ಕ್ಯಾಲ್ಕುಲೇಟರ್ ಮೂಲಕ ಮಾಡಲು ಹೇಳಿ. ನಂತ್ರ ನೋಡಿ ಮೊದಲು ಯಾರು ನಿಖರವಾಗಿ ಉತ್ತರ ಕೊಡ್ತಾರೆ” ಎಂದು ಅಧಿಕಾರಿಗೆ ಸವಾಲು ಹಾಕಿದರು ಮತ್ತೊಬ್ಬರು.

image


ಮನ್ ದೇಶೀ ಫೌಂಡೇಷನ್ ಗೆ ಮಹಿಳೆಯರನ್ನು ಸೇರಿಸಿಕೊಂಡಿದ್ದು ಸರಿಯಾದ ನಿರ್ಧಾರವಾಗಿತ್ತು ಎಂದು ಚೇತನಾ ವಿಜಯ್ ಸಿನ್ಹರಿಗೆ ಆ ಸಮಯದಲ್ಲಿ ಅನ್ನಿಸಿತ್ತು. ಕೇವಲ ಆರು ತಿಂಗಳ ಹಿಂದೆ ಚೇತನಾ ಖಿನ್ನಳಾಗಿ ಗ್ರಾಮಕ್ಕೆ ಹಿಂತಿರುಗಿದ್ದರು. ಆದ್ರೆ ಪರಿಸ್ಥಿತಿ ಈಗ ಬದಲಾಗಿದೆ. 1997ರಲ್ಲಿ ಚೇತನಾರಿಂದ ಶುರುವಾದ ಮನ್ ದೇಶೀ ಸಹಕಾರಿ ಬ್ಯಾಂಕ್ ಮಹಿಳೆಯರಿಂದ ಮಹಿಳೆಯರಿಗಾಗಿರೋ ಬ್ಯಾಂಕ್. ಮಹಾರಾಷ್ಟ್ರದಲ್ಲಿ ಅತಿದೊಡ್ಡ ಕಿರು ಹಣಕಾಸು ಸಂಸ್ಥೆಯಾಗಿದೆ.

ಮುಂಬೈನಿಂದ ಮಾಸವದ್ ಗೆ

ಚೇತನ ಮುಂಬೈನಲ್ಲಿ ಹುಟ್ಟಿ ಬೆಳೆದರೂ, ವಿಜಯ್ ಸಿನ್ಹರನ್ನು ಮದುವೆಯಾದ ನಂತ್ರ ಮಾಸ್ವಾದ್ ಗೆ ಹೋಗಬೇಕಾಯಿತು. ಚೇತನಾರ ಜೀವನದಲ್ಲಿ ಸಾಮಾಜಿಕ ಮತ್ತು ಸಾರ್ವಜನಿಕರ ಹಿತಾಸಕ್ತಿ ಮುಖ್ಯವಾಗಿತ್ತು. ಜಯಪ್ರಕಾಶ್ ನಾರಾಯಣ ಚಳುವಳಿ ಸಮಯದಲ್ಲೇ ಚೇತನ ತನ್ನ ಪತಿಯನ್ನು ಭೇಟಿ ಮಾಡಿದ್ದರು.

