ಆಟೋ ಚಾಲಕರಿಂದ ಕಿರಿ ಕಿರಿ ತಪ್ಪಿಸಲು ಸಿಲಿಕಾನ್ ಸಿಟಿ ಪೊಲೀಸರಿಂದ ‘ಬಿ-ಸೇಫ್’ ಆ್ಯಪ್

ಉಷಾ ಹರೀಶ್​​

ಆಟೋ ಚಾಲಕರಿಂದ ಕಿರಿ ಕಿರಿ ತಪ್ಪಿಸಲು ಸಿಲಿಕಾನ್ ಸಿಟಿ ಪೊಲೀಸರಿಂದ  ‘ಬಿ-ಸೇಫ್’ ಆ್ಯಪ್

Friday March 25, 2016,

2 min Read

ಐಟಿ ಸಿಟಿ ಬೆಂಗಳೂರಿನಲ್ಲಿ ಆಟೋದವರನ್ನು ಕರೆದ ಕಡೆ ಬರುವುದಿಲ್ಲ, ಮೀಟರ್​ಗಿಂತ ಜಾಸ್ತಿ ಹಣಕೇಳುತ್ತಾರೆ ಎಂಬ ಆರೋಪ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಕೆಲ ಆಟೊಗಳಲ್ಲಿ ಸುರಕ್ಷತೆ ಇರುವುದಿಲ್ಲ ಎಂಬ ಕೂಗು ಆಗಾಗ ಕೇಳಿ ಬರುತ್ತಿದೆ. ಈ ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬೆಂಗಳೂರು ಸಂಚಾರ ಪೊಲೀಸರು ‘ಬಿ-ಸೇಫ್’ ಎನ್ನುವ ಪ್ರಯಾಣಿಕ ಸ್ನೇಹಿ ಆ್ಯಪ್ ಸಿದ್ಧಪಡಿಸಿ ಲೋಕಾರ್ಪಣೆಗೊಳಿಸಿದ್ದಾರೆ.

image


ಪರಿಣಾಮಕಾರಿ ಪೊಲೀಸಿಂಗ್ ಜಾರಿಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ನೆರವು ಪಡೆಯುತ್ತಿರುವ ಬೆಂಗಳೂರು ನಗರ ಕಮಿಷನರೇಟ್​ನ ಕಾಳಜಿಯ ಕೂಸಾಗಿ ‘ಬಿ-ಸೇಫ್’ ಸಿದ್ಧಗೊಂಡಿದ್ದು, ಆಟೋ ಚಾಲಕರಿಂದ ಪ್ರಯಾಣಿಕರಿಗೆ ಆಗುವ ಕಿರಿಕಿರಿಗೆ ಇದು ಮುಕ್ತಿ ಒದಗಿಸಲಿದೆ.

" ಆಟೋದವರು ಕರೆದ ಜಾಗಕ್ಕೆ ಬರದಿರುವುದು, ಇರುವ ಮೀಟರ್​ಗಿಂತ ಹೆಚ್ಚಿನ ಬಾಡಿಗೆ ಕೇಳುವುದು ಸೇರಿದಂತೆ ನಾನಾ ರೀತಿಯ ತೊಂದರೆಗಳಿಗೆ ಈ ಆ್ಯಪ್ ನೆರವಾಗಲಿದೆ".
    - ರಾಮೇಗೌಡ, ಸಾರಿಗೆ ಆಯುಕ್ತ

ಬಿ-ಸೇಫ್ ಏಕೆ ?

ತಂತ್ರಜ್ಞಾನದ ಮೂಲಕ ಎಲ್ಲವೂ ಬೆರಳ ತುದಿಗೇ ಬಂದಿರುವಾಗ ಸುರಕ್ಷತೆ ಕೂಡ ಬೆರಳ ತುದಿಯಲ್ಲೇ ಇರಲಿ ಎನ್ನುವ ಉದ್ದೇಶದಿಂದ ಪೊಲೀಸರು ಈ ಆ್ಯಪ್​ನ್ನು ಅಭಿವೃದ್ಧಿಗೊಳಿಸಿದ್ದಾರೆ. ಈ ಆ್ಯಪ್​ನ ಅಭಿವೃದ್ಧಿಯ ಕೆಲಸದಲ್ಲಿ ಸ್ವತಃ ಸಂಚಾರ ಪೊಲೀಸ್ ಅಧಿಕಾರಿಗಳೇ ಆ್ಯಪ್​ನ್ನು ತೊಡಗಿಸಿಕೊಂಡಿದ್ದರಿಂದ ಯಾವ ರೀತಿಯ ಸಮಸ್ಯೆಗೆ ಯಾವ ಪರಿಹಾರ ಮತ್ತು ಪೊಲೀಸ್ ಪ್ರಕ್ರಿಯೆ ಎಲ್ಲವನ್ನು ಉತ್ತಮವಾಗಿ ಕೆಲಸ ಮಾಡುವಂತೆ ಅವರು ಅಭಿವೃದ್ಧಿಪಡಿಸಿದ್ದಾರೆ.