ಆದರೂ ನಗರದಿಂದ ಹಳ್ಳಿಗೆ ಸ್ಥಳಾಂತರಗೊಂಡಿದ್ದರಿಂದ ಚೇತನಾ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಮೊದಲ ಬಾರಿಗೆ ಸಾರ್ವಜನಿಕ ಸಂಪರ್ಕ ಸಾರಿಗೆಗೆ ಗಂಟೆಗಟ್ಟಲೇ ಕಾಯುವ ಕಷ್ಟ ಆಕೆಗೆ ಗೊತ್ತಾಯಿತು. ಅಲ್ಲದೇ ವಿದ್ಯುತ್ ಇಲ್ಲದೇ ಸಂಪರ್ಕ ಸಾಧಿಸುವ ಕಷ್ಟವೂ ಆಕೆಗೆ ಅರಿವಾಯಿತು. “ಇದಕ್ಕೂ ಮಿಗಿಲಾಗಿ ನಾನು ಜೀವನ ಶೈಲಿಯ ಮತ್ತೊಂದು ಸವಾಲು ಎದುರಿಸಬೇಕಾಯಿತು. ಮೊದಲು ನಾನು ಹಳ್ಳಿಗರ ಮುಂದೆ ಹೇಗೆ ಕಾಣಿಸಿಕೊಳ್ಳಬೇಕೆಂದು ಯೋಚನೆ ಮಾಡಿರಲಿಲ್ಲ. ಆದ್ರೆ ಗ್ರಾಮಸ್ಥರ ಯೋಚನೆಯೇ ಬೇರೆ ರೀತಿ ಇರುತ್ತದೆ. ಮದುವೆಯಾದ ಹೆಣ್ಣು ಮಂಗಳ ಸೂತ್ರವನ್ನು ಧರಿಸಲೇಬೇಕೆನ್ನೋದು ಅವರ ಅಪೇಕ್ಷೆಯಾಗಿರುತ್ತೆ. ಆದ್ರೆ ನಾನು ಮಹಿಳಾ ಹೋರಾಟದಲ್ಲಿ ಮುಂಚೂಣಿಯಲಿದ್ದುದರಿಂದ ಆ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ಆದ್ರೆ ಸಾಂಪ್ರದಾಯಿಕ ಉಡುಗೆ ತೊಡುವಂತೆ ಮುಗ್ಧ ಜನರು ನನ್ನನ್ನು ಒತ್ತಾಯಿಸುತ್ತಿದ್ದರು” ಅಂತಾರೆ ಚೇತನ. ಆದ್ರೆ ಇಂದು ಅದೇ ಚೇತನ ತನ್ನ ಪರಿಕಲ್ಪನೆಯ ಮನ್ ದೇಶೀ ಫೌಂಡೇಷನ್‍ನ ಕಾರಣದಿಂದ ಮಹಾರಾಷ್ಟ್ರದ ಪುಟ್ಟ ಗ್ರಾಮದ ಒಂದು ಭಾಗವಾಗಿಬಿಟ್ಟಿದ್ದಾರೆ.

image


ಹೊಸ ಅಧ್ಯಾಯದ ಆರಂಭ

1986-87ರಲ್ಲಿ ಪಂಚಾಯತ್ ರಾಜ್ ಮಸೂದೆಗೆ ತಿದ್ದುಪಡಿ ತರಲಾಯಿತು. ಅದರಂತೆ ಪಂಚಾಯತಿಗಳಲ್ಲಿ ಮಹಿಳೆಯರಿಗೆ ಶೇ 30% ಮೀಸಲು ಎಂಬ ಕಾನೂನನ್ನು ಸರ್ಕಾರ ತಂದಿತು. ಆಗಲೇ ಚೇತನಾ ತನ್ನ ಗ್ರಾಮದ ಮಹಿಳೆಯರಲ್ಲಿ ಈ ಬಗ್ಗೆ ಮಾಹಿತಿ ಕೊಟ್ಟು ಗ್ರಾಮ ಪಂಚಾಯತಿಗಳಲ್ಲಿ ಪಾಲ್ಗೊಳ್ಳಲು ಕರೆಕೊಟ್ಟರು. ಸ್ಥಳೀಯ ಆಡಳಿತ ನೋಡಿಕೊಳ್ಳುವ ಸಲುವಾಗಿ ಮಹಿಳೆಯರಿಗೆ ತರಬೇತಿ ನೀಡಲು ಚೇತನ ಫೌಂಡೇಷನ್ ಒಂದನ್ನು ಸ್ಥಾಪಿಸಿದರು.

ಕಾಂತಾ ಅಮಂದಸ್ ಸಾಲುಂಕೆ ಎಂಬ ಕಮ್ಮಾರ ಮಹಿಳೆ ಒಂದು ದಿನ ಚೇತನ ಅವರನ್ನು ಭೇಟಿಯಾಗಿ ತಾನು ಹಣವನ್ನು ಕೂಡಿಡಲು ಬಯಸುತ್ತಿದ್ದು, ಆದ್ರೆ ಬ್ಯಾಂಕ್ ವನರು ಅಕೌಂಟ್ ತೆರೆಯಲು ನಿರಾಕರಿಸುತ್ತಿದ್ದಾರೆ ಎಂದಳು. ಆಶ್ಚರ್ಯಚಕಿತರಾದ ಚೇತನ ಕಾಂತಾಬಾಯಿಯೊಂದಿಗೆ ಬ್ಯಾಂಕ್ ಗೆ ಹೋಗಿ ಅಧಿಕಾರಿಗಳನ್ನು ಮಾತನಾಡಿಸಿದರು. ಇದಕ್ಕೆ ಬ್ಯಾಂಕ್ ನವರು ಕಾಂತಾಬಾಯಿ ಉಳಿತಾಯ ಮಾಡಬೇಕೆಂದಿರೋದು ಅತಿ ಸಣ್ಣ ಮೊತ್ತ ಎಂದು ಸಮಜಾಯಿಷಿ ಕೊಟ್ಟು ಕಳಿಸಿದರು. ಕೂಡಲೇ ಕಾಂತಾಬಾಯಿಯಂತಹ ಸಣ್ಣ ಮೊತ್ತವನ್ನು ಉಳಿತಾಯ ಮಾಡ ಬಯಸುವ ಮಹಿಳೆಯರಿಗಾಗಿ ಬ್ಯಾಂಕ್ ಒಂದನ್ನು ಸ್ಥಾಪನೆ ಮಾಡುವ ಬಗ್ಗೆ ನಿರ್ಧಾರ ಮಾಡುತ್ತಾರೆ. “ಎಲ್ಲರಲ್ಲೂ ಮಹತ್ವಾಕಾಂಕ್ಷೆ ಇರುತ್ತದೆ. ಅದಕ್ಕೆ ಸಮಯ ಕೂಡಿಬರಬೇಕಷ್ಟೇ” ಅಂತಾರೆ ಚೇತನಾ.

ಬ್ಯಾಂಕ್ ಸ್ಥಾಪನೆ ಮಾಡಿಯಾಯ್ತು. ಆದ್ರೆ ಚೇತನ ಮತ್ತು ಬ್ಯಾಂಕ್ ಸಿಬ್ಬಂದಿ ಮತ್ತೊಂದು ಸವಾಲು ಎದುರಿಸುವಂತಾಯಿತು. ಹಣ ಕಟ್ಟಲು ಮಹಿಳೆಯರು ಬ್ಯಾಂಕಿಗೆ ಬಂದ್ರೆ ಅವರು ಒಂದು ದಿನದ ಕೂಲಿಯನ್ನು ಕಳೆದುಕೊಳ್ಳಬೇಕಿತ್ತು. ಇದಕ್ಕಾಗಿ ಮನ್ ದೇಶೀ ಮನೆ ಬಾಗಿಲಿಗೇ ಹೋಗಿ ಹಣ ಕಟ್ಟಿಸಿಕೊಳ್ಳಲು ಶುರುಮಾಡಿತು. ಮುಂದಿನ ಹೆಜ್ಜೆಯಾಗಿ ಉಳಿತಾಯ ಖಾತೆ ಹೊಂದಿರುವವರು ಪಾಸ್ ಬುಕ್ ಇಟ್ಟುಕೊಳ್ಳಬೇಕಿತ್ತು. ಆದ್ರೆ ಇದಕ್ಕೆ ಹೆಚ್ಚಿನ ಮಹಿಳೆಯರು ಒಪ್ಪಲಿಲ್ಲ. ನಾವು ಹಣವನ್ನು ಉಳಿಸುತ್ತಿದ್ದೇವೆಂದು ಗಂಡನಿಗೆ ಗೊತ್ತಾದ್ರೆ ಅವರು ಕುಡಿತಕ್ಕೆ ಬಳಸುತ್ತಾರೆ ಎಂದು ಅವರು ಹೆದರಿದರು. ಇದಕ್ಕಾಗಿ ಮನ್ ದೇಶೀ ಸ್ಮಾರ್ಟ್ ಕಾರ್ಡ್ ಕೊಟ್ಟು ಕೆಲ ದಿನಗಳಲ್ಲೇ ಮಹಿಳೆಯರಿಗೆ ಸಾಲ ಕೊಡಲೂ ಸಹ ಶುರುಮಾಡಿದರು.