ಕೆಲಸ ಹೇಗೆ..?

ಆಟೋ ಹತ್ತುತ್ತಿದ್ದಂತೆ ಪ್ರಯಾಣಿಸುವ ಮಾರ್ಗ ಮತ್ತು ಪ್ರಯಾಣದ ದರವನ್ನು ಈ ಆ್ಯಪ್ ಮೊದಲೇ ತಿಳಿಸಿಬಿಡುತ್ತದೆ. ಪ್ರಯಾಣಿಕರನ್ನು ಯಾಮಾರಿಸಿ ಹೆಚ್ಚಿಗೆ ಹಣ ಪಡೆಯಲು ಆಟೋಚಾಲಕ ಬೇರೆ ಮಾರ್ಗದಲ್ಲಿ ಏನಾದರೂ ಚಲಿಸಿದ್ದಲ್ಲಿ ಗೊತ್ತಾದರೆ ಸಾಕು ಪ್ರಯಾಣಿಕ ಒಂದು ಬಟನ್ ಒತ್ತಿದರೆ ತಕ್ಷಣ ದೂರು ದಾಖಲಾಗುತ್ತದೆ. ದೂರು ದಾಖಲಾಗುತ್ತಿದ್ದಂತೆ ದೂರು ನಿಗಾ ಘಟಕದ ಮೂಲಕ ಸಮೀಪದ ಠಾಣೆಗೆ ರವಾನೆಯಾಗುತ್ತದೆ. ಆಟೋ ಸಾಗುತ್ತಿರುವ ದಿಕ್ಕು ಪತ್ತೆಯಾಗುತ್ತದೆ. ಸಂಕಟದ ಸಂದರ್ಭದಲ್ಲಿ ಅಥವಾ ಆಟೋ ಚಾಲಕನಿಂದ ಅಪಾಯಕ್ಕೆ ಸಿಲುಕಿದಾಗ ಈ ಆ್ಯಪ್​ನಲ್ಲಿರುವ ಎಸ್ಒಎಸ್ ಎನ್ನುವ ತುರ್ತು ಬಟನ್ ಒತ್ತಿದರೆ ಸಾಕು. ತಕ್ಷಣವೇ ಆಟೋ ಇರುವ ಸ್ಥಳಕ್ಕೆ ಸಮೀಪವಿರುವ ಹೊಯ್ಸಳ ಅಥವಾ ಚೀತಾ ವಾಹನಕ್ಕೆ ಸಂದೇಶ ರವಾನೆಯಾಗುತ್ತದೆ. ಅವರು ಬಂದು ಪ್ರಯಾಣಿಕರಿಗೆ ನೆರವಾಗುತ್ತಾರೆ. ಪ್ರಯಾಣದ ವೇಳೆಯಲ್ಲಿ ಚಾಲಕ ಎಷ್ಟು ಬಾರಿ ಹಾರನ್ ಹೊಡೆದ ಎನ್ನುವುದೂ ದಾಖಲಾಗುತ್ತದೆ.

ಇದನ್ನು ಓದಿ: ಜನರಲ್ Knowledge ಅಲ್ಲ, ಜನರ Knowledge ಇಂಪಾರ್ಟೆಂಟ್.! - ಆದರ್ಶ್ ಬಸವರಾಜ್

ನೋಂದಣಿ ಹೇಗೆ ..?