ಕುರಿ ಮೇಯಿಸುವಾಕೆಗೆ ಮೊಬೈಲ್ ಬೇಕಿತ್ತು..!

ಒಂದು ದಿನ ಕೀರಾ ಬಾಯಿ ಬ್ಯಾಂಕಿಗೆ ಬಂದು ಮೊಬೈಲ್ ಫೋನ್ ತೆಗೆದುಕೊಳ್ಳೋಕೆ ಸಾಲ ಬೇಕೆಂದು ಕೇಳಿದ್ಲು. ಕೀರಾಬಾಯಿ ಮಕ್ಕಳು ಮೊಬೈಲ್ ಫೋನ್ ಕೊಡಿಸೆಂದು ಆಕೆಗೆ ದಂಬಾಲು ಬಿದ್ದಿರಬಹುದೆಂದು ಅಧಿಕಾರಿಗಳು ಊಹಿಸಿದ್ದರು. ಆದ್ರೆ ಕುರಿ ಮೇಯಿಸುತ್ತಾ ಮನೆಯಿಂದ ದೂರ ಹೋಗೋದ್ರಿಂದ ತಾನು ಕುಟುಂಬದೊಂದಿಗೆ ಮಾತನಾಡಲು ಮೊಬೈಲ್ ಫೋನ್ ಬೇಕೆಂದು ಹೇಳಿದಳು ಕೀರಾಬಾಯಿ. ಆಗಲೇ ಆಕೆ ಮೊಬೈಲ್ ಉಪಯೋಗಿಸೋದು ಹೇಗೆಂದು ಚೇತನಾರ ಬಳಿ ಕೇಳಿದಳು. ಆಗ ಚೇತನಾರಿಗೆ ವ್ಯವಹಾರ ಸಂಬಂಧಿ ಶಾಲೆಯನ್ನು ಇವರಿಗಾಗಿ ತೆರೆಯುವ ಯೋಚನೆ ಹೊಳೆಯಿತು. ಹೆಚ್ಚಿನವರು ಅನಕ್ಷರಸ್ತರಾದ್ದರಿಂದ ಮನ್ ದೇಶೀ ಫೌಂಡೇಶನ್ ದೃಶ್ಯ ಶ್ರವಣ ಮಾಧ್ಯಮದಲ್ಲಿ ತರಗತಿ ಪ್ರಾರಂಭಿಸಿದರು. ಇದರಿಂದ ಹಳ್ಳಿಗಾಡಿನ ಮಹಿಳೆಯರು ಸ್ವಂತ ವ್ಯಾಪಾರ ಮಾಡಲು ಸಹಾಯವಾಯಿತು.

“ಈ ಮಹಿಳೆಯರೇ ನನಗೆ ಗುರುಗಳು. ಇವರು ದಿನವೂ ಹೊಸತನ್ನು ನನಗೆ ಕಲಿಸಿದರು. ಚಹಾ ಅಂಗಡಿ ಇಟ್ಟುಕೊಂಡಿರೋ ಸಾಗರ್ ಬಾಯಿಯಿಂದ ಧೈರ್ಯ ಮತ್ತು ನಿರ್ಣಯ ತೆಗೆದುಕೊಳ್ಳುವ ಅತಿದೊಡ್ಡ ಪಾಠ ಕಲಿತೆ. ಈಕೆಗೆ 5ನೇ ತರಗತಿಯಲ್ಲಿ ಓದೋ ಹೆಣ್ಣುಮಗಳಿದ್ದು, ಆಕೆ ಹೈಸ್ಕೂಲ್ ಸೇರುವಷ್ಟರಲ್ಲಿ ಸೈಕಲ್ ಕೊಡಿಸಬೇಕು ಅಂದುಕೊಂಡಿರ್ತಾಳೆ. ನಮ್ಮ ಸಹಾಯದಿಂದ ಸಾಗರ್ ಬಾಯಿ ಚಹ ಅಂಗಡಿಯೇನೋ ಶುರುಮಾಡಿದ್ದಳು. ಆದ್ರೆ ಮನೆಗೆ ಉಪಯೋಗಿಸೋ ಸಿಲಿಂಡರ್ ಅನ್ನು ಅಂಗಡಿಯಲ್ಲಿ ಬಳಸಿದ್ದಕ್ಕಾಗಿ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿ ಎರಡು ದಿನ ಕಸ್ಟಡಿಯಲ್ಲಿಟ್ಟುಕೊಂಡಿದ್ದರು. ಇಷ್ಟಕ್ಕೇ ಹೆದರಿ ಆಕೆ ತನ್ನ ವ್ಯಾಪಾರ ನಿಲ್ಲಿಸಲಿಲ್ಲ. ಹೊರಬಂದ ಮೇಲೆ ವಾಣಿಜ್ಯ ಉದ್ದೇಶದ ಸಿಲಿಂಡರ್ ಬಳಸಿ ತನ್ನ ವ್ಯಾಪಾರದಲ್ಲಿ ಲಾಭ ಕಾಣುತ್ತೇನೆ ಎಂದಳು. ಇಂದು ಹಾರ್ವರ್ಡ್ ಮತ್ತು ಯಾಲೆ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಈಕೆಯ ವ್ಯಾಪಾರವನ್ನು ಅರಿತುಕೊಳ್ಳಲು ಬರುತ್ತಾರೆ”.

ಜಾನುವಾರು ಶಿಬಿರದ ಪ್ರಾರಂಭ

ವ್ಯಾಪಾರ ಸಂಬಂಧ ಮಹಿಳೆಯರಿಗೆ ತರಗತಿ ನಡೆಸೋದ್ರ ಜತೆಗೆ ಮನ್ ದೇಶೀ ಸಂಸ್ಥೆಯು ಬಾಲಕಿಯರು ಶಾಲೆಗೆ ಹೋಗಲು ಬೈಸಿಕಲ್ ಕೊಡಿಸುತ್ತಾರೆ, ಜತೆಗೆ ಸಾಲವೂ ಕೊಡುತ್ತಿದ್ದಾರೆ. ಇದೇ ಸಮಯದಲ್ಲಿ ಕೀರಾಬಾಯಿ ತನ್ನ ಚಿನ್ನಾಭರಣವನ್ನು ಅಡ ಇಡಲು ಬರುತ್ತಾಳೆ. ಇದು ಮನ್ ದೇಶೀ ಬ್ಯಾಂಕ್ ನ ಇತಿಹಾಸದಲ್ಲಿ ಹೊಸ ಪುಟ ತೆರೆದಿತ್ತು.