ಸ್ಮಾರ್ಟ್ ಫೋನ್​ನಲ್ಲಿ ಒಮ್ಮೆ ಅಪ್ಲಿಕೇಷನ್ ಡೌನ್​ಲೋಡ್ ಮಾಡಿಕೊಂಡ ಬಳಿಕ ಇ-ಮೇಲ್, ಫೇಸ್​ಬುಕ್, ಟ್ವಿಟರ್ ಮುಖೇನ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ಪರಿಶೀಲನೆಯ ಎಸ್ಎಂಎಸ್ ಮೊಬೈಲಿಗೆ ಬರುತ್ತದೆ. ಆ ಕೋಡ್ ಸಂಖ್ಯೆ ನಮೂದಿಸಿ ಆ್ಯಪ್ ಸೌಲಭ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.

" ಬಿ-ಸೇಫ್ ಅನ್ನು ಸಾರ್ವಜನಿಕರ ಸಂರಕ್ಷಣೆಗಾಗಿ ಸಂಚಾರ ಪೊಲೀಸರು ಸಿದ್ಧಪಡಿಸಿ ಆ ಮೂಲಕ ಇಲಾಖೆಯ ಕರ್ತವ್ಯ ಬದ್ಧತೆಯನ್ನು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಸಾಧಿಸಬಹುದೆಂದು ಸಾಬೀತುಪಡಿಸಿದ್ದಾರೆ"

                     -ಎನ್.ಎಸ್.ಮೇಘರಿಕ್, ನಗರ ಪೊಲೀಸ್ ಕಮಿಷನರ್

ಸಾಮಾಜಿಕ ತಾಣಗಳ ಮೂಲಕ ಪ್ರಯಾಣಿಕರು ಆಟೋಚಾಲಕರ ದುರ್ವರ್ತನೆಗಳ ಬಗ್ಗೆ ದೂರು ದಾಖಲಿಸುವುದರಿಂದ ಆಟೊ ಚಾಲಕರು ತಮ್ಮ ತಪ್ಪು ಯಾರಿಗೂ ಗೊತ್ತಾಗುವುದಿಲ್ಲ ಎನ್ನುವ ಮನಸ್ಥಿತಿಯಿಂದ ಹೊರಬಂದು ಎಚ್ಚರಿಕೆ ಮತ್ತು ಪ್ರಯಾಣಿಕ ಸ್ನೇಹಿಯಾಗಿ ವರ್ತಿಸಬೇಕು.
-ಎಂ.ಎ.ಸಲೀಂ, ಹೆಚ್ಚುವರಿ ಪೊಲೀಸ್ ಆಯುಕ್ತರು, ಸಂಚಾರ

ದೂರಿನ ಬಗ್ಗೆ ವರದಿ

ಆ್ಯಪ್ ಮೂಲಕ ಕೇವಲ ದೂರು ದಾಖಲಿಸಿರುವುದು ಮಾತ್ರವಲ್ಲ, ದಾಖಲಾದ ದೂರಿನ ಬಗ್ಗೆ ಪೊಲೀಸರು ತೆಗೆದುಕೊಂಡ ಕ್ರಮವನ್ನೂ ಆ್ಯಪ್​ನಲ್ಲೇ ನೋಡಬಹುದು. ಆ್ಯಕ್ಷನ್ ಟೇಕನ್ ಎನ್ನುವ ಬಟನ್ ಒತ್ತಿದರೆ ಅದರಲ್ಲಿ ತೆಗೆದುಕೊಂಡ ಕ್ರಮ ಇರುತ್ತದೆ. ಜತೆಗೆ ತೆಗೆದುಕೊಂಡ ಕ್ರಮದ ಬಗ್ಗೆ ಎಸ್ಎಂಎಸ್ ಕೂಡ ದೂರುದಾರರ ಮೊಬೈಲಿಗೆ ಬರುತ್ತದೆ.

ಇದನ್ನು ಓದಿ

1. ಗಂಟೆಗಟ್ಟಲೆ ಮಾತಾಡಬೇಕಾ ಇಲ್ಲಿದೆ 'ನಾನು' ಆ್ಯಪ್!

2. ರೀಡ್ ಮೋರ್.. ಪುಸ್ತಕ ಓದುವ ಹವ್ಯಾಸ ಬೆಳೆಸಲು ಹೊಸ ಅಭಿಯಾನ..!

3. ಮನೆ ಮಾಲೀಕರ ಆಪ್ತಮಿತ್ರ ಈ ಜೆನಿಫೈ