image


ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೀರಾಬಾಯಿ ಸಾಲಕ್ಕೆ ಬಂದಿರಬಹುದೆಂದು ತಿಳಿದು, ಸಾಲ ಏತಕ್ಕೆ ಎಂದು ಕೇಳಿದೆ. “ಬರಗಾಲ ಇರೋದ್ರಿಂದ ಹಸುಗಳಿಗೆ ಮೇವನ್ನು ಕೊಳ್ಳಲು ಚಿನ್ನ ಅಡ ಇಡುತ್ತಿದೇನೆ. ಜಮೀನಿನಲ್ಲಿ ಮೇವಿಲ್ಲದ ಕಾರಣ ಅದನ್ನು ಕೊಳ್ಳಲು ಸಾಲ ಪಡೆಯುತ್ತಿದ್ದೇನೆ” ಎಂದಳು. “ವಿದ್ಯಾವಂತರಾಗಿ ನಿಮಗೆ ಹೊರಗಿನ ಪರಿಸ್ಥಿತಿ ಗೊತ್ತಾಗುತ್ತಿಲ್ವಾ” ಎಂದು ಕೋಪದಿಂದ ನನ್ನನ್ನೇ ಪ್ರಶ್ನೆ ಮಾಡಿದಳು. “ಇಡೀ ಗ್ರಾಮದಲ್ಲಿ ನೀರಿಲ್ಲ. ಆದ್ದರಿಂದ ಚಿನ್ನವನ್ನು ಅಡ ಇಟ್ಟು ಮೇವನ್ನು ಕೊಳ್ಳುತ್ತೀನಿ. ಇಲ್ಲವೆಂದ್ರೆ ನನ್ನ ಚಿನ್ನವನ್ನು ಇಟ್ಟುಕೊಂಡು ನೀವು ನೀರು ಕೊಡ್ತೀರಾ? ಕೆರೆ ನದಿ ಒಣಗಿಹೋಗಿದೆ. ಕುಡಿಯಲು ನೀರಿಲ್ಲ. ಪ್ರಾಣಿಗಳಿಗೆ ಎಲ್ಲಿಂದ ನೀರು ಕೊಡೋದು?” ಎಂದು ಪ್ರಶ್ನಿಸಿದಳು. “ನಾವು ಗಂಟಲು ಆರಿದ್ರೆ ಕೂಗಿ ನೀರು ಪಡೆಯುತ್ತೀವಿ. ಆದ್ರೆ ಅಮಾಯಕ ಪ್ರಾಣಿಗಳು ಬಾಯಾರಿಕೆ ಆಗಿದೆ ಎಂದು ಹೇಗೆ ಹೇಳಿಕೊಳ್ಳುತ್ವೆ? ನೀವು ಪ್ರಪಂಚದಲ್ಲೆಲ್ಲೇ ಹೋಗಿ, ಪ್ರಾಣಿಗಳು ನೀರಿಲ್ಲದೇ ಬದುಕುತ್ವಾ?”. ಕೀರಾಬಾಯಿ ಮಾತುಕೇಳಿ ಆ ರಾತ್ರಿ ನನಗೆ ನಿದ್ರೆ ಬರಲಿಲ್ಲ. ಕೀರಾಬಾಯಿಯ ದುಖಃವನ್ನು ನನ್ನ ಗಂಡನಲ್ಲಿ ಹೇಳಿಕೊಂಡೆ.

ಶಿಬಿರ ಸ್ಥಾಪನೆ

ಮರುದಿನವೇ ಚೇತನ ಜಾನುವಾರು ಶಿಬಿರ ಪ್ರಾರಂಭ ಮಾಡಲು ನಿರ್ಧರಿಸಿದರು. ಶಿಬಿರದಲ್ಲಿ ಮೇವು ಮತ್ತು ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ಬೋರ್ಡ್ ಹಾಕಲಾಯಿತು. ಆದ್ರೆ ಮೇವು ಮತ್ತು ನೀರನ್ನು ಎಲ್ಲಿಂದ ತರೋದು ಎಂದು ಚೇತನ ಚಿಂತೆಗೀಡಾದ್ರು. ಫೌಂಡೇಷನ್ ನಲ್ಲಿದ್ದ ಕಾರ್ಯಕರ್ತರು ಇದನ್ನೆಲ್ಲಾ ನಿರಾಯಾಸವಾಗಿ ನೋಡಿಕೊಂಡರು. ಕೇವಲ ಒಂದು ತಿಂಗಳಲ್ಲಿ ಸುಮಾರು 7 ಸಾವಿರ ರೈತರು 14 ಸಾವಿರ ಜಾನುವಾರುಗಳೊಂದಿಗೆ ಶಿಬಿರಕ್ಕೆ ಭೇಟಿಕೊಟ್ಟಿದ್ದರು. ಮಹಾರಾಷ್ಟ್ರದ ಅತಿ ಬರಗಾಲ ಪ್ರದೇಶವಾದ ಮನ್ ತಾಲೂಕಿನಲ್ಲಿ ನಡೆದ ಶಿಬಿರ ಸತಾರಾ ಜಿಲ್ಲೆಯಲ್ಲಿ ನಡೆದ ಅತಿದೊಡ್ಡ ಜಾನುವಾರು ಶಿಬಿರವಾಗಿತ್ತು. ನೀರಿಗಾಗಿ ಹೊಸ ಬಾವಿಗಳನ್ನು ತೋಡಲಾಯಿತು. ಶಿಬಿರಕ್ಕೆ ದಿನವೂ ಲಾರಿಗಟ್ಟಲೇ ಮೇವು ಬರುತ್ತಿತ್ತು. ಸಹಾಯ ಎಲ್ಲೆಡೆಯಿಂದ ಹರಿದು ಬಂತು ಎಂದು ಚೇತನಾ ನೆನಪಿಸಿಕೊಳ್ತಾರೆ. ಅಕ್ಕಪಕ್ಕದ ಸುಮಾರು 77 ಹಳ್ಳಿಗಳಿಂದ ಗ್ರಾಮಸ್ಥರು ತಮ್ಮ ಜಾನುವಾರುಗಳ ಸಮೇತ ಶಿಬಿರಕ್ಕೆ ಬರುತ್ತಿದ್ದರು. ಸರ್ಕಾರದ ಅನುದಾನ ಸಿಕ್ಕಿದ್ದರೂ ಅಲ್ಲಿ ಗ್ರಾಮಸ್ಥರನ್ನು ನಿಭಾಯಿಸೋದು ಅಷ್ಟೇನೂ ಸುಲಭವಾಗಿರಲಿಲ್ಲ. “ಬಿಸಿಲಿನಲ್ಲಿ ಸುಮಾರು 30 ಕಿಲೋಮೀಟರ್​​ ದೂರದಿಂದ ಜಾನುವಾರುಗಳನ್ನು ನಡೆಸಿಕೊಂಡು ಬಂದ ರೈತರಿಗೆ ನಮ್ಮ ಸಿಬ್ಬಂದಿ ಐಡಿ ಕಾರ್ಡ್ ಕೇಳಿದರು. ಆದ್ರೆ ಮಹಿಳೆಯರು ಅಳುತ್ತಾ ನಮ್ಮ ಜಾನುವಾರು ಕಳೆದ ಎಂಟು ಗಂಟೆಯಿಂದ ನೀರು ಕುಡಿದಿಲ್ಲ. ಮೊದಲು ಆಹಾರ ನೀರು ಕೊಟ್ಟು ನಂತ್ರ ಐಡಿ ಕೇಳಿ” ಎಂದು ವಿನಂತಿಸಿಕೊಂಡರು ಅಂತಾರೆ ಚೇತನಾ.

ಬರಗಾಲದಲ್ಲಿ ಮಳೆ ತಂದವ

ಮೇವು ಮತ್ತು ನೀರಿಗಾಗಿ ರೈತರು ಜಾನುವಾರುಗಳೊಂದಿಗೆ ಸಾಲಲ್ಲಿ ನಿಂತಿದ್ದನ್ನು ನೋಡಿ ನನಗೆ ಆಘಾತವಾಯಿತು. ಕೂಡಲೇ ತಂಡಗಳನ್ನು ರಚಿಸಿ ಜಾನುವಾರುಗಳಿರೋ ಕಡೆಯೇ ಶೆಡ್‍ಗಳನ್ನು ನಿರ್ಮಾಣ ಮಾಡಿ ಅಲ್ಲಿಯೇ ಮೇವು ಮತ್ತು ನೀರನ್ನು ಕೊಡೋ ಸೌಕರ್ಯ ಮಾಡಲಾಯಿತು. ಆ ಕ್ಷಣದಲ್ಲಿ ಜಾನುವಾರು ಶಿಬಿರ ರೈತರ ಮನೆಯಾಗಿಹೋಯ್ತು. ಹೀಗೇ ಸುಮಾರು ಒಂದೂವರೆ ವರ್ಷ ಜರುಗಿತು. ಶಿಬಿರದಲ್ಲಿದ್ದ ಗರ್ಭಿಣಿ ಮಹಿಳೆಯೊಬ್ಬಳು ಯಾವ ಕ್ಷಣದಲ್ಲಿ ಬೇಕಾದ್ರೂ ಮಗುವಿಗೆ ಜನ್ಮ ಕೊಡೋ ಸಾಧ್ಯತೆ ಇತ್ತು. “ನನಗೆ ತುಂಬಾ ಭಯವಾಗಿತ್ತು. ಅಪಾಯ ಒಡ್ಡಿಕೊಳ್ಳುವುದು ನನಗೆ ಬೇಕಿರಲಿಲ್ಲ. ಗರ್ಭಿಣಿ ಮಹಿಳೆ ಮತ್ತು ಆಕೆಯ ತಾಯಿಗೆ ನಾನು ವಾಪಸ್ ಊರಿಗೆ ಹೋಗಿ ಎಂದೆ. ಅದಕ್ಕೆ ನಾವು ಹೋಗಲ್ಲ, ಗ್ರಾಮದಲ್ಲಿ ನೀರಿಲ್ಲ ಎಂದರು”. ಇಷ್ಟರ ಮಧ್ಯೆ ಶಿಬಿರದಲ್ಲೇ ಆಕೆ ಗಂಡು ಮಗುವಿಗೆ ಜನ್ಮ ನೀಡಿದಳೆಂದು ಚೇತನ ನೆನಪಿಸಿಕೊಳ್ತಾರೆ.

“ನಾನು ಯಾವಾಗಲೂ ವಿಚಾರವಾದಿ ಎಂದು ಕರೆಸಿಕೊಳ್ತಿದ್ದೆ, ಆದ್ರೆ ಅಂದು ಆಕೆ ಮಗುವಿನ ಜನ್ಮ ನೀಡಿದ ನಂತ್ರ ಜೋರಾದ ಮಳೆಯಾಯಿತು. ಶಿಬಿರದಲ್ಲಿದ್ದವರು ಮಗುವಿಗೆ ಮೇಘರಾಜ ಎಂದು ಹೆಸರಿಡಲು ನಿರ್ಧರಿಸಿದರು. ಬರಗಾಲದಲ್ಲಿ ಹುಟ್ಟಿದ ಮಗು ಮಳೆಯನ್ನು ತಂದಿದೆ. ಅವನಿಗೆ ನಾವೇನು ಉಡುಗೊರೆ ಕೊಡೋಣ ಎಂದು ರೈತನೊಬ್ಬ ಕೇಳಿದ. ನಮ್ಮ ಬ್ಯಾಂಕ್‍ನ ಮುಖ್ಯಸ್ಥರಾದ ರೇಖಾ ಎಲ್ಲ ರೈತರಿಂದ ತಲಾ 10 ರೂಪಾಯಿ ಸಂಗ್ರಹಿಸುವಂತೆ ಹೇಳಿದರು. ಗಂಟೆಯೊಳಗೆ ಅಲ್ಲಿ 70 ಸಾವಿರ ಸಂಗ್ರಹವಾಗಿತ್ತು. 30ಸಾವಿರ ಫೌಂಡೇಷನ್ ಕಡೆಯಿಂದ ಕೊಟ್ಟು, 1 ಲಕ್ಷ ರೂಪಾಯಿಯನ್ನು ಮೇಘರಾಜ್ ಹೆಸರಲ್ಲಿ ಎಫ್‍ಡಿ ಮಾಡಲಾಯಿತು. ಇದೇ ಜಾನುವಾರು ಶಿಬಿರದ ಉಡುಗೊರೆ.

ಸಾಧ್ಯವಿಲ್ಲ ಅಂತ ಕೈಕಟ್ಟಿ ಕುಳಿತ್ರೆ ಸಾಯುವ ದಿನದಲ್ಲೂ ಹಾಗೇ ಇರುತ್ತೇವೆ. ಮುಂದಡಿ ಇಡಬೇಕೆಂದ್ರು ಹಠ ಹಿಡಿದ್ರೆ ಬದುಕು ಸಾಧನೆಗೆ ಮಾರ್ಗ ತೋರಿಸುತ್ತೆ ಅಂತ ಹೇಳಿಕೊಂಡು ಚೇತನಾ ಮಾತು ಮುಗಿಸುತ್ತಾರೆ.